ಸದಸ್ಯರ ಚರ್ಚೆಪುಟ:Thejesh100/sandbox
ವೀಳ್ಯದೆಲೆಗೆ ಗೌರಿ ಪೂಜೆ
ಬದಲಾಯಿಸಿವೀಳ್ಯದೆಲೆಗೆ ನಮ್ಮ ಗ್ರಾಮೀಣ ಸಮುದಾಯ ನೀಡುವ ಪ್ರಾಮುಖ್ಯತೆ ನಮಗೆಲ್ಲರಿಗೂ ತಿಳಿದದ್ದೇ. ಶುಭ ಕಾರ್ಯವಾಗಲೀ, ಅಶುಭ ಕಾರ್ಯವಾಗಲೀ, ಭೂತ ಬಿಡಿಸುವುದಿರಲಿ, ಬಾಗಿನ ಕೊಡುವುದಿರಲಿ `ಎರಡೆಲೆ ಎರಡಡಿಕೆ’ ಇರಲೇಬೇಕು. ಏನೇ ಕೊಡು-ತೆಗೆದುಕೊಳ್ಳುವುದಿರಲಿ ಎಲೆಯಡಿಕೆ ಜೊತೆಯಲ್ಲಿಟ್ಟೇ ಕೊಡಬೇಕೆಂಬುದು ಒಂದು ಸಂಪ್ರದಾಯ, ತಾಂಬೂಲಕ್ಕಂತೂ ವೀಳ್ಯದೆಲೆಯೇ ಮೂಲ. ಹಾಗಾಗಿ ವೀಳ್ಯದೆಲೆ ಎಂದರೆ ರೈತರಿಗೆ ಸಾಕ್ಷಾತ್ ಗೌರಿ. ವೀಳ್ಯದೆಲೆ ತೋಟವನ್ನು ಅವರು ವಿಶೇಷ ಗೌರವದಿಂದಲೇ ಕಾಣುತ್ತಾರೆ. ಅಲ್ಲಿ ಚಪ್ಪಲು ಮೆಟ್ಟಬಾರದು, ಔಷಧ ಸಿಂಪರಣೆ ಕೂಡದು ಎಂಬ ನಿಷೇಧಗಳಿವೆ. ವೀಳ್ಯದೆಲೆಯನ್ನು ಗೌರಿಯ ಅವತಾರ ಎಂದು ನಂಬುವುದು ಎಲ್ಲ ಪ್ರದೇಶಗಳಲ್ಲಿ ಕಾಣಬಹುದು. ಎಲೆ ತೋಟವಂತೂ ಸಾಕ್ಷಾತ್ ದೇವಾಲಯದಂತೆಯೇ ಪರಿಗಣಿಸುತ್ತಾರೆ. ದೇವಾಲಯದ ಸಕಲ ನಿರ್ಬಂಧಗಳೂ ಇಲ್ಲಿವೆ. ಕೃಷಿ ಏನೆಲ್ಲ ಆಧುನೀಕರಣಗೊಂಡಿದ್ದರು ಸಹ ಎಲೆ ತೋಟಕ್ಕೆ ಮಾತ್ರ ರಾಸಾಯನಿಕಗಳು ಸೋಂಕುವಂತಿಲ್ಲ. ವೀಳ್ಯದೆಲೆ ವಾಣಿಜ್ಯ ಬೆಳೆಯಾಗಿದ್ದರೂ ಈಗಲೂ ರೈತರಲ್ಲಿ ಎಲೆತೋಟದ ಬಗೆಗಿನ ಭಕ್ತಿ, ಗೌರವ, ನಂಬಿಕೆಗಳು ಬದಲಾಗಿಲ್ಲ. ತೋಟವಿರುವ ಪ್ರತಿಯೊಬ್ಬರೂ ಗೌರಿ ಹಬ್ಬದ ಸಮಯದಲ್ಲಿ ಗೌರಿಪೂಜೆ ಮತ್ತು ಬೊಮ್ಮಪ್ಪನ ಪೂಜೆಯನ್ನು ತೋಟದಲ್ಲೇ ಮಾಡುತ್ತಾರೆ. ಅದಕ್ಕೆ ಹಿನ್ನೆಲೆಯಾಗಿ ಸ್ವಾರಸ್ಯವಾದ ಕಥೆಯೊಂದು ಹೀಗಿದೆ: ಪಾಂಡವರ ತಾಯಿ ಕುಂತಿದೇವಿಯು ಗಜಗೌರಿ ವ್ರತವನ್ನು ಮಾಡಲು ದೇವಲೋಕದಿಂದ ತರಿಸಿದ ಐರಾವತ ಮುಂತಾದ ಅನೇಕ ವಸ್ತುಗಳಲ್ಲಿ ವೀಳ್ಯದೆಲೆ ಅಂಬು ಸಹ ಒಂದು. ಪೂಜೆ ಮುಗಿದ ನಂತರ ಮುಂಚೆಯೇ ಆದ ಕರಾರಿನಂತೆ ಅವು ದೇವಲೋಕದ ಕಡೆ ಹೊರಟವು. ಆದರೆ ಅವುಗಳನ್ನು ದೇವಲೋಕಕ್ಕೆ ಹೋಗಲು ಬಿಡದೆ ಒಬ್ಬೊಬ್ಬರು ಒಂದೊಂದನ್ನು ಕಟ್ಟಿ ಹಾಕಿದರು. ಭೀಮ – ಐರಾವತವನ್ನು, ಧರ್ಮರಾಯ ಅವರೆಕಾಳನ್ನು, ನಕುಲ – ಸಹದೇವರು ಭತ್ತವನ್ನು ಹಿಡಿದು ಕಟ್ಟಿಹಾಕಿದರೆ ವೀಳ್ಯದೆಲೆ ಅಂಬನ್ನು `ಬೊಮ್ಮಪ್ಪ’ನೆಂಬ ಗಂಗ ಮತಸ್ಥ ಬೆಸ್ತರವನು ಕಟ್ಟಿ ಹಾಕಿದನಂತೆ.
ಹಾಗಾಗಿ ಅವೆಲ್ಲಾ ಭೂ ಲೋಕದಲ್ಲಿಯೇ ಉಳಿದವಂತೆ. ಈಗಲೂ ಸಹ ವೀಳ್ಯದೆಲೆ ಅಂಬು ಆಕಾಶದತ್ತ ಹರಿಯುವುದು ದೇವಲೋಕದ ಆಸೆಗಾಗಿಯೇ! ಅದಕ್ಕಾಗಿಯೇ ಪ್ರತಿ ವರ್ಷ ಎಲೆ ಅಂಬನ್ನು ಇಳಿಸುವ ಪದ್ಧತಿ ಇದೆ ಎನ್ನುತ್ತಾರೆ. ಮತ್ತು ವೀಳ್ಯದೆಲೆಯನ್ನು ಕಟ್ಟಿ ಹಾಕಿದ ಬೊಮ್ಮಪ್ಪನ ನೆನಪಿಗಾಗಿ ವರ್ಷಕ್ಕೊಮ್ಮೆ ಎಲೆ ಅಂಬನ್ನು ಇಳಿಸಿ ಎಡೆ ಹಾಕಿ ಪೂಜೆ ಮಾಡುತ್ತಾರೆ. ಜೊತೆಗೆ ಸಾಕ್ಷಾತ್ ಗೌರಿಯೇ `ವೀಳ್ಯದೆಲೆ’ಯಾಗಿದ್ದಾಳೆ ಎಂದು ನಂಬಿದ ರೈತರು ಅದೇ ಸಮಯಕ್ಕೆ `ಗೌರಿ ಪೂಜೆ’ಯನ್ನೂ ಮಾಡುತ್ತಾರೆ.
ಗೌರಿ ಹಬ್ಬದ ದಿನ ಅಥವಾ ಹಬ್ಬ ಮುಗಿದ ಒಂಭತ್ತು ದಿವಸಕ್ಕೆ ತೋಟದ ದೇವ ಮೂಲೆಯಲ್ಲಿ ಮೂಡಣ ದಿಕ್ಕಿಗೆ ಚಿಕ್ಕ ಚಪ್ಪರ ಹಾಕಿ ಬಾಳೆಕಂದು ಕಟ್ಟಿ ಕಳಸವಿಟ್ಟು ಗೌರಿಯ ಮುಖವನ್ನು ಬರೆದ ತೆಂಗಿನ ಕಾಯಿಯನು ಕಳಸದ ಬಾಯಿಗಿಡುತ್ತಾರೆ. ಆ ತೆಂಗಿನಕಾಯಿಗೆ ವಾಲೆ, ಜುಮುಕಿ, ಬಳೆ, ಸರ… ಮುಂತಾದ ಒಡವೆಗಳನ್ನು ತೊಡಿಸಿ, ಹೊಸ ಸೀರೆ, ಕುಬುಸದ ಕಣ ಉಡಿಸಿ ಎಳ್ಳಿನ ಚಿಗಳಿ, ಅಕ್ಕಿಯ ತಂಬಿಟ್ಟು, ಅಕ್ಷತೆ, ಸಿಹಿ ಅಡುಗೆ ಎಡೆ ಇಡುತ್ತಾರೆ. ತೋಟದಲ್ಲಿ ಬಳಸುವ ಕುಡುಗತೋಲು, ಏಣಿ, ಎಲೆ ಕುಯ್ಯುವ ಉಗುರು, ನೀರು ಹುಯ್ಯುವ ಗುಂಬ ಎಲ್ಲವನ್ನೂ ಇಟ್ಟು ಸಿಂಗರಿಸಿ ಸಮೃದ್ಧವಾಗಿ ಸೇವಂತಿಗೆ ಹೂ ಮುಡಿಸಿ ಮೊದಲು ಗೌರಮ್ಮನ ತಂಗಿಯಾದ ಗಂಗೆಯನ್ನು ಪೂಜಿಸುತ್ತಾರೆ. ನಂತರ ಗೌರಿಗೆ ಪೂಜೆ ಮಾಡಿ ಮುತ್ತೈದೆಯರು ಅಕ್ಷತೆ ಹಚ್ಚಿ ಬಾಗಿನ ಕೊಡುತ್ತಾರೆ. ಪೂಜೆಯೆಲ್ಲಾ ಹೆಂಗಸರ ಕೆಲಸ. ಆದರೆ ಬೊಮ್ಮಪ್ಪನಿಗೆ ಎಡೆ ಹಾಕುವುದು ಗಂಡಸರ ಕೆಲಸ. ಬೊಮ್ಮಪ್ಪನಿಗೆಂದೇ ಜೀರಿಗೆ ಮೆಣಸು ಹಾಕಿ ಮಾಡಿದ ಕಿಚಡಿ ಅನ್ನ, ನೀರು ಮತ್ತು ಗಂಧದ ಕಡ್ಡಿ. ಇವು ಮೂರನ್ನೂ ಒಬ್ಬೊಬ್ಬರು ಹಿಡಿದುಕೊಂಡು
`ಬೊಮ್ಮಪ್ಪೊ, ಬೊಮ್ಮಪ್ಪೊ, ವರಗುಡ್ಲು ಮಡಗಿವ್ನಿ, ಗುಂಬ ಮಡಗಿವ್ನಿ, ನಿಂಗೆ ಬೇಕಾದ್ದೆಲ್ಲ ಮಡಗಿವ್ನಿ ಊಟ ಮಾಡಿ ಬೊಮ್ಮಪ್ಪೋ, ಒಳ್ಳೇದು ಮಾಡು ಬೊಮ್ಮಪ್ಪೋ…’ ಎನ್ನುತ್ತಾ, ಅನ್ನ-ನೀರು ಎರಚುತ್ತಾ ತೋಟ ಮೂರು ಸುತ್ತು ಹಾಕುತ್ತಾರೆ. ಸಂಜೆ ಹೊತ್ತು ಈ ಪೂಜೆ ನಡೆಯುತ್ತದೆ. ಇಳಿಗತ್ತಲ ಹೊತ್ತಿನಲ್ಲಿ ಹಳ್ಳಿಯ ಎಲ್ಲರೂ ವೀಳ್ಯದೆಲೆ ತೋಟದಲ್ಲಿ ಸೇರಿ ಗೌರಿಗೆ ಹಸೆ ಹಚ್ಚಿ, ಬೊಮ್ಮಪ್ಪನಿಗೆ ಎಡೆ ಹಾಕಿ, ಆ ಮೂಲಕ ತಮ್ಮ ಬೇಸಾಯವೆಂಬ ಕಾಯಕಕ್ಕೆ ದೈವತ್ವದ ಸ್ವರೂಪ ನೀಡಿ ಖುಷಿಪಡುತ್ತಾರೆ.