ನೇಗಿಲು ಪೂಜೆ : ಬಿತ್ತನೆ ಬೀಜ ಪರೀಕ್ಷಿಸುವ ಆಚರಣೆ

ಬದಲಾಯಿಸಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ಕನಕಪುರ ಮತ್ತು ತಮಿಳುನಾಡು ಪ್ರದೇಶದ ಕೆಲವು ಹಳ್ಳಿಗಳಲ್ಲಿ ಯುಗಾದಿ ಹಿಂದೆ – ಮುಂದೆ ನೇಗಿಲು ಪೂಜೆ ಎಂಬ ವಿಶಿಷ್ಟ ಆಚರಣೆ ಮಾಡುತ್ತಾರೆ. ಹಸಿ ಸಗಣಿಯಲ್ಲಿ ಬಟ್ಟಲಾಕಾರ ಮಾಡಿ ಸ್ವಲ್ಪ ಒಣಗಿಸಿ ಅದಕೆ ಕೆಮ್ಮಣ್ಣು ಹಾಕಿ ತಾವು ಮುಂದಿನ ವರ್ಷ ಬಿತ್ತುವ ೫, ೭ ಅಥವಾ ೯ ಜಾತಿಯ ಬೀಜಗಳನ್ನು ಸ್ವಲ್ಪ-ಸ್ವಲ್ಪ ಬಿತ್ತುತ್ತಾರೆ. ಸಾಮಾನ್ಯವಾಗಿ ಅವರೆ, ತೊಗರಿ, ರಾಗಿ, ಭತ್ತ, ಜೋಳ, ನವಣೆ, ಹರಳು, ಹುರುಳಿ ಮುಂತಾದವನ್ನು ಬಿತ್ತುವುದು ರೂಢಿ.

ಬಿತ್ತಿದ ನಂತರ ಈ ಸಗಣಿ ಬಟ್ಟಲನ್ನು ಎರಡು ಮರದ ನೇಗಿಲುಗಳಿಗೆ ಕಟ್ಟುತ್ತಾರೆ. ನೇಗಿಲುಗಳು ಹೊಸತಾಗಿರಬೇಕು, ಹಳೆಯವನ್ನು ಬಳಸುವುದಿಲ್ಲ. ಹೀಗೆ ಬಿತ್ತಿದ ನಂತರ ಒಂಭತ್ತನೇ ದಿನದವರೆಗೆ ನೀರು ಹಾಕಿ ಕೊನೆಯ ದಿನ ಮನೆ ಹಿರಿಯರು ಮತ್ತು ಗ್ರಾಮದ ಹಿರಿಯರು ಸೇರಿ ಮೊಳಕೆಯನ್ನು ಪರೀಕ್ಷಿಸುತ್ತಾರೆ. ಯಾವ ಬೆಳೆ ಎಷ್ಟೆಷ್ಟು ಪ್ರಮಾಣದಲ್ಲಿ ಮೊಳಕೆ ಬಂದಿದೆಯೋ ಅಷ್ಟು ಬೆಳೆ ಮುಂದಿನ ವರ್ಷ ಆಗುತ್ತದೆ ಎಂಬುದು ನಿರೀಕ್ಷೆ . ಉದಾಹರಣೆಗೆ ರಾಗಿ ಐವತ್ತು ಪೈಸೆ (ಅರ್ಧ ಭಾಗ) ಮೊಳಕೆ ಬಂದಿದ್ದರೆ ಎಂಟಾಣೆ ಬೆಳೆ, ಮುಕ್ಕಾಲು ಭಾಗ ಬಂದಿದ್ದರೆ ಹನ್ನೆರಡಾಣೆ ಬೆಳೆ ಆಗುತ್ತದೆ. ಈ ರೀತಿ ನಿರ್ಧರಿಸಿ ಯಾವುದು ಹೆಚ್ಚು ಹುಲುಸಾಗಿ ಮೊಳಕೆ ಬಂದಿರುತ್ತದೆಯೋ ಅದನ್ನು ಈ ವರ್ಷ ಜಾಸ್ತಿ ಪ್ರಮಾಣದಲ್ಲಿ (ಒಂದ್ ಕೈ ಮುಂದೆ ಮಾಡಿ ಬಿತ್ಬೇಕು) ಬಿತ್ತಬೇಕೆಂದು ತೀರ್ಮಾನಿಸಿಕೊಳ್ಳುತ್ತಾರೆ. ಹೇಗೆಂದರೆ ಹೆಸರು ಕಾಳು ಉತ್ತಮವಾಗಿ ಮೊಳಕೆಯಾಗಿದ್ದರೆ ಅಕ್ಕಡಿ ಸಾಲಿಗೆ ಬೇರೆ ಕಾಳುಗಳನ್ನು ಕಡಿಮೆ ಮಾಡಿ ಹೆಸರುಕಾಳು ಜಾಸ್ತಿ ಮಾಡುತ್ತಾರೆ. ತೊಗರಿ ಚೆನ್ನಾಗಿ ಮೊಳಕೆ ಬಂದಿದ್ದರೆ ಅದನ್ನು ಹೆಚ್ಚು ಮಾಡುತ್ತಾರೆ. ತೀರ್ಮಾನ ಮುಗಿದ ನಂತರ ಊರವರೆಲ್ಲರೂ ಸಾಮೂಹಿಕವಾಗಿ ತೆರಳಿ ಎಲ್ಲಾ ಮೊಳಕೆ ಬಂದ ಬಟ್ಟಲುಗಳನ್ನು ಗಂಗಮ್ಮನಿಗೆ (ನೀರಿನ ಸೆಲೆ) ಬಿಡುತ್ತಾರೆ.

ಇದನ್ನು ಆಚರಣೆಯ ಮಟ್ಟಕ್ಕಿಂತ ಆಚೆ ನಿಂತು ನೋಡಿದರೆ ಹೀಗನ್ನಿಸುತ್ತದೆ. ಯುಗಾದಿ ಮಾರ್ಚಿ-ಏಪ್ರಿಲ್‌ನಲ್ಲಿ ಬರುತ್ತದೆ. ಡಿಸೆಂಬರ್, ಜನವರಿಯಲ್ಲಿ ಕುಯಿಲು, ಒಕ್ಕಣೆ ಮಾಡಿ ಸಂಗ್ರಹ ಮಾಡಿದ ಬೀಜಗಳನ್ನು ಜೂನ್-ಜುಲೈ ತಿಂಗಳಲ್ಲಿ ತೆಗೆದು ಬಿತ್ತನೆ ಮಾಡುತ್ತಾರೆ. ಈ ಎರಡು ಅವಧಿಯ ನಡುವೆ ನೇಗಿಲು ಪೂಜೆ ನೆಪದಲ್ಲಿ ಸಂಗ್ರಹವಾದ ಬೀಜಗಳನ್ನು ಒಮ್ಮೆ ಬಿಚ್ಚಿ ನೋಡಿದಂತಾಗುತ್ತದೆ. ಹುಳ-ಗಿಳ ಬಿದ್ದಿದ್ದರೆ ಹುಷಾರಾಗಬಹುದು. ಜೊತೆಗೆ ನೇಗಿಲು ಪೂಜೆಯಲ್ಲಿ ಚೆನ್ನಾಗಿ ಮೊಳಕೆ ಬರದಿದ್ದಾಗ ಬೀಜ ಹಾಳಾಗಿದೆ ಎಂಬ ಅಂಶ ತಿಳಿದುಬಂದು ಅದನ್ನು ಬದಲಾಯಿಸಬಹುದು ಮತ್ತು ಮೊಳಕೆ ಪ್ರಮಾಣ ಕಡಿಮೆಯಾಗಿದ್ದು ಗೊತ್ತಾಗಿ ಬಿತ್ತುವ ಬೀಜದ ಪ್ರಮಾಣವನ್ನು ಹೆಚ್ಚಿಸಬಹುದು. ಅಂದರೆ ಎಕರೆಗೆ ೧೪ ಕೆ.ಜಿ. ಬಿತ್ತುವ ಕಡೆ ೧೬ ಕೆ.ಜಿ. ಬಿತ್ತುವುದು… ಹೀಗೆ. ಆಗ ಅಲ್ಲಿಗಲ್ಲಿಗೆ ಸರಿಹೋಗುತ್ತದೆ. ತಮಿಳುನಾಡಿನ ಹುಲಿಬಂಡೆ ಎಂಬ ಕಾಡುಹಳ್ಳಿಯಲ್ಲಿ ಇಡೀ ಗ್ರಾಮದ ಪ್ರತಿಯೊಂದು ಮನೆಯವರೂ ನೇಗಿಲು ಪೂಜೆಯನ್ನು ಅತ್ಯಂತ ಶ್ರದ್ಧೆಯಿಂದ ಕ್ರಮಬದ್ಧವಾಗಿ ಮಾಡುತ್ತಾರೆ.

ಬಿತ್ತನೆ ಬೀಜಗಳ ಮೊಳಕೆ ಶಕ್ತಿಯನ್ನು ಪರೀಕ್ಷಿಸುವ ಈ ಆಚರಣೆ ವಿಶಿಷ್ತವಾದುದು ಮತ್ತು ರೈತರ ಜಾಣತನಕ್ಕೆ ಉತ್ತಮ ನಿದರ್ಶನ. ಆದರೆ ಈ ಆಚರಣೆ ಇಂದು ತೀರಾ ಅಪರೂಪವಾಗುತ್ತಿದೆ.