ಕಂಸಾಳೆಯ ಕಲಾವಿದರಲ್ಲಿ ಮಹದೇಶ್ವರನ ಹುಟ್ಟು, ಬಾಲ್ಯ, ಬಾಲಲೀಲೆ, ಯೌವನ, ವಿನೋದ, ವಿರಸ, ಮುಪ್ಪು, ಮಹಿಮೆಗಳು ಕಂಠಸ್ಥವಾಗಿ ನಿಂತಿವೆ. ಈ ಕಾವ್ಯವನ್ನು ಇಡೀ ರಾತ್ರಿ ಹಾಡಿ ತಣಿಸುವ ಅವರ ಕಲೆಗಾರಿಕೆ ಮೆಚ್ಚುವಂತಹುದು, ಇದಲ್ಲದೆ ಕಲಾವಿದರು ಪಿರಿಯಾಪಟ್ಟಣದ ಲಾವಣಿ, ಸಾರಂಗಧರ, ಚೆನ್ನಿಗರಾಮ, ಘನಪತಿರಾಯ, ಬಾಲನಾಗಮ್ಮ, ಅರ್ಜುನ ಜೋಗಿ ಮುಂತಾದ ಜನಪದ ಕಥಾ ಪ್ರಸಂಗಗಳನ್ನೂ ಹಾಡುತ್ತಾರೆ. ಜನಪದ ಬೆಳಸಿಕೊಂಡು ಬರುತ್ತಿರುವ ಇವರ ಕಲೆ ಜಾನಪದ ಕ್ಷೇತ್ರದ ದೊಡ್ಡ ನಿಧಿಗಳಲ್ಲೊಂದಾಗಿದೆ. ಕಂಸಾಳೆಯ ಕಲಾಪ್ರಕಾರಗಳಲ್ಲಿ ‘ಬೀಸುಕಂಸಾಳೆ’ಯು ವಿಶಿಷ್ಟ ಶೈಲಿಯದು. ಚಮತ್ಕಾರ, ಶ್ರಮ ಎರಡೂ ಒಟ್ಟಿಗೆ ಸೇರಿ ಅಭಿವ್ಯಕ್ತವಾಗುವ ಈ ಪ್ರದರ್ಶನಕ್ಕೆ ನಾಲ್ಕು ಜನ ಬೇಕು, ಒಬ್ಬಾತ ಮಧ್ಯೆ ಇದ್ದು ತಾಳಕ್ಕೆ ತಕ್ಕಂತೆ ತಲೆಯ ಮೇಲೆ, ಬೆನ್ನ ಹಿಂದೆ, ಕಾಲು ಕೆಳಗೆ, ಕುಳಿತು, ನಿಂತು, ಬಾಗಿ ಬಳುಕಿ, ಉರುಳಾಡಿ, ಸುತ್ತ ನಿಂತ ಮೂವರಿಗೆ ತಾಳಗಳನ್ನು ಕೊಡುತ್ತ, ನಿರ್ದಿಷ್ಟ ಲಯದಲ್ಲಿ ಬೀಸು ಕಂಸಾಳೆಯನ್ನು ಪ್ರದರ್ಶಿಸುತ್ತಾನೆ. ಹೀಗೆ ಆರಂಭವಾದ ಪ್ರದರ್ಶನ ಪರಾಕಾಷ್ಠೆಗೆ ಹೋದಾಗ ನಾಲ್ಕು ಜೊತೆ ಕಂಸಾಳೆಗಳ ತಾಳದ ಕಂಚಿನ ಸ್ವರ, ಮಿಂಚಿನ ವೇಗದ ಕೈ ಚಳಕ ನೋಟಕರನ್ನು ಮೂಕವಿಸ್ಮಯರನ್ನಾಗಿ ಮಾಡುತ್ತದೆ. ಎಷ್ಟೇ ಚುರುಕಿನಿಂದ ಕಲೆ ನಡೆದರೂ ಎಲ್ಲೂ ತಾಳ ತಪ್ಪದಂತೆ ಎಚ್ಚರ ವಹಿಸುವ ಕಲಾವಿದರ ಪರಿಪೂರ್ಣ ಕುಶಲತೆ ನಿಜಕ್ಕೂ ಸೋಜಿಗ ಪಡುವಂಥದು. ಗಾಯಕರು ‘ಲಿಂಗ ಬಾ, ಮುದ್ದು ಲಿಂಗ ಬಾ, ನಮ್ಮ ಮುದ್ದು ಮಾದಯ್ಯನ ಲಿಂಗ ಬಾ’-ಎಂಬ ಹಾಡನ್ನು ಲಯಬದ್ಧವಾಗಿ ತಾಳದೊಂದಿಗೆ ಹೊಂದಿಸಿಕೊಂಡೇ ಹಾಡುತ್ತಾರೆ. ಕಲಾವಿದರು ಕಂಸಾಳೆಗೆ ಕಟ್ಟಿದ ದಾರದ ತುದಿಯನ್ನು ಹಿಡಿದುಕೊಂಡು ಬೀಸಿ ತಾಳ ಹಾಕುವುದರಿಂದ ಇದು ‘ಬೀಸು ಕಂಸಾಳೆ’ ಯಾಗಿದೆ. ಈ ದಾರ ಸುಮಾರು ಒಂದೊವರೆ ಅಥವಾ ಎರಡು ಅಡಿ ಉದ್ದವಿರುವುದರಿಂದ ಕಲಾವಿದ ದೇಹದ ಸುತ್ತಮುತ್ತ ಯಾವ ಭಾಗಕ್ಕಾದರೂ ತಿರುಗಿಸಿ ತಾಳ ಬಡಿಯಲು ಅವಕಾಶವಾಗುತ್ತದೆ. ಆದರೂ ಇದಕ್ಕೆ ಅತ್ಯಂತ ಕುಶಲತೆ ಹಾಗೂ ಅಭ್ಯಾಸ ಬೇಕಾಗುತ್ತದೆ. ವಿವಿಧ ಭಂಗಿಗಳಲ್ಲಿ ತಿರುಗುತ್ತ ಕಂಸಾಳೆಯನ್ನು ಬೀಸುತ್ತಿರುವಾಗ ಸ್ವಲ್ಪ ಲೆಕ್ಕಾಚಾರ ತಪ್ಪಿದರೂ ತಾಳ ತಪ್ಪಿ ಮೈಗೆ ಏಟು ಬೀಳುವ ಸಂಭವವುಂಟು. ಆದ್ದರಿಂದ ಕುಂತಾಡುವ ಅಥವಾ ನಿಂತಾಡುವ ಕಂಸಾಳೆಗಿಂತ ಬೀಸುಕಂಸಾಳೆ ಕ್ಲಿಷ್ಟವಾದ ಕಲೆ; ಅಷ್ಟೇ ರೋಮಾಂಚಕಾರಿ! ಕಲಾವಿದರು ಬಿಗಿ ಕಸೆ ಅಂಗಿ, ಮೊಳಕಾಲಿನವರೆಗೆ ಬಿಗಿ ಕಾಸೆ ಕಟ್ಟಿದ ಪಂಚೆ ಧರಿಸಿರುತ್ತಾರ್ಹೆ;. ಕೆಲವು ಕಡೆ ಬರಿ ಮೈಯಲ್ಲಿದ್ದು ಚಡ್ಡಿ ಮಾತ್ರ ಧರಿಸಿರುವುದುಂಟು. ಉಳಿದಂತೆ ಮೈಕೈಗೆ ಅಲ್ಲಲ್ಲಿ ವಿಭೂತಿ ಧರಿಸಿರುತ್ತಾರೆ. ಕಿವಿಗೆ ರುದ್ರಾಕ್ಷಿಯಿರುತ್ತದೆ. ಕಂಸಾಳೆಯವರನ್ನು ‘ದೇವರ ಗುಡ್ಡ’ ರೆಂದೂ ಕರೆಯುತ್ತಾರೆ. ‘ಗುಡ್ಡ’ ನೆಂಈಟPS;ದರೆ ಮಹದೇಶ್ವರನ ‘ಭಕ್ತ’, ಗುಡ್ಡನನ್ನು ಬಿಡುವುದು ಕಂಸಾಳೆ ಮನೆತನದ ವಿಶಿಷ್ಟ ಸಂಪ್ರದಾಯ. ವಂಶ ಪಾರಂಪರ್ಯವಾಗಿ ಬಂದ ಪದ್ಧತಿಯಂತೆ ಮನೆಗೊಬ್ಬ ಗುಡ್ಡನನ್ನು ಬಿಡುವುದು ಮಹದೇಶ್ವರನ ಒಕ್ಕಲಲ್ಲಿ ಕಡ್ಡಾಯ. ಅಲ್ಲದೆ ಕಂಟಕ ನಿವಾರಣೆ, ಕಷ್ಟ ಪರಿಹಾರದ ದೆಸೆಯಿಂದ ಮಾಡಿಕೊಂಡ ಹರಕೆಯಂತೆ ಗುಡ್ಡನನ್ನು ಬಿಡುವುದೂ ಉಂಟು. ಮಕ್ಕಳಾಗದವರು ಹೊತ್ತ ಹರಕೆಯ ಪರಿಣಾಮವಾಗಿ ಹುಟ್ಟಿದ ಹಿರಿಯ ಹೆಣ್ಣು-ಗಂಡು ಮಕ್ಕಳನ್ನು ‘ಗುಡ್ಡಿ’-‘ಗುಡ್ಡ’ ರಾಗಿ ಬಿಡುವುದೂ ಉಂಟು. ಗುಡ್ಡಿ ಬಿಡುವ ಸಂಪ್ರದಾಯ ಇತ್ತೀಚೆಗೆ ಕಡಿಮೆಯಾಗಿದೆ. ಆಕೆ ಗುಡ್ಡಿಯಾದ ಮೇಲೆ ವಿವಾಹವಾಗುವಂತಿಲ್ಲ. ಇಷ್ಟಪಟ್ಟಲ್ಲಿ ಗುಡ್ಡನೊಬ್ಬನನ್ನು ಆಕೆ ‘ಸ್ವೀಕರಿ’ಸಬಹುದು. ಗಂಡಸರನ್ನು‘ಗುಡ್ಡ’ರಾಗಿ ಬಿಡುವ ಸಂಪ್ರದಾಯ ಈಗಲೂ ಇದೆ. ಗುಡ್ಡರಾದ ಮೇಲೆ ಕಂಸಾಳೆ ವಾದ್ಯ ಮತ್ತು ಪದಗಳನ್ನು ಕಲಿತು ಹಾಡುವ ಕಲೆಯನ್ನು ಬೆಳಸಿಕೊಂಡು ಕ್ರಮವಾಗಿ ಮಹದೇಶ್ವರನ ಸೇವೆ ಸಲ್ಲಿಸಬೇಕು.

Start a discussion with Noble Lalu Jose

Start a discussion