ದೌರ್ಬಲ್ಯವೇ ಮರಣ

ಗಾಳಿ, ನೀರು, ಬೆಳಕು, ಭೂಮಿ, ಆಕಾಶ, ಆಹಾರ – ಇವೆಲ್ಲ ಜೀವಿಗಳು ಜೀವಿಸಲು ಅತ್ಯಗತ್ಯವಾಗಿರುವ ಶಕ್ತಿಗಳಾಗಿವೆ. ನಮಗೆ ಜೀವಿಸಲು ನೆರವಾದ ಈ ಶಕ್ತಿಗಳನ್ನು ಮನುಷ್ಯ ಪುರಾತನ ಕಾಲದಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಪೂಜಿಸುತ್ತ ಅವುಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಬಂದಿದ್ದಾನೆ. ಅಂತೆಯೇ ಬೆಳಕಿಗೆ ಕಾರಣನಾದ ಸೂರ್ಯನನ್ನು , ಉಸಿರಿಗೆ ಆಸರೆಯಾದ ಗಾಳಿಯನ್ನು, ಕುಡಿಯುವ ನೀರಿಗೆ ಮೂಲಗಳಾದ ನದಿಗಳನ್ನು, ಹಸಿವಿಗೆ ಆಹಾರ ನೀಡುವ ಭೂಮಿಯನ್ನು ದೈವ ಸಮಾನವಾದ ಶಕ್ತಿಗಳೆಂದು ನಮ್ಮ ಪೂರ್ವಜರು ಪೂಜಿಸುತ್ತಾ ಬಂದಿದ್ದಾರೆ. ಮನುಷ್ಯನಿಗೆ ದುಡಿಯಲು, ಜೀವಿಸಲು ಬೇಕಾದ ದೈಹಿಕ, ಮಾನಸಿಕ ಶಕ್ತಿಯನ್ನೂ ಸಹ ಮೇಲೆ ತಿಳಿಸಿದ ಎಲ್ಲ ಶಕ್ತಗಳೇ ನೀಡುತ್ತವೆ.ಇಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ ಈ ಜಗತ್ತಿನಲ್ಲಿ ಶಕ್ತಿಗೆ ಮತ್ತು ಶಕ್ತನಿಗೆ ಅಗ್ರ ಸ್ಥಾನವಿದೆ. ಅದೇ ಆಶಕ್ತನಿಗೆ ಯಾವುದೇ ಮನ್ನಣೆ ಅಥವಾ ಗೌರವವಿಲ್ಲ. ಆದ್ದರಿಂದ ಮನುಷ್ಯರಾದ ನಾವು ದೈಹಿಕವಾಗಿಯೂ, ಮಾನಸಿಕವಾಗಿಯೂ ಬಲಿಷ್ಠರಾಗಿರುವುದು ಶಕ್ತಿಶಾಲಿಗಳಾಗಿರುವುದು ಅತಿ ಮುಖ್ಯವಾಗಿದೆ. ನಮಗೆ ದೈಹಿಕ ಶಕ್ತಿ ಮತ್ತು ಮಾನಸಿಕ ಶಕ್ತಿ ಇದ್ದರೆ ಮಾತ್ರ ಮತ್ತೊಂದು ಮಹತ್ವಪೂರ್ಣವಾದ ಆತ್ಮಶಕ್ತಿಯನ್ನು ನಾವು ಪಡೆದುಕೊಳ್ಳಬಹುದಾಗಿದೆ. ನೀವು ಬಲಿಷ್ಟರಾಗಿದ್ದರೆ, ನಿಮ್ಮ ವೈರಿಗಳೂ ಸಹ ನಿಮಗೆ ಅಂಜಿಯಾದರೂ ಗೌರವವನ್ನು ಕೊಡುತ್ತಾರೆ. ನೀವು ದುರ್ಬಲರಾಗಿದ್ದರೆ ನಿಮಗೆ ಅತ್ಯಂತ ಹತ್ತಿರದ ನೆಂಟರೂ ರಕ್ತ ಸಂಬಂಧಿಗಳೂ ಸಹ ನಿಮ್ಮನ್ನು ತಿರಸ್ಕಾರ ಮತ್ತು ಅವಹೇಲನಕಾರಿ ದೃಷ್ಟಿಯಿಂದ ನೋಡುತ್ತಾರೆ. ಅಷ್ಟೇ ಏಕೆ ನಿಮ್ಮನ್ನು 9 ತಿಂಗಳು ಒಡಲಲ್ಲಿ ಹೊತ್ತು ಹೆತ್ತು ಮುದ್ದಿನಿಂದ ಸಾಕಿದ ತಾಯಿಯೇ ನೀವು ದುರ್ಬಲರಾಗಿ ಬೆಳೆದರೆ ನಿಮ್ಮನ್ನು ಶಪಿಸುತ್ತಾಳೆ! ಅದಕ್ಕೆಂದೇ ಪುರಂದರದಾಸರು ಹೇಳಿದ್ದು- ‘ಬಲಶಾಲಿಗೆ’ ಎಲ್ಲೆಡೆ ಸ್ನೇಹಿತರು, ಬಲಹೀನನಿಗೆ ಮಿತ್ರರೇ ಶತ್ರಗಳು.