ಸತೀಶ್ ಕುಮಾರ್ ಅಂಡಿಂಜೆ
ಡಾ. ಸತೀಶ್ ಕುಮಾರ್ ಅಂಡಿಂಜೆ
ಬದಲಾಯಿಸಿಹುಟ್ಟು ಮತ್ತು ಬೆಳವಣಿಗೆ
ಬದಲಾಯಿಸಿಪ್ರಸ್ತುತ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸತೀಶ್ ಕುಮಾರ್ ಅಂಡಿಂಜೆಯವರು ಮೂಲತಃ ಬೆಳ್ತಂಗಡಿ ತಾಲ್ಲೂಕಿನ ಅಂಡಿಂಜೆ ಗ್ರಾಮದವರು. ಅಂಡಿಂಜೆ ‘ವನಸಿರಿ’ಯ ಮುತ್ತಯ್ಯ ಪೂಜಾರಿ ಮತ್ತು ವಾರಿಜಾ ದಂಪತಿಗಳ ಪುತ್ರರಾಗಿರುವ ಇವರು ತಮ್ಮ ಆರಂಭಿಕ ಶಿಕ್ಷಣವನ್ನು ಅಂಡಿಂಜೆ, ಬಂಗಾಡಿ ಮತ್ತು ವೇಣೂರುಗಳಲ್ಲಿ ಪಡೆದರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪತ್ರಿಕೋದ್ಯಮ, ಮನಃಶಾಸ್ತ್ರ, ಕನ್ನಡ ಸಾಹಿತ್ಯ ವಿಷಯದಲ್ಲಿ ಪದವಿ ಶಿಕ್ಷಣ ಪಡೆದ ಇವರು ಬಿ.ಎ. ಪದವಿಯಲ್ಲಿ ಐದನೇ ರಾಂಕ್ ಪಡೆದಿರುತ್ತಾರೆ. ಸ್ವಲ್ಪ ಸಮಯ ಹೊಸದಿಗಂತ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ರಾಂಕ್ ಹಾಗೂ ಚಿನ್ನ ಪದಕದೊಂದಿಗೆ ಪಡೆದರು. ಸ್ನಾತಕೋತ್ತರ ಶಿಕ್ಷಣ ಪಡೆಯುವ ಅವಧಿಯಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕøತಿಕ ವಿನಿಮಯ ಕಾರ್ಯಕ್ರಮದಡಿ ನಾರ್ವೆ ದೇಶಕ್ಕೆ ಭೇಟಿ ನೀಡಿ ಟೆಲಿವಿಷನ್ ಸುದ್ದಿ ನಿರ್ಮಾಣದ ತರಬೇತಿ ಪಡೆದಿರುತ್ತಾರೆ. ಉಪನ್ಯಾಸಕರ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‍ಇಟಿ)ಯಲ್ಲಿ ಉತ್ತೀರ್ಣರಾಗಿರುವ ಇವರು ಪ್ರಜಾವಾಣಿ ಪತ್ರಿಕೆಯಲ್ಲಿ ಪತ್ರಿಕಾ ತರಬೇತಿ ಪಡೆದಿರುತ್ತಾರೆ.
ಉದ್ಯೋಗ
ಬದಲಾಯಿಸಿಉಜಿರೆ ಶ್ರೀ ಧ.ಮಂ.ಕಾಲೇಜು ಹಾಗೂ ಮಣಿಪಾಲದ ಮಾಧವ ಪೈ ಸ್ಮಾರಕ ಕಾಲೇಜುಗಳಲ್ಲಿ ಕ್ರಮವಾಗಿ ಒಂದು ವರ್ಷ ಮತ್ತು ಮೂರು ವರ್ಷ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ ಇವರು ಮಂಜುವಾಣಿ ಪತ್ರಿಕೆಯ ಸಹ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರು. ಕಳೆದ ಹನ್ನೊಂದು ವರ್ಷಗಳಿಂದ ಕುವೆಂಪು ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಇದೇ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ವಿಘ್ನೇಶ್ ಎನ್. ಭಟ್ ಅವರ ಮಾರ್ಗದರ್ಶನದಲ್ಲಿ ‘‘Role of Traditional Folk Arts as Media of Mass Communication: A Study with Special Reference to Coastal Karnataka’ ಎಂಬ ವಿಷಯದಲ್ಲಿ ಸಂಶೋಧನಾ ಅಧ್ಯಯನ ಮಾಡಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಇಬ್ಬರು ವಿದ್ಯಾರ್ಥಿಗಳು ಎಂ.ಫಿಲ್ ಹಾಗೂ ಪಿ.ಹೆಚ್.ಡಿ ಪದವಿ ಪಡೆದಿದ್ದು, ಪ್ರಸ್ತುತ ಏಳು ಮಂದಿ ಪಿ.ಎಚ್.ಡಿ ಸಂಶೋಧನಾ ಅಧ್ಯಯನ ನಡೆಸುತ್ತಿದ್ದಾರೆ.
ಇತರೆ ಕಾರ್ಯ ಚಟುವಟಿಕೆಗಳು
ಬದಲಾಯಿಸಿಕುವೆಂಪು ವಿವಿಯ ಪ್ರಸಾರಾಂಗದ ಸಹ ನಿರ್ದೇಶಕರಾಗಿ ಹಾಗೂ ವಿವಿ ವಾರ್ತಾಪತ್ರದ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಇವರು ದೂರಶಿಕ್ಷಣ ನಿರ್ದೇಶನಾಲಯದ ಕನ್ನಡ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸಿನ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುವೆಂಪು, ಹಂಪಿ, ಮಂಗಳೂರು ಮತ್ತು ಕರ್ನಾಟಕ ರಾಜ್ಯ ಮುಕ್ತ ವಿವಿಗಳ ಪತ್ರಿಕೋದ್ಯಮ ಕೋರ್ಸ್‍ಗಳ ಸ್ವಯಂ ಕಲಿಕಾ ಪಠ್ಯಗಳನ್ನು ರಚಿಸಿರುವ ಇವರು ಇಲ್ಲಿಯ ಸಂಪರ್ಕ ತರಗತಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದಾರೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಅಧ್ಯಯನ ಮಂಡಳಿ ಮತ್ತು ಪರೀಕ್ಷಾ ಮಂಡಳಿಗಳ ಅಧ್ಯಕ್ಷರಾಗಿ/ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಇವರು ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿರುತ್ತಾರೆ. ಇವರ 30ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಕಮ್ಯುನಿಕೇಟರ್, ಮೀಡಿಯಾ ರಿಸರ್ಚರ್ ಮುಂತಾದ ಸಂಶೋಧನಾ ನಿಯತಕಾಲಿಕಗಳಲ್ಲಿ ಮತ್ತು ವಿಚಾರ ಸಂಕಿರಣದ ಸಂಪಾದಿತ ಕೃತಿಗಳಲ್ಲಿ ಪ್ರಕಟಗೊಂಡಿವೆ.
ಲೇಖಕರಾಗಿ
ಬದಲಾಯಿಸಿಹವ್ಯಾಸಿ ಬರಹಗಾರರಾಗಿರುವ ಇವರ 250ಕ್ಕೂ ಹೆಚ್ಚು ಲೇಖನ, ನುಡಿಚಿತ್ರ, ಸಣ್ಣಕಥೆಗಳು ಕನ್ನಡ, ಇಂಗ್ಲೀಷ್ ಮತ್ತು ತುಳು ಭಾಷೆಗಳಲ್ಲಿ 30ಕ್ಕೂ ಹೆಚ್ಚು ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಶಿವಮೊಗ್ಗದ ‘ಜನಹೋರಾಟ’ ಎಂಬ ಪತ್ರಿಕೆಯಲ್ಲಿ ಇವರ ‘ಪ್ರಸ್ತುತ’ ಎಂಬ ಅಂಕಣ ಪ್ರತೀವಾರ ಎರಡು ವರ್ಷಗಳ ಕಾಲ ಪ್ರಕಟವಾಗಿದೆ. ಇವರ ಭಾಷಣ ಹಾಗೂ ಸಣ್ಣ ಕಥೆಗಳು ಮಂಗಳೂರು ಮತ್ತು ಭದ್ರಾವತಿ ಆಕಾಶವಾಣಿ ಕೇಂದ್ರಗಳಿಂದ ಪ್ರಸಾರಗೊಂಡಿವೆ. ಇವರದು ಪತ್ನಿ ಶ್ರೀಮತಿ ವಿನಯ ಕುಮಾರಿ, ಮಗ ಮಾ.ಸಾತ್ವಿಕ್ ಮತ್ತು ಮಗಳು ಕು.ಸಾನ್ವಿ ಅವರನ್ನು ಹೊಂದಿರುವ ಚಿಕ್ಕ ಸಂಸಾರ.