ಸಂಸ್ಕೃತ ಸಂಧಿ
ಸಂಧಿಯಲ್ಲಿ ಪೂರ್ವ ಪದ+ಉತ್ತರ ಪದ = ಸಂಧಿ ಪದ. ಇಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಮೂಲಪದಗಳು. ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಆದಿಯ ಅಕ್ಷರ ಸಂಧಿಸಿದಾಗ ಸಂಧಿಕಾರ್ಯ ಆಗುವುದು. ಉದಾ : ದೇವ(ಅ)+(ಅ)ಅಸುರ = ದೇವಾಸುರ. ದೇ=ದ್+ಏ. ವಾ=ವ್+ಆ. ಸು=ಸ್+ಉ. ರ= ರ್+ಅ. ಒಟ್ಟಾಗಿ ವಿಭಾಗಿಸಿದಾಗ ದ್+ಏ+ವ್+ಆ(ಅ+ಅ)+ಸ್+ಉ+ರ್+ಅ ಎಂಟು ಧ್ವನಿಮಾಗುವುವು. ಸಂಧಿ ಎಂದರೆ ಕೂಡುವುದು. ಎಂದರೆ, ಎರಡು ವರ್ಣಗಳು (ಅ+ಅ=ಆ) ಕೂಡಿ ಸಂಧಿಯಾಗುತ್ತದೆ.[೧],
ವ್ಯಾಖ್ಯೆ
- ಸಂಧಿ ಎಂದರೆ, “ಎರಡು ಅಥವಾ ಹಲವಾರು ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ‘ವರ್ಣಾಕ್ಷರ’ ಸಂಧಿ ಎಂದು ಹೆಸರು”- ಕೇಶಿರಾಜ.
- ಬೇರೆ ಬೇರೆಯಾಗಿದ್ದ ಅಕ್ಷರಗಳನ್ನು ಕೂಡಿಸಿ ಉಚ್ಛರಿಸುವುದಕ್ಕೆ ಸಂಧಿ ಎಂದು ಹೆಸರು - ಕ್ಯೆಪಿಡಿಕಾರ.
- ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಲಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಯ ಬಾರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು.
ಸಂಸ್ಕೃತ ಸಂಧಿಯಲ್ಲಿ ಎರಡು ವಿಧ
ಎರಡು ಸಂಸ್ಕೃತ ಶಬ್ದಗಳು ಸೇರಿ ಸಂಧಿಯಾದರೆ ಸಂಸ್ಕೃತ ಸಂಧಿಯೇ ಆಗುತ್ತದೆ. ಒಂದು ಸಂಸ್ಕೃತ ಶಬ್ದವು ಕನ್ನಡ ಶಬ್ದದೊಡನೆ ಸೇರಿ ಸಂಧಿಯಾದರೆ ಕನ್ನಡ ಸಂಧಿಯಾಗುತ್ತದೆ. ಸಂಸ್ಕೃತದಲ್ಲಿ ಸ್ವರಕ್ಕೆ ಸ್ವರ ಅಕ್ಷರ ಪರವಾಗಿ ಸ್ವರಸಂಧಿಗಳೂ, ವ್ಯಂಜನಕ್ಕೆ ವ್ಯಂಜನ ಅಕ್ಷರ ಪರವಾಗಿ ವ್ಯಂಜನಸಂಧಿಗಳೂ ಆಗುವುವು.
ಸಂಸ್ಕೃತ ಸ್ವರ ಸಂಧಿಗಳು
ಸವರ್ಣದೀರ್ಘ ಸಂಧಿ
ಸವರ್ಣ ಸ್ವರಗಳು ಒಂದರ ಮುಂದೆ ಒಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಅದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘ ಸಂಧಿಯೆಂದು ಹೆಸರು. ಪೂರ್ವಪದ+ಉತ್ತರಪದ=ಸವರ್ಣದೀರ್ಘ ಸಂಧಿಪದ. (ಅ+ಅ=ಆ, ಆ+ಅ=ಆ, ಅ+ಆ=ಆ, ಆ+ಆ=ಆ; ಇ+ಇ=ಈ, ಇ+ಈ=ಈ, ಈ+ಈ=ಈ; ಉ+ಉ=ಊ, ಊ+ಉ=ಊ,) ಉದಾ : ವಿದ್ಯಾಭ್ಯಾಸ= ವಿದ್ಯಾ+ಅಭ್ಯಾಸ=ವಿದ್ಯಾ+ಅ+ಭ್ಯಾಸ=(ಆ+ಅ). ಇಲ್ಲಿ ‘ಆ’ ಸ್ವರದ ಮುಂದೆ ‘ಅ’ ಎಂಬ ಸ್ವರ ಬಂದಿದೆ. ಇವೆರಡೂ ಸ್ವರಗಳೂ ಸವರ್ಣ ಸ್ವರಗಳು’. ಅಂದರೆ ಸಮಾನ ಸ್ಥಾನದಲ್ಲಿ ಹುಟ್ಟಿದವುಗಳು. ಒಂದು ದೀರ್ಘ, ಮತ್ತೊಂದು ಹೃಸ್ವ ಅಷ್ಟೆ. ಇವು ಹೀಗೆ ಒಂದರ ಮುಂದೆ ಒಂದು ಬಂದಾಗ ಅವೆರಡೂ ಹೋಗಿ ಅವುಗಳ ಸ್ಥಾನದಲ್ಲಿ ಅದರದೇ ಒಂದು ದೀರ್ಘಸ್ವರವು ಬರುವುದು. ಹೀಗೆ ಮತ್ತೊಂದು ಸ್ವರ ಬರುವುದು ಆದೇಶವೆಂದು ತಿಳಿದಿದ್ದೇವೆ.
- ದೇವಾಸುರ=ದೇವ+ಅಸುರ – ಅ+ಅ – ‘ಅ’ಕಾರಕ್ಕೆ ‘ಅ’ಕಾರ ಪರವಾಗಿ ‘ಆ’ಕಾರಾದೇಶ.
- ಸುರಾಸುರ=ಸುರ+ಅಸುರ – ಅ+ಅ – ‘ಅ’ಕಾರಕ್ಕೆ ‘ಅ’ಕಾರ ಪರವಾಗಿ ‘ಆ’ಕಾರಾದೇಶ.
- ಮಹಾತ್ಮ=ಮಹಾ+ಆತ್ಮ – ಆ+ಆ – ‘ಆ’ಕಾರಕ್ಕೆ ‘ಆ’ಕಾರ ಪರವಾಗಿ ‘ಆ’ಕಾರಾದೇಶ.
- ಕವೀಂದ್ರ=ಕವಿ+ಇಂದ್ರ – ಇ+ಇ – ‘ಇ’ಕಾರಕ್ಕೆ ‘ಇ’ಕಾರ ಪರವಾಗಿ ‘ಈ’ಕಾರಾದೇಶ.
- ಹರೀಶ್ವರ=ಹರಿ+ಈಶ್ವರ – ಇ+ಈ – ‘ಇ’ಕಾರಕ್ಕೆ ‘ಈ’ಕಾರ ಪರವಾಗಿ ‘ಈ’ಕಾರಾದೇಶ.
- ಗಿರೀಶ=ಗಿರಿ+ಈಶ – ಇ+ಈ – ‘ಇ’ಕಾರಕ್ಕೆ ‘ಈ’ಕಾರ ಪರವಾಗಿ ‘ಈ’ಕಾರಾದೇಶ.
- ಲಕ್ಷ್ಮೀಶ=ಲಕ್ಷ್ಮೀ+ಈಶ – ಈ+ಈ – ‘ಈ’ಕಾರಕ್ಕೆ ‘ಈ’ಕಾರ ಪರವಾಗಿ ‘ಈ’ಕಾರಾದೇಶ.
- ಗುರೂಪದೇಶ=ಗುರು+ಉಪದೇಶ - ಉ+ಉ – ‘ಉ’ಕಾರಕ್ಕೆ ‘ಉ’ಕಾರ ಪರವಾಗಿ‘ಊ’ಕಾರಾದೇಶ.
- ವಧೂಪದೇಶ=ವಧು+ಉಪದೇಶ – ಊ+ಉ – ‘ಊ’ಕಾರಕ್ಕೆ ‘ಉ’ಕಾರ ಪರವಾಗಿ ‘ಊ’ಕಾರಾದೇಶ.
ವಿದ್ಯಭ್ಯಾಸ=ವಿದ್ಯ+ಅಭ್ಯಾಸ
ಗುಣ ಸಂಧಿ
ಅ ಆ’ಕಾರಗಳಿಗೆ ‘ಇ ಈ’ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಏ’ಕಾರವೂ, ‘ಉ ಊ’ಕಾರಗಳು ಪರವಾದರೆ ಅವೆಡರ ಸ್ಥಾನದಲ್ಲಿ ‘ಓ’ಕಾರವೂ, ‘ಋ’ಕಾರ ಪರವಾದರೆ ಅವೆರಡರ ಸ್ಥಾನದಲ್ಲಿ ‘ಅರ್’ಕಾರವೂ ಆದೇಶಗಳಾಗಿ ಬಂದರೆ ‘ಗುಣಸಂಧಿ’ ಯೆಂದು ಕರೆಯುವರು. ಪೂರ್ವಪದ+ಉತ್ತರಪದ = ಗುಣಸಂಧಿ ಪದ. (ಅ+ಇ=ಏ, ಆ+ಇ=ಏ, ಆ+ಈ=ಏ; ಅ+ಉ=ಓ, ಅ+ಊ=ಓ; ಅ+ಋ=ಅರ್, ಆ+ಋ=ಅರ್)
- ಸುರೇಂದ್ರ=ಸುರ+ಇಂದ್ರ – ಅ+ಇ – ‘ಅ’ಕಾರಕ್ಕೆ ‘ಇ’ಕಾರ ಪರವಾಗಿ ‘ಏ’ಕಾರಾದೇಶ.
- ಧರೇಂದ್ರ=ಧರಾ+ಇಂದ್ರ – ಆ+ಇ – ‘ಆ’ಕಾರಕ್ಕೆ ‘ಇ’ಕಾರ ಪರವಾಗಿ ‘ಏ’ಕಾರಾದೇಶ.
- ಮಹೇಶ್ವರ=ಮಹಾ+ಈಶ್ವರ – ಆ+ಈ – ‘ಆ’ಕಾರಕ್ಕೆ ‘ಈ’ಕಾರ ಪರವಾಗಿ ‘ಏ’ಕಾರಾದೇಶ.
- ಚಂದ್ರೋದಯ=ಚಂದ್ರ+ಉದಯ – ಅ+ಉ – ‘ಅ’ಕಾರಕ್ಕೆ ‘ಉ’ಕಾರ ಪರವಾಗಿ ‘ಓ’ಕಾರಾದೇಶ.
- ಏಕೋನ=ಏಕ+ಊನ – ಅ+ಊ – ‘ಅ’ಕಾರಕ್ಕೆ ‘ಊ’ಕಾರ ಪರವಾಗಿ ‘ಓ’ಕಾರಾದೇಶ.
- ದೇವರ್ಷಿ=ದೇವ+ಋಷಿ – ಅ+ಋ – ‘ಅ’ಕಾರಕ್ಕೆ ‘ಋ’ಕಾರ ಪರವಾಗಿ ‘ಅರ್’ಕಾರಾದೇಶ.
- ಮಹರ್ಷಿ=ಮಹಾ+ಋಷಿ – ಆ+ಋ – ‘ಆ’ಕಾರಕ್ಕೆ ‘ಋ’ಕಾರ ಪರವಾಗಿ ‘ಅರ್’ಕಾರಾದೇಶ.
ಎಲ್ಲಾ ಉದಾಹರಣೆಗಳಲ್ಲೂ ಪೂರ್ವಪದದ ಕೊನೆಯ ಸ್ವರವು ‘ಅ’ ಅಥವಾ ‘ಆ’ ಆಗಿವೆ. ಉತ್ತರಪದದಲ್ಲಿ ಇ, ಈ, ಉ, ಊ ಇತ್ಯಾದಿ ಸ್ವರಗಳಿವೆ. ಇ ಅಥವಾ ಈ ಪರವಾದಗಳೆಲ್ಲಾ ‘ಏ’ಕಾರ ಬಂದಿದೆ. ‘ಉ’ ಪರವಾದಲ್ಲಿ ‘ಓ’ಕಾರ ಬಂದಿದೆ. ‘ಋ’ ಪರವಾದಲ್ಲಿ ‘ಅರ್’ಕಾರವು ಬಂದಿದೆ. ಅಂದರೆ ಪೂರ್ವಪದ ಮತ್ತು ಉತ್ತರಪದ ಎರಡೂ ಸ್ವರಗಳು ಹೋಗಿ ಅವುಗಳ ಸ್ಥಾನದಲ್ಲಿ ‘ಏ’ ‘ಓ’ ‘ಅರ್’ ಗಳು ಆದೇಶವಾಗಿ ಬಂದಿವೆ...
ವೃದ್ಧಿ ಸಂಧಿ
ಅ’ಕಾರಗಳಿಗೆ ‘ಏ ಐ’ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಐ’ಕಾರವೂ, ‘ಓ ಔ’ಕಾರಗಳು ಪರವಾದರೆ ಅವೆಡರ ಸ್ಥಾನದಲ್ಲಿ ‘ಔ’ಕಾರವೂ ಆದೇಶಗಳಾಗಿ ಬಂದರೆ ‘ವೃದ್ಧಿಸಂಧಿ’ ಯೆಂದು ಕರೆಯುವರು. ಪೂರ್ವಪದ+ಉತ್ತರಪದ = ವೃದ್ಧಿಸಂಧಿ ಪದ. (ಅ+ಏ=ಐ, ಅ+ಐ=ಐ; ಅ+ಓ=ಔ; ಆ+ಔ=ಔ)
- ಏಕೈಕ=ಏಕ+ಏಕ=ಏಕ್+ಐಕ – ಅ+ಏ=ಐ – ‘ಅ’ಕಾರಕ್ಕೆ ‘ಏ’ಕಾರ ಪರವಾಗಿ ‘ಐ’ಕಾರಾದೇಶ.
- ಅಷ್ಟೈಶ್ವರ್ಯ=ಅಷ್ಟ+ಐಶ್ವರ್ಯ=ಅಷ್ಟ್+ಐಶ್ವರ್ಯ – ಅ+ಐ=ಐ – ‘ಅ’ಕಾರಕ್ಕೆ ‘ಐ’ಕಾರ ಪರವಾಗಿ ‘ಐ’ಕಾರಾದೇಶ.
- ವನೌಷಧಿ=ವನ+ಓಷಧಿ=ವನ್+ಔಷಧಿ – ಅ+ಓ=ಔ – ‘ಅ’ಕಾರಕ್ಕೆ ‘ಓ’ಕಾರ ಪರವಾಗಿ ‘ಔ’ಕಾರಾದೇಶ.
- ಮಹೌನ್ನತ್ಯ=ಮಹಾ+ಔನ್ನತ್ಯ=ಮಹ್+ಔನ್ನತ್ಯ – ಅ+ಔ=ಔ – ‘ಅ’ಕಾರಕ್ಕೆ ‘ಔ’ಕಾರ ಪರವಾಗಿ ‘ಔ’ಕಾರಾದೇಶ.
- ಲೋಕೈಕವೀರ=ಲೋಕ+ಏಕವೀರ, ಜನೈಕ್ಯ=ಜನ+ಐಕ್ಯ, ವಿದ್ಯೈಶ್ವರ್ಯ=ವಿದ್ಯಾ+ಐಶ್ವರ್ಯ, ಜಲೌಘ=ಜಲ+ಓಘ, ಘನೌದಾರ್ಯ=ಘನ+ಔದಾತ್ಯ, ಮಹೌದಾರ್ಯ=ಮಹಾ+ಔದಾರ್ಯ.
ಪೂರ್ವಪದದ ಕೊನೆಯಲ್ಲಿ ಎಲ್ಲ ಪದಗಳಲ್ಲೂ ‘ಅ’ ಅಥವಾ ‘ಆ’ ಸ್ವರಗಳಿವೆ. ಉತ್ತರಪದದ ಆರಂಭದಲ್ಲಿ ‘ಏ’, ‘ಐ’, ‘ಔ’ಕಾರಗಳು ಪರವಾಗಿವೆ. ‘ಏ’ ಅಥವಾ ‘ಐ’ ಪರವಾದಾಗ ಒಂದು ‘ಐ’ಕಾರವೂ, ‘ಓ’ ಅಥವಾ ‘ಔ’ ಪರವಾದಾಗ ಒಂದು ‘ಔ’ಕಾರವೂ ಆದೇಶಗಳಾಗಿ ಬರುತ್ತವೆ.