ಸಂತ ಲಾರೆನ್ಸ್ ಬೆಸಿಲಿಕಾ

ಕಾರ್ಕಳದ ಸುಪ್ರಸಿದ್ಧ ಕ್ರೈಸ್ತ ಮಂದಿರ

ಸೇಂಟ್ ಲಾರೆನ್ಸ್ ದೇಗುಲ ಅಥವಾ ಸ್ಥಳೀಯವಾಗಿ ಕರೆಯಲ್ಪಡುವ ಅತ್ತೂರು ಚರ್ಚ್ ಭಾರತಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ತೂರು ಹೆಸರಿನ ಹಳ್ಳಿಯಲ್ಲಿರುವ ಒಂದು ಪ್ರಸಿದ್ಧವಾದ ಕ್ರೈಸ್ತರ ಧಾರ್ಮಿಕ ಕೇಂದ್ರವಾಗಿದೆ. ಇದೊಂದು ರೋಮನ್ ಕ್ಯಾಥೋಲಿಕ್ ದೇವಾಲಯ ಆಗಿದೆ. ಈ ದೇವಾಲಯವನ್ನು ೧೭೫೯ ರಲ್ಲಿ ನಿರ್ಮಿಸಲಾಯಿತು. ಭಕ್ತರ ಹರಕೆಯನ್ನ ಈಡೇರಿಸುವ ಈ ಅತ್ತೂರು ಸಂತ ಲಾರೆನ್ಸ್ ಕ್ಷೇತ್ರ, ಸರ್ವಧರ್ಮದ ಸಮ್ಮಿಲನ ಹಾಗೂ ಪವಾಡಕ್ಕೆ ಪ್ರಸಿದ್ಧವಾಗಿದೆ. ಕ್ರಿ.ಶ ೨೭೫ರಲ್ಲಿ ರೋಮ್ ಚಕ್ರವರ್ತಿಯ ಧರ್ಮ ವಿರೋಧಿ ನೀತಿಯಿಂದಾಗಿ ಕ್ರೈಸ್ತ ಧರ್ಮಕ್ಕಾಗಿ ಹುತಾತ್ಮರಾದ ಸಂತ ಲಾರೆನ್ಸರ ಹೆಸರಿನಲ್ಲಿ ಈ ಕ್ರೈಸ್ತ ದೇವಾಲಯವನ್ನು ನಿರ್ಮಿಸಲಾಗಿದೆ[೧]. ಸುಮಾರು ಮೂರು ಶತಮಾನಗಳ ಇತಿಹಾಸವುಳ್ಳ ಅತ್ತೂರು ಸಂತ ಲಾರೆನ್ಸರ ಪುಣ್ಯಕ್ಷೇತ್ರವು ಪಶ್ಚಿಮ ಕರಾವಳಿಯ ಜನತೆಗೆ ಮಾತ್ರವಲ್ಲ, ಕರ್ನಾಟಕ ಮತ್ತು ಭಾರತದಾದ್ಯಂತ ಸುಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದೆ. ಕೇವಲ ಕ್ರೈಸ್ತರು ಮಾತ್ರವಲ್ಲ, ಇತರ ಧರ್ಮದವರಿಗೂ ಇದೊಂದು ವಿಶಿಷ್ಟ ಪುಣ್ಯಕ್ಷೇತ್ರ, ಸಾಮರಸ್ಯದ ಕೇಂದ್ರ ಹಾಗೂ ಪ್ರಾರ್ಥನೆಯ ತಾಣವಾಗಿದೆ. ಅಲ್ಲದೆ, ದಕ್ಷಿಣ ಭಾರತದಲ್ಲಿ ಪುಷ್ಕರಿಣಿ ಇರುವ ಏಕೈಕ ಚರ್ಚ್ ಇದು. ಮಂಗಳೂರಿನಿಂದ ೫೮ ಕಿ.ಮೀ, ಉಡುಪಿಯಿಂದ ೪೧.೮ ಕಿಮಿ, ಬೆಂಗಳೂರಿನಿಂದ ೩೬೬.೨ ಕಿಮಿ ದೂರದಲ್ಲಿದೆ.

St. Lawrence Shrine (Karkala)

ವ್ಯಕ್ತಿ ಪರಿಚಯ ಮತ್ತು ಸ್ಥಳದ ಇತಿಹಾಸ

ಬದಲಾಯಿಸಿ

ಸಂತ ಲಾರೆನ್ಸ್ ಕ್ರಿ.ಶ ೨೨೫ ರ ಡಿಸೆಂಬರ್ ೩೧ ರಂದು ವೇಲೆನ್ಸಿಯಾದಲ್ಲಿ ಜನಿಸಿದನೆಂದು ನಂಬಲಾದ ಒಬ್ಬ ಮಹಾನ್ ಸಂತ[೨]. ತನ್ನ ಜೀವಿತಾವಧಿಯಲ್ಲಿ ವಿಕಲಚೇತನರು, ರೋಗಿಗಳು, ದೀನದಲಿತರು, ಮಾನಸಿಕವಾಗಿ ನೊಂದವರು, ನಿರಾಶ್ರಿತರ ಸೇವೆ ಮಾಡುವುದರಲ್ಲಿಯೇ ನೆಮ್ಮದಿ ಕಂಡುಕೊಂಡಿದ್ದನು. ಆದರೆ ಕ್ರಿ.ಶ ೨೭೫ರಲ್ಲಿ ರೋಮ್ ಚಕ್ರವರ್ತಿಯ ಧರ್ಮ ವಿರೋಧಿ ನೀತಿಯಿಂದಾಗಿ ಸಂತ ಲಾರೆನ್ಸ್ ಹುತಾತ್ಮನಾದನು.

ಈ ಚರ್ಚಿನ ಇತಿಹಾಸ ಸುಮಾರು ೧೭೫೯ಕ್ಕಿಂತಲೂ ಹಿಂದಕ್ಕೆ ಹೋಗುತ್ತದೆ. ಚರ್ಚಿನ ಬಗ್ಗೆ ಅನೇಕ ದಂತಕತೆಗಳು ಇದರೂ ಸಹ ಲಿಖಿತ ದಾಖಲೆಗಳಲ್ಲಿ ಲಭ್ಯವಾಗುವ ಐತಿಹಾಸಿಕ ಮಾಹಿತಿಯು ಈ ರೀತಿ ಇದೆ:

ವಂದನೀಯ ಫಾದರ್ ಫ್ರಾನ್ಸಿಸ್ ಸಾಲ್ವಡೋರ್ ಲೋಬೋ ಹೆಸರಿನ ಧರ್ಮಗುರುಗಳು ೧೭೫೯ ರಿಂದ ೧೭೭೫ರ ತನಕ ಇಲ್ಲಿ ಸೇವೆಸಲ್ಲಿದ್ದರು. ೧೭೮೪ರಲ್ಲಿ ಟಿಪ್ಪುಸುಲ್ತಾನನು ಕರಾವಳಿಯ ಅದರಲ್ಲೂ ಕಾರ್ಕಳದ ಕ್ರೈಸ್ತರನ್ನು ರಾಜಕೀಯ ಕಾರಣಗಳಿಗಾಗಿ ಬಂಧಿಸಿ ಶ್ರೀರಂಗಪಟ್ಟಣದಲ್ಲಿ ಬಂಧನದಲ್ಲಿ ಇಡುತ್ತಾನೆ ಮತ್ತು ಅಲ್ಲಿದ್ದ ಹಳೆಯ ಚರ್ಚನ್ನು ಧ್ವಂಸ ಮಾಡುತ್ತಾನೆ[೩]. ಧ್ವಂಸ ಮಾಡಲಾದ ಚರ್ಚು, ಈಗಿರುವ ಚರ್ಚಿಗಿಂತ ೭ ಕಿಮಿ ದೂರದಲ್ಲಿ ಇತ್ತು. ೧೭೯೯ರಲ್ಲಿ ಟಿಪ್ಪು ಸುಲ್ತಾನನ ಮರಣ ನಂತರ ಬಂಧಮುಕ್ತಗೊಂಡು ಬದುಕುಳಿದ ಕ್ರೈಸ್ತರು ಅತ್ತೂರಿನಿಂದ ನಕ್ರೆಗೆ ಹೋಗುವ ದಾರಿಯ ಪಕ್ಕದಲ್ಲಿ ಮುಳಿಹುಲ್ಲಿನ ಛಾವಣಿಯ ಚರ್ಚ್ ಸ್ಥಾಪಿಸಿದರು. ಈ ಚರ್ಚ್ ಹಿಂದಿನ ಚರ್ಚ್ ಇದ್ದ ಜಾಗಕ್ಕಿಂತ ೪ ಕಿಮಿಯಷ್ಟು ದೂರದಲ್ಲಿತ್ತು. ೧೮೦೧ರಲ್ಲಿ ಗೋವಾದ ಪಾದ್ರಿಯ ನೇತ್ರತ್ವದಲ್ಲಿ ಈ ಚರ್ಚನ್ನು ಜೀರ್ಣೋದ್ಧಾರ ಮಾಡಲಾಯಿತು. ಈ ಮುಳಿಹುಲ್ಲಿನ ಛಾವಣಿಯ ಚರ್ಚು, ಪ್ರಸ್ತುತ ಈಗ ಇರುವ ಚರ್ಚಿನ ಹಿಂಭಾಗದಲ್ಲಿ ಇತ್ತು. ಸಧ್ಯ ಆ ಜಾಗದಲ್ಲಿ ಈಗ ಹೂವಿನ ಉದ್ಯಾನವನವನ್ನು ನಿರ್ಮಿಸಲಾಗಿದೆ.

ಮುಳಿಹುಲ್ಲಿನ ಇಗರ್ಜಿ ಶಿಥಿಲಗೊಂಡಾಗ ಆಗಿನ ಗೋವಾ ಮೂಲದ ಧರ್ಮಗುರುಗಳು ತಮ್ಮ ಕೆಲವು ಅನುಯಾಯಿಗಳೊಂದಿಗೆ ಪ್ರಸ್ತುತ ಪವಾಡಮೂರ್ತಿ ಎನಿಸಿರುವ ಸಂತಲಾರೆನ್ಸರ ಕಾಷ್ಠಶಿಲ್ಪದ ವಿಗ್ರಹದೊಂದಿಗೆ ಹೊಸ ಚರ್ಚ್ ಕಟ್ಟಲು ಸೂಕ್ತ ಸ್ಥಳವನ್ನು ಅರಸಿ ಹೊರಡುತ್ತಾರೆ. ಪರ್ಪಲೆ ಗುಡ್ಡೆ ಹತ್ತಿ ಇಳಿಯುತ್ತ ದಾಹ ಮತ್ತು ನಿಶ್ಶಕ್ತಿಯನ್ನು ತಡೆಯಲಾಗದೆ ವಿಗ್ರಹವನನ್ನು ನೆಲದಲ್ಲಿಟ್ಟು, ಪಕ್ಕದಲ್ಲಿ ಹರಿಯುತ್ತಿದ್ದ ನೀರಿನ ಒರತೆಯಿಂದ ಬಾಯಾರಿಕೆ ತಣಿಸಿ ವಿರಮಿಸುತ್ತಾರೆ. ಪಯಣ ಮುಂದುವರಿಸಲೆಂದು ವಿಗ್ರಹವನ್ನು ಎತ್ತಿದಾಗ ಅದು ಒಂದಿಷ್ಟು ಅಲುಗಾಡುವುದಿಲ್ಲ ! ಆಶ್ಚರ್ಯಚಕಿತರಾದ ಧರ್ಮಗುರುಗಳು ಭಯಭಕ್ತಿಯಿಂದ 'ಸಂತ ಲಾರೆನ್ಸರೇ ತಾವು ಇಲ್ಲಿಯೇ ತಂಗಲು ಬಯಸುವುದಾದರೆ ನಾವು ನಿಮಗೆ ಇಲ್ಲಿಯೇ ಚರ್ಚ್ ಕಟ್ಟುವೆವು’ ಎಂದು ಪ್ರಾರ್ಥಿಸುತ್ತಾರೆ. ಆಗ ಲಾರೆನ್ಸರ ಕಾಷ್ಠಶಿಲ್ಪದ ವಿಗ್ರಹವು ಅನಾಯಾಸವಾಗಿ ಮೇಲಕ್ಕೆ ಬರುತ್ತದೆ.

ಟಿಪ್ಪುವಿನಿಂದ ಬಂಧನಕ್ಕೊಳಗಾಗಿದ್ದ ಕ್ರೈಸ್ತರು, ಆತನ ಮರಣಾನಂತರ ಬಂಧಮುಕ್ತರಾದ ಶತಮಾನ ಪೊರೈಸಿದ ನೆನಪಿಗಾಗಿ 1900ರಲ್ಲಿ ಹೊಸ (ಈಗಿರುವ ಹಳೆ ಚರ್ಚ್)ಚರ್ಚ್ ಕಟ್ಟಲಾಗಿತ್ತು. ದ್ವಿಶತಮಾನೋತ್ಸವದ ನೆನಪಿಗಾಗಿ ೨೦೦೦ ಇಸವಿಯಲ್ಲಿ ಭವ್ಯ ಕ್ಷೇತ್ರವನ್ನು ಮತ್ತೆ ಜೀರ್ಣೋದ್ಧಾರ ಮಾಡಲಾಯಿತು.

ಸ್ಥಳೀಯ ನಂಬಿಕೆ ಮತ್ತು ವಿಶ್ವಾಸ

ಬದಲಾಯಿಸಿ

ಈ ಚರ್ಚ್ ದೇವರೊಂದಿಗೆ ಮಧ್ಯಸ್ಥಿಕೆ ವಹಿಸುವ ಶಕ್ತಿಯನ್ನು ಹೊಂದಿದೆ ಎಂದು ವ್ಯಾಪಕವಾಗಿ ನಂಬುತ್ತಾರೆ. ಇಲ್ಲಿ ವಿಶ್ವಾಸದಿಂದ ಪ್ರಾರ್ಥಿಸಿದ ಯಾರೊಬ್ಬರೂ ನಿರಾಶರಾಗಿ ಬರಿಗೈಯಲ್ಲಿ ಹಿಂದಿರುಗಿಲ್ಲ. ಭಗವಂತನಿಂದ ತಮ್ಮ ಮನದಾಶೆಯನ್ನು ಪೂರೈಸಿಕೊಂಡ ಪ್ರತಿಯೊಬ್ಬರೂ ಅವನನ್ನು ಸ್ತುತಿಸಲು ಮತ್ತೆ ಮತ್ತೆ ಹಿಂದಿರುಗಿ ಬರುತ್ತಿರುವುದೇ ಈ ಪುಣ್ಯಕ್ಷೇತ್ರದ ವೈಶಿಷ್ಟ್ಯ. ಇದು ಜಿಲ್ಲೆಯ ನಿವಾಸಿಗಳನ್ನು ಮಾತ್ರವಲ್ಲದೆ ಭಾರತದ ಎಲ್ಲಾ ಭಾಗಗಳಿಂದ ಬಂದ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ.

ಚರ್ಚಿನ ವ್ಯಾಪ್ತಿ

ಬದಲಾಯಿಸಿ

ಸಂತ ಲಾರೆನ್ಸರ ಚರ್ಚಿನ ಸಮಗ್ರ ಚಟುವಟಿಕೆಗಳು ಉಡುಪಿ ಜಿಲ್ಲಾ ಡಯಾಸಿಸ್‍ನ ಅಧ್ಯಕ್ಷರ ನಿಯಂತ್ರಣದಲ್ಲಿದೆ.[೪] ದೈನಂದಿನ ಆರಾಧನೆ, ಚರ್ಚಿನ ಅಧ್ಯಕ್ಷರ ನೇಮಕಾತಿ, ದೈನಂದಿನ ಆಡಳಿತ, ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವ ಸಿದ್ಢತೆಯ ಬಗ್ಗೆಯೂ ಡಯಾಸಿಸ್‍ನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತದೆ. ಪ್ರಸ್ತುತ ಸಂತ ಲಾರೆನ್ಸರ ಚರ್ಚಿನ ವ್ಯಾಪ್ತಿಯಲ್ಲಿ ೩೮೨ರಷ್ಟು (ಸುಮಾರು ೧೭೦೮ ಸದಸ್ಯರು) ಕುಟುಂಬಗಳಿವೆ.[೫]

ಅಭಿವೃದ್ಧಿ ಕಾರ್ಯಗಳು

ಬದಲಾಯಿಸಿ
 
St Lawrance church pond

ಕಳೆದ ೩೦ ವರ್ಷಗಳಲ್ಲಿ ಯಾತ್ರಿಕರ ಹರಿವು ಅನೇಕ ಪಟ್ಟು ಹೆಚ್ಚಾದ ಕಾರಣ, ಚರ್ಚಿನ ಮತ್ತು ಚರ್ಚಿಗೆ ಸಂಬಂಧಿಸಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ೧೯೭೫ರಲ್ಲಿ ಪಾದ್ರಿ ರೆವ್. ಫ್ರೆಡೆರಿಕ್ ಪಿ.ಎಸ್. ಮೋನಿಜ್, ಪ್ರಸ್ತುತ ಚರ್ಚಿನ ಉಗ್ರಾಣದ ಪಕ್ಕದಲ್ಲಿ ಒಂದು ಪುಟ್ಟ ಗುಡಿಯನ್ನು ಕಟ್ಟಿಸಿದರು. ಅದರಲ್ಲಿ ಸಂತ ಲಾರೆನ್ಸರ ಪವಾಡ ಮೂರ್ತಿ ಎಂದು ನಂಬಲಾಗುವ ಬಿಂಬವನ್ನು ಇರಿಸಲಾಗಿದೆ. ೧೯೯೩ರಲ್ಲಿ ರೆವೆರೆಂಡ್ ಫಾದರ್ ಜೊಶುವ ಫೆರ್ನಾಂಡಿಸ್ ಇಲ್ಲಿಗೆ ಪಾದ್ರಿಯಾಗಿ ಬಂದರು. 1994 ರಲ್ಲಿ ಅವರು ಚರ್ಚ್‌ನ ಪೂರ್ವ ಭಾಗದಲ್ಲಿ, ಚರ್ಚ್ ಮತ್ತು ಬೆಟ್ಟದ ನಡುವಿನ ಕಿರಿದಾದ ಜಾಗವನ್ನು ವಿಸ್ತರಿಸುವ ಕೆಲಸವನ್ನು ಪ್ರಾರಂಭಿಸಿದರು. ಆದರೆ ಮಳೆಗಾಲದಲ್ಲಿ ಕುಸಿತದ ಕಾರಣದಿಂದಾಗಿ, ಬೆಟ್ಟದ ಒಂದು ಭಾಗವು ಸಿಮೆಂಟ್ ಶೀಟ್ ಪೋರ್ಟಿಕೊದ ಮೇಲೆ ಜಾರಿಬಿದ್ದು ಸಿಮೆಂಟ್ ಶೀಟ್ ಪೋರ್ಟಿಕೊ ನಾಶವಾಯಿತು. ಪೂರ್ವ ಭಾಗದ ನೆಲವು ಬೆಟ್ಟದ ಮಣ್ಣಿನಿಂದ ತುಂಬಿ ಹೋಗಿತ್ತು. ಸರ್ಕಾರ ಮತ್ತು ಸಾರ್ವಜನಿಕರ ಸಹಾಯದಿಂದ ಈ ಮಣ್ಣನ್ನು ತೆರವುಗೊಳಿಸಿ ಶಾಲಾ ಮೈದಾನವನ್ನು ವಿಸ್ತರಿಸಲು ಬಳಸಲಾಯಿತು.[೬]

1997 ರಲ್ಲಿ ವಿವಿಧ ಪ್ರದೇಶಗಳ ಧಾರ್ಮಿಕ ಕಲೆಗಳನ್ನು ಪ್ರತಿನಿಧಿಸುವ, ನೂರು ಅಡಿ ಎತ್ತರದ ಗೋಪುರವೊಂದನ್ನು ನಿರ್ಮಿಸಲಾಯಿತು. ೧೯೯೮ರಲ್ಲಿ ಚರ್ಚ್ ಪಕ್ಕದ ಪುಷ್ಕರಿಣಿಯನ್ನು ಆಧುನಿಕ ಭಾರತೀಯ ವಾಸ್ತುಶಿಲ್ಪದ ಶೈಲಿಗೆ ಅನುಗುಣವಾಗಿ ನವೀಕರಿಸಲಾಯಿತು.

ಇನ್ನು, ಚರ್ಚಿನ ಸೌಂದರ್ಯವನ್ನು ಹೆಚ್ಚಿಸಲೋಸುಗ, ಗೋಪುರಕ್ಕೆ ಅನುಗುಣವಾಗಿ ಚರ್ಚ್‌ನ ಮುಂಭಾಗದ ಅವಳಿ ದ್ವಾರಗಳನ್ನು 1999 ರಲ್ಲಿ ನಿರ್ಮಿಸಲಾಯಿತು. ಪ್ರತಿವರ್ಷ ನಡೆಯುವ ಜಾತ್ರೆಯ ಸಂದರ್ಭದಲ್ಲಿನ ಜನಜಂಗುಳಿಯನ್ನು ನಿಯಂತ್ರಿಸಲು ಚರ್ಚಿನ ಮುಂಭಾಗಕ್ಕೆ ಹೊಂದಿಕೊಂಡಂತೆ ಮತ್ತೊಂದು ಕಟ್ಟಡವನ್ನು ನಿರ್ಮಿಸಲಾಯಿತು. ಮಂಗಳೂರಿನ ಬಿಷಪ್ ಡಾ. ಅಲೋಷಿಯಸ್ ಪಾವ್ಲ್ ಡಿಸೋಜ ಅವರು ಇದನ್ನು ೨೧ ಜನವರಿ ೨೦೦೧ರಂದು ಉದ್ಘಾಟಿಸಿದರು. ರೆವೆರೆಂಡ್ ಫಾದರ್ ಜೊಶುವ ಫೆರ್ನಾಂಡಿಸ್ ನಂತರ ರೆವೆರೆಂಡ್ ಫಾದರ್ ಫ್ರಾನ್ಸಿಸ್ ಕಾರ್ನೆಲಿಯೊ 10 ಜೂನ್ 2001 ರಂದು ಚರ್ಚಿನ ಪೂಜಾ ಅಧಿಕಾರವನ್ನು ವಹಿಸಿಕೊಂಡರು. ಇವರ ಅಧಿಕಾರಾವಧಿಯಲ್ಲಿ, ಹತ್ತಿರದ ಧೂಪದಕಟ್ಟೆ ಮತ್ತು ಕಾಬೆಟ್ಟು ಎಂಬಲ್ಲಿ, ಎರಡು ಭವ್ಯ ಮಹದ್ವಾರಗಳನ್ನು ನಿರ್ಮಿಸಲಾಯಿತು. ಯಾತ್ರಾರ್ಥಿಗಳಿಗೆ ಮತ್ತು ವಾರ್ಷಿಕ ಉತ್ಸವದ ಸಂದರ್ಭದಲ್ಲಿ, ಪೂಜೆ ಪುನಸ್ಕಾರಗಳಿಗೆ ಸಹಾಯಕವಾಗುವಂತೆ ಬಹುಮಹಡಿ ಕಟ್ಟಡವನ್ನು ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಂಡು, ೨೦೦೩ರಲ್ಲಿ ಪೂರ್ಣಗೊಳಿಸಲಾಯಿತು.

ಫಾದರ್ ಫ್ರಾನ್ಸಿಸ್ ಕಾರ್ನೆಲಿಯೊ ಅವರು ವರ್ಗಾವಣೆಗೊಡ ಮೇಲೆ ಅವರ ಜಾಗಕ್ಕೆ ಫಾದರ್ ಅರ್ಥರ್ ಪಿರೇರಾ ಅವರು ಬಂದರು. ಇವರ ಅವಧಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಊಟದ ಸ್ಥಳವನ್ನು ಕೆಡವಿ, ವಿಶಾಲವಾದ ಸುಂದರವಾದ ಸಭಾಂಗಣವನ್ನು ಕಟ್ಟಲಾಯಿತು. ಇಲ್ಲಿಗೆ ಭೇಟಿ ಕೊಡುವ ಭಕ್ತರಿಗೆ ಪ್ರತೀ ಗುರುವಾರ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಪಾದರಿಗಳು ಮತ್ತು ಅವರ ಕಾಲಾವಧಿ

ಬದಲಾಯಿಸಿ

ಲಭ್ಯವಿರುವ ದಾಖಲೆಗಳ ಪ್ರಕಾರ ಈ ಕೆಳಗಿನವರು ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ್ದಾರೆ ಮತ್ತು ಈ ದೇವಾಲಯದ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದಾರೆ.[೭]

ಸಂಖ್ಯೆ ಹೆಸರು ಸೇವಾ ಅವಧಿ
ಫಾದರ್ ಫ್ರಾನ್ಸಿಸ್ ಸಾಲ್ವಡೋರ್ ಲೋಬೋ ೧೭೫೯
ಫಾದರ್ ಸೆಬಾಸ್ಟಿಯೋ ಎಮ್. ಡೆ ಕ್ರಾಸ್ತೊ ೧೭೭೫
ಫಾದರ್ ಕುಸ್ಟೋಡಿಯೋ ಸಿ ನಝ್ರ ೧೭೭೭
ಫಾದರ್ ಅಲೆಕ್ಸಿಯೋ ರೋಡ್ರಿಗಝ್ ೧೭೮೧ರಿಂದ ೧೭೮೬

೧೭೮೬ರಿಂದ ೧೮೦೧ರ ಅವಧಿಯಲ್ಲಿನ ಯಾವುದೇ ಲಿಖಿತ ದಾಖಲೆ ಲಭ್ಯವಿಲ್ಲ. ಪ್ರಾಯಶಃ ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ನಡೆದ ದೌರ್ಜನ್ಯದಿಂದಾಗಿ ಜನರ ಸೇವೆಗಾಗಿ ಯಾವುದೇ ಅರ್ಚಕರನ್ನು ನೇಮಿಸಲಾಗಿಲ್ಲ.

ಫಾ. ವಿ. ರೊಡ್ರಿಗಸ್ ೧೮೦೧
ಫಾ. ಸಿ. ಸಿಲ್ವಾ ೧೮೦೮
ಫಾ. ಎ.ಎಸ್. ಡಿ. ವೆರಿ ಟಕೋ ಸಿಲ್ವಾ -
ಫಾ. ಸೆರಾವೋ ೧೮೧೮
ಫಾ. ಸಿ. ಫುರ್ಟಾಡೋ ೧೮೨೩
೧೦ ಫಾ. ಪಿ. ಜೆ. ರೆಬೆರೋ ೧೮೩೦
೧೧ ಫಾ. ಪಿ. ನೊರೊನ್ಹಾ ೧೮೩೨
೧೨ ಫಾ. ಎಚ್. ಆರ್. ಸೋಜಾ ೧೮೩೪
೧೩ ಫಾ. ಸೆರಿಯೊ ೧೮೪೫
೧೪ ಫಾ. ಲಾರೆನ್ಸ್ ಫರ್ನಾಂಡಿಸ್ -
೧೫ ಫಾ. ಜೋಸೆಫ್ ಮೈಕೆಲ್ ರೆಬೆಲ್ಲೊ ೧೮೫೬-೧೮೫೮
೧೬ ಫಾ. ಅಗಸ್ಟೈನ್ ಡೋಸ್ ಜಾಕೋಬ್ಸ್ ಡೋರಿಸ್ ಗೊನ್ಸಾಲ್ವಿಸ್ ೧೮೫೫-೧೮೬೮
೧೭ ಫಾ. ಜಾನ್ ಕ್ರಾಸ್ ೧೮೬೮-೧೮೭೦
೧೮ ಫಾ. ಎ. ಫೆರ್ನಾಂಡಿಸ್ ೧೮೭೦-೧೮೮೧
೧೯ ಫಾ. ಫ್ರಾಂಕ್ ಎಸ್ ಪಿರೇರಾ ೧೮೮೧-೧೯೦೪
೨೦ ಫಾ. ಜಾಕೋಬ್ ಸಿಕ್ವೇರಾ ೧೯೦೪-೧೯೧೪
೨೧ ಫಾ. ಆಲ್ಫಾನ್ಸ್ ಮಾರಿ ಲಿಗೊರಿ ವಾಝ್ ೧೯೧೪-೧೯೨೨
೨೨ ಫಾ. ಸಾಲ್ವಡೋರ್ ಡಿಸೋಜ ೧೯೨೨-೧೯೪೮
೨೩ ಫಾ. ಎ. ಜೆ. ಡಿಸಿಲ್ವಾ ೧೯೪೮-೧೯೫೨
೨೪ ಫಾ. ಪ್ಯಾಸ್ಕಲ್ ಲೋಬೊ ೧೯೫೨-೧೯೫೩
೨೫ ಫಾ. ಫ್ರಾನ್ಸಿಸ್ ಡಿಸೋಜ ೧೯೫೩-೧೯೫೭
೨೬ ಫಾ. ವಿಲಿಯಂ ಲೂಯಿಸ್ ೧೯೫೭-೧೯೫೯
೨೭ ಫಾ. ವಲೇರಿಯನ್ ಬಿ ಕೊಲಾಸೋ ೧೯೫೯-೧೯೭೦
೨೮ ಫಾ. ಎಫ್.ಪಿ.ಎಸ್. ಮೋನಿಸ್ ೧೯೭೦-೧೯೭೮
೨೯ ಫಾ. ರಾಬರ್ಟ್ .ಝಡ್. ಡಿಸೋಜ ೧೯೭೮-೧೯೮೬
೩೦ ಫಾ. ಜೋಸ್ ಎಮ್. ಮಿನೆಜೆಸ್ ೧೯೮೬-೧೯೯೨
೩೧ ಫಾ. ರಾಬರ್ಟ್ ಕ್ರಾಸ್ತಾ ೧೯೯೨-೧೯೯೩
೩೨ ಫಾ. ಜೊಶುವ ಫೆರ್ನಾಂಡಿಸ್ ೧೯೯೩-೨೦೦೧
೩೩ ಫಾ. ಫ್ರಾನ್ಸಿಸ್ ಕಾರ್ನೆಲಿಯೊ ೨೦೦೧-೨೦೦೬
೩೪ ಆರ್ಥರ್ ಪಿರೇರಾ ೨೦೦೬-೨೦೧೩
೩೫ ಜಾರ್ಜ್ ಡಿಸೋಜಾ ೨೦೧೩-

ವಿಶ್ವಮಾನ್ಯತೆಯೆಡೆಗೆ

ಬದಲಾಯಿಸಿ

ಕಾರ್ಕಳದ ಅತ್ತೂರು ಸಂತ ಲಾರೆನ್ಸರ ಕ್ಷೇತ್ರ. ಇದು ಇತರ ಕ್ಷೇತ್ರಗಳಿಗಿಂತ ಭಿನ್ನ. ಇಲ್ಲಿ ಸ್ವಧರ್ಮಿಯರಿಗಿಂತ, ಅನ್ಯ ಧರ್ಮಿಯರೇ ಹೆಚ್ಚಾಗಿ ಬರುತ್ತಾರೆ. ಸಂತ ಲಾರೆನ್ಸರಲ್ಲಿ ತಮ್ಮ ಹರಕೆಯನ್ನ ಇಡುತ್ತಾರೆ. ಭಕ್ತರ ಹರಕೆಯನ್ನ ಈಡೇರಿಸುವ ಈ ಅತ್ತೂರು ಸಂತ ಲಾರೆನ್ಸ್ ಕ್ಷೇತ್ರ ಸರ್ವಧರ್ಮದ ಸಮ್ಮಿಲನದ ಜೊತೆಗೇ ಪವಾಡಗಳಿಗೆ ಸಹ ಪ್ರಸಿದ್ಧಿ ಪಡೆದಿದೆ. ಅಗಸ್ಟ್ ೧ ೨೦೧೬ರಂದು, ಕ್ಯಾಥೋಲಿಕ್ ಪೋಪ್ ಆಗಿರುವ ಪೋಪ್ ಪ್ರಾನ್ಸಿಸ್ ಅವರು ಈ ಕ್ಷೇತ್ರವನ್ನು ಮೈನರ್ ಬಸಿಲಿಕಾ ಎಂದು ಘೋಷಿಸಿದರು.[೮] ಮೈನರ್ ಬಸಿಲಿಕಾ ಎಂದರೆ ಪವಿತ್ರ ಕಿರಿಯ ಮಹಾ ದೇವಾಲಯ ಎಂದರ್ಥ. ಬೆಂಗಳೂರಿನ ಶಿವಾಜಿನಗರದಲ್ಲಿರುವ ಸಂತ ಮೇರಿಯ ಚರ್ಚ್ ಬಿಟ್ಟರೆ ಬಸಿಲಿಕಾ ಮಾನ್ಯತೆ ಪಡೆದ ರಾಜ್ಯದ ಎರಡನೇ ಚರ್ಚ್ ಅತ್ತೂರು ಚರ್ಚ್ ಆಗಿದೆ. ಮಾತ್ರ ಅಲ್ಲ ದೇಶದ ೨೨ ಚರ್ಚ್ ಗಳ ಪೈಕಿ ಅತ್ತೂರು ಚರ್ಚ್ ಒಂದಾಗಿರುವುದು ಕ್ಷೇತ್ರಕ್ಕೆ ಸಂದಿರುವ ವಿಶ್ವ ಮಾನ್ಯತೆ ಇದಾಗಿದೆ.

ಒಂದು ಚ‍‍ರ್ಚ್, ಬೆಸಿಲಿಕಾ ಅಥವಾ ಪವಿತ್ರ ಕಿರಿಯ ಮಾಹಾದೇವಾಲಯ ಎಂಬ ವಿಶ್ವ ಮಾನ್ಯತೆ ಸಿಗಬೇಕಾದರೆ ಕೆಲವು ಮಾನದಂಡಗಳಿವೆ. ಚರ್ಚ್ ಅತ್ಯಂತ ಕಲಾತ್ಮಕವಾಗಿರಬೇಕು, ದೊಡ್ದದಾದ ಇತಿಹಾಸ ಇರಬೇಕು. ಸಹಸ್ರಾರು ಭಕ್ತರನ್ನು ಆಕರ್ಷಿಸುವ ಪವಾಡ ಕ್ಷೇತ್ರವಾಗಿರಬೇಕು. ಪರಮ ಪವಿತ್ರ ಬಲಿಪೂಜೆ, ಧಾರ್ಮಿಕ ವಿಧಿವಿಧಾನಗಳು ಶಾಸ್ತ್ರೋಕ್ತ ನಡೆಯಬೇಕು ಹೀಗೆ ಹತ್ತು ಹಲವು ಮಾನದಂಡಗಳಿವೆ. ಈ ಎಲ್ಲಾ ಮಾನದಂಡಗಳನ್ನು ಮೀರಿರುವ ಕಾರ್ಕಳದ ಅತ್ತೂರು ಲಾರೆನ್ಸರ ಕ್ಷೇತ್ರಕ್ಕೆ ಈಗ ವಿಶ್ವಮಾನ್ಯತೆ ಸಿಕ್ಕಿದೆ. ೧೭ನೇ ಶತಮಾನ ಅಂದರೆ ೧೭೫೯ ರಿಂದಲೂ ಸಂತ ಲಾರೆನ್ಸರ ಪುಣ್ಯ ಕ್ಷೇತ್ರ ಅನೇಕ ಕಾರಣಗಳಿಂದ ಪ್ರಸಿದ್ದಿ ಹಾಗೂ ಪೌರಾಣಿಕ ಹಿನ್ನಲೆಯನ್ನು ಹೊಂದಿದೆ.


ಉಲ್ಲೇಖಗಳು

ಬದಲಾಯಿಸಿ