ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಂದಾರ್ತಿ

ಮಂದಾರ್ತಿಯು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನಲ್ಲಿರುವ ಬ್ರಹ್ಮಾವರದಿಂದ ೧೨ ಕಿಮೀ ದೂರದಲ್ಲಿದೆ. ಈ ಹೆಸರು ಕನ್ನಡದಿಂದ 'ಮಂದ-ಆರತಿ'ಯಿಂದ ಬಂದಿದೆ 'ಮಂದ-ಆರತಿ' ಅಂದರೆ ಪವಿತ್ರ ಬೆಳಕು.[೧]

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಂದಾರ್ತಿ

ದಂತಕಥೆ ಮತ್ತು ಕಥೆಗಳು ಬದಲಾಯಿಸಿ

ಬಹಳ ಹಿಂದೆ ನಾಗಲೋಕವನ್ನು ಆಳುತ್ತಿದ್ದ ರಾಜ ಶಂಕಚೂಡ. ಇವರಿಗೆ ದೇವರತಿ, ನಾಗರತಿ, ಚಾರುರತಿ, ಮಂದಾರತಿ, ಮತ್ತು ನೀಲರತಿ ಎಂಬ ಐದು ಜನ ಹೆಣ್ಣು ಮಕ್ಕಳಿದ್ದರು. ಒಮ್ಮೆ ಅವರು ಶಿವನ ಮಗನಾದ ಸುಬ್ರಹ್ಮಣ್ಯ ಸ್ವಾಮಿಯನ್ನು ಮದುವೆಯಾಗುವ ಆಕಾಂಕ್ಷೆಯೊಂದಿಗೆ ಕೈಲಾಸಕ್ಕೆ ಹೋದರು. ಈ ಐದು ರಾಜಕುಮಾರಿಯರನ್ನು ನಂದಿ (ಶಿವ ಭಕ್ತ) ದಾರಿಯಲ್ಲಿ ತಡೆದು ನಿಲ್ಲಿಸಿ ಅವರನ್ನು ಹಾವುಗಳಾಗುವಂತೆ ಶಪಿಸಿದರು. ಶಂಕಚೂಡನ ಐದು ಜನ ಹೆಣ್ಣುಮಕ್ಕಳು ಶಾಪಗ್ರಸ್ತರಾದರು. ಕ್ಷಣಮಾತ್ರದಲ್ಲಿ ಅವರು ಹಾವುಗಳಾಗಿ ಮಾರ್ಪಾಡಾಗಿ ಭೂಮಿಗೆ ಬಿದ್ದರು. ಸಹ್ಯಾದ್ರಿ ಘಟ್ಟಗಳಲ್ಲಿ ಅಲೆದಾಡುತ್ತಿದ್ದ ವ್ಯಾಘ್ರಪಾದ ಮಹರ್ಷಿಗಳು ಕಾಡಿನ ದಹನದಲ್ಲಿ ಸಿಕ್ಕಿಬಿದ್ದ ಈ ಐದು ಹಾವುಗಳನ್ನು ನೋಡಿ ತಮ್ಮ ದಿವ್ಯದೃಷ್ಟಿಯಿಂದ ಅವುಗಳ ಬಗ್ಗೆ ಎಲ್ಲವನ್ನೂ ತಿಳಿದಾಗ ಅವರು ಐದು ರಾಜಕುಮಾರಿಯರಿಗೆ ರಾಜಮನೆತನದ ಒಬ್ಬ ವ್ಯಕ್ತಿಯು ಸರಿಯಾದ ಸಮಯದಲ್ಲಿ ತಮ್ಮ ಶಾಪವನ್ನು ತೊಡೆದುಹಾಕುತ್ತಾರೆ ಎಂದು ಹೇಳಿದರು.[೨]

ಈ ಮಧ್ಯೆ ಸಹ್ಯಾದ್ರಿ ಪರ್ವತಗಳಲ್ಲಿ ವೇಷ ಧರಿಸಿ ಅಲೆದಾಡುತ್ತಿದ್ದ ಆವಂತಿಯ ಮಹಾರಾಜ ದೇವವರ್ಮನು ಈ ಐದು ಹಾವುಗಳನ್ನು ನೋಡಿ ಅವುಗಳನ್ನು ಉಳಿಸಲು ನಿರ್ಧರಿಸಿದನು. ಅವನು ಹಾವುಗಳನ್ನು ಒಂದು ತುಂಡು ಬಟ್ಟೆಯಿಂದ ಸುತ್ತಿ ಪಶ್ಚಿಮದ ಕಡೆಗೆ ಪ್ರಯಾಣಿಸಲು ಪ್ರಾರಂಭಿಸಿದನು. ಹಾವುಗಳು ಬಟ್ಟೆಯ ಹೊದಿಕೆಯಿಂದ ಜಾರಿ ಪಕ್ಕದ ಗೆದ್ದಲಿನ ಗುಡ್ಡವನ್ನು ತಲುಪಿದವು.ಅವುಗಳಲ್ಲಿ "ಮಂದಾರತಿ" ಎಂದು ಕರೆಯುವ ಒಂದು ಹಾವು ಕಾಡಿನ ಒಂದು ಭಾಗವನ್ನು ತಲುಪಿತು. ಆ ಸ್ಥಳವು ನಂತರ "ಮಂದಾರ್ತಿ" ಎಂದು ಕರೆಯಲ್ಪಟ್ಟಿತು.

ನಾಗಕನ್ಯೆಯರು ರಾಜ ದೇವವರ್ಮನಿಗೆ ಕನಸಿನಲ್ಲಿ ಕಾಣಿಸಿಕೊಂಡರು. ದೇವವರ್ಮನಿಗೆ ಮಹಾರಾಜ ರಾಜಾದಿತ್ಯನ ಏಕೈಕ ರಾಜಕುಮಾರಿ ಜಲಜಾಕ್ಷಿಯು ಅಪಾಯದಲ್ಲಿದ್ದಾರೆ ಎಂದು ತಿಳಿಯುತ್ತದೆ. ದೇವವರ್ಮನು ತಕ್ಷಣವೇ ರಾಜಕುಮಾರಿಯನ್ನು ಅಪಾಯದಿಂದ ರಕ್ಷಿಸಿದನು.

ಹೇಮಾದ್ರಿಯ ಮಹಾರಾಜ ರಾಜಾದಿತ್ಯನು ಇದರಿಂದ ಬಹಳವಾಗಿ ಸಂತುಷ್ಟನಾಗಿ ತನ್ನ ಮಗಳು ಜಲಜಾಕ್ಷಿಯನ್ನು ದೇವವರ್ಮನಿಗೆ ಮದುವೆ ಮಾಡಿಕೊಟ್ಟು ಹೇಮಾದ್ರಿಯ ರಾಜನಾಗಿ ಪಟ್ಟಾಭಿಷೇಕ ಮಾಡಿದನು.

ಒಮ್ಮೆ ರಾಣಿ ಜಲಜಾಕ್ಷಿಯನ್ನು ಮಹಿಷ ರಾಕ್ಷಸನು ನೋಡಿದನು. ಅವನು ವ್ಯಾಘ್ರಪಾದಮುನಿ ಋಷಿಯ ಮತ್ತು ಥಾಮಸಿಕ ಸ್ವಭಾವದ ಕಿರಾತ ಮಹಿಳೆಯ ಸಂಯೋಗದಿಂದ ಜನಿಸಿದನು. ಕಾಮಪ್ರಚೋದಕನಾದ ಮಹಿಷ ತನ್ನ ದುಷ್ಟ ದೃಷ್ಟಿಯನ್ನು ರಾಣಿಯ ಮೇಲೆ ಹಾಕಿದನು. ಆಕೆಯನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದನು. ರಾಣಿಯು ಅವನ ಇಚ್ಛೆಯನ್ನು ವಿರೋಧಿಸಿದಾಗ ಅವನು ಕೋಪಗೊಂಡನು. ರಾಣಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸಿದನು. ಆದರೆ ಮಹಿಷ ಮಾಡಿದ ಪ್ರಯತ್ನಗಳೆಲ್ಲವೂ ಫಲಿಸಲಿಲ್ಲ. ತೀವ್ರವಾಗಿ ನೊಂದು ದುಃಖಿತಳಾದ ರಾಣಿ ಜಲಜಾಕ್ಷಿಯು ತನ್ನ ಅರಮನೆಗೆ ಹೋಗಿ ತನ್ನ ಪತಿ ದೇವವರ್ಮನಿಗೆ ಕಥೆಯನ್ನು ಹೇಳಿದಳು. ನಂತರ ಇಬ್ಬರೂ ಸುದೇವಮುನಿಯ ಆಶ್ರಮದಲ್ಲಿ ಆಶ್ರಯ ಪಡೆಯಲು ನಿರ್ಧರಿಸಿದರು. ಆಗ ಮಹಿಷನು ರಾಜ ದಂಪತಿಗಳಿಗೆ ಆಶ್ರಯ ನೀಡಿದ್ದಕ್ಕಾಗಿ ಮುನಿಯ ಮೇಲೆ ಕೋಪಗೊಂಡನು ಮತ್ತು ಅವರ ಆಶ್ರಮದ ಮೇಲೆ ಆಕ್ರಮಣ ಮಾಡಲು "ಮಹೋದರ" ಎಂಬ ರಾಕ್ಷಸನನ್ನು ಕಳುಹಿಸಿದನು.

ಋಷಿ ಸುದೇವಮುನಿಯು ಅಲೌಕಿಕ ಶಕ್ತಿಯನ್ನು ಹೊಂದಿದ್ದ ಮಹಾನ್ ತಪಸ್ವಿ. ಅವರು ತಮ್ಮ ಆಶ್ರಮವನ್ನು ಮತ್ತು ರಾಜ ದಂಪತಿಗಳನ್ನು ಮಹೋದರದಿಂದ ರಕ್ಷಿಸಲು ತಾಯಿ ದುರ್ಗೆಯನ್ನು ಪ್ರಾರ್ಥಿಸಿದರು. ಇದ್ದಕ್ಕಿದ್ದಂತೆ ಒಂದು ದೊಡ್ಡ ಗೆದ್ದಲಿನ ಬೆಟ್ಟವು ರಾಕ್ಷಸನ ಮುಂದೆ ಕಾಣಿಸಿಕೊಂಡಿತು ಮತ್ತು ಅವನು ಬಳಸಿದ ಎಲ್ಲಾ ಆಯುಧಗಳನ್ನು ನುಂಗಿತು.

ಮಹಿಷ ಸ್ವತಃ ಮುನಿಯ ವಿರುದ್ಧ ಹೋರಾಡಲು ಪ್ರಾರಂಭಿಸಿದಾಗ ರಾಜ ದಂಪತಿಗಳು ಮಹಾಮಾತೆ ದುರ್ಗೆಯನ್ನು ರಕ್ಷಣೆಗಾಗಿ ಪ್ರಾರ್ಥಿಸಿದರು. ನಂತರ ಅವಳು ತನ್ನ ಎಲ್ಲಾ ಶಕ್ತಿ ಮತ್ತು ತೇಜಸ್ಸಿನಿಂದ ಕಾಣಿಸಿಕೊಂಡಳು. ಎಲ್ಲಾ ರಾಕ್ಷಸರನ್ನು ನಾಶಮಾಡಲು ದೈವಿಕ ಶಕ್ತಿ(ಬೂತಗಣ)ಗಳಾದ ವೀರಭದ್ರ, ಹಾಯ್ಗುಳಿ, ಕಲ್ಲುಕುಟ್ಟಿಗ, ಬೊಬ್ಬರ್ಯಗಳಿಗೆ ಆದೇಶಿಸಿದಳು.

ಅಂತಿಮವಾಗಿ ರಾಕ್ಷಸ ಮಹಿಷನು ಮಹಾಮಾತೆ ದುರ್ಗೆಗೆ ಶರಣಾದನು. ಪೂಜಿಸಿ "ಕೆಂಡ ಸೇವೆ" ಮಾಡುವ ಭಕ್ತರಿಗೆ ಸಾಕಷ್ಟು ಪ್ರತಿಫಲವನ್ನು ನೀಡಬೇಕು ಎಂಬ ವರವನ್ನು ಕೇಳಿದನು. ನಂತರ ಮಹಿಷನು ತನ್ನ ಆತ್ಮವನ್ನು ತಾಯಿಯ ಪಾದದಲ್ಲಿ ಇಟ್ಟನು.

ಋಷಿ ಸುದೇವ ಮತ್ತು ರಾಜ ದಂಪತಿಗಳು ತೀವ್ರ ಭಕ್ತಿಯಿಂದ ದುರ್ಗಾದೇವಿಯನ್ನು ಪ್ರಾರ್ಥಿಸಿದರು. ಆಗ ತಾಯಿ ದುರ್ಗೆಯು ಮಂದಾರ್ತಿಯಲ್ಲಿ ತನ್ನ ಎಲ್ಲಾ ಶಕ್ತಿಯಿಂದ ವನ ದುರ್ಗೆಯಾಗಿ ಕಾಣಿಸಿಕೊಳ್ಳುವ ಭರವಸೆಯೊಂದಿಗೆ ಅವರನ್ನು ಆಶೀರ್ವದಿಸಿದಳು.

ನಂತರ ದೇವವರ್ಮನು ಕನಸಿನಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಮಾರ್ಗದರ್ಶನದಂತೆ ವಾರಾಹಿನದಿಯಲ್ಲಿ ದುರ್ಗೆಯ ವಿಗ್ರಹವನ್ನು ಕಂಡು ಅದನ್ನು ಭಕ್ತಿಯಿಂದ ಪ್ರತಿಷ್ಠಾಪಿಸಿದನು.

ದೇವತೆಯ ಬಗ್ಗೆ ಬದಲಾಯಿಸಿ

ವನ ದುರ್ಗೆಯನ್ನು ಬಾರ್ಕೂರು ರಾಜವಂಶದವರು ಪೂಜಿಸುತ್ತಿದ್ದರು. ಆಗ ರಾಜವಂಶದಲ್ಲಿ ಯಾವುದೇ ಉತ್ಸವಗಳು, ಕಾರ್ಯಗಳು ಮಂದಾರ್ತಿಯ ವನದುರ್ಗೆಯ ಪೂಜೆ ಮಾಡುವ ಮೂಲಕ ಪ್ರಾರಂಭಿಸಲ್ಪಟ್ಟವು. ವನ ದುರ್ಗೆಯಂತೆ ವಿಗ್ರಹವು ಎರಡೂ ಕೈಗಳನ್ನು ಕೆಳಮುಖವಾಗಿ ತೋರಿಸಿದ್ದು ಇಂದಿನ ವಿಗ್ರಹಕ್ಕಿಂತ ಭಿನ್ನವಾಗಿ ಬಲಗೈಯು ವರದ ಹಸ್ತವನ್ನು ಸೂಚಿಸುತ್ತದೆ.

ದೇವಸ್ಥಾನದ ಹಿನ್ನಲೆ ಬದಲಾಯಿಸಿ

೧೫೦೦ ವರ್ಷಗಳ ಹಿಂದೆ ಅರ್ಚಕ ಕುಟುಂಬಗಳ ತಲೆಮಾರುಗಳು ವನದುರ್ಗೆಯ ಕ್ಷೇತ್ರದಲ್ಲಿ ಆಗುತ್ತಿದ್ದ ಹಿಂಸಾತ್ಮಕ ತಪ್ಪುಗಳಿಗೆ ಶಿಕ್ಷೆಯಾಗಿ ನಾಶವಾಗುತ್ತಿದ್ದವು ಎಂದು ಹೇಳಲಾಗುತ್ತದೆ. ಈ ವಿದ್ಯಮಾನವು ಪ್ರತಿ ಪೀಳಿಗೆಯಲ್ಲಿ ಸಂಭವಿಸಿದೆ. ಅರ್ಚಕ ಕುಟುಂಬದಲ್ಲಿ ದೇಹವು ಉಳಿದಿಲ್ಲದಿದ್ದಾಗ ಬಾರ್ಕೂರಿನ ರಾಜನು ದೇವಾಲಯದ ಕಾರ್ಯಗಳನ್ನು ಕೈಗೊಳ್ಳಲು ಉಡುಪಿ ಜಿಲ್ಲೆಯ ಅಲೆವೂರಿನ ಒಂದು ತುಳು ಬ್ರಾಹ್ಮಣ ಕುಟುಂಬವನ್ನು ತಂದನು. ಈ ಕುಟುಂಬಗಳನ್ನು ಇಂದು ದೇವಾಲಯದ ಸುತ್ತಮುತ್ತಲ ಪ್ರದೇಶದಲ್ಲಿ ಕಾಣಬಹುದು.

೧೭ ಮತ್ತು ೧೮ ನೇ ಶತಮಾನದ ಕಾಲದಲ್ಲಿ ಅರ್ಚಕರ ಕುಟುಂಬಗಳಲ್ಲಿ ಎಲ್ಲಾ ಮಕ್ಕಳು ಸಾಯುತ್ತಿದ್ದರು ಎಂದು ದಾಖಲೆಗಳಲ್ಲಿ ಕಂಡುಬಂದಿದೆ. ಅವರಲ್ಲಿ ಒಬ್ಬರನ್ನು ಮಾತ್ರ ದಿನನಿತ್ಯದ ದೇವಾಲಯದ ಕೆಲಸಗಳನ್ನು ಮಾಡಲು ಬಿಡುತ್ತಾರೆ. ಈ ವಿದ್ಯಮಾನವು ಅರ್ಚಕ ಕುಟುಂಬದ ತಲೆಮಾರುಗಳಾದ್ಯಂತ ಸಂಭವಿಸಿದೆ. ೧೮ ನೇ ಶತಮಾನದಲ್ಲಿ ವನದುರ್ಗೆಯನ್ನು ದುರ್ಗಾಪರಮೇಶ್ವರಿಯನ್ನಾಗಿ ಪರಿವರ್ತಿಸಲು ಅರ್ಚಕರ ಗುಂಪುಗಳು ಪರಿಹಾರವನ್ನು ಕಂಡುಕೊಂಡರು. ಗುಪ್ತ ಲಿಪಿಗಳೊಂದಿಗೆ ದುರ್ಗಾಪರಮೇಶ್ವರಿಯನ್ನು ಮರಳಿ ವನ ದುರ್ಗೆಯಾಗಿ ಪರಿವರ್ತಿಸಲು ಸಹ ಸಾಧ್ಯವಿದೆ. ಇದು ವಿನಾಶವನ್ನು ಮರಳಿ ತರುತ್ತದೆ. ಈ ಪ್ರಕ್ರಿಯೆಯಲ್ಲಿ ವರದ ಹಸ್ತವನ್ನು ತೋರಿಸುವ ಒಂದು ಕೈಯಿಂದ ಹೊಸ ವಿಗ್ರಹವನ್ನು ಸ್ಥಾಪಿಸಲಾಯಿತು. ಎರಡೂ ಕೈಗಳನ್ನು ಕೆಳಗೆ ತೋರಿಸುತ್ತಿರುವ ಹಳೆಯ ವಿಗ್ರಹವು ವೀರಭದ್ರನ ಮುಂಭಾಗದ ತುಳಸಿಕಟ್ಟೆಯಲ್ಲಿ ಇತ್ತೀಚೆಗೆ ದೇವಾಲಯದ ಟ್ರಸ್ಟ್‌ನಿಂದ ನವೀಕರಣ ಮಾಡುವಾಗ ತೆಗೆದುಹಾಕಲ್ಪಟ್ಟಿತು.

೧೯ ನೇ ಶತಮಾನದ ಆರಂಭದವರೆಗೂ ದೇವಾಲಯವು ಬ್ರಾಹ್ಮಣ ಕುಟುಂಬಗಳ ಅಡಿಯಲ್ಲಿತ್ತು. ಬ್ರಿಟಿಷರ ಆಳ್ವಿಕೆಯಲ್ಲಿ ದೇವಾಲಯಗಳು ಬ್ರಿಟಿಷರಿಗೆ ತಿಳಿಯದಂತೆ ಸಭೆಗಳು ನಡೆಯುತ್ತಿದ್ದ ಜನರು ಸೇರುವ ಸ್ಥಳವಾಗಿತ್ತು. ಇದನ್ನು ತಡೆಗಟ್ಟಲು ಎಲ್ಲಾ ದೇವಾಲಯಗಳನ್ನು ಜಾತ್ಯತೀತವಾಗಿ ಮಾಡಲು ಮತ್ತು ಇತರ ಜಾತಿಗಳ ಜನರನ್ನು ದೇವಾಲಯದ ಟ್ರಸ್ಟ್‌ಗೆ ಸೇರಿಸಲು ಮಸೂದೆಯನ್ನು ಅಂಗೀಕರಿಸಲಾಯಿತು.

ಈ ದೇವಾಲಯವನ್ನು ಇಲ್ಲಿಯವರೆಗೆ ಮೂರು ಬಾರಿ ಜೀರ್ಣೋದ್ಧಾರ ಮಾಡಲಾಗಿದೆ. ಇತ್ತೀಚಿನ ನವೀಕರಣವನ್ನು ೧೯೫೬ ರಲ್ಲಿ ಮಾಡಲಾಯಿತು. ಈ ದಿನಾಂಕವನ್ನು ಇಂದಿಗೂ ದೇವಾಲಯದ ಕಂಬಗಳಲ್ಲಿ ಕಾಣಬಹುದು.

ಉತ್ಸವಗಳು ಬದಲಾಯಿಸಿ

ದೇವಾಲಯದಲ್ಲಿ ಒಂಬತ್ತು ದಿನಗಳಂದು ನವದುರ್ಗೆಯರಿಗೆ ಪೂಜೆ, ಚಂಡಿಹೋಮದೊಂದಿಗೆ ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.[೩] ಮಕರ ಮಾಸದಲ್ಲಿ ಐದು ದಿನಗಳ ಮಹೋತ್ಸವ ನಡೆಯುತ್ತದೆ.[೪] ಕುಂಭ ಮಾಸದ ವಾರ್ಷಿಕ ಜಾತ್ರೆಯು ಪ್ರಮುಖ ಹಬ್ಬವಾಗಿದ್ದು ಹಲವು ಸ್ಥಳಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಸೇವೆಯನ್ನು ನೀಡುತ್ತಾರೆ. ಪ್ರತಿ ಶುಕ್ರವಾರ ನಡೆಯುವ ವೀರಭದ್ರ ಮತ್ತು ಕಲ್ಕುಡನ ದರ್ಶನವು ಭಕ್ತರನ್ನು ಸೆಳೆಯುತ್ತದೆ. ಹಾಯ್ಗುಳಿ ಮತ್ತು ಹುಲಿ ದೇವರ ಮುಂದೆ ಕೆಂಡ ಸೇವೆ (ಬೆಂಕಿಯ ಕೆಂಡದ ಮೇಲೆ ನಡೆಯುವುದು) ವಿವಾಹಿತ ಮಹಿಳೆಯ ಮಾಂಗಲ್ಯ ಭಾಗ್ಯವನ್ನು (ಗಂಡನ ದೀರ್ಘಾಯುಷ್ಯ) ಕಾಪಾಡಲು ಮಾಡುವ ಸೇವೆಯಾಗಿದೆ. ಮಂದಾರ್ತಿ ದೇವಸ್ಥಾನದ ಆವರಣದಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗಳು ಮತ್ತು ವಿಶೇಷವಾಗಿ ಯಕ್ಷಗಾನವು ಈ ಪ್ರದೇಶದ ಶ್ರೀಮಂತ ಸಂಪ್ರದಾಯಗಳನ್ನು ಮುಂದುವರೆಸುವಲ್ಲಿ ಜನರ ಸಮರ್ಪಣೆ ಮತ್ತು ಭಕ್ತಿಯನ್ನು ಪ್ರತಿಬಿಂಬಿಸುತ್ತದೆ.

ಯಕ್ಷಗಾನ ಬದಲಾಯಿಸಿ

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದಲ್ಲಿ ಐದು ಮೇಳಗಳಿವೆ. ಯಕ್ಷಗಾನವು ಉಡುಪಿಜಿಲ್ಲೆಯಾದ್ಯಂತ ವಿವಿಧ ಕಡೆಗಳಲ್ಲಿ ವರ್ಷಪೂರ್ತಿ ಜರಗುತ್ತದೆ. ಯಕ್ಷಗಾನದಲ್ಲಿ ಸಂಪೂರ್ಣ ದೇವಿ ಮಹಾತ್ಮೆ, ಕ್ಷೇತ್ರ ಮಹಾತ್ಮೆ ಎಂಬ ಎರಡು ವಿಧಗಳಿವೆ. ಯಕ್ಷಗಾನವನ್ನು ಜೋಡು(ಎರಡು)ಮೇಳ, ಐದು ಮೇಳಗಳಾಗಿಯೂ ವಿಂಗಡಿಸಲಾಗುತ್ತದೆ. ಯಕ್ಷಗಾನವನ್ನು ಮನೆಯ ಅಕ್ಕ-ಪಕ್ಕದ ಪ್ರದೇಶಗಳಲ್ಲಿ ಅಥವಾ ದೇವಸ್ಥಾನದಲ್ಲಿ ನಡೆಸುವ ಮೂಲಕ ಸೇವೆಯನ್ನು ಪೂರ್ಣಗೊಳಿಸಲಾಗುವುದು.[೫]

ಛಾಯಾಂಕಣ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. https://sanchara.in/mandarthi-temple-history-kannada/
  2. https://udupi.nic.in/en/tourist-place/mandarthi-shree-durgaparameshwari-temple/
  3. https://www.sanatan.org/kannada/90238.html
  4. http://mandarthidurgaparameshwari.com/
  5. https://karnatakatv.net/information-about-mandarthi-temple/