ಶೋಭನಾ
ಶೋಭನಾ (ಮಾರ್ಚ್ ೨೧, ೧೯೬೬) ಭಾರತೀಯ ಸಿನಿಮಾ ಮತ್ತು ನೃತ್ಯ ಕ್ಷೇತ್ರದಲ್ಲಿ ಒಂದು ಪ್ರಮುಖ ಹೆಸರು[೧].
ಶೋಭನಾ | |
---|---|
ಜನನ | ಮಾರ್ಚ್ ೨೧, ೧೯೬೬ ತಿರುವನಂತಪುರಂ, ಕೇರಳ |
ವೃತ್ತಿ | ಭರತನಾಟ್ಯ ಮತ್ತು ಚಲನಚಿತ್ರ ಕಲಾವಿದೆ |
ಚಲನಚಿತ್ರ ಕ್ಷೇತ್ರದಲ್ಲಿ
ಬದಲಾಯಿಸಿಎಂಭತ್ತು, ತೊಂಬತ್ತರ ದಶಕದಲ್ಲಿ ಶೋಭನಾ ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯಲ್ಲಿದ್ದ ನಟಿ. ತಮ್ಮ ಹದಿನೆಂಟನೆಯ ವಯಸ್ಸಿನಲ್ಲೇ ದೊಡ್ಡ ರೀತಿಯಲ್ಲಿ ಚಿತ್ರರಂಗಕ್ಕೆ ಬಂದ ಶೋಭನಾ ಹಲವಾರು ಪ್ರಸಿದ್ಧ ನಿರ್ದೇಶಕರು ಮತ್ತು ಕಲಾವಿದರ ಜೊತೆಯಲ್ಲಿ ನಟಿಸಿದರು. ಆದರೆ ಅವರು ಗ್ಲಾಮರ್ ಪಾತ್ರಗಳಲ್ಲಷ್ಟೇ ಅಲ್ಲದೆ ಅಭಿನಯಕ್ಕೆ ಅವಕಾಶವಿರುವ ಚಿತ್ರಗಳಲ್ಲೂ ಅಭಿನಯಿಸಿ ಎರಡು ಬಾರಿ ರಾಷ್ಟ್ರಪ್ರಶಸ್ತಿ ಪಡೆದವರು. ಶೋಭನಾ ಅವರ ಮತ್ತೊಂದು ಪ್ರಮುಖ ಸಾಧನೆ ಎಂದರೆ, ಕೇವಲ ಸಿನಿಮಾದ ರಂಗು ರಂಗಿನ ಬದುಕು ಮತ್ತು ಯಶಸ್ಸಿನಲ್ಲೇ ಕಳೆದು ಹೋಗದೆ, ತಮ್ಮ ಆಸಕ್ತಿಯಾದ ಭರತನಾಟ್ಯವನ್ನು ಸಿನಿಮಾದಲ್ಲಿ ಉತ್ತುಂಗದಲ್ಲಿದ್ದಾಗಲೂ ಚೇತೋಹಾರಿಯಾಗಿ ಜೊತೆಗಿರಿಸಿಕೊಂಡಿರುವುದು.
ನಮಗೆಲ್ಲಾ ವಿಷ್ಣುವರ್ಧನ್ ಸೌಂಧರ್ಯ ಅಮೋಘವಾಗಿ ನಟಿಸಿ ಗೆಲ್ಲಿಸಿದ ‘ಆಪ್ತಮಿತ್ರ’ ಚಿತ್ರ ಗೊತ್ತಿದೆ. ಈ ಚಿತ್ರದ ಮೂಲ 1994ರಲ್ಲಿ ಫಾಜಿಲ್ ಎಂಬ ನಿರ್ದೇಶಕರು ಚಿತ್ರಿಸಿದ ಮಲಯಾಳಂ ಭಾಷೆಯ ‘ಮಣಿಚಿತ್ರತ್ತಾಳ್’. ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಇಡೀ ಚಿತ್ರರಂಗವೇ ಬೆರಗುಪಡುವಂತೆ ತಮ್ಮ ನಾಟ್ಯ ಮತ್ತು ಅಭಿನಯ ಕಲೆಯನ್ನು ಮೆರೆದವರು ಶೋಭನಾ. ಆ ಅಭಿನಯಕ್ಕಾಗಿ ಅವರು ಅಂದು ತಮ್ಮ ಪ್ರಥಮ ರಾಷ್ಟ್ರಪ್ರಶಸ್ತಿಯನ್ನು ಸ್ವೀಕರಿಸಿದರು. ಇದಲ್ಲದೆ 2003ರ ವರ್ಷದಲ್ಲಿ ನಟಿ ರೇವತಿ ಅವರು ನಿರ್ದೇಶಿಸಿದ ‘ಮಿತ್ರ ಮೈ ಫ್ರೆಂಡ್’ ಚಿತ್ರದಲ್ಲಿನ ಅಭಿನಯಕ್ಕಾಗಿ ಶೋಭನಾ ಎರಡನೆಯ ರಾಷ್ಟ್ರಪ್ರಶಸ್ತಿಯನ್ನು ಸ್ವೀಕರಿಸಿದರು. ಇದರ ಜೊತೆಗೆ ಅವರು ಹಲವಾರು ರಾಜ್ಯ ಪ್ರಶಸ್ತಿ ಮತ್ತು ಫಿಲಂಫೇರ್ ಪ್ರಶಸ್ತಿಗಳನ್ನು ಸಹಾ ಸ್ವೀಕರಿಸಿದ್ದಾರೆ. ಕನ್ನಡದಲ್ಲಿ ವಿಷ್ಣುವರ್ಧನರ ಜೊತೆ ಅವರು ನಟಿಸಿದ ‘ಶಿವಶಂಕರ್’ ಎಂಬ ಚಿತ್ರ ಕೂಡಾ ನೆನಪಿಗೆ ಬರುತ್ತದೆ.
ನೃತ್ಯ ಕ್ಷೇತ್ರದಲ್ಲಿ
ಬದಲಾಯಿಸಿಶೋಭನಾ ಇಂದು ಅಂತರರಾಷ್ಟ್ರೀಯ ಪ್ರಸಿದ್ಧಿ ಪಡೆದ ನೃತ್ಯ ಕಲಾವಿದೆ. ಅವರು ಭಾರತೀಯ ನೃತ್ಯಕಲೆಯಲ್ಲಿ ಪ್ರಸಿದ್ಧಿ ಪಡೆದ ತಿರುವಾಂಕೂರು ಸಹೋದರಿಯರಾದ ಲಲಿತಾ, ಪದ್ಮಿನಿ ಮತ್ತು ರಾಗಿಣಿ ಅವರ ಸಂಬಂಧಿ. ಭರತನಾಟ್ಯ ಕಲೆಯಲ್ಲಿ ಪ್ರಸಿದ್ಧರಾದ ಚಿತ್ರ ವಿಶ್ವೇಶ್ವರನ್ ಅವರ ಶಿಷ್ಯೆಯಾದ ಶೋಭನಾ ಅವರು, ಉಸ್ತಾದ್ ಜಕೀರ್ ಹುಸೇನ್, ವಿಕ್ಕು ವಿನಾಯಕ ರಾಮ್, ಸೋನಾಲ್ ಮಾನ್ ಸಿಂಗ್ ಮತ್ತು ಪದ್ಮಾ ಸುಬ್ರಮಣ್ಯಮ್ ಅವರ ಜೊತೆಯಲ್ಲಿ ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಈ ಎಲ್ಲಾ ಪ್ರಸಿದ್ಧರ ಜೊತೆಯಲ್ಲಿದ್ದರೂ ಶೋಭನಾ ತಮ್ಮದೇ ಆದ ಸ್ವಂತಿಕೆಯನ್ನೂ ರೂಢಿಸಿಕೊಂಡು, ತಾವೇ ಪ್ರತ್ಯೇಕ ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ ತಮ್ಮದೇ ಆದ ನೃತ್ಯ ರೂಪಕಗಳ ನಿರ್ಮಾಣ ನಿರೂಪಣೆಗಳಲ್ಲಿ ತೊಡಗಿದರು.
ಕಲಾರ್ಪಣ
ಬದಲಾಯಿಸಿಶೋಭನಾ 1994ರ ವರ್ಷದಲ್ಲಿ ‘ಕಲಾರ್ಪಣ’ ಎನ್ನುವ ನಾಟ್ಯ ಶಾಲೆಯನ್ನು ತೆರೆದರು. ಸಾಮಾನ್ಯವಾಗಿ ಇಂತಹ ಪ್ರಖ್ಯಾತರ ನೃತ್ಯಶಾಲೆ ಕಲಿಯುವವರೆಲ್ಲಾ ಶ್ರೀಮಂತ ಕುಟುಂಬದವರು ಎಂಬ ಕಲ್ಪನೆ ನಮಗಿರುತ್ತದೆ. ಆದರೆ ಈ ಶಾಲೆಯಲ್ಲಿ ರೂಪಗೊಂಡವರಲ್ಲಿ ಬಹುತೇಕರು ಬಡಕುಟುಂಬದಿಂದ ಬಂದವರು. ಅಲ್ಲಿನ ವಿದ್ಯಾರ್ಥಿಗಳನ್ನು ಕರೆದುಕೊಂಡು ಶೋಭನಾ ಜಗತ್ತಿನಾದ್ಯಂತ ನೃತ್ಯ ಪ್ರದರ್ಶನ ನೀಡಿದ್ದಾರೆ. ಪ್ರತಿಭಾವಂತ ಕಲಾವಿದರನ್ನು ಬೆಳಕಿಗೆ ತರುವುದು, ಅಶಕ್ತ ಕಲಾವಿದರಿಗೆ ನೆರವಾಗುವುದು ಮತ್ತು ಪರಿಸರ ರಕ್ಷಣೆಗೆ ಪ್ರೋತ್ಸಾಹ ಇದು ಅವರ ಶಾಲೆಯ ಮುಖ್ಯ ಗಮನಗಳಾಗಿವೆ. ಇಲ್ಲಿ ಕಲಿತ ಕಲಾವಿದರಿಗೆ ಕೇಂದ್ರ ಸರ್ಕಾರದ ಪ್ರತಿಭಾ ಪೋಷಣೆಯ ನೆರವು, ವಿವಿಧ ಸಂಘ ಸಂಸ್ಥೆಗಳ ಪ್ರೋತ್ಸಾಹ ಮತ್ತು ಉತ್ತಮ ಕಲಾಪ್ರತಿಭೆ ಹೊರಹೊಮ್ಮಿಸಿದ್ದಕ್ಕಾಗಿನ ಪುರಸ್ಕಾರಗಳು ಕೊಡಾ ದೊರಕಿವೆ ಎಂಬುದು ಗಣನೀಯವಾದ ವಿಚಾರವಾಗಿದೆ. ಭಾರತದಲ್ಲಷ್ಟೇ ಅಲ್ಲದೆ ಮಧ್ಯಪ್ರಾಚ್ಯದ ಮಸ್ಕಟ್ ಅಂತಹ ಊರಿನಲ್ಲಿ ಕೂಡಾ ‘ಕಲಾರ್ಪಣ’ ತನ್ನ ಶಾಖೆಯನ್ನು ಹೊಂದಿದೆ.
ಮಾಯಾರಾವಣ
ಬದಲಾಯಿಸಿಶೋಭನಾ ಅವರ ‘ಮಾಯಾ ರಾವಣ’ ಜಾಗತಿಕ ಮತ್ತು ಭಾರತೀಯ ಸಂಗೀತದ ಅಪೂರ್ವ ಮಿಶ್ರಣ ಹೊಂದಿರುವ ದೃಶ್ಯಕಾವ್ಯರೂಪಕ. ಇದು ವ್ಯಾಪಕವಾಗಿ ಭಾರತದಲ್ಲಷ್ಟೇ ಅಲ್ಲದೆ, ವಿಶ್ವದಾದ್ಯಂತ ನೂರಾರು ಪ್ರದರ್ಶನಗಳನ್ನು ಕಂಡಿದೆ. ಸಂಗೀತ ಮತ್ತು ನೃತ್ಯದ ಮೂಲಕ ಪ್ರಕಟಗೊಳ್ಳುವ ಈ ವೈಭವದಲ್ಲಿ ರಾವಣನ ಪಾತ್ರವನ್ನು ಸ್ವಯಂ ಶೋಭನಾ ನಿರ್ವಹಿಸಿದ್ದಾರೆ. ಈ ಕಥಾನಕದ ಇಂಗ್ಲಿಷ್ ವಿವರಣೆಗಾಗಿ ನಾಸಿರುದ್ದೀನ್ ಷಾ, ಜಾಕಿ ಶ್ರಾಫ್, ಮಿಲಿಂದ್ ಸೋಮನ್, ಸುಹಾಸಿನಿ, ರೇವತಿ, ರೋಹಿಣಿ, ಟಬು, ಸಮೀರ್ ಸೋನಿ ಮತ್ತು ಮೋಹನ್‌ಲಾಲ್ ಅಂತಹ ಪ್ರಖ್ಯಾತ ಕಲಾವಿದರು ತಮ್ಮ ಧ್ವನಿಯನ್ನು ಧಾರೆ ಎರೆದಿದ್ದಾರೆ.
‘ಮಾಯಾ ರಾವಣ’ ಮೂಡಿಬಂದ ಹಿನ್ನೆಲೆಯನ್ನು ವಿವರಿಸುವ ಶೋಭನಾ, “ಬಾಲ್ಯದಲ್ಲಿ ರಾಮಾಯಣದ ಬಗ್ಗೆ ಬಹಳ ಕುತೂಹಲ. ಜತೆಗೆ ರಾವಣ ಪಾತ್ರ ಕೂಡ ರಾಮನಿಗಿಂತ ಜಾಸ್ತಿ ಇಷ್ಟವಾಗುತ್ತಿತ್ತು. ನೃತ್ಯದಲ್ಲಿ ರಾಮಾಯಣ ಭಾಗವನ್ನು ಪಡಿಮೂಡಿಸಿದರೆ ಹೇಗೆ ಎನ್ನುವ ಯೋಚನೆಯಿಂದಲೇ ಮುಂದೆ ‘ಮಾಯಾ ರಾವಣ್ ’ ಹುಟ್ಟಿಕೊಂಡಿತು. ಸಿನಿಮಾಲೋಕದ ಬಹಳ ಸ್ನೇಹಿತರು ಈ ಕಲ್ಪನೆಗೆ ನನಗೆ ಜೊತೆ ನೀಡಿದ್ದಾರೆ” ಎನ್ನುತ್ತಾರೆ.
‘ಮಾಯಾ ರಾವಣ’ದಲ್ಲಿ ರಾಮಾಯಣದ ಕತೆಯನ್ನು ತಂದ ಶೋಭನಾ ಈಗ ಶ್ರೀಕೃಷ್ಣನ ಮೋಹಕ ಬದುಕನ್ನು ಕೂಡಾ ತಮ್ಮ ‘ಕೃಷ್ಣ’ ರೂಪಕದ ಮೂಲಕ ಕಲಾಲೋಕದಲ್ಲಿ ಬಿಂಬಿಸುತ್ತಿದ್ದಾರೆ.
ಸಿನಿಮಾ ಮತ್ತು ನೃತ್ಯ ಎರಡು ಕಣ್ಣುಗಳು
ಬದಲಾಯಿಸಿಹೀಗೆಂದ ಮಾತ್ರಕ್ಕೆ ಅವರು ಸಿನಿಮಾದಲ್ಲಿ ಅವಕಾಶವಿಲ್ಲದೆ ನೃತ್ಯಕ್ಕೆ ಬಂದವರೇನೂ ಅಲ್ಲ. ಅವರು ನಟಿಸಿರುವ ಚಿತ್ರಗಳ ಸಂಖ್ಯೆಯೇ ಸುಮಾರು 150ರಷ್ಟು. ಒಮ್ಮೆ “ಚಿತ್ರರಂಗ” ಮತ್ತು “ಸಿನಿಮಾ” ನನಗೆ ಎರಡೂ ಕಣ್ಣುಗಳಾಗಿದ್ದವು. ಈಗ ಚಿತ್ರರಂಗ ಸ್ವಲ್ಪ ಕಡಿಮೆಯಾಗಿ ನಾಟ್ಯಕ್ಕೆ ಸ್ವಲ್ಪ ಸಮಯ ಹೆಚ್ಚಾಗಿದೆ ಎನ್ನುತ್ತಾರೆ.
ಪುರಸ್ಕಾರ
ಬದಲಾಯಿಸಿಈ ಪ್ರತಿಭಾನ್ವಿತರಿಗೆ 2006ರ ವರ್ಷದ ಪದ್ಮಶ್ರೀ ಪುರಸ್ಕಾರವೂ ಸೇರಿದಂತೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.