ಶಿವೇಶ್ವರ ದೊಡ್ಡಮನಿ

ಎಳೆಯ ವಯಸ್ಸಿನಲ್ಲಿಯೇ ಭಾವಗೀತೆ, ತ್ರಿಪದಿಗಳನ್ನು ತಮ್ಮ ಪ್ರಖರ ಬರವಣಿಗೆಯಲ್ಲಿ ಮೂಡಿಸಿದ್ದಲ್ಲದೆ, ಜಾನಪದ ಸಂಗ್ರಹಕಾರರಾಗಿಯೂ ಪ್ರಸಿದ್ಧರಾಗಿದ್ದ ಭಾವಜೀವಿ, ಕವಿ, ಪರೋಪಕಾರವೇ ಪ್ರಮುಖ ಗುಣದ ಶಿವಬಸಪ್ಪನವರು ಹುಟ್ಟಿದ್ದು ಧಾರವಾಡದ ನವಲೂರಿನಲ್ಲಿ. ತಂದೆ ಈಶ್ವರಪ್ಪ ನೇಕಾರರ ಕುಟುಂಬಕ್ಕೆ ಸೇರಿದವರು. ತಾಯಿ ಚೆನ್ನವೀರಮ್ಮ. ತಮ್ಮ ಹೆಸರಿನ ಶಿವ ಹಾಗೂ ತಂದೆಯ ಹೆಸರಿನ ಈಶ್ವರ ಸೇರಿಸಿ ಶಿವೇಶ್ವರರಾದರು.

ಪ್ರೌಢಶಾಲೆ ಓದಿದ್ದು ಧಾರವಾಡದ ಕರ್ನಾಟಕ ಹೈಸ್ಕೂಲಿನಲ್ಲಿ. ಕಡು ಬಡತನದಿಂದ ಆರ್ಥಿಕ ನೆರವಿಲ್ಲದೆ ವಿದ್ಯೆಯನ್ನು ಮುಂದುವರಿಸಲಾಗದೆ ಉದ್ಯೋಗವನ್ನು ಅವಲಂಬಿಸಬೇಕಾಯಿತು.

ಮೊದಲು ಉದ್ಯೋಗಕ್ಕೆ ಸೇರಿದ್ದು ಧಾರವಾಡದ ಮುನಿಸಿಪಲ್ ಬೋರ್ಡ್ ಸ್ಕೂಲಿನಲ್ಲಿ ಕಾರಕೂನರಾಗಿ. ನಂತರ ಹುಬ್ಬಳ್ಳಿಯ ಆಂಗ್ಲೋ-ಉರ್ದು ಶಾಲೆಯಲ್ಲಿ ಗುಮಾಸ್ತರಾಗಿ, ಧಾರವಾಡದ ಸರಕಾರದ ರೇಷನಿಂಗ್ ಇಲಾಖೆಯಲ್ಲಿ ಎನ್ಯುಮರೇಟರಾಗಿ- ಹೀಗೆ ಹಲವಾರು ಕಡೆಯಲ್ಲಿ ನಿರ್ವಹಿಸಿದ ಕಾರ್ಯಗಳು.

ಅಷ್ಟೊಂದು ದೃಢವಾದ ಆರೋಗ್ಯವನ್ನು ಹೊಂದಿಲ್ಲದೆ ಸದಾ ನಿಶ್ಯಕ್ತಿಯಿಂದ ಬಳಲುತ್ತಿದ್ದುದೇ ಕಣ್ಣಿನ ತೊಂದರೆಗೂ ಮೂಲಕಾರಣವಾಯಿತು

ಎಳೆಯ ವಯಸ್ಸಿನಿಂದಲೇ ತಾಯಿ ಹೇಳುತ್ತಿದ್ದ ಬೀಸುವ, ಕುಟ್ಟುವ, ನೇಯುವಾಗಿನ ಹಾಡುಗಳಿಗೆ ಮನಸೋತು ಬರೆದಿಡುವ ಹವ್ಯಾಸವನ್ನು ಬೆಳಸಿಕೊಂಡು ಹತ್ತಿರದಲ್ಲಿದ್ದ ನವಲೂರು, ರಾಯಪುರ, ಉಣಕಲ್ಲು ಮುಂತಾದ ಹಳ್ಳಿಗಳನ್ನೆಲ್ಲ ಸುತ್ತಿ ಗರತಿಯರು ಹಾಡುತ್ತಿದ್ದ ಜನಪದ ಗೀತೆಗಳನ್ನು ಸಂಗ್ರಹಿಸಿಕೊಂಡು ಪತ್ರಿಕೆಗಳಿಗೆ ಬರೆದು ಕಳುಹಿಸತೊಡಗಿದರು.

ವಿದ್ಯಾರ್ಥಿಯಾಗಿದ್ದಾಗಲೇ ಚೆನ್ನವೀರಕಣವಿಯವರ ಪರಿಚಯದಿಂದ ಸಾಹಿತ್ಯದಲ್ಲಿನ ಆಸಕ್ತಿ ಚಿಗುರೊಡೆಯತೊಡಗಿತು. ಧಾರವಾಡದ ಉಳವಿ ಬಸಪ್ಪನ ಗುಡ್ಡದಲ್ಲಿ ಜೋನ್ ಎಂಬುವರ ಬಂಗಲೆಯ ಒಂದು ಕೋಣೆ ಚೆನ್ನವೀರಕಣವಿಯವರ ವಾಸಸ್ಥಾನ ವಾಗಿದ್ದು ‘ಚೆಂಬೆಳಕು’ ಎಂದೇ ಪ್ರಸಿದ್ಧಿ ಪಡೆದು ಚೆಂಬೆಳಕಿನ ಕವಿಯಾಗಿ ರೂಪಗೊಳ್ಳ ತೊಡಗಿದ್ದರು.

ಈ ಸಂದರ್ಭದಲ್ಲಿಯೇ ಶಿವೇಶ್ವರರು ಚೆನ್ನವೀರಕಣವಿಯವರ ಮುಖಾಂತರ ಪಾಟೀಲು ಪುಟ್ಟಪ್ಪ, ಹಿರೇಮಲ್ಲೂರು ಈಶ್ವರನ್, ಚಿತ್ರಕಲಾವಿದ ಎನ್.ಸಿ. ದೇಸಾಯಿ, ವಿ.ಜಿ. ಭಟ್ಟ ಇವರೆಲ್ಲರ ಸಹವಾಸವು ಲಭಿಸಿತ್ತು. ಇವರ ಕಾವ್ಯಾನುಭವ ಮಂಟಪದ ಇತರ ಸದಸ್ಯರೆಂದರೆ ಶಂಕರ ಮೊಕಾಶಿ ಪುಣೇಕರ, ಜಿ.ಎಚ್. ಕಣಕಲ್ಲ, ಎಂ.ಪಿ.ಜೋಶಿ, ವಸಂತ ಕವಲಿ ಮುಂತಾದವರುಗಳು,

ಓದು, ಚರ್ಚೆ, ವಿಮರ್ಶೆಗಳಲ್ಲಿ ತೊಡಗಿಸಿಕೊಂಡಿದ್ದ ಕಾವ್ಯಾನುಭವ ಮಂಟಪ ಶಿವೇಶ್ವರರ ಕಾರ್ಯಕ್ಷೇತ್ರವಾಯಿತು. ಮಗ ಹಸಿವಿನಿಂದ ಬಳಲಬಾರದೆಂದು ತಾಯಿ ಕಳುಹಿಸುತ್ತಿದ್ದ ರೊಟ್ಟಿ, ಪಲ್ಲೆ, ಚಟ್ನಿ, ಮೊಸರನ್ನ ಸದಸ್ಯರೆಲ್ಲರ ಹೊಟ್ಟೆ ತುಂಬಿಸುತ್ತಿತ್ತು

ಕವಿತೆಗಳು

ಬದಲಾಯಿಸಿ

ಅಂದಿನ ಕವಿಗಳು ದೇಶದಲ್ಲಿನ ಕೋಮುದ್ವೇಷದ, ಹಬ್ಬಿದ ದಳ್ಳುರಿಯ, ಬತ್ತಿಹೋದ ಮಾನವೀಯತೆಯ ವಸ್ತುವನ್ನಾಗಿಸಿಕೊಂಡು ಕಾವ್ಯ ರಚನೆ ಮಾಡುತ್ತಿದ್ದರು. ಶಿವೇಶ್ವರರ ಕಾವ್ಯದಲ್ಲೂ ಬಡತನದ ಸ್ವಾನುಭವ, ಪರಿಸರದಲ್ಲಿ ಕಂಡ ಅನ್ಯಾಯ, ಅಸಮತೆ, ಭಾರತದಲ್ಲಿ ಬರಡುಗೊಳಿಸುತ್ತಿದ್ದ ಹಣವಂತರ ಶೋಷಣೆಯ ಪ್ರವೃತ್ತಿಗಳ ಬಗ್ಗೆ ಚಿಂತನಕಾರ ಶಿವೇಶ್ವರರ ಲೇಖನಿಯಿಂದ ಕವಿತೆಗಳು ಹರಿಯತೊಡಗಿದವು.

ಹಣತರುವ ನೌಕರಿ ತೊರೆದು ಪತ್ರಿಕೋಧ್ಯಮಕ್ಕೆ ಧುಮುಕಿ ನಿರಂಜನರು ಪ್ರಾರಂಭಿಸಿದ್ದ ‘ಜನಶಕ್ತಿ’ ಪತ್ರಿಕೆಯ ಉಪಸಂಪಾದಕರಾಗಿ ದುಡಿಯತೊಡಗಿದರು. ಸ್ವಾತಂತ್ರ‍್ಯ ಮುನ್ನಾ ದಿನಗಳಲ್ಲಿ ಪತ್ರಿಕೆಯ ಮೇಲೆ ಪೊಲೀಸರ ಕಣ್ಣು ಬಿದ್ದು ಭೂಗತರಾಗಿಯೇ ಕೆಲಸ ನಿರ್ವಹಿಸಬೇಕಾಯಿತು. ದೈಹಿಕ ಅಶಕ್ತತೆ, ಕಣ್ಣುಬೇನೆಯನ್ನು ಲೆಕ್ಕಿಸದೆ ಹಗಲಿರಳೂ ಪತ್ರಿಕೆಗಾಗಿ ದುಡಿದರು. ಸ್ವಾತಂತ್ರ‍್ಯಾನಂತರ ಎಡಪಂಥೀಯ ಚಳುವಳಿಗೆ ಪೆಟ್ಟುಬಿದ್ದು ಪತ್ರಿಕೆಯು ನಿಂತುಹೋಗಿ ನಿರಂಜನರು ಬೆಂಗಳೂರಿಗೆ ಬಂದು ಪ್ರಜಾಮತ ಪತ್ರಿಕಾ ಬಳಗ ಸೇರಿದರು.

ಶಿವೇಶ್ವರರ ಸಾಹಿತ್ಯ ಕೃತಿಗಳು ವೈವಿಧ್ಯಮಯ. ಜಾನಪದ ಗೀತೆಗಳನ್ನು ಸಂಗ್ರಹಿಸುವಲ್ಲಿ ತೋರಿದ ಆಸಕ್ತಿಯನ್ನೇ ಪದ್ಯ ರಚನೆ, ಸಾನೆಟ್ಟುಗಳ ರಚನೆಯಲ್ಲೂ ತೋರಿದ್ದಾರೆ. ಸಾನೆಟ್ಟುಗಳ ರಚನೆಯಲ್ಲಿ ತಮ್ಮ ಮುಕ್ತವಾದ ಭಾವಲಹರಿಯನ್ನು ಹರಿಸಿದ್ದು ಸುಮಾರು ೩೨ ಸಾನೆಟ್ಟುಗಳನ್ನು ರಚಿಸಿದ್ದಾರೆ.[]

ಇದಲ್ಲದೆ ಜಿ.ಪಿ. ರಾಜರತ್ನಂ ರವರು ಬರೆದ ‘ಎಂಡ್ಕುಡ್ಕ ರತ್ನ’ ದಂತೆ ‘ಗಾಂಜ್ಬಡ್ಕನ’ ಪದಗಳನ್ನು ಮತ್ತು ಕೆಲ ಭಾವಗೀತೆಗಳನ್ನು ರಚಿಸಿದ್ದು ನಲವತ್ತು ರಚನೆಗಳಿವೆ. ಮತ್ತು ತರಿಸುವ ವಸ್ತುವನ್ನು ಕೊಳವೆಯಲ್ಲಿ ಹಾಕಿ, ಎಳೆದಾಗ ಉನ್ಮಾದ ಉಂಟಾದಾಗ ಹೊರಡುವ ಪದಗಳು

ಮೈಸೂರ್ಗ್ ಇದ್ಹಂಗ ಒಬ್ಬಾಂವ ಅರ್ಸ ನವ್ಗೊಬ್ಬ ಅರ್ಸ ಗಾಂಜಾ

ಎಂದು ಹಾಡಿದ್ದಾರೆ. ಇವಲ್ಲದೆ ೩೨ ತ್ರಿಪದಿಗಳನ್ನೂ ರಚಿಸಿದ್ದಾರೆ.

ಕಥೆಗಳು

ಬದಲಾಯಿಸಿ

ಕೆಲ ಲೇಖನಗಳು, ಕಥೆಗಳನ್ನೂ ಬರೆದಿದ್ದು ಅವುಗಳಲ್ಲಿ ‘ರಾಜಮಾ’ (ಸಣ್ಣ ಕಥೆ) ಯಾದರೆ, ‘ನಮ್ಮ ನಡುವಿನ ಗೋಡೆ’ ಅನುವಾದಿತ ಕಥೆ. ೧೯೮೦ರಲ್ಲಿ ನಿರಂಜನರು ಸಂಪಾದಿಸಿದ ವಿಶ್ವಕಥಾಕೋಶದಲ್ಲಿ ‘ರಾಜಮಾ’ ಕಥೆಯೂ ಸೇರಿದೆ.[]

ತಾತ್ವಿಕ ನೆಲೆ, ನಿಷ್ಠೆಗಳಿಂದ, ಪ್ರಗತಿಶೀಲ, ಧ್ವನಿಪೂರ್ಣ ಕವನಗಳನ್ನು ಬರೆದಿದ್ದ ಶಿವೇಶ್ವರ ದೊಡ್ಡಮನಿಯವರು ಅತಿ ಕಿರಿಯ ವಯಸ್ಸಿನಲ್ಲಿಯೇ ಮುದ್ದಣ, ಯರ್ಮುಂಜ ರಾಮಚಂದ್ರ, ಪೇಜಾವರ ಸದಾಶಿವರಾಯರುಗಳಂತೆ ತೀರಿಕೊಂಡಿದ್ದು (೨೬.೦೩.೧೯೫೦) ಸಾಹಿತ್ಯಕ್ಕಾದ ದೊಡ್ಡ ನಷ್ಟ.

ಉಲ್ಲೇಕಗಳು

ಬದಲಾಯಿಸಿ