ಶಿವಮೊಗ್ಗ ಜಿಲ್ಲೆಯ ಜಾನಪದ

(ಶಿವಮೊಗ್ಗ ಜಿಲ್ಲೆಯ ಜಾನಪದ ಕಲೆ ಇಂದ ಪುನರ್ನಿರ್ದೇಶಿತ)


ಒಂದು ಪ್ರದೇಶದ ಜಾನಪದ ಆ ಪ್ರದೇಶದ ಜನಜೀವನದ ಸಾರ. ಆಚರಣೆಯ ಮೂಲ ಬೇರು ಆಯಾ ಪ್ರದೇಶದ ಜಾನಪದದಲ್ಲಿ ಅಡಗಿರುತ್ತದೆ. ಶಿವಮೊಗ್ಗ ಜಿಲ್ಲೆಯ ಆಚರಣೆಗಳನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಆ ಜಿಲ್ಲೆಯ ಜಾನಪದ ಅರಿವು ಅತ್ಯಂತ ಮಹತ್ವದಾಗುತ್ತದೆ. ಯಾವುದೇ ಜನಪದ ಸಮುದಾಯದ ಆಯ ಕಾಲದ ನೋವು, ನಲಿವು ,ಏಳು ,ಬೀಳುಗಳನ್ನು ಕಥೆ ,ಗೀತೆ ,ಗಾದೆ ,ಐತಿಹ್ಯ ,ಒಗಟು ,ನುಡಿಗಟ್ಟು ,ನಂಬಿಕೆ ,ಸಂಪ್ರದಾಯ ,ಕಲೆಗಳ ಮೂಲಕ ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ವರ್ಗಾಯಿಸಿರುತ್ತದೆ. ಆದ್ದರಿಂದ ಜಾನಪದವು ಜಾನಪದ ಅಧ್ಯ ಯನವಾಗಿ ಮಹತ್ವ ಭೂಮಿಕೆಯನ್ನು ನಿಭಾಯಿಸುತ್ತದೆ. ಜನಪದ ಸಾಹಿತ್ಯ ಜನಪದರ ಅಭಿವ್ಯಕ್ತಿಯ ಸಾಧನ ,ಜನಪದರ ಅನುಭವದ ಸಂಪತ್ತಿನಿಂದ ರೂಪು ಪಡೆದ ಜನಪದ ಸಾಹಿತ್ಯದಲ್ಲಿ ಆ ಸಮುದಾಯದ ,ಮೌಲ್ಯ ,ನೀತಿ, ವಿವೀಕ , ಆದರ್ಶಗಳು ಅಡಗಿರುತ್ತದೆ. ಜನಪದರ ಮಾತುಗಳು ಕಾವ್ಯವಲ್ಲದ ಕಾವ್ಯ ,ಮೌನವೇ ಧ್ವನಿ , ಧ್ವನಿಯೇ ಅರ್ಥ ,ಪಿಸುಗುಡುವಿಕೆಯೇ ಮಾತು ,ಅವರ ಬದುಕೇ ಮೌಲ್ಯದ ಗಣಿ , ಹೀಗಾಗಿ ಜನಪದ ಸಾಹಿತ್ಯವೆಂದರೇ ಪರಂಪರೆಯ ಬೇರುಗಳ ಅರಿವಿನ ಆಗರವೇ ಆಗಿರುತ್ತದೆ. ಕರ್ನಾಟಕದಲ್ಲಿ ಶಿವಮೊಗ್ಗ ಜಿಲ್ಲೆ ಪ್ರಾಕೃತಿಕವಾಗಿ ,ಸಾಂಸ್ಕ್ರುತಿಕವಾಗಿ ಅತ್ಯಂತ ವೈವಿಧ್ಯಮಯ ಜಿಲ್ಲೆಯಾಗಿದೆ.ಸಾಂಸ್ಕ್ರುತಿಕ ವೈವಿಧ್ಯದಂತೆ ಜನಪದ ಸಾಹಿತ್ಯ ಸಮೃದ್ದವಾಗಿದೆ. ತೀರ್ಥಹಳ್ಳಿಯ ಅಂಟಿಕೆ ಪಂಟಕೆ ಪದಗಳು ,ಶಿಕಾರಿಪುರದ ತ್ಯಾಗ ಬಲಿದಾನದ ಕಥನಗೀತೆಗಳು ,ಸೊರಬದ ಜೋಗಿಯ ಹಾಡುಗಳು ,ಸಾಗರದ ಚೌಡಿಕೆ ಪದಗಳು ಶಿವಮೊಗ್ಗ ಜಿಲ್ಲೆಯ ವಿಶೇಷತೆಯಾಗಿವೆ. ಇದರೊಂದಿಗೆ ಒಸಗೆಯ ಹಾಡುಗಳು, ಕಥೆಗಳು, ಪುರಾಣಗಳು, ಐತಿಹ್ಯಗಳು, ನುಡಿಗಟ್ಟು ,ಗಾದೆ ಒಗಟುಗಳು, ಶಿವಮೊಗ್ಗ ಜಿಲ್ಲೆಯಲ್ಲಿ ಹೇರಳವಾಗಿದೆ. ಅದು ಎಂದು ಬತ್ತದಿರುವ, ಮೊಗೆದಂತೆ ತುಂಬಿಕೊಳ್ಳುವ ಚಿರಂತನ ಚಿಲುಮೆ.

ಶಿವಮೊಗ್ಗ ಜಿಲ್ಲೆಯಲ್ಲಿ ಲಂಬಾಣಿ ಬುಡಕಟ್ಟು ಜನರು ಸಾಕಷ್ಟು ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ತಂಡಗಳನ್ನು ಕಟ್ಟಿ ಕೊಂಡು ವಾಸಿಸುವ ಈ ಜನರಲ್ಲಿ ಜಾನಪದ ಸಮೃದ್ದವಾಗಿದೆ. ಇವರ ಮಧುವೆಯ ಸಮಾರಂಭಗಳು ಜನಪದ ಗೀತೆಗಳ ವರ್ಷಧಾರೆ. ಅಪಾರ ಶಾಸ್ತ್ರಗಳ ಆಚರಣೆ ,ಶಾಸ್ತ್ರಗಳಿಗನುಸಾರವಾಗಿ ಗೀತೆಗಳನ್ನು ಹಾಡುವ ಪದ್ದತಿ ಇವರಲ್ಲಿದೆ. ಹಾಸ್ಯ ,ವಿಡಂಬನೆ ,ಹಾರೈಕೆ ,ಪ್ರಾರ್ಥನೆ ಹೀಗೆ ಅನೇಕ ಬಗೆಯ ಗೀತೆಗಳನ್ನು ಮದುವೆಯ ಸಮಾರಂಭದಲ್ಲಿ ಹಾಡುತ್ತಾರೆ. ಮದುಮಗಳನ್ನು ಬೀಳ್ಕೊಡುವ ಸಂದರ್ಭದಲ್ಲಿ ಮದುಮಗಳು ಹವೇಲಿ ಗೀತೆಯನ್ನು ಹಾಡುತ್ತಾಳೆ. ಹವೇಲಿ ಎಂದರೆ ಮನೆ. ಸೂರ್ಯೋದಯಕ್ಕೆ ಅಭಿಮುಖವಾಗಿ ನಿಂತು ಸಾಕಿ ಸಲುಹಿದ ತಾಯಿ ತಂದೆಯವರನ್ನು ಮತ್ತು ತಂದೆಯ ವಂಶವನ್ನು ಕಾಪಾಡುವಂತೆ ದೈವವನ್ನು ಕುರಿತು ಪ್ರಾರ್ಥಿಸುವ ಗೀತೆ

ಹವೇಲಿಯೆ ಅಹಹ
ನನ್ನ ನಾಯಕ ತಂದೆಯ ಹವೇಲಿ
ನನ್ನಿಂದ ಎಂದೂ ಮರೆಯಾಗದಿರು ಹವೇಲಿ
ಆಲದ ಹಾಗೆ ಹಬ್ಬಲಿ ಹವೇಲಿ
ಕುಮಾರಿಯಾದ ನನ್ನ ಮಡಿಲು ತುಂಬಲಿ ಹವೇಲಿ
ನನ್ನ ನಾಯಕ ತಂದೆಯೇ ಕೋಳಿಯೇ
ನೀನು ಕೂಗಿದರೆ ನನ್ನ ಗಾಯಕ ತಂದೆಯ ನಿದ್ರೆ ಎಚ್ಚರವಾದೀತು
ಘಳಿಗೆಯೊಂದು ಕೂಗದಿರು
ಹಸಿರು ತೋಟದ ಇನಿ ಸ್ವರದ ಕೋಗಿಲೆ
ನೀನು ಕೂಗಿದರೆ ನನ್ನ ನಾಯಕ ತಂದೆಯ ನಿದ್ರೆ ಎಚ್ಚರವಾದೀತು.......

ಮದುವೆಯಾಗಿ ಗಂಡನ ಮನೆಗೆ ಹೊರಟು ನಿಂತ ಮದುಮಗಳು, ತಾನು ಹುಟ್ಟಿ ಬೆಳೆದ ಮನೆಯನ್ನು ಬಿಡುವ ಸಂದರ್ಭದಲ್ಲಿ ಹಾಡುವ ಈ ಗೀತೆ ಕರುಣರಸಾರ್ದ್ರವಾಗಿದೆ. ತಂದೆಯ ಮನೆಯನ್ನು ಅಂದರೆ ವಂಶವನ್ನು ಕುರಿತು ಆಲದ ಹಾಗೆ ಹಬ್ಬಲಿ, ಹೂವಿನಂತೆ ಫಲಿಸಲಿ ಎಂದು ಹಾರೈಸುವುದು. ಬಳ್ಳಿ ಬಿಟ್ಟ ಹೂವುಗಳು ಫಲಿಸುವಂತೆ ತಂದೆಯ ಹವೇಲಿ(ಮನೆ) ಬಿಟ್ಟ ಹೂವುಗಳು ಫಲ ತುಂಬಲಿ ಎಂಬ ಹಾರೈಕೆ ಅದ್ಭುತ ಭಾವನಾ ಶಕ್ತಿಯಿಂದ ಕೂಡಿದೆ.

ದೀಪಾವಳಿ ಹಬ್ಬದಲ್ಲಿ ಮಲೆನಾಡಿನ ತೀರ್ಥಹಳ್ಳಿಯ ತಾಲ್ಲೂಕಿನ ಸುತ್ತಮುತ್ತ ಮನೆಮನೆಗಳಿಗೆ ಜ್ಯೋತಿ ಮುಟ್ಟಿಸುವ ಸಂಪ್ರದಾಯವಿದೆ. ಆ ಸಂದರ್ಭದಲ್ಲಿ ಹಾಡುವ ಹಾಡುಗಳು 'ಅಂಟಿಗೆ ಪಂಟಿಗೆ ' ಎಂದೇ ಪ್ರಸಿದ್ಧವಾಗಿದೆ. ದೀಪಾವಳಿಯಲ್ಲಿ ಗಂಡಸರು ಯಾವುದೇ ವಾದ್ಯ ವಿಶೇಷಗಳಿಲ್ಲದೆ ಅಂಟಿಗೆ ಪಂಟಿಗೆ ಪದಗಳನ್ನು ಹಾಡುವುದು ಒಂದು ವಿಶೇಷ. ಈ ಹಾಡುಗಳಲ್ಲಿ ಬರುವ ಸಾಹಿತ್ಯಕ ಅಂಶಗಳ ಸೊಗಸು ಅಪಾರ. ಬಲಿಪಾಡ್ಯಮಿಯ ಸಂಜೆ ಅಂಟಿಗೆ ಪಂಟಿಗೆ ತಂಡ ಊರ ಹೊರಗಿನ ಆಲದ ಮರದ ಕೆಳಗೆ ಜ್ಯೋತಿಯನ್ನು ಬೆಳಗಿಕೊಳ್ಳುತ್ತಾರೆ. ಆಗ ಹಾಡುವ ಹಾಡು.

 
ಕತ್ತಲೆ ಸಮಯಕ್ಕೆ ಸತ್ತ್ಯುಳ್ಳ ಜೋತಮ್ಮಾ
ಮತ್ತೇಳು ಲೋಕೇ ಬೆಳಕಾದೂ
ಮತ್ತೇಳು ಲೋಕೇ ಬೆಳಕಾದೂ ಮಾನವರಿಗೆ
ಅಡಿಗೆ ಊಟಗಳೆ ಹಸನಾದೂ
ಅಡಿಗೆ ಊಟಗಳೆ ಹಸನಾದೂ ಜೋತಮ್ಮಾ
ಕೊಡುನುಡಿಯ ನಮಗೆ ಪದನಾಮ
ಗುಡು ಗುಡು ಗುಟ್ಟುವೋ ಸಿಡಿಲೇಳು ಹೊಡೆದಾವೊ
ಒಡನೆ ಕುಡಿ ಮಿಂಚೂ ಹೊಳೆದಾವೋ ಜೋತಮ್ಮಾ
ಮಿಂಚಿನಲಿ ಜೋತಮ್ಮಾ ಉದಯಾಗಿ ಜೋತಮ್ಮಾ
ಕೊಡ ನುಡಿಯ ನಮಗೆ ಙ್ಞಾ ನವಾ

ಹೀಗೆ ಅಂಟಿಗೆ ಪಂಟಿಗೆ ತಂಡದವರು ಜೋತಿಯ ಉಗಮ ಮತ್ತು ಅದರ ಅಗತ್ಯ ಮತ್ತು ಮಹತ್ವ ವನ್ನು ಗುಣಗಾನ ಮಡುತ್ತಾ ದೀಪವನ್ನು ಹೊತ್ತಿಸಿಕೊಳುತ್ತಾರೆ. ಮೆರವಣಿಗೆಯಲ್ಲಿ ಹೊರಡುತ್ತಾರೆ. ಗ್ರಾಮದ ಮನೆಮನೆಗೂ ಭೇಟಿ ಕೊಡುತ್ತಾ ಬೆಳಗಿನ ಜಾವದ ವೇಳೆಗೆ ಮತ್ತೆ ಜ್ಯೋತಿ ಬೆಳಗಿಸಿಕೊಂಡು ಮರದ ಬಳಿಗೆ ಬಂದು ಜ್ಯೋತಿಯನ್ನು ಕಳಿಸುತ್ತಾರೆ.ಜನಪದ ಗೀತೆಗಳು ಜನಪದ ಸಮುದಾಯಗಳಲ್ಲಿ ಸಮೃದ್ದ ವಾಗಿವೆ. ಕೃಷಿಯನ್ನು ಕುರಿತು ಗೀತೆಗಳು, ಒಸಗೆಯ ಹಾಡುಗಳು, ಬೀಸುವ ಕಲ್ಲಿನ ಪದ, ಮಳೆರಾಯನ ಹಾಡು,ಲಾವಣಿ ಗೀಗೀ ಪದ, ಹೀಗೆ ನಾನಾ ಬಗೆಯ ಹಾಡುಗಳು ಜನಪದರಲ್ಲಿ ಇಂದಿಗೂ ಪ್ರಚಲಿತದಲ್ಲಿವೆ.ಅವುಗಳನ್ನು ಪ್ರತ್ಯೇಕವಾಗಿಯೇ ದಾಖಲಿಸಬೇಕಗುತ್ತದೆ. ಕನ್ನಡ ಜನಪದ ಸಾಹಿತ್ಯದಲ್ಲಿ ಲಾವಣಿ ಪ್ರಕಾರ ವಿಶಿಷ್ಟವಾದುದಾಗಿದೆ. ಲಾವಣಿ ಸಾಹಿತ್ಯಕ ,,ಪೌರಾಣಿಕ ಮೌಲ್ಯಗಳನ್ನು ಒಳಗೊಂಡಿರುವಂತೆ ಸಂಗೀತವನ್ನು ಒಳಗೊಂಡಿರುತ್ತದೆ. ಲಾವಣಿಗಳನ್ನು ಹೆಣ್ಣು ಮಕ್ಕಳು ಕಳೆ ಕೀಳುವಾಗ, ನಾಟಿ ಮಾಡುವಾಗ,ಅಡಿಕೆ ಸುಲಿಯುವಾಗ ಹಾಡುತ್ತರೆ. ವೃತ್ತಿಗಾಯಕರು ದಮ್ಮಡಿಯನ್ನು ಬಾರಿಸುತ್ತ, ಕಿನ್ನರಿ ಜೋಗಿಗಳು ಕಿನ್ನರಿಯನ್ನು ನುಡಿಸುತ್ತಾ ಲಾವಣಿಯನ್ನು ಹಾಡುವುದೂ ಉಂಟು. ಲಾವಣಿಗಳಲ್ಲಿ ಬರುವ ವರ್ಣನಾ ವೈಖರಿ ಅಪ್ರತಿಮವಾದುದು. ಕೇಳುಹರು ಬೆರಗಾಗುವಂತೆ ಊಹಾತೀತ ಮತ್ತು ವಿಸ್ಮ್ಯಯಕರವಾದ ಸಂಗತಿಗಳನ್ನು ಲಾವಣಿಯಲ್ಲಿ ತಂದಿರುತ್ತಾನೆ.

ಶಿವಮೊಗ್ಗ ಜಿಲ್ಲೆಯ ಭೌಗೋಳಿಕ ಪರಿಸರ ವೈವಿಧ್ಯಮಯವಾಗಿದೆ. ಭೌಗೋಳಿಕ ವೈವಿಧ್ಯತೆಗನುಗುಣವಾಗಿ ಇಲ್ಲಿನ ಸಾಹಿತ್ಯ ಸಂಪತ್ತು ವೈವಿಧ್ಯಮಯವಾಗಿದೆ.ಮೌಲ್ಯ ಪರಿಪಾಲನೆಯಲ್ಲಿ ಶಿವಮೊಗ್ಗ ಜಿಲ್ಲೆಯ ಜನಸಮುದಾಯ ಎಂದೂ ಮುಂದೆ ; ತ್ಯಾಗ ಬಲಿದಾನ ,ಶೌರ್ಯ ,ನ್ಯಾಯ ಧರ್ಮ ಇಲ್ಲಿಯ ಜನರ ಆದರ್ಶಗಳಾಗಿವೆ.ಈ ಜಿಲ್ಲೆಯ ಜಾನಪದವನ್ನು ಹಲವಾರು ವಿದ್ವಾಂಸರು ಸಂಗ್ರಹ ಮಾಡಿದ್ದಾರೆ. ಸಂಗ್ರಹಿಸಬೇಕಾದ ಸಂಪತ್ತು ಹೇರಳವಾಗಿದೆ. ಆ ನಿಟ್ಟಿನಲ್ಲಿ ಮೊಗೆದಷ್ಟು ಮುಗಿಯದಷ್ಟು ಸಮೃದ್ದವಾಗಿದೆ.

ಹಿರಿಯಣ ಡಾ. ಅಂಬಳಿಕೆ ಹಿರಿಯಣ್ಣ ಅಭಿನಂದನಾ ಸಂಪುಟ ; ಸಂಪಾದಕರು : ಡಾ. ಬಿ . ಗಣಪತಿ ,ಡಾ. ಎಸ್. ಮೋಹನ್ ; ಪ್ರಕಟನೆ : ಅಂಶು ಪ್ರಕಾಶನ