ಶಿರ್ಡಿ ಸಾಯಿ ಬಾಬಾ
ಶಿರ್ಡಿ ಸಾಯಿ ಬಾಬಾ (ಅಜ್ಞಾತ – ೧೫ ಅಕ್ಟೋಬರ್ ೧೯೧೮) ತಮ್ಮ ಭಕ್ತರಿಂದ ಅವರವರ ವೈಯಕ್ತಿಕ ಒಲವುಗಳು ಹಾಗು ನಂಬಿಕೆಗಳ ಪ್ರಕಾರ ಒಬ್ಬ ಸಂತ, ಫಕೀರ, ಅವತಾರ ಅಥವಾ ಸದ್ಗುರು ಎಂದು ಪರಿಗಣಿಸಲಾಗಿದ್ದ ಮತ್ತು ಪರಿಗಣಿಸಲಾಗುವ ಒಬ್ಬ ಮಹಾನ್ ಆಧ್ಯಾತ್ಮಿಕ ಗುರುಗಳಾಗಿದ್ದರು. ಅವರು ತಮ್ಮ ಮುಸ್ಲಿಮ ಮತ್ತು ಹಿಂದೂ ಭಕ್ತರಿಂದ ಗೌರವಿಸಲ್ಪಡುತ್ತಿದ್ದರು ಮತ್ತು ತಮ್ಮ ಜೀವನದ ಅವಧಿಯಲ್ಲಿ ಹಾಗು ನಂತರ ಅವರು ಮುಸ್ಲಿಮ್ ಅಥವಾ ಹಿಂದೂಗಳೇ ಎಂಬುದು ಅನಿಶ್ಚಿತವಾಗಿಯೇ ಉಳಿಯಿತು.
ಆಧ್ಯಾತ್ಮಿಕ ಸಾಧಕ
ಬದಲಾಯಿಸಿ- ಯಾವುದೇ ವ್ಯಕ್ತಿಯಾದರು ಸರಿ ಜನಿಸಿದ ಮೇಲೆ ತನ್ನನು ತಾನು ಗುರುವಿಗೆ ಸಮರ್ಪಿಸಿಕೊಳ್ಳದಿದ್ದರೆ/ಶರಣಾಗತನಾಗದಿದ್ದರೆ ಆತನಿಗೆ ಮುಕ್ತಿ ಹಾಗು ಜೀವನದ ಏಳಿಗೆಗಳೇ ಇರುವುದಿಲ್ಲ ಎಂಬ ಅಂಶವನ್ನು ಶಿರಡಿ ಸಾಯಿಬಾಬಾ ಬಲವಾಗಿ ನಂಬಿದ್ದರು ಮತ್ತು ಅದನ್ನೇ ಬೋದಿಸುತ್ತಿದ್ದರು ಕೂಡ.
- ಆಧ್ಯಾತ್ಮಿಕ ಸಾಧನೆಯ ದೃಷ್ಟಿಯಲ್ಲಿ ಸದ್ಗುರುವಿನ ಪಾತ್ರ ಅಪಾರವಾಗಿದ್ದು ಆತನಿಲ್ಲದೆ ಆಧ್ಯಾತ್ಮಿಕ ಹಾದಿಯ ಸಾಧನೆ ಸುಲಭ ಸಾಧ್ಯದ ಮಾತಲ್ಲವೆನ್ನುವುದನ್ನು ಸಾಯಿಬಾಬಾ ಮನಗಂಡಿದ್ದರು. ದುರ್ಗುಣಗಳಿಗೆ ವಿಮುಖರಾಗಿ ಆತ್ಮ ಸಾಕ್ಷಾತ್ಕಾರಕ್ಕೆ ಮೊದಲಾಗಿ ಎಂಬುದೇ ಸಾಯಿಬಾಬ ತಮ್ಮ ಜೀವಿತಾವಧಿಯಲ್ಲಿ ಭಕ್ತರಿಗೆ ಕೊಡುತ್ತಿದ್ದ ಒಂದು ಮುಖ್ಯ ಉಪದೇಶ.
- ಸಾಯಿ ಬಾಬಾ ಭಾರತದ ಉದ್ದಗಲಕ್ಕೂ ಸರ್ವ ಕಾಲಿಕ ಅಧ್ಯಾತ್ಮಿಕ ಗುರುವಾಗಿ ಹೊರ ಹೊಮ್ಮಿದ್ದು, ತಮ್ಮ ಭಕ್ತ ಸಮೂಹಕ್ಕೆ ಜೀವನದ ಏರಿಳಿತಗಳ ಬಗ್ಗೆ, ಜೀವಮಾನದ ಆಧ್ಯಾತ್ಮಿಕ ಸಾಧನೆಗಳ ಬಗ್ಗೆ, ಸಮರ್ಪಣಾ ಮನೋಭಾವದ, ಸೇವಾ ಮನೋಭಾವ, ಪರೋಪಕಾರ, ದಯಾಪರತೆ, ಕರ್ತವ್ಯ ನಿಷ್ಠೆ ಇನ್ನು ಮುಂತಾದ ಮಾನವೀಯ ಗುಣಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಶ್ರೇಷ್ಠ ಗುರುವಾಗಿದ್ದಾರೆ.
- ಬಾಬಾರವರು ತಮ್ಮ ಜೀವಿತಾವಧಿಯಲ್ಲಿ ಯಾವುದೇ ಒಂದು ಜಾತಿಗಾಗಲಿ ಅಥವಾ ಧರ್ಮಕ್ಕಾಗಲಿ ಬೆಲೆ ಕೊಟ್ಟವರಲ್ಲ. ಅವರು ಕೊಡುತ್ತಿದ್ದ ಬೆಲೆ ಒಂದೇ ಒಂದು ಧರ್ಮಕ್ಕೆ ಮಾತ್ರ. ಅದು "ಮನುಷ್ಯ" ಧರ್ಮ. ಹೀಗಾಗಿ ಅವರ ವ್ಯಕ್ತಿತ್ವ ಧರ್ಮಾತೀತ ಹಾಗು ಜಾತ್ಯಾತೀತ. ಅವರು ಭಕ್ತರಿಗೆ ಬೋಧಿಸುತ್ತಿದ್ದ ಅಂಶಗಳು ಹಿಂದೂ ಹಾಗು ಮುಸ್ಲಿಂ ಧರ್ಮಗಳ ತತ್ವಗಳಿಂದ ಪಕ್ವವಾಗಿ ಮನುಕುಲದ ಏಳಿಗೆಗೆ ಮಾರ್ಗದರ್ಶಿಗಳಾಗಿದ್ದವು ಎನ್ನಲಡ್ಡಿಯಿಲ್ಲ.
- ಸಾಯಿ ಬಾಬಾ ಬದುಕಿದ್ದು ಮುಸ್ಲೀಮರ ಸಾಮಾನ್ಯ ಮಸೀದಿಯಲ್ಲಿ, ಆದರೆ ಅದೇ ಮಸೀದಿಗೆ 'ದ್ವಾರಕಾಮಾಯಿ' ಎಂಬ ಹಿಂದೂ ಹೆಸರು ನಾಮಕರಣ ಮಾಡಿ ಹಿಂದೂ ಮುಸ್ಲೀಮರ ಸಾಮರಸ್ಯದ ಜೀವನಕ್ಕೆ ನಾಂದಿ ಹಾಡಲು ಪ್ರಯತ್ನಿಸಿದ್ದರು. ಇವಿಷ್ಟೇ ಅಲ್ಲದೆ ದಿನ ನಿತ್ಯದ ಜೀವನದಲ್ಲೂ ಬಾಬಾ ಅನೇಕ ಹಿಂದೂ ಆಚರಣೆಗಳನ್ನು ಮತ್ತು ಮುಸ್ಲೀಂ ಆಚರಣೆಗಳನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದರು.
- ಬಾಬಾರವರ ಒಂದು ಸುಪ್ರಸಿದ್ಧ ಉಕ್ತಿ "ಸಬ ಕಾ ಮಾಲಿಕ್ ಏಕ"(ಸರ್ವರ ಮಾಲೀಕನು ಒಬ್ಬನೇ). ಇದು ಹಿಂದೂ, ಇಸ್ಲಾಂ ಹಾಗು ಸೂಫಿ ತತ್ವಗಳನ್ನು ಒಳಗೊಂಡಿದೆ. ಅವರು ಸದಾ ಕಾಲ ಭಕ್ತರಿಗೆ ಕೊಡುತ್ತಿದ್ದ ಅಭಯ ವಾಕ್ಯಗಳೆಂದರೆ "ನನ್ನನ್ನು ನಂಬಿ, ನಿಮ್ಮ ಪ್ರಾರ್ಥನೆಗಳಿಗೆ ನನ್ನಲ್ಲಿ ಉತ್ತರಗಳಿವೆ" ಹಾಗು ದೇವರೇ ಮಾಲೀಕ.
ಹಿನ್ನೆಲೆ
ಬದಲಾಯಿಸಿ- ಸಾಯಿಬಾಬಾ ರವರ ನಿಜವಾದ ಹೆಸರಿನ ಹಾಗು ಜನ್ಮ ಸ್ಥಳದ ಬಗ್ಗೆ ಯಾವುದೇ ಯಾವುದೇ ಸ್ಪಷ್ಟ ಉಲ್ಲೇಖಗಳಿಲ್ಲ. ಇದರ ಬಗ್ಗೆ ಬಾಬಾರವರನ್ನೇ ಕೇಳಿದಾಗ ಯಾವುದೇ ಸೂಕ್ತವಾದ ಸ್ಪಂದನೆ ಸಿಕ್ಕಿಲ್ಲವೆಂದೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಸಾಯಿಬಾಬಾರು ಶಿರಡಿಗೆ ಆಗಮಿಸಿ ದಾಗ ಅವರಿಗೆ ಯಾವ ಹೆಸರಿತ್ತು ಎಂಬ ಬಗ್ಗೆ ಇತಿಹಾಸದಲ್ಲಿ ಸ್ಪಷ್ಟ ಉಲ್ಲೇಖವಿಲ್ಲ.
- ಆದರೆ ಸ್ಥಳೀಯ ಖಂಡೋಬ ದೇವಳದ ಆಗಮಿಕರು ಅವರನ್ನು ಕಂಡು 'ಯಾ ಸಾಯಿ'(ಸಾಯಿ ಸುಸ್ವಾಗತ) ಎಂದು ಉದ್ಘರಿಸಿದರಂತೆ. ಅಂದಿನಿಂದ ಅವರ ಹೆಸರು ಸಾಯಿ ಬಾಬಾ ಎಂದೇ ಪ್ರಸಿದ್ಧಿಯಾಗಿದೆ. 'ಸಾಯಿ' ಎನ್ನುವ ಪದವು ಪೆರ್ಶಿಯಾ ಭಾಷೆಯಲ್ಲಿ ಸೂಫಿ ಸಂತರು ಗಳಿಗೆ ಕೊಡುತ್ತಿದ್ದ ಒಂದು ಬಿರುದಾಗಿತ್ತುಹಾಗು ಅದು 'ಬಡ ವ್ಯಕ್ತಿ ' ಎಂಬ ಅರ್ಥ ಹೊಂದಿತ್ತು.
- ಬಂಜಾರ ಭಾಷೆಯಲ್ಲಿ ಸಾಯಿ ಎಂದರೆ 'ಒಳ್ಳೆಯ' ಎಂಬ ಅರ್ಥವಿದೆ. ಬಾಬಾ ಎಂದರೆ ಭಾರತೀಯ ಭಾಷೆಯಲ್ಲಿ ತಂದೆಯ ತಂದೆ ಸ್ಥಾನ ಅಥವಾ ಹಿರೀಕರು ಎಂಬರ್ಥವಿದೆ. ಹೀಗಾಗಿ ಸಾಯಿ ಬಾಬಾ ಎಂದರೆ 'ಒಳ್ಳೆಯ ಗುರು' 'ಪವಿತ್ರ ಗುರು' 'ಸಂತ ಪಿತಾಮಹ' ಎಂಬಂತಹ ಅರ್ಥಗಳು ಬರುತ್ತವೆ. ಸಾಯಿಬಾಬಾರ ಕೆಲವು ಭಕ್ತರು ಕೂಡ ಆಧ್ಯಾತ್ಮಿಕತೆಯಲ್ಲಿ ಉತ್ತುಂಗಕ್ಕೇರಿ ಜಗದ್ವಿಖ್ಯಾತರಾಗಿದ್ದಾರೆ.
- ಅವರಲ್ಲಿ ಕೆಲವರೆಂದರೆ ಶಿರಡಿಯ ಖಂಡೋಬ ದೇಗುಲದ ಅರ್ಚಕರಾಗಿದ್ದ ಮ್ಹಳಸ್ಪತಿ, ಉಪಾಸ್ನಿ ಮಹಾರಾಜ್ ಮತ್ತಿತರರು. ಇಷ್ಟೇ ಅಲ್ಲದೆ ದೇಶದ ಅನೇಕ ಸಂತ ಶಿರೋಮಣಿಗಳು ಕೂಡ ಸಾಯಿ ಬಾಬಾರ ಅಧ್ಯಾತ್ಮಿಕತೆಯ ಹಾದಿಯನ್ನೇ ತುಳಿದು ಒಂದರ್ಥದಲ್ಲಿ ಅವರ ಅನುಯಾಯಿಗಳಾಗಿದ್ದಾರೆ.
- ಅವರಲ್ಲಿ ಮುಖ್ಯವಾದವರೆಂದರೆ ಸಂತ ಬಿದ್ಕರ್ ಮಹಾರಾಜ್, ಸಂತ ಗಂಗಾಗಿರ್, ಸಂತ ಜಾನಕಿದಾಸ ಮಹಾರಾಜ್ ಮತ್ತು ಸತಿ ಗೋದಾವರಿ ಮಾತಾಜಿ. ಸಾಯಿಬಾಬಾ ಎಷ್ಟೋ ಸಂತರನ್ನು 'ಸಹೋದರರೆ' ಎಂದೂ ಸಂಭೋದಿಸಿದ್ದು ಉಂಟು, ಅದರಲ್ಲೂ ಮುಖ್ಯವಾಗಿ ಅಕ್ಕಲಕೋಟೆಯ ಸ್ವಾಮಿ ಸಮರ್ಥರ ಭಕ್ತ ವೃಂದವನ್ನು.
ಇತಿಹಾಸ ಮೂಲಗಳು
ಬದಲಾಯಿಸಿಸಾಯಿ ಬಾಬಾ ಜೀವನ ಚರಿತ್ರಕಾರರು (ಉದಾಹರಣೆಗೆ: ಗೋವಿಂದ ರಾವ್ ರಘುನಾಥ ದಾಬೋಲ್ಕರ್, ಆಚಾರ್ಯ ಎಕ್ಕಿರಾಳ ಭಾರದ್ವಾಜ್, ಸ್ಮ್ರಿತಿ ಶ್ರೀನಿವಾಸ್, ಆಂತೋನಿಯೋ ರಿಗೊಪೋಲಾಸ್) ಅವಲೋಕಿಸಿರುವ ಪ್ರಾಥಮಿಕ ಮೂಲವೆಂದರೆ ಶಿರಡಿಯಲ್ಲಿ ದೊರೆತ ಒಂದು ಡೈರಿ. ಈ ಡೈರಿಯನ್ನು ಬರೆದಿದ್ದು 'ಗಣೇಶ ಶ್ರೀಕೃಷ್ಣ ಕಪರ್ದೆ' ಎನ್ನುವರು. ಇವರು ಪ್ರತಿ ದಿನವು ಶಿರಡಿಯಲ್ಲೇ ಇದ್ದುಕೊಂಡು ಡೈರಿಯನ್ನು ಬರೆದಿದ್ದಾರೆ ಎನ್ನಲಾಗಿದೆ.
ಆರಂಭದ ದಿನಗಳು
ಬದಲಾಯಿಸಿ- "ಸಾಯಿ ಸಚ್ಚರಿತ್ರೆ" ಗ್ರಂಥದಲ್ಲಿ ದಾಖಲಾಗಿರುವ ಪ್ರಕಾರ ಸಾಯಿ ಬಾಬಾ ತಮ್ಮ 16ನೆ ವಯಸ್ಸಿನಲ್ಲಿ ಶಿರಡಿ ಪ್ರವೇಶ ಮಾಡಿದರು. ಶಿರಡಿ ಗ್ರಾಮವು ಈಗಿನ ಮಹಾರಾಷ್ಟ್ರ ರಾಜ್ಯದ ಅಹಮದ್ ನಗರ ಜಿಲ್ಲೆಯಲ್ಲಿದೆ. ಸಾಯಿಬಾಬ ಒಂದು ಬೇವಿನ ಮರದ ಕೆಳಗೆ ಧ್ಯಾನಸ್ಥ ಭಂಗಿಯಲ್ಲಿ ಶಿರಡಿಯ ನಿವಾಸಿಗಳ ಕಣ್ಣಿಗೆ ಬಿದ್ದರು.
- ಬೇವಿನ ಮರದಡಿಯಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿದ್ದ ತೇಜೋಮಯನಾದ ಬಾಲಕನನ್ನು ಕಂಡೊಡನೆ ಶಿರಡಿಯ ನಿವಾಸಿಗಳು ಆಶ್ಚರ್ಯಭರಿತರಾದರು ಮತ್ತು ಆತನು ಯಾರೆಂಬುದನ್ನು ತಿಳಿಯಲು ಮೊದಲಾದರು. ಅಷ್ಟು ಸಣ್ಣ ವಯಸ್ಸಿನಲ್ಲಿ ಚಳಿ, ಗಾಳಿ, ಮಳೆ, ಹಗಲು, ಇರುಳುಗಳಿಗೆ ಹೆದರದೆ ಧ್ಯಾನ ಮಾಡುತ್ತಿದ್ದವನ ಕಂಡಿದ್ದೇ ಅವರೆಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು.
- ಇದಾದ ಮೇಲೆ ಶಿರಡಿಯ ಧಾರ್ಮಿಕ ನಂಬಿಕೆ ಗಳಿದ್ದ ಜನರೆಲ್ಲರೂ ಬಾಬಾರನ್ನು ಸದಾ ಸಂಧಿಸುತ್ತಿದ್ದರು. ಇನ್ನುಳಿದ ಜನರು ಆ ತರುಣನನ್ನು ಹುಚ್ಚನಿರಬಹುದೆನ್ದೇ ಭಾವಿಸಿ ಕಲ್ಲು ತೂರುತ್ತಿದ್ದರು. ಈ ಘಟನೆಗಳ ನಂತರ ಸಾಯಿ ಬಾಬಾ ಶಿರಡಿಯಿಂದ ನಿರ್ಗಮಿಸಿದರು ಎನ್ನುತ್ತದೆ ಇತಿಹಾಸ. ಸಾಯಿ ಬಾಬಾ ಜೀವನ ಚರಿತ್ರೆ ಬರೆದಿರುವ ನರಸಿಂಹ ಸ್ವಾಮೀಜಿಯವರು ಸಾಯಿಬಾಬಾ ಬ್ರಾಹ್ಮಣ ದಂಪತಿಗಳಿಗೆ ಜನಿಸಿದವರೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- ಬ್ರಾಹ್ಮಣ ಕುಲದಲ್ಲಿ ಜನಿಸಿದರೂ ಫಕೀರರೊಬ್ಬರ ಆಶ್ರಯದಲ್ಲಿ ಬೆಳೆದಿದ್ದುದರಿಂದ ತಮ್ಮ ಆಚರಣೆಯಲ್ಲಿ ಮುಸ್ಲೀಮರ ಕೆಲವು ಆಚರಣೆಗಳನ್ನು ಒಳಗೂಡಿಸಿಕೊಂಡಿರಬಹುದು ಎಂದು ನರಸಿಂಹ ಸ್ವಾಮೀಜಿ ತಮ್ಮ ವಾದವನ್ನು ಮುಂದಿಡುತ್ತಾರೆ. ವಾದಗಳು ಏನೇ ಆದರು 'ಸಾಯಿ ಸಚ್ಚರಿತ್ರೆ' ಯಲ್ಲಿ ಅಧಿಕೃತವಾಗಿ ಇರುವ ಪ್ರಕಾರ ಸಾಯಿಬಾಬಾ ರ ಜನ್ಮಸ್ಥಳ, ಜನ್ಮ ದಿನಾಂಕ ಹಾಗು ಅವರ ಪೂರ್ವಾಶ್ರಮದ ಸಂಬಂಧಗಳ ಯಾವುದೇ ನಿಖರ ಉಲ್ಲೇಖಗಳು ಇಲ್ಲ.
- ಈ ವಿಚಾರವಾಗಿ ಕೆಲ ಭಕ್ತರು ಬಾಬಾರನ್ನೇ ಪ್ರಶ್ನಿಸಿದಾಗ ಅವರು ಈ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದನ್ನು ಹಲವಾರು ಭಕ್ತರು ಒಪ್ಪಿಕೊಂಡಿದ್ದಾರೆ. ಬಾಬಾರು ಶಿರಡಿಯಿಂದ ನಿರ್ಗಮಿಸಿದ ಮೇಲೆ ಯಾರಿಗೂ ಅವರ ಬಗ್ಗೆ ಅಷ್ಟಾಗಿ ಮಾಹಿತಿಗಳು ಇರುವುದಿಲ್ಲ. ಆದರೂ ಶಿರಡಿಯಿಂದ ಹೊರಟ ಬಾಬ ಅನೇಕ ಸಂತರನ್ನು ಹಾಗೂ ಫಕೀರರನ್ನು ಭೇಟಿ ಮಾಡುತ್ತಾ ಅವರಿಂದ ಆಧ್ಯಾತ್ಮಿಕ ಜ್ಞಾನ ಸಂಪಾದನೆ ಮಾಡುತ್ತಾ ನೇಯ್ಗೆಯ ಕೆಲಸವನ್ನು ಮಾಡುತ್ತಾ ಕಾಲ ಕಳೆದಿರಬಹುದು ಎಂಬ ನಂಬಿಕೆ ಇದೆ.
- ಮತ್ತೊಂದು ಮೂಲದ ಪ್ರಕಾರ ಅವರು ಭಾರತದಲ್ಲಿ ಸಿಪಾಯಿ ದಂಗೆ ಯಾಗುವ ಹೊತ್ತಿಗೆ ಅಂದರೆ 1857ರ ಆಸು ಪಾಸು ಝಾನ್ಸಿ ರಾಣಿ ಲಕ್ಷ್ಮಿಬಾಯಿಯ ಸೇನೆಯಲ್ಲಿ ಗುರುತಿಸಿಕೊಂಡಿದ್ದರು.ಐತಿಹ್ಯಗಳ ಪ್ರಕಾರ ಸಾಯಿಬಾಬ ಶಿರಡಿಯಲ್ಲಿ 3 ವರ್ಷಗಳಿದ್ದು 1 ವರ್ಷ ಮಾತ್ರ ಶಿರಡಿಯಿಂದ ಹೊರಗೆ ಕಳೆದಿದ್ದಾರೆ. ಇದಾದ ನಂತರ 1858ರ ಆಸು ಪಾಸಿನಲ್ಲಿ ಶಿರಡಿಗೆ ಮರಳಿ ಅನಂತರ ಶಾಶ್ವತವಾಗಿ ಅಲ್ಲಿಯೇ ಉಳಿದರು ಎನ್ನಲಾಗಿದೆ.
ಶಿರಡಿಗೆ ಪುನರಾಗಮನ
ಬದಲಾಯಿಸಿ1858ರಲ್ಲಿ ಬಾಬಾ ಶಿರಡಿಗೆ ಹಿಂದಿರುಗಿದಾಗ ಅವರ ಉಡುಗೆಯ ಶೈಲಿ ಸಂಪೂರ್ಣ ಬದಲಾಗಿತ್ತು. ಮುಕ್ಕಾಲು ತೋಳು ಇರುವ ಮಂಡಿಯವರೆವಿಗೂ ಇರುವ ಕಪನಿಯನ್ನು ಧರಿಸಿ ಕಾಲುಗಳಿಗೆ ಶ್ವೇತ ವರ್ಣದ ಒಂದು ವಸ್ತ್ರ ಹಾಗು ತಲೆಗೆ ಶ್ವೇತವರ್ಣದ ಬಟ್ಟೆಯೊಂದನ್ನು ಸುತ್ತಿಕೊಂಡಿರುತ್ತಿದ್ದರು. ಮುಂದೆ ಬಾಬಾರು ಈ ಶೈಲಿಯನ್ನೇ ಅನುಸರಿಸಿದರು. ಅವರ ಈ ಧರಿಸಿನ ಶೈಲಿ ಯಥಾವತ್ತಾಗಿ ಸೂಫಿ ಶೈಲಿಯನ್ನೇ ಹೋಲುತ್ತಿದ್ದು ಗಮನಾರ್ಹ.
ಭೋದನೆಗಳು ಮತ್ತು ಆಚರಣೆಗಳು
ಬದಲಾಯಿಸಿಸಾಯಿ ಬಾಬಾ ವೈಯಕ್ತಿಕವಾಗಿ ಸಂಪ್ರದಾಯ ಧರ್ಮ ಆಚರಣೆಗಳನ್ನು, ಜಾತಿ ವಾದಗಳನ್ನು ವಿರೋಧಿಸುತ್ತಿದ್ದರು. ಯಾವುದೇ ಒಂದು ಧರ್ಮಕ್ಕೆ ಕಟ್ಟು ಬೀಳದೆ ಧರ್ಮಾತೀತವಾದ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಮುಸ್ಲೀಮರ ರಂಜಾನ್ ಹಬ್ಬವನ್ನು, ಹಿಂದೂಗಳ ರಾಮ ನವಮಿಯನ್ನು ಸಾಂಗವಾಗಿ ಆಚರಿಸುತ್ತಿದ್ದರು. ಯಾವಾಗಲು ತಮ್ಮ ಅನುಯಾಯಿಗಳಿಗೆ ಸರಳ ಜೀವನವನ್ನೇ ನಡೆಸುವಂತೆ ಹಾಗು ತಮಗೆ ಇದ್ದುದರಲ್ಲಿಯೇ ದಾನ ಮಾಡಿ ಹಂಚಿ ತಿನ್ನುವ ಭಾವನೆಗಳನ್ನು ಬೆಳೆಸಿಕೊಳ್ಳುವಂತೆ ಕರೆ ಕೊಟ್ಟಿದ್ದರು.
ಸಾಯಿ ಬಾಬಾ ತಮ್ಮ ಭಕ್ತರಿಗೆ ಕೊಟ್ಟ ಅಭಯ ವಾಕ್ಯಗಳು
ಬದಲಾಯಿಸಿ- ಶಿರಡಿಯ ಪವಿತ್ರ ಮಣ್ಣಿನ ಮೇಲೆ ಪಾದವಿರಿಸಿದ ಯಾರಿಗೆ ಆಗಲಿ ಕೆಟ್ಟದ್ದು ಎಂಬುದು ಘಟಿಸಲಾರದು.
- ನನ್ನ ಸಮಾಧಿಗೆ ಭೇಟಿ ಕೊಡುವರಿಗೆ ಕಷ್ಟ ಮತ್ತು ಯಾತನೆಗಳು ದೂರಾಗುವವು.
- ನಾನು ಭೌತಿಕವಾಗಿ ಇಲ್ಲವಾದರೂ, ನನ್ನ ಸಮಾಧಿಯಿಂದಲೇ ಸದಾ ಭಕ್ತರನ್ನು ರಕ್ಷಿಸುತ್ತೇನೆ.
- ನನ್ನನ್ನು ನಂಬಿ, ನಿಮ್ಮ ಎಲ್ಲ ಪ್ರಾರ್ಥನೆಗಳಿಗೂ ನನ್ನಲ್ಲಿ ಉತ್ತರಗಳಿವೆ.
- ನನ್ನ ಆತ್ಮವು ಅಮರವಾಗಿದೆ. ಇದನ್ನು ಮೊದಲು ತಿಳಿದುಕೊಳ್ಳಿ.
- ನನ್ನನ್ನು ನಂಬಿ ಆರಾಧಿಸಿದ ಭಕ್ತರ ಮನೆಯಲ್ಲಿ ಕಷ್ಟ ಎಂಬ ಪದವೇ ಇರಲಾರದು.
- ನನಗೆ ಯಾರು ಸಂಪೂರ್ಣವಾಗಿ ಶರಣಾಗುವರೋ ಅವರಿಗೆ ನಾನು ಸಂಪೂರ್ಣ ಅಧೀನನಾಗಿರುತ್ತೇನೆ.
- ಎಲ್ಲರ ಭಾರವನ್ನು ನಾನು ತೆಗೆದುಕೊಳ್ಳುತ್ತೇನೆ, ಇದರಲ್ಲಿ ಯಾವುದೇ ಅನುಮಾನ ಬೇಡ.
- ಎಲ್ಲ ಸಹಾಯವೂ ಇಲ್ಲೇ ಸಿಗುತ್ತದೆ. ಇದನ್ನು ತಿಳಿಯಿರಿ ಯಾರು ಯಾರು ಹೇಗೆ ಬೇಡುತ್ತಾರೊ ಹಾಗೆ ಫಲವು ದೊರೆಯುತ್ತದೆ.
- ಯಾರಾದರೂ ನನಗೆ ಶರಣು ಬಂದು, ಅವರ ಜೀವನ ಪ್ರಯೋಜನವಾಗದೆ ಇದ್ದಾರೆ ತೋರಿಸಿ.
- ಸಾಯಿ ಸಾಯಿ ಎಂದವನೇ ಪುಣ್ಯವಂತನು, ನನ್ನ ಮೇಲೆ ಅನನ್ಯ ವಿಶ್ವಾಸ ಶ್ರದ್ಧೆ ಇಟ್ಟು ಸಾಯಿ ಸಾಯಿ ಎಂದವನೇ ಧನ್ಯನು.
ಆರಾಧನೆಗಳು ಮತ್ತು ಭಕ್ತರು
ಬದಲಾಯಿಸಿ- ಶಿರಡಿ ಸಾಯಿಬಾಬಾರ ಆರಾಧನೆ ಆರಂಭವಾಗಿದ್ದು 18ನೇ ಶತಮಾನದಲ್ಲಿ ಅವರು ಶಿರಡಿಯಲ್ಲಿ ಬದುಕಿದ್ದ ಸಮಯದಲ್ಲೇ. ಖಂಡೋಬ ದೇವಳದ ಅರ್ಚಕರಾಗಿದ್ದ ಮ್ಹಳಸ್ಪತಿಯೇ ಸಾಯಿಬಾಬಾರ ಮೊತ್ತಮೊದಲ ಭಕ್ತ.19ನೇ ಶತಮಾನದಲ್ಲಿ ಬರಿಯ ಶಿರಡಿಯ ಸುತ್ತಮುತ್ತಲ ನಿವಾಸಿಗಳು ಹಾಗು ಮುಂಬೈನ ಕೆಲ ಭಾಗಗಳಲ್ಲಿ ಮಾತ್ರ ಸಾಯಿ ಭಕ್ತರಿದ್ದರು.
- ಆದರೆ 20ನೇ ಶತಮಾನದಲ್ಲಿ ಸಾಯಿ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುವುದಷ್ಟೇ ಅಲ್ಲದೆ ಶಿರಡಿಯು ಭಾರತದ ಒಂದು ಮುಖ್ಯ ಶ್ರದ್ಧಾ ಭಕ್ತಿ ಕೇಂದ್ರವೂ ಆಯಿತು. ಹಾಗು ಹಿಂದೂ ಮುಸ್ಲೀಮರ ಸಾಮರಸ್ಯದ ಆರಾಧನಾ ಕೇಂದ್ರವೂ ಆಯಿತು.
ಪವಾಡಗಳು
ಬದಲಾಯಿಸಿಸಾಯಿ ಬಾಬಾ ಅನುಯಾಯಿಗಳು ಹಾಗು ಭಕ್ತರು ಬಾಬಾರ ಹಲವು ಪವಾಡಗಳನ್ನು ನೋಡಿದ್ದಾಗಿ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ. ಒಂದೇ ಸಮಯದಲ್ಲಿ ಎರಡು ಸ್ಥಳದಲ್ಲಿರುವುದು, ನಿರಾಧಾರವಾಗಿ ಗಾಳಿಯಲ್ಲಿ ತೇಲುವುದು, ಮುಖ ನೋಡಿದ ತಕ್ಷಣ ಮನಸ್ಸಿನಲ್ಲಿರುವುದನ್ನು ಹೇಳುವುದು, ದೇಹದಿಂದ ಆತ್ಮದ ಬೇರ್ಪಡಿಸುವಿಕೆ, ಯಮುನಾ ನದಿಯ ಸೃಷ್ಟಿ, ಸಮಾಧಿ ಸ್ಥಿತಿಗೆ ತಲುಪುವುದು, ರೋಗಿಗಳನ್ನು ಕ್ಷಣಾರ್ಧದಲ್ಲಿ ಗುಣಮುಕ್ತರನ್ನಾಗಿ ಮಾಡುವುದು, ಕರುಳು ಮತ್ತಿತರ ಹೊಟ್ಟೆಯ ಭಾಗಗಳನ್ನು ಹೊಟ್ಟೆಯಿಂದ ತೆಗೆದು ಮತ್ತೆ ಹಾಗೆ ಕೂಡಿಸುವುದು,ಬೀಳುತ್ತಿದ್ದ ಮಸೀದಿಯನ್ನು ನೋಟದಿಂದಲೇ ತಡೆದಿದ್ದು, ತಮ್ಮ ಭಕ್ತರಿಗೆ ಪವಾಡ ಸದೃಶವಾಗಿ ಸಹಾಯ ಮಾಡುತ್ತಿದ್ದ ಎಷ್ಟೋ ಉದಾಹರಣೆಗಳು ಇವೆ.
ಸಾಯಿ ಬಾಬಾ ಚಿತ್ರಮಾಹಿತಿ
ಬದಲಾಯಿಸಿ-
ಶಿರಡಿ ಸಾಯಿಬಾಬಾರ ನಿಜ ಚಿತ್ರ
-
೧೯೧೮ರಲ್ಲಿ ಭಕ್ತರೊಂದಿಗೆ ಸಾಯಿಬಾಬಾ
-
೧೯೧೦ರ ದಶಕದಲ್ಲಿ ದ್ವಾರಕಾಮಾಯಿಯಲ್ಲಿ ಸಾಯಿ ಬಾಬಾ
-
ಕುಳಿತ ಭಂಗಿಯಲ್ಲಿ ಸಾಯಿ ಬಾಬಾ
-
ಅಧ್ಯಯನಶೀಲರಾಗಿರುವ ಶಿರಡಿ ಸಾಯಿನಾಥರು
-
ಭಕ್ತರೊಂದಿಗೆ ಸಾಯಿ ಬಾಬಾ
-
ಸಾಯಿಬಾಬಾ ನಡಿಗೆ
-
ಶ್ವಾನವೊಂದಕ್ಕೆ ಆಹಾರ ತಿನಿಸುತ್ತಿರುವ ಸಾಯಿ ಬಾಬಾ