'ವೈಯೆನ್ಕೆ ಎಂದೇ ಚಿರಪರಿಚಿತರಾಗಿದ್ದ ಹಿರಿಯ ಕನ್ನಡ ಪತ್ರಕರ್ತ ವೈ.ಎನ್.ಕೃಷ್ಣಮೂರ್ತಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದು `ದೇಶಬಂಧು ಪತ್ರಿಕೆಯ ಮೂಲಕ. ಪ್ರಜಾವಾಣಿ ಪತ್ರಿಕೆಯ ಆರಂಭದ ದಿನಗಳಲ್ಲೇ ಸೇರ್ಪಡೆಯಾದ ವೈಯೆನ್ಕೆ ತಮ್ಮ ಚುರುಕು ಬರಹಗಳಿಗೆ ಹೆಸರಾದವರು. ಪ್ರಜಾವಾಣಿ ಪತ್ರಿಕೆಗೆ ಸಾಹಿತ್ಯಿಕ ಆಯಾಮ ದೊರಕಿಸಿಕೊಟ್ಟ ಕೀರ್ತಿ ಅವರದು. ಯು.ಆರ್.ಅನಂತ ಮೂರ್ತಿ, ಗಿರೀಶ ಕಾರ್ನಾಡ, ಬಿ.ವಿ.ಕಾರಂತ, ಪಿ.ಲಂಕೇಶ, ಬಿ.ಸಿ.ರಾಮಚಂದ್ರ ಶರ್ಮ ಮುಂತಾದ ನವ್ಯ, ನವ್ಯೋತ್ತರ ಸಾಹಿತಿಗಳಿಗೆ ಪ್ರಜಾವಾಣಿ ವೇದಿಕೆಯಾಯಿತು. ಹೊಸ ಅಲೆಯ ಸಿನಿಮಾ, ಅಸಂಗತ ನಾಟಕ ಹೀಗೆ ಹತ್ತು ಹಲವಾರು ಹೊಸತನಗಳಿಗೆ ಪ್ರಜಾವಾಣಿಯ ವೈಯೆನ್ಕೆ ನೇತೃತ್ವದ ತಂಡ ಸ್ಫೂರ್ತಿನೀಡಿತು. ಹೊಸ ಬರಹಗಾರರಿಗೆ ದೀವಟಿಗೆಯಾಯಿತು. ಸುದ್ದಿ ಸಂಪಾದಕರಾಗಿ, ಪತ್ರಿಕೆಯ ಮೂರನೆಯ ಸಂಪಾದಕೀಯ ಬರಹಗಾರರಾಗಿ, ಸಂಪಾದಕರಾಗಿ ವೈಯೆನ್ಕೆ ಪ್ರಜಾವಾಣಿ ಪತ್ರಿಕೆಗೆ ನೀಡಿದ ಕೊಡುಗೆ ಅಪಾರ. ನಿವೃತ್ತಿಯ ನಂತರ ಉದಯವಾಣಿ ಪತ್ರಿಕೆಗಾಗಿ ಅವರು ಬರೆಯುತ್ತಿದ್ದ ವಂಡರ್ ಕಣ್ಣು ಅಂಕಣ ದೇಶ, ವಿದೇಶ ಸಾಹಿತ್ಯಕ್ಕೆ ಬೆಳಕಿಂಡಿಯಾಗಿತ್ತು, ನವಿರು ಹಾಸ್ಯದ ಚಿಗುರಾಗಿತ್ತು. ಮುಂದೆ ಕನ್ನಡ ಪ್ರಭ ಪತ್ರಿಕೆಯ ಸಂಪಾದಕರಾಗಿ ನವೋಲ್ಲಾಸದ ಸಾಹಿತ್ಯ್ವ ವೇದಿಕೆಯನ್ನು ಸೃಷ್ಟಿಸಿದರು.