ವಿ. ದೇಶಿಕಾಚಾರ್ (ಆಗಸ್ಟ್ ೨೯, ೧೯೨೪ - ೨೦೦೧) ವೇಣುವಾದಕರಾಗಿ, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪ್ರಖ್ಯಾತರೆನಿಸಿದ್ದಾರೆ'.

ವಿ. ದೇಶಿಕಾಚಾರ್
ಜನನಆಗಸ್ಟ್ ೨೯, ೧೯೨೪
ಹಾಸನ ಜಿಲ್ಲೆಯ ದೊಡ್ಡಗದ್ದುವಳ್ಳಿ
ಮರಣ೨೦೦೧
ಗಮನಾರ್ಹ ಕೆಲಸಗಳುವೇಣು ವಾದನ, ಕರ್ನಾಟಕ ಶಾಸ್ತ್ರೀಯ ಸಂಗೀತ

ವೇಣುವಾದನದಲ್ಲಿ ಪ್ರಖ್ಯಾತರಾಗಿದ್ದ ವಿ. ದೇಶಿಕಾಚಾರ್ ಅವರು ಹಾಸನ ಜಿಲ್ಲೆಯ ದೊಡ್ಡಗದ್ದುವಳ್ಳಿ ಗ್ರಾಮದಲ್ಲಿ ಆಗಸ್ಟ್ ೨೯, ೧೯೨೪ರ ವರ್ಷದಲ್ಲಿ ಜನಿಸಿದರು. ಅವರ ತಂದೆ ಎಂ. ವೆಂಕಟೇಶ ಅಯ್ಯಂಗಾರ್ಯರು ವೀಣೆ ಮತ್ತು ಕೊಳಲು ವಾದನಗಳೆರಡರಲ್ಲೂ ಪಾಂಡಿತ್ಯ ಪಡೆದವರಾಗಿದ್ದು ಮೈಸೂರು ಮಹಾರಾಜರ ಸಾಮ್ರಾಜ್ಯದಲ್ಲಿ ಆಸ್ಥಾನ ವಿದ್ವಾಂಸರಾಗಿದ್ದರು. ತಾಯಿ ಸಂಗೀತ ಪ್ರೇಮಿ ಶ್ರೀರಂಗಮ್ಮನವರು. ಅಣ್ಣ ವೈಣಿಕ ವಿದ್ವಾಂಸರಾಗಿ ಜಗತ್ಪ್ರಸಿದ್ಧರಾದ ವೀಣಾ ದೊರೆಸ್ವಾಮಿ ಅಯ್ಯಂಗಾರ್ಯರು.

ಸಂಗೀತಗಾರರ ಮನೆತನದಲ್ಲಿ ಬೆಳೆದದ್ದರಿಂದ ದೇಶಿಕಾಚಾರ್ಯರಿಗೆ ಸಂಗೀತಾಸಕ್ತಿ ಜನ್ಮಜಾತವಾಗಿತ್ತು. ಓದಿನಲ್ಲಿ ಬಿ.ಎಸ್‌.ಸಿ. ಪದವೀಧರರಾದ ದೇಶಿಕಾಚಾರ್ ಅವರು ಬಿ. ಶಿವರಾಮಯ್ಯನವರಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದು ನಂತರ ವಿಶ್ವವಿಖ್ಯಾತ ಟಿ.ಆರ್. ಮಹಾಲಿಂಗಂ ಅವರ ಅಚ್ಚುಮೆಚ್ಚಿನ ಶಿಷ್ಯರಾಗಿ ವೇಣು ವಾದನದಲ್ಲಿ ಸಿದ್ಧಿ ಪಡೆದರು. ಎಲ್‌. ಎಸ್‌. ನಾರಾಯಣಸ್ವಾಮಿ ಭಾಗವತರು, ನಾರಾಯಣಮೂರ್ತಿ, ಬೆಳಕವಾಡಿ ವರದರಾಜ ಐಯ್ಯಂಗಾರ್ ಅವರುಗಳ ಶಿಕ್ಷಣದಲ್ಲಿ ಗಾಯನವನ್ನೂ ಮತ್ತು ಎಚ್‌. ಪುಟ್ಟಾಚಾರ್ ಹಾಗೂ ಸಿ. ಸುಬ್ಬು ಅವರ ಬಳಿ ಮೃದಂಗ ವಾದನವನ್ನೂ ಸಹ ಅಭ್ಯಾಸ ಮಾಡಿದರು.

ಪ್ರಖ್ಯಾತಿ

ಬದಲಾಯಿಸಿ

೧೯೪೧ರಲ್ಲಿ ಅಂತರ ವಿಶ್ವವಿದ್ಯಾಲಯದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು 1943 ರಿಂದ ಕಛೇರಿ ಜೀವನ ಆರಂಭಿಸಿದ ದೇಶಿಕಾಚಾರ್ ಅವರು ನಾಡಿನ ಹೆಸರಾಂತ ಸಭೆ ಸಂಸ್ಥೆಗಳಿಂದ ಪ್ರತಿಷ್ಠಿತ ವೇದಿಕೆಗಳಿಂದ ಶ್ರೋತೃಗಳಿಗೆ ವೇಣುನಾದದ ಅಮೃತಪಾನ ಮಾಡಿಸಿದರು. ಮೈಸೂರು ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ದೇಶಿಕಾಚಾರ್ಯರು ದೂರದರ್ಶನ ಹಾಗೂ ಆಕಾಶವಾಣಿಯಲ್ಲೂ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದರು. ಅವರ ಕಾರ್ಯಕ್ರಮಗಳು ಆಕಾಶವಾಣಿಯ ರಾಷ್ಟ್ರೀಯ ಜಾಲದಲ್ಲಿ ಪ್ರಸಾರಗೊಳ್ಳುತ್ತಿದ್ದವು. ಅವರು ಹಲವಾರು ಅಂತರರಾಷ್ಟ್ರೀಯ ಸಂಗೀತ ಸಾಂಸ್ಕೃತಿಕ ಉತ್ಸವಗಳಲ್ಲಿಯೂ ಪಾಲ್ಗೊಂಡಿದ್ದರು.

ಪ್ರಶಸ್ತಿ ಗೌರವಗಳು

ಬದಲಾಯಿಸಿ

ಚೆನ್ನೈ ಮ್ಯೂಸಿಕ್‌ ಅಕಾಡಮಿ ಪ್ರಶಸ್ತಿ, ಬೆಂಗಳೂರಿನ ಮ್ಯೂಸಿಕ್‌ ಅಕಾಡಮಿಯಿಂದ ಟಿ. ಚೌಡಯ್ಯ ಪ್ರಶಸ್ತಿ, ಮೈಸೂರಿನ ಸರಸ್ವತಿ ಗಾನ ಕಲಾ ಮಂದಿರದ ವೇಣು ಗಾನ ವಿದ್ಯಾವಾರಿಧಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಕರ್ನಾಟಕ ಕಲಾತಿಲಕ, ಕರ್ನಾಟಕ ಗಾನ ಕಲಾ ಪರಿಷತ್ತಿನ ಸಂಗೀತ ಸಮ್ಮೇಳನದ ಅಧ್ಯಕ್ಷತೆ ಮತ್ತು ಗಾನ ಕಲಾಭೂಷಣ ಮುಂತಾದ ಪ್ರಶಸ್ತಿಗಳು ಅವರನ್ನರಸಿ ಬಂದಿದ್ದವು. .

ಅನೇಕ ಶಿಷ್ಯರನ್ನು ತಯಾರುಮಾಡಿದ್ದ ವಿ. ದೇಶಿಕಾಚಾರ್ ಅವರು ೨೦೦೧ರ ವರ್ಷದಲ್ಲಿ ಈ ಲೋಕವನ್ನಗಲಿದರು. ವಿ. ದೇಶಿಕಾಚಾರ್ ಅಕಾಡೆಮಿಯ ವತಿಯಿಂದ ಪ್ರತಿವರ್ಷ ಅವರ ಸ್ಮರಣೆಯಲ್ಲಿ ಸಂಗೀತೋತ್ಸವಗಳನ್ನು ನಡೆಸಲಾಗುತ್ತಿದೆ.

ಮಾಹಿತಿ ಕೃಪೆ

ಬದಲಾಯಿಸಿ

ಕಣಜ Archived 2014-04-03 ವೇಬ್ಯಾಕ್ ಮೆಷಿನ್ ನಲ್ಲಿ.