ವಿಶೇಷ ಭದ್ರತಾ ಪಡೆ

ಭಾರತೀಯ ವಿಶೇಷ ಭದ್ರತಾ ಪಡೆ
ವಿಶೇಷ ಭದ್ರತಾ ಪಡೆ
ಕಿರುರೂಪಎಸ್‌ಪಿಜಿ
ಧ್ಯೇಯವಾಕ್ಯಶೌರ್ಯ, ಸಮರ್ಪಣೆ, ಸುರಕ್ಷತೆ
ಸಂಸ್ಥೆಯ ಮೇಲ್ನೋಟ
ಸ್ಥಾಪನೆ೮ ಎಪ್ರಿಲ್, ೧೯೮೫
ಸಕ್ರಿಯ ಸದಸ್ಯರು೩೦೦೦ ಸಕ್ರಿಯ ಸದಸ್ಯರು
ವಾರ್ಷಿಕ ಆಯವ್ಯಯ೫೩೫ ಕೋಟಿ (ಯುಎಸ್$೧೧೮.೭೭ ದಶಲಕ್ಷ)(೨೦೧೯-೨೦ ಅಂದಾಜು.)
ನ್ಯಾಯವ್ಯಾಪ್ತಿಯ ರಚನೆ
International agencyಭಾರತ
Countriesಸ್ವದೇಶ ಮತ್ತು ವಿದೇಶ[]
ಕಾರ್ಯಾಚರಣೆಯ ವ್ಯಾಪ್ತಿಭಾರತ
ಆಡಳಿತ ಮಂಡಳಿ[[ಟೆಂಪ್ಲೇಟು:Trim brackets]]
ಕಾಯಿದೆ
ಮುಖ್ಯ ಕಾರ್ಯಾಲಯನವ ದೆಹಲಿ

ನಿರ್ವಹಣಾ ಮುಖ್ಯಸ್ಥರು
  • ಅರುಣ್ ಕುಮಾರ್ ಸಿನ್ಹಾ. IPS, ನಿರ್ದೇಶಕ.
Website
www.spg.nic.in

ಪೀಠಿಕೆ

ಬದಲಾಯಿಸಿ

ನೀವು ಗಮನಿಸಿರಬಹುದು, ನಮ್ಮ ದೇಶದ ಪ್ರಧಾನಿಯವರು ಯಾವುದಾದರೂ ಕಾರ್ಯಕ್ರಮದ ಪ್ರಯುಕ್ತ ಬಂದಿಳಿದಾಗ, ಸುಮಾರು ೫೦-೬೦ ಮಂದಿ ಸೂಟು ಬೂಟುಧಾರಿ ಅಧಿಕಾರಿಗಳು ಪ್ರಧಾನಿಯವರನ್ನು ಸುತ್ತುವರಿದಿರುತ್ತಾರೆ. ಪ್ರಧಾನಿಗಳು ಮುಂದೆ ಸಾಗಿದಂತೆಲ್ಲ ಈ ಅಧಿಕಾರಿಗಳು ಒಂದು ನಿರ್ದಿಷ್ಟ ಅಂತರದಲ್ಲಿ ಚಲಿಸುತ್ತಾರೆ. ಒಬ್ಬರ ಕೈಯ್ಯಲ್ಲಿ ತೆಳ್ಳಗಿನ ಬ್ರೀಫ್‌ಕೇಸ್ ಇದ್ದರೆ ಮತ್ತೆ ಕೆಲವರು ಕೈಯ್ಯಲ್ಲಿ ಕಂಡೂ ಕಾಣದಂತೆ ಬಂದೂಕು ಹಿಡಿದಿರುತ್ತಾರೆ ! ಇವರು ಯಾರ ಮುಖದಲ್ಲೂ ನಗುವಿನ ಛಾಯೆಯೇ ಕಾಣುವುದಿಲ್ಲ. ಶುಷ್ಕ ಮುಖದ ಇವರು ಕೆಲವೊಮ್ಮೆ ಹಾಲಿವುಡ್ ಸಿನೆಮಾ ಮೆನ್ ಇನ್ ಬ್ಲಾಕ್ ಚಲನಚಿತ್ರದ ಪಾತ್ರಧಾರಿಗಳಂತೆ ಕಾಣುತ್ತಾರೆ. ಇವರು ಬೇರೆ ಯಾರೂ ಅಲ್ಲ, ಭಾರತ ಸರ್ಕಾರದ ಕಾರ್ಯಾಂಗದ ಮುಖ್ಯಸ್ಥರಾದ ಮತ್ತು ಶಾಸಕಾಂಗದ ಸದಸ್ಯರಾದ ಪ್ರಧಾನಮಂತ್ರಿಗಳಿಗೆ ಮತ್ತು ಅವರ ಸಮೀಪ ಕುಟುಂಬ ಸದಸ್ಯರಿಗೆ ಅತ್ಯುನ್ನತ ಮಟ್ಟದ ಸುರಕ್ಷತೆಯನ್ನು ನೀಡಲೆಂದೇ ನಿಯೋಜಿತರಾದ ವಿಶೇಷ ಭದ್ರತಾ ಪಡೆಯ ಸಿಬ್ಬಂದಿಗಳು ! ಆಂಗ್ಲ ಭಾಷೆಯಲ್ಲಿ ಸ್ಪೆಶಲ್ ಪ್ರೊಟೆಕ್ಷನ್ ಗ್ರೂಪ್ (ಎಸ್‌ಪಿಜಿ).

ಇತಿಹಾಸ

ಬದಲಾಯಿಸಿ

ಈ ವಿಶೇಷ ಭದ್ರತಾ ಪಡೆಯನ್ನು ವಿಶೇಷ ಭದ್ರತಾ ಪಡೆ ಕಾಯಿದೆ ೧೯೮೮ರ ಅನ್ವಯ ೧೯೮೮ರಲ್ಲಿ ಸ್ಥಾಪಿಸಲಾಯಿತು.[]

೧೯೮೧ಕ್ಕಿಂತ ಮುಂಚೆ ಪ್ರಧಾನಿಯ ಅಧಿಕೃತ ಕಚೇರಿಯ ಭದ್ರತಾ ಹೊಣೆ ದಿಲ್ಲಿ ಪೊಲೀಸಿನ ಸ್ಪೆಷಲ್ ಸೆಕ್ಯುರಿಟಿ ವಿಭಾಗದ್ದಾಗಿತ್ತು. ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಡಿಸಿಪಿ) ಅವರು ಈ ಸಂಸ್ಥೆಯ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಮುಂದೆ ೧೯೮೧ರ ಅಕ್ಟೋಬರ್‌ನಲ್ಲಿ ವಿಶೇಷ ಕಾರ್ಯಪಡೆ (ಸ್ಪೆಷಲ್ ಟಾಸ್ಕ್ ಫೋರ್ಸ್- ಎಸ್‌ಟಿಎಫ್)ಯೊಂದನ್ನು ರಚಿಸಲಾಯಿತು. ಹೊಸದಿಲ್ಲಿಯ ಹೊರಗೆ ಪ್ರಧಾನಿಗೆ ಬೆಂಗಾವಲು ಭದ್ರತೆಯ ಜವಾಬ್ದಾರಿ ಈ ವಿಶೇಷ ಕಾರ್ಯಪಡೆಯದ್ದಾಗಿತ್ತು.

ಆದರೆ, 1984ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯಾದ ಬಳಿಕ, ಪ್ರಧಾನಿಯವರ ಭದ್ರತೆಯ ಚಿತ್ರಣವು ಪೂರ್ಣವಾಗಿ ಬದಲಾಯಿತು ಎನ್ನಬಹುದು. ಈ ವೇಳೆ, ಕಾರ್ಯದರ್ಶಿಗಳ ಮಟ್ಟದ ಸಮಿತಿಯೊಂದು ಸಭೆ ಸೇರಿ, ಹೊಸದಿಲ್ಲಿಯಲ್ಲಿ ಹಾಗೂ ಹೊಸದಿಲ್ಲಿಯ ಆಚೆಗೂ ಪ್ರಧಾನಿಗೆ ಭದ್ರತೆ ನೀಡುವ ಹೊಣೆಯನ್ನು ವಿಶೇಷ ಕಾರ್ಯಪಡೆಗೆ ವಹಿಸಲಾಯಿತು. ಜೊತೆಗೇ ಪ್ರಧಾನಿಯವರ ಭದ್ರತೆಗೆ ಸಂಬಂಧಿಸಿದಂತೆ, ೧೯೮೫ರಲ್ಲಿ ಬೀರಬಲ್ ನಾಥ್ ಸಮಿತಿಯನ್ನು ಕೇಂದ್ರ ಗೃಹಸಚಿವಾಲಯವು ರಚಿಸಿತು. ಈ ಸಮಿತಿಯ ಶಿಫಾರಸ್ಸಿನಂತೆ ವಿಶೇಷ ಸಂರಕ್ಷಣಾ ಘಟಕ (ಎಸ್‌ಪಿಪಯು)ವೊಂದನ್ನು ಅಸ್ತಿತ್ವಕ್ಕೆ ತರಲಾಯಿತು. ಇದಕ್ಕಾಗಿ ಸಂಪುಟ ಕಾರ್ಯದರ್ಶಿ ಅಧೀನದಲ್ಲಿ ಸುಮಾರು ೮೦೧ರಷ್ಟು ಹುದ್ದೆಗಳನ್ನು ಸೃಷ್ಟಿಸಲಾಯಿತು. ಸ್ವಲ್ಪ ಸಮಯದ ನಂತರ, ಈ ವಿಶೇಷ ಭದ್ರತಾ ಘಟಕವನ್ನು, ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಎಂದು ಮರುನಾಮಕರಣ ಮಾಡಲಾಯಿತು ಮತ್ತು ಘಟಕದ ಮುಖ್ಯಸ್ಥರಾದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲೀಸ್(ಐಜಿಪಿ) ಹುದ್ದೆಯನ್ನು ನಿರ್ದೇಶಕ ಎಂದು ಬದಲಾಯಿಸಲಾಯಿತು. ಹೀಗೆ, ೧೯೮೫ ಎಪ್ರಿಲ್ ೮ರಂದು, ವಿಶೇಷ ಭದ್ರತಾ ಪಡೆಯು ಅಧೀಕೃತವಾಗಿ ಅಸ್ತಿತ್ವಕ್ಕೆ ಬಂತು. ಡಾ. ಎಸ್ ಸುಬ್ರಮಣ್ಯಮ್ ಅವರು ಈ ಸಂಸ್ಥೆಯ ಪ್ರಥಮ ನಿರ್ದೇಶಕರಾಗಿ ಆಯ್ಕೆಯಾದರು.

ವಿಶೇಷ ಭದ್ರತಾ ಪಡೆಯು ಕೇವಲ ಯಾವುದೋ ಅನಾಮಿಕ ಭದ್ರತಾ ಸಂಸ್ಥೆಯಲ್ಲ. ಭಾರತ ಸರ್ಕಾರದ ಕಾರ್ಯಾಂಗದ ಮುಖ್ಯಸ್ಥರು ಮತ್ತು ಶಾಸಕಾಂಗದ ಸದಸ್ಯರಾದ ಪ್ರಧಾನಮಂತ್ರಿಗಳಿಗೆ ಮತ್ತು ಅವರ ಸಮೀಪ ಕುಟುಂಬ ಸದಸ್ಯರಿಗೆ ಅತ್ಯುನ್ನತ ಮಟ್ಟದ ಸುರಕ್ಷತೆಯನ್ನು ನೀಡಲೆಂದೇ ಸ್ಥಾಪಿಸಲಾದ ಒಂದು ಭದ್ರತಾ ಸಂಸ್ಥೆ. ಅವರಿಗೆ ಗರಿಷ್ಟ ಮಟ್ಟದ ಸುರಕ್ಷತೆಯನ್ನು ಖಾತರಿಪಡಿಸುವುದೇ ವಿಶೇಷ ಭದ್ರತಾ ಪಡೆಯ ಏಕೈಕ ಜವಾಬ್ದಾರಿಯಾಗಿರುತ್ತದೆ. ವಿಶೇಷ ಭದ್ರತಾ ಪಡೆಯ ನೀತಿ ನಿಯಮಗಳು, ಕಾರ್ಯಾಚರಣೆ, ಯುದ್ಧತಂತ್ರ, ನಿರ್ವಹಣೆ, ತರಬೇತಿ- ಈ ಎಲ್ಲದರ ಬಗೆಗಿನ ಮಾರ್ಗಸೂಚಿಗಳನ್ನು ನೀಲಿಪುಸ್ತಕದಲ್ಲಿ ಬರೆದಿಡಲಾಗಿದೆ. ಕಾಲಕ್ಕೆ ತಕ್ಕಂತೆ, ಬದಲಾಗುತ್ತಿರುವ ರಾಜಕೀಯ, ತಾಂತ್ರಿಕ, ಸನ್ನಿವೇಶವನ್ನು ಗಮನದಲ್ಲಿ ಇಟ್ಟುಕೊಂಡು, ವಿಶೇಷ ಭದ್ರತಾ ಪಡೆಯು ತನ್ನ ಆಂತರಿಕ ಸಂರಚನೆ, ಕಾರ್ಯನಿರ್ವಹಣೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಇರಬೇಕಾಗುತ್ತದೆ.

ನಿಯಂತ್ರಣ ಮತ್ತು ಅಧಿಕಾರ

ಬದಲಾಯಿಸಿ

ವಿಶೇಷ ಭದ್ರತಾ ಪಡೆಯ ನಿರ್ವಹಣೆ, ನಿರ್ದೇಶನ ಮತ್ತು ನಿಯಂತ್ರಣ ಸಂಪೂರ್ಣವಾಗಿ ಕೇಂದ್ರ ಸರಕಾರದ ಕೈಯಲ್ಲಿರುತ್ತದೆ. ಇದರ ಮುಖ್ಯಸ್ಥರನ್ನು ನಿರ್ದೇಶಕ ಎಂದು ಕರೆಯುತ್ತಾರೆ. ಇವರು ವಿಶೇಷ ಭದ್ರತಾ ಪಡೆಯ ಮೇಲ್ವಿಚಾರಣೆ ಮತ್ತು ನಿಯಂತ್ರಣವನ್ನು ನಿಭಾಯಿಸುತ್ತಾರೆ. ಇನ್ನು, ವಿಶೇಷ ಭದ್ರತಾ ಪಡೆಯ ಸ್ಥಾಪನೆ ಆದಂದಿನಿಂದಲೂ ಭಾರತೀಯ ಪೋಲೀಸ್ ವಿಭಾಗದ ಹಿರಿಯ ಅಧಿಕಾರಿಗಳೇ ಇದರ ನಿರ್ದೇಶಕರಾಗಿರುವುದು ವಿಶೇಷವಾಗಿದೆ. ಪ್ರಸ್ತುತ, ಅರುಣ್ ಕುಮಾರ್ ಸಿನ್ಹಾ ಅವರು ವಿಶೇಷ ಭದ್ರತಾ ಪಡೆಯ ಪ್ರಸಕ್ತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನೇಮಕಾತಿ ಮತ್ತು ತರಬೇತಿ

ಬದಲಾಯಿಸಿ

ವಿಶೇಷ ಭದ್ರತಾ ಪಡೆಗೆ ಬೇಕಾದ ಸಿಬ್ಬಂದಿಗಳನ್ನು ಬಾಹ್ಯ ಮೂಲದ ಬದಲಾಗಿ, ವಿವಿಧ ಆಂತರಿಕ ಮೂಲದಿಂದ -ಅಂದರೆ ಸೇನೆಯ ವಿವಿಧ ವಿಭಾಗಗಳಾದ ಸಿಆರ್‌ಪಿಎಫ್, ಗಡಿ ಭದ್ರತಾ ಪಡೆ ಮತ್ತು ಸ್ಥಳೀಯ ಪೋಲೀಸ್ ಇಲಾಖೆಯಿಂದ ನೇಮಕ ಮಾಡಿಕೊಳ್ಳಲಾಗುತ್ತದೆ. ಆಯ್ಕೆ ಪ್ರಕ್ರಿಯೆಯ ಮೊದಲ ಹಂತವೆಂದರೆ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಅಥವಾ ಐಜಿ, ಇಬ್ಬರು ಉಪ ಐಜಿಗಳು ಮತ್ತು ಇಬ್ಬರು ಸಹಾಯಕ ಐಜಿಗಳು ಸೇರಿ ನಡೆಸುವ ಮೌಖಿಕ ಸಂದರ್ಶನ. ಪ್ರಚಲಿತ ವಿದ್ಯಾಮಾನದಿಂದ ಹಿಡಿದು ಸಾಮಾನ್ಯ ಜ್ಙಾನ, ಸಾಮಾನ್ಯ ಗಣಿತ, ಅಭ್ಯರ್ಥಿಯು ವಿಶೇಷ ಭದ್ರತಾ ಪಡೆಗೆ ಸೇರಲು ಏಕೆ ಬಯಸುತ್ತಾನೆ ಎಂಬುದರ ಬಗ್ಗೆ ಪ್ರಶ್ನೆಗಳಿರುತ್ತವೆ. ನಂತರ ಲಿಖಿತ ಪರೀಕ್ಷೆಯನ್ನು ಸಹ ನಡೆಸಲಾಗುತ್ತದೆ. ಈ ವಿಭಾಗದಲ್ಲಿ ಉತ್ತೀರ್ಣನಾದ ಅಭ್ಯರ್ಥಿಯು ದೈಹಿಕ ಪರೀಕ್ಷೆ, ಮತ್ತು ಮಾನಸಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ತರಬೇತಿಗೆ ಕಳಿಸಲಾಗುತ್ತದೆ ತರಬೇತಿಯ ಮೊದಲ ಹಂತದಲ್ಲಿ ಶಸ್ತ್ರಾಸ್ತ್ರ ಸಹಿತ ಮತ್ತು ಶಸ್ತ್ರಾಸ್ತ್ರ ರಹಿತ ಯುದ್ಧದ ಬಗೆಗಿನ ಮಾಹಿತಿ ವಿಷಯಗಳನ್ನು ಹೇಳಿಕೊಡಲಾಗುತ್ತದೆ ಮತ್ತು ಸಾಪ್ತಾಹಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ತರಬೇತಿ ಸಮಯದಲ್ಲಿ ನಿಗದಿತ ಗ್ರೇಡ್ ಗಳಿಸಲು ವಿಫಲರಾದವರನ್ನು ಮುಂದಿನ ಬ್ಯಾಚಿಗೆ ವರ್ಗಾಯಿಸಲಾಗುತ್ತದೆ. ಅವರು ಅಲ್ಲಿಯೂ ವಿಫಲವಾದರೆ, ಕೊನೆಗೆ ಅವರನ್ನು ತರಬೇತಿಯಿಂದ ಬಿಡುಗಡೆಗೊಳಿಸಿ, ಮೂಲ ಘಟಕಗಳಿಗೆ ಹಿಂದೆ ಕಳಿಸಲಾಗುತ್ತದೆ. ಇದಲ್ಲದೆ, ವಿಶೇಷ ಭದ್ರತಾ ಪಡೆಯಲ್ಲಿ ತಮ್ಮ ನಿರ್ದಿಷ್ಟ ಸಮಯದ ಸೇವಾವಧಿ ಮುಗಿದ ತಕ್ಷಣ, ಈ ಸಿಬ್ಬಂದಿಗಳು ತಮ್ಮ ಮೂಲ ಘಟಕಗಳಿಗೆ ಮರಳಬೇಕಾಗುತ್ತದೆ.

ಪ್ರಸ್ತುತ ಭದ್ರತಾ ವ್ಯಾಪ್ತಿ

ಬದಲಾಯಿಸಿ

ಇತ್ತೀಚಿನವರೆಗೆ, ಎಸ್‌ಪಿಜಿ ಭದ್ರತೆಯನ್ನು ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿತ್ತು, ಆದರೆ ಸಂಸತ್ತಿನಲ್ಲಿ ಮಂಡಿಸಲ್ಪಟ್ಟ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ತಿದ್ದುಪಡಿ ಕಾಯಿದೆಯ ಅನ್ವಯ, ಸೋನಿಯಾ ಮತ್ತವರ ಕುಟುಂಬಕ್ಕೆ ನೀಡಲಾದ ಎಸ್ ಪಿ ಜಿ ಭದ್ರತೆಯ ಬದಲಾಗಿ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಗಿದೆ. ಪ್ರಸ್ತುತ, ಎಸ್ ಪಿ ಜಿ ಭದ್ರತೆಯನ್ನು ಪ್ರಸಕ್ತ ಪ್ರಧಾನಮಂತ್ರಿಗಳು ಮತ್ತು ಅವರ ಹತ್ತಿರದ ಕುಟುಂಬ ಸದಸ್ಯರಿಗೆ ಮಾತ್ರ ನೀಡಲಾಗುತ್ತಿದೆ.

ಸಂರಚನೆ

ಬದಲಾಯಿಸಿ

ವಿಶೇಷ ಭದ್ರತಾ ಪಡೆಯನ್ನು ಆಂತರಿಕವಾಗಿ ೪ ಭಾಗಗಳಾಗಿ ವಿಭಜಿಸಲಾಗಿದೆ.

  • ಆಡಳಿತ ವಿಭಾಗವು ವಿಶೇಷ ಭದ್ರತಾ ಪಡೆಯ ಆಂತರಿಕ ಹಣಕಾಸು ವ್ಯವಸ್ಥೆ, ಯೋಜನೆ, ಸಿಬ್ಬಂದಿ ನೇಮಕಾತಿ ಮತ್ತಿತರ ವಿಷಯಗಳ ಬಗ್ಗೆ ಗಮನ ಹರಿಸುತ್ತದೆ.
  • ಕಾರ್ಯಾಚರಣಾ ವಿಭಾಗವು ಪ್ರಧಾನಿಗಳು ಮತ್ತವರ ಕುಟುಂಬವರ್ಗಕ್ಕೆ ನೀಡಬೇಕಾದ ಭದ್ರತೆಯ ಬಗ್ಗೆ, ಭದ್ರತಾ ನಿಯೋಜನೆಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತದೆ. ಈ ವಿಭಾಗದಲ್ಲಿ ಇನ್ನೂ ಮೂರು ಉಪವಿಭಾಗಗಳು ಇವೆ. ಅವು: ಸಂವಹನ, ತಾಂತ್ರಿಕತೆ ಮತ್ತು ಸಾರಿಗೆ.
  • ತರಬೇತಿ ವಿಭಾಗದಲ್ಲಿ ಸಿಬಂದಿಗಳಿಗೆ ಪ್ರಸ್ತುತ ಸಮಯಕ್ಕೆ ತಕ್ಕಂತೆ ತರಬೇತಿ ನೀಡಲಾಗುತ್ತದೆ. ದೈಹಿಕ ಕಸರತ್ತಿನ ಜೊತೆಜೊತೆಗೆ ಅತ್ಯಾಧುನಿಕ ಯುದ್ಧತಂತ್ರಗಳ ಬಗ್ಗೆ, ಆಧುನಿಕ ಆಯುಧಗಳನ್ನು ಬಳಸುವ ಬಗ್ಗೆ, ಶಾರ್ಪ್ ಶೂಟಿಂಗ್, ವಿಧ್ವಂಸಕ ಕೃತ್ಯ ತಡೆ ಮುಂತಾದ ಬಗ್ಗೆ ಸತತ ತರಬೇತಿ ನೀಡಲಾಗುತ್ತದೆ.
  • ಗುಪ್ತವಾರ್ತೆ ಮತ್ತು ಪ್ರವಾಸ ವಿಭಾಗವು, ಪ್ರಧಾನಿಗಳು ತಲುಪಬೇಕಾದ ಸ್ಥಳದ ಬಗೆಗಿನ ಮಾಹಿತಿ ಕಲೆ ಹಾಕುವುದು, ಅಲ್ಲಿನ ಸ್ಥಳೀಯ ಸನ್ನಿವೇಶಕ್ಕೆ ತಕ್ಕ ಹಾಗೆ ಭದ್ರತಾ ಏರ್ಪಾಡುಗಳನ್ನು ನೋಡಿಕೊಳ್ಳುವುದು ಮುಂತಾದ ಕೆಲಸಗಳನ್ನು ನೋಡಿಕೊಳ್ಳುತ್ತದೆ.

ಸಮವಸ್ತ್ರ ಮತ್ತು ಉಡುಪು

ಬದಲಾಯಿಸಿ

ಸಾಮಾನ್ಯವಾಗಿ, ವಿಶೇಷ ಭದ್ರತಾ ಪಡೆಯ ಏಜೆಂಟ್‌ಗಳು, ಕಪ್ಪು ಬಣ್ಣದ, ಪಾಶ್ಚಾತ್ಯ ಶೈಲಿಯ ಔಪಚಾರಿಕ ಸೂಟು ಬೂಟುಗಳನ್ನು ಧರಿಸುತ್ತಾರೆ, ಜೊತೆಗೇ ಆಕಸ್ಮಿಕ ಸ್ಫೋಟದಿಂದ ತಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ವಿಶೇಷವಾಗಿ ತಯಾರಿಸಿದ ಕಡುಗಪ್ಪು ಕನ್ನಡಕ, ಕದ್ದು ಕೇಳಲಾಗದ ಸಂಪರ್ಕ ಸಾಧನಗಳು, ಮತ್ತು ಮರೆಮಾಚಿರುವ ಮಿನಿ ಬಂದೂಕುಗಳು ಇವರ ಜೊತೆಗೆ ಇರುತ್ತವೆ. ಅಪರೂಪ ಎಂಬಂತೆ, ಕೆಲವೊಂದು ಸಂದರ್ಭಗಳಲ್ಲಿ ಇವರು, ಸಪಾರಿ ಉಡುಪಿನಲ್ಲಿ ಕಾಣಿಸಿಕೊಳ್ಳುವುದೂ ಉಂಟು. ಇನ್ನು, ಸಮವಸ್ತ್ರಧಾರಿ ಕಮಾಂಡೋ ಅಧಿಕಾರಿಗಳು, ಸುಲಭವಾಗಿ ಎಲ್ಲರ ಗಮನ ಸೆಳೆಯುವ ವಿಶೇಷ ದಿರಿಸುಗಳನ್ನು, ಅಂದರೆ ಬುಲೆಟ್‌ಪ್ರೂಫ್ ಜಾಕೆಟ್ಟುಗಳು, ಎದೆಭಾಗದಲ್ಲಿ ಸಿಕ್ಕಿಸಿಕೊಂಡಿರುವ ಸಂಪರ್ಕ ಸಾಧನಗಳು, ಸೊಂಟದಲ್ಲಿ ಪಿಸ್ತೂಲುಗಳು, ಮತ್ತು ಅವುಗಳಿಗೆ ಬೇಕಾದ ಮದ್ದು ಗುಂಡುಗಳು, ಸುಲಭವಾಗಿ ಜಾರದ ಮತ್ತು ಬಲಿಷ್ಟವಾದ ವಿಶೇಷ ಬೂಟುಗಳನ್ನು ಧರಿಸಿರುತ್ತಾರೆ.

ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳು

ಬದಲಾಯಿಸಿ

ಸಮವಸ್ತ್ರಧಾರಿ ಅಧಿಕಾರಿಗಳು ಮತ್ತು ವಿಶೇಷ ಏಜೆಂಟರುಗಳನ್ನು, ಅವರು ಹಿಡಿದಿರುವ ಬಂದೂಕಗಳು ಮತ್ತು ಧರಿಸಿರುವ ಉಡುಗೆ ತೊಡುಗೆಗಳ ಮೂಲಕ ಗುರುತಿಸಬಹುದು. ಪಕ್ಕದ ಚಿತ್ರವನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ!


ಸಮವಸ್ತ್ರಧಾರಿ ಅಧಿಕಾರಿಗಳಿಗೆ

ವಿಶೇಷ ಏಜೆಂಟರುಗಳಿಗೆ

ಉಪಕರಣಗಳು

  • ಆಕಸ್ಮಿಕ ಸ್ಫೋಟದಿಂದ ತೂರಿ ಬರುವ ಅಪಾಯಕಾರಿ ವಸ್ತುಗಳಿಂದ ತಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ವಿಶೇಷವಾಗಿ ತಯಾರಿಸಿದ ಕಡುಗಪ್ಪು ಕನ್ನಡಕ
  • ಕದ್ದು ಕೇಳಲಾಗದ ಸಂಪರ್ಕ ಸಾಧನಗಳು
  • ಹಗುರವಾದ ಮತ್ತು ಉನ್ನತ ದರ್ಜೆಯ (ಕೆವ್ಲಾರ್ ಲೆವೆಲ್ ೩) ಬುಲೆಟ್‌ಪ್ರೂಫ್ ಕವಚಗಳು (ಇವು ಸುಮಾರು ೨.೫ ಕೆಜಿಯಷ್ಟು ತೂಕ ಹೊಂದಿದ್ದು, ೧೦ ಮೀ. ದೂರದಿಂದ, ಎಕೆ-೪೭ ಬಂದೂಕದಿಂದ ಸಿಡಿಸಿದ ೭.೬೨ ಮಿಮಿ ಕ್ಯಾಲಿಬರ್ ಬುಲೆಟ್ ಅನ್ನು ತಡೆಯಬಲ್ಲದು.)
  • ಮೊಣಕಾಲು ಮತ್ತು ಮೊಣಕೈ ಕವಚಗಳು.
  • ಸುಲಭವಾಗಿ ಜಾರದ ಮತ್ತು ಬಲಿಷ್ಟವಾದ ವಿಶೇಷ ಬೂಟುಗಳು,

ವಾಹನಗಳು

ಬದಲಾಯಿಸಿ

ಪ್ರಧಾನಮಂತ್ರಿಗಳ ಸವಾರಿ ವಾಹನಗಳ ಮೆರವಣಿಗೆ ಎಂದರೆ ತಪ್ಪಲ್ಲ, ಯಾಕೆಂದರೆ ಸುಮಾರು ಹತ್ತಿಪ್ಪತ್ತು ಬಗೆಯ ವಾಹನಗಳ ಗುಂಪನ್ನು ನಾವು ಕಾಣಬಹುದು. ಈ ಗುಂಪಿನಲ್ಲಿ, ಶಸ್ತ್ರಸಜ್ಜಿತ ಬಿಎಂಡಬ್ಲ್ಯು ೭ ಸರಣಿಯ ಸೆಡಾನ್ ಕಾರುಗಳು(ಇದರಲ್ಲಿ ಒಂದು ಛಾಯಾ ವಾಹನ. ಅಂದರೆ, ದಾಳಿಕೋರರನ್ನು ದಿಕ್ಕು ತಪ್ಪಿಸುವ ಸಲುವಾಗಿ ಒಯ್ಯುವ ನಕಲಿ ವಾಹನ) ಶಸ್ತ್ರಸಜ್ಜಿತ ರೇಂಜ್ ರೋವರ್‌ಗಳು, ಬಿಎಂಡಬ್ಲ್ಯು ಎಕ್ಸ್ ೫ ಗಳು, ಟೊಯೋಟಾ ಫಾರ್ಚೂನರ್ಸ್ / ಲ್ಯಾಂಡ್ ಕ್ರೂಸರ್‌ಗಳು ಮತ್ತು ಮರ್ಸಿಡಿಸ್ ಬೆಂಜ್ ಸ್ಪ್ರಿಂಟರ್ ಆಂಬುಲೆನ್ಸ್‌ಗಳಿವೆ. ಇದರ ಜೊತೆಗೆ, ವಿವಿಧ ರೀತಿಯ ಆಧುನಿಕ ಗುಣಮಟ್ಟದ ಸೆನ್ಸಾರ್‌ಗಳು, ಸಿಗ್ನಲ್ ಜಾಮರ್‌ಗಳನ್ನು ಹೊಂದಿರುವ ಟಾಟಾ ಸಫಾರಿ ಸ್ಟಾರ್ಮ್ ವಾಹನವೂ ಸಹ ಜೊತೆಗೇ ಸಾಗುತ್ತದೆ. ಸುಧಾರಿತ ಸ್ಫೋಟಕ ಸಾಧನಗಳು (ಐಇಡಿ), ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್ಸ್ ಮತ್ತು ಆಂಟಿ-ಟ್ಯಾಂಕ್ ಕ್ಷಿಪಣಿಗಳಂತಹ ಮಾರ್ಗದರ್ಶಿ ದಾಳಿಯನ್ನು ಎದುರಿಸುವ ಸಲುವಾಗಿ ಮತ್ತು ಅವುಗಳನ್ನು ಮೂಲದಿಂದ ಉಡಾಯಿಸುವ ಮುನ್ನವೇ ಭದ್ರತಾ ಸಿಬ್ಬಂದಿಗಳಿಗೆ ತಿಳಿಸುವ ಸಲುವಾಗಿ ಅತ್ಯಾಧುನಿಕ ಇಡಬ್ಲ್ಯೂ ರಾಡಾರ್ ಸಂವೇದಕಗಳನ್ನು ಈ ವಾಹನದ ಮೇಲ್ಭಾಗದಲ್ಲಿ ಜೋಡಿಸಿರುತ್ತಾರೆ.

ಇನ್ನು ಪ್ರಧಾನಮಂತ್ರಿಗಳ ವಾಯುಮಾರ್ಗದ ಪ್ರಯಾಣಕ್ಕಾಗಿ, ಬೋಯಿಂಗ್ ಸಂಸ್ಥೆಯು ನಿರ್ಮಿಸಿದ, ಆಂತರಿಕವಾಗಿ ಮಾರ್ಪಡಿಸಲಾದ ಬೋಯಿಂಗ್ ೭೪೭-೪೦೦ ವಿಮಾನವನ್ನು ಬಳಸಲಾಗುತ್ತದೆ. ಈ ವಿಮಾನದ ಕರೆ ಸಂಕೇತ ಏರ್ ಇಂಡಿಯಾ ಒನ್ ಅಥವಾ ಎಐ೧. ಪ್ರಧಾನಮಂತ್ರಿಗಳು ಮಾತ್ರವಲ್ಲ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳೂ ಸಹ ದೂರದ ಪ್ರಯಾಣಕ್ಕೆ ಈ ವಿಮಾನವನ್ನು ಬಳಸುತ್ತಾರೆ. ಇದರ ಮೇಲುಸ್ತುವಾರಿಯನ್ನು ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ ನೋಡಿಕೊಳ್ಳುತ್ತದೆ. ಆದರೆ, ಈ ವಿಮಾನದ ಪೈಲೆಟ್ಟುಗಳನ್ನು ಭಾರತೀಯ ವಾಯುಪಡೆಯು ನೇಮಿಸುತ್ತದೆ. ಇನ್ನು ದೇಶದೊಳಗಿನ ಮಧ್ಯಮ ದೂರದ ಪ್ರಯಾಣಕ್ಕಾಗಿ, ಬ್ರೆಜಿಲ್ ನಿರ್ಮಿತ ೧೪ ಆಸನಗಳ ಸಾಮರ್ಥ್ಯದ ೪ ಎಂಬ್ರಯರ್-೧೩೫ ವಿಮಾನಗಳು ಮತ್ತು ೪೬ ಆಸನಗಳ ಸಾಮರ್ಥ್ಯವುಳ್ಳ ೩ ಬೋಯಿಂಗ್ ಬ್ಯುಝಿನೆಸ್ ಜೆಟ್ ವಿಮಾನಗಳನ್ನೂ ಸಹ ಬಳಸಲಾಗುತ್ತದೆ.

ಕೆಲವು ಮೂಲಗಳ ಪ್ರಕಾರ, ಹಳೆಯ ಬೋಯಿಂಗ್ ೭೪೭-೪೦೦ ವಿಮಾನವನ್ನು, ಬೋಯಿಂಗ್ ೭೭೭-೩೦೦ಇಆರ್ ವಿಮಾನದೊಂದಿಗೆ ಬದಲಾಯಿಸಲಾಗುತ್ತದೆ. ಭಾರತ ಸರಕಾರವು ಬೋಯಿಂಗ್ ಸಂಸ್ಥೆಗೆ ಒಟ್ಟು ೩ ಬೋಯಿಂಗ್ ೭೭೭-೩೦೦ಇಆರ್ ವಿಮಾನಗಳಿಗೆ ಬೇಡಿಕೆ ಸಲ್ಲಿಸಿದ್ದು, ಒಂದು ವಿಮಾನವನ್ನು ಅದಾಗಲೇ ಹಸ್ತಾಂತರಿಸಲಾಗಿದೆ. ಉಳಿದ ಎರಡು ವಿಮಾನಗಳನ್ನು ೨೦೨೦ರ ಜುಲೈ ತಿಂಗಳಲ್ಲಿ ಹಸ್ತಾಂತರಿಸಲಾಗುತ್ತದೆ. ಇವುಗಳಲ್ಲಿ ಒಂದನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಾಟು ಮಾಡಿ ಗಣ್ಯರ ಪ್ರಯಾಣಕ್ಕೆ ಬಳಸಲಾಗುತ್ತದೆ. ಇವುಗಳ ನಿರ್ವಹಣಾ ಜವಾಬ್ದಾರಿಯನ್ನು ಸಹ ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ ನೋಡಿಕೊಳ್ಳುತ್ತದೆ ಮತ್ತು ಪೈಲೆಟ್ಟುಗಳನ್ನು ಭಾರತೀಯ ವಾಯುಪಡೆಯು ನೇಮಿಸುತ್ತದೆ. ಈ ವಿಮಾನದಲ್ಲಿ ೧೯ ಕೋಟಿ ರೂಪಾಯಿ ಬೆಲೆಯ ಅತ್ಯಾಧುನಿಕ ಕ್ಷಿಪಣಿ ನಿರೋಧೀ ತಂತ್ರಜ್ಙಾನ ಮತ್ತು ಸ್ವಯಂ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ.

ನಿರ್ಬಂಧಗಳು

ಬದಲಾಯಿಸಿ

ವಿಶೇಷ ಭದ್ರತಾ ಪಡೆ ಕಾಯಿದೆ ೧೯೮೮ರ ಅನ್ವಯ ವಿಶೇಷ ಭದ್ರತಾ ಪಡೆಯ ಯಾವುದೇ ಸಿಬ್ಬಂದಿಗಳು ಯಾವುದೇ ರೀತಿಯ ಪತ್ರಿಕಾ ಮಾಧ್ಯಮಗಳ ಸಂಪರ್ಕದಲ್ಲಿ ಇರುವುದನ್ನು, ಯಾವುದೇ ರೀತಿಯ ಪುಸ್ತಕಗಳನ್ನು ಬರೆಯುವುದು, ಅಥವಾ ಅದಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಹಕರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಉಲ್ಲೇಖ

ಬದಲಾಯಿಸಿ
  1. Section 6, Special Protection Group Act, 1988
  2. "ಎಸ್ ಪಿ ಜಿ ಕಾಯ್ದೆ".


ಇದನ್ನೂ ಗಮನಿಸಿ

ಬದಲಾಯಿಸಿ
  • ಮೋದಿ ಭದ್ರತೆಗೆ ನಿಯೋಜನೆಗೊಂಡ ಮಹಿಳಾ ಎಸ್‌ಪಿಜಿ ಕಮಾಂಡೋ ! themangaloremirror.in [೧]
  • The truth behind of women SPG commando in PM Modi's security [೨]

ಆಕರಗಳು

ಬದಲಾಯಿಸಿ