ವಿಲಿಯಮ್ ಟಿಂಡಲ್ ( 1494-1536). ಬೈಬಲ್‍ನ್ನು ಇಂಗ್ಲಿಷಿಗೆ ಭಾಷಾಂತರಿಸಿದವ.

ಮಾರ್ಟಿನ್ ಲೂಥರನ ಸಾಹಸದಿಂದ ಸ್ಫೂರ್ತಿಪಡೆದು 1522ರ ಹೊತ್ತಿಗೆ ಭಾಷಾಂತರ ಕಾರ್ಯವನ್ನು ಪ್ರಾರಂಭಿಸಿದ. ಇಂಗ್ಲೆಂಡಿನಲ್ಲಿ ಇದರಿಂದ ತೊಂದರೆಗೊಳಗಾಗಿ ಯೂರೋಪಿಗೆ ಹೋದ. ಲೂಥರನನ್ನು ಭೇಟಿಮಾಡಿ, ತನ್ನ ಭಾಷಾಂತರದ ಮುದ್ರಣವನ್ನು ಪ್ರಾರಂಭಿಸಿದ. ಕಾರ್ಡಿನಲ್ ವೂಲ್ಸಿ ಮತ್ತು ಇಂಗ್ಲಿಷ್ ಬಿಷಪರು ಈ ಅನುವಾದವನ್ನು ಬಹುವಾಗಿ ವಿರೋಧಿಸಿದರು. ಈತನನ್ನು ಹಿಡಿದು ಶಿಕ್ಷಿಸುವ ಕೆಲಸ ಭರದಿಂದ ಸಾಗಿತಾಗಿ ಈತ ತಲೆಮರಸಿಕೊಂಡು ಕೆಲಕಾಲ ಇರಬೇಕಾಯಿತು. 1535ರಲ್ಲಿ ಇವನನ್ನು ಆ್ಯಂಟ್‍ವರ್ಪ್‍ನಲ್ಲಿ ದಸ್ತಗಿರಿ ಮಾಡಿ ಮರುವರ್ಷ ಮತಬಾಹಿರನೆಂದು ಸುಡಲಾಯಿತು. ಟಿಂಡಲ್ ನೀತಿಯ ದೃಷ್ಟಿಯಿಂದ ಗ್ರೀಕ್ ಮಹಾಕಾವ್ಯಗಳನ್ನು ವಿರೋಧಿಸಿದನಲ್ಲದೆ ವಿದ್ವಾಂಸರ ಆಲಂಕಾರಿಕ ಶೈಲಿಯನ್ನು ಬಿಟ್ಟು ಸರಳವೂ ಜನಸಾಮಾನ್ಯ ಭಾಷೆಗೆ ಸಮೀಪವೂ ಆದ ಶೈಲಿಯನ್ನು ಬಳಸಿದ. ಇದೇ ಬೈಬಲಿನ ಸಪ್ರಮಾಣ ರೂಪಾಂತರದ ಶೈಲಿಗೆ ಆಧಾರವಾಯಿತು. ಇಂಗ್ಲಿಷ್ ಮತ್ತು ಹೀಬ್ರೂ ಭಾಷೆಗಳ ಬಾಂಧವ್ಯವನ್ನು ಮೊದಲು ಗುರುತಿಸಿದವರಲ್ಲಿ ಈತ ಒಬ್ಬನೆನ್ನಲಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: