ಮಾರ್ಟಿನ್, ಲೂಥರ್ 1483-1546. ಜರ್ಮನಿಯ ಧರ್ಮಪ್ರವರ್ತಕ ಹಾಗೂ ಧರ್ಮ ಸಂಸ್ಕರಣ ಪಿತಾಮಹ.


ಹುಟ್ಟಿದ್ದು ಐಸೆಲ್‍ಬೆನ್‍ನಲ್ಲಿ. ಸಾಕ್ವನಿ ಪ್ರಾಂತ್ಯದ ಮಾನ್ಸ್‍ಫೀಲ್ಸ್ ಗಣಿಗಳಲ್ಲಿ ಈತನ ತಂದೆ ಕೆಲಸಮಾಡುತ್ತಿದ್ದ. ಮ್ಯಾಗ್ಡಬರ್ಗ್ ಐಸನಾಕ್ ಮತ್ತು ಏರ್‍ಫರ್ಟ್‍ಗಳಲ್ಲಿ ಈತನ ವಿದ್ಯಾಭ್ಯಾಸ ನಡೆಯಿತು. ಸುಮಾರು 8 ವರ್ಷದವನಾದಾಗ ಏರಫಟ್‍ನಲ್ಲಿದ್ದ ಅಗಸ್ಟಿನ್ನರ ಸಂನ್ಯಾಸಿ ಮಠ ಸೇರಿದ. ಈತ 1507ರಲ್ಲಿ ಆಚಾರ್ಯವರ್ಗಕ್ಕೆ ಅಭಿಷೇಕ ಹೊಂದಿ ಮೂರನೆಯ ವರ್ಷವೇ ವಿಟನ್‍ಬರ್ಗ್ ಪಟ್ಟಣದ ಕಲಾಶಾಲೆಯ ಅಧ್ಯಾಪಕನಾಗಿ ನೇಮಕಗೊಂಡ. 1511ರಲ್ಲಿ ಅಗಸ್ಟಿನರ ಹನ್ನೊಂದು ಸಂನ್ಯಾಸಿ ಮಠಗಳ ಮೇಲಧಿಕಾರಿಯಾದ. 1525ರಲ್ಲಿ ಕ್ಯಾಥರೀನ ವೋನ್‍ಬೇರಾ ಎಂಬಾಕೆಯನ್ನು ವಿವಾಹವಾದ.

ಬೋಧನೆ ಮತ್ತು ಕಾರ್ಯ

ಬದಲಾಯಿಸಿ

ಲೂಥರ್ ಬೋಧನೆ ಕೆಥೋಲಿಕರ ಬೋಧನೆಯಂಥಲ್ಲದೆ ಬೇರೆ ರೀತಿಯದ್ದಾಗಿತ್ತು. ಜನರ ಅಮಿತ ಭಕ್ತಿ ಹಾಗೂ ತನ್ನ ಆತ್ಮರಕ್ಷಣೆ ಬಗ್ಗೆ ಚಿಂತನೆ ಮೂಡಿ ದಿನನಿತ್ಯ ನೆರವೇರಿಸಬೇಕಾದ ದಿವ್ಯ ಕರ್ಮಗಳ ಆಚರಣೆಯಲ್ಲಿ ನಿರುತ್ಸಾಹ ಕೋರಿದ. ಕೆಲವು ಕಾಲದ ಅನಂತರ ಅವನ್ನು ಪೂರ್ಣವಾಗಿ ಬಿಟ್ಟುಬಿಟ್ಟ. ವ್ಯಕ್ತಿ ತನ್ನ ಪ್ರೀತಿ ವಿಶ್ವಾಸಗಳಿಂದಲೇ ನೀತಿವಂತನೆಂದು ನಿರ್ಣಯಿಸಲ್ಪಡುವನೇ ವಿನಾ ತನ್ನ ಕಾರ್ಯಗಳಿಂದಲ್ಲ ಎಂಬ ಸಿದ್ಧಾಂತವನ್ನು ಬೋಧಿಸತೊಡಗಿದ. ಇದೇ ಸುವಾರ್ತೆಯ ತಿರುಳು ಎಂದು ಭಾವಿಸಿದ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಗಸ್ಟಿನ್ನರ ಬೋಧನೆಗಳಲ್ಲಿ ಅನೇಕ ನಿದರ್ಶನಗಳು ಕಂಡುಬಂದು ಅವನ್ನೇ ಹಿಡಿದು ಸಾಧಿಸಿ ತನ್ನ ಬೋದನೆಯ ಮೂಲಸಿದ್ಧಾಂತವಾಗಿ ಸ್ಥಾಪಿಸಿದ. ದೇವರಿಗೂ ಮನುಷ್ಯರಿಗೂ ಸಭೆ ಮತ್ತು ಅರ್ಚಕರು ಮಧ್ಯವರ್ತಿಗಳಾಗಿರುತ್ತಾರೆಂಬ ನಂಬಿಕೆಯನ್ನು ಅಲ್ಲಗಳೆದ. ಇದೇವೇಳೆಗೆ ಟಿಡ್‍ಸಲ್ ಎಂಬ ಸಂನ್ಯಾಸಿ ಹತ್ತನೆಯ ಲಿಯೋ ಎಂಬ ಪೋಪನಿಂದ ಇನ್‍ಡಲ್‍ಜನ್ಸ್‍ಸ್ ಎಂಬ ಅಧಿಕಾರ ಪತ್ರಿಕೆಗಳನ್ನು ಮಾರಿ ರೋಮ್ ನಗರದ ಸೇಂಟ್ ಪೀಟರ್ಸ್ ದೇವಸ್ಥಾನದ ದುರಸ್ತಿಗಾಗಿ ಹಣವಸೂಲು ಮಾಡುತ್ತಿರುವುದನ್ನು ಕಂಡು ಅದನ್ನು ಪ್ರತಿಭಟಿಸುವ 95 ನಿಬಂಧಗಳನ್ನು ಬರೆದು ವಿಟನ್‍ಬರ್ಗನ ಮುಖ್ಯ ದೇವಸ್ಥಾನದ ಕದಗಳಿಗೆ ಹಚ್ಚಿಸಿದ. ಈ ಕಾರ್ಯದಿಂದಾಗಿ ಜನರ ಆದರಣೆಗೆ ಪಾತ್ರನಾದ. ಆದರೆ ಇದರಿಂದ ಪಾಷಂಡ ಬೋಧನೆ ಹರಡಿಸುವ ಅಪರಾಧಕ್ಕೆ ರೋಮ್ ಸಭೆಯಲ್ಲಿ ವಿಚಾರಣೆಗೆ ಗುರಿಯಾಗಬೇಕಾಯಿತು. ಪೋಪನ ಅಗ್ರಹದಿಂದ ಸ್ಯಾಕ್ಸ್‍ನಿಯ ಅಧಿಕಾರಿಯಾದ ಮೂರನೆಯ ಫ್ರೆಡರಿಕ್ಕನ ಆಶ್ರಯ ಸೇರಿದ. 1520ರಲ್ಲಿ ಲೂಥರ್ ತನ್ನ ಮೂಲಸಭೆಯನ್ನು ಪೂರ್ತಿಯಾಗಿ ಬಿಟ್ಟುಬಿಟ್ಟ. ಅನಂತರ ಅನೇಕ ಗ್ರಂಥಗಳ ಮೂಲಕ ತನ್ನ ಅನುಯಾಯಿಗಳ ನಂಬಿಕೆಗಳನ್ನು ಬಲಪಡಿಸಿ ಪ್ರತ್ಯೇಕವಾದ ಸಭೆಯನ್ನೇ ಸ್ಥಾಪನೆ ಮಾಡಿದ. ಬೈಬಲಿನ ಹೊಸ ಒಡಂಬಡಿಕೆಯನ್ನು ಗ್ರೀಕ್‍ನಿಂದ ಜರ್ಮನಿಗೆ ಅನುವಾದ ಮಾಡಿದ. ಹಳೆಯ ಒಡಂಬಡಿಕೆಯನ್ನು ಅನುವಾದ ಮಾಡಿದ. ಹಳೆಯ ಒಡಂಬಡಿಕೆಯನ್ನು ಅನುವಾದ ಮಾಡಿದುದೇ ಅಲ್ಲದೆ ಅದಕ್ಕೆ ಅನೇಕ ವ್ಯಾಖ್ಯಾನಗಳನ್ನೂ ಬರೆದ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: