ವಿಟೋರಿಯೊ ಆಲ್ಫಿಯೆರಿ

ವಿಟೋರಿಯೊ ಆಲ್ಫಿಯೆರಿ (16 ಜನವರಿ 1749 – 8 ಒಕ್ಟೋಬರ್ 1803) ಇಟಲಿಕವಿ ಹಾಗೂ ಯೂರೋಪಿನಲ್ಲೆಲ್ಲ ಪ್ರಖ್ಯಾತಿ ಪಡೆದ ರುದ್ರನಾಟಕಕಾರ. ಶ್ರೀಮಂತ ಮನೆತನದಲ್ಲಿ ಹುಟ್ಟಿ ಟ್ಯೂರಿನ್ ಅಕಾಡಮಿಯಲ್ಲಿ ವಿದ್ಯಾಭ್ಯಾಸ ಪಡೆದ. ಸ್ವಭಾವತಃ ಮುಂಗೋಪಿ, ಭಾವಾವೇಶದ ಪ್ರಕೃತಿಯವ. ತನ್ನ ಪ್ರವೃತ್ತಿಗಳನ್ನು ಸಾಹಿತ್ಯ ಸೃಷ್ಟಿಗೆ ಸದುಪಯೋಗಪಡಿಸಿಕೊಂಡುದು ಸುದೈವವೇ ಸರಿ. ಹಲವಾರು ದೇಶಗಳಲ್ಲಿ ಪ್ರವಾಸ ಮಾಡಿ, ಹಲವಾರು ಪ್ರಣಯ ಪ್ರಸಂಗಗಳ ಸಿಹಿ ಕಹಿ ಅನುಭವಗಳನ್ನುಂಡು ತನ್ನ 25ನೆಯ ವಯಸ್ಸಿನಲ್ಲಿ ನಾಟಕ ರಚನೆಗೆ ಕೈಹಾಕಿದ. ಕೇವಲ ಬೇಸರವನ್ನು ಕಳೆಯಲು, ಸುಮ್ಮನೆ ಗೀಚಿದ ಮೊಟ್ಟಮೊದಲ ಕೃತಿ-ಕ್ಲಿಯೋಪಾತ್ರ. ಆದರೆ ಟ್ಯೂರಿನ್ನಲ್ಲಿ ಅಭಿನಯಿಸಲ್ಪಟ್ಟಾಗ ಇದಕ್ಕೆ ಅನಿರೀಕ್ಷಿತವಾದ ಜನಮನ್ನಣೆ ದೊರೆಯಿತು. ಅಂದಿನಿಂದ ರುದ್ರನಾಟಕಗಳನ್ನು ಬರೆದು, ಶ್ರೇಷ್ಟ ನಾಟಕಕಾರನಾಗಬೇಕೆನ್ನುವ ಹಂಬಲ ಬಲವಾಯಿತು. ಇಟಲಿ ಭಾಷೆಯಲ್ಲಿ ಬರೆಯಲು ಕಷ್ಟ ಸಾಧ್ಯವೆಂದು ತೋರಿದ್ದರಿಂದ, ಅಂದಿನ ಸಂಸೃತಿ ಕೇಂದ್ರವಾದ ಪೀಸಾ ನಗರಕ್ಕೆ ತೆರಳಿ ಅಲ್ಲಿ ಟಸ್ಕನಿ ಭಾಷೆಯಲ್ಲಿ ಆಳವಾದ ಪಾಂಡಿತ್ಯವನ್ನು ಪಡೆದ. ಅನಂತರ ಸುಮಾರು 22 ನಾಟಕಗಳನ್ನು ಬರೆದ. ಇವನ ಉದ್ದಾಮಕೃತಿ ಸಾಲ್ (1782). ಅಂತಿಗೊನೆ (1783) ಮತ್ತು ಮಾರಿಯ ಸ್ಟೂಯರ್ಟ್ (1804) ಇತರ ಪ್ರಸಿದ್ಧ ಕೃತಿಗಳು.

Vittorio Alfieri painted by David's pupil François-Xavier Fabre, in Florence 1793.

ಈತನ ಭಾಷೆಯಲ್ಲಿ ಹಾಗೂ ನಾಟಕಗಳ ವಿವಿಧ ಸನ್ನಿವೇಶಗಳಲ್ಲಿ , ಭಾವೋದ್ವೇಗದ ಕಾವಿದೆ. ನಾಟಕಗಳ ವಸ್ತು ಐತಿಹಾಸಿಕವಾಗಿರಲಿ, ಪೌರಾಣಿಕವಾಗಿರಲಿ, ಸಮಕಾಲೀನವಾಗಿರಲಿ, ಬಹಿರಂಗದ ವೇಷ, ಭೂಷಣ, ಬಣ್ಣ ಮುಂತಾದ ಕಾಲಧರ್ಮವನ್ನು ಸೂಚಿಸುವ ಪರಿಕರಗಳಿಗಿಂತಲೂ ವ್ಯಕ್ತಿಯ ಅಂತರಂಗದ ತುಮುಲದ ಅಭಿವ್ಯಕ್ತಿಗೇ ಹೆಚ್ಚು ಪ್ರಧಾನ್ಯ ಕೊಡುತ್ತಾನೆ. ರುದ್ರ ಸನ್ನಿವೇಶಗಳಲ್ಲಿ ಸಿಲುಕಿದ ವ್ಯಕ್ತಿಯ ನೋವು, ನಲಿವು, ಸಂಕಟ ಮುಂತಾದುವನ್ನು ಆವೇಶಯುಕ್ತ ಭಾಷಣಗಳ (ಡಿಕ್ಲಮೇಷನ್) ಮೂಲಕ ಹೊರಪಡಿಸುತ್ತಾನೆ. ಪುರಾತನ ಗ್ರೀಕ್ ವಿಮರ್ಶಕರು ಪರ್ಯಾಯವಾಗಿ ಸೂಚಿಸಿದ ಮೂರು ಏಕತೆಗಳನ್ನು ಕೆಲವು ವೇಳೆ ಅತಿ ಎನಿಸುವಷ್ಟು ಎಚ್ಚರಿಕೆಯಿಂದ ಅನುಸರಿಸುತ್ತಾನೆ. ಇವನ ನಾಟಕಗಳು ಬಹುಕಾಲದವರೆಗೆ ಯೂರೋಪಿನಲ್ಲಿ ಅತ್ಯಂತ ಜನಪ್ರಿಯವಾಗಿದ್ದುವು. ಈ ನಾಟಕಗಳ ಕೊರತೆಯೆಂದರೆ, ರುದ್ರನಾಟಕದಲ್ಲಿರಬೇಕಾದ ಘರ್ಷಣೆಯಾಗಲೀ, ಪಾತ್ರ ವಿನ್ಯಾಸದಲ್ಲಿ ಮನೋ ವಿಶ್ಲೇಷಣೆಯಾಗಲೀ ಅಷ್ಟು ಸ್ಪಷ್ಟವಾಗಿ ತೋರದಿರುವುದು.

ಬಾಹ್ಯ ಸಂಪರ್ಕಗಳು

ಬದಲಾಯಿಸಿ