ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೪೫
‘’’ಗ್ಲೋಬಲ್ ನೇವಿಗೇಶನ್ ಸ್ಯಾಟಲ್ಲೈಟ್ ಸಿಸ್ಟಂ”’ (Global Navigation Satellite System) ಎಂಬುದು ಜಾಗತಿಕ ಸ್ಥಾನ ನಿರ್ಣಯ ಹಾಗೂ ದಿಕ್ಸೂಚಿ ವ್ಯವಸ್ಥೆಯಾಗಿದೆ. ಕೃತಕ ಉಪಗ್ರಹಗಳು ಬಿತ್ತರಿಸುವ ಮಾಹಿತಿಯನ್ನು ಉಪಯೋಗಿಸಿಕೊಂಡು ಅವುಗಳನ್ನು ಆಲಿಸುವ ರಿಸೀವರ್‌ಗಳು ತಮ್ಮ ಸ್ಥಾನ, ವೇಗ, ಹಾಗೂ ತಾನು ಚಲಿಸುತ್ತಿರುವ ದಿಕ್ಕನ್ನು ನಿರ್ಣಯಿಸಬಲ್ಲವು.
"ಜಿಪಿಎಸ್" ಅಥವಾ "ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ" ಎಂಬುದು ಇಂತಹ ಒಂದು ವ್ಯವಸ್ಥೆಯಾಗಿದೆ. ಇದು ಅಮೇರಿಕ ದೇಶವು ಅಭಿವೃದ್ಧಿಪಡಿಸಿ ಕಾರ್ಯಕ್ಕಿಳಿಸಿದ ವ್ಯವಸ್ಥೆಯಾಗಿದ್ದು ಇದರ ಅಧಿಕೃತ ಹೆಸರು ”’ನ್ಯಾವ್‌ಸ್ಟಾರ್ ಜಿಪಿಎಸ್”’ ಎಂಬುದಾಗಿದೆ. ಇದರ ನಿರ್ವಹಣೆ ಹಾಗೂ ನಿಯಂತ್ರಣ ಅಮೇರಿಕ ದೇಶದ ವಾಯು ಸೇನೆಯ ಕೈಯಲ್ಲಿದ್ದು ಇದರ ಉಸ್ತುವಾರಿಗಾಗಿ (ಉಪಗ್ರಹ ಬದಲಾವಣೆ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ ಸೇರಿದಂತೆ) ವಾರ್ಷಿಕ ೭೫೦ ಯು.ಎಸ್. ಡಾಲರ್ಗಳನ್ನು ವ್ಯಯಿಸಲಾಗುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಜಿಪಿಎಸ್ ವ್ಯವಸ್ಥೆಯು ಅಮೆರಿಕದ ಸೈನಿಕ ಬಳಕೆಗಳಿಗಾಗಿ ಅಭಿವೃದ್ಧಿ ಪಡಿಸಿದ್ದಾದರೂ, ಜಗತ್ತಿನಾದ್ಯಂತ ನಾಗರಿಕ ಉಚಿತ ಬಳಕೆಗಳಿಗಾಗಿ ಇದನ್ನು ನೀಡಲಾಗಿದೆ. ಜಿಪಿಎಸ್ ವ್ಯವಸ್ಥೆಯನ್ನು ದಿಕ್ಸೂಚಿಯಾಗಿ ಮಾತ್ರವಲ್ಲದೆ, ನಕಾಶೆ ತಯಾರಿಸಲು, ಸರ್ವೇಕ್ಷಣೆ ಕಾರ್ಯಗಳಿಗಾಗಿ, ವಾಣಿಜ್ಯ ಹಾಗೂ ವೈಜ್ಞಾನಿಕ ಕಾರ್ಯಗಳಿಗಾಗಿ ಕೂಡ ಬಳಸಲಾಗುತ್ತಿದೆ. ಅಲ್ಲದೆ ಇದನ್ನು ನಿಖರವಾದ ಸಮಯದ ಆಧಾರವಾಗಿ ಉಪಯೋಗಿಸಲಾಗುತ್ತಿದೆ.