ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೪೨

ತಾಯಿಯ ಹಾಲನ್ನು ಹೀರುತ್ತಿರುವ ಒಂದು ಆಡಿನ ಮರಿ.

ಹಾಲು ಹೆಣ್ಣು ಸಸ್ತನಿಗಳ ಸ್ತನಗ್ರಂಥಿಗಳಲ್ಲಿ ಉತ್ಪತ್ತಿಯಾಗುವ ಒಂದು ಅಪಾರದರ್ಶಕ ಬಿಳಿ ದ್ರವ. ಸಸ್ತನಿ ಪ್ರಾಣಿಗಳ (ಮಾನವನೂ ಸೇರಿದಂತೆ) ಹೆಣ್ಣುಗಳ ಹಾಲಿನ ಉತ್ಪಾದನಾ ಸಾಮರ್ಥ್ಯವು ಈ ಗುಂಪಿನ ಬಲು ಮುಖ್ಯ ಜೈವಿಕ ಗುಣವಾಗಿದೆ. ಹಾಲು ನವಜಾತ ಶಿಶುಗಳಿಗೆ ಅತ್ಯುತ್ತಮ ಪೋಷಕಾಂಶಗಳನ್ನು ಒದಗಿಸುವುದು. ಶಿಶು(ಮರಿ)ಗಳು ಬೇರೆ ಆಹಾರವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಪಡೆಯುವವರೆಗೂ ಅವುಗಳಿಗೆ ತಾಯಹಾಲೇ ಏಕೈಕ ಆಹಾರ. ಶಿಶುವಿನ ಜನನದ ಅಲ್ಪಕಾಲದಲ್ಲಿಯೇ ಉತ್ಪತ್ತಿಯಾಗುವ ಹಾಲು ತಾಯಿಯ ದೇಹದಿಂದ ಪ್ರತಿಕಣಗಳನ್ನು ಶಿಶುವಿನ ದೇಹಕ್ಕೆ ಒಯ್ಯುತ್ತದೆ. ಶಿಶುವಿಗೆ ಇದು ಅನೇಕ ರೋಗಗಳನ್ನು ತಡೆಗಟ್ಟುವ ಶಕ್ತಿಯನ್ನು ನೀಡುವುದು. ಹಾಲಿನಲ್ಲಿನ ಅಂಶಗಳು ಬೇರೆಬೇರೆ ಪ್ರಾಣಿಗಳಲ್ಲಿ ವಿಭಿನ್ನವಾಗಿರುತ್ತವೆ. ಸಾಮಾನ್ಯವಾಗಿ ಸಾಂದ್ರ ಕೊಬ್ಬು, ಪ್ರೊಟೀನ್, ಕ್ಯಾಲ್ಸಿಯಮ್ ಮತ್ತು ವಿಟಮಿನ್-ಸಿ ಗಳು ಗಣನೀಯ ಪ್ರಮಾಣದಲ್ಲಿರುತ್ತವೆ. ಹಾಲು ಎರಡು ಸ್ಪಷ್ಟ ಬಗೆಗಳಲ್ಲಿ ಬಳಕೆಯಾಗುತ್ತದೆ. ಎಲ್ಲಾ ಸಸ್ತನಿ ಪ್ರಾಣಿಗಳ ಶಿಶುಗಳಿಗೆ ಪೋಷಕಾಂಶಗಳ ಪ್ರಾಕೃತಿಕ ಮೂಲವಾಗಿ ಮತ್ತು ಮಾನವನು ಇತರ ಪ್ರಾಣಿಗಳಿಂದ ದೊರಕಿಸಿಕೊಂಡ ಆಹಾರದ ರೂಪದಲ್ಲಿ. ಹೆಚ್ಚೂಕಡಿಮೆ ಎಲ್ಲಾ ಸಸ್ತನಿಗಳೂ ಸ್ತನ್ಯಪಾನದ ಮೂಲಕ ತಮ್ಮ ಶಿಶುಗಳಿಗೆ ಹಾಲೂಡುತ್ತವೆ. ಕೆಲ ಮಾನವ ಸಂಸ್ಕೃತಿಗಳಲ್ಲಿ ೭ನೆಯ ವಯಸ್ಸಿನವರೆಗೂ ಮಕ್ಕಳಿಗೆ ಸ್ತನ್ಯಪಾನ ಮಾಡಿಸುವ ವಾಡಿಕೆ ಇದೆ. ವಿಶ್ವದೆಲ್ಲೆಡೆ ಮಾನವನು ತನ್ನ ಶೈಶವಾವಸ್ಥೆಯನ್ನು ದಾಟಿದ ಮೇಲೆ ಕೂಡ ಹಾಲಿನ ಸೇವನೆಯನ್ನು ಮುಂದುವರಿಸುವನು. ಇದಕ್ಕಾಗಿ ಅವನು ಇತರ ಪ್ರಾಣಿಗಳಿಂದ ಹಾಲನ್ನು ಕರೆದುಕೊಳ್ಳುವನು. ಇವುಗಳಲ್ಲಿ ಹಸುವಿನ ಹಾಲು ಅತಿ ಹೆಚ್ಚಾಗಿ ಬಳಕೆಯಲ್ಲಿದೆ.