ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೩೬
ಅಮೆಜಾನ್ ದಕ್ಷಿಣ ಅಮೆರಿಕದ ಪ್ರಮುಖ ನದಿ. ಇದು ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಜಲರಾಶಿಯನ್ನು ಹೊಂದಿದೆ. ಅಲ್ಲದೆ ಒಂದು ವಾದದ ಪ್ರಕಾರ ಅಮೆಜಾನ್ ನದಿಯು ಪ್ರಪಂಚದ ಅತಿ ಉದ್ದವಾದ ನದಿ ಕೂಡ. ಈ ಒಂದು ಮಹಾನದಿಯಲ್ಲಿ ಪ್ರವಹಿಸುವ ನೀರಿನ ಪ್ರಮಾಣವು ನಂತರದ ೮ ಮಹಾನದಿಗಳ ಒಟ್ಟು ನೀರಿನ ಪ್ರಮಾಣಕ್ಕಿಂತ ಅಧಿಕವೆಂದಾದಾಗ ಇದರ ಅಗಾಧತೆಯ ಅರಿವಾಗುವುದು. ಅಮೆಜಾನ್ ನದಿಯು ವಿಶ್ವದಲ್ಲಿಯೇ ಅತ್ಯಂತ ವಿಶಾಲವಾದ ಜಲಾನಯನ ಪ್ರದೇಶವನ್ನು ಹೊಂದಿದೆ. ಕೆಲವೊಮ್ಮೆ ಈ ನದಿಗೆ "ಸಿಹಿ ಸಮುದ್ರ" ಎಂಬ ಹೆಸರನ್ನು ಸಹ ಬಳಸುವರು. ಬೇಸಗೆಯಲ್ಲಿ ನದಿಯ ಅತ್ಯಂತ ಹೆಚ್ಚಿನ ಅಗಲ ೧೧ ಕಿ.ಮೀ. ಗಳಾದರೆ ಮಳೆಗಾಲದಲ್ಲಿ ಈ ಮಹಾನದಿಯು ೪೫ ಕಿ.ಮೀ.ನಷ್ಟು ಅಗಲವಾಗಿ ಹರಿಯುವುದು. ಅಮೆಜಾನ್ ನದಿಯು ಅಟ್ಲಾಂಟಿಕ್ ಮಹಾಸಾಗರಕ್ಕೆ ಸಾಗಿಸುವ ಸಿಹಿನೀರಿನ ಪ್ರಮಾಣ ಊಹಾತೀತ. ಮಳೆಗಾಲದಲ್ಲಿ ಈ ನದಿಯು ಪ್ರತಿ ಸೆಕೆಂಡಿಗೆ ೩,೦೦,೦೦೦ ಘನ ಮೀಟರುಗಳಷ್ಟು ಸಿಹಿನೀರನ್ನು ಸಾಗರಕ್ಕೆ ಸೇರಿಸುವುದು. ಸಾಗರದ ಮುಖದಲ್ಲಿ ಈ ನದಿಯ ನೀರಿನ ರಭಸ ಹಾಗೂ ಒತ್ತಡ ಎಷ್ಟಿದೆಯೆಂದರೆ ಸಾಗರತೀರದಿಂದ ಹಲವಾರು ಕಿ.ಮೀ.ಗಳ ದೂರದವರೆಗೂ ಸಾಗರದ ನೀರು ಸಿಹಿಯಾಗಿಯೇ ಇರುತ್ತದೆ. ಮಳೆಗಾಲದಲ್ಲಿ ಅಮೆಜಾನ್ ನದಿಯು ಸಾಗರದ ಉಪ್ಪುನೀರನ್ನೇ ಸುಮಾರು ೧೦೦ ಕಿ.ಮೀ.ಗಳಷ್ಟು ಹಿಮ್ಮೆಟ್ಟಿಸುತ್ತದೆ.