ವಲಯ-ನಿರ್ದೇಶಿತ ವಿನ್ಯಾಸ ಅಥವಾ ಜೋನಲ್ ಆರ್ಕಿಟೆಕ್ಚರ್

ವಲಯ-ನಿರ್ದೇಶಿತ ವಿನ್ಯಾಸ ಅಥವಾ ಜೋನಲ್ ಆರ್ಕಿಟೆಕ್ಚರ್

ಕಾರ್ ಮತ್ತಿತರ ವಾಹನಗಳಲ್ಲಿ  ಹಾಗೂ ಏರೋಸ್ಪೇಸ್ ವಾಹನಗಳಲ್ಲಿ ಬಳಸಲಾಗುವ ವಿದ್ಯುತ್ ಮತ್ತು ವಿದ್ಯುನ್ಮಾನ ಉಪಕರಣಗಳನ್ನು ವಿನ್ಯಾಸ ಮಾಡುವಾಗ ಈ ಉಪಕರಣಗಳು ವಾಹನದ ಯಾವ ವಲಯದಲ್ಲಿ ಅಳವಡಿಸಲಾಗುತ್ತವೆ (ಹಿಂದೆ, ಮುಂದೆ, ಎಡ, ಬಲ) ಎಂಬ ಆಧಾರದ ಮೇಲೆ ವಿನ್ಯಾಸ ನಡೆಸುವುದಕ್ಕೆ ವಲಯ-ನಿರ್ದೇಶಿತ ವಿನ್ಯಾಸ (ಜೋನಲ್ ಆರ್ಕಿಟೆಕ್ಚರ್)  ಎನ್ನುತ್ತಾರೆ. ಪ್ರತಿಯೊಂದೂ ವಲಯದಲ್ಲಿ ಒಂದು ಕೇಂದ್ರ ಪ್ರಾಸೆಸಿಂಗ್ ಘಟಕ (ಸಿಪಿಯೂ) ಇರುತ್ತದೆ; ಇದು ಆಯಾ ವಲಯಗಳಲ್ಲಿ ಅಳವಡಿಸಲಾದ ಸೆನ್ಸರ್ ಮತ್ತು ಸಂವಹನ ಸಾಧನಗಳನ್ನು    ನಿಯಂತ್ರಿಸುತ್ತದೆ.   ವಲಯ-ನಿರ್ದೇಶಿತವಲ್ಲದೇ ಇದ್ದಿದ್ದರೆ ಇಡೀ ವಾಹನಕ್ಕೆ ಒಂದು ಕೇಂದ್ರ ಪ್ರಾಸೆಸಿಂಗ್ ಘಟಕವನ್ನು ಸ್ಥಾಪಿಸಿ ಅದು ವಾಹನದ ಎಲ್ಲಾ ಕಡೆಗೂ ಇರುವ ಸೆನ್ಸರ್ ಮತ್ತು ಸಂವಹನ ಸಾಧನಗಳನ್ನು ನಿಯಂತ್ರಿಸುವಂತೆ ವಿನ್ಯಾಸ ಮಾಡಬಹುದಾಗಿತ್ತು. ಆಗ ವಾಹನದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಅತಿಶಯ ಎನ್ನಿಸುವಷ್ಟು ತಂತಿಗಳು (ವೈರಿಂಗ್) ಇರುತ್ತಿತ್ತು.

ಕಾರಿನ ಏರ್ ಬ್ಯಾಗ್ ನಿಯಂತ್ರಣಕ್ಕಾಗಿ ಬಳಸುವ ಒಂದು ECU ಅಥವಾ ವಿದ್ಯುನ್ಮಾನ ನಿಯಂತ್ರಣ ಘಟಕ

ಜೋನಲ್ ಆರ್ಕಿಟೆಕ್ಚರ್ ಮುಖ್ಯಾಂಶಗಳು

ಬದಲಾಯಿಸಿ
  1. ಕೇಂದ್ರ ಘಟಕದ ವಿಕೇಂದ್ರೀಕರಣ - ಕಾರಿನಲ್ಲಿರುವ ಹಲವಾರು ದೀಪಗಳನ್ನು ನಿಯಂತ್ರಿಸಲು ಪ್ರತ್ಯೇಕ ಎಲೆಕ್ಟ್ರಾನಿಕ್ ಕಂಟ್ರೋಲ್ ಯೂನಿಟ್ (ECU), ಕಾರಿನ ಬ್ರೇಕ್ ನಿಯಂತ್ರಿಸಲು ಮತ್ತೊಂದು ECU, ಕಾರಿನ ಚಕ್ರಗಳಲ್ಲಿ ಎಷ್ಟು ಒತ್ತಡವಿದೆಯೆಂದು ಗಮನಿಸಲು ಪ್ರತ್ಯೇಕ ECUಗಳು ಎಂದೆಲ್ಲಾ ಹಲವಾರು ವಿದ್ಯುನ್ಮಾನ ನಿಯಂತ್ರಣ ಘಟಕಗಳನ್ನು  ಸ್ಥಾಪಿಸುವ ಬದಲು ಜೋನಲ್ ವಿನ್ಯಾಸದಲ್ಲಿ ಪ್ರತಿಯೊಂದು ವಲಯಕ್ಕೂ ಒಂದೊಂದು ನಿಯಂತ್ರಣ ಘಟಕವನ್ನು ಸ್ಥಾಪಿಸುತ್ತಾರೆ.
  2. ಒಂದೊಂದು ವಲಯದಲ್ಲೂ ಪ್ರತ್ಯೇಕ ನಿಯಂತ್ರಣ ಘಟಕವನ್ನು ಸ್ಥಾಪಿಸುವ ಮೂಲಕ ವೈರಿಂಗ್ (ತಂತಿ ಜೋಡಣೆ) ಪ್ರಮಾಣವು ಕಡಿಮೆಯಾಗುತ್ತದೆ. ಇದರಿಂದ ವಾಹನದ ತೂಕವೂ ಕಡಿಮೆಯಾಗುತ್ತದೆ. ವಾಹನದ  ಜೋಡಣೆ ಮತ್ತು ರಿಪೇರಿ ಸುಲಭವಾಗುತ್ತದೆ.
     
    ತಂತಿಗಳನ್ನು ಜೋಡಿಸಲು ಬಳಸಲಾಗುವ ಹಾರ್ನೆಸ್
  3. ವಲಯಗಳಲ್ಲಿ ಸ್ಥಾಪಿತವಾದ ನಿಯಂತ್ರಣ ಘಟಕಗಳು ತಮ್ಮವಲಯದಲ್ಲಿರುವ  ಸೆನ್ಸರ್ ಗಳು  ತರುವ ದತ್ತಾಂಶಗಳನ್ನು ಸ್ಥಳೀಯವಾಗಿ ಸಂಸ್ಕರಿಸುತ್ತವೆ. ಹೀಗೆ ಸಂಸ್ಕರಿಸಿದ ದತ್ತಾಂಶವನ್ನು ಕೇಂದ್ರ ಘಟಕಕ್ಕೆ ರವಾನಿಸುತ್ತವೆ. ಇದರಿಂದ ದತ್ತಾಂಶದ ಅನಗತ್ಯ ಸಂವಹನ ಅನಾವಶ್ಯಕವಾಗುತ್ತದೆ.  ಉದಾಹರಣೆಗೆ ಎಡಗಡೆಯ ಚಕ್ರಗಳಲ್ಲಿ ಒತ್ತಡ ಕಡಿಮೆಯಾದರೆ ಅದನ್ನು ಎಡಗಡೆ ಸ್ಥಾಪಿಸಿದ ವಲಯ ಘಟಕವು ಗಮನಿಸಿ "ಇಂಥ ಚಕ್ರದಲ್ಲಿ ಒತ್ತಡ ಇಷ್ಟು ಕಡಿಮೆಯಾಗಿದೆ" ಎಂಬ ಕ್ಲುಪ್ತ ಮಾಹಿತಿಯನ್ನು ಮಾತ್ರ ಕೇಂದ್ರ ಘಟಕಕ್ಕೆ ರವಾನಿಸುತ್ತದೆ.  ಇದರಿಂದ ಕೇಂದ್ರ ಘಟಕಕ್ಕೆ ಸಾಗಣೆಯಾಗುವ ಮಾಹಿತಿಯ ವೈಪುಲ್ಯ ಕಡಿಮೆಯಾಗುತ್ತದೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಬೇಕಾಗುವ ಸಮಯ ಕಡಿಮೆಯಾಗುತ್ತದೆ.

ಜೋನಲ್ ವಿನ್ಯಾಸದ ಲಾಭಗಳು

ಬದಲಾಯಿಸಿ
  1. ವಾಹನದಲ್ಲಿ ಜೋಡಿಸಲಾಗುವ ತಂತಿಗಳ ಹಾರ್ನೆಸ್ ಗಳ ಸಂಖ್ಯೆ ಕಡಿಮೆಯಾಗುವ ಕಾರಣ ವಾಹನದ ತೂಕ ಕಡಿಮೆಯಾಗುತ್ತದೆ. ಇದರಿಂದ ವಾಹನದ ಜೋಡಣೆ ಮತ್ತು ರಿಪೇರಿ ಸುಲಭ;  ಎಲ್ಲಿ ತೊಂದರೆ ಇದೆ ಎಂಬುದನ್ನು ಕಂಡುಹಿಡಿಯುವುದು ಸುಲಭ.
  2. ವಾಹನದ ತೂಕ ಕಡಿಮೆಯಾಗುವ ಕಾರಣ ಅದರ  ಇಂಧನ-ಕ್ಷಮತೆ ಹೆಚ್ಚು.
  3. ವಾಹನಗಳಲ್ಲಿ ಬಳಸಲಾಗುವ ತಂತ್ರಾಂಶಗಳ ಸ್ಥಾಪನೆ ಮತ್ತು ನವೀಕರಣ ಸುಲಭ.  

ಜೋನಲ್ ವಿನ್ಯಾಸದ ತೊಂದರೆಗಳು

ಬದಲಾಯಿಸಿ
  1. ಇಡೀ ಎಲೆಕ್ಟ್ರಾನಿಕ್ ವ್ಯವಸ್ಥೆಯ ಸಂಕೀರ್ಣತೆ ಹೆಚ್ಚುವ ಕಾರಣ ಜೋನಲ್ ವಿನ್ಯಾಸವು ವಿನ್ಯಾಸಕರಿಂದ ಹೆಚ್ಚಿನ ಪರಿಶ್ರಮ ಮತ್ತು ಕ್ಷಮತೆಯನ್ನು ಬೇಡುತ್ತದೆ.
  2. ವಾಹನದಲ್ಲಿ ಬಳಸಲಾಗುವ ದತ್ತಾಂಶ ವಿತರಣೆ ವ್ಯವಸ್ಥೆಯು ಹೆಚ್ಚು ವಿಶ್ವಾಸಾರ್ಹ (reliable) ಆಗಿರಬೇಕು.
  3. ಜೋನಲ್ ವಿನ್ಯಾಸವನ್ನು ರಚಿಸಲು ಬೇಕಾದ ಸಮಯ ಮತ್ತು ವಿನ್ಯಾಸಕರ ಸಂಖ್ಯೆ ಹೆಚ್ಚು.  ಹೀಗಾಗಿ ವಾಹನ ಕಂಪನಿಗಳು ತೊಡಗಿಸಬೇಕಾದ  ಹಣ ಹೆಚ್ಚಿನದು.
  4. ಸೈಬರ್ ದಾಳಿಗಳಿಂದ ರಕ್ಸಿಸಲು ಜೋನಲ್ ವಿನ್ಯಾಸದಲ್ಲಿ ಹೆಚ್ಚಿನ ಕಾಳಜಿ ಅಗತ್ಯ.

ವಾಹನಗಳಲ್ಲಿ  ತಂತ್ರಾಂಶಗಳ ಉಪಯೋಗ ಹೆಚ್ಚಿದಂತೆ ಜೋನಲ್ ವಿನ್ಯಾಸದ ಪ್ರಾಮುಖ್ಯತೆಯೂ ಹೆಚ್ಚುತ್ತಿದೆ.