ಲೂಯಿಸ್ ಡೆ ಗೊಂಗೊರಾ
ಲೂಯಿಸ್ ಡೆ ಗೊಂಗೊರಾ (1561-1627). ಸುವರ್ಣಯುಗವನ್ನು ಪ್ರತಿನಿಧಿಸುವ ಪ್ರಸಿದ್ಧ ಕವಿಗಳಲ್ಲಿ ಕೊನೆಯ ಸ್ಪ್ಯಾನಿಷ್ ಕವಿ.
ಲೂಯಿಸ್ ಡೆ ಗೊಂಗೊರಾ Luis de Góngora y Argote | |
---|---|
ಜನನ | 11 ಜುಲೈ 1561 ಕಾರ್ಡೋಬ, ಸ್ಪೇನ್ |
ಮರಣ | 24 ಮೇ 1627 ಕಾರ್ಡೋಬ, ಸ್ಪೇನ್ |
ವೃತ್ತಿ | ಕವಿ,ಪಾದ್ರಿ |
ಸಾಹಿತ್ಯ ಚಳುವಳಿ | culteranismo |
ಬಾಲ್ಯ ಮತ್ತು ಜೀವನ
ಬದಲಾಯಿಸಿಕಾರ್ಡೊಬದ ಶ್ರೀಮಂತ ಮನೆತನವೊಂದರಲ್ಲಿ 1561ರ ಜುಲೈ 11ರಂದು ಜನಿಸಿದ. ತಂದೆ ಫ್ರಾನ್ಸಿಸ್ಕೊ ಡಿ ಆರ್ಗೋಟಾ ನಗರದ ಮೇಯರ್ ಆಗಿದ್ದ. ಅಲ್ಲದೆ ಇವನ ಪುಸ್ತಕ ಭಂಡಾರ ಇಡೀ ಊರಿಗೇ ಪ್ರಸಿದ್ಧವಾದುದಾಗಿತ್ತು.
ಗೊಂಗೊರಾ ಸಾಲಮಾಂಕ ವಿಶ್ವವಿದ್ಯಾಲಯದಲ್ಲಿ ಕಾನೂನು ಶಾಸ್ತ್ರ ಕುರಿತು ಉನ್ನತ ವ್ಯಾಸಂಗ ಮಾಡಿದ. ಆದರೂ ಒಲವು ಕಾವ್ಯದ ಕಡೆಗೇ ಇತ್ತು. ಈತ ತನ್ನ 24ನೆಯ ವಯಸ್ಸಿನಲ್ಲಿಯೇ ಶ್ರೇಷ್ಠ ಕವಿಯೆನಿಸಿ ಕೊಂಡ. ಸುವಿಖ್ಯಾತ ಸಾಹಿತಿ ಸರ್ವಾಂಟಿಸ್ ತನ್ನ ಗ್ಯಾಲಟೀಯ ಎಂಬ ಕೃತಿಯಲ್ಲಿ ಈತನ ಭಾವಗೀತೆ ಗಳ ಶ್ರೇಷ್ಠತೆಯನ್ನು ಪ್ರಶಂಸಿಸಿದ್ದಾನೆ.
ಶ್ರೇಷ್ಠವಾದ ಕವಿತೆಗಳನ್ನು ಎಷ್ಟು ಬರೆದರೂ ಅದರಿಂದ ಜೀವನ ಸಾಗದೆಂದು ಕಂಡುಕೊಂಡ ಕವಿ ಚರ್ಚಿನಲ್ಲಿ ಪಾದ್ರಿಯಾದ. 3ನೆಯ ಫಿಲಿಪ್ ದೊರೆಯ ಆಸ್ಥಾನದಲ್ಲಿ ಸಾಕಷ್ಟು ವರ್ಚಸ್ಸೂ ಪ್ರಭಾವವೂ ಇದ್ದ ಕೆಲವರ ಬೆಂಬಲ ದೊರಕಿ ಕಾಲಕ್ರಮದಲ್ಲಿ ರಾಜಾನುಗ್ರಹವನ್ನು ಪಡೆದು ಅರಮನೆಯ ಚಾಪ್ಲಿನ್ ಆದ. ಹಾಗಾಗಿ ಜೀವಮಾನದ ಬಹು ಭಾಗವನ್ನು ಮ್ಯಾಡ್ರಿಡ್ ನಗರದಲ್ಲೇ ಕಳೆದ. ಈತನ ಅಭಿಮಾನಿಗಳಾಗಿದ್ದವರು ಕೆಲವರು ಮುಂದೆ ಆಸ್ಥಾನದಲ್ಲಿ ತಮಗಿದ್ದ ಪ್ರತಿಷ್ಠೆಯನ್ನು ಕಳೆದುಕೊಂಡರು. ಕೆಲವರು ಮರಣ ಹೊಂದಿದರು. ಇನ್ನು ಕೆಲವರು ಹತರಾದರು. ರಾಜಾನುಗ್ರಹ ತಪ್ಪಿತು. ಕವಿಗೆ ಚಾಪ್ಲಿನ್ ಪದವಿಗಿಂತ ಹೆಚ್ಚಿನ ಸ್ಥಾನ ದೊರೆಯದೇ ಹೋಯಿತು.
ಕಾವ್ಯ ರಚನೆ
ಬದಲಾಯಿಸಿಇಷ್ಟಾದರೂ ಗೊಂಗೊರಾನ ಕಾವ್ಯ ರಚನೆ ಮಾತ್ರ ತಡೆಯಿಲ್ಲದೆ ಸಾಗಿತ್ತು. ವಿವಿಧ ಬಗೆಯ ಕಿರುಗವನಗಳನ್ನು ಬರೆದು ಜನಪ್ರಿಯನಾದ. ಈತನ ಚಿತ್ತಾಕರ್ಷಕವಾದ ಇಟಾಲಿಯನ್ ಸಾನೆಟ್ಟುಗಳು, ಓಡ್ ಮುಂತಾದ ಲಲಿತ ಭಾವಗೀತೆಗಳು, ವಿಡಂಬನಾತ್ಮಕ ಹಾಡುಗಳು, ಗಿಟಾರ್ ವಾದನಕ್ಕೆಂದೇ ವಿಶೇಷವಾಗಿ ರಚಿತವಾದ ಹಾಡುಗಳು ಭಾವದ ಸೊಗಸು, ಸುಂದರವಾದ ಶೈಲಿ, ಮಧುರವಾದ ಭಾಷೆಗಳೆಲ್ಲ ಮೇಳವಿಸಿದ್ದರಿಂದ ಅಮೂಲ್ಯವಾದ ಭಾವಗೀತೆಗಳಾಗಿವೆ.
1600ರ ಅನಂತರ ಈತನ ಕಾವ್ಯದ ವಸ್ತು, ಭಾಷೆ, ಶೈಲಿ ಸಂಪುರ್ಣವಾಗಿ ಬೇರೆಯೇ ಆದವು. ಮೊದಲಿನ ಸರಳವಾದ ಪ್ರೇಮಗೀತೆಗಳಿಗೆ ಬದಲಾಗಿ ಶ್ರೀಮಂತರ ಪ್ರಶಸ್ತಿ ಪದ್ಯಗಳು, ದೀರ್ಘಕಾವ್ಯಗಳು ಹೊರಬಂದವು. ವಿಂಡಬನೆ ಇನ್ನೂ ಹರಿತವಾಯಿತು. ರೂಢಿಯಲ್ಲಿದ್ದ ಕಾವ್ಯದ ಹಾಗೂ ಭಾಷೆಯ ನಿಯಮಗಳನ್ನು ಉಲ್ಲಂಘಿಸಿದನೆಂಬ ಆಕ್ಷೇಪಣೆಯೂ ಈತನ ಮೇಲೆ ಬಂತು. ಕವಿ ಇದೊಂದನ್ನೂ ಲೆಕ್ಕಿಸದೆ ಹೊಸದೊಂದು ಕಾವ್ಯಮಾರ್ಗವನ್ನೇ ನಿರ್ಮಾಣಮಾಡಿದ.
ಹೊಸ ಶೈಲಿಯ ಅನ್ವೇಷಣೆ
ಬದಲಾಯಿಸಿಇಂಗ್ಲೆಂಡಿನ ಯೂಫ್ಯೂಯಿಸಂ ಇಟಲಿಯ ಷಿಯಾಬ್ರೆಸೆರಿಂ ಶೈಲಿಯನ್ನೇ ಹೋಲುವ ಈ ನೂತನ ಕಾವ್ಯಪದ್ಧತಿಯನ್ನು ಕಲ್ಚೆರಾನಿಸ್ಮೊ ಅಥವಾ ಸ್ಟೈಲೊಕಲ್ಟೊ ಎಂದು ಕರೆದರು. ಅತಿಯಾದ ಶಬ್ದಾಡಂಬರ, ಲ್ಯಾಟಿನ್ ಭೂಯಿಷ್ಠವಾದ ಭಾಷೆ, ಮಾತು ಮಾತಿಗೆ ಪೌರಾಣಿಕ ಪುರ್ವವೃತ್ತಾಂತಗಳ ಸೂಚನೆ, ಅಸ್ಪಷ್ಟತೆ ಮುಂತಾದ ಲಕ್ಷಣಗಳಿಂದ ಕೂಡಿದ ಈ ಕಾವ್ಯಮಾರ್ಗ ಕೃತಕವೂ ಬುದ್ಧಿಚಮತ್ಕಾರ ಪ್ರದರ್ಶಕವೂ ಆಗಿತ್ತು. ರಸ-ಭಾವಗಳಿಗಿರುವ ಪ್ರಾಶಸ್ತ್ಯ ಮಾಯವಾಗಿ ಕೇವಲ ರಚನಾ ಕೌಶಲಕ್ಕೇ ಇಲ್ಲಿ ಮನ್ನಣೆ. ಈ ಕಾವ್ಯರೀತಿಯ ಸುಳುಹು 16ನೆಯ ಶತಮಾನದ ಕೆಲವು ಕಾವ್ಯಗಳಲ್ಲಿ ಅಲ್ಲಲ್ಲಿ ಕಂಡುಬಂದರೂ ಗೊಂಗೊರಾ ಕವಿಯ ಪ್ರತಿಭೆಯ ಮೂಸೆಯಲ್ಲಿ ಇದು ಹೊಚ್ಚ ಹೊಸದೆಂಬಂತೆ, ಈತನ ವಿಶಿಷ್ಟ ಸೃಷ್ಟಿಯೆಂಬಂತೆ ಕಂಗೊಳಿಸಿ ಗೊಂಗೊರಿಸಮ್ ಎಂದೇ ಹೆಸರಾಯಿತು. ಗೊಂಗೊರಾನ ಎಲ್ ಪಾಲಿಫಿಮೊ, ಲಾಸ್ ಸೋಲೆಡಾಡಿಸ್ ಎಂಬ ಮಹಾಕೃತಿಗಳು ಈ ಕಾವ್ಯ ಶೈಲಿಯ ಅತ್ಯುತ್ಕೃಷ್ಟ ಮಾದರಿಗಳಾಗಿವೆ. ಹಲವಾರು ಕಿರಿಯ ಕವಿಗಳು ಈ ಶೈಲಿಯ ಪ್ರಭಾವದಿಂದಾಕರ್ಷಿತರಾದುದು ಮಾತ್ರವಲ್ಲ 17ನೆಯ ಶತಮಾನದ ಸ್ಪ್ಯಾನಿಷ್ ಕಾವ್ಯದ ಮೇಲೆಲ್ಲ ಇದರ ಪ್ರಭಾವ ಬಿದ್ದಿತು. ಈ ಶೈಲಿಯನ್ನು ಕಟುವಾಗಿ ಖಂಡಿಸಿದ ವಿಮರ್ಶಕರೂ ಇದ್ದರು. ಹೀಗೆ ಈ ಕಾವ್ಯಪದ್ಧತಿ ತೀವ್ರವೂ ಕೋಲಾಹಲಕರವೂ ಆದ ವಿವಾದವನ್ನೇ ಎಬ್ಬಿಸಿತು. 18ನೆಯ ಶತಮಾನದಲ್ಲಿಯಾದರೊ ಈ ಶೈಲಿಯ ಕಾವ್ಯಕ್ಕೆ ಮನ್ನಣೆಯೇ ಇಲ್ಲವಾಯಿತು. ಸುಮಾರು 2 ಶತಮಾನಗಳ ಕಾಲ ಗೊಂಗೊರಾನ ಕಾವ್ಯಗಳು ಅವಜ್ಞೆಯ ಕಂದರದಲ್ಲಿ ಬಿದ್ದುಹೋದವು. 1927ರಲ್ಲಿ ಡಮಾಸೊ ಅಲೆನ್ಸೊ ಎಂಬ ಸಾಹಿತ್ಯ ವಿದ್ವಾಂಸ ಸೋಲೆಡಾಡಿಸ್ ಕೃತಿಯನ್ನು ಸಂಪಾದಿಸಿ ಅದಕ್ಕೊಂದು ದೀರ್ಘವಾದ ವಿಮರ್ಶಾತ್ಮಕ ಮುನ್ನುಡಿ ಬರೆದು, ಅನುಬಂಧದಲ್ಲಿ ಕಾವ್ಯದ ತಾತ್ಪರ್ಯವನ್ನು ಸರಳವಾದ ಗದ್ಯದಲ್ಲಿ ಕೊಟ್ಟು ಪ್ರಕಟಿಸಿದ ಅನಂತರ ಗೊಂಗೊರಾನ ಹಿರಿಮೆ ಪುನಃ ಪ್ರತಿಷ್ಠಾಪಿತವಾಯಿತು. ಗೊಂಗೊರಾ ಸ್ಪೇನಿನ ಹಿರಿಯ ಕವಿಗಳ ಸಾಲಿಗೆ ಸೇರತಕ್ಕವ. ಈತನ ಕಾವ್ಯ ಕ್ಲಿಷ್ಟವಾಗಿರಬಹುದೇ ವಿನಾ ಎಲ್ಲಿಯೂ ನೀರಸವಾಗಿಲ್ಲ. ಈತನ ಶೈಲಿ ಶುದ್ಧವಾದುದು.
ಸಾಹಿತ್ಯ ಕಾಣಿಕೆ
ಬದಲಾಯಿಸಿಪಾಲಿಫಿಮೊ, ಸೋಲೆಡಾಡಿಸ್ ಕಾವ್ಯಗಳಲ್ಲಿ ಮಹಾಕಾವ್ಯದ ಅಂಶಗಳೂ ಕುರಿಗಾಹಿ ಕಾವ್ಯ (ಪ್ಯಾಶ್ಚೊರಲ್ ಪೊಯಟ್ರಿ) ಸಂಕೇತಗಳೂ ಸೇರಿವೆ. ನಿರ್ದಿಷ್ಟವಾದ ವಸ್ತುವಾಗಲೀ ಭಾವದ ಅಂಶವಾಗಲೀ ಇಲ್ಲದಿದ್ದರೂ ಕವಿಯ ಅದ್ಭುತವಾದ ವರ್ಣನಾಚಾತುರ್ಯ ದಿಂದಾಗಿ ಪಾತ್ರ, ಸನ್ನಿವೇಶ, ನಿಸರ್ಗ ಜೀವದುಂಬಿ ನಿಲ್ಲುತ್ತವೆ. ಕಾವ್ಯದ ಉದ್ದಕ್ಕೂ ಇಂಪಾದ ಸಂಗೀತದ ಲಯ ಕಾಣುತ್ತದೆ.
ಸೋಲೆಡಾಡಿಸ್ ಕಾವ್ಯದಲ್ಲಿ ತೆರೆಯುವ ಅಚ್ಚನಾಗರಿಕ ಲೋಕ, ಪಾಲಿಫಿಮೊ ಕಾವ್ಯದಲ್ಲಿ ಬರುವ ನಶ್ವರವಾದರೂ ತೀವ್ರ ಸಂವೇದನೆಯಿಂದ ಪುಷ್ಟಿಗೊಳ್ಳುವ ಐಹಿಕ ಸುಖದ ವರ್ಣನೆ ಸ್ಪೇನಿನ ಸಾಹಿತ್ಯಕ್ಕೆ ಕವಿಯ ಅಪುರ್ವವಾದ ಕಾಣಿಕೆಗಳಾಗಿವೆ.
ಪ್ರಯೋಗ ಸಾಧ್ಯವಲ್ಲದ ಮೂರು ನಾಟಕಗಳು, ಪಿರಮೊ ಇ ಥಿಸ್ಬಿ ಎಂಬ ಕೃತಿ, ಅಮೂಲ್ಯವಾದ ಪತ್ರಗಳ ಒಂದು ಸಂಕಲನ-ಇವು ಈತನ ಇತರ ಕೃತಿಗಳು. ಈತನ ಕಾವ್ಯವನ್ನು ಕುರಿತು ಬೆಳೆದಿರುವ ವಿಮರ್ಶೆ ಹಾಗೂ ವಿವಿಧ ವ್ಯಾಖ್ಯಾನ ಸಾಹಿತ್ಯ-ಗ್ರಂಥಗಳು ಅಲಕ್ಷಿಸಲಾಗದಷ್ಟು ಸತ್ತ್ವಯುತವಾಗಿವೆ.
ನಿಧನ
ಬದಲಾಯಿಸಿ1626ರಲ್ಲಿ ಪಾರ್ಶವಾಯುಪೀಡಿತನಾಗಿ ಮ್ಯಾಡ್ರಿಡ್‍ನಿಂದ ಕಾರ್ಡೊಬಕ್ಕೆ ಹಿಂತಿರುಗಿದ ಕವಿ ಒಂದು ವರ್ಷ ಕಾಲ ನರಳಿ ಮರಣ ಹೊಂದಿದ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- English translations of some of Góngora's poems Archived 2022-11-08 ವೇಬ್ಯಾಕ್ ಮೆಷಿನ್ ನಲ್ಲಿ.
- Góngora website, Brown University Department of Hispanic Studies Archived 2008-04-15 ವೇಬ್ಯಾಕ್ ಮೆಷಿನ್ ನಲ್ಲಿ.
- (Spanish) Poems by Góngora
- (Spanish) Luis de Góngora y Argote (1561-1627) Archived 2007-12-25 ವೇಬ್ಯಾಕ್ ಮೆಷಿನ್ ನಲ್ಲಿ. (texts of his poems, in Spanish)
- (Spanish) Luis de Góngora y Argote (1561-1627) (texts of his poems, in Spanish)
ಉಲ್ಲೇಖನ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ