ರೊಜೆಟ್ಟಶಿಲೆ
ರೊಸೆಟ್ಟ ಕಲ್ಲು ರಾಜ ಐದನೇ ಟೊಲೆಮಿ ಪರವಾಗಿ ಕ್ರಿ.ಪೂ. ೧೮೬ರಲ್ಲಿ ಮೆಂಫಿಸ್‍ನಲ್ಲಿ ನೀಡಿದ ತೀರ್ಪನ್ನು ಕೆತ್ತಿದ ಪುರಾತನ ಈಜಿಪ್ಟ್‌ನ ಒಂದು ಸ್ಮಾರಕ ಸ್ತಂಭ. ಈಜಿಪ್ಟಿನ ರೊಜೆಟ್ಟಾ ಶಿಲೆ: ನೈಲ್ ನದಿ ನಾಗರೀಕತೆಯು ಪುರಾತನ ನಾಗರಿಕತೆಗಳಲ್ಲಿ ಒಂದು. ಅಲ್ಲಿನ ಕಲೆ ವಾಸ್ತು ಶಿಲ್ಪ ಮತ್ತು ಶಾಸನಗಳು ಸಾಂಸ್ಕೃತಿಕ ಚರಿತ್ರೆಯ ಸ್ಮಾರಕಗಳಾಗಿವೆ. ಪ್ರಪಂಚದ ಏಳು ಅಧ್ಭುತಗಳಲ್ಲಿ ಒಂದಾದ ಪಿರಮಿಡ್ ನಂತೆಯೇ ಅವರ ಲಿಪಿಯೂ ನಿಗೂಢ ಮತ್ತು ಭವ್ಯ. ಅವರು ಲಿಪಿಯನ್ನು ದೇವರ ದೇಣಿಗೆ ಎಂದೇ ಭಾವಿಸಿದ್ದರು. ಅವರ ಪ್ರಕಾರ ಹೈಗ್ರೋಗ್ಲಿಫ್( ಪವಿತ್ರಲಿಪಿ) ಸೋಥ್ ದೇವತೆ ನೀಡಿದ ಕೊಡುಗೆ. ಕ್ರಿ..ಪೂ,೩೪೦೦ರಿಂದಲೇ ಪವಿತ್ರ ಲಿಪಿಗಳು ಕಂಡುಬಂದಿವೆ. ಅವರ ನಂಬುಗೆಯ ಪ್ರಕಾರ ಚಿತ್ರಲಿಪಿ ಬರಹಗಳು ಭಾಷೆಯವಾಹಕ ಮಾತ್ರವಲ್ಲ ವ್ಯಕ್ತಿಯ ಅಂತಃಸತ್ವವೇ ಆಗಿವೆ. ಯಾವುದೇ ವ್ಯಕ್ತಿಯ ಕುರಿತಾದ ಲಿಪಿ ಇರುವವರೆಗೆ ಅವನು ಜೀವಂತ ಎಂಬುದು ಅವರ ಗಾಢ ನಂಬುಗೆ. ಬರಹ ಅಳಿಸಿ ಹೋದಾಗಲೇ ಅವನ ನಾಶ. ಅದರಿಂದ ಅವು ಬಹು ಕಾಲದವರೆಗೆ ಬದಲಾಗದೇ ಉಳಿದವು. ಅವು ದೈವೀ ನುಡಿ ಎಂಬ ಕಾರಣವೇ ಅವುಗಳ ಸ್ಥಿರತೆಗೆ ಕಾರಣ. ಹಾಗಾಗಿ ಬರಹಗಳು ಹೆಚ್ಚಾಗಿ ಸ್ಮಾರಕ ಮತ್ತು ದೇವಾಲಯಗಳಲ್ಲಿ ಕಂಡು ಬರುತ್ತವೆ. ಕಾಲ ಕಳೆದಂತೆ ಅನ್ಯ ಭಾಷೆಯ, ಸಂಸ್ಕೃತಿಯ ಜನರು ಅವನ್ನು ನಿಗೂಢ ಮತ್ತು ಮಾಂತ್ರಿಕ ಬರಹಗಳೆಂದು ನಂಬಿದರು. ಹಾಗಾಗಿ ಅವುಗಳ ಬಳಕೆ ಪೂರ್ಣವಾಗಿ ನಿಂತುಹೋಯಿತು. ಕ್ರಿ.ಪೂ. ೩೧೧೦ ರಿಂದ ಕ್ರಿ. ಪೂ. ೩೩೦ ರವರೆಗ ಸುಮಾರು ೩೩ ವಂಶದ ಅರಸರು ಈಜಿಪ್ಟನ್ನು ಆಳಿದರು. ಈಗ ದೊರೆತಿರುವ ಪ್ರಾಚೀನ ಉಲ್ಲೇಖ ಕ್ರಿ. ಪೂ. ೩೦೦೦ ಇಸ್ವಿಯದು.ಅದರಲ್ಲಿ ಉತ್ತರ ಮತ್ತು ದಕ್ಷಿಣ ಈಜಿಪ್ಟಗಳ ಅಧಿಪತಿ ನಾರ್ ಮೇಲ್ ಪಲೆಟ್ಟೆಯ ಮೇಲೆ ಕಂಡುಬಂದಿದೆ. ಆ ಅವಧಿಯಲ್ಲಿನ ಪ್ರಾಚೀನ ಈಜಿಪ್ಟಿನ ಲಿಪಿಗಳು ಬೃಹತ್ಪ್ರಮಾಣದಲ್ಲಿ ದೊರೆತಿವೆ. ಕ್ರಿ..ಪೂ.ಅವಧಿಯ ಅನೇಕ ಬರಹಗಳು ಬಂಡೆಗಳ ಮೇಲೆ, ದೇವಾಲಯದ ಗೋಡೆಗಳ ಮೇಲೆ, ಪಿರಮಿಡ್ಡುಗಳ ಒಳಗೆ, ಪೆಪ್ರಸ್ ಸುರಳಿಗಳಲ್ಲಿ ಅಪಾರ ಪ್ರಮಾಣದಲ್ಲಿ ಕಂಡು ಬಂದಿವೆ. ಕ್ರಿ.ಪೂ ೩-೬ನೆಯ ಶತಮಾನ ಈಜಿಪ್ಟ್ ಮತ್ತು ಗ್ರೀಕ್ ಸಂಸ್ಕೃತಿಗಳ ಸಂಘರ್ಷದ ಕಾಲ. ಅಲೆಗ್ಜಾಂಡರನ ದಂಡನಾಯಕ ಟಾಲೆಮಿ ಅಲ್ಲಿ ೩೨ ನೆಯ ಫೆರೊ ಆಗಿ ಹೊಸ ರಾಜವಂಶದ ಉದಯಕ್ಕೆ ಕಾರಣನಾದ. ಅಲ್ಲಿಂದ ಮುಂದೆ ಅವನ ಉತ್ತರಾಧಿಕಾರಿಗಳನ್ನು ಟಾಲೆಮಿ ಮತ್ತು ಉತ್ತರಾಧಿಕಾರಿಣಿಯರನ್ನು ಕ್ಲಿಯೋಪಾತ್ರ ಎಂದೂ ಸಂಬೋಧಿಸುವ ಸಂಪ್ರದಾಯ ಜಾರಿಗೆ ಬಂದಿತು. ಅವರ ಕಾಲದಲ್ಲಿ ಗ್ರೀಕ್ ಮತ್ತು ಹೈಗ್ರೊಗ್ಲಿಫ್ಗಳೆರಡೂ ಬಳಕೆಯಲ್ಲಿದ್ದವು .ಕ್ರಿ. ಶ ೩ನೆಯ ಶತನಮಾನದ ಸುಮಾರಿಗೆ ಸಂಪೂರ್ಣ ಈಜಿಪ್ಟ್ ರೋಮನ್ ಆಧಿಪತ್ಯಕ್ಕೆ ಒಳಗಾಯಿತು. ಚಕ್ರವರ್ತಿಯು ರೋಮ್ ಸಾಮ್ರಾಜ್ಯದ ವಿಗ್ರಹಾರಾಧನೆಯುಳ್ಳ ಎಲ್ಲ ದೇಗುಲಗಳನ್ನೂ ಮುಚ್ಚಿಸಿದ. ಪರಿಣಾಮ ಹೈಗ್ರೊಲಿಫ್ಗಳ ಬರವಣಿಗೆ ನಿಂತು ಹೋಯಿತು. ರೋಮ್ ಸಾಮ್ರಾಜ್ಯ ಅಳಿದ ಮೇಲೆ ಮಧ್ಯಯುಗದಲ್ಲಿ ಈಜಿಪ್ಟಿನ ಬರವಣಿಗೆಯ ಕುರಿತು ಯುರೋಪಿನಲ್ಲಿ ಆಸಕ್ತಿ ಹುಟ್ಟಿತು.೧೬೩೩ ರಿಂದ ಹೈಗ್ರೊ ಗ್ಲಿಫ್ಗಳ ಅನುವಾದಕ್ಕೆ ಪ್ರಯತ್ನ ಪ್ರಾರಂಭವಾಯಿತು. ಒಂದೋ ಎರಡೋ ಅಧ್ಯಯನಗಳು ನಡೆದರೂ ಯಾವುದೂ ನಿಖರವಾಗಿರಲಿಲ್ಲ. ಆದರೆ ೧೭೯೮ ರಲ್ಲಿ ನಡೆದ ಆಂಗ್ಲೋ ಫ್ರೆಂಚ್ ಯುದ್ಧವು ಈಜಿಪ್ಟ್ ಅಧ್ಯಯನಕ್ಕೆ ಹೊಸ ತಿರುವು ನೀಡಿತು. ನೆಪೋಲಿಯನ್ನ ಸೈನ್ಯವು ಇಂಗ್ಲಿಷ್ರನ್ನು ಈಜಿಪ್ಟ್ ನಲ್ಲಿ ಭೂಯುದ್ಧದಲ್ಲಿ ಸೋಲಿಸಿ ಫಲವತ್ತಾದ ನೈಲ್ ನದಿ ಬಯಲನ್ನು ವಶಪಡಿಸಿ ಕೊಂಡಿತು. ಆದರೆ ಜಲಯುದ್ಧದಲ್ಲಿ ಇಂಗ್ಲಿಷರಿಗೆ ಗೆಲುವಾಯಿತು. ಅವರು ಫ್ರೆಂಚರನ್ನು ಜಲಮಾರ್ಗದಲ್ಲಿ ತಾಯ್ನಾಡಿಗೆ ವಾಪಸ್ಸು ಹೋಗದಂತೆ ತಡೆದರು. ಅದರಿಂದ ಫ್ರೆಂಚ್ ಸೈನ್ಯ ಮೂರುವರ್ಷ ಈಜಿಪ್ಟಿನಲ್ಲಿ ನಿಲ್ಲಬೇಕಾಯಿತು. ಆ ಅವಧಿಯಲ್ಲಿ ಸೈನ್ಯದೊಂದಿಗೆ ಬಂದಿದ್ದ ನೂರಾರು ವಿಜ್ಞಾನಿಗಳೂ ತಂತ್ರಜ್ಞರು ಮತ್ತು ಸಾವಿರಾರು ನಾಗರೀಕರು ಈಜಿಪ್ಟಿನ ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ತೊಡಗಿದರು. ಅವರ ಪ್ರಯತ್ನದ ಫಲವಾಗಿ " ಈಜಿಪ್ಟಿನ ವರ್ಣನೆ " ಎಂಬ ೧೯ ಸಂಪುಟಗಳು ಹೊರ ಬಂದವು . ಅವು ದು ಯುರೋಪಿನಲ್ಲಿ ಈಜಿಪ್ಟನ ಬಗ್ಗೆ ಹೊಸ ಕುತೂಹಲ ಮೂಡಿಸಿದವು. ಇದೇ ಸಮಯದಲ್ಲಿ ಫ್ರೆಂಚ್ ಸೈನಿಕರು ತಮ್ಮ ವಶದಲ್ಲಿದ್ದ ಪ್ರದೇಶಗಳ ಪುನರ್ನಿರ್ಮಾಣಕ್ಕೆ ಪ್ರಯತ್ನಿಸಿದರು ಆಯಕಟ್ಟಿನ ಸ್ಥಳಗಳಲ್ಲಿ ಕೋಟೆಕೊತ್ತಳ ಕಟ್ಟತೊಡಗಿದರು ಅವರಿಗೆ ಕೋಟೆಯೊಂದರ ಪುನರ್ನಿರ್ಮಾಣದ ಸಮಯದಲ್ಲಿ ಒಂದು ಬರಹವಿರುವ ಕಪ್ಪು ಶಿಲಾಫಲಕ . ಕ್ರಿ.ಶ. 1799.ರಲ್ಲಿ ದೊರೆಯಿತು. ಈಜಿಪ್ಟಿನ ನೈಲ್ ನದಿ ಬಯಲಿನಲ್ಲಿ ಜೂಲಿಯಾನ್ ಎಂಬ ಕೋಟೆಯನ್ನು ಪುನರ್ನಿರ್ಮಾಣ ಮಾಡುತಿದ್ದರು. ಶಿಲಾಫಲಕವು ೩ ಅಡಿ ೯ ಅಂಗುಲ ಉದ್ದ, ೨ ಅಡಿ ೪.೫ ಅಂಗುಲ ಅಗಲ ಮತ್ತು ೧೧ ಅಗುಲ ದಪ್ಪವಿದ್ದಿತು . ಸೈನಿಕರಲ್ಲಿ ಪುರಾತತ್ತವ ಪರಿಜ್ಞಾನವಿದ್ದ ಒಬ್ಬನು ಅದರ ಮಹತ್ವ ಗುರುತಿಸಿದ.ಶಿಲೆ ನದಿಮುಖಜ ಭೂಮಿಯಲ್ಲಿರುವ ಚಿಕ್ಕಹಳ್ಳಿ ರೊಸೆಟ್ಟಾದಲ್ಲಿ ದೊರೆಯಿತು. ಅದನ್ನು ತಮ್ಮ ಜೊತೆ ಇದ್ದ ವಿದ್ವಾಂಸರಿಗೆ ತೋರಿಸಿದರು ಅದು ರೊಸೆಟ್ಟಾ(ರಷೀದ್) ಎಂಬ ಗ್ರಾಮದಲ್ಲಿ ಸಿಕ್ಕಿದುದರಿಂದ ರೊಜೆಟ್ಟಾ ಶಿಲೆ ಎಂದು ಹೆಸರಿಸಿದರು . ರೊಜೆಟ್ಟಾ ಶಾಸನವು ಎರಡುಭಾಷೆಯಲ್ಲಿ ( ಈಜಿಪ್ಷಿಯನ್ಮತ್ತು ಗ್ರೀಕ್) ಮೂರು ಲಿಪಿಗಳಲ್ಲಿ ( ಪವಿತ್ರಲಿಪಿ, ಡೆಮೊಟಿಕ್ಲಿಪಿ ಮತ್ತು ಗ್ರೀಕ್ ಲಿಪಿ) ಇರುವ ಶಾಸನ. ಮೇಲಾಗಿ ಅವೆಲ್ಲವೂ ಒಂದೇ ವಿಷಯವನ್ನು ಕುರಿತ ಬರಹ. ಇದರಿಂದ ಒಂದು ಭಾಷೆ ಮತ್ತು ಒಂದು ಲಿಪಿ ಗೊತ್ತಿದ್ದರೂ ಸಾಕು ಉಳಿದವುಗಳನ್ನು ಅರಿತು ಕೊಳ್ಳಬಹುದಾಗಿತ್ತು. ರೊಸೆಟ್ಟಾ ಶಿಲೆಯು ಮೇಲೆ ಮೂರು ವಿಭಿನ್ನ ಲಿಪಿಗಳಲ್ಲಿ ಬರಹವಿರಲು ಕಾರಣ ಆಗ ಈಜಿಪ್ಟಿನಲ್ಲಿ ಮೂರು ಲಿಪಿಗಳು ಬಳಕೆಯಲ್ಲಿ ಇದ್ದವು. . ಮೊದಲನೆಯದು ಪವಿತ್ರ ಲಿಪಿ .ಅದನ್ನು ಧಾರ್ಮಿಕ ಮತ್ತು ಅತಿಮುಖ್ಯವಾದ ರಾಜಕಾರಣದ ವಿಷಯ ದಾಖಲಿಸಲು ಬಳಕೆ ಮಾಡುತಿದ್ದರು. ಎರಡನೆಯದು ಈಜಿಪ್ಟನ್ನು ಆ ಕಾಲದಲ್ಲಿ ಆಳುತಿದ್ದ ಗ್ರೀಕರಭಾಷೆಯ ಲಿಪಿಯಾಗಿತ್ತು. ಮೂರನೆಯದು ಜನ ಸಾಮಾನ್ಯರು ಬಳಸುತ್ತಿರುವ ಸಾಮಾನ್ಯ ಲಿಪಿ (ಡೆಮೊಟಿಕ್) ಆಗಿತ್ತು. ಆ ಶಾಸನವು ಮೂರು ವರ್ಗದವರಿಗೂ ಸಂಬಂಧಿಸಿರುವುದರಿಂದ ಮೂರು ಲಿಪಿಯಲ್ಲಿ ಬರೆಯಲಾಗಿತ್ತು. ಅದನ್ನು ಅರ್ಚಕರು , ಅಧಿಕಾರಿಗಳು, ಜನಸಾಮಾನ್ಯರು ಮತ್ತು ಆಳುವ ಗ್ರೀಕರು ಓದಿ ತಿಳಿಯಲು ಸಾಧ್ಯವಾಗ ಬೇಕಿತ್ತು. ಅದು ಒಂದು ರಾಜಾಜ್ಞೆಯಾಗಿತ್ತು . ರೊಸೆಟ್ಟಾ ಶಿಲಾಶಾಸನವನ್ನು ಅರ್ಚಕರ ಗುಂಪೊಂದು ಬರೆಸಿದ್ದರು. ಅದು ಈಜಿಪ್ಟನ್ ಅರಸ ಫೆರೊನ ಕಾರ್ಯವೈಖರಿಯನ್ನು ವಿವರಿಸುವ ವಿಷಯ ಹೊಂದಿತ್ತು. ಇದು ಅರ್ಚಕರ ಸಮೂಹವು ಅನುಮೋದಿಸಿದ ನಂತರ ಕಂಡರಿಸಿದ ಶಾಸನ ಬರಹ.ಈಜಿಪ್ಟನ್ ಅರಸ ಟಾಲಮಿ -V ಯ ಕಿರೀಟ ಧಾರಣೆಯ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹೊರಡಿಸಿದ ಶಾಸನ ಅದಾಗಿತ್ತು. ಅದರಲ್ಲಿ ರಾಜನು ಅರ್ಚಕರ, ಅಧಿಕಾರಿಗಳ ಮತ್ತು ಜನಸಾಮಾನ್ಯರ ಅನುಕೂಲಕ್ಕಾಗಿ ಮಾಡಿರುವ ಕೆಲಸಗಳ ವಿವರವಾದ ಪಟ್ಟಿ ಇದ್ದಿತು.ಅದರಿಂದ ಅದನ್ನು ಮೂರೂ ವರ್ಗದವರೂ ಓದಿ ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದ ಹಾಗೆ ಬರೆಸಲಾಗಿತ್ತು. ಈಗಿನ ಇಜಿಪ್ಷಿಯನ್ ಭಾಷೆಯ ಪ್ರಾಚೀನದಲ್ಲಿನ ಒಂದು ಹಂತವನ್ನು ಕಾಪ್ಟಿಕ್ ಎನ್ನುವರು. ಅದನ್ನು ೧೭ ನೇ ಶತಮಾನದವರೆಗೆ ಬಳಸುತಿದ್ದರು. ಆದರೆ ಕ್ರಿ. ಶ. ಮೊದಲನೆಯ ಶತಮಾನದಿಂದಲೇ ಈಜಿಪ್ಷಿಯನ್ಭಾಷೆಯನ್ನು ಗ್ರೀಕ್ ಅಕ್ಷರಗಳಲ್ಲಿ ಬರೆಯಲು ಪ್ರಾಂಭಿಸಿದ್ದರು. ಆ ಲಿಪಿಗಳಲ್ಲಿ ಆರೇಳು ಕಾಪ್ಟಿಕ್ ಲಿಪಿಗಳೂ ಸೇರಿವೆ. ಈ ಶಾಸನದಲ್ಲಿನ ಕಾಪ್ಟಿಕ್ ಲಿಪಿಗಳನ್ನು ಮೊದಲು ಗುರುತಿಸಿ ಅವುಗಳ ಸಹಾಯದಿಂದ ಉಳಿದವನ್ನೂ ಅರ್ಥೈಸುವ ಕೆಲಸ ಮೊದಲಾಯಿತು..'ಫ್ರೆಂಚ್ ವಿದ್ವಾಂಸನಾದ "ಸಿಲ್ವೆಸ್ಟ್ರೆ ಡಿಸಾಕಿ" ಡೊಮೆಟಿಕ್ಲಿಪಿಯಲ್ಲಿದ್ದ ಟಾಲೆಮಿ ಮತ್ತು ಅಲೆಕ್ಜಾಂಡರ್ ಹೆಸರುಗಳನ್ನು ಗುರುತಿಸುವಲ್ಲಿ ಸಫಲನಾದನುಅದರಿಂದ ಲಿಪಿಗೂ ಧ್ವನಿಗೂ ಇರುವ ಸಂಬಂಧ ಗುರುತಿಸುವುದು ಸಾಧ್ಯವಾಯಿತು. ಲಿಪಿಗಳುಕೇವಲ ಒಂದು ಭಾಷೆಯ ಪದಗಳನ್ನು ಆಧರಿಸಿರುತ್ತವೆ. ಅನ್ಯ ಭಾಷೆಯ ಹೆಸರು ಬರೆಯುವುದು ಆಗದು. ಆದ್ದರಿಂದ ಪರಭಾಷಾ ಪದ ಬರೆಯಲು ಲಿಪಿ ಧ್ವನಿ ರೂಪಕವಾಗಿರುವುದರಿಂದ ಸಾಧ್ಯ ಎಂದು ನಿರೂಪಿಸಿದನು. ಅಲ್ಲದೆ ಅದರಲ್ಲಿ ಕೆಲವು ಚಿಹ್ನೆಗಳ ಗುಂಪು ತುಸು ಭಿನ್ನ ವಾಗಿದ್ದವು ಅವುಗಳನ್ನು ಪಟ್ಟಿಕೆಯೊಂದು ಆವರಿಸಿತ್ತು. ಅವು ಬುಲೆಟ್ಹೋಲುವುದರಿಂದ ಕರ್ಟಚ್ಚಸ್ಎಂದು ಕರೆದರು ಶಾಸನದಲ್ಲಿ ಅದೇ ರೀತಿಯಲ್ಲಿ ಆವರಣದಲ್ಲಿರುವ ಐದು ಹೆಸರುಗಳನ್ನು ಗುರುತಿಸಲಾಯಿತು. ಥಾಮಸ್ ಯಂಗ್ ಮೊದಲಿಗೆ ಶಾಸನದಲ್ಲಿನ ಕೆಲವು ಸಂಕೇತಗಳು ಅರಸನನ್ನು ಸೂಚಿಸುತ್ತವೆ ಎಂದು ಅರ್ಥಮಾಡಿಕೊಂಡ. ಅಲ್ಲಿಂದ ಪುರಾತನ ಈಜಿಪ್ಟ ಬರಹಗಳನ್ನು ಅನೇಕ ವರ್ಷ ಅಧ್ಯಯನ ಮಾಡಿದ ಫ್ರೆಂಚ್ ವಿದ್ವಾಂಸ ಜೀನ್, ಫ್ರಾಂಕೊಯಿಸ್ ಮುಂದುವರಿದ. ಗೊತ್ತಿರುವ ಸಂಕೇತಗಳ ಸಹಾಯದಿಂದ ಉಳಿದವನ್ನು ತಿಳಿಯಲು ಪ್ರಯತ್ನಿಸಿದ. ಆ ಕೆಲಸದಲ್ಲಿ ಗ್ರೀಕ್ ಭಾಷೆ ಮತ್ತು ಲಿಪಿಗಳೂ ಸಹಾಯಕವಾದವು. ಈಜಿಪ್ಟ ಮತ್ತು ಗ್ರೀಕ್ ರಾಜ್ಯಗಳ ನಡುವಣ ಪತ್ರವ್ಯವಹಾರದ ದಾಖಲೆಗಳೂ ಲಭ್ಯವಿದ್ದವು. ಅವುಗಳ ಸಹಾಯವೂ ಉಪಯುಕ್ತವಾದವು. ಹೀಗೆ ಇದು ಹೈರೊಗ್ಲಿಫ್ಗಳ ಅರ್ಥೈಸುವಕೆಗೆ ಕೀಲಿ ಕೈ ಆಯಿತು .೧೮೨೨ ರಲ್ಲಿ ನೈಲ್ ನದಿ ತೀರದಲ್ಲಿನ ಸಿಂಬಬೆಲ್ ದೇವಾಲಯದಲ್ಲಿ ಹೊಸ ಶಾಶನಗಳು ಬೆಳಕಿಗೆ ಬಂದವು. ಅವುಗಳನ್ನು ಹೊಸ ಅಧ್ಯಯನದ ಬೆಳಕಿನಲ್ಲಿ ಓದಲು ಸಾದ್ಯವಾಯಿತು. ಅದನ್ನು ಕಟ್ಟಿಸಿದ ಫೆರೊ ( ಅರಸ) 'ರಮಸೆಸ್" ಎಂದು ಗುರುತಿಸಲಾಯಿತು.
ಹೀಗೆ ಈಜಿಪ್ಟಿನ ಪ್ರಾಚೀನ ಸಂಸ್ಕೃತಿ ಮತ್ತು ಮತ್ತು ಭಾಷೆಯನ್ನು ತಿಳಿದುಕೊಳ್ಳುವ ಪ್ರಯತ್ನಕ್ಕೆ ಈ ಅನ್ವೇಷಣೆ ಬುನಾದಿ ಹಾಕಿತು. ಅಲ್ಲಿಂದ ಕೆಲವೇ ದಶಕಗಳಲ್ಲಿ ನೈಲ್ ನದಿ ಕಣಿವೆಯ ನಾಗರಿಕತೆ,ಸಂಸ್ಕೃತಿಯ ಮತ್ತು ಲಿಪಿಯ ಪೂರ್ಣ ಅನಾವರಣವಾಯಿತು. ಆನಂತರದಲ್ಲಿ ಒಂದೆರಡು ದ್ವಿಭಾಷಾ ಶಾಸನಗಳು ದೊರೆತಿವೆ. ಆದರೆ ಪ್ರಪ್ರಥಮ ದ್ವಿಭಾಷಾ ಮತ್ತು ತ್ರಿಲಿಪಿ ಶಾಸನವಾದ ರೊಸೆಟ್ಟಾಶಿಲೆಯ ಸ್ಥಾನದ ಪ್ರಾಮುಖ್ಯತೆಯು ಎಂದಿಗೂ ಕಡಿಮೆಯಾಗದು.ಅದನ್ನು ಬ್ರಿಟಿಷ್ ಮ್ಯೂಜಿಯಂನಲ್ಲಿ ಸುರಕ್ಷಿತವಾಗಿ ಪ್ರದರ್ಶನಕ್ಕೆ ಇಡಲಾಗಿದೆ..ಅದಕ್ಕಾಗಿಯೇ ರೊಜೆಟ್ಟಾ ಶಿಲೆಯನ್ನು ಈಜಿಪ್ಟ್ ಸಂಸ್ಕೃತಿಯ ಬಾಗಿಲ ಬೀಗ ತೆಗೆದ ಕೀಲಿಕೈ ಎನ್ನವರು.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Egyptian Hieroglyphs ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- The Rosetta Stone in The British Museum
- The translated text in English Archived 2010-07-06 ವೇಬ್ಯಾಕ್ ಮೆಷಿನ್ ನಲ್ಲಿ. – The British Museum
- Champollion's alphabet Archived 2015-09-24 ವೇಬ್ಯಾಕ್ ಮೆಷಿನ್ ನಲ್ಲಿ. – The British Museum
- How the Rosetta Stone works – Howstuffworks.com
- The 1999 conservation and restoration of The Rosetta Stone at The British Museum Archived 2015-10-29 ವೇಬ್ಯಾಕ್ ಮೆಷಿನ್ ನಲ್ಲಿ.
ಟೆಂಪ್ಲೇಟು:British-Museum-object, British Museum Object Database reference number: YCA62958