ರೈತ ಚಳುವಳಿ

[೧] ಕರ್ನಾಟಕದಲ್ಲಿ ೧೯೮೦ರ ಪ್ರಾರಂಭದಲ್ಲಿ ಹುಟ್ಟಿದ ರೈತ ಚಳುವಳಿ[೨] ಕರ್ನಾಟಕದ ರೈತರ ಪಾಲಿಗೆ ಹೊಸ ಸೂರ್ಯ ಉದಯಿಸಿದಂತಾಯಿತು.

ಇತಿವೃತ್ತ ಬದಲಾಯಿಸಿ

  • ನಿಜದ ಅರ್ಥದಲ್ಲಿ ಪ್ರಭುತ್ವದ ದೃಷ್ಟಿಯಲ್ಲಿ ರೈತ ದ್ವಿತೀಯ ದರ್ಜೆಯ ಪ್ರಜೆಯಾಗಿಯೇ ಪರಿಗಣಿತನಾಗಿದ್ದನು. ಶತಮಾನಗಳಿಂದಲೂ ಆಳುವವರ ಕಪಿಮುಷ್ಟಿಗೆ ಸಿಲುಕಿ ತನ್ನ ಶಕ್ತಿಯ ಅರಿವಿಲ್ಲದೇ ಇದು ನಮ್ಮ ಹಣೆ ಬರಹ ಎನ್ನುವ ರೀತಿಯಲ್ಲಿ ಬದುಕುವ ಪರಿಸ್ಥಿತಿ ಉಂಟಾಯಿತು. ಯಾವುದೇ ಕ್ಷೇತ್ರದಲ್ಲಿ ಮಾನ್ಯತೆ ಇಲ್ಲದ ವ್ಯಕ್ತಿಯಾಗಿ ಅವಮಾನಕ್ಕೆ ಈಡಾಗಿದ್ದನು.
  • ಹೊಲದಲ್ಲಿ ನಿತ್ಯ ದುಡಿದು ದೇಶಕ್ಕೆ ಅನ್ನ ಕೊಡುವ ರೈತರನ್ನು ದಡ್ಡರು, ನಿಷ್ಪ್ರಯೋಜಕರು, ಅವಿದ್ಯಾವಂತರು ಎಂದು ಕಡೆಗಣಿಸಲಾಯಿತು. ಊರಿನಲ್ಲಿ ಆತ ಗೌಡನ ರೀತಿ ಇದ್ದರೂ ಅಕ್ಷರಜ್ಞಾನದ ಕೊರತೆ ಹಾಗೂ ಆಡಳಿತಾತ್ನಕ ಕೊರತೆಯಿಂದಾಗಿ ಸರ್ಕಾರಿ ಕಛೇರಿಗಳಲ್ಲಿ ನಗೆಪಾಟಲಿಗೀಡಾಗುವ ಪರಿಸ್ಥಿತಿ ನಿರ್ಮಾಣ ಆಯಿತು.
  • ಇಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಸಮುದಾಯದ ರೈತರಿಗೆ ಈ ರೀತಿಯ ಹೀನಾಯವಾಗಿ ಕಾಣುವ ಪರಿಸ್ಥಿತಿಯನ್ನು ಮೀರಬೇಕು ಎನ್ನುವ ಹಂಬಲ ಹುಟ್ಟತೊಡಗಿತು. ಇದರ ಪರಿಣಾಮವಾಗಿ ತಲತಲಾಂತರದಿಂದಲೂ ಪ್ರಾಣಿಗಳಂತೆಯೇ ಪ್ರಶ್ನೆಗಳನ್ನೇ ಕೇಳದೆ ತಲೆತಗ್ಗಿಸಿ ದುಡಿಯುತ್ತಿದ್ದ ರೈತ ಮೊದಲ ಬಾರಿಗೆ ತಲೆಯೆತ್ತಿ ಮಾತನಾಡಲಾರಂಭಿಸಿದ.

ನರಗುಂದ ನವಲಗುಂದ ರೈತ ಹೋರಾಟ ಬದಲಾಯಿಸಿ

  • ರೈತರು ರಾಜ್ಯಾದ್ಯಂತ ಹೋರಾಟಕ್ಕೆ ಸಿದ್ಧವಾಗುತ್ತಿದ್ದ ಸಂದರ್ಭದಲ್ಲಿಯೇ ನರಗುಂದ, ನವಲಗುಂದ ರೈತ ಚಳವಳಿ ಫಲಿಸಿತು. ರೈತ ಹೋರಾಟದ ಪ್ರಾರಂಭದ ಘಟ್ಟವನ್ನು ಈ ಘಟನೆಯಿಂದ ಗುರುತಿಸಬಹುದು. ಇದನ್ನು ‘ಮಲಪ್ರಭಾ ರೈತ ಚಳವಳಿ’ ಎಂತಲೂ ಕರೆಯುತ್ತಾರೆ. ಮಲಪ್ರಭಾ ಅಚ್ಚುಕಟ್ಟು ಪ್ರದೇಶಗಳಾದ ಬೆಳಗಾವಿ, ಬಿಜಾಪುರ ಮತ್ತು ಧಾರವಾಡ ಜಿಲ್ಲೆಯಲ್ಲಿ ಈ ರೈತ ಹೋರಾಟ ಪ್ರಬಲವಾಗಿ ಕಂಡುಬಂದಿತು[೩].
  • ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟುವ ಮಲಪ್ರಭ ನದಿ ಧಾರವಾಡದ ಮೂಲಕ ಹಾದು ಬಿಜಾಪುರ ಜಿಲ್ಲೆಯ ಕೂಡಲಸಂಗಮದ ಬಳಿ ಕೃಷ್ಣಾನದಿಯನ್ನು ಕೂಡುತ್ತದೆ. ಈ ನದಿಗೆ ಸವದತ್ತಿ ಬಳಿ ಮುನವಳ್ಳಿ ಎಂಬಲ್ಲಿ ೧೬೨ ಕೋಟಿ ವೆಚ್ಚದಲ್ಲಿ ಆಣೆಕಟ್ಟೆ ಕಟ್ಟಿದರೂ ಅದರ ಉಪಯೋಗ ಮಾತ್ರ ನರಗುಂದ, ನವಲಗುಂದ, ಸವದತ್ತಿ ಮತ್ತು ರಾಮದುರ್ಗ ತಾಲ್ಲೂಕುಗಳ ಕೆಲವು ಹಳ್ಳಿಗಳಿಗೆ ಮಾತ್ರ ಸೀಮಿತವಾಯಿತು.
  • ಈ ಯೋಜನೆಯಿಂದ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದ್ದ ಜನರಿಗೆ ಭ್ರಮನಿರಶನವಾಯಿತು. ಜೊತೆಗೆ ೧೯೭೬ರಲ್ಲಿ ನೀರು ಬಂದರೂ, ಪೂರ್ವಾನ್ವಯವಾಗಿ ೧೯೭೪ರಿಂದ ನೀರು ಬಂದಂತೆ ಲೆಕ್ಕ ಹಿಡಿದು ಸರ್ಕಾರ ಕರಗಳನ್ನು ವಿಧಿಸಿತು. ಸರಿಯಾಗಿ ನೀರು ಬರದ ಸಂಕಟ ಒಂದೆಡೆಯಾದರೆ ಬಾರದೇ ಇರುವ ನೀರಿಗೆ ಕರ ಕೊಡಬೇಕಾದ ಸಂಕಟ ಇನ್ನೊಂದೆಡೆ.
  • ಈ ಭ್ರಷ್ಟಾಚಾರದ ಜೊತೆಗೆ ರೈತರೆಂದರೆ ಕಾಲುಕಸ ಎಂದು ತಿಳಿದಿದ್ದ ಅಧಿಕಾರಶಾಹಿಯ ದರ್ಪವೂ ರೈತರನ್ನು ಕೆರಳುವಂತೆ ಮಾಡಿತು. ಅಲ್ಲದೆ ಸರ್ಕಾರದ ಹೊಸ ನೀತಿಯಿಂದಾಗಿ ವರಲಕ್ಷ್ಮಿ ಹತ್ತಿ ಬೆಲೆಯು ಇದ್ದಕ್ಕಿದ್ದಂತೆ ಕುಸಿಯಿತು. ಹೀಗಾಗಿ ಮೊದಲೇ ಹತಾಶರಾಗಿದ್ದ ರೈತರನ್ನು ಇದು ಮತ್ತಷ್ಟು ದಿವಾಳಿಯಾಗಿಸಿತು. ಇಂತಹ ಸಂಕಷ್ಟದ ಕಾಲದಲ್ಲಿ ನಮ್ಮ ನೀರಿನ ಕರಗಳನ್ನು ಕೆಲವು ವರ್ಷಗಳವರೆಗೆ ಮನ್ನಾ ಮಾಡುವಂತೆ ಕೇಳಿಕೊಂಡರೂ ಸರ್ಕಾರ ಇದ್ಯಾವುದಕ್ಕೂ ಕಿವಿಗೊಡಲಿಲ್ಲ. ಆದ್ದರಿಂದ ಹೋರಾಟ ಅನಿವಾರ್ಯವಾಗಿ ರೈತರು ಬೀದಿಗಿಳಿದರು.

ರೈತ ಚಳವಳಿ ಮತ್ತು ಜಾಥಾ ಬದಲಾಯಿಸಿ

ಸ್ವಾತಂತ್ರ್ಯ ಪೂರ್ವದಿಂದಲೂ ರೈತರು ತಮಗಾಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ ಕಷ್ಟಪಟ್ಟು ದುಡಿಯುವ ರೈತರ ಬವಣೆ ಮಾತ್ರ ಹೇಳತೀರದಾಗಿತ್ತು. ಸ್ವಾತಂತ್ರ್ಯ ಬಂದ ಮೇಲೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು ಜನ ಇನ್ನಾದರೂ ನಮ್ಮ ಬದುಕು ಹಸನಾಗಬಹುದು ಎಂದು ಕನಸು ಕಂಡಿದ್ದರು. ಆದರೆ ಅಲ್ಲಿಯೂ ರೈತರಿಗೆ ಸಿಕ್ಕಿದ್ದು ಲಾಠಿಯ ಹೊಡೆತ, ತುಪಾಕಿಯ ಗುಂಡೇಟು. ಇಂತಹ ಸಂದರ್ಭದಲ್ಲಿ ರೈತ ಸಂಘದ ಮೂಲಕ ರೈತರು ಜಾಥಾದಂತಹ ಹೋರಾಟಗಳನ್ನು ರೂಪಿಸಿದರು.

ಮಲೆನಾಡ ರೈತರ ಬೃಹತ್ ಜಾಥಾ : ೧೯೮೦ ಬದಲಾಯಿಸಿ

  • ನರಗುಂದ, ನವಲಗುಂದ ಘಟನೆಯಿಂದ ನೊಂದ ರೈತ ಮುಖಂಡರು ಸರ್ಕಾರಕ್ಕೆ ೧೯ ಬೇಡಿಕೆಗಳನ್ನು ಇಟ್ಟರು. ಆದರೆ ಸರ್ಕಾರ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಶಿವಮೊಗ್ಗದಲ್ಲಿ ಹೆಚ್.ಎಸ್. ರುದ್ರಪ್ಪ, ಎಂ.ಡಿ. ನಂಜುಂಡಸ್ವಾಮಿ, ಎನ್.ಡಿ. ಸುಂದರೇಶ್ ಅವರ ನೇತೃತ್ವದಲ್ಲಿ ಬೃಹತ್ ಜಾಥಾ ನಡೆಸಲು ತೀರ್ಮಾನಿಸಲಾಯಿತು.
  • ಅಂತೆಯೇ ೧೯೮೦ ಸೆಪ್ಟಂಬರ್ ೧ರಂದು ಬ್ರಹತ್ ಜಾಥಾ ಏರ್ಪಾಡಾಗಿ ವಿಜ್ಞಾನ ಮೈದಾನದಿಂದ ಹೊರಟು ಪುರಸಭೆಯ ಆವರಣದಲ್ಲಿ ಬಂದು ಸೇರುವುದಿತ್ತು. ಈ ಜಾಥಾ ನಿರೀಕ್ಷೆಗಿಂತ ಹೆಚ್ಚಾಗಿಯೇ ಯಶಸ್ವಿಯಾಯಿತು. ಜನರು ಎತ್ತಿನ ಗಾಡಿಯಲ್ಲಿ, ಟ್ರ್ಯಾಕ್ಟರ್ ನಲ್ಲಿ, ಲಾರಿಯಲ್ಲಿ, ಬಸ್ಸುಗಳ ಟಾಪಿನಲ್ಲಿ ಎಂಟೂ ದಿಕ್ಕುಗಳಿಂದ ಬರತೊಡಗಿದರು.
  • ಹಸಿರು ವಸ್ತ್ರ ಸಿಗದವರು ಹಸಿರು ಫೈರು ಹಿಡಿದುಕೊಂಡು ಬಂದದ್ದು ವಿಶೇಷವಾಗಿತ್ತು. ಶಿವಮೊಗ್ಗೆಯ ನಾಗರಿಕರು ಹಿಂದೆಯೂ ಕಂಡರಿಯದಷ್ಟು ಜನಸ್ತೋಮ ಸುಮಾರು ಎರಡು-ಮೂರು ಸಾವಿರ ರೈತರು ಸೇರಬಹುದೆಂದು ಅಂದಾಜಿಸಿದ್ದ ಪೊಲೀಸರ ನಂಬಿಕೆ ಹುಸಿಯಾಯಿತು. ಈ ಜಾಥಾದ ಸಮಾವೇಶದಲ್ಲಿ ತಮಿಳುನಾಡು ರೈತ ಮುಖಂಡರಾದ ನಾರಾಯಣಸ್ವಾಮಿ ನಾಯ್ಡ, ಶಿವಸ್ವಾಮಿ ಮತ್ತಿತರರು ರೈತರನ್ನು ಉದ್ದೇಶಿಸಿ ಮಾತನಾಡಿದರು.
  • ಚಳವಳಿ ಎರಡನೆಯ ಹಂತವಾಗಿ ಭದ್ರಾವತಿ ಶಿವಮೊಗ್ಗ ತಾಲ್ಲೂಕುಗಳ ಅನೇಕ ಹಳ್ಳಿಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿತು. ರೈತರ ಪ್ರತಿಭಟನೆ ರಸ್ತೆಗಿಳಿದು ತಮ್ಮನ್ನು ಬಂಧಿಸುವವರೆಗೆ ಚಳವಳಿ ಬಿಡುವುದಿಲ್ಲವೆಂದು ನಿರಂತರ ಜಾಥಾ ನಡೆಸಿದರು. ಇದೇ ಸಂದರ್ಭದಲ್ಲಿ ಪಿ. ಲಂಕೇಶ್, ಎಂ.ಡಿ. ನಂಜುಂಡಸ್ವಾಮಿ, ಸಂತೋಷ ಮುಂಡಾಸ ಕೆ. ರಾಮದಾಸ್, ಮಲ್ಲೇಶ್ ಮೊದಲಾದವರು ತಮ್ಮ ಭಾಷಣಗಳ ಮೂಲಕ ಚಳವಳಿ ನಿರತ ರೈತರನ್ನು ಹುರಿದುಂಬಿಸುತ್ತಿದ್ದರು.
  • ಇವರ ಜಾಥಾದ ಶಕ್ತಿ ಎಷ್ಟಿತ್ತೆಂದರೆ ಕರ್ನಾಟಕದ ಎಲ್ಲಾ ಜೈಲುಗಳು ಗಿ ಇನ್ನು ಯಾವ ಜೈಲಿನಲ್ಲಿ ಇವರನ್ನು ಹಾಕೋದು ಎನ್ನುವ ಮಟ್ಟಕ್ಕೆ ತಲುಪಿತು. ಅಂತಿಮವಾಗಿ ಸರ್ಕಾರ ೧೯ ಬೇಡಿಕೆಗಳಲ್ಲಿ ೧೧ ಬೇಡಿಕೆಗಳನ್ನು ಈಡೇರಿಸುವುದರ ಜೊತೆಗೆ ರೈತ ಚಳವಳಿಯ ಮೊದಲ ಜಾಥಾ ಯಶಸ್ವಿಯಾಯಿತು.

ಉಲ್ಲೇಖ ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2016-03-06. Retrieved 2015-10-06.
  2. http://vijaykarnataka.indiatimes.com/district/vijayapura/-30-/articleshow/47854599.cms
  3. https://janashakthi.wordpress.com/2015/02/17/%E0%B2%AD%E0%B2%BE%E0%B2%B0%E0%B2%A4%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%B0%E0%B3%88%E0%B2%A4-%E0%B2%9A%E0%B2%B3%E0%B3%81%E0%B2%B5%E0%B2%B3%E0%B2%BF%E0%B2%97%E0%B2%B3%E0%B3%81/