ರುದ್ರಪ್ರಯಾಗದ ನರಭಕ್ಷಕ
ಬದರೀನಾಥ ಹಾಗೂ ಕೇದಾರನಾಥಕ್ಕೆ ದಾರಿಯು ರುದ್ರಪ್ರಯಾಗದಲ್ಲಿ ಕವಲೊಡೆಯುತ್ತದೆ. ಅದೇ ಬದರೀನಾಥದಲ್ಲಿ ಉಗಮವಾಗುವ ಅಲಕನಂದ ಹಾಗೂ ಕೇದಾರನಾಥದಲ್ಲಿ ಜನಿಸುವ ಮಂದಾಕಿನಿ ನದಿಗಳು ರುದ್ರಪ್ರಯಾಗದಲ್ಲಿ ಸಂಗಮವಾಗುತ್ತವೆ. ರುದ್ರಪ್ರಯಾಗದಲ್ಲಿ ಸುಮಾರು ೪೨೫ಕ್ಕೂ ಹೆಚ್ಚು ಜನರನ್ನು ಕೊಂದಿತ್ತೆಂದು ಹೇಳಲಾದ ಒಂದು ಚಿರತೆಯು ರುದ್ರಪ್ರಯಾಗದ ನರಭಕ್ಷಕ ಎಂದೇ ಖ್ಯಾತಿ ಹೊಂದಿದೆ. ಅಂದಿನ ಬ್ರಿಟಿಷ್ ಸರ್ಕಾರದ ಕೋರಿಕೆಯ ಮೇರೆಗೆ ಪ್ರಖ್ಯಾತ ಹುಲಿಬೇಟೆಗಾರ ಜಿಮ್ ಕಾರ್ಬೆಟ್ ಅದನ್ನು ಕೊಂದುಹಾಕಿದ. ರುದ್ರಪ್ರಯಾಗದ ಭಯಾನಕ ನರಭಕ್ಷಕ ಎನ್ನುವ ಹೆಸರಿನ ರೋಚಕ ಪುಸ್ತಕವನ್ನು ಕೆ ಪಿ ಪೂರ್ಣಚಂದ್ರ ತೇಜಸ್ವಿಯವರು ಬರೆದಿದ್ದಾರೆ. ಇಂಗ್ಲಿಷಿನಲ್ಲಿ ಬಂದ ಲೆಪರ್ಡ್ ಆಫ್ ರುದ್ರಪ್ರಯಾಗ್ ಎಂಬ ಹೆಸರಿನ ಚಲನಚಿತ್ರ ತುಂಬಾ ಜನಪ್ರಿಯ. ಮೊದಲಿಗೆ ಬೆಂಜಿ ಎಂಬ ಗ್ರಾಮದ ಅಮಾಯಕನನ್ನು ಬಲಿ ತೆಗೆದುಕೊಂಡ ಆ ಚಿರತೆಯು ನರಭಕ್ಷಕನಾಗಿ ಮಾರ್ಪಟ್ಟು ತನ್ನ ಪರಿಸರದ ಜನರನ್ನು ಭೀತಿಯಲ್ಲಿ ಮುಳುಗಿಸಿತು. ಹಸಿವು ತಾಳದಾದಾಗ ಆ ಚಿರತೆ ಮನೆಗಳ ಬಳಿಸಾರಿ ಬಾಗಿಲನ್ನು ತನ್ನ ಪಂಜದಿಂದ ಕೆರೆಯುತ್ತಿತ್ತಂತೆ, ಕಿಟಕಿಗಳಲ್ಲಿ ಇಣುಕುತ್ತಿತ್ತಂತೆ, ಗುಡಿಸಲುಗಳನ್ನು ಧ್ವಂಸ ಮಾಡುತ್ತಿತ್ತಂತೆ. ನರಭಕ್ಷಕ ಚಿರತೆ ಮೃಗವಲ್ಲ; ಪಿಶಾಚಿ ಎಂದೇ ನಂಬಿದ್ದ ರುದ್ರಪ್ರಯಾಗದ ಜನರನ್ನು ಕಾಪಾಡಿದ್ದು ಕಾರ್ಬೆಟ್. ಅಂದಿನ ಬ್ರಿಟಿಷ್ ಸಂಸತ್ತು ಈ ಕುರಿತು ಒಂದು ನಿರ್ಣಯ ಅಂಗೀಕರಿಸಿ ಜಿಮ್ ಕಾರ್ಬೆಟ್ಟನಿಗೆ ಆ ನರಭಕ್ಷಕ ಚಿರತೆಯನ್ನು ಬೇಟೆಯಾಡುವಂತೆ ವಿನಂತಿಸಿತೆಂದು ದಾಖಲೆಗಳು ಹೇಳುತ್ತವೆ. ಹೀಗೆ ರುದ್ರಪ್ರಯಾಗಕ್ಕೆ ಬಂದಿಳಿಯುವ ಜಿಮ್ ಕಾರ್ಬೆಟ್, ಎರಡು ವರ್ಷಗಳ ಕಾಲ ಚಿರತೆ ಬೇಟೆಗೆ ಪ್ರಯತ್ನಿಸುತ್ತಾರೆ. ಒಂದೆರಡು ಸಲ ವಿಫಲರಾಗುತ್ತಾರೆ. ಕೊನೆಗೆ ಬೇಟೆಯಲ್ಲಿ ಸಫಲರಾಗುತ್ತಾರೆ. ಅಂದು ರುದ್ರಪ್ರಯಾಗದ ನಿವಾಸಿಗಳ ಹರ್ಷಕ್ಕೆ ಮೇರೆಯೇ ಇರಲಿಲ್ಲ. ಅವನನ್ನು ಒಬ್ಬ ಸಾಧು ಎಂದು ಪರಿಗಣಿಸಿರುವ ಇಲ್ಲಿನ ಜನರು ಆತ ಆ ನರಭಕ್ಷಕ ಚಿರತೆಯನ್ನು ಕೊಂದ ದಿನವನ್ನು ಇಂದಿಗೂ ಸಂಭ್ರಮದ ಜಾತ್ರೆಯಾಗಿ ಆಚರಿಸುತ್ತಾರೆ. ಕಾರ್ಬೆಟ್ಟನ ಟಿಪ್ಪಣಿಯ ಪ್ರಕಾರ ಆ ನರಭಕ್ಷಕ ಚಿರತೆಯ ವಸಡುಗಳು ಸವೆದು ಹಲ್ಲುಗಳು ಉದುರಿದ್ದವು. ತನ್ನ ಸ್ವಭಾವದಂತೆ ಮೃಗಗಳನ್ನು ಬೇಟೆಯಾಡಲು ಆ ಚಿರತೆಗೆ ಯಾವ ಕಸುವೂ ಸಾಮರ್ಥ್ಯವೂ ಇರಲಿಲ್ಲ. ಈ ದೌರ್ಬಲ್ಯದಿಂದಾಗಿ ಅದು ಬೇಟೆಗೆ ಸುಲಭವಾಗಿ ಪಕ್ಕಾಗುವ ಮನುಷ್ಯರನ್ನು ಕೊಂದು ತಿನ್ನತೊಡಗಿತು. ಹೀಗೆ ನರಭಕ್ಷಕನಾಗಿ ಮಾರ್ಪಟ್ಟ ಚಿರತೆಯೊಂದು ಸಾವಿರಾರು ಮೈಲಿ ಪ್ರದೇಶದಲ್ಲಿ ನಿರಾತಂಕವಾಗಿ ಸಂಚರಿಸುತ್ತ ರುದ್ರಪ್ರಯಾಗದ ನರಭಕ್ಷಕ ಎಂದೇ ಕುಖ್ಯಾತಿ ಪಡೆದು ಜನರಲ್ಲಿ ನಡುಕ ಹುಟ್ಟಿಸಿತ್ತು. ಬೇಟೆಯ ನೆನಪುಗಳ ಬಗ್ಗೆಯೇ ಹಲವು ಪುಸ್ತಕಗಳನ್ನು ಬರೆದಿರುವ ಜಿಮ್ ಕಾರ್ಬೆಟ್ ಅವರ ‘ಮೈ ಇಂಡಿಯಾ’ ಪುಸ್ತಕವು ಒಂದು ಅಮೋಘ ಕೃತಿ.