ರಿಚರ್ಡ್ ಆಲ್ಡಿಂಗ್ಟನ್

ರಿಚರ್ಡ್ ಆಲ್ಡಿಂಗ್ಟನ್ (8 ಜುಲೈ 1892 – 27 ಜುಲೈ 1962),ಇಂಗ್ಲಿಷ್ ಕವಿ ಮತ್ತು ಕಾದಂಬರಿಕಾರ. ಹ್ಯಾಂಪ್‍ಶೈರ್‍ನಲ್ಲಿ ಹುಟ್ಟಿ ಡೋವರ್, ಲಂಡನ್‍ಗಳಲ್ಲಿ ವಿದ್ಯಾಭ್ಯಾಸ ಮಾಡಿದ. 1913ರಲ್ಲಿ ಈಗೊಯಿಸ್ಟ್ ಪತ್ರಿಕೆಯ ಸಂಪಾದಕನಾದ.

ಹಿಲ್ಡ ಡೊಲಿಟ್ಲ್ ಎಂಬ ಅಮೆರಿಕದ ಕವಯಿತ್ರಿಯನ್ನು ಮದುವೆಯಾದ. 1937ರಲ್ಲಿ ವಿವಾಹ ವಿಚ್ಛೇದನವಾಯಿತು. ಅನೇಕ ವಿಮರ್ಶೆ, ಭಾಷಾಂತರ, ಕವಿತೆ, ಕಾದಂಬರಿಗಳನ್ನು ಬರೆದಿದ್ದಾನೆ. ಈತನ ವೆಲಿಂಗ್ಟನ್ನ ಜೀವನ ಚರಿತ್ರೆ (1946) ಟೇಟ್ ಬ್ಲ್ಯಾಕ್ ಮೆಮೋರಿಯಲ್ ಬಹುಮಾನಗಳಿಸಿತು. ಮೊದಲ ಮಹಾಯುದ್ಧದಲ್ಲಿ ಸೇನಾಧಿಕಾರಿಯಾಗಿ ಕೆಲಸಮಾಡಿದ. ಇವನ ಕಾದಂಬರಿಗಳಲ್ಲಿ ಸೈನಿಕ ಜೀವನದ ಕಟುತ್ವ ಎದ್ದು ಕಾಣುತ್ತದೆ.

ಡೆತ್ ಆಫ್ ಎ ಹೀರೊ (1929), ದಿ ಕರ್ನಲ್ ಡಾಟರ್ (1931), ಆಲ್ ಮೆನ್ ಆರ್ ಎನಿಮೀಸ್ (1932), ವಿಮೆನ್ ಮಸ್ಟ್ ವರ್ಕ್ (1934) ಈತನ ಕೆಲವು ಕಾದಂಬರಿಗಳು. ವಾರ್ ಅಂಡ್ ಲವ್ (1919), ಎ ಫೂಲ್ ಇನ್ ದಿ ಫಾರೆಸ್ಟ್ (1925), ಎ ಡ್ರೀಮ್ ಇನ್ ದಿ ಲಕ್ಸೆಂಬರ್ಗ್(1930)-ಕವನ ಸಂಗ್ರಹಗಳು.

ಈತನ ಕವಿತೆಗಳ ಸಂಗ್ರಹ 1949ರಲ್ಲಿ ಪ್ರಕಟವಾಯಿತು. ಎರಡನೆಯ ಮಹಾಯುದ್ಧ ನಡೆಯುತ್ತಿದ್ದಾಗ ಅಮೆರಿಕಕ್ಕೆ ಹೋಗಿ ಅಲ್ಲಿಯೇ ನೆಲೆಸಿದ.

ಬಾಹ್ಯ ಸಂಪರ್ಕಗಳು ಬದಲಾಯಿಸಿ