ರಾಷ್ಟ್ರಪತಿ ಆಡಳಿತ
ರಾಷ್ಟ್ರಪತಿ ಆಡಳಿತ (ಅಥವ ಕೇಂದ್ರಾಡಳಿತ) ಭಾರತದ ಸಂವಿಧಾನದ ೩೫೬ರ ಪ್ರಕಾರ ಯಾವುದೇ ರಾಜ್ಯದಲ್ಲಿ ಸರ್ಕಾರವು ತನ್ನ ಕಾರ್ಯ ನಿರ್ವಹಿಸಲಾಗದಿದ್ದಲ್ಲಿ ಕೇಂದ್ರ ಸರ್ಕಾರವು ಅಲ್ಲಿನ ಆಡಳಿತವನ್ನು ತನ್ನ ಕೈಗೆ ತಗೆದುಕೊಳ್ಳುವಂತಹ ಅಧಿಕಾರ.
ರಾಷ್ಟ್ರಪತಿ ಆಡಳಿತ ಎನ್ನುವುದು ಭಾರತೀಯ ಸಂವಿಧಾನದ "ಅನುಚ್ಛೇದ 356"ನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮೇಲೆ ವಿಧಿಸುವ ಪ್ರಕ್ರಿಯೆಯಾಗಿದೆ.[೧]
ಅನುಚ್ಛೇದ 356ರ ಹಿನ್ನಲೆಸಂಪಾದಿಸಿ
ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಭಾರತದ ವಿವಿಧ ಪಾಳೇಗಾರರು, ರಾಜ್ಯಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ರಚಿಸಿದ್ದು- ಭಾರತ ಸರ್ಕಾರದ ಕಾಯ್ದೆ 1935. ಈ ಕಾಯ್ದೆಯ 93ನೇ ವಿಧಿ ಪ್ರಕಾರ ಆಯಾ ಪ್ರಾಂತ್ಯದ ಸರ್ಕಾರ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಎಡವಿದೆ ಅಥವಾ ಅಲ್ಲಿ ಅಶಾಂತಿ ತಲೆದೋರಿದೆ ಎಂಬುದು ಖಾತ್ರಿಯಾದರೆ ರಾಜ್ಯಪಾಲರು ಆಯಾ ಪ್ರಾಂತ್ಯದ ಅಧಿಕಾರವನ್ನು ಕೈಗೆತ್ತಿಕೊಂಡು ತಾವೇ ಆಡಳಿತಕಾರ್ಯ ನಿರ್ವಹಿಸುತ್ತಿದ್ದರು. ಸ್ವಾತಂತ್ರ್ಯಾನಂತರದಲ್ಲಿ ಸಂವಿಧಾನ ರಚನೆ ಸಂದರ್ಭದಲ್ಲಿ ಇದನ್ನೇ ಮಾದರಿಯಾಗಿರಿಸಿಕೊಂಡು 356ನೇ ಅನುಚ್ಛೇದವನ್ನು ಸೇರಿಸಲಾಗಿದೆ.
ಅನುಚ್ಛೇದ 356ರ ಬಳಕೆಸಂಪಾದಿಸಿ
ಯಾವುದೇ ರಾಜ್ಯದಲ್ಲಿ ಸರ್ಕಾರ ಬಹುಮತ ಕಳೆದುಕೊಂಡರೆ ರಾಜ್ಯಪಾಲರು ವಿಧಾನಸಭೆಯನ್ನು ಅಮಾನತಿನಲ್ಲಿಡುತ್ತಾರೆ.ಇದರ ಅವಧಿ ಆರು ತಿಂಗಳು.ಈ ಅವಧಿಯೊಳಗೆ ಯಾವ ಪಕ್ಷವೂ ಬಹುಮತ ಸಾಬೀತುಪಡಿಸದಿದ್ದರೆ ವಿಧಾನಸಭೆಗೆ ಮತ್ತೆ ಚುನಾವಣೆ ನಡೆಸಲಾಗುತ್ತದೆ. ಈ ಅವಧಿಯಲ್ಲಿ ರಾಜ್ಯದ ಕಾರ್ಯನಿರ್ವಹಣೆ ಅಧಿಕಾರ ಚುನಾಯಿತ ಮುಖ್ಯಮಂತ್ರಿ ಬದಲಾಗಿ ರಾಷ್ಟ್ರಪತಿ ಕೈಗೆ ಹೋಗುವುದರಿಂದ ಇದನ್ನು ‘ರಾಷ್ಟ್ರಪತಿ ಆಳ್ವಿಕೆ’ ಎನ್ನಲಾಗುತ್ತದೆ. ರಾಜ್ಯಗಳಲ್ಲಿ ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿ. ಆದ್ದರಿಂದ ಅವರು ಸಲಹೆಗಾರರನ್ನು ನೇಮಿಸಿಕೊಳ್ಳುವ ಮೂಲಕ ರಾಜ್ಯದ ದೈನಂದಿನ ಆಡಳಿತವನ್ನು ನೋಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ಕೇಂದ್ರ ಸರ್ಕಾರದ ನೀತಿಗಳೇ ಇಂತಹ ರಾಜ್ಯದಲ್ಲಿ ಅನುಸರಿಸಲ್ಪಡುತ್ತವೆ.
ರಾಷ್ಟ್ರಪತಿ ಆಡಳಿತ ಜಾರಿ ಮಾಡಬುಹುದಾದ ಸಂದರ್ಭಗಳುಸಂಪಾದಿಸಿ
೧.ಮುಖ್ಯಮಂತ್ರಿ ನೇಮಕದಲ್ಲಿ ವಿಫಲವಾದರೆ.
೨.ಮೈತ್ರಿಕೂಟಗಳು ಭಂಗಗೊಂಡರೆ.
೩.ಅನಿವಾರ್ಯ ಕಾರಣಗಳಿಂದ ಚುನಾವಣೆ ಮುಂದೂಡಲ್ಪಟ್ಟರೆ.
೩.ರಾಜಕೀಯ ಅಸ್ಥಿರತೆ ತಲೆದೋರಿದರೆ.
೩.ರಾಜ್ಯ ಸರ್ಕಾರ ಅಸಾಂವಿಧಾನಿಕವಾಗಿ ಕಾರ್ಯನಿರ್ವಹಿಸಿದರೆ.
೩.ಕಾನೂನು ಸುವ್ಯವಸ್ಥೆ ಕುಸಿದರೆ.
ರಾಷ್ಟ್ರಪತಿ ಆಡಳಿತ ವಿಧಿಸಿದ ವಿವಿಧ ಸಂಧರ್ಭಗಳುಸಂಪಾದಿಸಿ
ಸ್ವಾತಂತ್ರ್ಯಾನಂತರ ಈವರೆಗೆ ಸಂವಿಧಾನದ ಅನುಚ್ಛೇದ 356ರ ಪ್ರಕಾರ ಒಟ್ಟು 126 ಬಾರಿ ವಿವಿಧ ರಾಜ್ಯಗಳ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ.
ಕಾಂಗ್ರೆಸ್ ಪಕ್ಶದ ಅಳ್ವಿಕೆಯಲ್ಲಿ ಅತಿ ಹೆಚ್ಚು ಬಾರಿ ಒಟ್ಟು 88 ಬಾರಿ ವಿವಿಧ ರಾಜ್ಯಗಳ ಮೇಲೆ ರಾಷ್ಟ್ರಪತಿ ಆಳ್ವಿಕೆಯನ್ನು ವಿಧಿಸಲಾಗಿದೆ.
ಪ್ರಧಾನಮಂತ್ರಿ | ರಾಷ್ಟ್ರಪತಿ ಆಡಳಿತ |
---|---|
ಜವಾಹರಲಾಲ್ ನೆಹರು | ೦೮ |
ಲಾಲ್ ಬಹಾದುರ್ ಶಾಸ್ತ್ರಿ | ೦೧ |
ಇಂಧಿರಾಗಾಂಧಿ (೧೯೬೬-೧೯೭೭) | ೩೫ |
ಮೊರಾರ್ಜಿ ದೇಸಾಯಿ | ೧೬ |
ಚರಣ್ ಸಿಂಗ್ | ೦೪ |
ಇಂಧಿರಾಗಾಂಧಿ (೧೯೮೦-೧೯೮೪) | ೧೫ |
ರಾಜೀವ್ ಗಾಂಧಿ | ೦೬ |
ವಿ.ಪಿ ಸಿಂಗ್ | ೦೨ |
ಚಂದ್ರ ಶೇಖರ್ | ೦೫ |
ಪಿ.ವಿ ನರಸಿಂಹರಾವ್ | ೧೧ |
ಎಚ್.ಡಿ ದೇವೆಗೌಡ | ೦೧ |
ಎ.ಬಿ ವಾಜಪೇಯಿ | ೦೫ |
ಮನಮೋಹನಸಿಂಗ್ | ೧೨ |
ನರೇಂದ್ರ ಮೋದಿ | ೦೫ |
ಆಕ್ಷೇಪ-ಆರೋಪಸಂಪಾದಿಸಿ
ರಾಷ್ಟ್ರಪತಿ ಆಳ್ವಿಕೆ ಎನ್ನುವುದು ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಪಕ್ಷಗಳಿಗೆ ಅನ್ಯ ಪಕ್ಷಗಳ ಸರ್ಕಾರವಿರುವ ರಾಜ್ಯಗಳ ಮೇಲೆ ಹತೋಟಿ ಸಾಧಿಸುವುದಕ್ಕೆ ಇರುವ ಪ್ರಬಲ ಅಸ್ತ್ರ ಎಂಬ ಆರೋಪ ಲಗಾಯ್ತಿನಿಂದಲೂ ಇದೆ. ಸಂವಿಧಾನದ ಅನುಚ್ಛೇದ 356 ರಾಜಕೀಯ ಲಾಭಕ್ಕಾಗಿ, ದ್ವೇಷಕ್ಕಾಗಿ ಆಡಳಿತಾರೂಢರಿಂದ ದುರ್ಬಳಕೆಯಾಗುತ್ತಿದೆ ಎಂಬ ಆರೋಪ, ಆಕ್ಷೇಪ ಇಂದು ನಿನ್ನೆಯದಲ್ಲ. ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡರೆ, ಅಂತಹ ಸಂದರ್ಭದಲ್ಲಿ ಈ ಅನುಚ್ಛೇದ ದುರ್ಬಳಕೆಯಾಗುತ್ತದೆ.
ಬೊಮ್ಮಾಯಿ ಪ್ರಕರಣದ ಐತಿಹಾಸಿಕ ತೀರ್ಪುಸಂಪಾದಿಸಿ
ಕರ್ನಾಟಕದಲ್ಲಿ ಎಸ್.ಆರ್.ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು 1989ರ ಏ.21ರಂದು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವ ಘೊಷಣಾ ಪತ್ರಕ್ಕೆ ಅಂದಿನ ರಾಷ್ಟ್ರಪತಿ ಆರ್.ವೆಂಕಟರಾಮನ್ ಸಹಿಹಾಕಿದ್ದರು. ಆದರೆ, ಅದಕ್ಕೂ ಮುನ್ನ ಏ.20ರಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ರಾಜ್ಯಪಾಲರನ್ನು ಭೇಟಿಯಾಗಿ, ಏ.27ರಿಂದ ವಿಧಾನಸಭಾ ಅಧಿವೇಶನ ಕರೆಯಲಾಗುತ್ತಿದ್ದು ಅಲ್ಲಿ ಬಹುಮತ ಸಾಬೀತುಪಡಿಸುವುದಾಗಿ ತಿಳಿಸಿದ್ದರು. ಮರುದಿನ ಬೊಮ್ಮಾಯಿ ಅವರಿಗೆ ಆಘಾತ ಕಾದಿತ್ತು. ರಾಷ್ಟ್ರಪತಿ ಆಳ್ವಿಕೆ ಪ್ರಶ್ನಿಸಿ ಬೊಮ್ಮಾಯಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದರು. ಅಲ್ಲಿ, ‘ರಾಷ್ಟ್ರಪತಿ ಆಳ್ವಿಕೆಯನ್ನು ಸಂವಿಧಾನದ ಚೌಕಟ್ಟಿನ ಪ್ರಕಾರವೇ ಜಾರಿಗೊಳಿಸಲಾಗಿದೆ’ ಎಂಬ ತೀರ್ಪು ಏ.26ರಂದು ಬಂತು. ಈ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ಸುಪ್ರೀಂ ಕೋರ್ಟ್, ‘ಸರ್ಕಾರವೊಂದು ಬಹುಮತ ಹೊಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಸಂವಿಧಾನಿಕ ವೇದಿಕೆ ವಿಧಾನಸಭಾ ಅಧಿವೇಶನವೇ ಹೊರತು ರಾಜಭವನ ಅಲ್ಲ. ಸಂವಿಧಾನದ 356ನೇ ವಿಧಿ ರಾಷ್ಟ್ರಪತಿಗಳಿಗೆ ನೀಡಿರುವುದು ಷರತ್ತುಬದ್ಧ ಅಧಿಕಾರವನ್ನೇ ಹೊರತು ಪರಮಾಧಿಕಾರವನ್ನಲ್ಲ’ ಎಂಬ ಐತಿಹಾಸಿಕ ತೀರ್ಪ(1994ರ ಮಾರ್ಚ್ 11) ನೀಡಿತು.
ಪೂರಕ ಮಾಹಿತಿಸಂಪಾದಿಸಿ
ಉಲ್ಲೇಖಗಳುಸಂಪಾದಿಸಿ
- ↑ "ರಾಷ್ಟ್ರಪತಿ ಆಳ್ವಿಕೆಯ ಅಸ್ತ್ರ". http://vijayavani.net/. Retrieved 23 ಏಪ್ರಿಲ್ 2016.
{{cite web}}
: External link in
(help)[ಶಾಶ್ವತವಾಗಿ ಮಡಿದ ಕೊಂಡಿ]|publisher=