ರಾಬರ್ಟ್ ಬರ್ನ್ಸ್
ರಾಬರ್ಟ್ ಬರ್ನ್ಸ್ 1759-96. ಇಂಗ್ಲಿಷ್ ಹಾಗೂ ಸ್ಕಾಟಿಷ್ ಕವಿ.
ಬದುಕು ಮತ್ತು ಸಾಹಿತ್ಯ
ಬದಲಾಯಿಸಿಹುಟ್ಟಿದ್ದು ಆಯರ್‍ಷ್ಟ್ರರಿನ ಅಲ್ಲೋವೆ ಎಂಬ ಹಳ್ಳಿಯಲ್ಲಿ. ತಂದೆ ವಿಲಿಯಮ್ ಬರ್ನ್ಸ್(ಬರ್ನೆಸ್), ತಾಯಿ ಆಗ್ನೇಸ್ ಬ್ರೌನ್. ಇವರ ಏಳು ಜನ ಮಕ್ಕಳ ಪೈಕಿ ರಾಬರ್ಟನೇ ಜ್ಯೇಷ್ಠ. ತಂದೆ ಸ್ವಶಿಕ್ಷಿತ, ಆದರೆ ಹೆಚ್ಚು ಓದಿದವನಲ್ಲ. ತಾಯಿ ಓದುಬರಹ ತಿಳಿಯದವಳಾದರೂ ಜಾನಪದ ಸಾಹಿತ್ಯ ಸಂಗೀತಗಳೆರಡರ ಜ್ಞಾನವೂ ಆಕೆಗಿತ್ತು. ಇದರ ಪ್ರಭಾವ ರಾಬರ್ಟ್‍ನ ಮೇಲೆ ಬಾಲ್ಯದಿಂದಲೇ ಆಯಿತು. ವಿಲಿಯಮ್ ಬಡತನದಲ್ಲಿದ್ದರೂ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂಬ ಹಂಬಲ ಹೊತ್ತ. ಜಾನ್ ಮುರ್ಡೋಖ್ ಎಂಬ ಶಿಕ್ಷಕನನ್ನು ಗೊತ್ತುಮಾಡಿದ. ಸುಮಾರು ಎರಡೂವರೆ ವರ್ಷ ಬರ್ನ್ಸ್ ನಿಗೆ ಭಾಷೆ-ವ್ಯಾಕರಣಗಳಲ್ಲಿ ಭದ್ರವಾದ ತಳಹದಿ ಒದಗಿತು. ಮಾತೃಭಾಷೆಯಲ್ಲದೆ ಇಂಗ್ಲಿಷ್ ಫ್ರೆಂಚ್ ಮತ್ತು ಕೊಂಚ ಲ್ಯಾಟಿನ್ ಭಾಷೆಗಳ ಪರಿಚಯವೂ ಆಯಿತು. ಹದಿಮೂರು ವರ್ಷ ಅನಿಯತ ಶಿಕ್ಷಣ ಪಡೆದ ರಾಬರ್ಟ್ ಆಗೊಮ್ಮೆ ಈಗೊಮ್ಮೆ ಶಾಲೆಗೆ ಹೋಗಿ ಬರುತ್ತ ಉಳಿದ ಕಾಲ ತಂದೆಗೆ ಕೃಷಿ ಕೆಲಸದಲ್ಲಿ ನೆರವಾಗುತ್ತಿದ್ದ. ಪುಸ್ತಕಗಳನ್ನು ಓದುವುದರಲ್ಲಿ ತುಂಬ ಆಸಕ್ತಿ ವಹಿಸಿದ. ಷೇಕ್ಸ್‍ಪಿಯರ್, ಮಿಲ್ಟನ್, ಡ್ರೈಡನ್, ಪೋಪ್ ಇವರ ಕಾವ್ಯಗಳ ಪರಿಚಯ ಮಾಡಿಕೊಂಡ. ಕಾವ್ಯಸೃಷ್ಟಿ, ನಿಸರ್ಗದ ಆಕರ್ಷಣೆ, ಕನಸಿನ ಲೋಕದ ಮಧ್ಯೆ ಜೀವನ ನಿರ್ವಹಣೆಗಾಗಿ ದುಡಿಯಲೇಬೇಕಾದ ದುರ್ಭರ ಸನ್ನಿವೇಶವನ್ನು ಬರ್ನ್ ಎದುರಿಸಬೇಕಾಯಿತು. ಅರೆಹೊಟ್ಟೆ ಊಟ, ದೊಡ್ಡವರಿಗಿಂತಲೂ ಹೆಚ್ಚು ಶ್ರಮದ ದುಡಿತದಿಂದಾದ ದುಷ್ಪರಿಣಾಮ ಮುಂದೆ ಬನ್ರ್ಸ್‍ನ ಅಕಾಲ ಮರಣಕ್ಕೂ ಕಾರಣವಾಯಿತು.
1777ರಲ್ಲಿ ಇಡೀ ಕುಟುಂಬ ಲೋಕಲೀಗೆ ಹೋಗಿ ನೆಲಸಿತು. ಅಲ್ಲಿ ಪರಿಚಯವಾದ ಕ್ಯಾಪ್ಟನ್ ರಿಚರ್ಡ್ ಬ್ರೌನ್ ಎಂಬಾತ ಬರ್ನ್ಸ್ ನ ಮೊದಲ ಕವಿತೆಗಳನ್ನು ಮೆಚ್ಚಿ ಪ್ರೋತ್ಸಾಹಿಸಿದ. ಈ ವೇಳೆಗೆ ತಂದೆ ವಿಲಿಯಮ್ (1784) ತೀರಿಕೊಂಡ. ಬರ್ನ್ಸ್ ಮತ್ತು ತಮ್ಮ ಗಿಲ್ಬರ್ಟ್‍ರ ಮೇಲೆ ಇಡೀ ಸಂಸಾರದ ಭಾರ ಬಿತ್ತು. ಸ್ಥಳೀಯ ಚರ್ಚುಗಳಲ್ಲಿಯ ಕ್ಷುದ್ರಜಗಳನ್ನು ಕಂಡ ಈ ಕವಿ ಮಠ ಮತ್ತು ಗುರುಗಳ ಸಣ್ಣ ತನವನ್ನು ವಿಡಂಬನೆ ಮಾಡಿ ಕವಿತೆ ಬರೆದು ಧರ್ಮವಿರೋಧಿ ಎನಿಸಿಕೊಂಡ. ಸ್ಕಾಚ್ ಜನರಲ್ಲಿ ತಮ್ಮದು ಕಾಡುಭಾಷೆ, ಸಾಹಿತ್ಯರಚನೆಗೆ ತಕ್ಕುದಲ್ಲ ಎಂಬ ಭಾವನೆ ಇತ್ತು. 1784ರಲ್ಲಿ ಫಗ್ರ್ಯೂಸನ್‍ನ ಕವಿತೆಗಳನ್ನು ಓದಿದ ಬರ್ನ್ಸ್ಸ್ಕಾಚ್ ಭಾಷೆಯ ಸತ್ತ್ವ-ಶಕ್ತಿಗಳನ್ನು ಕಂಡುಕೊಂಡ.1784-86ರ ಅವಧಿ ಕವಿಯ ಬದುಕಿನಲ್ಲಿ ಸಾಹಿತ್ಯದ ಸುಗ್ಗಿಯಕಾಲ ಎನ್ನಬಹುದು. ಅತ್ಯಂತ ಸೊಗಸಾದ, ಶ್ರೇಷ್ಠವಾದ ಕವಿತೆಗಳನ್ನು ಈ ಕಾಲದಲ್ಲಿ ಬರೆದ.ಹೆಣ್ಣಿನ ಮೋಹ ಈತನ ದೌರ್ಬಲ್ಯವಾಗಿತ್ತು. ಈತನ ಪ್ರಣಯಗಳ ಹಗರಣ. ಜನಲಘುವಾಗಿ ಆಡಿಕೊಳ್ಳುವಷ್ಟು ಬೆಳೆಯಿತು. ಅನಿವಾರ್ಯದ ಸನ್ನಿವೇಶದಲ್ಲಿ ಸಿಲುಕಿದ ಈತ 1788ರಲ್ಲಿ ಜೀನ್ ಆರ್ಮರ್‍ಳನ್ನು ಮದುವೆಯಾದ.
1786ರಲ್ಲಿ ಮೊದಲ ಕವನ ಸಂಕಲನ ಪ್ರಕಟವಾಯಿತು. ಕೇವಲ 600 ಪ್ರತಿಗಳನ್ನು ಅಚ್ಚುಮಾಡಲಾಯಿತು. ಇದರಿಂದಾಗಿ ಕವಿಗೆ ನಲವತ್ತು ಪೌಂಡುಗಳ ಸಂಭಾವನೆ ದೊರಕಿತು. ಈ ಪ್ರಕಟಣೆಯಿಂದಾಗಿ ಬರ್ನ್ಸ್ಎಲ್ಲೆಡೆ ಕೀರ್ತಿವಂತನಾದ. ಜಮೈಕಾಕ್ಕೆ (ವೆಸ್ಟ್ ಇಂಡೀಸ್‍ನ) ಉದ್ಯೋಗವನ್ನರಸಿ ಹೋಗಬೇಕೆಂದಿದ್ದ ಈತ ತನಗೆ ದೊರೆತ ಕೀರ್ತಿ ಜನಪ್ರಿಯತೆಗಳಿಂದಾಗಿ ಸ್ವದೇಶದಲ್ಲೇ ಉಳಿದ, ಕಿಲ್ಮರ್‍ನಾಕ್‍ನ ಈ ಪ್ರಥಮಾವೃತ್ತಿ ಎಷ್ಟು ಹೆಸರಾಗಿದೆ ಎಂದರೆ ಈಗ ಆ ಆವೃತ್ತಿಯ ಪ್ರತಿಯನ್ನು ಸಾವಿರ ಪೌಂಡುಗಳಿಗೆ ಕೊಳ್ಳುವವರಿದ್ದಾರೆ.
ಈ ಕಾಲದಲ್ಲೇ ಕವಿ ತನ್ನ ಹೈಲಂಡ್ ಮೇರಿ ಎಂಬ ಕವನದ ಸ್ಪೂರ್ತಿಯಾಗಿದ್ದ ಮೇರಿ ಕ್ಯಾಂಪ್‍ಬೆಲ್ಲಳೊಂದಿಗೆ ಪ್ರಣಯಾಸಕ್ತನಾದ. ಕೆಲವು ಕಾಲದಲ್ಲೇ ಆಕೆ ತೀರಿಕೊಂಡಾಗ ದುಃಖಿತನಾದ ಕವಿ ಮೇರಿ ಇನ್ ಹೆವನ್ ಎಂಬ ಕವನ ರಚಿಸಿದ.
1788ರಲ್ಲಿ ಅಲೆಕ್ಸಾಂಡರ್ ವುಡ್‍ನ ಸಹಾಯದಿಂದ ಬರ್ನ್ಸ್ಅಬಕಾರಿ ಸೇವೆಯ ತರಬೇತಿಗೆ ಅಯ್ಕೆಯಾದ. ಅನಂತರ ಗ್ರಾಮದ ಸರ್ವೆಯರ್ ಅಗಿ ಸೇವೆ ಸಲ್ಲಿಸಿ ಒಳ್ಳೆಯ ಹೆಸರು ಪಡೆದ.
ಇದೇ ಕಾಲದಲ್ಲಿ ಎಡಿನ್‍ಬರ್ಗ್‍ನ ಜೇಮ್ಸ್ ಜಾನ್ಸನ್ ಎಂಬ ಪ್ರಕಾಶಕ ಸ್ಕಾಚ್ ಹಾಡುಗಳ ಒಂದು ಬೃಹತ್ಕೋಶದ ಯೋಜನೆ ಹಾಕಿ ಬನ್ರ್ಸ್‍ನನ್ನು ಅದರ ಸಂಪಾದಕನಾಗಲು ಕೇಳಿಕೊಂಡ. ಒಂದೊಂದು ಸಂಪುಟದಲ್ಲಿ ನೂರು ಹಾಡುಗಳಂತೆ ಎಂಟು ಸಂಪುಟಗಳನ್ನು ಸ್ಕಾಟ್ಸ್ ಮ್ಯೂಸಿಕಲ್ ಮ್ಯೂಸಿಯಮ್ ಎಂಬ ಶಿರೋನಾಮೆಯಲ್ಲಿ ಪ್ರಕಟಿಸಬೇಕೆಂದು ನಿಶ್ಚಯಿಸಲಾಗಿತ್ತು. ಆದರೆ ಕಡೆಗೆ ಆದದ್ದು ಆರು ಸಂಪುಟಗಳು. ಸ್ಕಾಟ್ಲೆಂಡಿನಲ್ಲೆಲ್ಲ ಜನಪ್ರಿಯವಾಗಿದ್ದ ಹಾಡುಗಳನ್ನು ಸಂಗ್ರಹಿಸಿ, ಅವನ್ನು ತಿದ್ದಿ ಅವಕ್ಕೊಂದು ರೂಪಕೊಟ್ಟ ಕೀರ್ತಿ ಈತನದು. ಇನ್ನು ಕೆಲವು ಹಾಡುಗಳಲ್ಲಿ ಸಾಹಿತ್ಯಾಂಶ ಮರೆಯಾಗಿ ಬರಿಯ ಸಂಗೀತದ ಛಾಯಮಾತ್ರ ಉಳಿದಿತ್ತು. ಅದಕ್ಕೆ ಅಂದರೆ ಸಂಗೀತದ ಸ್ವರಗಳಿಗೆ ಮಾತು ಜೋಡಿಸುವ ಕೆಲಸ ಬರ್ನ್ಸ್ಮಾಡಿದ, ಅಲ್ಲದೆ ತಾನೆ ಸೊಗಸಾದ ಮೂರು ನೂರು ಹಾಡುಗಳನ್ನು ರಚಿಸಿ ಸೇರಿಸಿದ ಕೂಡ.
1793ರಲ್ಲಿ ಪ್ರಕಾಶ ಕ್ರೀಚ್‍ಗೆ ತನ್ನ ಇನ್ನೊಂದು ಕವನ ಸಂಕಲನವಾದ `ಪೊಯೆಮ್ಸ್ ಎಂಬ ಕೃತಿಯನ್ನು ಕೊಟ್ಟ. ಅದರಲ್ಲಿ ಸೇರ್ಪಡೆಯಾಗಿರುವ ಟ್ಯಾಮ್ ಒ ಷ್ಯಾಂಟರ್ ಎಂಬ ಕವಿತೆ ಕವಿಗೂ ಪ್ರಿಯವಾಗಿದ್ದ ಶ್ರೇಷ್ಠವಾದ ಕವಿತೆಯಾಗಿದೆ.
ಹದಿನೆಂಟನೆಯ ಶತಮಾನದ ಕಡೆಯ ದಶಕದಲ್ಲಿ ಸ್ಪಷ್ಟವಾಗಿ ಪ್ರಾರಂಭವಾದ ರೊಮ್ಯಾಂಟಿಕ್ ಸಾಹಿತ್ಯದ ಮುನ್ಸೂಚಕ ಕವಿಗಳಲ್ಲಿ ಬರ್ನ್ಸ್ ಒಬ್ಬ. ಲಂಡನಿನ `ಫ್ವಾಶನ ಬಟ್ ಶ್ರೀಮಂತರ ಬದುಕಿಗೆ ಸೀಮಿತವಾಗಿ ವಿಡಂಬನಾತ್ಮಕ ಮನೋಧರ್ಮವೇ ಸೂಚಿಸುತ್ತಿದ್ದ ಕಾವ್ಯವನ್ನು ಬಿಟ್ಟು ಮನುಷ್ಯನ ಸಹಜ ರಾಗಗಳು, ಬಯಕೆಗಳು, ಕನಸುಗಳಿಗೆ ರೂಪಕೊಡುವ ಕಾವ್ಯದತ್ತ ಇಂಗ್ಲಿಷ್ ಕಾವ್ಯ ಸಾಗಿತು. ಬರ್ನ್ಸ್ ಹೆಣ್ಣು-ಗಂಡಿನ ಪ್ರೀತಿಯನ್ನು ಕುರಿತು ಉಜ್ವಲ ಕವನಗಳನ್ನು ಬರೆದ. `ಮೈ ಲವ್ಸ್ ಲೈಕ್ ಎ ರೆಡ್ ರೆಡ್ ರೋಸ್ (ನನ್ನ ಪ್ರೇಮದ ಹುಡುಗಿ ತಾವರೆಯ ಹೊಸ ಕಂಪು-ಶ್ರೀ ಅವರ ಅನುವಾದ) ಬಹು ಪ್ರಸಿದ್ಧ ಪ್ರೇಮಗೀತೆ. ಜನಸಾಮಾನ್ಯರ ಭಾಷೆಯನ್ನು ಬರ್ನ್ಸ್ಬಳಸಿದ. A Man a Man for A `That' ಕವನದಲ್ಲಿ ಫ್ರಾನ್ಸಿನ ಮಹಾಕ್ರಾಂತಿಯಾಗಿ ಮನೋಧರ್ಮವನ್ನು ಹಾಡಿದ (ಶ್ರೀ ಅವರ ಅನುವಾದದಲ್ಲಿ ಬಡತನ ಹುದುಡು), `ಶ್ರೀ ಅವರು `ಇಂಗ್ಲಿಷ್ ಗೀತೆಗಳಲ್ಲಿ ಈ ಕವಿಯ ಹಲವು ಕವನಗಳನ್ನು ಅನುವಾದಿಸಿದ್ದಾರೆ). ಬರ್ನ್ಸ್ ನ ಅತ್ಯುತ್ತಮ ಕವನಗಳಲ್ಲಿ ಬಹುಮಟ್ಟಿಗೆ ಬಳಸಿರುವುದು ಸ್ಕಾಟ್‍ಲೆಂಡಿನ ಪ್ರಾದೇಶಿಕ ಇಂಗ್ಲಿಷಿನಲ್ಲಿ.
ಬಾಹ್ಯ ಕೊಂಡಿಗಳು
ಬದಲಾಯಿಸಿBiographical Information
- Robert Burns website at National Library of Scotland
- Legacy of Robert Burns Archived 2009-10-08 ವೇಬ್ಯಾಕ್ ಮೆಷಿನ್ ನಲ್ಲಿ. at National Archives of Scotland
- Guide to Robert Burns collection at L. Tom Perry Special Collections, Brigham Young University
- Works by Robert Burns at Project Gutenberg
- Modern English translations of poems by Robert Burns
- Cousin, John William (1910). A Short Biographical Dictionary of English Literature. London: J. M. Dent & Sons, p. 57
- Robert Burns Archived 2017-05-07 ವೇಬ್ಯಾಕ್ ಮೆಷಿನ್ ನಲ್ಲಿ. at the British Library
- To Robert Burns historical marker near Burns Cottage in Atlanta, Georgia