ರಾಜಾ ಗಣೇಶ ಬಂಗಾಳವನ್ನಾಳುತ್ತಿದ್ದ ಸುಲ್ತಾನರಿಂದ ರಾಜ್ಯ ಸೂತ್ರಗಳನ್ನು ಕಸಿದುಕೊಂಡಿದ್ದ ಒಬ್ಬ ಹಿಂದೂ ಪ್ರಮುಖ. ಮುಸ್ಲಿಂ ದೊರೆಗಳಿಂದ ಹಿಂದೂ ಆದವನೊಬ್ಬ ರಾಜ್ಯಾಡಳಿತ ಕಸಿದುಕೊಂಡ ವಿರಳ ಪ್ರಸಂಗವಿದಾದ್ದರಿಂದ ಇದಕ್ಕೆ ಪ್ರಾಮುಖ್ಯವುಂಟು. ಈ ಘಟನೆ ನಡೆದದ್ದುಂಟೆಂಬುದು ನಿಸ್ಸಂದೇಹವಾದರೂ ಇದರ ಬಗ್ಗೆ ಖಚಿತವಾದ ವಿವರಗಳು ತಿಳಿದಿಲ್ಲ. ಇವನನ್ನು ಮುಸ್ಲಿಂ ಇತಿಹಾಸಕಾರರು ರಾಜಾ ಕಾನ್ಸ್ ಅಥವಾ ಕಾನ್ಸಿ ಎಂದು ಕರೆದಿದ್ದಾರೆ.[][]

ಅರ್ವಾಚೀನ ೧೯ನೇ ಶತಮಾನದ ಒಂದು ಬಂಗಾಳಿ ಕೃತಿಯಾದ ರಾಜಾ ಹಣೇಶ್ ಎಂಬುದರ ಹೊದಿಕೆಯ ಮೇಲೆ ರಾಜಾ ಗಣೇಶನ ಚಿತ್ರ

ಕೆಲವು ಹಿಂದೂ ಆಧಾರಗಳಿಂದ ಈತನ ಹೆಸರು ಗಣೇಶ ಎಂದು ತಿಳಿದುಬರುತ್ತದೆ. ಇದೇ ಈತನ ನಿಜವಾದ ಹೆಸರು ಎಂಬುದು ಈಗ ಬಹುತೇಕ ನಿಸ್ಸಂದೇಹ.

ಆರಂಭಿಕ ಜೀವನ

ಬದಲಾಯಿಸಿ

ಈತ ಉತ್ತರ ಬಂಗಾಳದ ಒಬ್ಬ ಜಮೀನ್ದಾರ. 400 ವರ್ಷಗಳಿಗೂ ಹಳೆಯ ವಂಶವೊಂದರಲ್ಲಿ ಹುಟ್ಟಿದಾತ. 1389-1393ರ ನಡುವೆ ಸಿಂಹಾಸನವೇರಿದ್ದಿರಬಹುದಾದ ಘಿಯಾಸುದ್ದೀನ್ ಆಜ಼ಂ ಷಹನ ಕಾಲದಲ್ಲಿ ಈತ ಪ್ರಾಮುಖ್ಯ ಗಳಿಸಿದ. ಆಜ಼ಂ ಷಹನನ್ನು ಇವನು ಕೊಲ್ಲಿಸಿದನೆಂದು 1788ರಲ್ಲಿ ರಚಿಸಲಾದ ರಿಯಾಜ಼್ ಎಂಬ ಮುಸ್ಲಿಂ ಉದಂತವೊಂದರಲ್ಲಿ ಹೇಳಲಾಗಿದೆಯಾದರೂ ಇದಕ್ಕೆ ಬೇರಾವ ಆಧಾರವೂ ಸಿಗುವುದಿಲ್ಲ.[] ಅಂತೂ ಆಜ಼ಂ ಷಹನ ಅನಂತರ ಸೈಫುದ್ದೀನ್ ಹಂಜ಼ಾ ಷಹ ಪಟ್ಟಕ್ಕೆ ಬಂದ. ಈತ ತುಂಬ ದುರ್ಬಲ ಅರಸ. ಇವನ ಆಳ್ವಿಕೆಯ ಕಾಲದಲ್ಲಿ ಆಸ್ಥಾನಿಕರೂ ಸೇನಾ ನಾಯಕರೂ ಪ್ರಬಲರಾದರು. ಇವರ ಪೈಕಿ ಗಣೇಶ ಪ್ರಮುಖ. ಹಂಜ಼ಾ ಷಹನ ಅನಂತರ ಬಂದ ಸುಲ್ತಾನನಾದ ಷಿಹಾಬುದ್ದೀನನ ಮರಣಾನಂತರ (ಅವನನ್ನು ಕೊಲ್ಲಿಸಿದವನು ಗಣೇಶನೇ ಎಂಬುದಾಗಿಯೂ ಒಂದು ಮೂಲ ತಿಳಿಸುತ್ತದೆ)[] ಗಣೇಶ ಅಧಿಕಾರ ಗಳಿಸಿಕೊಂಡನೆಂದೂ ಹೇಳಲಾಗಿದೆ. ಗಣೇಶ ವಾಸ್ತವವಾಗಿ ರಾಜ ನಿರ್ಮಾಪಕನಾಗಿದ್ದನೆಂಬುದಂತೂ ನಿಜ. ಈತನೇ ಸಿಂಹಾಸನವನ್ನೇರಿದನೆಂದೂ ಕೆಲವರು ಹೇಳುತ್ತಾರೆ. ರಾಜಾ ಗಣೇಶನ ನಾಣ್ಯಗಳು ಯಾವುವೂ ಇದುವರೆಗೂ ಸಿಕ್ಕಿಲ್ಲ. ಇವನಿಗೆ ಹಿಂದಿನ ಮತ್ತು ಮುಂದಿನ ಸುಲ್ತಾನರ ನಾಣ್ಯಗಳಿವೆ. ರಾಜಾ ಗಣೇಶ ರಾಜ್ಯವಾಳಿದನೆಂದೂ ಸಿಂಹಾಸನವನ್ನೇರಿದ ಮೇಲೆ ದನುಜಮರ್ದನದೇವ, ಮಹೇಂದ್ರದೇವ ಎಂಬ ಹೆಸರುಗಳನ್ನೂ ತಳೆದನೆಂದೂ ಕೆಲವರು ಊಹಿಸಿದ್ದಾರೆ. ಇದೇ ರೀತಿ ಇನ್ನೂ ಅನೇಕ ಊಹೆಗಳಿವೆ.

ಆಳ್ವಿಕೆ

ಬದಲಾಯಿಸಿ

ಅಂತೂ ಈತ 15ನೆಯ ಶತಮಾನದ ಆದಿಯಲ್ಲಿ ಅಧಿಕೃತವಾಗಿಯೋ ಅನಧಿಕೃತವಾಗಿಯೋ ಆಡಳಿತ ನಡೆಸಿದ್ದು ನಿಜ. ಗಣೇಶ ಏಳು ವರ್ಷಗಳ ಕಾಲ ರಾಜ್ಯವಾಳಿದನೆಂದೂ, ಇವನ ಅನಂತರ ಇವನ ಎರಡನೆಯ ಮಗ ಜಲಾಲುದ್ದೀನ್ ಸಿಂಹಾಸನವನ್ನೇರಿದನೆಂದೂ ಫಿರಿಷ್ತಾನಿಂದ ತಿಳಿದುಬರುತ್ತದೆ. ಈತ 1415 ರಿಂದ 1431ರ ವರೆಗೆ ಆಳಿದ.[] ರಾಜಾ ಗಣೇಶನ ಕಾಲದಲ್ಲಿ ಮುಸ್ಲಿಮರ ಒತ್ತಡದಿಂದಾಗಿ ಅವನ ಎರಡನೆಯ ಮಗ ಮುಸ್ಲಿಮನಾದನೆಂಬುದು ಒಂದು ವಾದ. ಗಣೇಶ ಸ್ವತಃ ಅಧಿಕಾರವನ್ನು ತನ್ನ ಮಗ ಜಾದುವಿಗೆ ವಹಿಸಿಕೊಟ್ಟನೆಂದೂ ಅವನು ಅನಂತರ ಮುಸ್ಲಿಂ ಮತಕ್ಕೆ ಪರಿವರ್ತನೆ ಹೊಂದಿ ಜಲಾಲುದ್ದೀನ್ ಮುಹಮ್ಮದ್ ಷಹ ಎಂಬ ಹೆಸರಿನಿಂದ ರಾಜ್ಯವಾಳಿದನೆಂದೂ ಕೆಲವು ಮುಸ್ಲಿಂ ಇತಿಹಾಸಕಾರರು ಹೇಳಿದ್ದಾರೆ. ಜಲಾಲುದ್ದೀನನ ಮರಣಾನಂತರ ಅವನ ಮಗ 1435ರ ವರೆಗೆ ಆಳಿದ. ಈತ ಕೊಲೆಗೆ ಗುರಿಯಾದ.[] ರಾಜಾ ಗಣೇಶನ ವಂಶದ ಅಧಿಕಾರ ಕೊನೆಗೊಂಡಿತು. ಸ್ವಲ್ಪ ಕಾಲಾನಂತರ ರಾಜ್ಯಸೂತ್ರ ಮತ್ತೆ ಹಿಂದಿನ ಸುಲ್ತಾನ ವಂಶಕ್ಕೆ ಹೋಯಿತು.

ಉಲ್ಲೇಖಗಳು

ಬದಲಾಯಿಸಿ
  1. Majumdar, R. C., ed. (1980) [First published 1960]. The Delhi Sultanate. The History and Culture of the Indian People. Vol. VI (3rd ed.). Bombay: Bharatiya Vidya Bhavan. p. 205. OCLC 664485.
  2. Ali, Mohammad Mohar (1988). History of the Muslims of Bengal, Vol 1 (PDF) (2 ed.). Imam Muhammad Ibn Saud Islamic University. pp. 683, 404. ISBN 9840690248. Archived (PDF) from the original on 16 July 2021. Retrieved 12 December 2016.
  3. Majumdar, R. C., ed. (1980) [First published 1960]. The Delhi Sultanate. The History and Culture of the Indian People. Vol. VI (3rd ed.). Bombay: Bharatiya Vidya Bhavan. p. 204. OCLC 664485.
  4. Majumdar, R. C., ed. (1967) [First published 1960]. The Delhi Sultanate. The History and Culture of the Indian People. Vol. VI (2nd ed.). Bombay: Bharatiya Vidya Bhavan. pp. 204–206. OCLC 664485.
  5. Goron, Stan; Goenka, J.P. (2001). The Coins of the Indian Sultanates. Munshiram Manoharlal. p. 187. ISBN 978-81-215-1010-3.
  6. Taher, MA (2012). "Shamsuddin Ahmad Shah". In Sirajul Islam; Miah, Sajahan; Khanam, Mahfuza; Ahmed, Sabbir (eds.). Banglapedia: the National Encyclopedia of Bangladesh (Online ed.). Dhaka, Bangladesh: Banglapedia Trust, Asiatic Society of Bangladesh. ISBN 984-32-0576-6. OCLC 52727562. OL 30677644M. Retrieved ೨೧ ಡಿಸೆಂಬರ್ ೨೦೨೪. {{cite encyclopedia}}: Check date values in: |access-date= (help)
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: