ರವೀಂದ್ರ ಯಾವಗಲ್
ರವೀಂದ್ರ ಯಾವಗಲ್ (ನವೆಂಬರ್ ೨೭, ೧೯೫೯) ಹಿಂದೂಸ್ಥಾನಿ ಸಂಗೀತ ತಬಲಾ ವಾದನದಲ್ಲಿ ಮುಂಚೂಣಿಯಲ್ಲಿರುವ ಹೆಸರು.
ಪಂಡಿತ್ ರವೀಂದ್ರ ಯಾವಗಲ್ | |
---|---|
ಜನನ | ನವೆಂಬರ್ ೨೭, ೧೯೫೯ ಹುಬ್ಬಳ್ಳಿ |
ಗಮನಾರ್ಹ ಕೆಲಸಗಳು | ಹಿಂದೂಸ್ಥಾನಿ ಸಂಗೀತ ತಬಲಾ ವಾದನ |
ಸಂಗೀತ ಕಾರ್ಯಕ್ರಮಗಳನ್ನು ಆಸ್ವಾದಿಸುವಾಗ ಪ್ರಧಾನ ಸಂಗೀತಕ್ಕೆ ಮೆರುಗು ತರುವಂತದ್ದು ಪಕ್ಕವಾದ್ಯ. ಹಿಂದೂಸ್ಥಾನಿ ಸಂಗೀತದಲ್ಲಂತೂ ತಬಲಾ ವಾದನ ಇಡೀ ಕಾರ್ಯಕ್ರಮಕ್ಕೆ ಕಳೆಕೊಡುವಂತದ್ದು. ತಬಲಾ ವಾದಕರು ಇಡೀ ಕಾರ್ಯಕ್ರಮಕ್ಕೇ ಶೋಭೆ ತರಬಲ್ಲರು. ಇಂಥಹ ಮಹಾನ್ ತಬಲಾ ವಾದಕರಲ್ಲಿ ಕನ್ನಡಿಗರೇ ಆದ ಪಂಡಿತ್ ರವೀಂದ್ರ ಯಾವಗಲ್ ಅವರು ವಿಶ್ವಪ್ರಖ್ಯಾತರು. ಶ್ರೀಮಂತ ನಗೆಮೊಗದೊಂದಿಗೆ ಅವರ ಕೈಬೆರಳುಗಳು ತಬಲಾದ ಮೇಲೆ ಸರಸವಾಡುತ್ತಾ ಹೊರಹೊಮ್ಮಿಸುವ ಸುನಾದ ಮೈಮರೆಸುವಂತದ್ದು. ಎಂಬುದು ಸಂಗೀತ ವಿದ್ವಾಂಸರು ಮತ್ತು ರಸಿಕರ ಏಕಾಭಿಪ್ರಾಯವಾಗಿದೆ.
ಜೀವನ
ಬದಲಾಯಿಸಿಪ್ರಸಿದ್ಧ ತಬಲ ವಾದಕರಾದ ರವೀಂದ್ರ ಯಾವಗಲ್ ಅವರು ನವೆಂಬರ್ ೨೭, ೧೯೫೯ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದರು. ಅವರ ತಂದೆ ರಾಮಚಂದ್ರ ಯಾವಗಲ್ ಮತ್ತು ತಾಯಿ ಪಾರ್ವತಿಬಾಯಿ.ನಾಲ್ಕನೇ ವಯಸ್ಸಿನಿಂದಲೇ ತಂದೆಯವರಿಂದ ತಬಲವಾದನದ ಪ್ರಾರಂಭಿಕ ಶಿಕ್ಷಣ ಪಡೆದ ರವೀಂದ್ರ ಯಾವಗಲ್ ಅವರು ಮುಂದೆ ವೀರಣ್ಣ ಕಾಮ್ ಕಾರ್ ಮತ್ತು ಶೇಷಗಿರಿ ಹಾನಗಲ್ ಅವರುಗಳ ಬಳಿಯಲ್ಲಿ 13 ವರ್ಷಗಳ ಕಾಲದ ತಬಲವಾದನದ ಕಠಿಣ ಶಿಕ್ಷಣವನ್ನು ಪಡೆದರು. ಮುಂದೆ ಪಂ. ಲಾಲ್‌ಜಿ ಗೋಖಲೆ ಮತ್ತು ಉಸ್ತಾದ್ ಅಹ್ಮದ್‌ಖಾನ್ ಅವರುಗಳ ಮಾರ್ಗದರ್ಶನವನ್ನೂ ಪಡೆದರು. ಇದಲ್ಲದೆ ಬಿ.ಎಸ್ಸಿ ಪದವೀಧರರಾದ ರವೀಂದ್ರ ಯಾವಗಲ್ ಅವರು ಖೈರಾಘರ್ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನೂ ಗಳಿಸಿದ್ದಾರೆ.
ನಾದ ಲೋಕದಲ್ಲಿ
ಬದಲಾಯಿಸಿರವೀಂದ್ರ ಯಾವಗಲ್ ಅವರು ಬಾಲ ಪ್ರತಿಭೆಯಾಗಿ ಹತ್ತನೇ ವಯಸ್ಸಿನಲ್ಲೇ ಕುಂದಗೋಳದ ಸವಾಯ್ ಗಂಧರ್ವ ಸಂಗೀತೋತ್ಸವದಲ್ಲಿ ಮೊಟ್ಟಮೊದಲ ಕಾರ್ಯಕ್ರಮ ನಡೆಸಿಕೊಟ್ಟರು. ಮುಂದೆ ಅವರು ಕರ್ನಾಟಕದೆಲ್ಲೆಡೆಯಲ್ಲದೆ ಮುಂಬಯಿ, ಹೈದರಾಬಾದ್, ಔರಂಗಾಬಾದ್, ಮುಂತಾದೆಡೆಗಳಲ್ಲಿ ತಬಲ ಏಕವ್ಯಕ್ತಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ತಬಲಾ ಸಹವಾದನಕ್ಕೆ ಬಹುಬೇಡಿಕೆ ಹೊಂದಿರುವ ಪಂಡಿತ್ ರವೀಂದ್ರ ಯಾವಗಲ್ ಅವರು ತಬಲಾ ನುಡಿಸದಿರುವ ಪ್ರಸಿದ್ಧ ಸಂಗೀತಗಾರರೇ ಇಲ್ಲ ಎನ್ನುವಷ್ಟು ಅವರ ಪ್ರಸಿದ್ಧಿಯಿದೆ. ಮಲ್ಲಿಕಾರ್ಜುನ ಮನಸೂರ್, ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ, ರಾಮ್‌ಮರಾಠೆ, ರಾಮರಾವ್ ನಾಯಕ್, ಬಸವರಾಜ ರಾಜಗುರು, ಜಸ್‌ರಾಜ್, ರಾಜೀವ್ ತಾರಾನಾಥ್, ಸಿ. ಆರ್. ವ್ಯಾಸ್, ಫಿರೋಜ್ ದಸ್ತೂರ್, ದಿನಕರ್ ಕಾಯ್ಕಿಣಿ, ರಾಜನ್ ಮತ್ತು ಸಾಜನ್ ಮಿಶ್ರಾ, ಬೇಗಂ ಪರ್ವೀನಾ ಸುಲ್ತಾನಾ, ಕಿಶೋರಿ ಅಮೋನ್ಕರ್, ಭಲೇ ಖಾನ್, ಹರಿ ಪ್ರಸಾದ್ ಚೌರಾಸಿಯಾ, ಎಂ. ಎಸ್. ಗೋಪಾಲಕೃಷ್ಣನ್, ಎನ್. ರಾಜಂ, ಸಲಾಮತ್ ಆಲಿ ಖಾನ್, ವಿಶ್ವ ಮೋಹನ ಭಟ್, ಶಾಹಿದ್ ಪರ್ವಾಜ್, ಬುದಾದಿತ್ಯ ಮುಖರ್ಜಿ, ವೆಂಕಟೇಶ್ ಕುಮಾರ್ ಮುಂತಾದ ಪ್ರಸಿದ್ಧ ನಾಮದೇಯಗಳು ರವೀಂದ್ರ ಯಾವಗಲ್ ಅವರು ತಬಲಾ ನುಡಿಸಿರುವವರ ಸುದೀರ್ಘ ಪಟ್ಟಿಯಲ್ಲಿರುವ ಕೆಲವೊಂದು ಹೆಸರುಗಳು ಮಾತ್ರ.
ವಿಶ್ವಪ್ರಸಿದ್ಧಿ
ಬದಲಾಯಿಸಿಭಾರತದೆಲ್ಲೆಡೆಯಲ್ಲಷ್ಟೇ ಅಲ್ಲದೆ ರವೀಂದ್ರ ಯಾವಗಲ್ ಅವರ ತಬಲಾ ನಾದ ಅಮೆರಿಕಾ, ಯೂರೋಪ್, ಆಸ್ಟ್ರೇಲಿಯಾ, ಫ್ರಾನ್ಸ್, ಈಜಿಪ್ಟ್, ಹಾಂಗ್‌ಕಾಂಗ್ ಹೀಗೆ ವಿಶ್ವದೆಲ್ಲೆಡೆಯಲ್ಲಿ ಪ್ರಾತ್ಯಕ್ಷಿಕೆ ಮತ್ತು ಸಂಗೀತ ಕಾರ್ಯಕ್ರಮಗಳ ರೂಪದಲ್ಲಿ ನಿರಂತರವಾಗಿ ಹರಿಯುತ್ತಿದೆ. ರವೀಂದ್ರ ಯಾವಗಲ್ ಅವರು ಆಕಾಶವಾಣಿ ಮತ್ತು ದೂರದರ್ಶನದ ಉನ್ನತಶ್ರೇಣಿಯ ಕಲಾವಿದರಾಗಿದ್ದು ಹಲವಾರು ಕಾರ್ಯಕ್ರಮ ಪ್ರಸಾರಗಳಲ್ಲಿ ಪಾಲ್ಗೊಂಡಿದ್ದಾರೆ.
ಬಹುಮುಖೀ ಸೇವೆ
ಬದಲಾಯಿಸಿಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡಮಿಯ ಸದಸ್ಯರಾಗಿ ಸಹಾ ಅವರ ಸೇವೆ ಸಂದಿದೆ. ಅವರು ಪಠ್ಯಪುಸ್ತಕ ಸಲಹಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕನಕ ಪುರಂದರ ಪ್ರಶಸ್ತಿ ಆಯ್ಕೆ ಸಮಿತಿ ಮತ್ತು ಚೌಡಯ್ಯ ಪ್ರಶಸ್ತಿಗಳ ಆಯ್ಕೆ ಸಮಿತಿಯಲ್ಲಿಯೂ ಅವರ ಸಲಹೆಗಳು ಸಲ್ಲುತ್ತಿವೆ.
ಪ್ರಶಸ್ತಿ ಗೌರವಗಳು
ಬದಲಾಯಿಸಿಗದುಗಿನ ಕಲಾಚೇತನ ಸಾಂಸ್ಕೃತಿಕ ಅಕಾಡಮಿಯಿಂದ ನಾದನಿಧಿ, ಸೊರಬದ ಸಂಗೀತ, ಸಂಗೀತ ಸೇವಾ ಸಮಿತಿಯಿಂದ ಚಂದ್ರಹಾಸ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿವೆ.
ಸಮಾಜಕ್ಕೆ ಕೊಡುಗೆ
ಬದಲಾಯಿಸಿಅತ್ಯಂತ ವಿನಯಶೀಲ ಸಜ್ಜನರೆಂದು ಹೆಸರಾಗಿರುವ ರವೀಂದ್ರ ಯಾವಗಲ್ ಅವರು ತಮಗಿರುವ ಪ್ರಸಿದ್ಧಿಯನ್ನು ತಲೆಗೇರಿಸಿಕೊಳ್ಳದಿರುವವರಾಗಿದ್ದು “ನಾನು ಸಮಾಜಕ್ಕೆ ಕೊಡುವುದು ತುಂಬಾ ಇದೆ” ಎಂದು ನಮ್ರವಾಗಿ ನುಡಿಯುತ್ತಾರೆ. ಅವರು ಬಡತನದಿಂದ ಬಂದ ಮಕ್ಕಳಿಗೂ ಸಂಗೀತ ಕಲಿಕೆಗೆ ಸಹಾಯಹಸ್ತ ನೀಡುತ್ತಿದ್ದಾರೆ. ರವೀಂದ್ರ ಯಾವಗಲ್ ಅವರು ತಮ್ಮ ತಂದೆ ರಾಮಚಂದ್ರ ಯಾವಗಲ್ ಅವರ ನೆನಪಿನಲ್ಲಿ ೨೦೦೬ರ ವರ್ಷದಿಂದ ‘ಶ್ರೀ ರಾಮ ಕಲಾ ವೇದಿಕೆ ಟ್ರಸ್ಟ್’ ಅನ್ನು ಆರಂಭಿಸಿದ್ದು, ಆ ಮೂಲಕ ಸಂಗೀತ ಕಲಿಯಲು ಆಸಕ್ತಿ ಉಳ್ಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದಾರೆ. ಸಾಧಕರಿಗೆ ವಾರ್ಷಿಕ ಉತ್ಸವಗಳನ್ನು ನಡೆಸಿ ಸಂಮಾನಿಸುವುದರ ಜೊತೆಗೆ ಹಿರಿಯ ಕಲಾವಿದರೊಂದಿಗೆ ಕಿರಿಯ ಕಲಾವಿದರಿಗೂ ಸಂಗೀತ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ವೇದಿಕೆ ಒದಗಿಸಿಕೊಡುತ್ತಿದ್ದಾರೆ. ಈ ವೇದಿಕೆಯಲ್ಲಿ ಪಂಡಿತ್ ಹರಿಪ್ರಸಾದ್ ಚೌರಾಸಿಯಾ, ಗಂಗೂ ಬಾಯ್ ಹಾನಗಲ್ ಅಂತಹ ಶ್ರೇಷ್ಠರು ಕೂಡಾ ಪಾಲ್ಗೊಂಡಿದ್ದಾರೆ.
ಶ್ಲಾಘನೆ
ಬದಲಾಯಿಸಿರವೀಂದ್ರ ಯಾವಗಲ್ ಅವರು ಪ್ರಸಿದ್ಧ ಕಲಾವಿದರುಗಳೊಂದಿಗೆ ಜುಗಲ್ ಬಂದಿ ವಾದ್ಯ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದು ಅವು ಆಲ್ಬಂ ರೂಪದಲ್ಲಿ ಕೂಡಾ ಹೊರಬಂದಿದೆ. ಪಂಡಿತ್ ಭೀಮಸೇನ ಜೋಶಿ ಅವರು ತಮ್ಮ ಆತ್ಮಚರಿತ್ರೆಯಲ್ಲಿ ರವೀಂದ್ರ ಯಾವಗಲ್ ಅವರನ್ನು ಶ್ಲಾಘನೆಯೊಂದಿಗೆ ಹೆಸರಿಸಿದ್ದಾರೆ.
ಮುಂದಿನ ಪೀಳಿಗೆ
ಬದಲಾಯಿಸಿರವೀಂದ್ರ ಯಾವಗಲ್ ಅವರ ಪುತ್ರ ಕಿರಣ್ ಯಾವಗಲ್ ಸಹಾ ತಬಲಾ ವಾದನದಲ್ಲಿ ಹೆಸರು ಮಾಡುತ್ತಿದ್ದಾರೆ. ರವೀಂದ್ರ ಯಾವಗಲ್ ಅವರ ಅನೇಕ ಪ್ರತಿಭಾವಂತ ಶಿಷ್ಯರು ಸಂಗೀತ ಲೋಕದಲ್ಲಿ ಪ್ರವರ್ಧಮಾನರಾಗಿದ್ದು ಕೀರ್ತಿವಂತರಾಗಿ ತಮ್ಮ ಗುರುವಿನ ಹಾದಿಯಲ್ಲೇ ಸಂಗೀತಲೋಕವನ್ನು ಬೆಳಗುತ್ತಿದ್ದಾರೆ.