ರತ್ನಾಕರ್
ಹಾಸ್ಯರತ್ನ ರತ್ನಾಕರ್ (ಏಪ್ರಿಲ್ ೧೧, ೧೯೩೧ - ಸೆಪ್ಟೆಂಬರ್ ೨೦, ೨೦೧೦ ಕನ್ನಡ ಚಲನಚಿತ್ರ ಮತ್ತು ವೃತ್ತಿ ರಂಗಭೂಮಿಯ ಜನಪ್ರಿಯ ನಟರು. ಹಾಸ್ಯಪಾತ್ರಗಳಲ್ಲಿ ಅವರು ಪ್ರಸಿದ್ಧಿ ಪಡೆದವರು.
ರತ್ನಾಕರ್ | |
---|---|
Born | ಏಪ್ರಿಲ್ ೧೧, ೧೯೩೧ ಕೊಲ್ಲೂರು |
Died | ಸೆಪ್ಟೆಂಬರ್ ೨೦, ೨೦೧೦ |
Occupation | ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ |
ರತ್ನಾಕರ್ ನಿಜಕ್ಕೂ ಹಾಸ್ಯರತ್ನ. ವಿಶಿಷ್ಟ ದನಿ. ವಿಭಿನ್ನ ಹಾಸ್ಯದ ಮೂಲಕ ಪ್ರೇಕ್ಷಕರ ಮನದಲ್ಲಿ ಮನೆ ಮಾಡಿದ್ದರು. ಕನ್ನಡದ ಮೇರು ನಟ ಡಾ. ರಾಜ್ ಕುಮಾರ್ ಅವರ ತಂದೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಅವರೊಂದಿಗೆ ಕೂಡಾ ರಂಗಭೂಮಿಯಲ್ಲಿ ದುಡಿದಿದ್ದ ರತ್ನಾಕರ್ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಅನೇಕ ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಇವರು, ಕೆಲವು ಸಿನಿಮಾಗಳನ್ನೂ ನಿರ್ದೇಶಿಸಿದ್ದಾರೆ. ‘ವಿಚಿತ್ರ ಪ್ರಪಂಚ’ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ರತ್ನಾಕರ್ ವಿಷ್ಣುವರ್ಧನ್ ಅವರ ಕೊನೆಯ ಚಿತ್ರವಾದ ‘ಆಪ್ತರಕ್ಷಕ’ದಲ್ಲೂ ಹಾಸ್ಯ ಹರಿಸಿದ್ದರು.
ಜೀವನ
ಬದಲಾಯಿಸಿರತ್ನಾಕರ್ ಹುಟ್ಟೂರು ಕೊಲ್ಲೂರು. ಏಪ್ರಿಲ್ ೧೧, ೧೯೩೧ರಲ್ಲಿ ಮೂಕಾಂಬಿಕೆ ಕ್ಷೇತ್ರದ ಅರ್ಚಕ ಮಂಜುನಾಥ ಭಟ್ಟರು ಮತ್ತು ನಾಗವೇಣಮ್ಮ ದಂಪತಿಯ ಏಕೈಕ ಪುತ್ರನಾಗಿ ಜನಿಸಿದರು. ಅಪ್ಪನ ಆಶಯದಂತೆ ರತ್ನಾಕರ್ ಅದೇ ದೇವಾಲಯದಲ್ಲಿ ಪ್ರಧಾನ ಅರ್ಚಕರಾಗಬೇಕಿತ್ತು. ಆದ್ದರಿಂದ ಲೋಯರ್ ಸೆಕೆಂಡರಿವರೆಗಿನ ವಿದ್ಯಾಭ್ಯಾಸ ಮಾಡಿದ್ದರು. ಅಪ್ಪನ ಆಸೆಗೂ ಪುತ್ರನ ಆಕಾಂಕ್ಷೆಗೂ ಬಹಳ ವೆತ್ಯಾಸ. ಓದಿ ಏನಾದರೂ ಸಾಧಿಸೋಣವೆಂದು ರತ್ನಾಕರ್ ಮೈಸೂರಿನತ್ತ ಪ್ರಯಾಣಿಸಿದರು. ಅದು ಕೈಗೂಡಲಿಲ್ಲ. ಕಾರಣ ರತ್ನಾಕರ್ ಮೈಸೂರಿನಲ್ಲಿ ಶಾಲೆ ಕಲಿಯುವ ಬದಲು ಮನೆಗೆಲಸಕ್ಕೆ ಸೇರಬೇಕಾಯಿತು. ಅದು ಇವರ ಜೀವನದ ದಿಕ್ಕನ್ನೇ ಬದಲಿಸಿತು. ಒಂದು ದಿನ ರಂಗಭೂಮಿಯ ಮಣ್ಣು ತುಳಿಯುವಂತಾಯಿತು.
ಚಲನಚಿತ್ರ ಮತ್ತು ರಂಗಭೂಮಿಯಲ್ಲಿ
ಬದಲಾಯಿಸಿಒಮ್ಮೆ ರತ್ನಾಕರ್ ಅವರಿಗೆ ಹಿರಿಯ ನಟ ದಿವಂಗತ ಡಿಕ್ಕಿ ಮಾಧವರಾವ್ ಅವರ ಪರಿಚಯವಾಯ್ತು. ಅದು ‘ವಿಚಿತ್ರಪ್ರಪಂಚ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಕ್ಕೆ ನಾಂದಿ ಹಾಡಿತು. ನಂತರ ಹಿರಿಯ ರಂಗನಿರ್ದೇಶಕ ದಿ. ಎಚ್ ಎಲ್ ಎನ್ ಸಿಂಹ ಅವರ ನಾಟಕ ಕಂಪೆನಿಗೆ ಪ್ರವೇಶ ದೊರೆಯಿತು. ಅಲ್ಲಿ ಡಾ. ರಾಜ್ ಕುಮಾರ್ ಅವರ ತಂದೆ ಸಿಂಗನಲ್ಲೂರ ಪುಟ್ಟಸ್ವಾಮಯ್ಯ ಅವರಂಥ ರಂಗನಟರೊಂದಿಗೆ ಗಟ್ಟಿಯಾಗಿ ನಿಲ್ಲುವಂತಾಯಿತು.
ನಾನಾ ಪಾತ್ರಧಾರಿ
ಬದಲಾಯಿಸಿಕೇವಲ ಹಾಸ್ಯ ಚಿತ್ರಗಳಷ್ಟೇ ಅಲ್ಲದೆ ಉತ್ತಮ ಪೋಷಕ ಪಾತ್ರ, ಗಂಭೀರ ಅಭಿನಯಗಳನ್ನೂ ಮನಮುಟ್ಟುವಂತೆ ಮಾಡಿದ್ದ ರತ್ನಾಕರ್ ಕೆಲವೊಮ್ಮೆ ಸಾಹಸಗಳಿಗೂ ಕೈ ಹಾಕುತ್ತಿದ್ದರು. ಡಾ. ರಾಜ್ ಕುಮಾರ್, ಲೀಲಾವತಿ ಜೋಡಿ ಸಿನಿಮಾಗಳು ಯಶಸ್ವಿಯಾಗುತ್ತಿದ್ದ ಸಂದರ್ಭವದು. ರತ್ನಾಕರ್ ಸ್ವತಃ ನಿರ್ದೇಶನದೊಂದಿಗೆ ಅದೇ ಜೋಡಿ ಹಾಕಿಕೊಂಡು ‘ಭಾಗ್ಯದೇವತೆ’ ಎಂಬ ಭಕ್ತಿ ಪ್ರಧಾನ ಚಿತ್ರ ಮೂಡಿಸಿದ್ದರು. ನಂತರ ಅಶ್ವಥ್ – ಪಂಡರೀಬಾಯಿ ಅಭಿನಯದ ‘ಬಾಂಧವ್ಯ’ ಎಂಬ ಸಾಂಸಾರಿಕ ಚಿತ್ರವನ್ನೂ ನಿರೂಪಿಸಿದ್ದರು. ಕೆಲವು ವರ್ಷಗಳ ಬಳಿಕ ವಿಷ್ಣುವರ್ಧನ್ ನಾಯಕರಾಗಿದ್ದ ‘ಶನಿಪ್ರಭಾವ’ ಎಂಬ ಚಿತ್ರವನ್ನು ಸಹಾ ನಿರ್ದೇಶಿಸಿ ಯಶಸ್ವಿಯಾದರು. ದ್ವಾರಕೀಶ್ ಅವರ ಬಹುತೇಕ ಚಿತ್ರಗಳಿಗೆ ನಿರ್ದೇಶಕರಾಗಿ ಸಹಾ ಕೆಲಸ ನಿರ್ವಹಿಸುತ್ತಿದ್ದರು. ಇಷ್ಟೇ ಅಲ್ಲದೆ ಹಾಡುವುದು, ಸಂಗೀತ ವಾದ್ಯಗಳನ್ನು ನುಡಿಸುವುದು ಇವರ ಸಂಗೀತಾಸಕ್ತಿಗಳಾಗಿದ್ದವು. ಅನೇಕ ಧ್ವನಿ ಸುರುಳಿಗಳ ನಿರ್ಮಾಣಕ್ಕೆ ರತ್ನಾಕರ್ ಸಂಗೀತ ನಿರ್ದೇಶನ ಮಾಡಿದ್ದರು.
ಗುರುಭಕ್ತಿ
ಬದಲಾಯಿಸಿರತ್ನಾಕರ್ ಅವರ ಗುರು ಸೋರಟ್ ಅಶ್ವಥ್. ಸುಮಾರು 54 ವರ್ಷಗಳವರೆಗೆ ಈ ಈರ್ವರೂ ಜತೆಯಲ್ಲೇ ಅಭಿನಯ ಮಾಡಿಕೊಂಡಿದ್ದರು. ಸೋರಟ್ ಅಶ್ವಥ್ ಅವರ ನೆನಪಿಗಾಗಿ ರತ್ನಾಕರ್ ತಮ್ಮ ಕೊನೆಯ ದಿನಗಳವರೆಗೂ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದರು. ತಮ್ಮ ಗುರುವಿನ ಮಾದರಿಯಲ್ಲೇ ರತ್ನಾಕರ್ ಅನೇಕ ಮಂದಿಯನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ದೊಡ್ಡಣ್ಣ, ಜಗ್ಗೇಶ್, ದಿವಂಗತ ಸುನಿಲ್, ದಿನೇಶ್, ಟೆನ್ನಿಸ್ ಕೃಷ್ಣ ಸೇರಿದಂತೆ ಅನೇಕ ಮಂದಿ ರತ್ನಾಕರ್ ನೆರವಿನೊಂದಿಗೆ ಚಿತ್ರರಂಗವನ್ನು ಪ್ರವೇಶಿಸಿದರು.
ಹಾಸ್ಯ ಪಾತ್ರಗಳಲ್ಲಿ ಪ್ರಸಿದ್ಧಿ
ಬದಲಾಯಿಸಿಇಷ್ಟೆಲ್ಲಾ ಸಾಧಿಸಿದ ರತ್ನಾಕರ್ ಅವರು ನಮ್ಮ ಕಣ್ಣಿಗೆ ಹೆಚ್ಚು ಆತ್ಮೀಯವಾಗಿ ಕಂಡದ್ದು ಹಾಸ್ಯ ನಟರಾಗಿ. ವೀರಕೇಸರಿ, ದಶಾವತಾರ, ಭಕ್ತ ಕನಕದಾಸ, ಸ್ವರ್ಣ ಗೌರಿ, ನವಜೀವನ, ಕರುಳಿನ ಕರೆ, ಗುರುಶಿಷ್ಯರು, ಯಜಮಾನ, ಆಪ್ತರಕ್ಷಕ ಮುಂತಾದ ಅನೇಕ ಪ್ರಸಿದ್ಧ ಚಿತ್ರಗಳಲ್ಲಿ ಅವರ ನೆನಪು ಮೂಡಿಬರುತ್ತದೆ.
ಪ್ರಶಸ್ತಿ ಗೌರವಗಳು
ಬದಲಾಯಿಸಿರತ್ನಾಕರ್ ಅವರ ಚಿತ್ರರಂಗದಲ್ಲಿನ ದುಡಿಮೆಯನ್ನು ಗೌರವಿಸುವುದಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು 2005ರ ವರ್ಷದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಸಲ್ಲಿಸಿತ್ತು. ಅವರಿಗೆ ಇನ್ನೂ ಅನೇಕ ಗೌರವಗಳು ಸಲ್ಲಬಹುದಿತ್ತು. ಕಾಲ ಬಹಳಷ್ಟನ್ನು ಮರೆಸುತ್ತದೆ ಮತ್ತು ಬಹಳಷ್ಟನ್ನು ಅಳಿಸುತ್ತದೆ ಇಲ್ಲವೇ ನಗಣ್ಯವಾಗಿಸುತ್ತದೆ. ರತ್ನಾಕರ್ ಅವರ ಸಾಧನೆಗಳು ಇತ್ತೀಚಿನ ಜನಾಂಗಕ್ಕೆ ಮರೆಯಾದವು. ರತ್ನಾಕರ್ ಅವರು ಗಳಿಸಿದ್ದು ಅವರ ಬದುಕಿನ ವ್ಯಾಪ್ತಿಗೆ ಸಾಲದಾದವು. ಹಿರಿಯ ಜೀವ ಕಷ್ಟಪಟ್ಟರು. ಹಿರಿಯ ವಯಸ್ಸಿನಲ್ಲೂ ಒಂದಿಷ್ಟು ಕೆಲಸವಿದ್ದಿದ್ದರೆ ಬದುಕು ಸಹ್ಯವಿರುತ್ತಿತ್ತೇನೋ ಎಂದು ಪರಿತಪಿಸುವ ಬದುಕನ್ನು ಬದುಕಿದರು.
ವಿದಾಯ
ಬದಲಾಯಿಸಿರತ್ನಾಕರ್ ಅವರು ಸೆಪ್ಟೆಂಬರ್ ೨೦, ೨೦೧೦ರ ವರ್ಷದಲ್ಲಿ ಬಡತನದ ಬವಣೆಯಲ್ಲಿ ಈ ಲೋಕವನ್ನಗಲಿದರು.
ಬಹುಶಃ ಈ ಲೋಕದಲ್ಲಿ ಒಬ್ಬ ವ್ಯಕ್ತಿ ಯಶಸ್ಸು ಬಂದ ಕ್ಷಣದಲ್ಲಿ ಮತ್ತು ಆತ ಮರೆಯಾದ ಕ್ಷಣದಲ್ಲಿ ಮಾತ್ರ ಹೆಚ್ಚು ಸ್ಮರಿಸಲ್ಪಡುತ್ತಾನೆ. ರತ್ನಾಕರ್ ಅವರ ವಿಚಾರದಲ್ಲಂತೂ ಇದು ಸತ್ಯ. ಆದರೆ ಅವರ ಚಿತ್ರಗಳನ್ನು ಕಂಡವರಿಗೆ ಆ ಮಧುರ ಭಾವಗಳು ಮರೆಯಲಾಗದಂತದ್ದು.