ಯೋಹಾನ್ ಕ್ರಿಶ್ಚನ್ ಗುಂಥರ್
ಯೋಹಾನ್ ಕ್ರಿಶ್ಚನ್ ಗುಂಥರ್ (1695 - 1723) 18ನೆಯ ಶತಮಾನದ ಆದಿಯಲ್ಲಿದ್ದ ಜರ್ಮನ್ ಕವಿ. ಉತ್ತಮ ಭಾವಗೀತೆಗಳನ್ನು ಬರೆದು ಹೆಸರಾದವ.[೧]
ಜೀವನ
ಬದಲಾಯಿಸಿಸೈಲೀಸಿಯದ ಸ್ಟ್ರೀಗನ್‌ನಲ್ಲಿ ಹುಟ್ಟಿದ ಈತ ವೈದ್ಯನ ಮಗ. ತನ್ನ ವೃತ್ತಿಯನ್ನೇ ಮಗನೂ ಅವಲಂಬಿಸಲೆಂದು ತಂದೆ ಈತನನ್ನು ವೈದ್ಯಶಿಕ್ಷಣಕ್ಕಾಗಿ ವಿಟ್ಟೆನ್‌ಬರ್ಗ್ ಕಾಲೇಜಿಗೆ ಕಳಿಸಿದ. ಗುಂಥರನಿಗಾದರೊ ಸಾಹಿತ್ಯದ ಕಡೆಗೇ ಒಲವು; ವೈದ್ಯಕೀಯ ಅಧ್ಯಯನದಲ್ಲಿ ಎಳ್ಳಷ್ಟೂ ಆಸಕ್ತಿಯಿರಲಿಲ್ಲ. ಈತನಲ್ಲಿ ಸಹಜವಾಗಿದ್ದ ಕಾವ್ಯ ಪ್ರತಿಭೆ ಪ್ರಕಟವಾಗತೊಡಗಿತು. ಭಗ್ನ ಪ್ರೇಮವನ್ನೇ ವಸ್ತುವನ್ನಾಗಿ ಮಾಡಿಕೊಂಡು ಅನೇಕ ಸುಂದರ ಭಾವಗೀತೆಗಳನ್ನು ರಚಿಸಿದ.
ಅಧ್ಯಯನದಲ್ಲಿ ಬೇಸರ ಹೊಂದಿದ್ದ ಈತನ ಮನಸ್ಸು ವಿಲಾಸ ಜೀವನದ ಕಡೆ ತಿರುಗಿತು. ಅನೇಕ ದುಶ್ಚಟಗಳು ಅಂಟಿಕೊಂಡವು. ಓದಿನಲ್ಲಿ ಯಾವ ಪ್ರಗತಿಯನ್ನೂ ಸಾಧಿಸದೆ 2 ವರ್ಷ ವ್ಯರ್ಥವಾಗಿ ಕಳೆದ ಮೇಲೆ ಲೀಪ್ಜಿಗ್ ನಗರಕ್ಕೆ ತೆರಳಿದ. ಅಲ್ಲಿ ಈತನ ಕವಿತಾ ಸಾಮರ್ಥ್ಯವನ್ನು ಗುರುತಿಸಿದ ಹಿರಿಯ ಸಾಹಿತಿ ಜೆ. ಬಿ. ಮೆಂಕೆಯ ಸ್ನೇಹವಾಗಿ ಅವನಿಂದ ಅಪಾರ ಪ್ರೋತ್ಸಾಹ ದೊರೆಯಿತು. ದ ಪೀಸ್ ಆಫ್ ಪಾಸರೋವಿಟ್ಸ್ ಎಂಬ ಕವಿತೆ (1718) ಈತನಿಗೆ ಹೆಚ್ಚಿನ ಗೌರವವನ್ನು ತಂದಿತು. ಮೆಂಕೆ ಪ್ರತಿಭಾಶಾಲಿಯಾದ ಈ ಕವಿಗೆ ಪೋಲೆಂಡಿನ ದೊರೆ ಎರಡನೆಯ ಅಗಸ್ಟಸ್‌ನ ಕೃಪಾಶ್ರಯವನ್ನು ದೊರಕಿಸಿಕೊಡಲು ಪ್ರಯತ್ನಿಸಿದ. ಆದರೆ ಕವಿಯ ಚಾರಿತ್ರ್ಯದ ಬಗ್ಗೆ ಆರೋಪಗಳನ್ನು ಕೇಳಿದ್ದ ರಾಜ ತನ್ನ ಕೃಪಾದೃಷ್ಟಿ ಹರಿಸಲಿಲ್ಲ. ಇದರಿಂದಾಗಿ ಜೀವನದಲ್ಲಿ ಮತ್ತಷ್ಟು ನಿರಾಸೆಗೊಂಡ ಕವಿ ಕುಡಿತ ಮತ್ತು ವಿಷಯಾಸಕ್ತಿಗಳಲ್ಲಿ ಆಳವಾಗಿ ಮುಳುಗಿದ. ಮಗ ತನ್ನ ನಿರೀಕ್ಷೆಯಂತೆ ಮುಂದೆ ಬರಲಿಲ್ಲವೆಂದು ಮೊದಲೇ ಮುನಿದಿದ್ದ ತಂದೆ ಮಗನ ಇತರ ಹವ್ಯಾಸಗಳ ಬಗ್ಗೆ ಕೇಳಿ ತುಂಬ ವ್ಯಗ್ರನಾಗಿ, ತನ್ನ ಆಸ್ತಿಯಲ್ಲಿ ಯಾವ ಪಾಲನ್ನು ಕೊಡದೆ ಮನೆಯಿಂದ ಹೊರದೂಡಿದ. ತಂದೆಯ ಪ್ರೀತಿಯನ್ನು ಸಂಪಾದಿಸಿಕೊಳ್ಳಬೇಕೆಂದು ಗುಂಥರ್ ಮನಸ್ಸನ್ನು ಕರಗಿಸುವ ನಾನಾ ಪ್ರಯತ್ನಗಳನ್ನು ಮಾಡಿ ವಿಫಲನಾದ. ಕ್ಷಮೆ ಬೇಡುವ ಅನೇಕ ಕವನಗಳನ್ನು ರಚಿಸಿ ತಂದೆಗೆ ಕಳಿಸಿದ. ಅವು ಒಂದೊಂದು ಎಂಥವರ ಮನಸ್ಸನ್ನಾದರೂ ಕರಗಿಸುವಷ್ಟು ಕರುಣಾಜನಕವಾಗಿದೆ. ಆದರೆ ತಂದೆಯ ಮನಸ್ಸು ಮಾತ್ರ ಕರಗಲಿಲ್ಲ. 1723ರಲ್ಲಿ ತನ್ನ 28ನೆಯ ಹುಟ್ಟುಹಬ್ಬವನ್ನು ಕಾಣುವ ಮೊದಲೆ ಕವಿ ಕಣ್ಮುಚ್ಚಿದ. ಹೀಗಾಗಿ ಈತನ ಅಪೂರ್ವಕಾಂತಿಯ ಕಾವ್ಯಕುಸುಮ ಪೂರ್ಣವಾಗಿ ಅರಳುವ ಮುನ್ನವೇ ಬಾಡಿಹೋಯಿತು. ಕವಿಯ ಜೀವನ ಒಂದು ದಾರುಣ ಕತೆಯಾಯಿತು.
ಕವನಗಳ ವಿಶೇಷತೆ, ಆ ಕಾಲದ ಕಾವ್ಯ
ಬದಲಾಯಿಸಿ18ನೆಯ ಶತಮನದ ಜರ್ಮನ್ ಕವಿಗಳು ತಮ್ಮ ಇಂದಿನ ತಲೆಮಾರಿನವರ ಶಬ್ದಾಡಂಬರದ ಗೀಳಿಗೆ ಒಳಗಾಗದಂಥ ಸದಭಿರುಚಿಯನ್ನು ಬೆಳೆಸಿಕೊಂಡಿದ್ದರು. ಅವರಲ್ಲೆಲ್ಲ ಅಚ್ಚಕವಿ ಎಂದು ಗಣನೀಯನಾದವ ಗುಂಥರ್. ಪಾಲ್ ಫ್ಲೆಮಿಂಗ್ ಮತ್ತು ಅಂಡ್ರೀಸ್ ಗ್ರೈಫಿಯಸ್ ಈ ಇಬ್ಬರು ಕವಿಗಳನ್ನು ಬಿಟ್ಟರೆ ಮಧ್ಯಯುಗಕ್ಕೂ, ಗಯಟೆಯ ಯುಗಕ್ಕೂ ನಡುವಿನ ಕಾಲದ ಅತ್ಯುತ್ತಮ ಕವಿ ಈತನೇ ಎಂದು ವಿಮರ್ಶಕರ ಅಭಿಪ್ರಾಯ. ತನ್ನ ಕಾಲದ ಎಲ್ಲ ತರುಣ ಕವಿಗಳಂತೆ ಈತನಿಗೂ ವಿಮರ್ಶಕ ಬೋಯ್ಲೊ ಬಗ್ಗೆ ಅಪಾರ ಗೌರವವಿತ್ತು. ಫೋಕ್ಸ್ ಲೀಡ್ ಕವಿಯ ಪ್ರಭಾವದಿಂದಾಗಿ ಸ್ವಲ್ಪಮಟ್ಟಿನ ಸರಳತೆ ಈತನ ಭಾವಗೀತೆಗಳಿಗೂ ಬಂತು. ಇತರ ಪ್ರಭಾವಗಳಿಗಿಂತ ತನ್ನ ಕಟು ಅನುಭವಗಳೇ ಹೆಚ್ಚಾಗಿದ್ದುದರಿಂದ ಈತನ ಜೀವನವೇ ಕಾವ್ಯದ ಶೈಲಿಯನ್ನು ರೂಪಿಸಿತು. ಹೃದಯಾಂತರಾಳದಿಂದ ಸಹಜವಾಗಿ ಹೊಮ್ಮಿದ ಈತನ ಭಾವಗೀತೆಗಳನ್ನು ಗಹನಕತೆಯಲ್ಲಾಗಲೀ ಸೊಬಗಿನಲ್ಲಾಗಲೀ ಮೀರಿಸುವ ಗುಣ ಫ್ಲೆಮಿಂಗನ ಕವನಗಳಲ್ಲೂ ಇಲ್ಲ. ಡಾಷ್‌ನ ಕವಿತೆಗಳಲ್ಲೂ ಇಲ್ಲ.
ಬಹು ಹಿಂದೆ ಜರ್ಮನಿಯಲ್ಲಿ ಶ್ರೇಷ್ಠವಾದ ಪ್ರೇಮಗೀತೆಗಳನ್ನು ಬರೆದು ಹೆಸರಾಗಿದ್ದ ಮಿನ್ನೆಸಾಂಗನ ಅನಂತರ ಜರ್ಮನಿಯ ವಿಶಿಷ್ಟವಾದ ಪ್ರೇಮಗೀತೆಗಳ ಎಳೆಯನ್ನು ಮತ್ತೆ ಎತ್ತಿಕೊಂಡ ಶ್ರೇಯಸ್ಸು ಗುಂಥರನಿಗೆ ಸಲ್ಲುತ್ತದೆ.
ಸುಲಲಿತವಾದ ಭಾವಧಾರೆ, ಸಾಂಪ್ರದಾಯಿಕತೆಯ ಕಟ್ಟನ್ನು ಕಿತ್ತು ಹೊರಬಂದ ಹೊಸತನ, ನಿಶಿತಮತಿಯಿಂದ ಮಿಂಚುವ ಪ್ರತಿಭೆ, ಚತುರತೆ ಹಾಗೂ ಹಾಸ್ಯ ಮನೋಧರ್ಮ ಈತನ ಕವನಗಳ ಕೆಲವು ಲಕ್ಷಣಗಳು. ಕೆಲವು ಕಡೆ ಮಾತ್ರ ಹಾಸ್ಯ ತೀರ ಕೆಳಮಟ್ಟಕ್ಕೂ ಇಳಿದು ಹೀನ ಅಭಿರುಚಿಯನ್ನು ತೋರಿಸುವುದುಂಟು.
ಈತನ ಮರಣಾನಂತರ 1724ರಲ್ಲಿ ಗೆದಿಷ್ಠೆ ಎಂಬ ಕವನ ಸಂಕಲನ ಪ್ರಕಟವಾಯಿತು. ಈತನ ಎಲ್ಲ ಕವನಗಳನ್ನೂ ಒಟ್ಟುಗೂಡಿಸಿ ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಲಾಯಿತು. ಲಿಯೊ ನೊರೆನ್ ಲಿಡರ್ ಎಂಬಂಥ ಕವನಗಳಲ್ಲಿ ಕವಿ ತನ್ನ ಅಂತರಂಗದ ವೇದನೆಯನ್ನು ತೋಡಿಕೊಂಡಿದ್ದಾನೆ. ತನ್ನ ತಂದೆಗೆ ಬರೆದ ಕ್ಷಮಾಪರಾಧದ ಕವನಗಳಲ್ಲಿ ಈತನ ನಿಜವಾದ ಕಾವ್ಯಸಿದ್ಧಿಯನ್ನು ಕಾಣಬಹುದು.
ಉಲ್ಲೇಖಗಳು
ಬದಲಾಯಿಸಿ- ↑ One or more of the preceding sentences incorporates text from a publication now in the public domain: Chisholm, Hugh, ed. (1911). . Encyclopædia Britannica. Vol. 12 (11th ed.). Cambridge University Press. p. 730.
{{cite encyclopedia}}
: Cite has empty unknown parameters:|separator=
and|HIDE_PARAMETER=
(help); Invalid|ref=harv
(help)
ಹೊರಗಿನ ಕೊಂಡಿಗಳು
ಬದಲಾಯಿಸಿ- Works by ಯೋಹಾನ್ ಕ್ರಿಶ್ಚನ್ ಗುಂಥರ್ at LibriVox (public domain audiobooks)