ಯೋಜಿಸುವಿಕೆ
ಪೀಠಿಕೆ
ಬದಲಾಯಿಸಿಯೋಜಿಸುವಿಕೆಯು ನಿರ್ವಹಣಾ ಪ್ರಕ್ರಿಯೆಯಲ್ಲಿ ನೆರವೇರಿಸಬೇಕಾದ ಆರಂಭಿಕ ಕಾರ್ಯವಾಗಿದೆ.ಯಾವುದೇ ವ್ಯವಸ್ಥಾಪಕನು ಸಂಘಟನೆ,ನಿರ್ದೇಶನ ಮತ್ತು ನಿಯಂತ್ರಣ ಕಾರ್ಯಗಳನ್ನು ಕೈಗೊಳ್ಳುವ ಮೊದಲು ಯೋಜನೆಯನ್ನು ಸಿದ್ಧಪಡಿಸಬೇಕು.ಯೋಜಿಸುವಿಕೆಯು ನಿರ್ವಹಣೆಯ ಇನ್ನಿತರ ಕಾರ್ಯಗಳಿಗೆ ಆಧಾರವಾಗಿರುವುದರಿಂದ,ಇದನ್ನು ನಿರ್ವಹಣಾ ಕಾರ್ಯಗಳ ಮೂಲಭೂತ ಚಟುವಟಿಕೆ ಎಂದು ಹೇಳಬಹುದು.ಸ್ಪಷ್ಟವಾದ ಯೋಜನೆ ಇಲ್ಲದಿದ್ದರೆ ನಿರ್ವಹಣೆಯ ಉಳಿದೆಲ್ಲ ಕಾರ್ಯಗಳು ಪರಿಣಾಮಕಾರಿಯಾಗುವುದಿಲ್ಲ.
ಯೋಜಿಸುವಿಕೆಯು ,ಸಂಸ್ಥೆಯೊಂದರ ಉದ್ದೇಶಗಳನ್ನು ಅಥವಾ ಗುರಿಗಳನ್ನು ನಿರ್ಧರಿಸುವುದು ಮತ್ತು ನಿರ್ಧರಿಸಿದ ಉದ್ದೇಶಗಳನ್ನು ಅತ್ಯುತ್ತಮ ರೀತಿಯಲ್ಲಿ ಈಡೇರಿಸಿಕೊಳ್ಳಲು ಅನುಸರಿಸಬೇಕಾದ ಭವಿಷ್ಯದ ನಡುವಳಿಕೆಗಳ ಕಾರ್ಯ ಮಾರ್ಗಗಳನ್ನು ನಿರ್ಧರಿಸುವುದರ ಮೇಲೆ ಕೇಂದ್ರೀಕೃತವಾಗಿದೆ.ಸ್ಪರ್ಧಾತ್ಮಕ ಮತ್ತು ತೀವ್ರಗತಿಯಲ್ಲಿ ಬದಲಾಗುವ ವ್ಯವಹಾರ ಸನ್ನಿವೇಶದಲ್ಲಿ ಸಂಸ್ಥೆಯೊಂದರ ಉಳಿವು,ಬೆಳವಣಿಗೆ ಮತ್ತು ಅಭ್ಯುದಯಕ್ಕೆ ಸಹಕರಿಸುತ್ತದೆ.
ಯೋಜಿಸುವುಕೆಯು ಬೌದ್ಧಿಕ ಅಥವಾ ಮಾನಸಿಕ ಪ್ರಕ್ರಿಯೆಯಾಗಿದ್ದು,ವ್ಯವಸ್ಥಾಪಕನು ಯಾವುದೇ ಕಾರ್ಯವನ್ನು ನಿರ್ವಹಿಸುವ ಮೊದಲು ಮಾಡಲೇಬೇಕಾದ ಚಿಂತನೆ,ಕಲ್ಪನೆ ಮತ್ತು ನಿಷ್ಕರ್ಷೆಗಳನ್ನು ಒಳಗೊಂಡಿದೆ.ಅದುದರಿಂದ ಇದು ಭವಿಷ್ಯದ ಕಾರ್ಯ ವಿಧಾನವನ್ನು ನಿರ್ಧರಿಸುವುದಕ್ಕೆ ಬೇಕಾದ ಪೂರ್ವಾಲೋಚನೆಗೆ ಸಂಬಂಧಸಿದೆ.ಇದು ನಿರಂತರ ಮತ್ತು ಅಂತ್ಯವಿಲ್ಲದ ಪ್ರಕ್ರಿಯೆಯಾಗಿದ್ದು,ಎಲ್ಲಾ ಸ್ಥತರಗಳಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥಾಪಕರು ಕೈಗೊಳ್ಳುತ್ತಾರೆ.
ಯೋಜಿಸುವಿಕೆಯ ಅರ್ಥ
ಬದಲಾಯಿಸಿಯೋಜನೆಯ ನಿರ್ದಿಷ್ಟ ಗುರಿ ಅಥವಾ ಉದ್ದೇಶವನ್ನು ಸಾಧಿಸಲು ಅಗತ್ಯವಾದ ಪೂರ್ವ ನಿರ್ಧರಿತ ಕಾರ್ಯಮಾರ್ಗವಾಗಿದೆ.ಇದು ಏನನ್ನು ಮಾಡಬೇಕು,ಯಾವಾಗ,ಎಲ್ಲಿ ,ಹೇಗೆ ಮತ್ತು ಯಾರಿಂದ ಅದನ್ನು ಮಾಡಿಸಬೇಕು ಎಂಬುದನ್ನು ಪೂರ್ವಭಾವಿಯಾಗಿ ನಿರ್ಧರಿಸುವುದಕ್ಕೆ ಸಂಬಂಧಿಸಿದೆ.
ಯೋಜಿಸುವಿಕೆಯ ವ್ಯಾಖ್ಯೆಗಳು
ಬದಲಾಯಿಸಿ- ಕೂಂಟ್ಜ್ ಮತ್ತು ಓ'ಡೊನೆಲ್ ರವರ ಪ್ರಕಾರ,"ಯೋಜಿಸುವಿಕೆಯು ಏನು ಮಾಡಬೇಕು,ಹೇಗೆ ಮಾಡಬೇಕು,ಯಾವಾಗ ಮಾಡಬೇಕು ಮತ್ತು ಅದನ್ನು ಯಾರು ಮಾಡಬೇಕು ಎಂಬುದನ್ನು ಪೂರ್ವಭಾವಿಯಾಗಿ ನಿರ್ಧರಿಸುವುದಾಗಿದೆ.ಯೋಜಿಸುವಿಕೆಯು ನಾವು ಎಲ್ಲಿದ್ದೇವೆ ಮತ್ತು ಎಲ್ಲಿಗೆ ಹೋಗಬೇಕು ಎಂಬುದರ ನಡುವಿನ ಸಂಪರ್ಕ ಸೇತುವೆಯಾಗಿದೆ.ಇದು ಯೋಜನೆ ಇಲ್ಲದಿದ್ದಾಗ ಕಾರ್ಯ ಸಾಧ್ಯವಾಗದ ಸಂಗತಿಗಳನ್ನು ಕಾರ್ಯಸಾಧ್ಯವಾಗುವಂತೆ ಮಾಡುತ್ತದೆ."
- ಲೂಯಿಸ್ ಅಲೆನ್ ರವರ ಪ್ರಕಾರ,"ಯೋಜಿಸುವುಕೆಯು ಮುನ್ನಂದಾಜು,ಉದ್ದೇಶಗಳು,ನೀತಿ,ಕಾರ್ಯಕ್ರಮ,ಕಾರ್ಯ ವಿಧಾನ,ಕಾರ್ಯವಿವರ ಮತ್ತು ಬಜೆಟ್ಟುಗಳನ್ನು ಅಭಿವೃದ್ದಿಪಡಿಸುವುದನ್ನು ಒಳಗೊಂಡಿದೆ."
ಯೋಜಿಸುವಿಕೆಯ ಮಹತ್ವ
ಬದಲಾಯಿಸಿಯೋಜಿಸುವಿಕೆಯು ನಿರ್ವಹಣೆಯ ಎಲ್ಲಾ ಕಾರ್ಯಗಳ ಮೂಲಾಧಾರ ಚಟುವಟಿಕೆ.ಇದು ನಿರ್ವಹಣೆಯ ಉಳಿದೆಲ್ಲಾ ಕಾರ್ಯಗಳಾದ ಸಂಘಟನೆ,ಸಿಬ್ಬಂದಿ ನಿರ್ವಹಣೆ,ನಿರ್ದೇಶನ ಮತ್ತು ನಿಯಂತ್ರಣ ಕಾರ್ಯಗಳಿಗೆ ಅತ್ಯಗತ್ಯವಾಗಿದೆ.ಇದು ಭವಿಷ್ಯದ ಚಟುವಟಿಕೆಗಳಿಗೆ ಮಾರ್ಗದರ್ಶಿಯಾಗುವುದರ ಜೊತೆಗ,ಸ್ಪಷ್ಟವಾದ ಕ್ರಿಯಾಮಾರ್ಗಗಳನ್ನು ರೂಪಿಸುವುದರ ಮೂಲಕ ಮುಂದೆ ಎದುರಾಗಬಹುದಾದ ಅನಿಶ್ಚಿತತೆಯನ್ನು ಕಡಿಮೆ ಮಾಡುತ್ತದೆ.ಯೋಜಿಸುವಿಕೆಯ ಮಹತ್ವವನ್ನು ಈ ಕೆಳಗಿನಂತೆ ಸಮಗ್ರೀಕರಿಸಬಹುದು
೧. ಯೋಜನೆಯು ಮಾರ್ಗದರ್ಶನ ನೀಡುತ್ತದೆ
ಒಂದು ಕಾರ್ಯವನ್ನು ಹೇಗೆ ಮಾಡಬೇಕು ಎಂಬುದನ್ನು ಪೂರ್ವಭಾವಿಯಾಗಿ ನಿರ್ಧರಿಸುವ ಮೂಲಕ ಸಂಸ್ಥೆಯ ಕಾರ್ಯಾಚರಣೆಗೆ ಮಾರ್ಗದರ್ಶನವನ್ನು ನೀಡುತ್ತದೆ.ಯೋಜನೆಯು ಸಂಸ್ಥೆಯ ಗುರಿ ಅಥವಾ ಉದ್ದೇಶಗಳನ್ನು ಸರಿಯಾಗಿ ಸ್ಪಷ್ಟಪಡಿಸುವುದರಿಂದ,ನೌಕರರು ಸಂಸ್ಥೆಯ ಉದ್ದೇಶಗಳೇನು ಮತ್ತು ಆ ಉದ್ದೇಶ ಅಥವಾ ಗುರಿಗಳನ್ನು ಸಾಧಿಸಲು ಅವರು ಏನನ್ನು ಮಾಡಬೇಕು ಎಂಬುದನ್ನು ಅರಿತುಕೋಳ್ಳಬಹುದ.ಇದು ಸಂಸ್ಥಯ ವ್ಯಕ್ತಿಗಳ ಮತ್ತು ವಿವಿಧ ವಿಭಾಗಗಳ ಕಾರ್ಯ ಚಟುವಟಿಕೆಗಳಲ್ಲಿ ಸಮನ್ವಯ ತರಲು ಸಹಾಯ ಮಾಡುತ್ತದೆ.
೨. ಯೋಜಿಸುವಿಕೆಯು ಅನಿಶ್ಚಿತತೆಯ ಅಪಾಯವನ್ನು ಕಡಿಮೆ ಮಾಡುತ್ತದೆ
ಪ್ರತಿಯೊಂದು ವ್ಯವಹಾರ ಸಂಸ್ಥೆಯು ಯಾವಾಗಲು ಬದಲಾಗುವ ಮತ್ತು ಅನಿಶ್ಚತತೆಯಿಂದ ಕೂಡಿದ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ.ಯೋಜಿಸುವಿಕೆಯು ಭವಿಷ್ಯದ ಅನಿಶ್ಚತತೆಯನ್ನು ಅಂದಾಜಿಸಲು ಮತ್ತು ಸರಿಯಾದ ವಿಧಾನದಲ್ಲಿ ಅದನ್ನು ಎದುರಿಸಲು ಸಂಸ್ಥೆಗೆ ಸಹಾಯ ಮಾಡುತ್ತದೆ.ಬದಲಾವಣೆ ಮತ್ತು ಅನಿಶ್ಚಿತ ಸಂದರ್ಭಗಳನ್ನು ನಿವಾರಿಸಲು ಸಾಧ್ಯವಾಗುವುದಿಲ್ಲಾ.ಆದರೆ ಅವುಗಳನ್ನು ಪೂರ್ವಭಾವಿಯಾಗಿ ನಿರೀಕ್ಷಿಸಿ,ಯೋಜನೆಯ ಸಹಾಯದಿಂದ ನಿವಾರಣಾ ಕ್ರಮಗಳನ್ನು ಅಭಿವೃದ್ದಿ ಪಡಿಸಬಹುದು.
೩. ಯೋಜನೆಯು ಅತಿವ್ಯಾಪಿಸಿದ ಮತ್ತು ವ್ಯರ್ಥಚಟುವಟಿಕೆಗಳನ್ನು ಕಡಿಮೆ ಮಾಡುತ್ತದೆ
ಇದು ಸಂಸ್ಥೆಯಲ್ಲಿ ಕಂಡುಬರುವ ಗೊಂದಲ ಮತ್ತು ತಪ್ಪು ತಿಳುವಳಿಕೆಗಳನ್ನು ನಿವಾರಿಸುತ್ತದೆ.ಯೋಜನೆಯು ಉತ್ತಮ ಕಾರ್ಯಮಾರ್ಗವನ್ನು ರೂಪಿಸುವುದರಿಂದ,ಕಾರ್ಯ ಚಟುವಟಿಕೆಗಳು ಸುಲಲಿತವಾಗಿ ನಡೆಯುತ್ತದೆ.ಇದು ಲೋಪದೋಷಗಳನ್ನು ಗುರುತಿಸಿ ಮತ್ತು ಅವುಗಳ ನಿವಾರಣಗೆ ಕ್ರಮ ಕೈಗೊಳವ ಮೂಲಕ ವ್ಯರ್ಥ ಚಟುವಟಿಕೆಗಳನ್ನು ಕಡಿಮೆ ಮಾಡುತ್ತದೆ.
೪. ಯೋಜನೆಯು ಹೊಸ ಕಲ್ಪನೆಗಳಿಗೆ ಅವಕಾಶ ಒದಗಿಸಿಕೊಡುತ್ತದೆ
ಯೋಜಿಸುವಿಕೆಯು ಪ್ರಮುಖವಾಗಿ ನಿರ್ವಹಣೆಯ ಬೌದ್ದಿಕ ಅಥವಾ ಮಾನಸಿಕ ಚಟುವಟಿಕೆಯಾಗಿದೆ.ಇದು ವ್ಯವಸ್ಥಾಪಕರು ನಾವಿನ್ಯತೆಗಳನ್ನು ಅಳವಡಿಸಿಕೊಳ್ಳಲು ಮತ್ತು ಸೃಜನಾತ್ಮಕವಾಗಿ ಯೋಚಿಸಲು ಪ್ರೇರೇಪಿಸುತ್ತದೆ.ವ್ಯವಸ್ಥಾಪಕರು ಸೃಜನಶೀಲತೆಯಿಂದ ಕಾರ್ಯಚಟುವಟಿಕೆಗಳನ್ನು ಯೋಜಿಸುವಾಗ ನವನವೀನ ಕಲ್ಪನೆಗಳು ಅವರ ಮನದಲ್ಲಿ ಮೂಡುತ್ತವೆ.ಯೋಜಿಸುವಿಕೆಯು ಭವಿಷ್ಯದಲ್ಲಿ ಅಳವಡಿಸಿಕೊಳ್ಳಬೇಕಾದ ಹೊಸ ಕಾರ್ಯವಿಧಾನಗಳನ್ನು ರೂಪಿಸಲು ಹೊಸ ಕಲ್ಪನೆಗಳೊಂದಿಗೆ ಸಧೃಡ ಯೋಜನೆಗಳನ್ನು ತಯಾರಿಸಲು ಸಹಕರಿಸುತ್ತದೆ.
೫. ಯೋಜಿಸುವಿಕೆಯು ನಿರ್ಣಯ ಕೈಗೊಳ್ಳುವುದಕ್ಕೆ ಅನುವು ಮಾಡುತ್ತದೆ
ನಿರ್ಣಯ ಕೈಗೊಳ್ಳುವಿಕೆಯು ಲಭ್ಯವಿರುವ ಪರ್ಯಾಯ ಕಾರ್ಯಮಾರ್ಗಗಳನ್ನು ವಿಶ್ಲೇಷಿಸಿ ಉತ್ತಮವಾದ ಕಾರ್ಯವಿಧಾನವನ್ನು ಆಯ್ಕೆಮಾಡುವ ಪ್ರಕ್ರಿಯೆಯಾಗಿದೆ.ಯೋಜನೆಯ ವಿಧಗಳಾದ ಉದ್ದೇಶಗಳು,ನೀತಿ,ಕಾರ್ಯವಿಧಾನ ಮತ್ತು ವಿಧಾನಗಳು ವ್ಯವಸ್ಥಾಪಕರಿಗೆ ಪ್ರತಿಯೊಂದು ಪರ್ಯಾಯ ಕಾರ್ಯಮಾರ್ಗಗಳನ್ನು ಅವಲೋಕಿಸಿ ವಿವೇಕಯುಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ನೀಡುತ್ತವೆ.
೬. ಯೋಜಿಸುವಿಕೆಯು ನಿಯಂತ್ರಣಕ್ಕಾಗಿ ಅಗತ್ಯವಾದ ಕಾರ್ಯಪ್ರಮಾಣಗಳನ್ನು ಆಥವಾ ಪ್ರಮಾಣೀಕೃತ ಮೌಲ್ಯಗಳನ್ನು ಸ್ಥಾಪಿಸುತ್ತದೆ
ಯೋಜಿಸುವಿಕೆಯು ನಿಯಂತ್ರಣಕ್ಕೆ ಅನುವು ಮಾಡುತ್ತದೆ.ಇದು ಪ್ರತಿಯೊಬ್ಬ ನೌಕರನ ಮತ್ತು ವಿಭಾಗದ ವಾಸ್ತವಿಕ ಕಾರ್ಯ ಪ್ರಗತಿಯನ್ನು ನಿರ್ಧರಿಸಿದ ಕಾರ್ಯಪ್ರಮಾಣದೊಂದಿಗೆ ಹೋಲಿಕೆ ಮಾಡಲು ಸಹಾಯ ಮಾಡುತ್ತದೆ.ವಾಸ್ತವಿಕ ಕಾರ್ಯಗಳು ಕಾರ್ಯಪ್ರಮಾಣದ ಮೌಲ್ಯಕ್ಕಿಂತ ಕಡಿಮೆ ಇದ್ದರೆ,ಸರಿಪಡಿಸುವ ಪ್ರಯತ್ನಗಳನ್ನು ಮಾಡಬಹುದು.ಆದುದರಿಂದ ನಿಯಂತ್ರಣಕ್ಕೆ ಯೋಜನೆಯು ಮೂಲಾಧಾರವಾಗಿದೆ.
ಯೋಜಿಸುವಿಕೆಯ ಮಿತಿಗಳು
ಬದಲಾಯಿಸಿ೧. ಯೋಜಿಸುವಿಕೆಯು ಕಠಿಣತೆಗೆ ಆಸ್ಪದ ನೀಡುತ್ತದೆ
ಈ ಯೋಜನೆಯು ಭವಿಷ್ಯದ ಕಾರ್ಯಮಾರ್ಗವನ್ನು ನಿರ್ಧರಿಸುತ್ತದೆ ಮತ್ತು ವ್ಯವಸ್ಥಾಪಕರು ಆ ನಿಗದಿಪಡಿಸಿದ ಕಾರ್ಯಮಾರ್ಗದಲ್ಲಿಯೇ ತಮ್ಮ ಚಟುವಟಿಕೆಗಳನ್ನು ನಡೆಸಬೇಕು.ಇದು ವ್ಯವಸ್ಥಾಪಕರ ಕಾರ್ಯಚರಣೆಯಲ್ಲಿ ಕಠಿಣತೆಗೆ ಕಾರಣವಾಗುತ್ತದೆ.ಇದರಿಂದ ವ್ವವಸ್ಥಾಪಕರ ಕಾರ್ಯಸ್ವಾತಂತ್ರ,ಸ್ವಯಂಪ್ರೇರಣೆ ಮತ್ತು ಸೃಜನಶೀಲತೆಯನ್ನು ನಿರ್ಬಂಧಿಸಿದಂತಾಗುತ್ತದೆ.
೨. ಯೋಜಿಸುವಿಕೆಯು ಬದಲಾಗುವ ಪರಿಸ್ಥಿತಿಯಲ್ಲಿ ನಿಶ್ಚಲಗೊಳ್ಳಬಹುದು
ವ್ಯವಹಾರ ಪರಿಸರವು ಚಲನಶೀಲ ಲಕ್ಷಣವನ್ನು ಹೊಂದಿದೆ ಹಾಗೂ ಯಾವುದೂ ಸ್ಥಿರವಲ್ಲ.ಯೋಜಿಸುವಿಕೆಯು ಭವಿಷ್ಯವನ್ನು ಮುನ್ನಂದಾಜಿಸುತ್ತಾದರೂ ಭವಿಷ್ಯದಲ್ಲಿ ಉಂಟಾಗುವ ಬದಲಾವಣೆಯ ದಿಕ್ಕುಗಳನ್ನು ನಿಖರವಾಗಿ ನಿರ್ಧರಿಸುವುದು ಕಷ್ಟವಾಗುತ್ತದೆ.ಉತ್ಪಾದನಾ ವಿಧಾನ,ಮಾರಾಟ ನೀತಿ,ಆರ್ಥಿಕ ನೀತಿ ,ಮುಂತಾದವುಗಳಲ್ಲಿ ಯಾವುದಾದರು ಅನಿರೀಕ್ಷಿತ ಬದಲಾವಣೆಗಳುಂಟಾದಲ್ಲಿ,ವ್ವವಹಾರದ ಯೋಜನೆಗಳು ನಿಷ್ಕ್ರಿಯಗೊಳ್ಳುತ್ತದೆ.
೩. ಯೋಜನೆಯು ಸೃಜನಶೀಲತೆಯನ್ನು ಮಿತಗೊಳಿಸುತ್ತದೆ
ಯೋಜನೆಗಳನ್ನು ಮೇಲಿನ ಹಂತದ ನಿರ್ವಹಣಾಂಗವು ರೂಪಿಸುತ್ತದೆ.ಪರಿಣಾಮವಾಗಿ ಮಧ್ಯಮ ಹಂತದ ನಿರ್ವಹಣಾಂಗ ಮತ್ತು ಇನ್ನಿತರ ನಿರ್ಧಾರ ಕೈಗೊಳ್ಳುವ ಸಿಬ್ಬಂದಿಗಳಿಗೆ ಯೋಜನಾ ಪರಿಮಿತಿಯ ಹೊರಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡುವುದಿಲ್ಲ.ಇದರಿಂದ ಯೋಜನೆಯು ಅಧೀನಾಧಿಕಾರಿಗಳ ಸೃಜನಾತ್ಮಕತೆಯನ್ನು ಮಿತಗೊಳಿಸುತ್ತದೆ.
೪. ಯೋಜನಾ ಪ್ರಕ್ರಿಯೆ ಹೆಚ್ಚು ವೆಚ್ಚವನ್ನು ಒಳಗೊಂಡಿದೆ
ಯೋಜಿಸುವುದು ಹೆಚ್ಚು ವೆಚ್ಚದಾಯಕವಾದ ಪ್ರಕ್ರಿಯೆಯಾಗಿದೆ.ಮಾಹಿತಿ ಸಂಗ್ರಹಣೆ ಮತ್ತು ವಿಶ್ಲೇಷಣೆ,ಉತ್ತಮ ಕಾರ್ಯಮಾರ್ಗದ ಆಯ್ಕೆ ಮತ್ತು ಅವಲೋಕನ ಹೆಚ್ಚು ವೆಚ್ಚವನ್ನು ಒಳಗೊಂಡಿದೆ.ಹೀಗಾಗಿ ಕೆಲವೊಮ್ಮೆ ಯೋಜನೆಯ ತಯಾರಿಕೆಗೆ ಮಾಡುವ ವೆಚ್ಚವು ಅದರಿಂದಾಗುವ ಪ್ರಯೋಜನಕ್ಕಿಂತ ಹೆಚ್ಚಾಗಿರುತ್ತದೆ.
೫. ಯೋಜಿಸುವಿಕೆಗೆ ಹೆಚ್ಚಿನ ಸಮಯದ ಅಗತ್ಯವಿದೆ
ಯೋಜನಾ ತಯಾರಿಕಾ ಪ್ರಕ್ರಿಯೆಯು ಹೆಚ್ಚು ಸಮಯವನ್ನು ಬಯಸುತ್ತದೆ.ಅಂಕಿ-ಅಂಶಗಳ ಸಂಗ್ರಹಣೆ ಮತ್ತು ವಿಶ್ಲೇಷಣೆ ಮಾಡಲು,ಕಾರ್ಯಮಾರ್ಗಗಳ ಆಯ್ಕೆ ಮತ್ತು ಅವಲೋಕನ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ.
೬. ಯೋಜನೆಯು ಯಶಸ್ಸನ್ನು ಖಾತರಿಗೊಳಿಸುವುದಿಲ್ಲಾ
ಸಂಸ್ಥೆಯೊಂದರ ಯಶಸ್ಸು ಉತ್ತಮವಾದ ಯೋಜನೆಗಳನ್ನು ತಯಾರಿಸಿ,ಜಾರಿಗೊಳಿಸಿದಾಗ ಮಾತ್ರ ಸಾಧ್ಯವಾಗುತ್ತದೆ.ಯಾವುದೇ ಯೋಜನೆಯನ್ನು ಸಿದ್ದಪಡಿಸಿದ ಸಂತರ,ಅದನ್ನು ವಾಸ್ತವಿಕ ಕಾರ್ಯವಾಗಿ ಪರಿವರ್ತಿಸಬೇಕಾದ ಅಗತ್ಯವಿದೆ,ಇಲ್ಲದಿದ್ದರೆ ಅದು ನಿರರ್ಥಕವಾಗಿತ್ತದೆ.ಸಾಮಾನ್ಯವಾಗಿ ವ್ಯವಸ್ಥಾಪಕರು ಹಿಂದೆ ಯೋಗ್ಯವೆಂದು ರುಜುವಾತಾದ ಮತ್ತು ಯಶಸ್ವಿಯಾದ ಯೋಜನೆಗಳ ಮೇಲೆ ಅವಲಂಬಿತವಾಗಿವ ಪ್ರವೃತ್ತಿಯನ್ನು ಹೊಂದಿರುತ್ತಾರೆ.ಆದರೆ ಹಿಂದೆ ಯಶಸ್ವಿಯಾದ ಯೋಜನೆಗಳು ಮತ್ತೆ ಮತ್ತೆ ಯಶಸ್ವಿಯಾಗುತ್ತವೆ ಎಂಬುದರಲ್ಲಿ ಹುರುಳಿರುವುದಿಲ್ಲ.ಹೀಗಾಗಿ ಯೋಜನೆಗಳು ಕೇವಲ ಭವಿಷ್ಯದ ಕಾರ್ಯಮಾರ್ಗಗಳ ವಿಶ್ಲೇಷಣೆಗೆ ಮಾತ್ರ ಅನುವು ಮಾಡಿಕೊಡುತ್ತದೆ.
ಯೋಜಿಸುವಿಕೆಯ ಪ್ರಕ್ರಿಯೆ ಅಥವಾ ಯೋಜನಾ ಪ್ರಕ್ರಿಯೆಯಲ್ಲಿನ ಹಂತಗಳು
ಬದಲಾಯಿಸಿ೧. ಉದ್ದೇಶಗಳನ್ನು ಸ್ಥಾಪಿಸುವುದು ಅಥವಾ ನಿರ್ಧರಿಸುವುದು
ಉದ್ದೇಶಗಳನ್ನು ನಿರ್ಧರಿಸುವುದು ಯೋಜನಾ ಪ್ರಕ್ರಿಯೆಯ ಮೊದಲ ಕಾರ್ಯವಾಗಿದೆ.ಉದ್ದೇಶಗಳು ಸಂಸ್ಥೆಯ ಗುರಿಗಳಾಗಿದ್ದು,ಸಂಸ್ಥೆಯು ಏನನ್ನು ಸಾಧಿಸಬೇಕೆಂಬುದನ್ನು ಸ್ಪಷ್ಟಪಡಿಸುತ್ತದೆ.ಉದ್ದೇಶಗಳು ಸಾಧ್ಯವಾದಷ್ಟು ಮಟ್ಟಿಗೆ ನಿರ್ದಿಷ್ಟವಾಗಿರಬೇಕು.ಪ್ರತಿಯೊಂದು ವ್ಯವಹಾರ ಸಂಸ್ಥೆಯು ಕೆಲವು ಉದ್ದೇಶಗಳನ್ನು ಹೊಂದಿರಲೇಬೇಕು.ಉದ್ದೇಶಗಳನ್ನು ಅಥವಾ ಗುರಿಗಳನ್ನು ಒಟ್ಟು ಸಂಸ್ಥೆಗೆ ನಿಗದಿಪಡಿಸಬಹುದು ಮತ್ತು ಪ್ರತಿ ವಿಭಾಗಕ್ಕೆ ಅಥವಾ ಸಂಸ್ಥೆಯಲ್ಲಿನ ಒಂದು ಘಟಕಕ್ಕೆ ನಿಗದಿಪಡಿಸಬಹುದು.ಉದ್ದೇಶಗಳನ್ನು ಪ್ರತಿಯೊಂದು ವಿಭಾಗಕ್ಕೆ ಮತ್ತು ಎಲ್ಲಾ ನೌಕರರಿಗೆ ಸ್ಪಷ್ಟವಾಗಿ ತಿಳಿಸಿರಬೇಕು.
೨. ಯೋಜಿಸುವಿಕೆಯ ಪ್ರಗತಿ ಅಥವಾ ಊಹೆಗಳನ್ನು ಅಭಿವೃದ್ದಿಪಡಿಸುವುದು
ಯೋಜಿಸುವಿಕೆಯು ಅನಿಶ್ಚಿತ ಭವಿಷ್ಯದಲ್ಲಿ ಸಂಸ್ಥೆಯ ಉದ್ದೇಶಗಳನ್ನು ಸಾಧಿಸುವುದಕ್ಕೆ ಅಗತ್ಯವಾಗಿದೆ.ಆದುದರಿಂದ ಯೋಜನೆಗಳನ್ನು ಕೆಲವೊಂದು ಊಹೆಗಳ ಆಧಾರದ ಮೇಲೆ ತಯಾರಿಸಲಾಗುತ್ತದೆ.ಯೋಜನಾ ಪ್ರಮಿತಿಗಳು,ಭವಿಷ್ಯದ ಪರಿಸ್ಥಿತಿ ಮತ್ತು ಘಟನೆಗಳಿಗೆ ಸಂಬಂಧಿಸಿದ ಊಹೆ ಅಥವಾ ಕಲ್ಪನೆಗಳಾಗಿವೆ.ಅಂದರೆ ಭವಿಷ್ಯದ ಜನಸಂಖ್ಯಾ ಬೆಳವಣಿಗೆಯ ಪ್ರವೃತ್ತಿ,ರಾಜಿಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿನ ಬದಲಾವಣೆಗಳು,ಉತ್ಪಾದನಾ ವೆಚ್ಚ ಮತ್ತು ಬೆಲೆಗಳಲ್ಲಿನ ಏರಿಳಿತಗಳು,ಸರ್ಕಾರ ಹಾಗು ಕಾನೂನಿನ ನಿಯಮ ಮತ್ತು ನಿಬಂಧನೆಗಳಲ್ಲಿನ ಬದಲಾವಣೆ ಮುಂತಾದ ಅಂಶಗಳಿಗೆ ಸಂಬಂಧಿಸಿದಂತೆ ಮಾಡಿದ ಊಹೆ ಅಥವಾ ಕಲ್ಪನೆಗಳಾಗಿವೆ.ನಿರ್ವಹಣಾಂಗವು ಯೋಜನೆಗಳನ್ನು ಯೋಜನಾ ಮಿತಿಯೊಳಗೆ ತಯಾರಿಸಬೇಕು.
೩. ಪರ್ಯಾಯ ಕಾರ್ಯಮಾರ್ಗಗಳನ್ನು ಗುರುತಿಸುವುದು
ಉದ್ದೇಶಗಳನ್ನು ಸ್ಥಾಪಿಸಿ,ಯೋಜನಾ ಊಹೆಗಳನ್ನು ನಿರ್ಧರಿಸಿದ ನಂತರ,ಸಂಸ್ಥೆಯು ತನ್ನ ಉದ್ದೇಶಗಳನ್ನು ಸಾಧಿಸಲು ಅವಶ್ಯಕವಾದ ಲಭ್ಯವಿರುವ ಪರ್ಯಾಯ ಕಾರ್ಯಮಾರ್ಗಗಳನ್ನು ಅಥವಾ ಕಾರ್ಯಾಚರಣೆ ವಿಧಾನಗಳನ್ನು ಗುರುತಿಸಬೇಕು.ಉದ್ದೇಶಗಳನ್ನು ಸಾಧಿಸಲು ಹಲವಾರು ಕಾರ್ಯಮಾರ್ಗಗಳಿರಬಹುದು.ಹೀಗಾಗಿ ನಿರ್ವಹಣಾಂಗವು ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಲಭ್ಯವಿರುವ ಎಲ್ಲಾ ಕಾರ್ಯ ಮಾರ್ಗಗಳನ್ನು ತಿಳಿದುಕೊಳ್ಳಬೇಕು.
೪. ಪರ್ಯಾಯ ಕಾರ್ಯಮಾರ್ಗಗಳ ವಿಶ್ಲೇಷಣೆ
ಮುಂದಿನ ಹಂತವು ಪ್ರತಿಯೊಂದು ಪರ್ಯಾಯ ಕಾರ್ಯಮಾರ್ಗಗಳ ಸತ್ವ ಮತ್ತು ನೂನ್ಯತೆಗಳನ್ನು ವಿಶ್ಲೇಷಿಸುವುದಾಗಿದೆ.ಎಲ್ಲಾ ಪರ್ಯಾಯ ಮಾರ್ಗಗಳು ತಮ್ಮದೆ ಆದ ಗುಣದೋಷಗಳನ್ನು ಹೊಂದಿದೆ ಮತ್ತು ಪ್ರತಿಯೊಂದು ಕಾರ್ಯಮಾರ್ಗವನ್ನು,ಉದ್ದೇಶ ಸಾಧಿಸುವಿಕೆಗೆ ಸಂಬಂಧಿಸಿದಂತೆ ವಿಶ್ಲೇಷಣೆ ಮಾಡುವ ಅಗತ್ಯವಿದೆ.
೫. ಉತ್ತಮವಾದ ಪರ್ಯಾಯ ಕಾರ್ಯಮಾರ್ಗದ ಆಯ್ಕೆ
ಇದು ನಿರ್ಧಾರಕೈಗೊಳ್ಳುವ ನಿಜವಾದ ಸಮಯವಾಗಿದೆ.ಪ್ರತಿಯೊಂದು ಕಾರ್ಯಮಾರ್ಗವನ್ನು ವಿಶ್ಲೇಷಿಸಿದ ನಂತರ ಸಂಸ್ಥೆಯ ಉದ್ದೇಶಗಳನ್ನು ಸಾಧಿಸಲು ಉತ್ತಮವಾದ ಕಾರ್ಯಮಾರ್ಗವನ್ನು ಆಯ್ಕೆ ಮಾಡಬೇಕು.ಉತ್ತಮವಾದ ಕಾರ್ಯಮಾರ್ಗ ಅಥವಾ ಕಾರ್ಯವಿಧಾನವು ಸುಲಭವಾಗಿ ಕಾರ್ಯರೂಪಕ್ಕೆ ತರುವಂತದ್ದಾಗಿರಬೇಕು,ಲಾಭದಾಯಕವಾಗಿರಬೇಕು ಮತ್ತು ನಕಾರಾತ್ಮಕ ಪರಿಣಾಮಗಳನ್ನು ಹೊಂದಿರಬೇಕು.
೬. ಯೋಜನೆಯನ್ನು ಜಾರಿಗೊಳಿಸುವುದು
ಈ ಹಂತವು ಉದ್ದೇಶಗಳನ್ನು ಸಾಧಿಸುವ ಸಲುವಾಗಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದಕ್ಕೆ ಸಂಬಂಧಿಸಿದೆ.ಯೋಜನೆಯನ್ನು ಕಾರ್ಯರೂಪಕ್ಕೆ ತರುವುದಕ್ಕೆ ನೀತಿ,ಕಾರ್ಯವಿಧಾನ,ಬಜೆಟ್ಟು ಮತ್ತು ಕಾರ್ಯಕ್ರಮಗಳು ಅವಶ್ಯಕವಾಗಿವೆ.ಇದಕ್ಕೆ ಅಧೀನಾಧಿಕಾರಿಗಳಿಗೆ ಅಗತ್ಯವಾದ ಅಧಿಕಾರ ಮತ್ತು ಜವಾಬ್ದಾರಿ ನೀಡುವುದು ಅಗತ್ಯವಾಗಿರುವುದರ ಜೊತೆಗೆ ಅವರ ಸಹಕಾರ,ಭಾಗವಹಿಸುವಿಕೆ ಮತ್ತು ಅರ್ಪಣಾ ಮನೋಭಾವವು ಅವಶ್ಯಕವಾಗಿದೆ.
೭. ಪ್ರಗತಿ ವಿಶ್ಲೇಷಣೆ ಅಥವಾ ಮುಂಬರಿಕೆ
ಯೋಜನೆಗಳನ್ನು ಜಾರಿಗೊಳಿಸಿ,ಸಂಸ್ಥೆಯ ಚಟುವಟಿಕೆಗಳು ಅಂಗೀಕರಿಸಿದ ಯೋಜನೆಗಳ ರೀತಿಯಲ್ಲಿ ನಡಿಯುತ್ತಿವೆಯೆ ಎಂಬುದನ್ನು ನೋಡುವುದು ಕೂಡ ಯೋಜಿಸುವಿಕೆಯ ಪ್ರಕ್ರಿಯೆಯ ಭಾಗವಾಗಿದೆ.ಯೋಜನೆಗಳನ್ನು ಮೇಲ್ವಚಾರಣೆ ಮಾಡುವುದೂ ಕೂಡ ಉದ್ದೇಶಗಳು ಸಾಧಿಸಲ್ಪಡುವುದನ್ನು ಖಾತರಿಪಡಿಸಿಕೊಂಡಷ್ಟೆ ಮುಖ್ಯವಾಗಿದೆ.
ಯೋgiನೆಯ ವಿಧಗಳು
ಬದಲಾಯಿಸಿ- ಉದ್ದೇಶಗಳು
- ಕಾರ್ಯತಂತ್ರಗಳು
- ನೀತಿಗಳು
- ಕಾರ್ಯವಿಧಾನಗಳು
- ವಿಧಾನಗಳು
- ನಿಯಮಗಳು
- ಕಾರ್ಯಕ್ರಮಗಳು
- ಮುಂಗಡ ಪತ್ರ
ಉಲ್ಲೇಖ
ಬದಲಾಯಿಸಿ
- ವ್ಯವಹಾರ ಅಧ್ಯಯನ(ಕನ್ನಡ ಆವೃತ್ತಿ),ದ್ವಿತಿಯ ಪಿ.ಯು.ಸಿ ಪಠ್ಯಪುಸ್ತಕ,ಸಾರ್ವಜನಿಕ ಶಿಕ್ಷಣ ಇಲಾಖೆ,ಕರ್ನಾಟಕ ಸರ್ಕಾರ