ಯು. ಎಸ್.ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿ

ಉಭಯಕರ್ ಶಿವರಾಮ್ ಕೃಷ್ಣರಾವ್, []ಒಬ್ಬ ಮಹತ್ವದ ಭರತನಾಟ್ಯ ಕಲಾವಿದ, ನೃತ್ಯ ಸಂಯೋಜಕ, ಅತ್ಯುತ್ತಮ ಶಿಕ್ಷಕ, ಗಾಯಕ, ಹಲವು ವಾದ್ಯಗಳ ವಾದಕ , ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಹಲವು ಪುಸ್ತಕಗಳ ಕರ್ತೃ. ಅವರೊಬ್ಬ ಬಾಕ್ಸರ್, ರೆಸ್ಲರ್, ಮತ್ತು ವೈಟ್ ಲಿಫ್ಟರ್ ಆಗಿದ್ದರು. ಕರ್ನಾಟಕದ ಕರಾವಳಿಯ ಬಹುದೊಡ್ಡ ಪ್ರತಿಭೆ. ಯಕ್ಷಗಾನದ ನಾಡಿನಲ್ಲಿ ಮತ್ತೊಂದು ನೃತ್ಯ ಪ್ರಕಾರಕ್ಕೆ ಅನುವು ಮಾಡಿಕೊಟ್ಟು ಆಲ್ಲಿನ ನಿವಾಸಿಗಳಿಗೆ ಈ ಹೊಸ ಮಾಧ್ಯಮದಲ್ಲಿ ಆಸಕ್ತಿ ಕೆರಳಿಸಿ, ತಾವು ತ್ರಿವಿಕ್ರಮನಂತೆ ಬೆಳೆದು ವಿಶ್ವದಲ್ಲಿ ಭಾರತದ ಹೆಸರನ್ನು ಮೆರೆಸಿದ ಖ್ಯಾತಿವಂತ. ಕರಾವಳಿಯಲ್ಲಿ ಪ್ರಚಲಿತವಿರದ ಭರತನಾಟ್ಯ ಕಲೆಯಲ್ಲಿ ಅತಿ ಆಸಕ್ತಿ ಬರಲು ಕಾರಣರಾದವರಲ್ಲಿ ಶೆಟ್ಟಿಯವರು, ಪ್ರಮುಖರು. ಅವರು ಅಂದಿನ ದಿನಗಳಲ್ಲಿ ಬಹಳ ಹೆಸರು ಗಳಿಸಿದ್ದ ಉದಯಶಂಕರ್ ತಂಡದಲ್ಲಿ ನೃತ್ಯ ಪಟುವಾಗಿ ಕೆಲಸ ಮಾಡುತ್ತಿದ್ದರು. ಒಮ್ಮೆ ಅವರು ಮಂಗಳೂರಿಗೆ ಬಂದಾಗ, ಕೃಷ್ಣರಾಯರನ್ನು ಭೆಟ್ಟಿಯಾದರು. ಕೃಷ್ಣರಾಯರ ಅಧ್ಭುತ ವ್ಯಕ್ತಿತ್ವದಿಂದ ಅವರು ಬಹಳ ಪ್ರಭಾವಿತರಾದರು. ಅವರ ಮೈಕಟ್ಟು, ಎತ್ತರದ ನಿಲವು, ನಗು ಮುಖ ವಿಶಾಲವಾದ ಎದೆ, ಗಟ್ಟಿಮುಟ್ಟಾದ ದೇಹ, ಎಲ್ಲರನ್ನೂ ಆಕರ್ಷಿಸುವ ಮಾತುಗಾರಿಕೆ, ವಿಷಯಗಳ ಬಗ್ಗೆ ಜ್ಞಾನ, ಮೊದಲಾದ ಗುಣಗಳು ಶೆಟ್ಟಿಯವರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದವು. ಇವರಿಗೆ ತಕ್ಕ ಸತಿಯಾಗಿ ಚಂದ್ರಭಾಗಾದೇವಿಯವರೂ ತಮ್ಮ ಪೂರ್ಣ ಸಹಕಾರ ನೀಡಿದರು. ಇಬ್ಬರ ಜೋಡಿ, ರತಿ-ಮನ್ಮಥರ ಜೋಡಿಯಂತೆ ಅದ್ಭುತವಾಗಿತ್ತು. []

ಉಭಯಕರ್ ಶಿವರಾಮ್ ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿ
ಚಿತ್ರ:6rao1.gif
ಯು.ಎಸ್. ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿ
ಜನನ
ಕೃಷ್ಣರಾವ್ ಪರಿವಾರ : ತಂದೆ ಶಿವರಾಮ. ತಾಯಿ ಗಿರಿಜಾಬಾಯಿ ೫ ಮಕ್ಕಳಲ್ಲಿ ಇವರು ಕೊನೆಯವರು. ಚಂದ್ರಭಾಗಾದೇವಿಯವರ ಪರಿವಾರ : ತಂದೆ ಪಡುಕೋಣೆ ರಮಾನಂದರಾಯರು , ತಾಯಿ ಪಡುಕೋಣೆ ಸೀತಾದೇವಿ, ಕೊಂಕಣಿ ಬ್ರಾಹ್ಮಣರು,

ಕೃಷ್ಣರಾವ್ : (ಉ.ಕ) ಮಲ್ಲಾಪುರದಲ್ಲಿ ೧೯೧೨ ರ ಡಿಸೆಂಬರ್, ೩೧ ರಂದು ಜನಿಸಿದರು. ಚಂದ್ರಭಾಗಾದೇವಿ : ಪರಿವಾರದ ೫ ಮಕ್ಕಳಲ್ಲಿ ಒಬ್ಬರಾಗಿ, ೧೯೨೧ ರ ಆಗಸ್ಟ್ ೧೧ ರಂದು ಜನಿಸಿದರು.
ಮರಣ
ಬೆಂಗಳೂರು. ಚಂದ್ರಭಾಗಾದೇವಿಯವರು, ೧೯೯೭ ರಲ್ಲೇ ನಿಧನರಾದರು.
ರಾಷ್ಟ್ರೀಯತೆಭಾರತೀಯ, ಇಬ್ಬರು ಮಕ್ಕಳು.
ವಿದ್ಯಾಭ್ಯಾಸಎಂ.ಎಸ್ಸಿ.(ರಸಾಯನ ಶಾಸ್ತ್ರ)
ಶಿಕ್ಷಣ ಸಂಸ್ಥೆಸೆಂಟ್ರಲ್ ಕಾಲೇಜ್, ಬೆಂಗಳೂರು
ವೃತ್ತಿ(ಗಳು)ಭರತನಾಟ್ಯಾಚಾರ್ಯ, ೧೯೪೧ ರಲ್ಲಿ ಚಂದ್ರಭಾಗಾದೇವಿಯವರನ್ನು ಮದುವೆಯಾದರು. ೧೯೪೨ ರಲ್ಲಿ ಬೆಂಗಳೂರಿನಲ್ಲಿ 'ಮಹಾ ಮಾಯ' ಎಂಬ ಶಾಲೆಯನ್ನು ಸ್ಥಾಪಿಸಿದರು.
ಗಮನಾರ್ಹ ಕೆಲಸಗಳುಮಹತ್ವದ ಭರತನಾಟ್ಯ ಕಲಾವಿದ, ನೃತ್ಯ ಸಂಯೋಜಕ, ಅತ್ಯುತ್ತಮ ಶಿಕ್ಷಕ, ಗಾಯಕ, ಹಲವು ವಾದ್ಯಗಳ ವಾದಕ, ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಹಲವು ಪುಸ್ತಕಗಳ ಕರ್ತೃ. ಅವರೊಬ್ಬ ಬಾಕ್ಸರ್, ರೆಸ್ಲರ್, ಮತ್ತು ವೈಟ್ ಲಿಫ್ಟರ್ ಆಗಿದ್ದರು. ಕೃತಿಗಳು : * ೧೯೮೦ ರಲ್ಲಿ ಪ್ರಕಟವಾದ, 'ಆಧುನಿಕ ಭಾರತದಲ್ಲಿ ನೃತ್ಯಕಲೆ' *೧೯೯೩ ರಲ್ಲಿ ಪ್ರಕಟವಾದ, 'ಎ ಪನೋರಮಾ ಆಫ್ ಇಂಡಿಯನ್ ಡಾನ್ಸೆಸ್ '* ೧೯೯೪ ರಲ್ಲಿ ತಯಾರಾಗಿ ಪ್ರಕಟಗೊಂಡ, ’ಭರತ ನಾಟ್ಯಂ ನಿಘಂಟು'

ಜನನ ಮತ್ತು ಶಿಕ್ಷಣ

ಬದಲಾಯಿಸಿ

ಯು.ಎಸ್.ಕೃಷ್ಣರಾವ್ ಉತ್ತರ ಕನ್ನಡದ ಮಲ್ಲಾಪುರದಲ್ಲಿ ೧೯೧೨ ರ ಡಿಸೆಂಬರ್, ೩೧ ರಂದು ಜನಿಸಿದರು. ತಂದೆ ಶಿವರಾಮ. ತಾಯಿ ಗಿರಿಜಾಬಾಯಿ. ಈ ದಂಪತಿಗಳ ೫ ಮಕ್ಕಳಲ್ಲಿ ಕೃಷ್ಣರಾಯರೇ ಕೊನೆಯವರು. ಮುತ್ತಾತ ಒಬ್ಬರು ಕುಮುಟಾದಲ್ಲಿ ನೃತ್ಯದ ಮೇಸ್ಟ್ರು ಆಗಿದ್ದ ರಂತೆ. ಬಾಲಕ ಕೃಷ್ಣರಾವ್ ೧೦ ವರ್ಷದವರಾಗಿದ್ದಾಗ ತಂದೆಯವರು ನಿಧನರಾದರು. ಆವರ ಹಿರಿಯಣ್ಣನವರ ಆಶ್ರಯದಲ್ಲಿ ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಶುರುಮಾಡಿದರು. ಆ ಸಮಯದಲ್ಲಿ ಒಬ್ಬ ಬಾಲ್ಯದ ಗೆಳೆಯ, 'ರಾಮಗೋಪಾಲ' ಅವರನ್ನು ತಾನು ನಡೆಸುತ್ತಿದ್ದ ನೃತ್ಯ ಶಾಲೆಗೆ ಸೇರಲು ಆಹ್ವಾನಿಸಿದ. ಇದು ಅಣ್ಣ ಹಾಗೂ ಮನೆಯವರಿಗೆ ಸರಿ ಬೀಳಲಿಲ್ಲ. ಕೊನೆಗೆ ಅವರು ಮನೆಯಿಂದ ಹೊರಗೆ ಹಾಕಲ್ಪಟ್ಟರು. ಮುಂದೆ ಕೃಷ್ಣರಾವ್ ಹೆಚ್ಚಾಗಿ ಬೆಳೆದದ್ದು ಬೆಂಗಳೂರಿನಲ್ಲಿಯೇ. ಅವರ ಅಣ್ಣಂದಿರಿಗೆ ಇಂಗ್ಲೀಷ್ ಶಿಕ್ಷಣದಲ್ಲಿ ಆಸಕ್ತಿಯಿರಲಿಲ್ಲ. ಮನೆಯಲ್ಲಿ ಕಾಲೇಜ್ ಮೆಟ್ಟಿಲು ಹತ್ತಿದ ಕೀರ್ತಿ ಅವರಿಗೆ ಸೇರಿತು. ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಗಳಿಸಿದರು. ಮೈಸೂರು ವಿಶ್ವವಿದ್ಯಾಲಯದ 'ಬೆಂಗಳೂರಿನ ಸೆಂಟ್ರೆಲ್ ಕಾಲೇಜ್' ನಲ್ಲಿ ಅಧ್ಯಾಪಕ, ಬೆಂಗಳೂರ್, ಯುನೈಟೆಡ್ ಕ್ರಿಕೆಟ್ ಕ್ಲಬ್ ನ ಸೆಕ್ರೆಟರಿ, ಮತ್ತು ಕಪ್ತಾನ್ ಆಗಿದ್ದರು. ಭರತನಾಟ್ಯ ಅವರ ಪ್ರವೃತ್ತಿಯಾಗಿತ್ತು. ಎರಡು ಪಿರಿಯೆಡ್ ಗಳ ಮಧ್ಯೆ ಸ್ವಲ್ಪ ಸಮಯ ಸಿಕ್ಕರೂ ಮನೆಗೆ ಬಂದು ಭರತನಾಟ್ಯದ ಬಗ್ಗೆ ಅಭ್ಯಾಸ ಮಾಡುತ್ತಿದ್ದರು. ಅವರ ಮೈ ಮನಗಳಲ್ಲಿ ಭರತನಾಟ್ಯದ ರಕ್ತ ಪ್ರವಹಿಸುತ್ತಿತ್ತು. ಪತ್ನಿ ಚಂದ್ರಭಾಗಾದೇವಿಯವರೂ ಪದವೀಧರೆ, ನೋಡಲು ಅತ್ಯಾಕರ್ಷಕವಾದ ವ್ಯಕ್ತಿತ್ವ ಹೊಂದಿದ್ದರು. ಈ ದಂಪತಿಗಳು ಮೈಸೂರ್ ಭರತನಾಟ್ಯಂ ಶೈಲಿಯಲ್ಲಿ ಮಹಾಸಾಧಕರು.[] ಯು.ಎಸ್.ಕೃಷ್ಣರಾಯರ ಭರತನಾಟ್ಯದ ಗುರುಗಳು :

  • (೧೯೩೯-೪೦) ರವರೆಗೆ ಗುರು, ಕೋಲಾರದ ಪುಟ್ಟಪ್ಪನವರ ಬಳಿ, ಭರತ ನಾಟ್ಯ ಕಲಿತರು.
  • (೧೯೪೧-೪೨) ರವರೆಗೆ ಗುರು, ಕುಂಜು ಕುರೂಪ್ ಹತ್ತಿರ, ಕಥಕ್ಕಳಿ ನೃತ್ಯವನ್ನು ಅಭ್ಯಾಸಮಾಡಿದರು.

ಬೆಂಗಳೂರಿನ ಕನ್ನಡ ಪರಿಷತ್ತಿನ ಸಭಾಂಗಣದಲ್ಲಿ

ಬದಲಾಯಿಸಿ

೪೦ ರ ದಶಕದ ಮೈಸೂರಿನ ಹೆಸರಾಂತ ಚಿತ್ರ ಕಲಾವಿದ ಅ.ನ. ಸುಬ್ಬರಾಯರು, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ನೃತ್ಯ ಕಾರ್ಯಕ್ರಮ ಪತ್ರಿಕೆಯಲ್ಲಿ ನಾಟ್ಯ ನಿಷ್ಣಾತ, ಯು.ಎಸ್. ಕೃಷ್ಣರಾಯರ ಹೆಸರಿನ ಜೊತೆಗೆ ಕುಮಾರಿ ಚಂದ್ರಭಾಗದೇವಿಯವರ ಹೆಸರ ನ್ನೂ ಮುದ್ರಿಸಲಾಗಿತ್ತು. ಕೃಷ್ಣರಾಯರಿಗೆ ನೃತ್ಯ ಮಾಡುವ ಸದುದ್ದೇಶವಿತ್ತು. ಆದರೆ ಯಾರ ಜೊತೆಗೆ ಎನ್ನುವ ವಿಷಯ ಅವರಿಗೆ ತಿಳಿಯದು. ಅಂತೆಯೇ ಕುಮಾರಿ ಚಂದ್ರಭಾಗಾದೆವಿಯರಿಗೂ ಸಹಿತ. ನೃತ್ಯದ ನಂತರ ಕಲಾವಿದರಿಬ್ಬರಿಗೂ ವಿಸ್ಮಯ ಹಾಗು ಅವರ್ಣನೀಯ ಆನಂದ. ಅಂದಿನ ನೃತ್ಯ ಕಾರ್ಯಕ್ರಮದಲ್ಲಿ ಚಂದ್ರಭಾಗಾದೇವಿಯವರ “ಉಷಾ ನೃತ್ಯ’ದ ಅಭಿನಯ ಹಾಗೂ ಅದ್ಭುತ ಪದಗತಿ'ಯನ್ನು ಸ್ವತಃ ಕೃಷ್ಣರಾಯರು ಕಂಡು ಮನಸಾರೆ ಮೆಚ್ಚಿ ಅಭಿನಂದಿಸಿದ್ದರು. ಹೀಗೆ ಆರಂಭವಾದ ಪರಿಚಯ, ಒಂದು ವರ್ಷದಲ್ಲೇ ಮದುವೆಗೆ ನಾಂದಿಯಾಯಿತು. ೧೯೪೧ ರಲ್ಲಿ ಚಂದ್ರಭಾಗಾದೇವಿ ಕೃಷ್ಣರಾವ್‌ ಮದುವೆಯ ಪವಿತ್ರ ಬಂಧನದಲ್ಲಿ ಸಿಲುಕಿದರು. []

ಚಂದ್ರಭಾಗಾ ದೇವಿಯವರ ಪರಿಚಯ

ಬದಲಾಯಿಸಿ

ಚಂದ್ರಭಾಗಾದೇವಿಯವರ ನೃತ್ಯವನ್ನು ವೀಕ್ಷಿಸಿದ ಕೃಷ್ಣರಾಯರು, ಆಕೆಯನ್ನು ವಿವಾಹವಾಗಲು ಇಚ್ಛಿಸಿದರು. ಪರಿಚಯ ಬೆಳೆದು, ೧೯೪೧ ರ ಫೆಬ್ರವರಿ, ೧೯ ರಂದು ಅವರಿಬ್ಬರೂ ಮದುವೆಯಾದರು. ಚಂದ್ರಭಾಗಾದೇವಿಯರು ಕೊಂಕಣಿ ಬ್ರಾಹ್ಮಣರು. ಅವರ ತಂದೆ, ಪಡುಕೋಣೆ ರಮಾನಂದರಾಯರು , ತಾಯಿ ಪಡುಕೋಣೆ ಸೀತಾದೇವಿ. ಅವರಿಬ್ಬರೂ ಒಳ್ಳೆಯ ಲೇಖಕರು. ಈ ದಂಪತಿಗಳ ಪ್ರೀತಿಯ ಪುತ್ರಿಯಾಗಿ ಚಂದ್ರಭಾಗಾದೇವಿಯವರು, ೧೯೨೧ ರ ಆಗಸ್ಟ್ ೧೧ ರಂದು ಜನಿಸಿದರು. ಚಂದ್ರಭಾಗಾ ದೇವಿಯವರ ಸೋದರ ಸೋದರಿಯರು :

  • ಪ್ರಭಾಶಂಕರ (ಇಂಜಿನಿಯರ್)
  • ಶಾಂತಿ (ಚಿತ್ರಕಲೆಯಲ್ಲಿ ಹೆಸರು ಗಳಿಸಿದರು)
  • ಜಯವಂತಿ ದೇವಿ ಹಿರೇಬೆಟ್ (ಜಯವಂತಿ,ಹಿಂದುಸ್ತಾನಿ ಸಂಗೀತದಲ್ಲಿ ಪ್ರಸಿದ್ಧರು)
  • ಯಶೋಧರ (ಸಂಗೀತ, ನೃತ್ಯ,)

ಚಂದ್ರಭಾಗಾ ದೇವಿಯವರಿಗೆ ನಾಟ್ಯದಲ್ಲಿ ತೀವ್ರವಾದ ಆಸಕ್ತಿ ಬರಲು ಕಾರಣರಾದವರು, ಶಿವರಾಮ ಕಾರಂತರು. ಕಾರಂತರ, 'ಶುಭದತ್ತಾ' ಎಂಬ ನಾಟಕದಲ್ಲಿ ಪಾತ್ರದೊರೆತಾಗ ಚಂದ್ರಭಾಗಾದೇವಿಯವರು ಒಪ್ಪಿಕೊಂಡರು. ಅದರಲ್ಲಿ ನಾಟ್ಯಮಾಡುವ ಪ್ರಸಂಗ ಬಂದಿದ್ದನ್ನು ಅವರು ಸ್ವೀಕರಿಸಿದರು. ನಂತರ ಅವರಿಗೆ ಗೊತ್ತಿಲ್ಲದಂತೆ ನಾಟ್ಯಕಲೆಯಲ್ಲಿ ಅಪಾರ ಆಸಕ್ತಿ ಬರತೊಡಗಿತು.

ಚಂದ್ರಭಾಗಾ ದೇವಿಯವರ ನಾಟ್ಯ ಗುರುಗಳು

ಬದಲಾಯಿಸಿ
  • ೩೦.೧.೩೯ ರಿಂದ ಮೈಸೂರು ಶೈಲಿಯ ಭರತನಾಟ್ಯಾಭ್ಯಾಸವನ್ನೂ, ಪತಿ ಕೃಷ್ಣರಾಯರು ಹಾಗೂ ಕೋಲಾರ ಪುಟ್ಟಪ್ಪನವರಲ್ಲಿ ಕಲಿತರು.
  • ಕೇರಳದಿಂದ ಬಂದಿದ್ದ ಗುರು, ಕುಂಜು ಕುರೂಪ್‌ ರ ಕೈಕೆಳಗೆ ಕಥಕ್ಕಳಿ ನ್ಯತ್ಯವನ್ನು ಅಭ್ಯಾಸ ಮಾಡಿದರು.
  • ಪಂದನಲ್ಲೂರು ಶೈಲಿಯ ಭರತನಾಟ್ಯ ಅಭ್ಯಾಸವನ್ನೂ ಗುರು. ಕುಮಾರನ್ ರವರ ಬಳಿಯೂ ಕಲಿತರು '
  • ಅವರಿಗೆ ಕಥಕ್ ಆಚಾರ್ಯ, ಶ್ರೀನಿವಾಸ ಕುಲಕರ್ಣಿ ಎರಡು ಕಥಕ್ಕಳಿ ನೃತ್ಯ ಬಂಧಗಳನ್ನು ಕಲಿಸಿದರು.
  • ಪತಿ ಕೃಷ್ಣರಾಯರು, ಮತ್ತು ಕೋಲಾರ ಪುಟ್ಟಪ್ಪನವರು ಭರತನಾಟ್ಯದ ಚತುರಶ್ರ ಅಲರಿಪು ಭಾಗಗಳನ್ನು ಕಲಿಸಿದರು.
  • ನಂತರ ಮನೆಯಲ್ಲೇ ಪತಿ, ಕೃಷ್ಣರಾಯರಿಂದಲೇ ಭರತನಾಟ್ಯ ಪ್ರಕಾರದ ಹಲವು ನೃತ್ಯಬಂಧಗಳನ್ನು ಕಲಿತರು. ಅದೇ ಅವರಿಗೆ ಮುಂದೆಯೂ ಆ ಕ್ಷೇತ್ರದಲ್ಲಿ ಮುಂದುವರೆಯಲು ಕಾರಣವಾಯಿತು.

ತಂಜಾವೂರಿಗೆ

ಬದಲಾಯಿಸಿ

ಕೃಷ್ಣರಾವ್‌ ದಂಪತಿಗಳು, ತಂಜಾವೂರಿನ ನಾಟ್ಯ ಕಲಾನಿಧಿ, ಮೀನಾಕ್ಷಿ ಸುಂದರಂ ಪಿಳ್ಳೆಯವರ ಹತ್ತಿರ ಪಂದನಲ್ಲೂರು ಶೈಲಿಯ ಭರತನಾಟ್ಯವನ್ನು ಶಾಸ್ತ್ರೀಯ ಪದ್ಧತಿಯಲ್ಲಿ ಕಲಿತರು. ನಂತರ ರಂಗಪ್ರವೇಶ ಕಾರ್ಯಕ್ರಮ. ತಂಜಾವೂರು ಅರಸರ ಅರಮನೆಯಲ್ಲಿಯೇ ೧೯೪೩ ಡಿಸೆಂಬರ್ ೩೧ ರಂದು ಜರುಗಿತು. ಅಂದು ಈ ದಂಪತಿಗಳು ನರ್ತಿಸಿದ ರೀತಿ ಅವರ್ಣನೀಯವಾಗಿತ್ತು. ನೆರೆದಿದ್ದ ನೃತ್ಯಾಸಕ್ತರು ಮುಕ್ತ ಕಂಠದಿಂದ ಸತಿ-ಪತಿಯರನ್ನು ಅಭಿನಂದಿಸಿದರು. ಆ ಸಮಯದ ಖ್ಯಾತ ನೃತ್ಯ ವಿಮರ್ಶಕರಾದ ಇ.ಕೃಷ್ಣಯ್ಯರ್, ದಿನ ಪತ್ರಿಕೆಯೊಂದರಲ್ಲಿ ಸುಂದರವಾದ ಪರಿಪೂರ್ಣ ನೃತ್ಯವನ್ನು ನೋಡಿದ್ದಾಗಿ ವರ್ಣಿಸಿ ಬರೆದರು. ನೃತ್ಯದಲ್ಲಿ ಪಾಲ್ಗೊಂಡ ಕಲಾವಿದರಿಬ್ಬರೂ ಪರಿಪೂರ್ಣತೆಯ ಪ್ರತೀಕವಾಗಿದ್ದರು ಶಿವ-ಪಾರ್ವತಿಯರ ನೃತ್ಯಗಳ ಆಧ್ಯಾತ್ಮಕತೆಯನ್ನು ಸೂಚಿಸು ಮಾದರಿಯಲ್ಲಿತ್ತೆಂದು ದಾಖಲಿಸಿದ್ದಾರೆ. ಚಂದ್ರಭಾಗಾದೇವಿಯವರು, ಮಗುವಿಗೆ ಮಧ್ಯಾಂತರದಲ್ಲಿ ಹಾಲು ಕುಡಿಸಿ ಮತ್ತೆ ರಂಗಮಂಚಕ್ಕೆ ಹಾಜರಾಗುತ್ತಿದ್ದರು. ವೈವಾಹಿಕ ಮತ್ತು ಕಲಾಜೀವನಕ್ಕೆ ಅನ್ಯಾಯವಾಗದಂತೆ ನಿಗವಹಿಸಿದರು. ಪುಟ್ಟ ಮಕ್ಕಳನ್ನು ಎತ್ತಿಕೊಂಡು ಅಲೆಮಾರಿಗಳಂತೆ, ಉರೂರುಗಳಲ್ಲಿ ಹಳ್ಳಿಗಳಲ್ಲಿ ನರ್ತನಗಳನ್ನೂ ನಿಭಾಯಿಸಿ, ಹಸಿವು, ದಣಿವು ಮತ್ತು ಉದ್ವೇಗದ ಜೀವನವನ್ನು ಮುಂದುವರೆಸಿಕೊಂಡು ಸಾಗುವುದು ಸುಲಭದ ಮಾತಾಗಿರಲಿಲ್ಲ. ಸಮಾಜದಲ್ಲಿ ನಿಂದೆ ಅಪಮಾನ, ಚುಚ್ಚುಮಾತುಗಳನ್ನು ಸಾಕಷ್ಟು ಕೇಳಬೇಕಾಯಿತು. ಇಂದ್ರಿಯ ನಿಗ್ರಹಣದ ಜೊತೆಗೆ, ಅಪಾರ ಪರಿಶ್ರಮ ಅವರಿಬ್ಬರಿಗೂ ನೆರವಾಯಿತು. ಕಲಾಸೇವೆ ಹೀಗೆಯೇ ಮುಂದುವರೆಯಿತು. ಮದುವೆಯ ನಂತರ ೪೫ ವರ್ಷಗಳ ಕಾಲ ತಪಸ್ಸಿನಂತೆ ನಡೆಸಿದ ಸಾಹಸಮಯ ಕಲಾಜೀವನ, ಒಂದು ಬಹುದೊಡ್ಡ ಸಾಧನೆ ಎನಿಸಿತ್ತು.

ಮಹಾಮಾಯ ಪ್ರತಿಷ್ಠಿತ ನೃತ್ಯ ಶಾಲೆ

ಬದಲಾಯಿಸಿ

೧೯೪೨ ರಲ್ಲಿ ಬೆಂಗಳೂರಿನಲ್ಲಿ 'ಮಹಾಮಾಯ' ಎಂಬ ಶಾಲೆ ಸ್ಥಾಪಿಸಿದರು. ಆಗಿನ ಸಮಯದಲ್ಲಿ ೧೯೪೦ ರಲ್ಲೇ ಮೈಸೂರಿನಲ್ಲಿ ಭಾಷಣದ ಜೊತೆಗೆ ನೃತ್ಯದ ಪ್ರದರ್ಶನ ಪ್ರಾತ್ಯಕ್ಷಿಕೆಗಳ ಬಳಕೆಯಿಂದ ಯುವಪ್ರತಿಭಾವಂತರು ಪ್ರಭಾವಿತರಾದರು. ಕೃಷ್ಣರಾಯರು, ೧೮೭೩-೭೭ ರವರೆಗೆ ಡಾನ್ಸ್ ಪ್ರೊಫೆಸರ್ ಆಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನೇಮಿಸಲ್ಪಟ್ಟರು. ಅವರ ಪತ್ನಿ ಚಂದ್ರಭಾಗಾದೇವಿಯವರು, ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ೧೯೭೧-೮೫ ರವರೆಗೆ 'ಪ್ರೊಫೆಸರ್ ಆಫ್ ಡಾನ್ಸ್,' ಆಗಿ ನೇಮಿಸಲ್ಪಟ್ಟರು. ಕೃಷ್ಣರಾಯರು ರಚಿಸಿ ದಿಗ್ದರ್ಶಿಸಿದ ನೃತ್ಯ ರೂಪಕಗಳು :

  • ೧೯೪೦ ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ ಪ್ರಥಮ ಉಪನ್ಯಾಸ. ಭಾರತದಾದ್ಯಂತ ಮತ್ತು ವಿದೇಶಗಳಲ್ಲೂ ೮೦೦ ಕ್ಕೂ ಮಿಕ್ಕ ಪ್ರದರ್ಶನ ಭಾಷಣಗಳು ಒಂದು ವಿಕ್ರಮವನ್ನೇ ಸ್ಥಾಪಿಸಿದವು.
  • ಟೆಂಟೇಶನ್ ಆಫ್ ಬುದ್ಧ, ನೃತ್ಯ ರೂಪಕ,
  • ರಾಣಿ ಶಾಂತಲ
  • ಗೀತ ಗೋವಿಂದ,
  • ಕಾಮ ದಹನ,

ಮೇಲೆ ದಾಖಲಿಸಿದ ನೃತ್ಯಗಳನ್ನು ದೇಶ ವಿದೇಶಗಳಲ್ಲಿ ಆಯೋಜಿಸಿ, ಪ್ರದರ್ಶಿಸಿ, ಹಲವಾರು ಸಂಘ ಸಂಸ್ಥೆಗಳಿಗೆ ಸಹಾಯಧನ ಸಂಗ್ರಹ ಮಾಡಿದರು. ನಾಟ್ಯವಲ್ಲದೆ ಅತ್ಯುತ್ತಮ ಪಕ್ಕವಾದ್ಯದ-ಸಂಗೀತಗಾರರನ್ನು, ಹಾರ್ಮೋನಿಯಮ್, ಕೊಳಲು, ತಬಲವಾದಕರನ್ನು ನೃತ್ಯಕ್ಕಾಗಿಯೇ ಸಿದ್ಧ ಮಾಡಿದರು.

ರಚಿಸಿದ ಪುಸ್ತಕಗಳು

ಬದಲಾಯಿಸಿ
  • ೧೯೮೦ ಯಲ್ಲಿ ಪ್ರಕಟವಾದ, 'ಆಧುನಿಕ ಭಾರತದಲ್ಲಿ ನೃತ್ಯಕಲೆ'
  • ೧೯೯೩ ರಲ್ಲಿ ಪ್ರಕಟವಾದ, 'ಎ ಪನೋರಮಾ ಆಫ್ ಇಂಡಿಯನ್ ಡಾನ್ಸೆಸ್ '
  • ೧೯೯೪ ರಲ್ಲಿ ತಯಾರಾಗಿ ಪ್ರಕಟಗೊಂಡ, ’ಭರತ ನಾಟ್ಯಮ್ ನಿಘಂಟು'

ಹೀಗೆ ಮುಂದುವರೆದ ನೃತ್ಯ ಜೀವನದಲ್ಲಿ ಕೃಷ್ಣರಾವ್-ಚಂದ್ರಭಾಗಾ ದೇವಿ ದಂಪತಿಗಳು ಸಾದರ ಪಡಿಸಿದ, ಸಾವಿರಾರು ನೃತ್ಯ ಪ್ರದರ್ಶನಗಳು, ನೃತ್ಯ ಕಮ್ಮಟಗಳು, ಉಪನ್ಯಾಸಗಳು, ದೇಶ ವಿದೇಶಗಳಲ್ಲಿ ಜನಪ್ರಿಯವಾಗತೊಡಗಿದವು. ಪ್ರದರ್ಶನ-ಭಾಷಣಗಳು, ಯುವ ಜನರ ಮನಸ್ಸಿಗೆ ಬಹಳ ಮುದ ಕೊಟ್ಟವು. ರೇಡಿಯೋ ಮೂಲಕ, ಪತ್ರಿಕೆಗಳಲ್ಲಿ ಬರೆದ ಲೇಖನಗಳು, ನಾಡಿನ ಮೂಲೆ ಮೂಲೆಗಳನ್ನು ತಲುಪಿ, ನೃತ್ಯ ಕಲೆಯ ಬಗ್ಗೆ ಮೆಚ್ಚುಗೆ ಬರಲು ಆರಂಭವಾಯಿತು. ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಮಾಲಿಕೆಗಳನ್ನು ಕ್ರಮವಾಗಿ ಕೊಟ್ಟು ಜನಮೆಚ್ಚುಗೆಯನ್ನು ಗಳಿಸಿದರು.

ಸಹಾಯಾರ್ಥ ಪ್ರದರ್ಶನಗಳು

ಬದಲಾಯಿಸಿ
  • ಅನೇಕಾನೇಕ ಸಹಾಯಾರ್ಥ ಪ್ರದರ್ಶನಗಳನ್ನು ನೀಡಿ, ಲಕ್ಷಗಟ್ಟಲೆ ಹಣವನ್ನು ಗಳಿಸಿ ಕಲಾ ಸಂಸ್ಥೆಗಳಿಗೆ, ಬಡವರಿಗೆ, ಪುಸ್ತಕ ಭಂಡಾರಗಳಿಗೆ, ದೇವಸ್ಥಾನಗಳಿಗೆ, ಯುದ್ಧನಿಧಿಗೆ, ಅಂಗವಿಕಲರಿಗೆ, ರೆಡ್‌ಕ್ರಾಸ್‌ಗೆ, ಫ್ಯಾಮಿಲಿ ರಿಲೀಫ್‌ಫಂಡ್‌ಗೆ ಬಡವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ, ಇತ್ಯಾದಿ ಗಳಿಗೆ ಧನಸಹಾಯ ಮಾಡಿದ್ದಾರೆ.
  • ೧೯೫೨ ರಲ್ಲಿ 'ಇಂಡೋ ಪಾಕಿಸ್ತಾನ್ ಮ್ಯೂಸಿಕ್ ಕಾನ್ಫರೆನ್ಸ್ ಸಮಿತಿ' ದಂಪತಿಗಳ ಪ್ರದರ್ಶನ ಆಯೊಜಿಸಿದರು. (ಕರಾಚಿಯಲ್ಲಿ ಸರ್ಕಾರದ ನೆರವಿನಿಂದ).
  • ೧೯೫೮ ರಲ್ಲಿ 'ಕೇಂದ್ರ ಸಂಗೀತ ನಾಟಕ ಅಕಾಡೆಮಿ'ಯಿಂದ ಆಹ್ವಾನಿತರಾಗಿ 'ಮಾಡರ್ನ್‌ಟ್ರೆಂಡ್ಸ್ ಇನ್‌ ಭರತನಾಟ್ಯ' ಎಂಬ ವಿಷಯದ ಮೇಲೆ ಪ್ರದರ್ಶನ ಭಾಷಣ ನೀಡಿದರು.

ಹೀಗೆ ನೃತ್ಯ ಕ್ಷೇತ್ರದಲ್ಲಿ ನಿರಂತರ ಅಭ್ಯಾಸ ಆರಾಧನೆ ಸಾಧನೆ, ನೃತ್ಯಾಭ್ಯಾಸ, ನೃತ್ಯ ಶಿಕ್ಷಣ, ಹಾಗೂ ಕಲೆಯ ಅಭಿವೃದ್ಧಿ ,ಇವರ ಜೀವನದ ಧ್ಯೇಯವೇ ಆಯಿತು. ತಮ್ಮ ಇಡೀ ಬದುಕನ್ನೇ ನೃತ್ಯಕಲೆಗಾಗಿ ಸವೆಸಿದ ಈ ನೃತ್ಯ ಕಲಾ ದಂಪತಿಗಳು, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತ ರಾಗಿದ್ದಾರೆ. ಇವರ ಕಲೋಪಾಸನೆ ಸಾಧನೆಗಳು ಹಾಗೂ ಜೀವನ ವಿಚಾರಗಳು ಸ್ವಾರಸ್ಯಪೂರ್ಣ.

ವಿದೇಶಗಳಲ್ಲಿ

ಬದಲಾಯಿಸಿ

ಲಂಡನ್ನಿನಲ್ಲಿ ಎರಡು ವರ್ಷಗಳ ಕಾಲ ಅವಿಶ್ರಾಂತ ಕೆಲಸ ಮಾಡಿ, ತಮ್ಮ ಪಾಶ್ಚಾತ್ಯ ಶಿಷ್ಯವೃಂದದ ನೆರವಿನಿಂದ ನಾಲ್ಕು ನೃತ್ಯ ನಾಟಕಗಳನ್ನು ರಚಿಸಿ, ಪಾಶ್ಚಾತ್ಯ ರಸಿಕರ ಮನಸ್ಸನ್ನು ಸೂರೆಗೊಂಡರು. ರಾಣಿ ಶಾಂತಲಾ ನೃತ್ಯ ನಾಟಕದ ಮೂಲಕ, ಭಾರತೀಯ ಕಲಾ ಸಂಸ್ಕೃತಿಯನ್ನೂ, ಕರ್ನಾಟಕದ ಹಳೇಬೀಡು, ಬೇಲೂರಿನ ವೈಭವವನ್ನು ತಿಳಿಸಿದರು. 'ಲಂಡನ್ನಿನ ಭಾರತೀಯ ವಿದ್ಯಾಭವನ'ದಲ್ಲಿ ಭಾಷಣ ಹಾಗೂ ಪ್ರದರ್ಶನ ಕಾರ್ಯಕ್ರಮಗಳನ್ನು ಕೊಟ್ಟರು.

ನ್ಯೂಯಾರ್ಕ್ ನಲ್ಲಿ

ಬದಲಾಯಿಸಿ

ಆ ನಂತರ ನ್ಯೂಯಾರ್ಕಿನ 'ಇಂಡೋ ಅಮೆರಿಕನ್‌ಡಾನ್ಸ್ ಕಂಪೆನಿ'ಯ ಆಹ್ವಾನದ ಮೇಲೆ ಎರಡು ತಿಂಗಳ ಕಾಲ ಅವಿರತಶ್ರಮ ಮತ್ತೆ ಎರಡು ತಿಂಗಳಲ್ಲಿ ಅಮೆರಿಕ ಪ್ರಯಾಣ ಟಿ.ವಿ. ರೇಡಿಯೋ ಮೂಲಕ ಕಲಾ ಪ್ರಸಾರ.

ಸಿಂಗಾಪುರ್, ಹಾಂಕಾಂಗ್ ನಲ್ಲಿ

ಬದಲಾಯಿಸಿ

ಹವಾಯಿಯಿಂದ ಹಾಂಗ್‌ಕಾಂಗ್‌, ಸಿಂಗಾಪುರ ನಗರಗಳಲ್ಲಿ ಯಶಸ್ವಿ ಕಾರ್ಯಕ್ರಮಗಳು ಜರುಗಿದವು.

ಕೆನಡಾದ ಮಾಂಟ್ರಿಯಲ್ ನಲ್ಲಿ

ಬದಲಾಯಿಸಿ

೧೯೭೯ರಲ್ಲಿ ಮತ್ತು ೧೯೮೨ರಲ್ಲಿ ಮತ್ತೆ ವಿದೇಶ ಪ್ರಯಾಣ. ಕೆನಡಾದ ಮಾಂಟ್ರಿಯಲ್‌ನ ‘ಕಲಾ ಭಾರತಿ’ ಸಂಸ್ಥೆಯ ಆಹ್ವಾನದ ಮೇಲೆ ಕಲಾಸೇವೆ ಮಾಡುವ ಸುಯೋಗ, ಅವರಿಂದ ತಾಮ್ರಪತ್ರ ಗೌರವ ಪಡೆದ ಅವಕಾಶ ಹಾಗೂ ಅಮೆರಿಕ ದೇಶವನ್ನೆಲ್ಲ ಸುತ್ತಿ ವಿವಿಧ ಕಲಾಸಂಸ್ಥೆಗಳಲ್ಲೂ, ವಿಶ್ವವಿದ್ಯಾನಿಲಯದ ಆಶ್ರಯಗಳಲ್ಲೂ ಭಾಷಣ, ನೃತ್ಯ ಪ್ರದರ್ಶನಗಳು ವ್ಯವಸ್ಥಿತವಾಗಿ ಜರುಗಿದವು.

ಚಂದ್ರಭಾಗಾದೇವಿ ಅವರ ಕೃತಿಗಳು

ಬದಲಾಯಿಸಿ
  • ಇಂಗ್ಲಿಷ್‌, ಹಾಗೂ ಕನ್ನಡದಲ್ಲಿ ಚಂದ್ರಭಾಗಾದೇವಿ ಬರೆದ ‘ಗೆಜ್ಜೆಯ ಹೆಜ್ಜೆಯ ನುಡಿ’ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿದೆ. ಆ ಪುಸ್ತಕವು ಕನ್ನಡದ ಪ್ರವಾಸ ಸಾಹಿತ್ಯದಲ್ಲೇ ವಿಶಿಷ್ಟ ಸ್ಥಾನ ಪಡೆದ ಪುಸ್ತಕ.
  • ಕನ್ನಡ ವಿಶ್ವಕೋಶ ಪ್ರಕಟಣೆಯಲ್ಲಿ ಈ ದಂಪತಿಗಳು ಹಲವಾರು ವಿಷಯಗಳ ಮೇಲೆ ಲೇಖನಗಳನ್ನು ಬರೆದಿದ್ದಾರೆ. ಮೈಸೂರು, ಬೆಂಗಳೂರು, ಆಕಾಶವಾಣಿಯ ಮೂಲಕ ಇವರ ವಿಚಾರ ವಿಮರ್ಶೆಗಳು ಹಲವಾರು ಬಾರಿ ಪ್ರಸಾರವಾಗಿದೆ. ಅನೇಕ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

ಲಾಸ್ಯ ರಂಜನ

ಬದಲಾಯಿಸಿ
  • ಇಂದು ನರ್ತನ ಕ್ಷೇತ್ರದಲ್ಲಿ ‘ಲಾಸ್ಯರಂಜನ’ ವೆಂಬ ಮಹತ್ವದ ಗ್ರಂಥಕ್ಕೆ ಈ ದಂಪತಿಗಳು ಸೂಕ್ತವಾದ ಭಾವ ಚಿತ್ರಗಳನ್ನು ಒದಗಿಸಿ, ನೃತ್ಯದಲ್ಲಿ ಸೂಚಿಸಿರುವ ಚಾರಿ, ಸ್ಥಾನಕ, ಹಸ್ತರಸಗಳ ನಿರೂಪಣೆಗಳಿಂದ ಗ್ರಂಥಕ್ಕೆ ಸೂಕ್ತ ಲಿಂಕ್ ದೊರೆಸಿಕೊಟ್ಟಿದ್ದಾರೆ. ೧೪ ನೆಯ ಶತಮಾನದಲ್ಲಿ ಸಿಂಹಭೂಪಾಲ ನಿಂದ ರಚಿತವಾಗಿದ್ದ ರಚನೆಯನ್ನು ಎಚ್. ಆರ್. ರಂಗಸ್ವಾಮಿ ಅಯ್ಯಂಗಾರ್ ಮತ್ತು ಎಸ್. ಎನ್. ಕೃಷ್ಣಾ ಜೋಯಿಸ್ ಎನ್ನುವ ಪ್ರಮುಖರು ೧೯೬೬ ರಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. ಈ ಕೃತಿಯನ್ನು ಮರುಜೀವಿತಗೊಳಿಸಿದ ಶ್ರೇಯಸ್ಸು ಕೃಷ್ಣರಾವ್ ದಂಪತಿಗಳದು.
  • ಹೈಸ್ಕೂಲ್‌ ಮಟ್ಟದಲ್ಲಿ ನಡೆಯುವ ನಾಟ್ಯ ತರಗತಿಗಳಿಗೆ ಇವರ 'ಆಧುನಿಕ ಭಾರತದಲ್ಲಿ ನೃತ್ಯಕಲೆ' ಪಠ್ಯಪುಸ್ತಕವಾಗಿದೆ.
  • ೧೯೮೦ ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಸಂಗೀತ, ನಾಟಕ, ನೃತ್ಯ ವಿಭಾಗಕ್ಕೆ ಅಗತ್ಯವಿರುವ ಪಠ್ಯಪುಸ್ತಕ ‘ನೃತ್ಯ ಕಲೆ'ಯನ್ನು ಪ್ರಸಾರಾಂಗ ಪ್ರಕಟಿಸಿದೆ.
  • ಹಲವು ದಶಕಗಳ ಹಿಂದೆ ಭರತನಾಟ್ಯ ಹಸ್ತ ಮುದ್ರೆಗಳನ್ನು ಅಭಿನಯಿಸುವ ಸಾಕ್ಷ್ಯಚಿತ್ರಕ್ಕೂ ನೂರು ವರ್ಷಗಳಾಗಿದ್ದು, ಭರತನಾಟ್ಯದ ಹಸ್ತಮುದ್ರೆಗಳನ್ನು ಅಭಿನಯಿಸುವ ಸಾಕ್ಷ್ಯಚಿತ್ರದಲ್ಲಿ ರೂಪದರ್ಶಿಗಳಾಗಿ ತಮ್ಮ ಯೋಗದಾನವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಹೀಗಾಗಿ ಯುವಜನರಿಗೆ ಅಂದಿನ ದಿನಗಳಲ್ಲೇ ಭರತನಾಟ್ಯದ ಕಡೆಗೆ ಒಲವು ಬೆಳೆಯಲು ಕಾರಣಕರ್ತರಾದರು.
  • ಭಾರತ ಭಾರತಿ ಸಂಪದ ಪುಸ್ತಕ ಮಾಲೆಯಲ್ಲಿ ಚಂದ್ರಭಾಗಾದೇವಿಯವರು ‘ವಿಷ್ಣು ನಾರಾಯಣ ಭಾತಖಾಂಡೆ’ ಕಿರುಪುಸ್ತಕವನ್ನು ಬರೆದಿದ್ದಾರೆ. ಅಲ್ಲದೆ 'ಶ್ರೀ ಕೃಷ್ಣ ಪುಷ್ಪಾಂಜಲಿ’, ಹಾಗೂ ತಂದೆಯವರ ಸ್ಮಾರಕ ಗ್ರಂಥವಾಗಿ ‘ಪರಮಾನಂದ’ ಅಲ್ಲದೆ ನೃತ್ಯ ಕಲೆಯ ವಿಷಯವಾಗಿ ಬರೆದಿರುವ ಅನೇಕಾನೇಕ ಲೇಖನಗಳನ್ನು ಈ ಪ್ರಖ್ಯಾತ ಪುಸ್ತಕಗಳಲ್ಲಿ ಕಾಣಬಹುದು.

ಚಂದ್ರಭಾಗಾ ದೇವಿಯವರ ನಿಧನ

ಬದಲಾಯಿಸಿ

ಇದ್ದಕ್ಕಿದ್ದಂತೆ ಒಂದು ದಿನ ಚಂದ್ರಭಾಗಾದೇವಿಯವರ ಆರೋಗ್ಯ ಹದಗೆಟ್ಟಿತು. ಸಾಧ್ಯವಾದ ಎಲ್ಲಾ ಚಿಕಿತ್ಸೆಗಳನ್ನು ಮಾಡಿದರೂ ದೈವ ಅವರನ್ನು ಕೃಷ್ಣರಾಯರಿಂದ ಕಸಿದು ಕೊಂಡಿತು.(ನಿಧನ ೧೯೯೭). ನಾಡಿನ ನೃತ್ಯರಂಗಕ್ಕೆ ಇವರ ನಿಧನದಿಂದ ಅಪಾರ ಹಾನಿಯಾಯಿತು. ಇದರಿಂದ ಕೃಷ್ಣರಾಯರಿಗೆ ಆಕಾಶವೇ ತಮ್ಮ ತಲೆಯ ಮೇಲೆ ಕುಸಿದಂತಾಯಿತು. ತಮ್ಮ ಜೀವನದ ಪ್ರತಿಯೊಂದು ವಿಷಯದಲ್ಲಿ ಚಂದ್ರಭಾಗಾದೇವಿಯವರ ಒಲವು ನಲಿವುಗಳನ್ನೇ ಆಧಾರವಾಗಿಟ್ಟುಕೊಂಡೇ ಬಂದ ಕೃಷ್ಣರಾಯರಿಗೆ ಒಬ್ಬಂಟಿ ಜೀವನದ ಪರಿಚಯವೇ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಅವರ ನಿತ್ಯ ಜೀವನ ನೃತ್ಯಕಲೆಗೇ ಅಂಟಿಕೊಂಡಿತ್ತು. ರಾಯರು ಸಾಯುವ ಎರಡು ವಾರಗಳ ಮೊದಲೂ ಅವರು ನೃತ್ಯ ಪಾಠವನ್ನು ತಪ್ಪದೇ ನಡೆಸಿಕೊಂಡು ಬಂದಿದ್ದರಂತೆ.

ರಾವ್‌ ದಂಪತಿಗಳಿಗೆ ದೊರೆತ ಪ್ರಶಸ್ತಿಗಳು

ಬದಲಾಯಿಸಿ
  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಪ್ರಶಸ್ತಿ (೧೯೮೦).
  • ಕರ್ನಾಟಕ ರಾಜ್ಯ ಸರ್ಕಾರದಿಂದ ಚಂದ್ರಭಾಗಾದೇವಿಯವರಿಗೆ ರಾಜ್ಯ ಪ್ರಶಸ್ತಿ (೧೯೮೫),
  • ಕಲಾಭಾರತಿ ಪ್ರಶಸ್ತಿ (೧೯೮೬),
  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ದಂಪತಿಗಳು ಬರೆದ ನೃತ್ಯಕಲೆ ಪುಸ್ತಕಕ್ಕೆ ಬಹುಮಾನ (೧೯೮೬),
  • ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ (೧೯೮೮),
  • ಕರ್ನಾಟಕ ಸರ್ಕಾರದ ಶಾಂತಲಾ ಪ್ರಶಸ್ತಿ (೧೯೯೭).
  • ಕಲಾ ವಿಮರ್ಶಕ ಇ.ಕೃಷ್ಣಯ್ಯರ್ ಸ್ಮಾರಕ ಚಿನ್ನದ ಪದಕ(೨೦೦೨)-ಚಂದ್ರಭಾಗಾದೇವಿ ವಿಧಿವಶರಾದ ನಂತರ ಕೃಷ್ಣರಾಯರು ಒಬ್ಬಂಟಿಯಾಗಿ ಸ್ವೀಕರಿಸಿರುವ ಪ್ರಶಸ್ತಿ ಇದಾಗಿದೆ.

೯೦ ನೆಯ ವಯಸ್ಸಿನಲ್ಲಿ ದೊರೆತ ಪ್ರಶಸ್ತಿಗಳು

ಬದಲಾಯಿಸಿ

ನಾಡಿನ ಅನೇಕ ಸಂಘ ಸಂಸ್ಥೆಗಳು, ಸರ್ಕಾರದ ಸಾಂಸ್ಕೃತಿಕ ಇಲಾಖೆಗಳು ಕೃಷ್ಣರಾಯರಿಗೆ ೯೦ ವರ್ಷ ತುಂಬಿದ ಸಂದರ್ಭದಲ್ಲಿ ಗೌರವಿಸಿದೆ.

ಇತರ ಪ್ರಶಸ್ತಿಗಳು

ಬದಲಾಯಿಸಿ
  • []
  • ರಾಜ್ಯೊತ್ಸವ ಪ್ರಶಸ್ತಿ,
  • ಶಾಂತಲ ಪ್ರಶಸ್ತಿ,
  • ಕರ್ನಾಟಕ ನೃತ್ಯ ಕಲಾ ಪರಿಷತ್ ಅಂಡ್ ಸೆಂಟ್ರಲ್ ಸಂಗೀತ್ ನಾಟಕ್ ಅಕ್ಯಾಡೆಮಿ ಅವಾರ್ಡ್.
  • ೨೦೦೨ ರಲ್ಲಿ, ಶೃತಿ ಫೌಂಡೇಶನ್ ವತಿಯಿಂದ ಪ್ರತಿಷ್ಠಿತ ಇ.ಕೃಷ್ಣ ಅಯ್ಯರ್ ಮೆಡಲ್

ಯು. ಎಸ್.ಕೃಷ್ಣರಾಯರ ನಿಧನ

ಬದಲಾಯಿಸಿ

ಭರತನಾಟ್ಯಂ ಗುರು, ಉಭಯಕರ್ ಶಿವರಾಮ್ ಕೃಷ್ಣರಾವ್,[] ಬೆಂಗಳೂರಿನಲ್ಲಿ ೨೦೦೫ ರ ಮಾರ್ಚ್, ೬ರಂದು ಪ್ರಾತಃಕಾಲ ೮-೩೮ ಕ್ಕೆ ವಿಧಿವಶರಾದರು. ಅವರಿಗೆ ೯೨ ವರ್ಷ ವಯಸ್ಸಾಗಿತ್ತು. ಮೃತರಿಗೆ ಇಬ್ಬರು ಮಕ್ಕಳು[].

ಉಲ್ಲೇಖಗಳು

ಬದಲಾಯಿಸಿ
  1. http://www.indianmemoryproject.com/tag/u-s-krishna-rao/
  2. http://www.narthaki.com/info/profiles/profl151.html
  3. ಎಂದೂ ಮುಗಿಯದ ನೃತ್ಯ... -ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ, 01/06/2013
  4. http://www.prajavani.net/show_page.php?nid=144018
  5. "ಕಣಜ,ವ್ಯಕ್ತಿಪರಿಚಯ ಮತ್ತು ದೊರೆತ ಪ್ರಶಸ್ತಿಗಳು". Archived from the original on 2016-03-06. Retrieved 2013-09-30.
  6. "ಆರ್ಕೈವ್ ನಕಲು". Archived from the original on 2011-07-05. Retrieved 2014-02-04.
  7. http://www.narthaki.com/info/profiles/profil51.html

ಬಾಹ್ಯಸಂಪರ್ಕಗಳು

ಬದಲಾಯಿಸಿ