ಯು-ಟರ್ನ್
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ. ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ. |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಯು-ಟರ್ನ್ ಅಪ್ಪಟ ಪವನ್ ಶೈಲಿಯ ಸಿನೆಮಾ. ಇದು ಅವರ ಸಾಧನೆಯ ಕಿರೀಟಕ್ಕೆ ಇನ್ನೊಂದು ಚಿನ್ನದ ಗರಿ. ಸಂಕ್ಷಿಪ್ತವಾಗಿ ಎಷ್ಟನ್ನು ಹೇಳಬೇಕೋ ಅಷ್ಟನ್ನು ಹೇಳಿ ಮುಗಿಸುವ ಅವರ ಬದ್ಧತೆಯೇ ನನಗಿಷ್ಟವಾದದ್ದು. ಇಡಿಯ ಚಿತ್ರದಲ್ಲಿ ಒಂದೇ ಒಂದು ದೃಶ್ಯ ಅನಗತ್ಯ ಎಂದು ಪರಿಗಣಿಸಬಹುದಾದದ್ದಿಲ್ಲ. ಎರಡು ಗಂಟೆಗಳ ಕಾಲ ಏನನ್ನೆಲ್ಲಾ ಪರದೆಯ ಮೇಲೆ ತೋರಿಸುತ್ತಾರೋ ಅದೆಲ್ಲಾ ಬೇಕಾದದ್ದೇ. ಉಳಿದ ಚಿತ್ರಗಳಂತೆ ನಾಯಕ-ನಾಯಕಿಯ ಅನಗತ್ಯ ಸಂಭಾಷಣೆಗಳು, ಕಥೆಯಲ್ಲಿ ನಾವೇನನ್ನೋ ನಿರೀಕ್ಷಿಸುತ್ತಿರುವಾಗ ತಕ್ಷಣ ವಿದೇಶದ ಯಾವುದೋ ಸಮುದ್ರ ತೀರದಲ್ಲೋ ಇನ್ನೆಲ್ಲೋ ಪ್ರಾರಂಭವಾಗುವ ಪದ್ಯಗಳು, ಹೆಜ್ಜೆ-ಹೆಜ್ಜೆಗೆ ನಾಯಕನ ವೈಭವೀಕರಣ, ನಾಯಕ ಹೊಡೆಯುವ ಮುಂಚೆಯೇ ನೆಲಕ್ಕುರುಳುವ ಹಿಂಬಾಲಕರಿರುವ ಖಳನಾಯಕ- ಇವೆಲ್ಲಾ ಇಲ್ಲಿಲ್ಲ. ಅದಕ್ಕೆ ಬದಲಾಗಿ ಪ್ರತಿಯೊಂದು ಫ್ರೇಮ್’ನಲ್ಲಿ ಏನೇನು ವಸ್ತುಗಳನ್ನು ಬಳಸಿದ್ದಾರೋ ಅವೆಲ್ಲಾ ಇನ್ನೇನನ್ನೋ ಸಂಕೇತಿಸುತ್ತವೆ! ನಮಗೊಂದು ಹೊಸ ಯೋಚನೆಗೆ ಹಾದಿಯನ್ನು ತೆರೆದಿಡುತ್ತವೆ. ಉದಾಹರಣೆಗೆ: ಇಂಡಿಯನ್ ಎಕ್ಸ್’ಪ್ರೆಸ್ ಪತ್ರಿಕೆಯಲ್ಲಿ ಇನ್’ಟರ್ನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಚನಾಳ ಮನೆಯ ಬಾಗಿಲಿನ ಹಿಂಬದಿಯಲ್ಲಿ ನೇತಾಡಿಸಿದ್ದ ದೇವಿಯ ಮುಖದಂತಿದ್ದ ಅಲಂಕಾರಿಕ ವಸ್ತು. ಅದನ್ನೇ ಚಿತ್ರದ ಕೊನೆಯಲ್ಲಿ ಕೆಳಕ್ಕೆ ಬೀಳಿಸುವ ಮೂಲಕ ಆಕೆಯ ‘ಯು-ಟರ್ನ್’ಗೆ ಇನ್ನಷ್ಟು ಭಯದ ಲೇಪನವನ್ನು ಕೊಟ್ಟಿದ್ದಾರೆ. ವಕೀಲನ ಮನೆಯ ಬಾಗಿಲಿನ ಗಣಪತಿಯ ಮುಖವನ್ನೂ ಇದೇ ಥರ ಬಳಸಿಕೊಳ್ಳಲಾಗಿದೆ. ಹೀಗಿರುವ ಅದೆಷ್ಟೋ ಉದಾಹರಣೆಗಳು ಚಿತ್ರದಲ್ಲಿ ಸಿಗುತ್ತಾ ಹೋಗುತ್ತವೆ.
ಚಿತ್ರದ ಯಶಸ್ಸಿನಲ್ಲಿ ಪೋಲೀಸ್ ಪಾತ್ರಧಾರಿಗಳದ್ದು ಬಹುದೊಡ್ಡ ಕೊಡುಗೆಯಿದೆ. ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಅಭಿನಯಿಸಿದ್ದಾರೆ. ಸಬ್ ಇನ್ಸ್ಪೆಕ್ಟರ್ ಬಿ.ಕೆ. ನಾಯಕ್ ಭಾವನಾತ್ಮಕವಾಗಿ, ಸಹಜವಾಗಿ ಸ್ಪಂದಿಸುವ ಮೂಲಕ ಇಷ್ಟವಾಗುತ್ತಾರೆ. ಪೋಲೀಸ್ ಇಲಾಖೆಯ ಸ್ಥಿತಿ-ಗತಿಗಳು ಚಿತ್ರದ ಮೂಲ ಆಶಯವಲ್ಲದಿದ್ದರೂ ಆ ವಿಷಯದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಜೊತೆಜೊತೆಯಲ್ಲೇ ಸಾಗಿದೆ. ಮಹಿಳಾ ಪೇದೆಯು “ಸಾರ್... ನಾನು ಮನೆಗೆ ಹೋಗ್ಲಾ?” ಎಂದು ಕೇಳುವಾಗ ಪೋಲೀಸ್ ಸಿಬ್ಬಂದಿಗಳಿಗೂ ತಮ್ಮದೇ ಆದ ವೈಯಕ್ತಿಕ ಬದುಕಿದ್ದರೂ ಅದನ್ನ ಬಿಟ್ಟು ಕರ್ತವ್ಯ ನಿರ್ವಹಣೆಗೆ ಸಿದ್ಧರಾಗುವ ಬದ್ಧತೆ ನೆನಪಾಗುತ್ತದೆ. ವಕೀಲನ ಮನೆಯಿರುವ ಅಪಾರ್ಟ್’ಮೆಂಟ್’ನಲ್ಲೇ ಕಾವಲಿಗೆ ನಿಲ್ಲಲು ಇನ್ನೊಬ್ಬ ಪೇದೆಗೆ ನಾಯಕ್ ತಿಳಿಸಿ ಹೊರಟಾಗ, ಆ ಪೇದೆಯ ಗೊಣಗುಟ್ಟುವಿಕೆಯಲ್ಲಿ ಸಹಜತೆ ತುಂಬಿಕೊಳ್ಳುತ್ತದೆ. ಅಂತೆಯೇ ಮೇಲಧಿಕಾರಿಗಳ ಒತ್ತಡ, ರಾಜಕಾರಿಣಿಗಳ ಹಸ್ತಕ್ಷೇಪ ಇವೆಲ್ಲಾ ಸ್ಪಷ್ಟವಾಗಿ ಚಿತ್ರಿತವಾಗಿದೆ. ಡಬಲ್ ರೋಡ್ ಫ್ಲೈ ಓವರ್’ನ ವಿಷಯಕ್ಕೆ ಸಂಬಂಧಿಸಿ ಸುಂದರ್ ಸಾವು ನಡೆದುದು ಇನ್ಸ್ಪೆಕ್ಟರ್ ಗಮನಕ್ಕೆ ಬಂದರೂ ‘ಆತ್ಮಕತ್ಯೆ’ ಎಂದು ಷರಾ ಬರೆದು ಪ್ರಕರಣಕ್ಕೆ ಕೊನೆಯಿಡುವ ಪ್ರಯತ್ನ, ನಾಯಕ್’ಗೆ ಇನ್ನಷ್ಟು ರಹಸ್ಯ ಭೇದಿಸುವ ಆಸೆಯಿದ್ದರೂ ಮೇಲಧಿಕಾರಿಗಳ ಸಹಾಯ ಇಲ್ಲದೇ ಇರುವುದು- ಇವೆಲ್ಲಾ ಅತ್ಯಂತ ಸಹಜವಾಗಿ ಮೂಡಿಬಂದಿದೆ.
ಪವನ್ ನಿರ್ದೇಶನವೆಂದ ಮೇಲೆ ಛಾಯಾಗ್ರಹಣ, ಸಂಭಾಷಣೆ, ಹಿನ್ನೆಲೆ ಸಂಗೀತ ಇವೆಲ್ಲಾ ಅತ್ಯಂತ ಮೇಲ್ಮಟ್ಟದಲ್ಲಿರುತ್ತವೆ ಎಂಬುದು ಗೊತ್ತಿರುವ ವಿಚಾರವೇ. ಒಂದು ಉತ್ತಮ ಚಿತ್ರ ನಿರ್ಮಿಸಬೇಕಾದಲ್ಲಿ ಎಲ್ಲೋ ದೂರದೂರದ ಸ್ಥಳಗಳನ್ನು ಹುಡುಕಿ ಅಲೆಯಬೇಕಿಲ್ಲ. ಅತ್ಯಂತ ಸಾಮಾನ್ಯವಾದ ಪೋಲೀಸ್ ಸ್ಟೇಶನ್, ಅಪಾರ್ಟ್’ಮೆಂಟ್’ಗಳು ಇವನ್ನೇ ಬಳಸಿ ನೆರಳು-ಬೆಳಕಿನ ಆಟವನ್ನಾಡಿಸಿ ಕ್ಯಾಮೆರಾ ಕಣ್ಣಿನಲ್ಲಿ ಅತ್ಯದ್ಭುತ ಎನ್ನುವಂತೆ ತೋರಿಸಲು ಸಾಧ್ಯ ಎನ್ನುವುದು ಈ ಚಿತ್ರದಲ್ಲಿ ಸ್ಪಷ್ಟವಾಗಿದೆ. ‘ಯು-ಟರ್ನ್’ ತೆಗೆದುಕೊಂಡ ಇಬ್ಬರು ಯುವಕರನ್ನು ಸುರಕ್ಷತೆಗೆಂದು ಜೈಲಿನಲ್ಲಿ ಕೂಡಿ ಹಾಕಿ, ಆ ಬಳಿಕ ಅವರ ಹೊಡೆದಾಟವಾಗುವಾಗ ವಿದ್ಯುತ್ಸಂಪರ್ಕ ಕಡಿತಗೊಳಿಸಿ ಟಾರ್ಚ್ ಬೆಳಕಿನಲ್ಲಿ ಸನ್ನಿವೇಶಗಳನ್ನು ಚಿತ್ರಿಸಿಕೊಂಡದ್ದು ಛಾಯಾಗ್ರಹಣದ ವಿಭಿನ್ನ ಅನುಭವವನ್ನು ನೋಡುಗನಿಗೆ ಕಟ್ಟಿಕೊಡುವ ಉದ್ದೇಶದಿಂದ ಎಂದಾದರೂ; ಲಾಕ್ ಓಪನ್ ಆಗದೇ ಇರೋದು ಎಲ್ಲಿಯೋ ಒಂದೆಡೆಯಲ್ಲಿ ನಮ್ಮ ಪೋಲೀಸ್ ಇಲಾಖೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತಾಗಿಯೂ ಮಾತನಾಡುತ್ತದೆ.
ಇನ್ನು ಹಿನ್ನೆಲೆ ಸಂಗೀತದ ವಿಚಾರಕ್ಕೆ ಬಹುಶಃ ಹತ್ತರಲ್ಲಿ ಹತ್ತು ಅಂಕ ನೀಡಿದರೂ ಅಚ್ಚರಿಯಾಗದು. ಅಪಾರ್ಟ್’ಮೆಂಟ್’ಗಳಲ್ಲಿ ಸರ್ವೇ ಸಾಮಾನ್ಯವಾದ ಪಾರಿವಾಳದ ಕೂಗುಗಳನ್ನೂ ಹಿನ್ನೆಲೆಯಲ್ಲಿ ಅಳವಡಿಸಿಕೊಳ್ಳಲಾಗಿದೆ! ನಾಯಕ್ ಮತ್ತು ರಚನಾ ಮಾಲ್’ವೊಂದರ ಕಾಫಿ ಶಾಪ್’ನಲ್ಲಿ ಕುಳಿತು ಮಾತನಾಡುತ್ತಿರುವಾಗ ಮಾಲ್’ನಲ್ಲಿ ಕೇಳಿಬರುವ ಹಿತವಾದ ಸಂಗೀತ, ಜನರ ಗದ್ದಲ ಇವೆಲ್ಲಾ ನಮ್ಮನ್ನು ನಮಗರಿವಿಲ್ಲದೇ ಆ ಸ್ಥಳಕ್ಕೆ ಕೊಂಡೊಯ್ದು ಬಿಡುತ್ತವೆ. ಇನ್ನು ಸನ್ನಿವೇಶದ ತೀವ್ರತೆಗೆ ತಕ್ಕಂತೆ ಸಿಡಿಲನ್ನು ಮತ್ತೆ ಮತ್ತೆ ಬಳಸಿಕೊಂಡದ್ದು ಗಮನಿಸಬೇಕಾದ ಅಂಶವೇ ಆಗಿದೆ.
ಪಾತ್ರಗಳ ಸಂಖ್ಯೆ ಇಲ್ಲಿ ಅಧಿಕವೇನೋ ಎಂದನ್ನಿಸುತ್ತದೆ. ಕಾರ್ಪೊರೇಟರ್'ನ ಸಿ.ಎ. ಸುಂದರ್, ಮಾಯಾ, ಮಾಯಾಳ ಗಂಡ ರಿತೇಶ್, ರಚನಾ, ರಚನಾಳ ಸಹೋದ್ಯೋಗಿ ಆದಿತ್ಯ, ಮಾಯಾ-ರಿತೇಶ್ ಮಗಳು ಆರ್ಣಾ ಹೀಗೆ ಮುಖ್ಯವಾದ ಪಾತ್ರಗಳೊಡನೆ ರಚನಾ ತಾಯಿ, ವಕೀಲನ ಕುಟುಂಬ (ಒಂದರೆಕ್ಷಣಕ್ಕೆ ಬಂದು ಹೋಗುವುದು) ಇತ್ಯಾದಿ ಹಲವು ಪಾತ್ರಗಳಿವೆ. ಕಥೆಯಲ್ಲಿ ಮುಖ್ಯಪಾತ್ರ ವಹಿಸುವ, ಆದರೆ ಅದು ಯಾರೆಂದು ಸ್ಪಷ್ಟವಾಗಿ ಕೊನೆಯವರೆಗೂ ಹೇಳದೆ ನಮ್ಮ ಕಲ್ಪನೆಗೆ ಬಿಟ್ಟಿರುವ, ಫ್ಲೈ ಓವರ್’ನಲ್ಲಿರುವ ವಾಸಿಸುವ ವಯಸ್ಸಾದ ಓರ್ವ ವ್ಯಕ್ತಿಯ ಚಿತ್ರಣವೂ ಸಮರ್ಪಕವಾಗಿದೆ. ಇಂತಹವುಗಳೇ ಪವನ್ ಚಿತ್ರದ ವಿಶೇಷತೆಗಳು!
ಇನ್ನೊಂದು ವಿಶೇಷತೆ- ಲೂಸಿಯಾ ಟಚ್! ‘ಯು-ಟರ್ನ್’ ತೆಗೆದುಕೊಂಡ ಇಬ್ಬರು ಯುವಕರಲ್ಲಿ ಒಬ್ಬಾತನು ಮಾದಕದ್ರವ್ಯ ಸೇವಿಸುವ ದೃಶ್ಯದಲ್ಲಿ ಆತ ಮಾದಕವಸ್ತುವನ್ನು ಮೊದಲು ಲೂಸಿಯಾ ಚಿತ್ರದ ಸಿ.ಡಿ.ಯ ಮೇಲೆ ಹಾಕಿಕೊಳ್ಳುತ್ತಾನೆ!! ಆ ಬಳಿಕ ಪೋಲೀಸ್ ಆ ಮನೆಗೆ ಬಂದು ಅರೆಪ್ರಜ್ಞಾವಸ್ಥೆಯಲ್ಲಿ ಇದ್ದ ಅವನನ್ನು ಎಬ್ಬಿಸಲು ಪ್ರಯತ್ನಿಸುವಲ್ಲಿ ‘ಲೂಸಿಯಾ’ದಲ್ಲಿ ಅಚ್ಯುತ್ ಕುಮಾರ್ ಮತ್ತು ಸತೀಶ್ ನಡುವಿನ ದೃಶ್ಯಕ್ಕೆ ಅತ್ಯಂತ ಸಮೀಪವಾಗುವ ದೃಶ್ಯವೊಂದು ಇಲ್ಲೂ ಬಳಕೆಯಾಗಿದೆ. ಮಾದಕವ್ಯಸನಿಯ ಸ್ಥಾನದಲ್ಲಿ ಕ್ಯಾಮೆರಾ ಇಟ್ಟು ಅವನಿಗೆ ಹೊರಜಗತ್ತು ಹೇಗೆ ಗೋಚರಿಸುತ್ತದೆ ಎಂಬುದನ್ನೊಮ್ಮೆ ತೋರಿಸುತ್ತಾರೆ. ಇಲ್ಲಿಯೂ ಲೂಸಿಯಾ ಮಾದರಿ ಪುನರಾವರ್ತನೆಯಾಗುತ್ತದೆ. ಈ ಸಂದರ್ಭದಲ್ಲಿ ಪೋಲೀಸ್’ನ ಒಂದು ಮಾತಂತೂ ಪ್ರತಿಶತ ಅಚ್ಯುತ್ ಕುಮಾರ್ ಲೂಸಿಯಾದಲ್ಲಿ ಹೇಳಿದಂತಿತ್ತು. ಅದೇ ಧ್ವನಿಯನ್ನು ಇಲ್ಲಿ ಬಳಸಿದ್ದಾರೋ ಏನೋ ಎಂಬ ಸಂಶಯವಿನ್ನೂ ನನಗಿದೆ!
ಕೊನೆಯದಾಗಿ ದೆವ್ವದ ವಿಚಾರ! ಈ ಆತ್ಮ-ದೆವ್ವ ಇತ್ಯಾದಿಗಳ ಇರುವಿಕೆಯನ್ನು ಖಚಿತಪಡಿಸಿಕೊಂಡು ಚಿತ್ರ ಕೊನೆಗೊಳ್ಳೋದಾ? ಇಡಿಯ ಸರಣಿ ಸಾವಿಗೆ ಮಾಯಾಳ ಆತ್ಮದ ಸೇಡು ಕಾರಣವೇ? ಅಥವಾ ಇದು ಅವರವರ ಮನದ ಭಾವನೆಯಾ? ಅಪರಾಧಿಗಳ ಮನದ ತಪ್ಪಿತಸ್ಥ ಭಾವನೆ ಇದಕ್ಕೆಲ್ಲಾ ಕಾರಣವೇ? ತನ್ನ ಮಗು ಆರ್ಣಾಳನ್ನು ಅಪಾರವಾಗಿ ಪ್ರೀತಿಸಿದ ಮಾತೃಶಕ್ತಿಗೆ ಉಳಿದವರ ಸಾವಿಗೆ ಕಾರಣವಾಗುವ ಶಕ್ತಿ ಬರುತ್ತದೆ ಎಂಬರ್ಥವೇ? ಗೊತ್ತಿಲ್ಲ. ಒಂದೊಂದು ಬಾರಿ ಆಲೋಚಿಸಿದಾಗಲೂ ಒಂದೊಂದು ಅರ್ಥದಂತೆ ಭಾಸವಾಗುತ್ತದೆ. ನೇರವಾಗಿ ನೋಡುವುದಾದರೆ ‘ಯು-ಟರ್ನ್’ ತೆಗೆದುಕೊಂಡವರ ಮನದಲ್ಲಿ ಮಾಯಾ ಹಿಂದಿನ ಕಥೆಯನ್ನು ಹೇಳುತ್ತಾಳೆ. ಆರ್ಣಾಳ ಸಾವಿಗೆ ನಾನೇ ಕಾರಣ ಎಂಬ ತಪ್ಪಿತಸ್ಥ ಭಾವ ಯು-ಟರ್ನ್ ತೆಗೆದುಕೊಂಡವರ ಮನದಲ್ಲಿ ಮೂಡುತ್ತದೆ. ಅವರಾಗಿಯೇ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಪ್ರೇರಣೆಯೊಂದು ದೊರೆಯುತ್ತದೆ! ಆದರೆ ಜೈಲಿನಲ್ಲಿ ನಡೆಯುವ ಸಾವಿನಲ್ಲಿ ಮಾದಕವಸ್ತುವನ್ನು ಬಳಸಿದ ಕಾರಣ ಅವರಿಬ್ಬರ ಸಾವಿಗೆ ಮಾದಕವಸ್ತುವೇ ಕಾರಣ ಎಂದೆನ್ನಲೂ ಸಾಧ್ಯವಿದೆ. ಈ ವಿಚಾರದಂತೆಯೇ ಉಳಿದೆಲ್ಲಾ ಸಾವಿಗೂ ಈ ರೀತಿಯಲ್ಲೇ ಕೆಲವು ಕಾರಣಗಳೇ ವಿನಃ ಆತ್ಮ-ದೆವ್ವಗಳಲ್ಲ ಎಂದೂ ವಾದಿಸಬಹುದೇನೋ! ಒಟ್ಟಿನಲ್ಲಿ ಈ ಅಂಶ ಅಕ್ಷರಶಃ ‘ಉಳಿದವರು ಕಂಡಂತೆ’...
ಸಾವಿನ ಸರಣಿಯನ್ನು ಕಟ್ಟಿದ್ದು, ಅವರೆಲ್ಲಾ ‘ಯು-ಟರ್ನ್’ ತೆಗೆದುಕೊಳ್ಳುವ ಆಕಸ್ಮಿಕತೆ, ಚಿತ್ರದ ಕೊನೆಗೆ ಆದಿತ್ಯನೇ ಮೂಲ ಅಪರಾಧಿ ಎಂದು ಎಲ್ಲರೂ ನಂಬುವ ಹೊತ್ತಿನಲ್ಲಿ ಅಚ್ಚರಿಯ ತಿರುವು, ಹಾಗಾದರೆ ಮೂಲ ಅಪರಾಧಿ ಯಾರೆಂಬ ಪ್ರಶ್ನೆ, ಕೊನೆಗೆ ಮಾಯಾ ಮತ್ತು ಆರ್ಣಾಳ ಸಾವಿಗೆ ಕಾರಣವಾಗುವವನು- !! ‘ಯು-ಟರ್ನ್’ನ ಹೊಸತನಗಳು ಒಂದೆರಡಲ್ಲ. ನೋಡುಗರ ಮನಸ್ಸನ್ನು ಸ್ವಲ್ಪವೂ ಕದಲಿಸದೇ ಚಿತ್ರದಲ್ಲಿ 101% ತಲ್ಲೀನರಾಗುವಂತೆ ಮಾಡುವ ಸಾಮರ್ಥ್ಯ ಇದಕ್ಕಿದೆ. ಸವಿಯನ್ನು ಉಣ್ಣಲು ಚಿತ್ರಮಂದಿರದಲ್ಲಿ ಸಂಪೂರ್ಣ ಏಕಾಗ್ರತೆಯಿಂದ ನೋಡಿದರಷ್ಟೇ ಸಾಧ್ಯ! ಒಟ್ಟಿನಲ್ಲಿ ‘ಯು-ಟರ್ನ್’ ಕನ್ನಡದಲ್ಲಿ ಇನ್ನೊಂದು ಅತ್ಯದ್ಭುತ ಚಿತ್ರ!
ಇದನ್ನು ನೋಡಿದ ಬಳಿಕ ನಿಜ ಜೀವನದಲ್ಲಿ ಕೇವಲ ‘ಯು-ಟರ್ನ್’ ತೆಗೆದುಕೊಳ್ಳೋದನ್ನು ನಿಲ್ಲಿಸಿದರೆ ಸಾಲದು. ಯು-ಟರ್ನ್ ಒಂದು ಉದಾಹರಣೆಯಷ್ಟೇ. ಯಾವುದೇ ಸಂಚಾರಿ ನಿಯಮಗಳನ್ನು ಪಾಲಿಸದೇ ಇರಬಾರದು ಎಂಬ ಪಾಠವನ್ನು ಅರಿತು ಅಳವಡಿಸಿಕೊಂಡರೆ ಚಿತ್ರತಂಡದ ಪರಿಶ್ರಮ ಸಾರ್ಥಕವಾದೀತು. ಅತಿಯಾದ ವೇಗ, ವಾಹನ ಚಲಾಯಿಸುವುದರಲ್ಲಿ ಸ್ಪರ್ಧೆ, ಸಿಗ್ನಲ್ ಜಂಪ್ ಮಾಡುವುದು, ಕೈಸನ್ನೆಗಳನ್ನು ಬಳಸದೇ ಇರುವುದು ಇತ್ಯಾದಿಗಳನ್ನೆಲ್ಲ ಬಿಟ್ಟುಬಿಡಲು ಇಂದೇ ನಾಂದಿಯಾಗಲಿ...