ಮೊಹಿಂದರ್ ಅಮರನಾಥ್

ಭಾರತೀಯ ಕ್ರಿಕೇಟ್ ಆಟಗಾರ

ಮೊಹಿಂದರ್ ಅಮರನಾಥ್ ಭಾರದ್ವಾಜ್ pronunciation  ( ೧೯೫೦ ಸೆಪ್ಟೆಂಬರ್ ೨೪ರಂದು, ಭಾರತದ ಪಾಟಿಯಾಲಾದಲ್ಲಿ ಜನಿಸಿದರು,) ಅವರು ಮಾಜಿ ಭಾರತೀಯ ಕ್ರಿಕೆಟ್ ಆಟಗಾರರರು (೧೯೬೯-೧೯೮೯) ಮತ್ತು ಪ್ರಸ್ತುತ ಕ್ರಿಕೆಟ್ ವಿಶ್ಲೇಷಕರಾಗಿದ್ದಾರೆ. ಇವರು ಸಾಮಾನ್ಯವಾಗಿ "ಜಿಮ್ಮಿ " ಎಂದು ಪರಿಚಿತರಾಗಿದ್ದಾರೆ. ಇವರು ಸ್ವಾತಂತ್ರ್ಯಾ ನಂತರದ ಭಾರತದ ಮೊದಲ ನಾಯಕರಾಗಿದ್ದ ಲಾಲಾ ಅಮರ್‌‌ನಾಥ್‌‌ ಅವರ ಪುತ್ರರಾಗಿದ್ದಾರೆ. ಅವರ ಸಹೋದರ ಸುರಿಂದರ್ ಅಮರ್‌ನಾಥ್ ಅವರು ಓರ್ವ ಟೆಸ್ಟ್ ಆಟಗಾರರಾಗಿದ್ದರು ಹಾಗೂ ಅವರ ಸಹೋದರ ರಾಜಿಂದರ್ ಅಮರ್‌ನಾಥ್ ಅವರು ಒಬ್ಬ ಮಾಜಿ ಪ್ರಥಮ ದರ್ಜೆ ಕ್ರಿಕೆಟ್ ಆಟಗಾರರಾಗಿದ್ದರು ಹಾಗೂ ಈಗ ಕ್ರಿಕೆಟ್ ತರಬೇತುದಾರರಾಗಿ ಕಾರ್ಯ ನಿರ್ವಹಿಸುತಿದ್ದಾರೆ.

ಮೊಹಿಂದರ್ ಅಮರನಾಥ್
ಮೊಹಿಂದರ್ ಅಮರನಾಥ್
ಮೂಲ: [೧], ఆగష్టు 22 2005

೧೯೬೯ರ ಡಿಸೆಂಬರ್‌ನಲ್ಲಿ ಮೊಹಿಂದರ್‌ರವರು ಆಸ್ಟ್ರೇಲಿಯಾ ವಿರುದ್ಧದ ಚೆನ್ನೈನ ಪಂಧ್ಯದಲ್ಲಿ ಪಾದಾರ್ಪಣೆ ಮಾಡಿದರು. ಮೊಹಿಂದರ್ ತಮ್ಮ ವೃತ್ತಿ ಜೀವನದ ನಂತರದ ಭಾಗದಲ್ಲಿ ವೇಗದ ದಾಳಿಯ ಎದುರು ಭಾರತದ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿ ಕಂಡು ಬಂದಿದ್ದರು. ಇಮ್ರಾನ್ ಖಾನ್ ಮತ್ತು ಮಾಲ್ಕಂ ಮಾರ್ಷಲ್ ಇಬ್ಬರೂ ಸಹ ಇವರ ಬ್ಯಾಟುಗಾರಿಕೆ, ಧೈರ್ಯವನ್ನು ಮತ್ತು ಅಗಾಧ ನೋವನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಹೊಗಳಿದ್ದಾರೆ. ೧೯೮೨-೮೩ ರಲ್ಲಿ ಮೊಹಿಂದರ್ ಅಮರನಾಥ್ ಅವರು ಪಾಕಿಸ್ತಾನ (೫) ಮತ್ತು ವೆಸ್ಟ್ ಇಂಡೀಸ್ (೬) ವಿರುದ್ಧ ೧೧ ಟೆಸ್ಟ್ ಪಂದ್ಯಗಳನ್ನಾಡಿದರು ಮತ್ತು ಎರಡು ಸರಣಿಗಳಲ್ಲಿ ೧೦೦೦ ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದರು.

ತಮ್ಮ “ಐಡಲ್ಸ್”ನಲ್ಲಿ ಸುನಿಲ್ ಗವಾಸ್ಕರ್ ಅವರು ಮೊಹಿಂದರ್ ಅಮರ್‌ನಾಥ್‌ರವರನ್ನು ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ವಿವರಿಸಿದ್ದಾರೆ.

ಅವರು ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಪರ್ತ್‌ನ ಡಬ್ಲ್ಯೂಎಸಿಎ (ವಿಶ್ವದ ಅತೀ ವೇಗದ ಮತ್ತು ಪುಟಿಯುವ ವಿಕೆಟ್) ನಲ್ಲಿ ಜೆಫ್ ಥಾಮ್ಸನ್‌ರ ಅತೀ ವೇಗದ ಎಸೆತಗಳನ್ನು ಎದುರಿಸಿ ಗಳಿಸಿದರು. ಈ ಟೆಸ್ಟ್ ಶತಕದ ಹಿಂದೆಯೇ ಇನ್ನೂ ೧೦ ಶತಕಗಳನ್ನು ವಿಶ್ವದ ಪ್ರಮುಖ ವೇಗದ ಬೌಲರ್‌ಗಳನ್ನು ಎದುರಿಸಿ ಗಳಿಸಿದರು.

ಇಮ್ರಾನ್ ಖಾನ್ ಅವರು ಮೊಹಿಂದರ್‌ರವರ ಬಗ್ಗೆ ಎಷ್ಟು ಗೌರವವನ್ನು ಹೊಂದಿದ್ದರೆಂದರೆ, ಅವರು ತಮ್ಮ “ಆಲ್ ರೌಂಡ್ ವ್ಯೂ” ನಲ್ಲಿ ಉಲ್ಲೇಖಿಸುತ್ತಾ ೧೯೮೨-೮೩ ರ ಋತುವಿನಲ್ಲಿ ಮೊಹಿಂದರ್ ಅವರು ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದರು ಎಂದು ದಾಖಲಿಸಿದ್ದಾರೆ. ಇಮ್ರಾನ್ ಇನ್ನೂ ಮುಂದಕ್ಕೆ ಹೋಗಿ ಮೊಹಿಂದರ್ ಅವರು ೧೯೬೯ರ ಪಾದಾರ್ಪಣೆಯಿಂದ ನಿವೃತ್ತರಾಗುವ ತನಕ ನಿರಂತರವಾಗಿ ಭಾರತದ ಪರವಾಗಿ ಆಡಬಹುದಾಗಿತ್ತು ಎಂದು ಹೇಳಿದ್ದಾರೆ. ಮೊಹಿಂದರ್ ಯಾವಾಗಲೂ ಭಾರತದ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನವನ್ನು ಪಡೆದಿರಲಿಲ್ಲ. ತಂಡದ ಇನ್ನಿತರರು ಅವರಿಗಿಂತ ಕಳಪೆ ಪ್ರದರ್ಶನ ನೀಡಿದರೂ ಆ ಕಾರಣಕ್ಕಾಗಿ ಅವರನ್ನು ಎಂದಿಗೂ ಕೈ ಬಿಡಲಾಗುತ್ತಿರಲಿಲ್ಲ.

ಮೊಹಿಂದರ್ ಅವರನ್ನು ಭಾರತದ ಕ್ರಿಕೆಟ್‌ನ ಪುನರಾಗಮನದ ವ್ಯಕ್ತಿಯೆಂದೇ ಕರೆಯಲಾಗುತ್ತದೆ. ಅವರ ಎರಡು ದಶಕಗಳ ಕ್ರಿಕೆಟ್ ಜೀವನದಲ್ಲಿ ಅವರನ್ನು ಭಾರತ ತಂಡದಿಂದ ಹಲವಾರು ಬಾರಿ ಕೈ ಬಿಡಲಾಯಿತು ಆದರೆ ಹಾಗೆ ಕೈ ಬಿಟ್ಟಾಗಲೆಲ್ಲಾ ಅವರು ತಮ್ಮ ಉತ್ಕೃಷ್ಟ ಪ್ರದರ್ಶನಗಳ ಮೂಲಕ ಮರಳಿ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಅವರು ತಮ್ಮ ಚೊಚ್ಚಲ ಸರಣಿಯ ನಂತರ ತಂಡದಲ್ಲಿ ಸ್ಥಾನ ಪಡೆಯಲು ೧೯೭೫ ರವರೆಗೆ ಕಾಯಬೇಕಾಯಿತು.

ಮೊಹಿಂದರ್ ಅವರು ೧೯೬೯ ರಲ್ಲಿ ವೇಗದ ಬೌಲಿಂಗ್‌ನ ಆಲ್‌ರೌಂಡರ್ ಆಗಿ ಪಾದಾರ್ಪಣೆ ಮಾಡಿದರು ಆದರೆ ಅವರು ತಮ್ಮ ಉಚ್ಛ್ರಾಯ ಹಂತದಲ್ಲಿ ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದು ಹೆಚ್ಚಾಗಿ ಮೂರನೆಯ ಕ್ರಮಾಂಕದಲ್ಲಿ ಭಾರತದ ಪರವಾಗಿ ಆಡಿದರು. ಅವರು ಬೌಲಿಂಗ್‌ನಲ್ಲೂ ಅನುಭವ ಹೊಂದಿದ್ದ, ಉತ್ತಮ ಚತುರತೆ ಮತ್ತು ನಿಯಂತ್ರಣದೊಂದಿಗೆ ಚೆಂಡನ್ನು ಸ್ವಿಂಗ್ ಮತ್ತು ಕಟ್ ಮಾಡುವಲ್ಲಿ ನಿಷ್ಣಾತರಾಗಿದ್ದರು.

ಮೊಹಿಂದರ್ ಅಮರ್‌ನಾಥ್ ತಾವು ಆಡಿದ ೬೯ ಟೆಸ್ಟ್‌ಗಳಲ್ಲಿ ೪,೩೭೮ ರನ್‌ಗಳನ್ನು ೪೨.೫೦ರ ಬ್ಯಾಟಿಂಗ್ ಸರಾಸರಿಯಲ್ಲಿ ಗಳಿಸಿದ್ದು, ಅವುಗಳಲ್ಲಿ ೧೧ ಶತಕ ಮತ್ತು ೨೪ ಅರ್ಧಶತಕಗಳು ಸೇರಿವೆ, ಮತ್ತು ೫೫.೬೮ರ ಸರಾಸರಿಯಲ್ಲಿ ೩೨ ವಿಕೆಟ್ಗಳನ್ನು ಗಳಿಸಿದ್ದಾರೆ. ೮೫ ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಅವರು ೩೦.೫೩ ರ ಸರಾಸರಿಯಲ್ಲಿ ೧,೯೨೪ ರನ್‌ಗಳನ್ನು ಗಳಿಸಿದ್ದು, ಅವರ ಗರಿಷ್ಠ ಸ್ಕೋರ್ ಅಜೇಯ ೧೦೨ ಆಗಿದೆ ಮತ್ತು ಅವರು ೪೨.೮೪ ರ ಸರಾಸರಿಯಲ್ಲಿ ೪೬ ವಿಕೆಟ್ ಕಬಳಿಸಿದ್ಡಾರೆ. ಮೊಹಿಂದರ್ ಅಮರ್‌ನಾಥ್ ಅವರು ಚೆಂಡು ಮುಟ್ಟುವಿಕೆ ಯ ಮೂಲಕ ಔಟ್ ಆದ ಏಕಮಾತ್ರ ಭಾರತೀಯ ಆಟಗಾರ ಕೂಡಾ ಆಗಿದ್ದಾರೆ. ಫೆಬ್ರವರಿ ೯, ೧೯೮೬ ರಲ್ಲಿ ಅವರು ಚೆಂಡು ಮುಟ್ಟುವಿಕೆಯಿಂದ ಔಟ್ ಆಗುವ ಮೂಲಕ ಒಂದು ದಿನದ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆ ರೀತಿಯಾಗಿ ಔಟ್ ಆದ ಮೊದಲನೆಯವರಾದರು. ಹಾಗೆಯೇ ಅವರು ಒಂದು ದಿನದ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕ್ಷೇತ್ರಕ್ಕೆ ತಡೆಯೊಡ್ಡುವಿಕೆಗಾಗಿ ಔಟ್ ಆದ ಏಕೈಕ ಭಾರತೀಯ ಆಟಗಾರ ಕೂಡಾ ಆಗಿದ್ದಾರೆ.

೧೯೮೩ ರ ವಿಶ್ವಕಪ್‌ನ ಪ್ರದರ್ಶನ

ಬದಲಾಯಿಸಿ

ಮೊಹಿಂದರ್ ಅಮರ್‌ನಾಥ್ ಅವರು ೧೯೮೩ ರ ವಿಶ್ವಕಪ್‌‌ನಲ್ಲಿನ ತಮ್ಮ ಐತಿಹಾಸಿಕ ಪ್ರದರ್ಶನದಿಂದ ಪ್ರಖ್ಯಾತರಾಗಿದ್ದಾರೆ. ಭಾರತವು ಪ್ರಥಮ ಒಂದು ದಿನದ ಅಂತರಾಷ್ಟ್ರೀಯ ಪಂದ್ಯದ ಪ್ರಶಸ್ತಿ ಗೆಲ್ಲುವಲ್ಲಿ ಮುಂಚೂಣಿ ಪಾತ್ರ ವಹಿಸಿದ ಅವರಿಗೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ “ಪಂದ್ಯದ ಪುರುಷೋತ್ತಮ” ಪ್ರಶಸ್ತಿಯನ್ನು ನೀಡಲಾಯಿತು.

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅವರು ನಿಖರವಾದ ಬೌಲಿಂಗ್‌ನಿಂದ ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ಗೋವರ್ ಮತ್ತು ಮೈಕ್ ಗ್ಯಾಟಿಂಗ್‌ರ ವಿಕೆಟ್ ಕಬಳಿಸಿದರು. ಅವರು ೧೨ ಓವರ್‌ಗಳಲ್ಲಿ ಕೇವಲ ೨೭ ರನ್ ಗಳನ್ನು ಪ್ರತಿ ಓವರ್‌ಗೆ ೨.೨೫ ರ ಸರಾಸರಿಯಂತೆ ನೀಡುವ ಮೂಲಕ ಭಾರತದ ಬೌಲರ್‌ಗಳಲ್ಲೇ ಅತೀ ಮಿತವ್ಯಯಿ ಬೌಲರ್ ಎನಿಸಿದರು. ಬ್ಯಾಟಿಂಗ್‌ನಲ್ಲಿ ಅವರು ೪೬ ಗಳಿಸಿ ಭಾರತಕ್ಕೆ ಸದೃಢವಾದ ಆರಂಭವನ್ನು ಒದಗಿಸಿದರು. ಅವರನ್ನು ಪಂದ್ಯದ ಪುರುಷೋತ್ತಮರೆಂದು ಘೋಷಿಸಲಾಯಿತು.

ಫೈನಲ್ ಪಂದ್ಯದಲ್ಲಿ ಭಾರತವು ವಿಶ್ವದ ಅತಿ ಶ್ರೇಷ್ಠ ಬೌಲಿಂಗ್ ದಾಳಿಯನ್ನು ಹೊಂದಿದ್ದ ವೆಸ್ಟ್ ಇಂಡೀಸ್ ವಿರುದ್ಧ ಮೊದಲು ಬ್ಯಾಟ್ ಮಾಡಿತು. ತಂಡವು ಉತ್ತಮ ಪ್ರದರ್ಶನ ತೋರದೇ, ಇಡೀ ತಂಡವು ೫೪.೪ ಓವರ್‌ಗಳಲ್ಲಿ ಕೇವಲ ೧೮೩ ರಷ್ಟು ಕಡಿಮೆ ಸ್ಕೋರ್ ಗಳಿಸಿ ನಿಗದಿತ ೬೦ ಓವರ್‌ಗಳಿಗೂ ಮುಂಚಿತವಾಗಿ ತನ್ನೆಲ್ಲಾ ವಿಕೇಟ್‌‌ಗಳನ್ನು ಕಳೆದುಕೊಂಡು ಸೋಲಿನಂಚಿಗೆ ಬಂದಿತ್ತು. ಅಮರ್‌ನಾಥ್‌ರವರ ತಾಳ್ಮೆಯ ಮತ್ತು ತದೇಕ ಚಿತ್ತದ ಬ್ಯಾಟಿಂಗ್ ವೆಸ್ಟ್ ಇಂಡೀಸ್‌ನ ವೇಗದ ಬೌಲಿಂಗ್‌ ಎದುರು ಭಾರತದ ಇನಿಂಗ್ಸ್‌ಗೆ ಅತ್ಯಗತ್ಯವಾದ ಸ್ಥಿರತೆಯನ್ನು ನೀಡಿತಲ್ಲದೇ, ಅವರು ಭಾರತದ ಎಲ್ಲಾ ಬ್ಯಾಟ್ಸ್‌ಮನ್‌ಗಳ ಪೈಕಿ ಹೆಚ್ಚು ಹೊತ್ತು ಆಟವಾಡಿದರು. ಅವರು ಕ್ರೀಸ್ ಅನ್ನು ಅತ್ಯಧಿಕ ಸಮಯ(೮೦ ಚೆಂಡುಗಳು)ದ ವರೆಗೆ ಆಕ್ರಮಿಸಿದರು ಮತ್ತು ೨೬ ರನ್ ಗಳಿಸಿದರು. ಆದಾಗ್ಯೂ ನಿಗದಿತ ಓವರ್‌ಗಳ ಪಂದ್ಯಗಳಲ್ಲಿ ಹೆಚ್ಚು ಸಮಯ ಕ್ರೀಸ್‌ನಲ್ಲಿರುವ ಅವಶ್ಯಕತೆಯು ಒಳ್ಳೆಯ ವಿಷಯವಲ್ಲವಾದರೂ, ಭಾರತವು ನೀಡಿದ ಒಟ್ಟು ೬೦ ಓವರ್‌ಗಳನ್ನು ಪೂರೈಸದಿರುವುದನ್ನು ಗಮನಿಸಿದಾಗ ಅಮರ್‌ನಾಥ್‌ರವರ ಆಟವು ಮತ್ತೊಂದು ತುದಿಯಲ್ಲಿನ ಬ್ಯಾಟ್ಸ್‌ಮನ್‌ಗಳಿಗೆ ಸ್ಕೋರ್ ಮಾಡಲು ಅವಕಾಶವನ್ನು ಒದಗಿಸಿತು. ಕ್ರಿಸ್ ಶ್ರೀಕಾಂತ್ ೩೮ ರನ್‌ಗಳೊಂದಿಗೆ ಅತ್ಯಧಿಕ ಸ್ಕೋರ್ ಗಳಿಸಿದರು, ನಂತರ ಅನುಕ್ರಮವಾಗಿ ಸಂದೀಪ್ ಪಾಟಿಲ್ (೨೭ ರನ್) ಮತ್ತು ಅಮರ್‌ನಾಥ್ ರನ್ ಗಳಿಸಿದರು. ಕಳಪೆ ಬ್ಯಾಟಿಂಗ್ ನಂತರ ಭಾರತದ ಅವಕಾಶವು ಬಹುಪಾಲು ಅಸ್ತಿತ್ವವೇ ಇಲ್ಲದಂತೆ ಕಂಡುಬಂದಿತ್ತು. ಆದರೆ ಭಾರತದ ಬೌಲರ್‌ಗಳು ಹವಾಮಾನ ಮತ್ತು ಪಿಚ್‌ನ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ನಿಖರವಾದ ದಾಳಿ ನಡೆಸಿ ವೆಸ್ಟ್ ಇಂಡೀಸ್ ತಂಡವನ್ನು ೧೪೦ ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಫೈನಲ್‌ ಪಂದ್ಯವನ್ನು ೪೩ ರನ್‌ಗಳಿಂದ ಗೆದ್ದುಕೊಂಡರು. ತಲಾ ೩ ಮೂರು ವಿಕೆಟ್‌ಗಳೊಂದಿಗೆ ಅಮರ್‌ನಾಥ್ ಮತ್ತು ಮದನ್ ಲಾಲ್ ಅವರು ಜಂಟಿಯಾಗಿ ಅತ್ಯಧಿಕ ವಿಕೆಟ್ ಪಡೆದರು. ಸೆಮಿಫೈನಲ್‌ನಂತೆ, ಅಮರ್‌ನಾಥ್ ಅವರು ಮತ್ತೊಮ್ಮೆ ಮಿತವ್ಯಯಿ ಬೌಲರ್ ಆಗಿ, ತಮ್ಮ ೭ ಓವರ್‌ಗಳಲ್ಲಿ ಪ್ರತಿ ಓವರ್‌ಗೆ ೧.೭೧ ಸರಾಸರಿಯಂತೆ ಕೇವಲ ೧೨ ರನ್‌ಗಳನ್ನು ನೀಡಿದರು. ಮತ್ತೊಮ್ಮೆ, ಸೆಮಿಫೈನಲ್‌ನಂತೆ, ಅಮರ್‌ನಾಥ್‌ರವರನ್ನು ಪಂದ್ಯದ ಪುರುಷೋತ್ತಮರನ್ನಾಗಿ ಘೋಷಿಸಲಾಯಿತು.

ನಡತೆ ಮತ್ತು ಧೈರ್ಯ

ಬದಲಾಯಿಸಿ

ಅಮರ್‌ನಾಥ್ ಅವರು ತಮ್ಮ ವ್ಯಕ್ತಿತ್ವ, ಧೈರ್ಯ ಮತ್ತು ದೃಢ ಸಂಕಲ್ಪಕ್ಕೆ ಹೆಸರಾಗಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ವಿವಿಯನ್ ರಿಚರ್ಡ್ಸ್ ಅವರು ಅಮರನಾಥ್‌ರನ್ನು “ ಆಟವನ್ನು ಆಡಿದ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು ” ಎಂದೂ, ಮತ್ತು ಆಸ್ಟ್ರೇಲಿಯಾದ ಟೆಸ್ಟ್‌ನ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ಬೂನ್ ಅವರು “ ಬಿಟ್ಟು ಕೊಡುವುದು ಎಂಬುದು ಅವರ ಶಬ್ದಕೋಶದಲ್ಲಿಯೇ ಇದ್ದಂತೆ ಕಾಣುವುದಿಲ್ಲ” ಎಂದು ಅಮರನಾಥ್‌ರನ್ನು ಕರೆದಿದ್ದಾರೆ [೨].

ಗಿಡಿಯೋನ್ ಹೇಯ್ ಅವರು ದಿ ಏಜ್ ನಲ್ಲಿ ಹೀಗೆ ಹೇಳಿದ್ದಾರೆ: “ ವೇಗದ ಬೌಲಿಂಗ್‌ನ ಮತ್ತು ಅನಿಯಮಿತ ಬೌನ್ಸರ್‌ಗಳು ತುಂಬಿದ ಮತ್ತು ಬೌನ್ಸರ್‌ಗಳ ಅನಿಯಂತ್ರಿತ ಬಳಕೆಯ ಯುಗದಲ್ಲಿ, ಹಾಗೆ ಮಾಡುವಂತೆ ಹಲವು ಪ್ರೇರಣೆಗಳ ಬಳಿಕವೂ ಅವರು ಅವರು ಹುಕ್ ಮಾಡುವುದನ್ನು ಎಂದಿಗೂ ನಿಲ್ಲಿಸಲಿಲ್ಲ ”. ಅವರು ರಿಚರ್ಡ್ ಹ್ಯಾಡ್ಲಿಯವರಿಂದ ತಲೆ ಬುರುಡೆಗೆ ಕೂದಲೆಳೆಯ ಮೂಳೆ ಮುರಿತವನ್ನು ಎದುರಿಸಿದ್ದರು, ಇಮ್ರಾನ್ ಖಾನ್‌ರವರ ಎಸೆತದಿಂದ ಮೂರ್ಛೆ ಹೋಗಿದ್ದರು, ಮಾಲ್ಕಂ ಮಾರ್ಷಲ್‌ರವರಿಂದ ಹಲ್ಲಿಗೆ ಏಟು ಮಾಡಿಕೊಂಡಿದ್ದರು ಮತ್ತು ಪರ್ತ್‌ನಲ್ಲಿ ಜೆಫ್ ಥಾಮ್ಸನ್‌ರವರಿಂದ ಭೋಜನದ ಸಮಯದಲ್ಲಿ ಕೇವಲ ಐಸ್‌ಕ್ರೀಂ ಮಾತ್ರ ತಿನ್ನುವಷ್ಟರ ಮಟ್ಟಿಗೆ ದವಡೆಗೆ ಅಗಾಧ ನೋವಿನ ಹೊಡೆತವನ್ನು ಅನುಭವಿಸಿದ್ದರು. ಮೈಕಲ್ ಹೋಲ್ಡಿಂಗ್ ಅವರು ಹೇಳುವಂತೆ, ‘ ಜಿಮ್ಮಿಯವರನ್ನು ಇತರರಿಂದ ಬೇರ್ಪಡಿಸಬಹುದಾಗಿದ್ದು ಏನೆಂದರೆ, ಅವರ ನೋವನ್ನು ತಡೆದುಕೊಳ್ಳುವ ಅವರ ಅತ್ಯುತ್ತಮ ಸಾಮರ್ಥ್ಯವೇ ಆಗಿದೆ . . . ಬ್ಯಾಟ್ಸ್‌ಮನ್ ಯಾವಾಗ ನೋವಿನಲ್ಲಿರುತ್ತಾನೆಂದು ವೇಗದ ಬೌಲರ್‌ಗೆ ತಿಳಿದಿರುತ್ತದೆ, ಆದರೆ ಜಿಮ್ಮಿ ಹಾಗಿದ್ದರೂ ಪುಟಿದೇಳುತ್ತಿದ್ದರು ಮತ್ತು ಮುಂದುವರಿಸುತ್ತಿದ್ದರು.' " [೩]

೧೯೮೨-೮೩ ರಲ್ಲಿ ಭಾರತದ ವೆಸ್ಟ್ ಇಂಡೀಸ್ ಪ್ರವಾಸದ ಬ್ರಿಜ್‌ಟೌನ್ ಟೆಸ್ಟ್ ಸಂದರ್ಭದಲ್ಲಿ ಅಮರ್‌ನಾಥ್‌ರವರ ತಲೆಗೆ ಬಿಟ್ಟ ಏಟಿನಿಂದ ಅವರು ಪಂದ್ಯದಿಂದ ನಿವೃತ್ತರಾಗಬೇಕಾಯಿತು ಮತ್ತು ಅವರ ತಲೆಗೆ ಹೊಲಿಗೆಯನ್ನು ಹಾಕಲಾಯಿತು. ಮತ್ತೆ ಪಂದ್ಯಕ್ಕೆ ಮರಳಿದ ಅವರು, ಇತಿಹಾಸದ ಅತ್ಯಂತ ಭಯಾನಕ ಬೌಲರ್‌ಗಳಲ್ಲೊಬ್ಬರಾದ ಮೈಕಲ್ ಹೋಲ್ಡಿಂಗ್‌ರವರನ್ನು ಎದುರಿಸಿದರು. ಹೋಲ್ಡಿಂಗ್‌ರವರು ಬೌನ್ಸರ್ ಎಸೆಯುವ ಮೂಲಕ ಅಮರನಾಥ್‌ರಿಗೆ ಹೆದರಿಕೆ ಹುಟ್ಟಿಸುತ್ತಾರೆಂದು ತಿಳಿಯಲಾಗಿತ್ತು, ಮತ್ತು ಅವರು ಹಾಗೆಯೇ ಮಾಡಿದರು. ಇಂತಹ ಸಂದರ್ಭಗಳಲ್ಲಿ ಹೆಚ್ಚಿನ ಬ್ಯಾಟ್ಸ್‌ಮನ್‌ಗಳು ಎಚ್ಚರಿಕೆಯಿಂದ ಆಡುತ್ತಾರೆ ಮತ್ತು ಚೆಂಡನ್ನು ವ್ಯರ್ಥ ಮಾಡುತ್ತಾರೆ ಎಂದು ಹೆಚ್ಚಿನವರು ನಿರೀಕ್ಷಿಸುತ್ತಾರೆ, ಬದಲಿಗೆ ಅಮರ್‌ನಾಥ್ ಅವರು ಮೈದಾನದಲ್ಲಿ ಸ್ಥಿರವಾಗಿ ನಿಂತರು ಮತ್ತು ಚೆಂಡನ್ನು ಬೌಂಡರಿಗೆ ಅಟ್ಟಿದರು. ಹಾಗಿದ್ದರೂ ಕೂಡ ವೆಸ್ಟ್ ಇಂಡೀಸ್‌ನ ಪ್ರಬಲವಾದ ಮತ್ತು ಪ್ರತಿಕಾರದ ಮಾರಕ ವೇಗದ ದಾಳಿಯು ಅಮರ್‌ನಾಥ್‌ರವರನ್ನು ೧೯೮೩/೮೪ ರ ಭಾರತದ ಪ್ರವಾಸದಲ್ಲಿ ಆರು ಇನಿಂಗ್ಸ್‌ಗಳಿಂದ ಕೇವಲ ೧ ರನ್‌ಗೆ ನಿಯಂತ್ರಿಸಿತು, ಈ ಸಂದರ್ಭದಲ್ಲಿ ಹೋಲ್ಡಿಂಗ್ ಅವರು ಅಮರ್‌ನಾಥ್‌ರನ್ನು ಮೂರು ಬಾರಿ ಶೂನ್ಯಕ್ಕೇ ಬಲಿ ತೆಗೆದುಕೊಂಡಿದ್ದರು.

ಅಮರ್‌ನಾಥ್‌ ಭಾರತೀಯ ಕ್ರಿಕೆಟ್‌‌ನ ರಾಜಕೀಯ ವ್ಯವಸ್ಥೆಯೊಂದಿಗಿನ ಘರ್ಷಣೆಗೂ ಹೆಸರುವಾಸಿ. ಅದರಲ್ಲೂ ಆಯ್ಕೆಗಾರರನ್ನು "ಕೋಡಂಗಿಗಳ ಗುಂಪು" ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. [೪]. ಇದು ಅವರ ಕ್ರೀಡಾ ಬದುಕಿನ ಮೇಲೆ ಅಗಾಧ ದುಷ್ಪರಿಣಾಮ ಬೀರಿತು. ಕ್ರಿಕೆಟ್‌ವಲಯದಲ್ಲಿ ಅವರನ್ನು ಮೂಲೆಗುಂಪು ಮಾಡುವ ಯತ್ನಗಳೂ ಆಗಾಗ್ಗೆ ನಡೆದವು.

ಬಾಹ್ಯ ಕೊಂಡಿಗಳು

ಬದಲಾಯಿಸಿ
 
ಮೊಹಿಂದರ್ ಅಮರನಾಥ್ ಅವರ ವೃತ್ತಿ ಜೀವನದ ಪ್ರದರ್ಶನದ ನಕ್ಷೆ.