ಮೈಸೂರು ಸೀತಾರಾಮಶಾಸ್ತ್ರಿ

ಮೈಸೂರು ಸೀತಾರಾಮಶಾಸ್ತ್ರಿ (ಅಕ್ಟೋಬರ್ ೨೬, ೧೮೬೮ - ಡಿಸೆಂಬರ್ ೨೦, ೧೯೩೩) ಕನ್ನಡ ಹಾಗೂ ಸಂಸ್ಕೃತದಲ್ಲಿ ಪ್ರಕಾಂಡ ಪಂಡಿತರಾಗಿ, ಸಾಹಿತಿಗಳಾಗಿ ಪ್ರಸಿದ್ಧರಾದವರು.

ಮೈಸೂರು ಸೀತಾರಾಮಶಾಸ್ತ್ರಿ
ಜನನಅಕ್ಟೋಬರ್ ೨೬, ೧೮೬೮
ಮೈಸೂರು
ಮರಣಡಿಸೆಂಬರ್ ೨೦, ೧೯೩೩
ವೃತ್ತಿಶಿಕ್ಷಕರು, ವಿದ್ವಾಂಸರು ಮತ್ತು ಸಾಹಿತಿ

ಸೀತಾರಾಮಶಾಸ್ತ್ರಿಗಳು ೧೮೬೮ರ ವರ್ಷದ ಅಕ್ಟೋಬರ್ ೨೬ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಗುಂಡಾವಧಾನಿಗಳು ಮತ್ತು ತಾಯಿ ಪಾರ್ವತಮ್ಮನವರು. ಅವರು ಹಳ್ಳದ ಕೇರಿ ಸೀತಾರಾಮಶಾಸ್ತ್ರಿಗಳೆಂದೇ ಪ್ರಸಿದ್ಧರು. ಕತ್ವಾಡಿಪುರ ಅಗ್ರಹಾರದ ಪಂಡಿತ ಚಂದ್ರಶೇಖರ ಶಾಸ್ತ್ರಿಗಳಲ್ಲಿ ಸಂಸ್ಕೃತ ಮತ್ತು ಕನ್ನಡಾಭ್ಯಾಸ ನಡೆಸಿದ ಸೀತಾರಾಮಶಾಸ್ತ್ರಿಗಳು ಮುಂದೆ ಮೈಸೂರಿನ ಸದ್ವಿದ್ಯಾ ಶಾಲೆಯಲ್ಲಿ ಉಪಾಧ್ಯಾಯರಾಗಿ ವೃತ್ತಿಜೀವನ ಪ್ರಾರಂಭ ಮಾಡಿದರು. ನಂತರದಲ್ಲಿ ಸರ್ಕಾರಿ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ಚನ್ನಪಟ್ಟಣ, ಕೋಲಾರ, ಮೈಸೂರು ಮುಂತಾದೆಡೆ ಸೇವೆ ಸಲ್ಲಿಸಿದ ಅವರು, ಕೊನೆಗೆ ಟ್ರೈನಿಂಗ್ ಕಾಲೇಜಿನ ಪ್ರಾಧ್ಯಾಪಕರಾಗಿ ನಿಯೋಜಿತರಾಗಿ ೧೯೨೯ರ ವರ್ಷದವರೆಗೆ ಸೇವೆ ಸಲ್ಲಿಸಿ ನಿವೃತ್ತಿಹೊಂದಿದರು.

ಶ್ರೇಷ್ಠ ಭಾಷಾಂತರಗಳು

ಬದಲಾಯಿಸಿ

ಸಂಸ್ಕೃತದಿಂದ ಹಲವಾರು ಗ್ರಂಥಗಳನ್ನು ಕನ್ನಡಕ್ಕೆ ತಂದ ಹೆಗ್ಗಳಿಕೆ ಸೀತಾರಾಮಶಾಸ್ತ್ರಿಗಳದು. ಭಾಸನ ಪ್ರತಿಮಾ ನಾಟಕ ಇವರ ಮೊದಲ ಅನುವಾದಿತ ಕೃತಿ. ಹೃದ್ಯವಾದ ಕಂದ ವೃತ್ತಗಳಿಂದ ಕೂಡಿರುವ ಈ ಕೃತಿ ಪಂಡಿತರಿಂದ ಪ್ರಶಂಸಿತಗೊಂಡಿದೆ. ಶಾಸ್ತ್ರಿಗಳು ವೇಣಿಸಂಹಾರ ನಾಟಕವನ್ನೂ ಪೂರ್ಣವಾಗಿ ಹಳಗನ್ನಡ ಗದ್ಯಪದ್ಯಗಳಲ್ಲಿ ಕನ್ನಡಿಸಿದರು. ಹಳೆಗನ್ನಡ ಛಂದೋಬಂಧ, ಭಾಷಾ ಪ್ರಯೋಗದ ಮೇಲೆ ಇವರಿಗಿದ್ದ ಪ್ರಭುತ್ವಕ್ಕೆ ಸಾಕ್ಷಿಯಾದ ಭಾಷಾಂತರ ಕೃತಿಯಿದು.

ನಾಟಕಗಳು

ಬದಲಾಯಿಸಿ

ಸೀತಾರಾಮಶಾಸ್ತ್ರಿಗಳು ರಚಿಸಿದ ನಾಟಕಗಳೆಂದರೆ ಇಂದ್ರಕೀಲ ವಿಜಯ, ಪ್ರಶ್ನೋತ್ತರ ಭಗವದ್ಗೀತಾ, ಪಾರ್ವತಿ ಪರಿಣಯ ಮುಂತಾದುವು.

ಕಾವ್ಯಗಳು

ಬದಲಾಯಿಸಿ

ಶಾಸ್ತ್ರಿಗಳ ಕಾವ್ಯ ಕೃತಿಗಳೂ ಅನೇಕವಾಗಿವೆ. ಕರ್ನಾಟಕ ಮಹೀಶೂರದೇಶಾಭ್ಯುದಯ, ಕರ್ಣಾಟ ಸ್ನುಷಾವಿಜಯ, ಕರ್ಣಾಟ ವಿಕ್ರಮಾರ್ಕ ಚರಿತಂ, ಕುಚೇಲೋಪಾಖ್ಯಾನ, ಕೃಷ್ಣಸಂಧಾನ, ಕೃಷ್ಣರಾಜ ವಂಶಾವಳಿ ವಿಜಯ, ಗೋಪಿಕಾಗೀತೆ, ಗಂಗಾ-ಶಂತನು ವಿಲಾಸ, ಚತುರ್ದಶ ಮಂಜರಿ, ಪದ್ಯ ಕದಂಬ, ಪಂಚತಂತ್ರ, ಪಂಚಲಿಂಗ ಸ್ತುತಿ, ಬಾಲರಾಮಾಯಣ, ಭಕ್ತವಿಜಯ (ಮಹಿಪತಿ ವಿರಚಿತ ಮರಾಠಿ ಗ್ರಂಥದ ಭಾಷಾಂತರ) ಭಜಗೋವಿಂದ ಸ್ತೋತ್ರ, ಭಾರತೋಪಾಖ್ಯಾನ, ಲಲಿತಾ ಸಹಸ್ರನಾಮ ಚಂದ್ರಿಕೆ, ಶಬ್ದ ಬೋನಿ, ಶಿವಾನಂದ ಲಹರಿ, ಸುಧಾಮ ಚರಿತ್ರೆ, ಸೂಕ್ತಿ ಮಂಜರಿ, ಸೂಕ್ತಿಮಾಲೆ, ಸೂಕ್ತಿ ತಾರಾವಳಿ, ಸಂಗೀತ ಸೂಕ್ತಿ ವಿಜಯ, ಹಾಲಾಖ್ಯೆ ಮಹಾತ್ಮ್ಯೆ. ಸಂಗ್ರಹ-ತರಂಗಿಣೀ, ನವರತ್ನ ದರ್ಪಣ, ಸಂಸ್ಕೃತದಲ್ಲಿ-ಕೃಷ್ಣೋವೇದಾಂತ ತರಂಗಿಣೀ, ಕೃಷ್ಣರಾಜ ವಂಶಾವಳಿ ವಿಜಯ, ಮೈಸೂರು ದೇಶಾಭ್ಯುದಯ, ಸೂಕ್ತಿ ಸುಧಾಮಂಜರಿ ಮುಂತಾದುವು.

ಪ್ರಶಸ್ತಿ ಗೌರವಗಳು

ಬದಲಾಯಿಸಿ

ಸೀತಾರಾಮಶಾಸ್ತ್ರಿಗಳಿಗೆ ಮೈಸೂರು ದೇಶಾಭ್ಯುದಯ ಪ್ರಬಂಧಕ್ಕೆ ಮಹಾರಾಜರಿಂದ ಗೌರವ ಸಂದಿತ್ತಲ್ಲದೆ, ಆಸ್ಥಾನ ವಿದ್ವಾನ್ ಗೌರವವೂ ಪ್ರಾಪ್ತವಾಗಿತ್ತು.

ಈ ಮಹಾನ್ ವಿದ್ವಾಂಸರು ಡಿಸೆಂಬರ್ ೨೦, ೧೯೩೩ರ ವರ್ಷದಲ್ಲಿ ಈ ಲೋಕವನ್ನಗಲಿದರು.

ಮಾಹಿತಿ ಕೃಪೆ

ಬದಲಾಯಿಸಿ

ಕಣಜ