ಮೆಣಸಿನಹಾಳ ತಿಮ್ಮನಗೌಡ

ಮೆಣಸಿನಹಾಳು ತಿಮ್ಮನಗೌಡನವರು ೧೯೧೧ ರ ಅಕ್ಟೋಬರ್ ೮ರಂದು ಧಾರವಾಡ ಜಿಲ್ಲೆಯ ಭಾಗವಾಗಿದ್ದ ಇಂದಿನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮೆಣಸಿನಹಾಳದಲ್ಲಿ ಶ್ರೀಮಂತ ಪಾಟೀಲ ಕುಟುಂಬ ಒಂದರಲ್ಲಿ ಜನಿಸಿದರು. ತಂದೆ ಹನುಮಗೌಡ ಹಾಗೂ ತಾಯಿ ನೀಲಮ್ಮರ ಪ್ರೀತಿಯ ಆಸರೆಯಲ್ಲಿ ಬೆಳೆದರು. ತರುಣ ತಿಮ್ಮನಗೌಡರನ್ನು ಹಾಲಪ್ಪಗೌಡ ಎಂಬ ಶ್ರೀಮಂತರು ದತ್ತುಪುತ್ರನನ್ನಾಗಿ ಅಂಗೀಕರಿಸಿದರು.

ಮೆಣಸಿನಹಾಳು ತಿಮ್ಮನಗೌಡ
Timmanagowdapatil.jpg
Alternate name(s): ಮೆಣಸಿನಹಾಳು ತಿಮ್ಮನಗೌಡ
Date of birth: 10 ಅಕ್ಟೋಬರ್ 1911
Place of birth: ಮೆಣಸಿನಹಾಳ, ರಾಣೆಬೆನ್ನೂರು , ಹಾವೇರಿ
Date of death: 1943 ಫೆಬ್ರವರಿ 10
Place of death: ಕರ್ನಾಟಕ,
Movement: ಭಾರತೀಯ ಸ್ವಾತಂತ್ರ್ಯ ಆಂದೋಲನ
Religion: ಹಿಂದೂ ಧರ್ಮ

ಶಿಕ್ಷಣ ಬದಲಾಯಿಸಿ

7ನೇ ತರಗತಿವರೆಗೆ ಓದಿದ. ಗರಡಿಮನೆ, ಮಲ್ಲಕಂಭದನಂಟು ಬೆಳೆಸಿಕೊಂಡಿದ್ದ ಈತ ಕುಸ್ತಿಯಲ್ಲೂ ಪಳಗಿ ಗಟ್ಟಿಮುಟ್ಟಾದ ದೇಹ ಬೆಳೆಸಿದ್ದರು.

ವೈವಾಹಿಕ ಜೀವನ ಬದಲಾಯಿಸಿ

1932ರಲ್ಲಿ ತರುಣ ತಿಮ್ಮನಗೌಡರನ್ನು ಹಾಲಪ್ಪಗೌಡ ಎಂಬ ಶ್ರೀಮಂತರು ದತ್ತುಪುತ್ರನನ್ನಾಗಿ ಅಂಗೀಕರಿಸಿದರು. ಕೆಲದಿನಗಳಲ್ಲೇ ಅವರ ವಿವಾಹವೂ ನೆರವೇರಿತು. ತಿಮ್ಮನಗೌಡರು ಎರಡು ಮಕ್ಕಳ ತಂದೆಯೂ ಆದರು.

ವಿಧಾಯಕ ಕಾರ್ಯಕ್ರಮ ಬದಲಾಯಿಸಿ

ಒಮ್ಮೆ ಬ್ಯಾಡಗಿಗೆ ಸುಭಾಷಚಂದ್ರ ಬೋಸರು ಬಂದಾಗ, ಸ್ವಾತಂತ್ರ್ಯ ಹೋರಾಟದ ಅವರ ಭಾಷಣ ಕೇಳಿ, ತ್ಯಾಗ ಮತ್ತು ಬಲಿದಾನದ ದೀಕ್ಷೆತೊಟ್ಟು, ಓದಿಗೆ ಶರಣುಹೊಡೆದು, ತನ್ನ 21ರ ವಯಸ್ಸಿನಲ್ಲೇ ಕಾನೂನು ಭಂಗ ಚಳುವಳಿಗೆ ಧುಮುಕಿದರು.1932ರ ಜನೆವರಿಯಲ್ಲಿ ಹಿರೇಕೆರೂರು ತಾಲೂಕಿನ ನಾಗವಂದ ಬಳಿಯ ಹಾರಿಕಟ್ಟಿ ಜಂಗಲ್ ನಾಶ ಮಾಡುವ ಕೆಲಸದಲ್ಲಿ 300 ಚಳುವಳಿಗಾರರಲ್ಲಿ ಒಬ್ಬರಾಗಿ ಬಂದಿಯಾದ ತಿಮ್ಮನಗೌಡ, ಎರಡು ವರ್ಷಕಾಲ ಯರವಡಾ ಜೈಲಿನಲ್ಲಿದ್ದು, ಜೈಲಿನಲ್ಲಿ ಚರಖಾದಿಂದ ನೂಲು ತೆಗೆಯುವುದನ್ನು ಮತ್ತು ಉತ್ತರ ಭಾರತದ ಚಳುವಳಿಗಾರರಿಂದ ಹಿಂದಿ ಭಾಷೆಯನ್ನು ಕಲಿತರು. ಜೈಲಿನಿಂದ ಬಿಡುಗಡೆಯಾಗಿ ಬಂದ ತಿಮ್ಮನಗೌಡರಿಗೆ, ತಾಯ್ನಾಡಿನಲ್ಲಿ ಭಾವ್ಯ ಸ್ವಾಗತವೇ ದೊರೆಯಿತು. ಗಾಂಧೀಜಿಯವರ ಹೋರಾಟದ ಜತೆಗೆ ವಿಧಾಯಕ ಕಾರ್ಯಗಳ ಮೂಲಕ ಸಮಾಜ ಪರಿವರ್ತನೆಯ ವಿಚಾರನ್ನೂ ತಿಳಿದುಕೊಂಡಿದ್ದ ತರುಣ ತಿಮ್ಮನಗೌಡ, ತಮ್ಮ ಊರಿನ ಭಾವಿಯಿಂದ ನೀರು ಪಡೆಯಲು ಹರಿಜನರಿಗೆ ಅವಕಾಶ ಕಲ್ಪಿಸಿದ್ದಲ್ಲದೆ, ದೇವಸ್ಥಾನ ಪ್ರವೇಶಕ್ಕೂ ದಾರಿಮಾಡಿಕೊಟ್ಟರು. ಅವರ ಈ ಪ್ರಯತ್ನಕ್ಕೆ ಊರೇ ಸೈ ಎಂದಿತು..

ಸತ್ಯಾಗ್ರಹ ಮತ್ತು ಇತರ ಕಾರ್ಯಕ್ರಮಗಳು ಬದಲಾಯಿಸಿ

              ‘ಭಾರತ ಬಿಟ್ಟು ತೊಲಗಿ’ ಅಂದೋಲನಕ್ಕೆ ಚಾಲನೆ..
              ರಟ್ಟೀಹಳ್ಳಿಯಲ್ಲಿ ಪೊಲೀಸ್ ಠಾಣೆಯಿಂದ ಐದು ಐದು ಬಂದೂಕುಗಳನ್ನು ಅಪಹರಣ.
              ಬಸ್ಸಿನಿಂದ ಟಪಾಲು ಅಪಹರಣ ಮತ್ತು ನಾಶ.


ಪೂರ್ಣ ಸಾರಾಂಶ ಬದಲಾಯಿಸಿ

ಸ್ವಾತಂತ್ರ್ಯ ಹೋರಾಟದ ಕಾವು ಮತ್ತೆ ಏರತೊಡಗಿತು. ಗಾಂಧೀಜಿಯವರು ಅಸಹಕಾರಕ್ಕೆ ಬದಲಾಗಿ ಈ ಬಾರಿ ಬ್ರಿಟಿಷರಿಗೆ ‘ಭಾರತ ಬಿಟ್ಟು ತೊಲಗಿ’ ಎಂಬ ಅಂದೋಲನಕ್ಕೆ ಚಾಲನೆ ನೀಡಿದರು. ಹೋಟಕ್ಕಾಗಿ ಹಪಹಪಿಸುತ್ತಿದ್ದ ತಿಮ್ಮನಗೌಡರು, ತಕ್ಷಣವೇ ತರುಣರ ಗುಂಪು ಕಟ್ಟಿಕೊಂಡು ಚಳುವಳಿಗೆ ಮುಂದಾಗಿಯೇ ಬಿಟ್ಟರು. ಇದನ್ನರಿತ ಬ್ರಿಟಿಷ ಅಧಿಕಾರಿಗಳು ಇವರನ್ನು ಬಂಧಿಸಲು ಹೊಂಚುಹಾಕಿದರು. ಆದರೆ, ತಿಮ್ಮನಗೌಡರು ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾದರು. ಅಲ್ಲಿಂದ ತುಮ್ಮಿನಕಟ್ಟಿಯಲ್ಲಿ ಸಂಗೂರ ಕರಿಯಪ್ಪ ಅವರ ತಂಡದ ಜತೆಗೆ ಚರ್ಚಿಸಿ, ನಂತರ ಕರಿಯಪ್ಪ ಅವರ ಸಲಹೆಯ ಮೇರೆಗೆ ತಿಮ್ಮನಗೌಡರು ಸಶಸ್ತ್ರ ಹೋರಾಟ ಮತ್ತು ದೇಶಕ್ಕಾಗಿ ಯಾವುದೇ ತ್ಯಾಗಕ್ಕೆ ಸಿದ್ಧರಾದರು. ಈ ಹೊತ್ತಿಗಾಗಲೇ ಬ್ರಿಟಿಷರು ತಿಮ್ಮನಗೌಡರ ಮೇಲೆ ವಾರಂಟ್ ಜಾರಿಮಾಡಿದ್ದರು. ತಿಮ್ಮನಗೌಡರು, ರಾತ್ರಿ ಹೊತ್ತು ತಮ್ಮ ಊರಿಗೆ ಹೋಗಿ, ತಮ್ಮ ಕಡೆಯಿಂದ ಬಡವರು ಪಡೆದಿದ್ದ ಬಡ್ಡಿ ಸಾಲವನ್ನು ಮನ್ನಾಮಾಡಿ, ಸಾಲಪತ್ರ ಹರಿದುಹಾಕಿದರಲ್ಲದೆ, ತಮ್ಮ ಹಿರಿಯರು ಒತ್ತೆ ಇರಿಸಿಕೊಂಡಿದ್ದ ಚಿನ್ನಾಭರಣಗಳನ್ನು ಬಡವರಿಗೆ ಹಿಂದಿರುಗಿಸಿದರು. ತಾಯಿ ಮತ್ತು ಹೆಂಡತಿಗೆ ಮನೆಯ ಜವಾಬ್ದಾರಿ ವಹಿಸಿಕೊಟ್ಟು, ಅಂದೇ ರಾತ್ರಿ ಕಡೂರಿಗೆ ಪ್ರಯಾಣ ಬೆಳೆಸಿದರು. ಅಲ್ಲಿಂದೀಚೆಗೆ ತಿಮ್ಮನಗೌಡರ ಹೋರಾಟ ಏರುಗತಿಯಲ್ಲಿ ಸಾಗಿತು. ಕಡೂರಿಲ್ಲಿ ಕಂದಾಯ ಲೂಟಿ ಮಾಡಿ, ಚಾವಡಿಗೆ ಬೆಂಕಿ ಹಚ್ಚಿ ಪರಾರಿಯಾದ ಅವರು, ರಟ್ಟೀಹಳ್ಳಿಯಲ್ಲಿ ಪೊಲೀಸ್ ಠಾಣೆಯಿಂದ ಐದು ಐದು ಬಂದೂಕುಗಳನ್ನು ಅಪಹರಿಸಿ, ನಾಗವಂದಕ್ಕೆ ಬಂದರು. ಇದರ ಸುಳಿವರಿತ ಪೊಲೀಸರು, ಅವರು ಅವಿತಿದ್ದ ಬಣಕಾರರ ಮನೆಗೆ ಮುತ್ತಿಗೆ ಹಾಕಿದರು. ಆದರೆ ಸೀರೆಯುಟ್ಟು ಒಲೆಯ ಮುಂದೆ ರೊಟ್ಟಿ ತಟ್ಟುತ್ತ ಕುಳಿತಿದ್ದ ತಿಮ್ಮನಗೌಡರನ್ನು ಪೊಲೀಸರು ಗುರುತಿಸದೇಹೋದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ತಿಮ್ಮನಗೌಡರು ಮುಸ್ಲಿಂ ಮಹಿಳೆಯಂತೆ ಬುರ್ಖಾಧರಿಸಿದ್ದು, ಫತ್ತೇಪೂರದಲ್ಲಿ ದೊಡ್ಡಾಟದ ತಾಲೀಮು ಮನೆಯಲ್ಲಿ ಸ್ತ್ರೀ ವೇಷಧಾರಿಯಾಗಿ ತಾಲೀಮು ಮಾಡಿ ಪಾರಾದದ್ದು ಇವರ ಜಾಣ್ಮೆಗೆ ಕನ್ನಡಿಯಂತಿತ್ತು. ಇವರನ್ನು ಹೇಗಾದರೂ ಮಾಡಿ ಹಿಡಿಯಲೇ ಬೇಕೆಂದು ಬ್ರಿಟಿಷರು ಆಸ್ಟ್ರೇಲಿಯನ್ ಸೈನಿಕರ ತಂಡವನ್ನು ತುಮ್ಮಿನಕಟ್ಟಿ- ಮೆಣಸಿಹಾಳದ ಮುತ್ತಿಗೆ ಹಾಕಲು ಕಳಿಸಿದ್ದೂ ಪ್ರಯೋಜನಕ್ಕೆ ಬರಲಿಲ್ಲ. ಕೊನೆಯ ಅಸ್ತವಾಗಿ ಪೊಲೀಸರು ತಿಮ್ಮನಗೌಡರ ತಾಯಿ ಮತ್ತು ಹೆಂಡತಿಯನ್ನು 4 ದಿನ ಜೈಲಿನಲ್ಲಿಟ್ಟರು. ಅವರೂ ಸಹ ತಿಮ್ಮನಗೌಡರ ಇರುವಿಕೆಯ ಸುಳಿವು ನೀಡಲಿಲ್ಲ. ಕ್ವಿಟ್ ಇಂಡಿಯಾ ಚಳುವಳಿ ತೀವ್ರಗೊಂಡಂತೆಲ್ಲ, ಹಾವೇರಿ ಭಾಗದ ನಾಲ್ಕು ಹೋರಾಟಗಾರರ ತಂಡಗಳು ಮತ್ತೊಮ್ಮೆ ಬ್ಯಾಡಗಿ-ಹಿರೇಕೆರೂರು ಮಧ್ಯದ ಬಿದರಕಟ್ಟಿ ಬಳಿ ಸೇರಿ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಿದರಲ್ಲದೆ, ಅದೇ ದಿನ ಹಿರೇಕೆರೂರಿಗೆ ಹೋಗುವ ಬಸ್ಸಿನಿಂದ ಟಪಾಲು ಅಪಹರಣಮಾಡಿ ಸುಟ್ಟರು. ತಿಮ್ಮನಗೌಡರು ತಮ್ಮ ತಂಡದೊಂದಿಗೆ ಅಲ್ಲಿಂದ ಮೈಸೂರು ಪ್ರಾಂತ್ಯದತ್ತ ಹೊರಟರು. ದಾರಿಯಲ್ಲಿ ಕಾಗಿನೆಲ್ಲಿ, ತಡಸ ಹಾಗೂ ಹೊಮ್ಮರಡಿ ಚಾವಡಿ ಹಾಗೂ ಸರಕಾರೀ ಕಾಗದಪತ್ರಗಳನ್ನು ಸುಟ್ಟುಹಾಕಿದರು. ಬೆಳಗುತ್ತಿಯಿಂದ ನ್ಯಾಮತಿಗೆ ಹೊರಟಿದ್ದ ಬಸ್ ತಡೆದು ಟಪಾಲು ಅಪಹರಿಸಿದ್ದಲ್ಲದೆ ಜೀನಹಳ್ಳಿಯಲ್ಲೂ ಟಪಾಲು ಅಪಹರಿಸಿದರು. ಗುಡ್ಡದ ಮಾದಾಪುರ ಅರಣ್ಯ ಕಚೇರಿಯಿಂದ ನಾಲ್ಕು ಬಂದುಕು ಅಪಹರಿಸಿ, ಕಚೇರಿಗೆ ಬೆಂಕಿಯಿಟ್ಟರು. ಮುಂದೆ, ರಾಣೇಬೆನ್ನೂರಿನಿಂದ ಪೊಲೀಸ್ ಕಾವಲಿನಲ್ಲಿ ತಿಮ್ಮಿನಕಟ್ಟಿಗೆ ಬರುತ್ತಿದ್ದ ಟಪಾಲು ಬಸ್ಸನ್ನು ಬಡಸಂಗಾಪುರಬಳಿ ತರುಬಿ, ಟಪಾಲು ಅಪಹರಿಸಿದರಲ್ಲದೆ, ದೌರ್ಜನ್ಯ ಎಸಗುತ್ತಿದ್ದ ಪೊಲೀಸರ ಕ್ವಾರ್ಟಸ್‌ಗೆ ಬೆಂಕಿಹಚ್ಚಿದರು. ಇದಾದನಂತರ, ದಾವಣಗೆರೆ ಪೊಲೀಸ್ ಸ್ಟೇಶನ್ ಲೂಟಿ ಮಾಡಿದ್ದಲ್ಲದೆ ಹೊನ್ನಾಳಿ ಪೊಲೀಸ್ ಸ್ಟೇಶನ್ ನಾಶಮಾಡಿದರು. ತಿಮ್ಮನಗೌಡರ ಈ ಉಪಟಳದಿಂದ ರೋಸಿಹೋದ ಜಿಲ್ಲಾ ಕಲೆಕ್ಟರ್, ತಿಮ್ಮನಗೌಡರನ್ನು ಹಿಡಿದು ಕೊಟ್ಟವರಿಗೆ ಅಥವಾ ಹೆಣ ತಂದುಕೊಟ್ಟವರಿಗೆ 2 ಸಾವಿರ ರೂ. ಬಹುಮಾನ ಘೋಷಿಸಿದ್ದಲ್ಲದೆ, ಕಂಡಲ್ಲಿ ಗುಂಡಿಕ್ಕಲು ಆದೇಶಿಸಿದರು. ಇದಲ್ಲದೆ, ಅವರ 80 ಎಕರೆ ಜಮೀನಿನ ಪೀಕಿನ ಮುಟ್ಟುಗೋಲಿಗೆ ಆದೇಶಿಸಿದರು. ಈ ವಿಷಯಗೊತ್ತಾಗುತ್ತಿದ್ದಂತೆಯೇ ತಿಮ್ಮನಗೌಡರು, ತಮ್ಮ 40 ಎಕರೆ ಹೊಲದಲ್ಲಿ ಬಿಳಿಜೋಳ ಮತ್ತು 40 ಎಕರೆಯಲ್ಲಿದ್ದ ಹತ್ತಿಯನ್ನು ಹಳ್ಳಿಗರು ತೆಗೆದುಕೊಂಡು ಹೋಗುವಂತೆ ಯೋಜನೆ ಮಾಡಿ, ತಮ್ಮ ಪೀಕು ಸರಕಾರದಿಂದ ಮುಟ್ಟುಗೋಲಾಗದೇ ಜನರಿಗೆ ಸಲ್ಲುವಂತೆ ಮಾಡಿದರು. ಇದಾದನಂತರ ತಿಮ್ಮನಗೌಡರು ಸಂಗೂರ ಕರಿಯಪ್ಪ ಅವರೊಂದಿಗೆ ಸೇರಿಕೊಂಡು, ಹಾನಗಲ್ ಡಾಕ್‌ಬಂಗ್ಲೋಗೆ ಬೆಂಕಿ ಹಚ್ಚಿ ಪರಾರಿಯಾದರು. ಹಾವೇರಿ ಭಾಗದ ನಾಲ್ಕೂ ತಂಡಗಳು ಯೋಜಿಸಿದಂತೆ ಬ್ಯಾಡಗಿ ರೈಲ್ವೆಸ್ಟೇಶನ್ ಸುಡುವಲ್ಲಿ ಯಶಶ್ವಿಯಾದವು. ಆದರೆ, ಸಂಗೂರ ಕರಿಯಪ್ಪ ಅವರು ಸುಣಕಲ್ಲ ಬಿದರಿಯಲ್ಲಿ ನೆಲದಲ್ಲಿ ಹುದುಗಿಸಿಟ್ಟಿದ್ದ ಕೈಬಾಂಬ್ ಸ್ಫೋಟಗೊಂಡು ಬಲಗೈ ಕಳೆದುಕೊಂಡಿದ್ದರಿಂದ ಇವರ ಸಂಘಟಿತ ಹೋರಾಟಕ್ಕೆ ಕೊಂಚ ಹಿನ್ನಡೆಯಾಯಿತು. ಆದರೂ ಎಂದಿನಂತೆ ತಿಮ್ಮನಗೌಡರು ತಮ್ಮ ಚಟುವಟಿಕೆ ಮುಂದುವರಿಸಿದ್ದರು.

ಜೀವನದ ಕೊನೆಯ ದಿನ ಬದಲಾಯಿಸಿ

1943ರ ಫೆಬ್ರವರಿ 10, ತಿಮ್ಮನಗೌಡರಿಗೆ ಕರಾಳದಿನವಾಯಿತು. ಅಂದು ರಾತ್ರಿ ಕುಪ್ಪೇಲೂರ ಚಾವಡಿಯಲ್ಲಿ ಹಫ್ತೇಹಣ ಲೂಟಿಮಾಡುವ ಕಾರ್ಯಕ್ರಮ ಅವರದಾಗಿತ್ತು. ಅಂದು ರಾತ್ರಿ 10ರ ಹೊತ್ತಿಗೆ ತಿಮ್ಮನಗೌಡರು ತಮ್ಮ ತಂಡದೊಂದಿಗೆ ಚಾವಡಿಗೆ ಆಗಮಿಸಿದರು. ಕಂದಾಯ ಅಧಿಕಾರಿಗಳು ಅಷ್ಟೊತ್ತಿಗಾಗಲೇ ಹಫ್ತೇಕರವನ್ನು ಕೊಣೆಯಲ್ಲಿಟ್ಟು ಬೀಗ ಹಾಕಿದ್ದರು. ತಿಮ್ಮನಗೌಡರ ತಂಡ ಹಠಾತ್ತನೇ ಚಾವಡಿಗೆ ನುಗ್ಗಿತು. ತಿಮ್ಮನಗೌಡರು ಕೋಣೆಯ ಬೀಗ ಒಡೆಯಲು ಮುಂದಾಗುತ್ತಿದ್ದಂತೆ ಅವರಿಗೂ ಪೊಲೀಸರಿಗೂ ಘರ್ಷಣೆ ಆರಂಭವಾಯಿತು. ದುರದೃಷ್ಟವೆಂದರೆ, ಈ ಘರ್ಷಣೆ ಕಾಲಕ್ಕೆ ತಿಮ್ಮನಗೌಡರ ಹೆಗಲಿನಲ್ಲಿದ್ದ ಚೀಲದಲ್ಲಿನ ಕೈಬಾಂಬ್ ಸ್ಫೋಟಗೊಂಡಿತು. ಇದರಿಂದ ಅವರ ಎಡಗೈ ಹಾಗೂ ತೊಡೆ ಮತ್ತಿತರೆಡೆ ದೊಡ್ಡ ಗಾಯಗಳಾಗಿ ರಕ್ತದ ಕೋಡಿ ಹರಿಯಲಾರಂಬಿಸಿತು. ಈ ಅಚಾತುಯರ್ಯವಾಗುತ್ತಿದ್ದಂತೆ ತಂಡ ಅಲ್ಲಿಂದ ತಪ್ಪಿಸಿಕೊಂಡು, ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ತಿಮ್ಮನಗೌಡರನ್ನು ದಾಖಲಿಸಿತು. ಆದರೆ, ವಿಪರೀತ ರಕ್ತಸ್ರಾವದಿಂದ ಅವರು ಬದುಕುಳಿಯವುದು ಅಸಾಧ್ಯವೆನ್ನಿಸಿದ ನಂತರ ಮೆಣಸಿನ ಹಾಳಕ್ಕೆ ತರುವ ಮಾರ್ಗದಲ್ಲೇ ತಿಮ್ಮನಗೌಡರು ವಿಧಿವಶವಾದರು. ಹೋರಾಟಗಾರರ ತಂಡ ಅವರ ಪಾರ್ಥಿವ ಶರೀರವನ್ನು ತಂದು ಅವರ ಮನೆಯ ಕಟ್ಟೆಯಮೇಲಿರಿಸಿ ಪರಾರಿಯಾಯಿತು. ತನ್ನ ಚಾಕಚಕ್ಯತೆಯಿಂದ ಮಿಡಿನಾಗರದಂತೆ ಮಿಂಚಿನಿಂದ ಓಡಿ ಮರೆಯಾಗಿ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ತಿಮ್ಮನಗೌಡ, ಇತಿಹಾಸವಾದರು. ಅವರ ಪಾರ್ಥಿವಶರೀರ ರಾಣೇಬೆನ್ನೂರಿನ ನ್ಯಾಯಾಲಯ ಹಿಂಭಾಗದ ರುದ್ರಭೂಮಿಯಲ್ಲಿ ಪವಡಿಸಿತು. ಇಡೀನಾಡಿಗೆ ನಾಡೇ, ದೇಶಕ್ಕೆ ದೇಶವೇ ಈ ಹೋರಾಟಗಾರನಿಗಾಗಿ ಕಂಬಿನಿ ಮಿಡಿಯಿತು. ಶ್ರೀಮಂತ ಮನೆತನದಲ್ಲಿ ಹುಟ್ಟಿ, ಏನೆಲ್ಲಾ ಸುಖ ಅನುಭವಿಸಬಹುದಾಗಿದ್ದ ತಿಮ್ಮನಗೌಡರು ದೇಶಕ್ಕಾಗಿ ಹೋರಾಡಿ ಅಮರರಾದರು.

ಗೌರವ ಬದಲಾಯಿಸಿ

ಇದೀಗ ರಾಣೇಬೆನ್ನೂರಿನ ಮಿನಿವಿಧಾನಸೌಧದೆದುರು ಅವರ ಆಳೆತ್ತರದ ಕಂಚಿನ ಮೂರ್ತಿ ಸ್ಥಾಪನೆಯಾಗಿದೆ. ತ್ಯಾಗ, ಬಲಿದಾನವನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೆ ಸಾರುವ ಈ ಮೂರ್ತಿ,ಅವರ ಜನ್ಮಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಉದ್ಘಾಟನೆಯಾಗುತ್ತಿರುವುದು,ಈ ಸ್ವಾತಂತ್ರ್ಯ ಹೋರಾಟಗಾರನಿಗೆ ಸರ್ಕಾರ ಮತ್ತು ಸಮಾಜ ಸಲ್ಲಿಸುತ್ತಿರುವ ಗೌರವ ಎಂದರೆ ತಪ್ಪಾಗದು.

https://kn.wikipedia.org/wiki/ಮೆಣಸಿನಹಾಳ_ತಿಮ್ಮನಗೌಡ.jpg[ಶಾಶ್ವತವಾಗಿ ಮಡಿದ ಕೊಂಡಿ]