ಮೆಟ್ರೊನೋಮ್ ಸಕ್ರಮಗೊಳಿಸಬಲ್ಲ ಗತಿಯಲ್ಲಿ, ಪುನರಾವರ್ತಿತ ಟಿಕ್ ಟಿಕ್ ಎಂದು ಶಬ್ದವನ್ನು ಉಂಟುಮಾಡುವ, ಯಾಂತ್ರಿಕ ಇಲ್ಲವೆ ವಿದ್ಯುದುಪಕರಣ. ಇದು ಲೋಲಕದಂತೆ ಇದೆ. ಮೆಟ್ರೋನ್ (ಎಂದರೆ ಮಾಪನ) ಮತ್ತು ನೋಮೋಸ್ (ಎಂದರೆ ನಿಯಮ) ಎಂಬ ಗ್ರೀಕ್ ಶಬ್ದಗಳಿಂದ ಕೂಡಿ ಆಗಿರುವ ಸಂಯುಕ್ತಪದ ಮೆಟ್ರೊನೋಮ್.[][][] ಇದನ್ನು ಜರ್ಮನಿಯ ಯೋಹಾನ್ ಮ್ಯಾಲ್ಜೆಲ್ ಎಂಬವ ಉಪಜ್ಞಿಸಿದ (1816). ಇದರಲ್ಲಿಯ ಲೋಲಕವನ್ನು ತಿರುಗಣಿಯ ಮೇಲೆ ಅಳವಡಿಸಲಾಗಿದೆ. ಲೋಲಕಕ್ಕೆ ಸೇರಿದಂತೆ, ಅದರ ಮೇಲೆ ಮತ್ತು ಕೆಳಗೆ ಎರಡು ತೂಕಗಳಿರುತ್ತವೆ. ಕೆಳಗಿನ ತೂಕ ಸ್ಥಿರವಾಗಿದ್ದು ಮೇಲಿನದು ಶಲಾಕೆಯ ಉದ್ದಕ್ಕೂ ಚಲಿಸುವಂತಿರುತ್ತದೆ. ಮೇಲಿನ ತೂಕವನ್ನು ವಿವಿಧ ಸ್ಥಾನಗಳಲ್ಲಿ ಅಳವಡಿಸಬಹುದಲ್ಲದೆ ಒಂದು ಮಿನಿಟಿನಲ್ಲಿ ಇಂತಿಷ್ಟು ಸಲ ಅದು ಆಂದೋಲಿಸುವಂತೆ ಮಾಡುವುದು ಸಹ ಸಾಧ್ಯ. ಅದೇ ಕಾಲದಲ್ಲಿ ನಿಕೊಲಾಸ್ ವಿಂಕಲ್ ಎಂಬವ ದ್ವಿಲೋಲಕವನ್ನು (ಡಬಲ್ ಪೆಂಡುಲಮ್) ಉಪಜ್ಞಿಸಿದ್ದ. ಇದು ಮ್ಯಾಲ್ಜೆಲನ ಲೋಲಕಕ್ಕಿಂತಲೂ ಉತ್ಕೃಷ್ಟವಾಗಿತ್ತು. ಮ್ಯಾಲ್ಜೆಲ್ ತನ್ನ ಮೆಟ್ರೊನೋಮಿನಲ್ಲಿ ವಿಂಕಲನ ತತ್ತ್ವವನ್ನು ಅಳವಡಿಸಲು ಆತನ ಅನುಮತಿ ಕೇಳಿದ್ದ. ಆದರೆ ವಿಂಕಲ್ ತನ್ನ ಉಪಜ್ಞೆಯ ಸ್ವಾಮ್ಯವನ್ನು ಮಾರಲೊಪ್ಪಲಿಲ್ಲ. ಮ್ಯಾಲ್ಜೆಲ್ ವಿಂಕೆಲನ ಉಪಜ್ಞೆಯ ತತ್ತ್ವವನ್ನು ಬಳಸಿ ತನ್ಮೂಲಕ ತನ್ನ ಉಪಕರಣವನ್ನು ಸುಧಾರಿಸಿದ.[] ಲೋಲಕದ ಮೇಲೆ ಮಾನಕವನ್ನು ಹೊಂದಿಸಿದನಲ್ಲದೆ ಅದರ ನಿಖರತೆಯನ್ನೂ ಹೆಚ್ಚಿಸಿದ. ಹೀಗಾಗಿ ಮೆಟ್ರೋನೋಮಿನ ಉಪಜ್ಞೆಕಾರರು ಯಾರು ಎಂಬ ವಿಚಾರದಲ್ಲಿ ವಾದವಿವಾದಗಳು ಉಂಟಾದವು. ಇದನ್ನು ಪರಿಹರಿಸಲು ಹಾಲಂಡಿನಲ್ಲಿ ಒಂದು ಆಯೋಗವನ್ನೇ ನೇಮಿಸಲಾಯಿತು. ಅದರ ತೀರ್ಪು ವಿಂಕೆಲ್‌ನ ಪರವಾಗಿದ್ದರೂ ಅದು ಹೊರಬರುವದರೊಳಗಾಗಿ ವಿಂಕೆಲ್ ತೀರಿ ಹೋಗಿದ್ದ. ಅಷ್ಟರಲ್ಲಿ ಮ್ಯಾಲ್ಜೆಲನೇ ಮೆಟ್ರೊನೋಮಿನ ಉಪಜ್ಞೆಕಾರನೆಂದು ಪ್ರಸಿದ್ಧಿ ಹೊಂದಿದ.

ಸುತ್ತುವ ಯಾಂತ್ರಿಕ ಮೆಟ್ರೊನೋಮ್

ಸಂಗೀತ ಶಾಸ್ತ್ರಾಭ್ಯಾಸದಲ್ಲಿ ಇದನ್ನು ಸ್ವರಸಂಯೋಜನೆಯ ತಾಳಗತಿ ಉಪಕರಣವಾಗಿ ಬಳಸುತ್ತಾರೆ. ಯಾವುದೇ ನಿರ್ದಿಷ್ಟ ಕಾಲಾವಧಿಯಲ್ಲಿ ಉಂಟು ಮಾಡಬೇಕಾದ ತುಡಿತಗಳ (ಬೀಟ್ಸ್) ಸಂಖ್ಯೆಯನ್ನು ಮೆಟ್ರೊನೋಮಿನ ಸಹಾಯದಿಂದ ನಿಯಂತ್ರಣಮಾಡಬಹುದು. ಇವನ್ನು MM (ಮ್ಯಾಲ್ಜೆಲ್ ಮೆಟ್ರೊನೋಮ್) ಸಂಕೇತದಿಂದ ಸೂಚಿಸಲಾಗುತ್ತದೆ. ವಿದ್ಯುತ್ತಿನಿಂದ ಕೆಲಸ ಮಾಡುವ ವಿದ್ಯುನ್ಮೆಟ್ರೊನೋಮ್ 1938ರಲ್ಲಿ ಪೇಟೆಗೆ ಬಂತು. ಇದರಲ್ಲಿ ಲೋಲಕಕ್ಕೆ ಬದಲಾಗಿ ವಿದ್ಯುತ್ಪ್ರವಾಹದ ಬಳಕೆ ಇದೆ. ಟ್ರಾನ್ಸಿಸ್ಟರ್ ಇರುವ ಮೆಟ್ರೊನೋಮ್‌ಗಳೂ ಬಳಕೆಯಲ್ಲಿವೆ. ಟ್ರಾನ್ಸಿಸ್ಟರ್ ಮೆಟ್ರೊನೋಮನ್ನು ಫೋಟೊಗ್ರಾಫಿಕ್ ವಿಶ್ಲೇಷಣೆಯಲ್ಲೂ ಬಳಸುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. "metron". perseus.tufts.edu. Perseus Digital Library (Greek Word Study Tool). Archived from the original on 2022-02-25. Retrieved 2022-02-25.
  2. "nomo". perseus.tufts.edu. Perseus Digital Library (Greek Word Study Tool). Retrieved 2022-02-25.
  3. "metronome". Merriam-Webster Dictionary. Retrieved 2022-02-25.
  4. The Metronome; The Harmonicon, Volume 8, 1830

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: