ಮೆಕ್ಕಿಕಟ್ಟೆ

(ಮೆಕ್ಕೆಕಟ್ಟೆ ಇಂದ ಪುನರ್ನಿರ್ದೇಶಿತ)

ಮೆಕ್ಕೆಕಟ್ಟೆ ಸಿರಿ, ಶ್ರೀನಂದಿಕೇಶ್ವರ ದೇವಸ್ಥಾನ ಅರಾಧನೆಯ ಸ್ಥಳ. ಇದು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ತಾಲ್ಲೂಕಿನ ಶಿರಿಯಾರ್ ಗ್ರಾಮದಲ್ಲಿರುವ ಒಂದು ಸ್ಥಳ. ಉಡುಪಿಯಿಂದ 28ಕಿಮೀ ದೂರದಲ್ಲಿ ಬಾರಕೂರಿನಿಂದ 8 ಕಿಮೀ ಉತ್ತರಕ್ಕಿದೆ.

ಇತಿಹಾಸ

ಬದಲಾಯಿಸಿ

ಪ್ರಾಚೀನ ಕಾಷ್ಠಶಿಲ್ಪಗಳ ಅಪೂರ್ವ ಸಂಗ್ರಹದಿಂದ ಈ ಸ್ಥಳ ಪ್ರಸಿದ್ಧವಾಗಿದೆ. 60 ಸೆಂ ಮೀ ನಿಂದ 600 ಸೆಂಮೀ ಎತ್ತರದ ಬಣ್ಣಬಣ್ಣದ ವಿಶೇಷ ಲಕ್ಷಣರೂಪಗಳ ತುಳುನಾಡಿನ ದೈವಗಳ 170 ಮರದ ಉರುಗಳಿವೆ. ಉರುಗಳೆಂದರೆ ಅವು ದೈವಿಸ್ವರೂಪಿ ಬೊಂಬೆಗಳು, ಇವು ಮರದ ಮೂರ್ತಿಗಳು . ಉರುಗಳು ಎಂದು ಕೆರೆಯುವ ಈ ಕಾಷ್ಠಶಿಲ್ಪಗಳು ನೋಡುವವರ ಮನಸ್ಸಿನಲ್ಲಿ ಭಯಭಕ್ತಿಗಳನ್ನು ಮೂಡಿಸುತ್ತವೆ. ಈ ಶಿಲ್ಪಗಳು ಬಿಗುನಿಲುವಿನಲ್ಲಿ ನೆಟ್ಟಗೆ ನಿಂತಂತಿದ್ದು ಮೆಕ್ಕೆಕಟ್ಟೆ ಉರು ನಿಂತ ಹಾಗೆ ಎಂಬ ರೂಢಿಮಾತಿಗೆ ಕಾರಣವಾಗಿದೆ. ಇಲ್ಲಿಯ ಪ್ರಧಾನ ದೇವತೆ ನಂದಿಕೇಶ್ವರ[]. ಮಿಕ್ಕವೆಲ್ಲ ಶಿವಗಣಗಳು.

ಉರುಗಳ ರೂಪ

ಬದಲಾಯಿಸಿ

ಮೈತುಂಬಾ ಮೆತ್ತಿಕೊಂಡ ಕೆಂಪು ಬಣ್ಣ. ದೊಡ್ಡ ದೊಡ್ಡ ಕಣ್ಣುಗಳು. ದಪ್ಪ ಮೀಸೆ. ಕೈಯಲ್ಲಿ ಕತ್ತಿ. ಅಲ್ಲಿ ಮೂರು ತಲೆ ಇದ್ದವರೂ ಇದ್ದಾರೆ. ಕೆಲವರ ಕೈಯಲ್ಲಿ ರಕ್ತ ಜಿನುಗುತ್ತಿರುವ ರುಂಡ. ಕೆಲವು ಪ್ರಾಣಿಗಳ ಮೇಲೆ ಸವಾರಿ ಮಾಡುತ್ತಿರುವ ಮೂರ್ತಿಗಳಿದ್ದರೆ, ಕೆಲವರ ಕೈಯಲ್ಲಿ ಕೋವಿಯಂತಹ ವಸ್ತು, ಕತ್ತಿ, ಚೂರಿಯಂತಹ ಆಯುಧಗಳೂ ಇವೆ. ಸಿಖ್ ಉಡುಗೆ, ಮುಸ್ಲಿಮರ ಶೈಲಿಯಲ್ಲಿರುವ ಮೂರ್ತಿಗಳೂ ಇವೆ. ಗುಂಪಿನಲ್ಲಿ ಆನೆ, ಕುದುರೆ, ಸಿಂಹ, ಹೋರಿಯಂತಹ ಪ್ರಾಣಿಗಳ ಮೂರ್ತಿಗಳೂ ಇವೆ. ಹೆಚ್ಚಿನ ಮೂರ್ತಿಗಳಲ್ಲಿ ಕೋರೆಹಲ್ಲು, ಜನಿವಾರ, ಮೈಯಲ್ಲಿ ಅಡ್ಡನಾಮ ಇದೆ. ಕೆಲವು ಮೂರ್ತಿಗಳ ತಲೆಯಲ್ಲಿ ಕಿರೀಟ ಕಂಡುಬಂದರೆ ಇನ್ನು ಕೆಲವಲ್ಲಿ ಟೋಪಿ ಹಾಕಿಕೊಂಡಂತೆ ಕಂಡುಬರುತ್ತದೆ. ಮೂರ್ತಿಗಳು ಅಲ್ಪಸ್ವಲ್ಪ ಆಭರಣ ಮತ್ತು ಬಣ್ಣದ ಅಂಗವಸ್ತ್ರ ಉಟ್ಟಂತೆ ಕಂಡುಬರುತ್ತವೆ. ಎಲ್ಲದರಲ್ಲಿಯೂ ಸಾಮಾನ್ಯವಾಗಿ ಕಂಡುಬರುವ ಅಂಶ ದೊಡ್ಡದಾಗಿ ಬಿಟ್ಟ ಕಣ್ಣುಗಳು ಮತ್ತು ದೊಡ್ಡ ಮೀಸೆ. ಮುಖದಲ್ಲಿ ಕ್ರೂರತೆ ಎದ್ದು ಕಾಣುತ್ತದೆ.[]

ಸ್ಥಳ ಪುರಾಣ

ಬದಲಾಯಿಸಿ

ಸ್ಥಳಪುರಾಣದಿಂದ ತಿಳಿದುಬರುವಂತೆ ಇದು ಹಿಂದೆ ಜಂಬುಕೇಶ್ವರ ಋಷಿಗಳ ಆಶ್ರಮ, ಯಜ್ಞಕ್ಕಾಗಿ ಮೇಕೆ ಕಟ್ಟಿದ್ದ ಸ್ಥಳವೇ ಮುಂದೆ ಮೆಕ್ಕೆಕಟ್ಟೆ ಅಥವಾ ಕೆಲವರು ಹೇಳುವಂತೆ ಮೆಕ್ಕಿಕಟ್ಟೆ ಎಂದು ಕರೆಸಿಕೊಂಡಿರಬೇಕೆಂದು ಐತಿಹ್ಯವಿದೆ. ಇಲ್ಲಿಯ ಒಂದು ಕಿಮೀ ದೂರದಲ್ಲಿ ಜಂಬೂರಿ ಎಂಬಲ್ಲಿ ಪಾಳುಬಿದ್ದ ಶಿವದೇವಾಲಯವಿದೆ.

ಗೆಂಡ ಸೇವೆ

ಬದಲಾಯಿಸಿ

ಇಲ್ಲಿನ ಗೆಂಡಸೇವೆ ಈ ದೇವಸ್ಥಾನದ ಇನ್ನೊಂದು ವೈಶಿಷ್ಟ್ಯ . ವಿಶ್ವಕರ್ಮರ ಸಹಭಾಗಿತ್ವದಲ್ಲಿ ನಡೆಯುವ ಗೆಂಡಸೇವೆಯು ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತದೆ ವಿಶೇಷವಾಗಿ ಸಂತಾನ ಭಾಗ್ಯಕ್ಕಾಗಿ ಮಹಿಳೆಯರು ಗೆಂಡ ಸೇವೆಯನ್ನು ಮಾಡುತ್ತಾರೆ. ಮಾರ್ಚ್ ತಿಂಗಳಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಹಲವಾರು ಭಕ್ತಾಭಿಮಾನಿಗಳು ಆಗಮಿಸುತ್ತಾರೆ. ಇದೆ ಸಂದರ್ಭದಲ್ಲಿ ದೇವರ ದರ್ಶನವು ನಡೆಯುತ್ತದೆ. ದರ್ಶನದ ಸಂದರ್ಭದಲ್ಲಿ ಇವರಿಂದ ಆಶೀರ್ವಾದ ರೂಪದಲ್ಲಿ ನೀರು ಚಿಮುಕಿಸಿಕೊಂಡರೆ ಇಷ್ಟಾರ್ಥ ಸಿದ್ಧಿಗಳು ಪ್ರಾಪ್ತಿಯಾಗುತ್ತದೆ ಎನ್ನುದು ಭಕ್ತರ ನಂಬಿಕೆ.[]

ಉಲ್ಲೇಖಗಳು

ಬದಲಾಯಿಸಿ