ಮುಹಮ್ಮದ್ ಅಲಿ ಜಿನ್ನಾ

ಮೊಹಮ್ಮದ್ ಅಲೀ ಜಿನ್ನಾ (1876-1948) ಪಾಕಿಸ್ತಾನದ ಸ್ಥಾಪಕ ಮತ್ತು ಅದರ ಪ್ರಥಮ ಗವರ್ನರ್-ಜನರಲ್.

ಮುಹಮ್ಮದ್ ಅಲಿ ಜಿನ್ನಾ (1945)

ರಾಜಕೀಯ ಪ್ರವೇಶದ ಮೊದಲು

ಬದಲಾಯಿಸಿ

ಜನನ 1876ರ ಡಿಸೆಂಬರ್ 25ರಂದು ಕರಾಚಿಯಲ್ಲಿ. ತಂದೆ ಜಿನ್ನಾ ಪೂಂಜ, ಕರಾಚಿಯ ಚಕ್ಕಳದ ವ್ಯಾಪಾರಿ. ಮೊಹಮ್ಮದ್ ಅಲೀ ಜಿನ್ನಾ ಚಿಕ್ಕ ವಯಸ್ಸಿನಲ್ಲೇ ಒಳ್ಳೆಯ ಪ್ರತಿಭಾವಂತರೆನಿಸಿಕೊಂಡು, ಉಚ್ಚ ವಿದ್ಯಾಭ್ಯಾಸಕ್ಕೆ ಇಂಗ್ಲೆಂಡಿಗೆ ಹೋಗಿ, ಕೇವಲ 20ನೆಯ ವಯಸ್ಸಿನಲ್ಲಿಯೇ ನ್ಯಾಯ ಶಾಸ್ತ್ರಪಾರಂಗತರಾಗಿ ಕರಾಚಿ ಮತ್ತು ಮುಂಬಯಿ ಪಟ್ಟಣಗಳಲ್ಲಿ ನ್ಯಾಯವಾದಿಯಾಗಿ ಪ್ರಸಿದ್ಧಿಹೊಂದಿದರು.

ರಾಜಕೀಯ ಬದುಕು-ಕಾಂಗ್ರೆಸ್ , ಮುಸ್ಲಿಂ ಲೀಗ್ ಮತ್ತು ಪಾಕಿಸ್ತಾನ

ಬದಲಾಯಿಸಿ

ದಾದಾಭಾಯಿ ನವರೋಜಿ, ಗೋಖಲೆ ಇವರ ಪ್ರಭಾವಕ್ಕೆ ಒಳಗಾದ ಜಿನ್ನಾ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮೂಲಕ, ಹಿಂದೂ-ಮುಸ್ಲಿಂ ಐಕಮತ್ಯದ ಆಧಾರದ ಮೇಲೆ ಭಾರತೀಯ ಸ್ವಾತಂತ್ರ್ಯಗಳಿಸಬೇಕೆಂದು ಶ್ರಮಿಸಿದರು. ಡಾ. ಆನಿಬೆಸೆಂಟರ ಹೋಂ ರೂಲ್ ಚಳವಳಿಯಲ್ಲಿ ಲೋಕಮಾನ್ಯ ಟಿಳಕ್ ಮತ್ತು ಮಹಾತ್ಮ ಗಾಂಧಿಯವರೊಡನೆ ಕೂಡಿ ಕೆಲಸ ಮಾಡಿದರು. ಜಿನ್ನಾ 1913ರಲ್ಲೇ ಮುಸ್ಲಿಂ ಲೀಗಿನ ಸದಸ್ಯರಾಗಿದ್ದರಾದರೂ ಭಾರತ ರಾಷ್ಟ್ರೀಯತ್ವಕ್ಕೆ ಧಕ್ಕೆಬರುವ ಕ್ರಮಗಳಿಗೂ ಒಪ್ಪಿರಲಿಲ್ಲ. ಸ್ವತಂತ್ರ ಭಾರತದ ಸಂಸದೀಯ ಸಂವಿಧಾನದಲ್ಲಿ ಮುಸ್ಲಿಮರು ತಮ್ಮ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಹಿತಾಸಕ್ತಿಗಳನ್ನು ರಕ್ಷಿಸಿಕೊಂಡು ಬಾಳಲು ಸಾಧ್ಯವೆಂದು ನಂಬಿದ್ದರು. ಅವರು 1919ರಲ್ಲಿ ರೌಲತ್ ಕರಾಳ ಶಾಸನವನ್ನು ಖಂಡಿಸಿದ್ದರಲ್ಲದೆ, ಪಂಜಾಬಿನ ಅತ್ಯಾಚಾರದ ಬಗೆಗೂ ಖಿಲಾಫತ್ತಿನ ವಿಷಯದಲ್ಲಿಯೂ ಬ್ರಿಟಿಷ್ ಸರ್ಕಾರವನ್ನು ಟೀಕಿಸಿದ್ದರು.[]

1920ರಲ್ಲಿ ಮಹಾತ್ಮ ಗಾಂಧಿಯವರು ಕಾಂಗ್ರೆಸಿನ ಅದ್ವಿತೀಯ ನಾಯಕರಾದ ಮೇಲೆ ಜಿನ್ನಾರ ಧೋರಣೆ ಬದಲಾಯಿಸಿತು. ಗಾಂಧಿ ಆರಂಭಿಸಿದ ಸತ್ಯ-ಅಹಿಂಸಾ ಪ್ರಧಾನ ಅಸಹಕಾರ ಆಂದೋಲನವೂ ಅವರಿಗೆ ಹಿಡಿಸಲಿಲ್ಲ. ಅವರ ಪಾಲಿಗೆ ಗಾಂಧಿ ಒಬ್ಬ ಸರ್ವಾಧಿಕಾರಿಯಂತೆ ಕಂಡುಬಂದರು. ಅಲ್ಲಿಂದ ಮುಂದೆ ಅವರು ಕಾಂಗ್ರೆಸಿನಿಂದ ಕ್ರಮಕ್ರಮವಾಗಿ ದೂರವಾದರೂ ಹಿಂದೂ-ಮುಸ್ಲಿಂ ಐಕಮತ್ಯವನ್ನು ಬಿಡದೆ ಪ್ರತಿಪಾದಿಸಿದರು. ಅವರು ಕೇಂದ್ರ ವಿಧಾನಸಭೆಯ ಸದಸ್ಯರಾದಾಗಲೂ ಮುಸ್ಲಿಂ ಲೀಗಿನ ಧೋರಣೆಯನ್ನು ಒಪ್ಪದೆ ಇದ್ದರು. 1930ರಲ್ಲಿ ಮಹಮ್ಮದ್ ಇಕ್ಬಾಲ್ ಸೂಚಿಸಿದ ಪಾಕಿಸ್ತಾನದ ಪ್ರತ್ಯೇಕ ರಾಷ್ಟ್ರ ಕಲ್ಪನೆ ಅವರಿಗೆ ವ್ಯವಹಾರ್ಯವೆನಿಸಿರಲಿಲ್ಲ. 1930-32ರಲ್ಲಿ ಲಂಡನ್ನಿನಲ್ಲಿ ನಡೆದ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ ಮೇಲೆ, ಭಾರತದ ರಾಜಕಾರಣದಿಂದಲೇ ವಿರಮಿಸಿ, ಲಂಡನ್ನಿನಲ್ಲೇ ನೆಲೆಸಲು ನಿರ್ಧಾರಮಾಡಿ, ಸ್ವಲ್ಪ ಕಾಲ ಅಲ್ಲೇ ಇದ್ದರು.

1935ರ ಭಾರತ ಸರ್ಕಾರ ಅಧಿನಿಯಮದ ಪ್ರಕಾರ, ಪ್ರಾಂತೀಯ ಸ್ವಾಯತ್ತೆಯ ಆಧಾರದ ಮೇಲೆ ಚುನಾವಣೆಗಳು ನಡೆದಾಗ ಜಿನ್ನಾ ಭಾರತಕ್ಕೆ ಹಿಂದಿರುಗಿ ಬಂದು, ಮುಸ್ಲಿಂ ಲೀಗಿನ ನಾಯಕತ್ವ ವಹಿಸಿಕೊಂಡು, ರಾಜಕೀಯದಲ್ಲಿ ಭಾಗವಹಿಸಿದರು. ಚುನಾವಣೆಯ ಫಲಿತಾಂಶವಾಗಿ ಏಳು ರಾಜ್ಯಗಳಲ್ಲಿ ಕಾಂಗ್ರೆಸು ಬಹುಮತ ಗಳಿಸಿ ಅಧಿಕಾರಕ್ಕೆ ಬಂದದ್ದು ಹಿಂದೂ ಪ್ರಭುತ್ವ ಸ್ಥಾಪನೆಗೆ ನಾಂದಿ ಎಂದು ಜಿನ್ನಾರವರಿಗೆ ಭಾಸವಾಯಿತು. ಅಂದಿನಿಂದ ಅವರು ಮುಸ್ಲಿಂ ಲೀಗಿನ ನಿಲುವನ್ನು ಸಮರ್ಥಿಸಿ, ಪಾಕಿಸ್ತಾನದ ಪ್ರತ್ಯೇಕರಾಷ್ಟ್ರವಾದವನ್ನು ಉಗ್ರವಾಗಿ ಪ್ರತಿಪಾದಿಸಲಾರಂಭಿಸಿದರು. 1940ರಲ್ಲಿ ಅವರು ಮುಸ್ಲಿಂ ಲೀಗಿನ ಅಧ್ಯಕ್ಷರಾಗಿ ಚುನಾಯಿತರಾದರು. ಆ ವರ್ಷ ಲಾಹೋರಿನಲ್ಲಿ ನಡೆದ ಲೀಗ್ ಅಧಿವೇಶನದಲ್ಲಿ ಪಾಕಿಸ್ತಾನ ರಾಷ್ಟ್ರ ಬೇಡಿಕೆಯ ನಿರ್ಣಯ ಅಂಗೀಕೃತವಾಯಿತು. ಏಳು ವರ್ಷಗಳ ಕಾಲ ಅವರು ಮುಸ್ಲಿಂ-ಲೀಗಿನ ಏಕೈಕ ನಾಯಕರಾಗಿ ಮುಂದುವರಿದರು. ಬ್ರಿಟಿಷ್ ಸರ್ಕಾರವಾಗಲಿ, ಕಾಂಗ್ರೆಸ್ ಸರ್ಕಾರವಾಗಲಿ, ಕಾಂಗ್ರೆಸ್ ಸಂಸ್ಥೆಯಾಗಲಿ ಮಂಡಿಸಿದ ಎಲ್ಲ ಸಲಹೆಗಳನ್ನೂ ನಿರಾಕರಿಸುತ್ತ, ಪಾಕಿಸ್ತಾನ ಸ್ಥಾಪನೆಯ ವಾದವನ್ನೇ ಮುಂದುವರಿಸಿದರು. 1947ರಲ್ಲಿ ಭಾರತ ವಿಭಜನೆಯಾಗಿ ಸ್ವತಂತ್ರ ಪಾಕಿಸ್ತಾನದ ಉದಯವಾದಾಗ ಅವರು ಅದರ ಗವರ್ನರ್-ಜನರಲ್ ಆದರು. 1948ರ ಸೆಪ್ಟೆಂಬರ್ 11ರಂದು ಕಾಲವಾದರು.

ಉಲ್ಲೇಖಗಳು

ಬದಲಾಯಿಸಿ
  1. "Mohammad Ali Jinnah (1876-1948)". www.bbc.co.uk ,18 May 2017.


 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: