ಮೇಲುಮುಸುಕು

(ಮುಸುಕು ಇಂದ ಪುನರ್ನಿರ್ದೇಶಿತ)

ಮೇಲುಮುಸುಕು (ಅಥವಾ ಮುಖಪರದೆ) ತಲೆ ಅಥವಾ ಮುಖ, ಅಥವಾ ಸ್ವಲ್ಪ ಮಹತ್ವದ ವಸ್ತುವಿನ ಯಾವುದಾದರೂ ಭಾಗವನ್ನು ಮುಚ್ಚಲು ಉದ್ದೇಶಿತವಾಗಿರುವ ಒಂದು ಬಟ್ಟೆಯ ವಸ್ತು. ಮೇಲುಮುಸುಕು ಐರೋಪ್ಯ, ಏಷ್ಯಾದ, ಮತ್ತು ಆಫ಼್ರಿಕಾದ ಸಮಾಜಗಳಲ್ಲಿ ದೀರ್ಘ ಇತಿಹಾಸ ಹೊಂದಿದೆ. ಈ ಅಭ್ಯಾಸ ಭಿನ್ನ ರೂಪಗಳಲ್ಲಿ ಯಹೂದೀ ಧರ್ಮ, ಕ್ರೈಸ್ತ ಧರ್ಮ ಮತ್ತು ಇಸ್ಲಾಂನಲ್ಲಿ ಪ್ರಮುಖವಾಗಿದೆ. ಮೇಲುಮುಸುಕಿನ ಅಭ್ಯಾಸವನ್ನು ವಿಶೇಷವಾಗಿ ಮಹಿಳೆಯರು ಮತ್ತು ಪವಿತ್ರ ವಸ್ತುಗಳೊಂದಿಗೆ ಸಂಬಂಧಿಸಲಾಗುತ್ತದೆ. ಆದರೆ ಕೆಲವು ಸಂಸ್ಕೃತಿಗಳಲ್ಲಿ ಮಹಿಳೆಯರ ಬದಲಾಗಿ ಪುರುಷರು ಮೇಲುಮುಸುಕನ್ನು ಧರಿಸಬೇಕೆಂದು ಅಪೇಕ್ಷಿಸಲಾಗುತ್ತದೆ. ಅದರ ಚಿರಸ್ಥಾಯಿ ಧಾರ್ಮಿಕ ಮಹತ್ವದ ಜೊತೆಗೆ, ಮೇಲುಮುಸುಕು ವಿವಾಹ ಪದ್ಧತಿಗಳಂತಹ ಕೆಲವು ಆಧುನಿಕ ಜಾತ್ಯತೀತ ಸಂದರ್ಭಗಳಲ್ಲಿ ಪಾತ್ರವಹಿಸುವುದನ್ನು ಮುಂದುವರಿಸಿದೆ.

ಕ್ರೈಸ್ತ ಸನ್ಯಾಸಿನಿಗಳು ಕಪ್ಪು ಮೇಲುಮುಸುಕುಗಳನ್ನು ಧರಿಸಿದ್ದಾರೆ
ಅಲ್ಜೀರಿಯಾದ ಹೆಂಗಸರು ಮುಖಪರದೆಯನ್ನು ಧರಿಸಿರುವುದು

ಪ್ರಾಚೀನ ಮೆಸೊಪೊಟೇಮಿಯಾ ಮತ್ತು ಗ್ರೀಕ್ ಹಾಗೂ ಪರ್ಷಿಯನ್ ಸಾಮ್ರಾಜ್ಯಗಳಲ್ಲಿ ಗೌರವಾರ್ಹತೆ ಹಾಗೂ ಉನ್ನತ ಸ್ಥಾನದ ಚಿಹ್ನೆಯಾಗಿ ಗಣ್ಯ ಸ್ತ್ರೀಯರು ಮೇಲುಮುಸುಕನ್ನು ಧರಿಸುತ್ತಿದ್ದರು.[೧] ಮೇಲುಮುಸುಕಿನ ಅತ್ಯಂತ ಮುಂಚಿನ ದೃಢೀಕರಿಸಲ್ಪಟ್ಟ ಉಲ್ಲೇಖ ಕ್ರಿ.ಪೂ. ೧೪೦೦ ಮತ್ತು ೧೧೦೦ ನಡುವಿನದಕ್ಕೆ ಸೇರಿದ್ದೆಂದು ಕಾಲನಿರ್ದೇಶ ಮಾಡಲಾದ ಮಧ್ಯ ಅಸಿರಿಯನ್ ಕಾನೂನು ಸಂಹಿತೆಯಲ್ಲಿ ಸಿಗುತ್ತದೆ. ಸಮಾಜದಲ್ಲಿ ಮಹಿಳೆಯ ವರ್ಗ, ದರ್ಜೆ, ಮತ್ತು ವೃತ್ತಿಯನ್ನು ಅವಲಂಬಿಸಿ, ಯಾವ ಮಹಿಳೆ ಮೇಲುಮುಸುಕು ಧರಿಸಬೇಕು ಮತ್ತು ಯಾವ ಮಹಿಳೆ ಧರಿಸಬಾರದು ಎಂದು ವಿವರಿಸುವ ಸ್ಪಷ್ಟ ಪೂರಕ ಕಾನೂನುಗಳನ್ನು ಅಸಿರಿಯಾ ಹೊಂದಿತ್ತು. ಸೇವಕಿಯರು ಮತ್ತು ವೇಶ್ಯೆಯರು ಮೇಲುಮುಸುಕನ್ನು ಧರಿಸುವಂತಿರಲಿಲ್ಲ ಮತ್ತು ಧರಿಸಿದರೆ ಕಠೋರ ದಂಡಗಳನ್ನು ಎದುರಿಸಬೇಕಿತ್ತು. ಹೀಗೆ ಮೇಲುಮುಸುಕು ಕೇವಲ ಶ್ರೀಮಂತ ದರ್ಜೆಯ ಸೂಚಕವಾಗಿರದೆ, ಗೌರವಾನ್ವಿತ ಮಹಿಳೆಯರು ಮತ್ತು ಸಾರ್ವಜನಿಕವಾಗಿ ಲಭ್ಯವಾದ ಮಹಿಳೆಯರ ನಡುವೆ ವ್ಯತ್ಯಾಸ ಮಾಡುವ ಕಾರ್ಯ ನಿರ್ವಹಿಸುತ್ತಿತ್ತು.

ಕ್ರೈಸ್ತ ಧರ್ಮದಲ್ಲಿ, ಸಾಂಪ್ರದಾಯಿಕವಾಗಿ, ಚರ್ಚ್‌ನಲ್ಲಿ ಮಹಿಳೆಯರಿಗೆ ತಮ್ಮ ತಲೆಗಳನ್ನು ಮುಚ್ಚಲು ಆಜ್ಞಾಪಿಸಲಾಗುತ್ತಿತ್ತು, ಹೀಗೆಯೇ ಪುರುಷರಿಗೆ ಗೌರವದ ಸಂಕೇತವಾಗಿ ತಮ್ಮ ಹ್ಯಾಟ್ ಅನ್ನು ತೆಗೆಯುವುದು ರೂಢಿಯಲ್ಲಿದೆ. ರೋಮನ್ ಕ್ಯಾಥೊಲಿಕ್ ಚರ್ಚ್‌ನಲ್ಲಿ, ೧೯೬೦ರ ದಶಕಕ್ಕಿಂತ ಮುಂಚೆ ಬಹುತೇಕ ಸ್ಥಳಗಳಲ್ಲಿ ಚರ್ಚ್‌ನ್ನು ಪ್ರವೇಶಿಸುವಾಗ ಮಹಿಳೆಯರು ಸ್ಕಾರ್ಫ಼್, ಕ್ಯಾಪ್, ಮೇಲುಮುಸುಕು ಅಥವಾ ಹ್ಯಾಟ್‍ನ ರೂಪದಲ್ಲಿ ತಲೆಹೊದಿಕೆ ಧರಿಸುವುದು ಸಂಪ್ರದಾಯವಾಗಿತ್ತು. ಪ್ರತ್ಯೇಕಿತ ಪ್ರದೇಶಗಳಲ್ಲಿ ಈ ಅಭ್ಯಾಸ ಈಗಲೂ ಮುಂದುವರಿದಿದೆ.

ಹಿಜಾಬ್‍ಗೆ ಅನುಗುಣವಾಗಿ ಮುಸ್ಲಿಮ್ ಮಹಿಳೆಯರು ಮತ್ತು ಹುಡುಗಿಯರು ಧರಿಸುವ ತಲೆಹೊದಿಕೆಗಳನ್ನು ಕೆಲವೊಮ್ಮೆ ಮೇಲುಮುಸುಕುಗಳೆಂದು ಸೂಚಿಸಲಾಗುತ್ತದೆ. ಆವ್ರಾ (ದೇಹದ ಖಾಸಗಿ ಭಾಗಗಳನ್ನು) ಮುಚ್ಚಿಕೊಳ್ಳುವುದು ಮುಸ್ಲಿಮ್ ಮೇಲುಮುಸುಕಿನ ಮುಖ್ಯ ಗುರಿಯಾಗಿದೆ. ಈ ವಸ್ತ್ರಗಳು ಕೂದಲು, ಕಿವಿಗಳು ಮತ್ತು ಗಂಟಲನ್ನು ಮುಚ್ಚುತ್ತವೆ, ಆದರೆ ಮುಖವನ್ನಲ್ಲ. ನಿಕಾಬ್ ಮತ್ತು ಬುರ್ಕಾ ಮುಖದ ಬಹುತೇಕ ಭಾಗವನ್ನು ಮುಚ್ಚುವ ಎರಡು ಬಗೆಯ ಮುಖಪರದೆಗಳು.

ಉಲ್ಲೇಖಗಳು

ಬದಲಾಯಿಸಿ
  1. Ahmed, Leila (1992). Women and Gender in Islam. New Haven: Yale University Press. p. 15.