ಮುದವೀಡು ಕೃಷ್ಣರಾಯರು
ಮುದವೀಡು ಕೃಷ್ಣರಾಯರು (ಜುಲೈ ೨೪, ೧೮೭೪ - ಸೆಪ್ಟೆಂಬರ್ ೭, ೧೯೪೭) ಮಹಾನ್ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕಾರಣಕ್ಕೆ ದುಡಿದ ಮಹಾನೀಯರಾಗಿ, ಪತ್ರಿಕೋದ್ಯಮಿಯಾಗಿ, ಸಾಹಿತಿಯಾಗಿ ಈ ನಾಡಿನಲ್ಲಿ ಕಂಗೊಳಿಸಿವರಾಗಿದ್ದಾರೆ.
ಮುದವೀಡು ಕೃಷ್ಣರಾಯರು | |
---|---|
ಜನನ | ಜುಲೈ ೨೪, ೧೮೭೪ ಬಾಗಲಕೋಟೆ |
ಮರಣ | ಸೆಪ್ಟೆಂಬರ್ ೭, ೧೯೪೭ |
ವೃತ್ತಿ | ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿ, ಪತ್ರಿಕೋದ್ಯಮಿ, ಭಾಷಣಕಾರರು |
ಜೀವನ
ಬದಲಾಯಿಸಿಕನ್ನಡಕ್ಕಾಗಿ ದುಡಿದ ಬಹುಮುಖ ಪ್ರತಿಭಾನ್ವಿತ ವಿದ್ವಾಂಸರಾದ ಮುದವೀಡು ಕೃಷ್ಣರಾಯರು ಜುಲೈ ೨೪, ೧೮೭೪ರ ವರ್ಷದಲ್ಲಿ ಬಾಗಲಕೋಟೆಯಲ್ಲಿ ಜನಿಸಿದರು. ಮುದವೀಡು ಎಂಬುದು ಆಂಧ್ರಪ್ರದೇಶದ ಕಡಪಾ ಜಿಲ್ಲೆಗೆ ಸೇರಿದ ಒಂದು ಗ್ರಾಮ. ಕೃಷ್ಣರಾಯರ ಹಿರಿಯರು ಈ ಪ್ರದೇಶದಿಂದ ಬಂದವರಾದ ಕಾರಣದಿಂದ ಮುದವೀಡು ಎಂಬುದು ಇವರ ಹೆಸರಿನಲ್ಲಿ ಮೊದಲಾಗಿದೆ. ತಂದೆ ಹನುಮಂತರಾವ್ ಅವರು ಮತ್ತು ತಾಯಿ ಗಂಗಾಬಾಯಿಯವರು. ಚಿಕ್ಕಂದಿನಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡ ಮುದವೀಡು ಕೃಷ್ಣರಾಯರು ತಮ್ಮ ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದರು.
ಕೃಷ್ಣರಾಯರ ಪ್ರಾರಂಭಿಕ ವಿದ್ಯಾಭ್ಯಾಸ ಕಾರವಾರ ಮತ್ತು ನಂತರದಲ್ಲಿ ಮೆಟ್ರಿಕ್ಕಿನವರೆಗೆ ಧಾರವಾಡದಲ್ಲಿ ನೆರವೇರಿತು.
ಸ್ವಾತಂತ್ರ್ಯ ಹೋರಾಟಗಾರರಾಗಿ
ಬದಲಾಯಿಸಿಭಾರತದ ಸ್ವಾತಂತ್ರ್ಯ ಆಂದೋಲನದಿಂದ ಪ್ರಭಾವಿತರಾದ ಕೃಷ್ಣರಾಯರು ಓದನ್ನು ಬಿಟ್ಟು ಚಳುವಳಿಗೆ ಧುಮುಕಿದರು. ಲೋಕಮಾನ್ಯ ತಿಲಕರ ಅನುಯಾಯಿಯಾಗಿ ಗಣೇಶೋತ್ಸವದ ಕಾರ್ಯ ಕರ್ತರಾದರು. ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅವೇಶನದಲ್ಲಿಯೂ ಅವರು ಸಕ್ರಿಯ ಕಾರ್ಯಿಕರ್ತರಾಗಿ ದುಡಿದರು. ಪಾನನಿರೋಧ ಚವಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರಿಗೆ 2 ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. ಭಾಷಣ, ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿದ್ದಕ್ಕೆ ಮತ್ತೆರಡು ವರ್ಷ ಸ್ಥಾನಬದ್ಧತೆ ಶಿಕ್ಷೆಯನ್ನು ಅನುಭವಿಸಬೇಕಾಗಿಬಂತು.
ಕನ್ನಡವಲ್ಲದೆ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಪ್ರಬುದ್ಧತೆಯನ್ನು ಗಳಿಸಿ ಉತ್ತಮ ವಾಗ್ಮಿಯಾಗಿದ್ದ ಕೃಷ್ಣರಾಯರದು ಸಿಂಹ ಗರ್ಜನೆ. ನಿರರ್ಗಳ ಅನುವಾದಕ್ಕೆ ಹೆಸರಾಗಿದ್ದ ಅವರು ನೆಹರು, ರಾಜಾಜಿ, ಪಟ್ಟಾಭಿ ಸೀತಾರಾಮಯ್ಯ ಮುಂತಾದ ರಾಷ್ಟ್ರ ನಾಯಕರು ಕರ್ನಾಟಕಕ್ಕೆ ಬಂದಾಗ ಅವರ ಭಾಷಣಗಳ ಅನುವಾದಕ್ಕಾಗಿ ಪ್ರಸಿದ್ಧರಾಗಿದ್ದರು.
ಕನ್ನಡಕ್ಕಾಗಿ ಹೋರಾಟ
ಬದಲಾಯಿಸಿಕನ್ನಡ ಆಂದೋಲನವನ್ನು ಎಳೆವಯಸ್ಸಿನಲ್ಲೇ ಪ್ರಾರಂಭಿಸಿದ ಮುದವೀಡು ಕೃಷ್ಣರಾಯರು ಮರಾಠಿ ಪ್ರಾಬಲ್ಯವಿದ್ದ ಕರ್ನಾಟಕದ ಪ್ರದೇಶಗಳಲ್ಲಿ ತಮ್ಮ ಬರಹ, ಭಾಷಣಗಳ ಮೂಲಕ ಜಾಗೃತಿ ಮೂಡಿಸಿ ತರುಣರಲ್ಲಿ ಚೈತನ್ಯ ತುಂಬಿದರು. ಕನ್ನಡ ಪ್ರದೇಶಗಳ ಏಕೀಕರಣಕ್ಕಾಗಿ ಅಹರ್ನಿಶಿ ದುಡಿಮೆ ಮಾಡಿದರು.
ಪತ್ರಿಕೋದ್ಯಮ
ಬದಲಾಯಿಸಿಪತ್ರಿಕೋದ್ಯಮ ಕೃಷ್ಣರಾಯರ ಮತ್ತೊಂದು ಆಸಕ್ತ ಕ್ಷೇತ್ರ. ಕರ್ನಾಟಕ ವೃತ್ತ, ಧನಂಜಯ ಪತ್ರಿಕೆಯನ್ನು ಕಾಲು ಶತಮಾನ ನಡೆಸಿದ ದಾಖಲೆ ಅವರದ್ದು. ಸ್ವಾತಂತ್ರ್ಯ, ಏಕೀಕರಣದ ಪ್ರತಿಪಾದನೆಯ ಗಡುಸಾದ ಗದ್ಯ ಶೈಲಿಯಲ್ಲಿ ಬರೆದ ಅವರ ಅಗ್ರ ಲೇಖನಗಳು ಪ್ರಖ್ಯಾತಿ ಪಡೆದಿದ್ದವು. ಹೀಗಾಗಿ ಅವರಿಗೆ ಕರ್ನಾಟಕದ ‘ಗಂಡುಗಲಿ’ ಎಂಬ ಬಿರುದು ಸಂದಿತ್ತು.
ರಂಗಭೂಮಿಯಲ್ಲಿ
ಬದಲಾಯಿಸಿರಂಗಭೂಮಿಯಲ್ಲೂ ಆಸಕ್ತಿ ಹೊಂದಿದ್ದ ಕೃಷ್ಣರಾಯರು 1907ರಲ್ಲಿ ‘ಭಾರತ ಕಲೋತ್ತೇಜಕ ನಾಟಕ ಮಂಡಲಿ’ಯನ್ನು ಸ್ಥಾಪನೆ ಮಾಡಿದರು. ‘ಪ್ರೇಮಭಂಗ’ ಎಂಬ ನಾಟಕವನ್ನು ಬರೆದು ರಂಗಕ್ಕೆ ಅಳವಡಿಸಿ ಹಲವಾರು ಪ್ರದರ್ಶನಗಳನ್ನು ನಡೆಸಿದರು. ಇದಲ್ಲದೆ ನಾಟ್ಯ ವಿಲಾಸಿಯಾಗಿ ಅನೇಕ ನಾಟಕಗಳಲ್ಲಿ ಹಾಗೂ . ಚಿರಂಜೀವಿ ಎಂಬ ವಾಕ್ಚಿತ್ರದಲ್ಲಿ, ಚಿತ್ರಗುಪ್ತ ಭೂಮಿಕೆಯಲ್ಲಿ ಪಾತ್ರಧಾರಿಯಾಗಿದ್ದರು.
ಸಾಹಿತಿಯಾಗಿ
ಬದಲಾಯಿಸಿಒಳ್ಳೆಯ ಬರಹಗಾರರಾಗಿದ್ದ ಕೃಷ್ಣರಾಯರು ‘ಚಿತ್ತೂರು ಮುತ್ತಿಗೆ’ ಎಂಬ ಪ್ರಸಿದ್ಧ ಕಾದಂಬರಿಯನ್ನು ಪ್ರಕಟಿಸಿದರು. ವಿಕ್ರಮ ಶಶಿಕಲಾ, ಸುಭದ್ರಾ, ರಾಮರಾಜವಿಯೋಗ ಮುಂತಾದುವು ಮರಾಠಿಯಿಂದ ಅವರು ಅನುವಾದಿಸಿದ ನಾಟಕಗಳು. ಕವಿಗಳೂ ಆಗಿದ್ದ ಮುದವೀಡು ಕೃಷ್ಣರಾಯರು ಮುದ್ದುಮೋಹನ ಅಂಕಿತನಾಮದಿಂದ ಹಲವಾರು ಕವನಗಳನ್ನು ರಚಿಸಿದ್ದರು.
ಸಂದ ಗೌರವ
ಬದಲಾಯಿಸಿಈ ಮಹಾನ್ ಕನ್ನಡ ವಿದ್ವಾಂಸರನ್ನು ಕನ್ನಡನಾಡು ೧೯೩೯ರಲ್ಲಿ ಬೆಳಗಾವಿಯಲ್ಲಿ ನಡೆದ ೨೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಿತು.
ವಿದಾಯ
ಬದಲಾಯಿಸಿಮುದದ ಬೀಡಾಗಿದ್ದ ದೇಶಭಕ್ತ ಮುದವೀಡು ಕೃಷ್ಣರಾಯರು ದೇಶವು ಸ್ವಾತಂತ್ರ್ಯ ಕಂಡ ಕೆಲವೇ ದಿನಗಳಲ್ಲಿ ಸೆಪ್ಟೆಂಬರ್ ೭, ೧೯೪೭ರಂದು ಈ ಲೋಕವನ್ನಗಲಿದರು.
ಮಾಹಿತಿ ಕೃಪೆ
ಬದಲಾಯಿಸಿಕನ್ನಡ ಸಾಹಿತ್ಯ ಪರಿಷತ್ತಿನ 'ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು' ಕೃತಿ