ಮುಟ್ಟಿನ ಮುಂಚಿನ ಉದ್ವೇಗ

ಮುಟ್ಟು ಸಂಭವಿಸುವ ಒಂದರಿಂದ ಎರಡು ವಾರಗಳ ಮೊದಲು ಕೆಲವು ಮಹಿಳೆಯರಲ್ಲಿ ವಿಶಿಷ್ಟ ದೈಹಿಕ ಮತ್ತು ಭಾವನಾತ್ಮಕ ಗುಣಲಕ್ಷಣಗಳು ಗೋಚರಿಸಬಹುದು. ಇದನ್ನು ಮುಟ್ಟಿನ ಮುಂಚಿನ  ಉದ್ವೇಗ (premenstrual syndrome (PMS)) ಎಂದು ಕರೆಯುತ್ತಾರೆ.[] 

ಮುಟ್ಟಿನ ಮುಂಚಿನ ಉದ್ವೇಗ
ವೈದ್ಯಕೀಯ ವಿಭಾಗಗಳುಸ್ತ್ರೀರೋಗ ಶಾಸ್ತ್ರ, ಮನೋವೈದ್ಯಶಾಸ್ತ್ರ
ಲಕ್ಷಣಗಳುಕಾತುರ, ಉದ್ವೇಗ, ಸಿಡುಕುತನ, ತಲೆನೋವು, ಸುಸ್ತು, ವಾಕರಿಕೆ, ಎದೆಬಡಿತದ ವ್ಯತ್ಯಯ, ಸ್ತನಗಳಲ್ಲಿ ನೋವು
ವೈದ್ಯಕೀಯ ತೊಂದರೆಗಳುಪ್ರೀ ಮೆನ್ಸ್ಟ್ರುವಲ್ ಡಿಸ್ಪರಿಕ್ ಡಿಸಾರ್ಡರ್
ಕಾಯಿಲೆಯ ಗೋಚರ/ಪ್ರಾರಂಭಮುಟ್ಟಿಗಿಂತ ೧-೨ ವಾರಗಳ ಮೊದಲು
ಕಾಲಾವಧಿ೬ ದಿನಗಳು
ರೋಗನಿರ್ಣಯರೋಗ ಲಕ್ಷಣಕ್ಕೆ ಅನುಗುಣವಾಗಿ
ಚಿಕಿತ್ಸೆಜೀವನಶೈಲಿ ಬದಲಾವಣೆ, ಔಷಧಿ
ಔಷಧಿಕ್ಯಾಲ್ಸಿಯಂ ಮತ್ತು ವಿಟಮಿನ್ 'ಡಿ' ಪೂರಕ

ಈ ಲಕ್ಷಣಗಳು ಮಹಿಳೆಯರಲ್ಲಿ ಬೇರೆ ಬೇರೆಯಾಗಿರುತ್ತವೆ.  ಮುಟ್ಟಿನ ರಕ್ತಸ್ರಾವ ಆರಂಭವಾದೊಡನೆ ಅಥವಾ ಒಂದೆರಡು ದಿನಗಳಲ್ಲಿ ನಿಲ್ಲುತ್ತವೆ.[]

ಈ ಲಕ್ಷಣಗಳು ಕಾತುರ, ಉದ್ವೇಗ, ಸಿಡುಕುತನ, ತಲೆನೋವು, ಸುಸ್ತು, ವಾಕರಿಕೆ, ಎದೆಬಡಿತದ ವ್ಯತ್ಯಯ, ಸ್ತನಗಳಲ್ಲಿ ನೋವು ಆಗಿರಬಹುದು. ಈ ಲಕ್ಷಣಗಳು ಕಾಲ ಕಳೆದಂತೆ ಬದಲಾಗಲೂ ಬಹುದು. ಗರ್ಭದಾರಣೆಯ ಸಂದರ್ಭದಲ್ಲಿ ಹಾಗೂ ಮುಟ್ಟು ನಿಲ್ಲುವ ಸಮಯದಲ್ಲಿ ಈ ಗುಣಲಕ್ಷಣಗಳು ಕಾಣಿಸುವುದಿಲ್ಲ.  ಶೇಕಡ 80 ರಷ್ಟು ಮಹಿಳೆಯರು ಮುಟ್ಟಿನ ಮೊದಲು ಕೆಲವು ಲಕ್ಷಣಗಳನ್ನು ಹೊಂದಿರುವುದಾಗಿ ವರದಿಯಾಗಿದೆ.  ಕೆಲವು ಶಮನಕಾರಿ ಔಷಧಿಗಳನ್ನು ಈ ಸಂದರ್ಭಗಳಲ್ಲಿ ಬಳಸಬಹುದು.

ಚಿಹ್ನೆಗಳು ಮತ್ತು ಲಕ್ಷಣಗಳು

ಬದಲಾಯಿಸಿ

200ಕ್ಕೂ ಹೆಚ್ಚು ನಮೂನೆಯ ಲಕ್ಷಣಗಳು ಮುಟ್ಟಿನ ಮುಂಚಿನ ಉದ್ವೇಗಕ್ಕೆ ಸಂಬಂಧಪಟ್ಟಿವೆ. ಅವುಗಳಲ್ಲಿ ಸಾಮಾನ್ಯ ಭಾವನಾತ್ಮಕ ಮತ್ತು ಭಾವನಾತ್ಮಕವಲ್ಲದ, ನಿರ್ದಿಷ್ಟ ಲಕ್ಷಣಗಳು ಸೇರಿವೆ. ಅವು ಒತ್ತಡ, ಆತಂಕ, ತೊಂದರೆ, ನಿದ್ರೆ, ತಲೆನೋವು, ಸುಸ್ತು, ಮನಸ್ಥಿತಿ ಬದಲಾವಣೆಗಳು, ಹೆಚ್ಚಿದ ಭಾವನಾತ್ಮಕ ಸಂವೇದನೆ, ಮತ್ತು ಲೈಂಗಿಕ ಆಸಕ್ತಿಯಲ್ಲಿ ಬದಲಾವಣೆಗಳು ಆಗಿರಬಹುದು.[]

ಇದಕ್ಕೆ ಸಂಬಂಧಿಸಿದ ಭೌತಿಕ ಲಕ್ಷಣಗಳು ಕೆಳಗಿನ ಬೆನ್ನು ನೋವು, ಹೊಟ್ಟೆ ಸೆಳೆತ, ಮಲಬದ್ಧತೆ/ಅತಿಸಾರ, ಸ್ತನಗಳ ಊತ ಅಥವಾ ಮೃದುತ್ವ, ಮೊಡವೆ, ಸ್ನಾಯು ನೋವು, ಮತ್ತು  ಅತಿಯಾದ ಹಸಿವು. ಮಹಿಳೆಯಿಂದ ಮಹಿಳೆಗೆ ಈ ಲಕ್ಷಣಗಳು ಮತ್ತು ಅವುಗಳ ತೀವ್ರತೆ ಬದಲಾಗುತ್ತದೆ. ಎಲ್ಲರಿಗೂ ಎಲ್ಲ ಲಕ್ಷಣಗಳು ಕಂಡುಬರಬೇಕಾಗಿಲ್ಲ.

ಕಾರಣಗಳು

ಬದಲಾಯಿಸಿ

ಮುಟ್ಟಿನ ಮುಂಚಿನ ಉದ್ವೇಗ ಅಥವಾ ಋತುಸ್ರಾವದ ಮುನ್ನಾ ಉದ್ವೇಗ ನಿಖರವಾದ ಕಾರಣಗಳು ತಿಳಿದಿಲ್ಲ. ಆದರೆ ಇದರಲ್ಲಿ ಹಲವಾರು ಅಂಶಗಳು ಭಾಗಿಯಾಗಬಹುದು.  ಋತುಚಕ್ರದ ಸಮಯದಲ್ಲಿ ಹಾರ್ಮೋನುಗಳಲ್ಲಿ ಆಗುವ ಬದಲಾವಣೆಗಳು ಪ್ರಮುಖ ಪಾತ್ರವಹಿಸುತ್ತವೆ.  ಬದಲಾಗುತ್ತಿರುವ ಹಾರ್ಮೋನ್ ಮಟ್ಟದ ಪರಿಣಾಮ ಕೆಲವು ಮಹಿಳೆಯರಲ್ಲಿ ಇತರರಿಗಿಂತ ಹೆಚ್ಚು. ಮೆದುಳಿನ ರಾಸಾಯನಿಕ ಬದಲಾವಣೆಗಳು, ಮಾನಸಿಕ ಒತ್ತಡ, ಭಾವನಾತ್ಮಕ ಸಮಸ್ಯೆಗಳು ಹಾಗೂ ಖಿನ್ನತೆ -ಇವುಗಳು ಮುಟ್ಟಿನ ಮುಂಚಿನ ಉದ್ವೇಗಕ್ಕೆ ಕಾರಣಗಳಾಗಿರುವುದಿಲ್ಲ ಆದರೆ ಇವು ಲಕ್ಷಣಗಳನ್ನು ಇನ್ನಷ್ಟು ಹೆಚ್ಚಿಸಬಹುದು. ಕಡಿಮೆ ಮಟ್ಟದ ಜೀವಸತ್ವಗಳು ಮತ್ತು ಖನಿಜಗಳು, ಅಧಿಕ ಸೋಡಿಯಂ, ಮದ್ಯ,  ಕೆಫೀನ್ -ಇವುಗಳು ಲಕ್ಷಣಗಳನ್ನು ಹೆಚ್ಚಿಸಬಹುದು. 

ರೋಗ ಪತ್ತೆಹಚ್ಚುವಿಕೆ

ಬದಲಾಯಿಸಿ

ಮುಟ್ಟಿನ ಮುಂಚಿನ ಉದ್ವೇಗವನ್ನು ಖಾತರಿಸಿಕೊಳ್ಳಲು ಯಾವುದೇ ನಿರ್ದಿಷ್ಟ ಪ್ರಯೋಗಾಲಯ ಪರೀಕ್ಷೆಗಳು ಅಥವಾ ದೈಹಿಕ ಪರೀಕ್ಷೆಗಳು ಇಲ್ಲ. ಆದರೀ ಪ್ರಮುಖ ಅಂಶಗಳನ್ನು ಗಮನಿಸಬಹುದು:

  • ಮಹಿಳೆಯ ಮುಖ್ಯ ದೂರು ಒಂದು ಅಥವಾ ಹೆಚ್ಚು ಭಾವನಾತ್ಮಕ ರೋಗಲಕ್ಷಣಗಳಿಗೆ ಸಂಬಂಧಿಸಿರುತ್ತದೆ (ಅತ್ಯಂತ ಸಾಮಾನ್ಯವಾಗಿ ಕಿರಿಕಿರಿ, ಉದ್ವೇಗ, ಅಥವಾ ಅತೃಪ್ತಿ). ಮಹಿಳೆಯಲ್ಲಿ ಕೇವಲ ದೈಹಿಕ ಲಕ್ಷಣಗಳು (ಸೆಳೆತ ಅಥವಾ ಉಬ್ಬುವುದು) ಆಗಿದ್ದಲ್ಲಿ ಅದು ಮುಟ್ಟಿನ ಮುಂಚಿನ ಉದ್ವೇಗ ಆಗಿರುವುದಿಲ್ಲ.
  • ನಿರ್ದಿಷ್ಟವಾಗಿ ಮುಟ್ಟಿನ ಮುಂಚೆ ಪ್ರಾರಂಭವಾಗಿ ಮುಟ್ಟಾಗುತ್ತಿದ್ದಂತೆ ನಿಂತು ಹೋಗುವುದು.
  • ಲಕ್ಷಣಗಳು ಮಹಿಳೆಯ ದೈನಂದಿನ ಜೀವನದಲ್ಲಿ ಏರುಪೇರು ಮಾಡುವಷ್ಟು ತೀವ್ರ ಆಗಿರಬೇಕು.

ನಿರ್ವಹಣೆ

ಬದಲಾಯಿಸಿ

ಮುಟ್ಟಿನ ಮುಂಚಿನ ಉದ್ವೇಗದ  ನಿರ್ವಹಣೆಗೆ ಅನೇಕ ಚಿಕಿತ್ಸೆಗಳನ್ನು ಪ್ರಯತ್ನಿಸಲಾಗಿದೆ. ಸೌಮ್ಯ ಲಕ್ಷಣಗಳಿಗೆ ಕಡಿಮೆ ಉಪ್ಪು, ಕೆಫೀನ್, ಮತ್ತು ವ್ಯಾಯಾಮಗಳನ್ನು ಸೂಚಿಸಲಾಗಿದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಗಳ ಪೂರೈಕೆಯೂ ಸಹಾಯಕವಾಗಬಹುದು. 

ಉಲ್ಲೇಖಗಳು

ಬದಲಾಯಿಸಿ
  1. "Premenstrual syndrome (PMS) fact sheet". Office on Women's Health. December 23, 2014. Archived from the original on 28 June 2015. Retrieved 23 June 2015. {{cite web}}: Unknown parameter |deadurl= ignored (help)
  2. Dickerson, Lori M.; Mazyck, Pamela J.; Hunter, Melissa H. (2003). "Premenstrual Syndrome". American Family Physician. 67 (8): 1743–52. PMID 12725453. Archived from the original on 2008-05-13. {{cite journal}}: Unknown parameter |deadurl= ignored (help)
  3. "Merck Manual Professional - Menstrual Abnormalities". November 2005. Archived from the original on 2007-02-12. Retrieved 2007-02-02. {{cite web}}: Unknown parameter |dead-url= ignored (help)