ಮೊಡವೆ

ಗುಳ್ಳೆಗಳಿಂದ ನಿರೂಪಿಸಲ್ಪಟ್ಟ ಚರ್ಮದ ಸ್ಥಿತಿ

ಮೊಡವೆ [೧][೨]ಮುಖದಲ್ಲಿ ಏಳುವ ಚಿಕ್ಕ ಚಿಕ್ಕ ಗುಳ್ಳೆಗಳು. ಇವು ಹೆಚ್ಚಾಗಿ ಹದಿ ಹರೆಯದವರಲ್ಲಿ ಕಂಡು ಬರುತ್ತೆ. ಇಂಗ್ಲೀಷಿನಲ್ಲಿ ಇದನ್ನು ಪಿಮ್ಪಲ್ಸ್ ಎಂದು ಕರೆಯುತ್ತಾರೆ. ಮಹಿಳೆಯರಲ್ಲಿ ಇದೊಂದು ಸೌಂದರ್ಯದ ಸಮಸ್ಯೆಯಾಗಿದೆ[೩].

ಮೊಡವೆ

ಇತಿವೃತ್ತಸಂಪಾದಿಸಿ

  • ಮೊಡವೆ (ಪಿಂಪಲ್ಸ್) [೪][೫]ಎಂಬುದು ಹದಿಹರೆಯದವರು ಹಾಗೂ ವಯಸ್ಕರನ್ನು ಕಾಡುವ ಸಹಜ ಹಾಗೂ ಸರ್ವೇಸಾಮಾನ್ಯವಾದ ಚರ್ಮದ ತೊಂದರೆ. ಚರ್ಮದಲ್ಲಿರುವ ಕೂದಲಿನ, ಜಿಡ್ಡಿನ ಹಾಗೂ ಬೆವರಿನ ಗ್ರಂಥಿಗಳಲ್ಲಿ ಆಗುವ ಬದಲಾವಣೆಯೇ ಇದಕ್ಕೆ ಕಾರಣ.
  • ಈ ಗ್ರಂಥಿಗಳಿಂದ ಒಸರುವ ಅತಿಯಾದ ಜಿಡ್ಡು, ಹಾಗೂ ಚರ್ಮದಲ್ಲಿ ಅಸುನೀಗಿದ ಜೀವಕೋಶಗಳು (ಡೆಡ್ ಸೆಲ್ಸ್) ಕೂದಲಿನ ಗ್ರಂಥಿಗಳ ದ್ವಾರವನ್ನು ಮುಚ್ಚುವುದರಿಂದ ಜಿಡ್ಡು ಶೇಖರವಾಗಿ, ಬ್ಯಾಕ್ಟೀರಿಯಾಗಳು ವೃದ್ಧಿಯಾಗಲು ಅನುಕೂಲಕರ ವಾತಾವರಣ ಉಂಟಾಗುತ್ತದೆ. ಇದರಿಂದ ಚರ್ಮ ಹೊತ್ತಿ ಉರಿಯುವಂತಹ ಮಾರ್ಪಾಡಾಗಿ, ಕಣ್ಣಿಗೆ ಕಾಣಿಸುವ ಗುಳ್ಳೆಗಳಾಗುತ್ತವೆ.
  • ಪ್ರೌಢಾವಸ್ಥೆಯಲ್ಲಿ ಬಹಳ ಬೇಗ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಇದನ್ನು `ಕಾಮ ಕುರು' ಎಂದು ಸಹ ಕರೆಯುತ್ತಾರೆ. ಹೆಣ್ಣು ಮಕ್ಕಳು ಋತುಮತಿಯಾಗುವ ಒಂದು ವರ್ಷದಷ್ಟು ಮೊದಲೇ ಮೊಡವೆಗಳು ಕಾಣಿಸಬಹುದು. ಹದಿಹರೆಯದಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಮೊಡವೆಗಳು ವಯಸ್ಸಾದಂತೆ ಕ್ರಮೇಣ ಮಾಯವಾಗುತ್ತವೆ.
  • ಸಣ್ಣ ಸಣ್ಣ ಕೆಂಪಾದ ಗುಳ್ಳೆಗಳು, ಕೀವು ತುಂಬಿದ, ಕಪ್ಪಗಾದ, ಬೆಳ್ಳಗಿನ ಗುಳ್ಳೆಗಳು, ಗಂಟುಗಳು ಹೀಗೆ ನಾನಾ ರೂಪುಗಳಲ್ಲಿ ಗೋಚರವಾಗುವ ಮೊಡವೆಗಳನ್ನು ನಾವೆಲ್ಲಾ ದಿನನಿತ್ಯ ಹಲವರಲ್ಲಿ ನೋಡುತ್ತಿರುತ್ತೇವೆ.
  • ಮುದ್ದಾದ ಮುಖಕ್ಕೆ ಕುಂದು ತರುವಂತಹ ಈ ತೊಂದರೆ ಅತಿಯಾದರೆ, ಮಾನಸಿಕ ಬಳಲಿಕೆ ಹಾಗೂ ಖಿನ್ನತೆಗೆ ಕಾರಣವಾಗುತ್ತದೆ. ಮುಖದಲ್ಲಲ್ಲದೆ ಮೊಡವೆಗಳು ಬೆನ್ನು, ಎದೆಯ ಮೇಲ್ಭಾಗ ಹಾಗೂ ಭುಜದ ಮೇಲೂ ಕಾಣಿಸಿಕೊಳ್ಳುತ್ತವೆ.
  • ಹೆಣ್ಣು ಮಕ್ಕಳಲ್ಲಿ ಮೊಡವೆ ಕಾಣಿಸಿಕೊಂಡ ಒಂದು ವರ್ಷದೊಳಗೆ ಖಿನ್ನತೆಗೆ ಒಳಗಾಗುವ ಪ್ರಮಾಣ ಶೇಕಡಾ 63ರಷ್ಟಿರುತ್ತದೆ.ಮೊಡವೆಯಿಲ್ಲದವರಿಗೆ ಖಿನ್ನತೆ ಕಡಿಮೆಯಾಗಿರುತ್ತದೆ ಮತ್ತು ಮೊಡವೆ ಕಾಣಿಸಿಕೊಂಡು ಕೆಲವು ವರ್ಷಗಳ ನಂತರ ಅದು ಕಡಿಮೆಯಾಗುತ್ತಾ ಹೋಗುತ್ತದೆ.

ಮೊಡವೆಗೆ ಕಾರಣಸಂಪಾದಿಸಿ

ಯಾಕೆ ಮೊಡವೆಗಳು ಕೆಲವರನ್ನಷ್ಟೇ ಕಾಡುತ್ತವೆ ಎಂಬುದಕ್ಕೆ ಸರಿಯಾದ ಕಾರಣ ತಿಳಿದಿಲ್ಲ. ಅನುವಂಶೀಯತೆ (ಶೇ-5ರಷ್ಟು ಜನರಲ್ಲಿ ತಾಯಿ ಅಥವಾ ತಂದೆ ಯಾರಾದರೂ ಮೊಡವೆಗೆ ತುತ್ತಾಗಿರುತ್ತಾರೆ.) ಒಂದು ಕಾರಣವಾದರೆ, ಇನ್ನಿತರ ಕಾರಣಗಳು ಈ ರೀತಿ ಇವೆ:

  1. ಹಾರ್ಮೋನುಗಳು (ಉದಾ: ಋತುಚಕ್ರ ಹಾಗೂ ಹರೆಯದಲ್ಲಾಗುವ ಏರುಪೇರು).
  2. ಒತ್ತಡದಿಂದ ಅಡ್ರೆನಲ್ ಗ್ರಂಥಿಯಿಂದ ಉತ್ಪತ್ತಿಯಾಗುವ ಹೆಚ್ಚಾದ ಪ್ರಮಾಣದ ಹಾರ್ಮೋನುಗಳು. ಇಂತಹ ಹಾರ್ಮೋನುಗಳು ಜಿಡ್ಡಿನ ಗ್ರಂಥಿಗಳು ಹೆಚ್ಚಾಗಿ ಕೆಲಸ ಮಾಡುವಂತೆ ಪ್ರಚೋದಿಸುತ್ತವೆ.
  3. ಚರ್ಮದಲ್ಲಿ ಮೃತ ಜೀವಕೋಶಗಳ ಶೇಖರಣೆ (ಕೆರಾಟಿನ್).
  4. ಬ್ಯಾಕ್ಟೀರಿಯಾಗಳು ಗ್ರಂಥಿಗಳ ರಂಧ್ರದಲ್ಲಿದ್ದು ಅಲರ್ಜಿ ಉಂಟು ಮಾಡುವುದು.
  5. ಚರ್ಮದಲ್ಲಾಗುವ ಕಿರಿಕಿರಿ, ತುರಿಕೆ ಉಂಟುಮಾಡುವ ಬದಲಾವಣೆ.
  6. ದೇಹದಾರ್ಢ್ಯಕ್ಕಾಗಿ ಬಳಸುವ ಅನಬಾಲಿಕ್ ಹಾರ್ಮೋನುಗಳು
  7. ಇತರ ರೋಗಗಳ ಚಿಕಿತ್ಸೆಗೆ ಬಳಸುವ ಔಷಧಿಗಳು (ಮಾನಸಿಕ ಅಸ್ವಸ್ಥತೆಗೆ ಬಳಸುವ ಲಿಥಿಯಮ್, ಮೂರ್ಛೆ ರೋಗದ ಔಷಧಿಗಳಾದ ಫಿನೈಟಾಯಿನ್ ಹಾಗೂ ಬಾರ್ಬಿಚುರೇಟ್ಸ್, ಸ್ಟೀರಾಯಿಡ್ ಹಾರ್ಮೋನುಗಳು)ಹಾರ‌್ಮೋನುಗಳ ಏರುಪೇರಿನಿಂದ ಉಂಟಾಗುವ ಇತರ ರೋಗಗಳು.

ಮೊಡವೆ ಚಿಕಿತ್ಸೆಸಂಪಾದಿಸಿ

  • ಮೊಡವೆಗಳಲ್ಲಿ ಹಲವಾರು ವಿಧಗಳಿವೆ. ತನ್ನಷ್ಟಕ್ಕೆ ತಾನೇ ಔಷಧೋಪಚಾರವಿಲ್ಲದೆ ಒಂದೆರಡು ವರ್ಷಗಳಲ್ಲಿ ಗುಣವಾಗುವ ಮೊಡವೆಗಳು. ಇವು ಸುಮಾರು ಇಪ್ಪತ್ತನೇ ವಯಸ್ಸು ಅಥವಾ ನಂತರ ಮರೆಯಾಗುತ್ತವೆ. ಹೆಂಗಸರಲ್ಲಿ ಮುಟ್ಟಾಗುವ ಮುಂಚೆ ಮೊಡವೆಗಳ ತೀವ್ರತೆ ಹೆಚ್ಚುತ್ತದೆ.
  • ತೀವ್ರವಾದ ಮೊಡವೆಗಳಿಂದ ಮುಖದ ಮೇಲೆ ಕಲೆಗಳು, ಮಾಗಿದ ಗಾಯದ ಗುರುತುಗಳು, ಚರ್ಮದಲ್ಲಿ ಹಳ್ಳಗಳು ಹಾಗೇ ಉಳಿಯುತ್ತವೆ. ಇವನ್ನು ಹೋಗಲಾಡಿಸುವುದು ಕಷ್ಟ. ತೀವ್ರ ತರನಾದ ಮೊಡವೆಗಳಿಂದ ಕೆಲವರಿಗೆ ಮಾನಸಿಕ ಆಘಾತ, ಅಸ್ವಸ್ಥತೆ, ಜಿಗುಪ್ಸೆ ಕಂಡುಬರುತ್ತದೆ.
  • ಅವರಲ್ಲಿ ಆತ್ಮವಿಶ್ವಾಸ ತುಂಬಲು, ಮಾನಸಿಕ ಸಮತೋಲನ ಕಾಪಾಡಲು ಮಾನಸಿಕ ವೈದ್ಯರ ಸಲಹೆ, ಧ್ಯಾನ, ಯೋಗ ಮುಂತಾದವು ಸಹಾಯಕ. ಮೊದಲು ಚರ್ಮರೋಗ ತಜ್ಞರನ್ನು ಕಾಣಿ. ಅವರು ಮೊಡವೆಗೆ ಕಾರಣ ಕಂಡು ಹಿಡಿದು ಸೂಕ್ತ ಚಿಕಿತ್ಸೆ ಕೊಡುತ್ತಾರೆ.ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಕ್ರೀಮ್‌ಗಳನ್ನು ವೈದ್ಯರ ಸಲಹೆ ಮೇರೆಗೆ ಬಳಸಿ. ವಿಜ್ಞಾನ ಮುಂದುವರಿದಂತೆ ಫೋಟೋ ಥೆರಪಿ, ಲೇಸರ್‌ಗಳನ್ನು ಮೊಡವೆ ಚಿಕಿತ್ಸೆಗೆ ಬಳಸಲಾಗುತ್ತಿದೆ.

ಮನೆಮದ್ದುಸಂಪಾದಿಸಿ

ಶ್ರೀಗಂಧ, ಮಂಗಳೂರಿನ ಹೆಂಚಿನಿಂದ ತೆಗೆದ ಗಂಧ, ಕೆಮ್ಮಣ್ಣು, ಬೆಳ್ಳುಳ್ಳಿಯ ರಸ, ಎರೆಹುಳುವಿನ ಮಣ್ಣು, ರುಬ್ಬಿದ ಮೆಂತ್ಯದ ಪೇಸ್ಟ್, ಅರಿಶಿನ ಮತ್ತು ಮೊಸರು, ಕಡಲೆಹಿಟ್ಟು ಈ ರೀತಿ ಮೊಡವೆಗಳಿಗೆ ಹಚ್ಚಲು ಬಹಳಷ್ಟು ಮನೆಯ ಔಷಧಿಗಳು ಲಭ್ಯ. ಇವನ್ನೆಲ್ಲ ಹಚ್ಚಿದರೂ, ಮೊಡವೆಗಳಿಗೆ ಬ್ಯಾಕ್ಟೀರಿಯಾ ಸೋಂಕು ತಗುಲದಂತೆ ಸ್ವಚ್ಛತೆ ಕಾಪಾಡುವುದು ಮುಖ್ಯವಾದ ಅಂಶ.

ದೂರ ಇರಬೇಕಾದ ಆಹಾರಸಂಪಾದಿಸಿ

  • ಚಾಕೊಲೇಟ್, ಆಲೂಚಿಪ್ಸ್, ಫ್ರೆಂಚ್ ಫ್ರೈ, ಸಕ್ಕರೆ, ಸಿಹಿ ಪದಾರ್ಥಗಳು ಮೊಡವೆಗೆ ಕಾರಣವಾಗುತ್ತವೆ ಹಾಗೂ ಅದಾಗಲೇ ಇರುವ ಮೊಡವೆಗಳನ್ನು ಹೆಚ್ಚು ಮಾಡುತ್ತವೆ. ಸಮುದ್ರದ ಆಹಾರದಲ್ಲಿ ಹೆಚ್ಚಾಗಿರುವ ಅಯೋಡಿನ್ ಅಂಶ ಮೊಡವೆಗೆ ಕಾರಣ[೬].
  • ಕೆನೆ ತೆಗೆಯದ ಹಾಲು ಸೇವನೆ ಮೊಡವೆಗೆ ಕಾರಣ. (ಹಸುವಿನ ಹಾಲಿನಲ್ಲಿ ಇರುವ ಕೆಲವು ಹಾರ್ಮೋನುಗಳೇ ಇದಕ್ಕೆ ಕಾರಣ ಇರಬಹುದು.)ಮಲಬದ್ಧತೆ ಮೊಡವೆಗೆ ಕಾರಣ. ಹೆಚ್ಚಾಗಿ ಹಸಿರು ಸೊಪ್ಪು, ತರಕಾರಿ ಸೇವಿಸಿ. ಜಿಡ್ಡಿನ ಪದಾರ್ಥ ಸೇವನೆ ಮಿತವಾಗಿರಲಿ.
  • ಆರೋಗ್ಯದ ದೃಷ್ಟಿಯಿಂದ ಅತಿ ಜಿಡ್ಡಿನ ಪದಾರ್ಥ, ಸಿಹಿ ಪದಾರ್ಥಗಳು, ಜಂಕ್ ಫುಡ್‌ಗಳು, ತಂಪು ಪಾನೀಯಗಳು, ಬೇಕರಿ ಪದಾರ್ಥಗಳ ಅತಿಯಾದ ಸೇವನೆಯನ್ನು ತಡೆಯಬೇಕು. ಯಾವುದೇ ರೀತಿಯ ಆಹಾರ ಪದಾರ್ಥವನ್ನು ಸೇವಿಸಿದಾಗ ಮೊಡವೆಗಳ ತೀವ್ರತೆ ಹೆಚ್ಚಾದರೆ, ಅಂತಹ ಆಹಾರವನ್ನು ತ್ಯಜಿಸುವುದು ಉತ್ತಮ.

ಪರಿಹಾರಸಂಪಾದಿಸಿ

  • ಮೊಡವೆ ತೊಲಗಿಸಲು ಪದೇ ಪದೇ ಸೋಪಿನಿಂದ ಮುಖವನ್ನು ಚೆನ್ನಾಗಿ ತಿಕ್ಕಿ ತೊಳೆಯಬೇಕು ಎಂಬ ನಂಬಿಕೆ ಹಲವರಲ್ಲಿ ಇದೆ. ಮೊಡವೆಗೆ ಮುಖದಲ್ಲಿ ಇರುವ ಕೊಳೆ ಕಾರಣವಲ್ಲ. ಅದು ಸೋಂಕು ಹಾಗೂ ನಂಜಿನಿಂದ ಉಂಟಾಗುತ್ತದೆ. ಆದ್ದರಿಂದ ಮೊಡವೆಗೆ ಕಾರಣವಾದ ಗ್ರಂಥಿಯ ರಂಧ್ರಗಳ ಮುಚ್ಚುವಿಕೆಗೆ, ಚರ್ಮದ ಒಳಪದರದಲ್ಲಿ ಸಾಮಾನ್ಯವಾಗಿ ಇರುವ ಬ್ಯಾಕ್ಟೀರಿಯಾಗಳು ಹಾಗೂ ಮೃತ ಜೀವಕೋಶಗಳು ಕಾರಣ. ಇವು ಚರ್ಮದ ಒಳಪದರದಲ್ಲಿ ಇರುವುದರಿಂದ ಚರ್ಮದ ಮೇಲ್ಭಾಗವನ್ನು ತೊಳೆಯುತ್ತಿದ್ದರೆ ಏನೂ ಉಪಯೋಗವಿಲ್ಲ.
  • ನಿಯಮಿತವಾಗಿ, ನಯವಾಗಿ ಸಾಬೂನಿನಿಂದ ಮುಖವನ್ನು ತೊಳೆಯಬೇಕೇ ಹೊರತು ಅತಿ ಹೆಚ್ಚು ಸಾಬೂನಿನ ಬಳಕೆ ಚರ್ಮವನ್ನು ಒಣಗಿಸುತ್ತದೆ. ಮೊಡವೆಗಳ ನಿವಾರಣೆಗೆ ಬಹಳಷ್ಟು ಔಷಧಿ, ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇರುತ್ತವೆ.
  • ಇವುಗಳ ಉಪಯೋಗದಿಂದ ಮೊದಲೆರಡು ವಾರ ಸ್ವಲ್ಪ ಫಲಿತಾಂಶ ಕಂಡುಬಂದರೂ ಕ್ರಮೇಣ ಮೂರು ತಿಂಗಳಲ್ಲಿ ಯಥಾಸ್ಥಿತಿ ಮರುಕಳಿಸುತ್ತದೆ. ಒಂದೆರಡು ವಾರಗಳಲ್ಲಿ ಮೊಡವೆಗಳನ್ನು ನಿವಾರಿಸುತ್ತೇವೆ ಎನ್ನುವ ಯಾವುದೇ ಜಾಹೀರಾತನ್ನೂ ನಂಬಬೇಡಿ.ಮೊಡವೆ ಸೋಂಕು ರೋಗವಲ್ಲ.
  • ಬಿಸಿಲಿನ ತಾಪ ಅಥವಾ ಹೆಚ್ಚಿನ ಶಾಖ ಇರುವ ಪ್ರದೇಶದಲ್ಲಿ ಕೆಲಸ ಮಾಡುವುದರಿಂದ, ಬೆವರಿನ ಗ್ರಂಥಿಗಳು ಹೆಚ್ಚಾಗಿ ಕೆಲಸ ಮಾಡಿ ಮೊಡವೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಲು ಸಹಾಯಕ ಎಂಬ ನಂಬಿಕೆ ಭಾಗಶಃ ಸತ್ಯ. ಮಾಯಿಶ್ಚರೈಸರ್ ಹಾಗೂ ಸನ್‌ಸ್ಕ್ರೀನ್ ಲೋಶನ್ ಬಳಕೆ ಸಹ ಮೊಡವೆಗಳಿಗೆ ಕಾರಣ ಆಗಬಹುದು. [೭]

ಉಲ್ಲೇಖಸಂಪಾದಿಸಿ

  1. eenews.india.com/kannada/health/not-only-diet-but-also-these-are-the-reasons-for-pimple-4102
  2. https://kannada.boldsky.com/beauty/skin-care/2012/way-to-get-clear-skin-003884.html
  3. http://www.kannadaprabha.com/health/acne-increase-risk-for-depression/309802.html
  4. http://www.varthabharati.in/article/aarogya-bhaagya/127812
  5. http://m.varthabharati.in/article/2018_04_09/127812
  6. https://kannada.boldsky.com/beauty/skin-care/2013/surprising-foods-that-cause-acne-004964.html
  7. ಉದಯವಾಣಿ, ಮೇ ೨೦ ೨೦೧೬[ಶಾಶ್ವತವಾಗಿ ಮಡಿದ ಕೊಂಡಿ]
"https://kn.wikipedia.org/w/index.php?title=ಮೊಡವೆ&oldid=1057668" ಇಂದ ಪಡೆಯಲ್ಪಟ್ಟಿದೆ