ಮುಖವಾಡ ಎಂದರೆ ವ್ಯಕ್ತಿ ರೂಪ ಮರೆಸಿಕೊಳ್ಳಲು, ಮುಖಚರ್ಯೆ ಬದಲಾಯಿಸಲು ಬಳಸುವ ಸಾಧನ (ಮಾಸ್ಕ್). ಧಾರ್ಮಿಕ ವಿಧಿ ವಿಧಾನಗಳಲ್ಲಿ, ನಾಟಕಗಳಲ್ಲಿ ಹಾಗೂ ಇತರ ಆಟಗಳಲ್ಲಿ ಮುಖವಾಡಗಳ ಬಳಕೆಯನ್ನು ಕಾಣಬಹುದು. ಪ್ರಾಚೀನ ಮಾನವ ವಿವಿಧ ನಂಬಿಕೆಗಳ ಹಿನ್ನೆಲೆಯಲ್ಲಿ ಇಂತಹ ಮುಖವಾಡಗಳನ್ನು ಸೃಷ್ಟಿಸಿಕೊಂಡ. ಮುಖವಾಡೆ ಧರಿಸುವ ಮೂಲಕ ಅತಿಮಾನುಷತೆಯನ್ನು ಪ್ರದರ್ಶಿಸುವ ಉದ್ದೇಶ ಸ್ಪಷ್ಟವಾಗಿ ಜಗತ್ತಿನ ಎಲ್ಲ ಕಡೆ ವ್ಯಕ್ತವಾಗುತ್ತದೆ. ಮುಖದ ರಕ್ಷಣೆಗಾಗಿಯೂ ಮುಖವಾಡಗಳ ಬಳಕೆಯಾಗುತ್ತಿದ್ದುದು. ಈಗಲೂ ಬಳಕೆ ಆಗುತ್ತಿರುವುದು ಕಂಡುಬರುತ್ತದೆ.

ಕ್ರಿ.ಪೂ. ೭೦೦೦ ದ್ದೆಂದು ಕಾಲನಿರ್ದೇಶ ಮಾಡಿದ, ಇದು ವಿಶ್ವದ ಅತ್ಯಂತ ಹಳೆಯ ಮುಖವಾಡವೆಂದು ಹೇಳಲಾಗಿದೆ

ಪ್ರಾಚೀನ ಕಾಲದಿಂದಲೂ ಪ್ರಪಂಚಾದ್ಯಂತವೂ ಮುಖವಾಡಗಳ ಬಳಕೆಯಿತ್ತು. ಪ್ರಾರಂಭದಲ್ಲಿ ಮುಖವಾಡಗಳನ್ನು ಹೆಚ್ಚಾಗಿ ಸಂಸ್ಕಾರ ಸಂಬಂಧವಾದ ಆಚಾರ ವಿಧಿಗಳಲ್ಲಿ ಹಾಗೂ ಧಾರ್ಮಿಕವಾದ ಆಚರಣೆಗಳಲ್ಲಿ ಬಳಸಲಾಗುತ್ತಿತ್ತು. ಲೌಕಿಕವಾಗಿ ಹಬ್ಬ ಹರಿದಿನಗಳಲ್ಲಿ ಮನರಂಜನೆಯ ವಸ್ತುವಾಗಿ ಇವುಗಳ ಬಳಕೆಯಾಗತೊಡಗಿದ್ದು ಅನಂತರ. ಮುಖವಾಡಗಳು ಮನುಷ್ಯ ಅಥವಾ ಪ್ರಾಣಿಗಳ ಮುಖಾಕೃತಿಯಲ್ಲಿರಬಹುದು; ಅತಿಮಾನುಷ ಇಲ್ಲವೇ ಕಾಲ್ಪನಿಕ ಮುಖಾಕೃತಿಯನ್ನು ಹೊಂದಿರಬಹುದು. ಮರ, ಕಲ್ಲು ಮುಂತಾದ ವಿವಿಧ ವಸ್ತುಗಳಿಂದ ಇವುಗಳನ್ನು ತಯಾರಿಸಲಾಗುತ್ತದೆ. ಧರ್ಮ, ಹುಲ್ಲು ಅಥವಾ ಬಟ್ಟೆಗಳಿಂದಲೂ ತಯಾರಿಸಬಹುದು. ಹೀಗೆ ತಯಾರಿಸಿದ ಮುಖವಾಡಗಳಿಗೆ ಕೆಲವೊಮ್ಮೆ ವಿವಿಧ ನಮೂನೆಗಳನ್ನು ಬಿಡಿಸಿ. ಬಣ್ಣವನ್ನು ತುಂಬಲಾಗುತ್ತದೆ. ಆಧುನಿಕ ಕಾಲದಲ್ಲಿ ಕಾಗದ ಬಳಸಿ ತಯಾರಿಸಿದ ಮುಖವಾಡಗಳಿಗೆ ಕೆಲವೊಮ್ಮೆ ವಿವಿಧ ನಮೂನೆಗಳನ್ನು ಬಿಡಿಸಿ, ಬಣ್ಣವನ್ನು ತುಂಬಲಾಗುತ್ತದೆ. ಆಧುನಿಕ ಕಾಲದಲ್ಲಿ ಕಾಗದ ಬಳಸಿ ತಯಾರಿಸಿದ ಮುಖವಾಡಗಳನ್ನು 'ಪಾಪ್ಯೆಮಾಷೆ ಎಂದು ಕರೆಯಲಾಗುತ್ತದೆ. ಮುಖವಾಡಗಳು ಮಾನವನ ಸಾಂಸ್ಕøತಿಕ ಬದುಕಿನಲ್ಲಿ ಹಾಸುಹೊಕ್ಕಾಗಿ ಬೆರೆತು. ಪ್ರಾಚೀನ ಮಾನವನ ವಿವಿಧೋದ್ದೇಶಗಳನ್ನು ಈಡೇರಿಸುವಲ್ಲಿ, ಮುಖ್ಯವಾಗಿ ಮಾನಸಿಕ ನೆಮ್ಮದಿಯನ್ನು ಕಾಯ್ದುಕೊಂಡು ಬರುವಲ್ಲಿ ಪ್ರಮುಖ ಪಾತ್ರವಹಿಸುತ್ತ ಬಂದಿವೆ.

ಪ್ರಾಚೀನ ಮಾನವ ಅಪೌರುಷೇಯ ಅತಿಮಾನುಷ ಶಕ್ತಿಗಳನ್ನು ತನಗೆ ತೋರಿದಂತೆ ಕಲ್ಪಿಸಿಕೊಂಡು, ಅವುಗಳಿಗೆ ಶಕ್ತಿ-ಸಾಮಥ್ರ್ಯಗಳನ್ನು ಆರೋಪಿಸಿ ಸೃಷ್ಟಿಸಿದ. ಅವುಗಳನ್ನು ಆರಾಧಿಸುವ ಸಂದರ್ಭದಲ್ಲಿ ಅತಿಮಾನುಷ ಶಕ್ತಿಗಳ ಸಂಕೇತವಾಗಿ ಮುಖವಾಡಗಳನ್ನು ಸೃಷ್ಟಿಸಿಕೊಂಡಿರಬೇಕು. ಮುಖವಾಡಗಳಿಗೆ ಮಾಂತ್ರಿಕ ಶಕ್ತಿಯಿದೆ ಎಂದು ನಂಬಲಾಗುತ್ತಿತ್ತು. ಸ್ಪೇನ್ ಮತ್ತಿತರ ಕಡೆಗಳಲ್ಲಿಯ ಪ್ರಾಗೈತಿ ಹಾಸಿಕ ಗುಹಾ ಚಿತ್ರಗಳಲ್ಲಿ ಮುಖವಾಡ ಧರಿಸಿದ ಮಾನವಾಕೃತಿಗಳನ್ನು ಚಿತ್ರಿಸಲಾಗಿದೆ. ಪಶ್ಚಿಮಾ, ಆಫ್ರಿಕ, ನ್ಯೂಗಿನಿ ಮತ್ತು ಅಮೆರಿಕದ ಅಮೆಜಾನ್ ಪ್ರದೇಶದ ಆದಿವಾಸಿ ಪಂಗಡಗಳು ಅತ್ಯಂತ ವರ್ಣರಂಜಿತವಾದ, ವಿಚಿತ್ರ ರೀತಿಯ ಮುಖವಾಡಗಳನ್ನು ತಯಾರಿಸುತ್ತಾರೆ. ಇವರು ಬೃಹದಾಕಾರದ ಮುಖವಾಡಗಳನ್ನು ಮರದಿಂದ ಕೆತ್ತುವರು. ಸಾಮಾನ್ಯವಾಗಿ ಈ ಮುಖವಾಡಗಳು ಪ್ರಾಣಿ ಅಥವಾ ಪಕ್ಷಿರೂಪದ್ದಾಗಿರುತ್ತವೆ. ಕೆಲವೊಮ್ಮೆ ಇವು ಸತ್ತವ್ಯಕ್ತಿಯ ಪ್ರೇತವನ್ನು ಪ್ರತಿನಿಧಿಸುವುದೂ ಉಂಟು. ಸಾಮಾನ್ಯವಾಗಿ ಗಂಡಸರು ಈ ಮುಖವಾಡಗಳನ್ನು ಧರಿಸುವರು. ಹೋಪಿ ಇಂಡಿಯನ್ನರು ತಮ್ಮ ಧಾರ್ಮಿಕ ನೃತ್ಯಗಳಲ್ಲಿ ಬಳಸುವ ಮುಖವಾಡಗಳು ಅತಿಮಾನುಷ ಶಕ್ತಿಗಳನ್ನು ಪ್ರತಿನಿಧಿಸುವುದಾಗಿ ಭಾವಿಸುವರು. ಈ ಅತಿಮಾನುಷ ಶಕ್ತಿಗಳು ಹಳ್ಳಿಗೆ ಬಂದು ಬೆಳೆಗೆ ಮಳೆಯನ್ನೂ ಮಕ್ಕಳಿಗೆ ಉಡುಗೊರೆಯನ್ನೂ ನೀಡುವರು ಎಂದು ಅವರ ನಂಬಿಕೆ. ಈ ಮುಖವಾಡ ರೂಪಗಳನ್ನು ಅವರು ಕಟ್‍ಸಿನಸ್ ಎಂದು ಕರೆಯುವರು. ಬ್ರಿಟಿಷ್ ಕೊಲಂಬಿಯಾದ ಕ್ವೀನ್ ಚಾರ್ಲೋಟ್ ದ್ವೀಪದಲ್ಲಿ ಜೀವಿಸಿದ್ದ ಹೈಡಾ ಆದಿವಾಸಿಗಳು ಪಿತೃಪೂಜೆಗೆ ಸಂಬಂಧಿಸಿದ ವಿಧಿಗಳಲ್ಲಿ ಹಾಗೂ ನೃತ್ಯಗಳಲ್ಲಿ ಮರದಿಂದ ಕೆತ್ತಿ, ಬಣ್ಣ ತುಂಬಿದ ಮುಖವಾಡಗಳನ್ನು ಬಳಸುತ್ತಿದ್ದರು. ಗ್ರೀಸ್‍ನಲ್ಲಿ ಡಯೋನಿಸಿಸ್ ದೇವತೆಯ ಆರಾಧನೆಯ ಹಿನ್ನೆಲೆಯಲ್ಲಿ ಹಾಗೂ ನಾಟಕಗಳ ಸಂದರ್ಭದಲ್ಲಿ ಮುಖವಾಡಗಳು ಸೃಷ್ಟಿಗೊಂಡಿರಬೇಕೆಂದು ಅಭಿಪ್ರಾಯಪಡಲಾಗಿದೆ. ಮೊದಮೊದಲು ಇಂತಹಮುಖವಾಡಗಳು ಮುಖ ಅಥವಾ ಮುಖದ ಒಂದುಭಾಗಕ್ಕೆ ಮಾತ್ರ ಇದ್ದು ಅನಂತರ ಇಡೀ ತಲೆಯನ್ನು ಆವರಿಸುವಂತೆ ರಚನೆಯಾಗತೊಡಗಿದವು. ಉಸಿರಾಟಕ್ಕೆ ಮತ್ತು ನೋಟಕ್ಕೆ ತೊಂದರೆಯಾಗದಂತೆ ಈ ಮುಖವಾಡಗಳ ರಚನೆ ಇರುತ್ತಿತ್ತು. ತಮಾಷೆ ಅಥವಾ ಹಾಸ್ಯ ಮುಖವಾಡಗಳ ರಚನೆಗೂ ಗಂಭೀರ ಅಥವಾ ದುರಂತ ಛಾಯೆಯ ಮುಖವಾಡಗಳ ರಚನೆಗೂ ಸಾಕಷ್ಟು ವ್ಯತ್ಯಾಸ ಇರುವುದನ್ನು ಕಾಣಬಹುದು.

ಧಾರ್ಮಿಕ ವಿಧಿಗಳ ಸಂದರ್ಭಗಳಲ್ಲಿ, ನಾಟಕ ಮುಂತಾದ ಲೌಕಿಕ ಸಂದರ್ಭಗಳಲ್ಲಲ್ಲದೆ ಸತ್ತವ್ಯಕ್ತಿಗಳ ಮುಖಕ್ಕೆ ಚಿನ್ನದಮುಖವಾಡ ಹಾಕಿ ಸಮಾಧಿ ಮಾಡಿದ ನಿದರ್ಶನಗಳು ಸತ್ತವರ ಮುಖದ ಹೋಲಿಕೆಯನ್ನು ಹೊಂದಿರುವಂತೆ ರಚನೆಗೊಂಡಿದ್ದು ಮೃತ ವ್ಯಕ್ತಿಯ ನೆನಪನ್ನುಂಟುಮಾಡಲು ಸಹಾಯಕವಾಗುತ್ತಿದ್ದುವು. ಈಜಿಪ್ಟ್ ಮುಂತಾದ ಕಡೆ ಇಂಥ ಮರಣಸಂಸ್ಕಾರ ಮುಖವಾಡಗಳು ಬಳಕೆಯಾಗುತ್ತಿದ್ದವು. ಈಜಿಪ್ಟ್‍ನ ಅತ್ಯಂತ ಕಿರಿಯಫೆರೂ ಆಗಿದ್ದ ಟುಟುಂಕಮೆನ್‍ನ ಚಿನ್ನದ ಮುಖವಾಡ ವಿಶ್ವ ವಿಖ್ಯಾತವಾದದ್ದು.

ಜಪಾನ್‍ನಲ್ಲಿ ವೈವಿಧ್ಯಮಯವಾದ ವಿವಿಧ ಸಂದರ್ಭಗಳಿಗೆ ಸಂಬಂಧಿಸಿದ ಅಪೂರ್ವ ರೀತಿಯ ಮುಖವಾಡಗಳು, ಮುಖವಾಡ ನೃತ್ಯಗಳು ಕಂಡುಬರುತ್ತವೆ. ಆದರೆ ಜಪಾನಿಗೆ ಈ ಮುಖವಾಡಗಳ ಪ್ರವೇಶ ಆದದ್ದು ಚೀನದ ಮೂಲಕ ಎಂದು ಹೇಳಲಾಗುತ್ತದೆ. ಸುಮಾರು 5-6ನೆಯ ಶತಮಾನದ ಅವಧಿಯಲ್ಲಿ ಈ ಕಾರ್ಯ ನಡೆದಿರಬಹುದೆಂದೂ ಬೌದ್ಧ ಧರ್ಮೀಯರ ಮೂಲಕ ಈ ಪದ್ಧತಿ ಅಲ್ಲಿಗೆ ಕಾಲಿಟ್ಟಿರಬಹುದೆಂದೂ ಅಭಿಪ್ರಾಯವಿದೆ. 14ನೆಯ ಶತಮಾನದಲ್ಲಿ ಅಲ್ಲಿಯ ಒಂದು ನಾಟಕ ಪ್ರಕಾರದಲ್ಲಿ ಅತ್ಯಂತ ಪರಿಣಾಮ ಕಾರಿಯಾಗಿ ಈ ಮುಖವಾಡಗಳ ಬಳಕೆಯಾಯಿತೆಂದು ತಿಳಿದುಬರುತ್ತದೆ. ಕ್ರಿ. ಶ. ಸು. 807ರಲ್ಲಿ 'ನರ ಎಂಬ ಸ್ಥಳದಲ್ಲಿ ಉಂಟಾದ ಭೂಮಿಯ ಬಿರುಕನ್ನು ತಡೆಗಟ್ಟಲು ಧಾರ್ಮಿಕ ಆಚರಣೆಯಾಗಿ ನಡೆದ ಮುಖವಾಡ ನೃತ್ಯವೇ ಹೆಚ್ಚು ಪ್ರಾಚೀನವಾದುದೆಂದು ನಂಬಲಾಗಿದೆ. ಮುಖವಾಡ ನೃತ್ಯಗಳು ದೇವಸ್ಥಾನ ಹಾಗೂ ಅರಮನೆಗಳಲ್ಲಿ ಪ್ರದರ್ಶಿತವಾಗುತ್ತಿದ್ದುವು. ಈ ನೃತ್ಯಗಳಲ್ಲಿ ಬಳಕೆಯಾಗುತ್ತಿದ್ದ ಮುಖವಾಡಗಳು ಆಕಾರದಲ್ಲಿ ಹೆಚ್ಚು ದೊಡ್ಡದಾಗಿರುತ್ತಿದ್ದುವು.

ಚೀನದಲ್ಲಿ ಮುಖವಾಡಗಳ ಸಂಖ್ಯೆ ಹಾಗೂ ವೈವಿಧ್ಯ ಹಿರಿದಾದದ್ದು. ಮುಖವಾಡಗಳನ್ನು ಧರಿಸಿದ ಪ್ರದರ್ಶನ ಹಾಗೂ ನೃತ್ಯಗಳು ದೇವಸ್ಥಾನಕ್ಕೆ ಸೇರಿದ ಒಂದು ಭಾಗದಲ್ಲಿ ನಡೆಯುತ್ತಿದ್ದವು. ಚರಿತ್ರಿಕವಾದ ಹಾಗೂ ಧಾರ್ಮಿಕವಾದ ನಾಟಕಗಳ ಪ್ರದರ್ಶನಗಳ ಸಂದರ್ಭಗಳಲ್ಲಷ್ಟೇ ಅಲ್ಲದೇ, ಮಕ್ಕಳೂ ಕೆಲವೊಂದು ಸಾಂಪ್ರದಾಯಿಕವಾದ ಆಚರಣೆಗಳ ಸಂದರ್ಭದಲ್ಲಿ ಮುಖವಾಡಗಳನ್ನು ಧರಿಸಿ ಅಭಿನಯಿಸುತ್ತಿದ್ದುಂಟು. ಚೀನ, ಟಿಬೆಟ್, ಜಪಾನ್ ದೇಶಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಸಿಂಹನೃತ್ಯ ಪ್ರಸಿದ್ಧ ಮುಖವಾಡ ನೃತ್ಯಗಳಲ್ಲೊಂದು.

ಭಾರತದಲ್ಲಿಯೂ ಆದಿವಾಸಿಗಳಲ್ಲಿ ಹಲವು ಕಾರಣಗಳ ಹಾಗೂ ಸಂದರ್ಭಗಳ ಹಿನ್ನೆಲೆಯಲ್ಲಿ ಮುಖವಾಡಗಳ ಬಳಕೆಯನ್ನು ಕಾಣುತ್ತೇವೆ. ಇಲ್ಲಿಯೂ ಮನರಂಜನೆಗಿಂತ ಹೆಚ್ಚಾಗಿ ಧಾರ್ಮಿಕ ವಿಧಿವಿಧಾನಗಳ ಹಿನ್ನೆಲೆಯಲ್ಲಿ ಇವುಗಳ ಬಳಕೆ ಕಂಡುಬರುತ್ತದೆ. ಪೌರಾಣಿಕ ವಿಷಯಗಳನ್ನೊಳಗೊಂಡ ಚಹೂ ನೃತ್ಯ ಮುಖವಾಡಗಳಿಂದ ಕೂಡಿದ ಆಕರ್ಷಕ ನೃತ್ಯವಾಗಿದೆ. ಭಾರತದ ಇನ್ನಿತರ ಕಡೆಗಳಲ್ಲಿಯೂ ಮುಖವಾಡದ ವಿವಿಧ ರೂಪಗಳು ಕಂಡುಬರುತ್ತವೆ.

ಕರ್ನಾಟಕದಲ್ಲಿ ಮುಖವಾಡ ನೃತ್ಯಗಳ ಹಲವು ಬಗೆಗಳು ಕಾಣಬರುತ್ತವೆ. ಗ್ರಾಮದೇವತೆಗಳಿಗೆ ಸಂಬಂಧಿಸಿದ ಸೋಮನ ಕುಣಿತ ಅತ್ಯಂತ ಪ್ರಸಿದ್ಧವಾದುದು. ಭಯಾನಕವೂ ಅತ್ಯಾಕರ್ಷಕವೂ ವೈಭವೋಪೇತವೂ ಆದ ಈ ಮುಖವಾಡಗಳು ಆಕಾರದಲ್ಲಿಯೂ ದೊಡ್ಡವು. ಗ್ರಾಮದೇವತೆಯ ಅಂಗರಕ್ಷಕರಾದ ಸೋಮಗಳ ಮುಖವಾಡವನ್ನು ರಕ್ತಭೂತಾಳೆ ದೇವಸಂಬಂಧಿ ಮರದಿಂದ ತಯಾರಿಸುತ್ತಾರೆ. ಸಾಮಾನ್ಯವಾಗಿ ಒಂದು ದೇವತೆಗೆ ಹಳದಿ ಸೋಮ. ಕೆಂಪು ಸೋಮ ಎಂಬ ಎರಡು ಸೋಮಗಳಿರುತ್ತವೆ. ಹಳದಿ ಸೋಮನನ್ನು ಕೆಂಚರಾಯನೆಂದ ಕೆಂಪು ಸೋಮನನ್ನು ಕೆಂಪರಾಯನೆಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿ ನಡೆಯುವ ಸೋಮನ ಕುಣಿತ ವರ್ಣರಂಜಿತವಾಗಿರುತ್ತದೆ.

ಯಕ್ಷಗಾನ ಬಯಲಾಟದಲ್ಲಿಯೂ ಮುಖವಾಡದ ಬಳಕೆಯನ್ನು ಕಾಣಬಹುದು. ಯಕ್ಷಗಾನ ಆರಂಭವಾಗುವುದೇ ಗಣಪತಿಯ ಮುಖವಾಡ ಧರಿಸಿದ ಬಾಲ ನಟನಿಂದ. ಬಯಲಾಟದ ಉಳಿದ ಸಂದರ್ಭಗಳಲ್ಲಿ ಮುಖವಾಡದ ಬಳಕೆ ಇರುವುದಿಲ್ಲ. ದೇವರ ಉತ್ಸವ ಜಾತ್ರೆಗಳ ಸಂದರ್ಭಗಳಲ್ಲಿ ಆಕರ್ಷಣೆಗಾಗಿ ತರುವ ಗಾರುಡಿ ಗೊಂಬೆಗಳು ಮುಖವಾಡದಿಂದ ಕೂಡಿದವುಗಳು. ವಿವಿಧ ಭಾವಭಂಗಿಯ ಮುಖವಾಡಗಳು ಇಲ್ಲಿ ಕಂಡುಬರುತ್ತವೆ. ಕೆಲವೆಡೆ ಬಾಬಯ್ಯನ ಹಬ್ಬದ ಸಂದರ್ಭದಲ್ಲಿ ಜರುಗುವ ಕೋಡಂಗಿ ಕುಣಿತವೂ ಮುಖವಾಡದಿಂದ ಕೂಡಿದೆ. ಅಡಕೆಪಟ್ಟೆಯಿಂದ ಮಾಡಿದ ಮುಖವಾಡವನ್ನು ಧರಿಸಿದ ವ್ಯಕ್ತಿ, ತಲೆಯ ಮೇಲೆ ಅಡಕೆಪಟ್ಟೆಯ ಉದ್ದನೆಯ ಟೋಪಿಯನ್ನು ಧರಿಸಿ, ಕೈಯಲ್ಲಿ ಅಡಕೆಪಟ್ಟೆಯ ಸುರುಳಿಯನ್ನು ಸುತ್ತಿಹಿಡಿದು ತಮಟೆಯ ನಾದಕ್ಕೆ ಲಯಬದ್ಧವಾಗಿ ಕುಣಿಯುತ್ತ ಊರಾಡುತ್ತಾನೆ; ಸಿಕ್ಕಿದವರಿಗೆ ಬಡಿಯುತ್ತಾನೆ. ಮಕ್ಕಳಿಗೆ ಹೆಚ್ಚು ಮನರಂಜನೆಯನ್ನು ಇದು ಒದಗಿಸುತ್ತದೆ. ಕೆಲವೆಡೆ ಹುಲಿವೇಷ ಕುಣಿಯಲು ಮುಖವಾಡ ಹಾಕಿಕೊಳ್ಳುತ್ತಾರೆ. ಆದರೆ ಸಿಂಹನೃತ್ಯದಲ್ಲಿ ಬಳಕೆಯಾಗುವ ಸಿಂಹದ ಮುಖವಾಡ ಸಿಂಹದ ಕಲ್ಪನೆಯನ್ನೇ ತಂದುಕೊಡುತ್ತದೆ. ಮುಖವಾಡಗಳ ರಚನೆ ಒಂದು ಜನಪದ ಕಲೆಯಾಗಿಯೂ ಕಂಡುಬರುತ್ತದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮುಖವಾಡ&oldid=1130503" ಇಂದ ಪಡೆಯಲ್ಪಟ್ಟಿದೆ