"ಮುಕ್ತಾಯಕ್ಕ" ಅನುಭಾವಿ ಶಿವಶರಣೆ , ಜನ್ಮಸ್ಥಳ- ಲಕ್ಕುಂಡಿ. ಅಂಕಿತ ನಾಮ - ಅಜಗಣ್ಣ.

ಮುಕ್ತಾಯಕ್ಕನ ಹಿನ್ನೆಲೆ

ಬದಲಾಯಿಸಿ

ಮುಕ್ತಾಯಕ್ಕ ಲಕ್ಕುಂಡಿ ಗ್ರಾಮದವಳು. ಲಕ್ಕುಂಡಿ ಗ್ರಾಮ ಗದಗ ಜಿಲ್ಲೆಯಲ್ಲಿದೆ. ಮುಕ್ತಾಯಕ್ಕ ಅಜಗಣ್ಣನ ಸೋದರಿ. ಇವರಿಬ್ಬರದು ಅನನ್ಯ ಭ್ರಾತೃಪ್ರೇಮ. ಈಕೆಯ ಆಧ್ಯಾತ್ಮದ ಗುರು, ತಂದೆ ಎಲ್ಲವೂ ಅಣ್ಣನೇ ಆಗಿದ್ದನು. ಮುಕ್ತಾಯಕ್ಕನಿಗೆ ೧೦ವರ್ಷದಲ್ಲಿ 'ಮಸಳಿಕಲ್ಲು' ಎಂಬ ಗ್ರಾಮಕ್ಕೆ ಮದುವೆ ಮಾಡಿ ಕೊಡುವರು. ೧೨ನೇ ಶತಮಾನದ ಶಿವಶರಣೆಯರ ಸಮೂಹದ ಆಧ್ಯಾತ್ಮಿಕ ಸಿದ್ದಾಂತದ ವಿಷಯದಲ್ಲಿ, ವಿಶಾಲ ಮನೋಭಾವ, ದಿಟ್ಟ ವ್ಯಕ್ತಿತ್ವ, ಸ್ವತಂತ್ರ ಪ್ರವೃತ್ತಿಯ ಹೆಣ್ಣೆಂದು ಮುಕ್ತಾಯಕ್ಕನನ್ನು ಗುರುತಿಸುತ್ತೇವೆ. ಈಕೆ ಪ್ರಖರ ವೈಚಾರಿಕತೆಯ, ತಾತ್ವಿಕ ಪರಿಜ್ಞಾನದ, ಸೈದ್ಧಾಂತಿಕ ವಿಶ್ಲೇಷಣೆಯ ಉನ್ನತ ತತ್ವಜ್ಞಾನಿ. ಕಾಯದ ಸೀಮೆಯ, ಭಾವದ ಭ್ರಾಂತಿಯ, ಜೀವ ಮಾಯೆಯನ್ನು ಕಳೆದುಕೊಂಡರೂ ದ್ವೇತಾದ್ವೇತದ ಸಾಕಾರ, ನಿರಾಕಾರದ ನಾನು-ನೀನುಎಂಬ ವಿಭಿನ್ನ ತಿಳುವಳಿಕೆಯ ತಿಮಿರದಂಚಿನಲಿ ಸಿಲುಕಿ ತೊಳಲಾಡುವ ಸಾಧಕಿಯಾಗಿ ಮುಕ್ತಾಯಕ್ಕ ನಮಗೆ ಕಾಣಿಸುತ್ತಾಳೆ. ಅವಳು ತನ್ನ ವಚನಗಳಲ್ಲಿ ಅಲ್ಲಮಪ್ರಭು, ಚನ್ನಬಸವಣ್ಣ, ಮರುಳ ಶಂಕರದೇವ ಮುಂತಾದ ಶರಣರ ಕಾರುಣ್ಯದಿಂದ ತಾನು ಪರಿಣಾಮಿಯಾದುದನ್ನು ವಿನಮ್ರತೆಯಿಂದ ಸ್ಮರಿಸಿದ್ದಾಳೆ.

ಮುಕ್ತಾಯಕ್ಕನ ಪ್ರಮುಖ ವಚನಗಳು

ಬದಲಾಯಿಸಿ

ಮುಕ್ತಾಯಕ್ಕನನ್ನು ವಚನಸಾಹಿತ್ಯದ ಧೃವತಾರೆ ಎಂದು ಕರೆಯಲಾಗುತ್ತದೆ. ಅಕ್ಕಮಹಾದೇವಿ ಭಕ್ತಿಮಾರ್ಗ, ತಾರ್ಕಿಕ ಜ್ಞಾನಮಾರ್ಗ ಹೊಂದಿದರೆ, ಮುಕ್ತಾಯಕ್ಕ ವೈಚಾರಿಕತೆಯ ದಿಟ್ಟನಿಲುವಿನ ಜ್ಞಾನಮಾರ್ಗ ಹೊಂದಿದವಳು. ಈಕೆಯ ಸುಮಾರು ೩೭ವಚನಗಳು ಈವರೆಗೆ ನಮಗೆ ಲಭ್ಯವಾಗಿವೆ. ಈಕೆಯ ವಚನಗಳ ಅಂಕಿತ ಅಜಗಣ್ಣ, ಅಜಗಣ್ಣ ತಂದೆ ಎಂಬುದು.

೧.ಅಲರೊಳಡಗಿದ
ಪತಂಗದೊಳಡಗಿದ ಅನಲನಂತೆ
ಶಶಿಯೊಳಡಗಿದ ಷೋಡಶ ಕಳೆಯಂತೆ
ಉಲುಹಳಡಗಿದ ವಾಯುವಿನಂತೆ
ಸಿಡಿಲೊಳಡಗಿದ ಗಾತ್ರದ ತೇಜದಂತೆ
ಇರಬೇಕಯ್ಯ ಯೋಗ ಎನ್ನ
ಅಜಗಣ್ಣ ತಂದೆಯಂತೆ

೨.ಆರು ಇಲ್ಲದವಳೆಂದು
ಆಳಿಗೊಳಲು ಬೇಡ
ಆಳಿಗೊಂಡೆಡೆ ಆನು
ಅಂಜುವವಳಲ್ಲ ಒಲವಿನ
ಒತ್ತೆ ಕಲ್ಲನು ಬೆವರಿಸಬಲ್ಲೆ
ಕಾಣಿರೊ ಅಪ್ಪಿದವರನಪ್ಪಿದಡೆ
ತರಗೆಲೆಯಂತೆ ರಸವನು
ಅರಸಿದಡುಂಟೇ ಅಜಗಣ್ಣ ತಂದೆ