ಜ್ಞಾನಮಾರ್ಗ - ವೇದದ ಒಂದು ಭಾಗ ( ಇನ್ನೊಂದು ಭಾಗವು ಕರ್ಮಕಾಂಡ ; ಕರ್ಮಕಾಂಡದಲ್ಲಿ ಕರ್ಮಕ್ಕೆ ವಿಶೇಷವಾಗಿ ಪ್ರಾಮುಖ್ಯವಿದೆ. (ನೋಡಿ- ಕರ್ಮ, ಕರ್ಮತ್ರಯ, ಕರ್ಮಯೋಗ)) ಜ್ಞಾನಕಾಂಡ ಪ್ರತಿಪಾದಿಸಿರುವ ಮಾರ್ಗವನ್ನು ಜ್ಞಾನಮಾರ್ಗ, ಜ್ಞಾನಯೋಗ ಎಂದು ಕರೆವುದಿದೆ. ಜ್ಞಾನಕಾಂಡ ಉಪನಿಷತ್ತುಗಳನ್ನು ಒಳಕೊಂಡಿದೆಯೆಂದು ಹೇಳಬಹುದು.

ಕರ್ಮಕಾಂಡ ಮತ್ತು ಜ್ಞಾನಮಾರ್ಗ

ಬದಲಾಯಿಸಿ

ಮನುಷ್ಯನಿಗೆ ಬೇಕಾಗಿರುವುದು ದುಃಖನಿವೃತ್ತಿ, ಸುಖಪ್ರಾಪ್ತಿ. ಇಹಲೋಕದಲ್ಲಿಯೂ ಪರಲೋಕದಲ್ಲಿಯೂ ಸುಖವನ್ನು ಪಡೆಯಬೇಕಾದರೆ ಮನುಷ್ಯರು ದೇವತೆಗಳನ್ನು ಸಂತುಷ್ಟಿಗೊಳಿಸಬೇಕು. ಇದಕ್ಕೋಸ್ಕರ ಯಜ್ಞಯಾಗಾದಿಗಳು ಸಾಧನಗಳು. ಇಂಥ ಕರ್ಮಗಳನ್ನು ವಿವರಿಸಲು ಕಲ್ಪಸೂತ್ರಗಳು ಬಂದಿವೆ.

ಕರ್ಮಕಾಂಡದಲ್ಲಿ ಪ್ರತಿಪಾದಿತವಾಗಿರುವ ಕಾಮ್ಯಕರ್ಮಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಉಪನಿಷತ್ತುಗಳಲ್ಲಿ ನೋಡಬಹುದು. ಪಶುಗಳು ಮನುಷ್ಯನನ್ನು ಸೇವಿಸುವಂತೆ ಮನುಷ್ಯರು ದೇವತೆಗಳನ್ನು ಸೇವಿಸುತ್ತಾರೆಂದೂ ಮನಷ್ಯರು ತತ್ತ್ವವನ್ನು ಅರಿತುಕೊಳ್ಳುವುದು ದೇವತೆಗಳಿಗೆ ಪ್ರಿಯವಲ್ಲವೆಂದೂ ಬೃಹದಾರಣ್ಯಕೋಪನಿಷತ್ತು ಹೇಳುತ್ತದೆ. ಈ ಅಭಿಪ್ರಾಯದ ಪ್ರಕಾರ ದೇವತೆಗಳಿಗಾಗಿ ಮಾಡುವ ಯಜ್ಞದಿಂದ ನಿತ್ಯಫಲ ಸಿದ್ಧಿಸುವುದಿಲ್ಲವೆಂದೂ ತತ್ತ್ವಜ್ಞಾನಿದಿಂದ ಮಾತ್ರ ಅದು ಉಂಟಾಗುತ್ತದೆಂದೂ ತಿಳಿದುಬರುತ್ತದೆ. ಯಜ್ಞರೂಪಗಳು ಅನಿತ್ಯವೆಂದೂ ಅದೃಢವೆಂದೂ ಇವನ್ನು ಶ್ರೇಯಸ್ಸೆಂದು ಅರಿಯುವವರು ಜರಾಮೃತ್ಯುಗಳನ್ನು ಹೊಂದುತ್ತಾರೆಂದೂ ಮುಂಡಕೋಪನಿಷತ್ತು ಹೇಳುತ್ತದೆ. ಪ್ರಮತ್ತರಾದ ಕರ್ಮಿಗಳು ಸ್ವರ್ಗದಲ್ಲಿ ಕರ್ಮಫಲವನ್ನು ಅನುಭವಿಸಿದ ಮೇಲೆ ಈ ಲೋಕವನ್ನೋ ಅಥವಾ ಇದಕ್ಕಿಂತಲೂ ಹೀನತರವಾದುದನ್ನೋ ಪ್ರವೇಶಿಸುತ್ತಾರೆಂದು ಇದೇ ಉಪನಿಷತ್ತು ಮತ್ತೊಂದು ಕಡೆ ಹೇಳುತ್ತದೆ. ಧರ್ಮಾಧರ್ಮಗಳು, ಪಾಪಪುಣ್ಯಗಳು-ಇವನ್ನೆಲ್ಲ ಅತಿಕ್ರಮಿಸಿರುವ ಆತ್ಯಂತಿಕ ಮೋಕ್ಷವನ್ನು ಪಡೆಯಲು ಜ್ಞಾನಮಾರ್ಗ ಏಕಸಾಧನವಾಗಿರುತ್ತದೆ. ಈ ಮಾರ್ಗವನ್ನು ವಿಶೇಷವಾಗಿ ಪ್ರಚಾರಕ್ಕೆ ತಂದವರು ಆದಿಶಂಕರಾಚಾರ್ಯರು.

ಆದರೆ ವೈದಿಕಯುಗದಲಿಯೇ ಕರ್ಮಮಾರ್ಗಕ್ಕೆ ವಿರೋಧ ಕ್ರಮೇಣ ಕಡಿಮೆಯಾಗಿ ಕರ್ಮ ಮೋಕ್ಷಪ್ರಾಪ್ತಿಗೆ ಸಾಧನವಾಗುವುದನ್ನು ನೋಡಬಹುದು (ಬೃಹದಾರಣ್ಯಕೋಪನಿಷತ್ತು). ಹೀಗೆ ಉಪನಿಷತ್ತುಗಳು ವೇದಗಳ ಅಂತವಾಗಿ ಪರಿಣಮಿಸಿ, ವಿಮೋಚನೆ ಕೊಡುವ ಜ್ಞಾನವನ್ನು ಪ್ರತಿಪಾದಿಸುತ್ತವೆ.

ಸರಿಯಾದ ಜ್ಞಾನದ ಹಿರಿಮೆ

ಬದಲಾಯಿಸಿ

ಯಜ್ಞಗಳೂ ದಾನಗಳೂ ಆತ್ಮನನ್ನು ಅರಿತುಕೊಳ್ಳುವುದಕ್ಕೆ ಸಹಕಾರಿಯಾಗಿರುತ್ತವೆಂದು ಒಪ್ಪಿಕೊಂಡರೂ ಅಂತಿಮ ಬ್ರಹ್ಮಸಾಕ್ಷಾತ್ಕಾರಕ್ಕೆ ಸಮ್ಯಗ್ ಜ್ಞಾನವೇ ಉದಯಿಸಬೇಕು. ಜ್ಞಾನೋತ್ಪತ್ತಿಗೆ ಸಹಕಾರಿಯಾಗಬೇಕಾದರೆ ಕರ್ಮ ನಿಷ್ಕಾಮವಾಗಿರಬೇಕು. ಯಾವ ವಿಧವಾದ ಫಲಾಭಿಸಂಧಿ ಇರಕೂಡದು. ಸ್ವಾರ್ಥರಹಿತವಾದ ಕರ್ಮವನ್ನು ಮಾಡಿದರೆ ಅದು ಚಿತ್ತಶುದ್ಧಿಯನ್ನುಂಟುಮಾಡಿ ಸಾಧಕವನ್ನು ಜ್ಞಾನಪ್ರಾಪ್ತಿಗೆ ಅರ್ಹನನ್ನಾಗಿ ಮಾಡುತ್ತದೆ. ಯಾವನು ವಿದ್ಯೆ ಮತ್ತು ಅವಿದ್ಯೆ (ಎಂದರೆ ಕರ್ಮ)-ಇವೆರಡನ್ನೂ ಒಟ್ಟಿಗೆ ಅರಿಯುತ್ತಾನೆಯೋ ಅವನು ಅವಿದ್ಯೆಯ (ಎಂದರೆ ಕರ್ಮದ) ದ್ವಾರಾ ಮೃತ್ಯವನ್ನು ದಾಟಿ ವಿದ್ಯೆಯ ದ್ವಾರಾ ಅಮೃತವನ್ನು ಪಡೆಯುತ್ತಾನೆ ಎಂದು ಈಶಾವಾಸ್ಯೋಪನಿಷತ್ತು ಹೇಳುತ್ತದೆ.

ಅನಾದಿಯಾದ ಅವಿದ್ಯೆಯಿಂದ ಕಾಮವುಂಟಾಗುತ್ತದೆ ಕಾಮ, ಕರ್ಮವನ್ನು ಮಾಡುವಂತೆ ಮನುಷ್ಯನ್ನು ಪ್ರೇರಿಸುತ್ತದೆ. ಅವಿದ್ಯಾ-ಕಾಮ-ಕರ್ಮಗಳ ಪರಿವರ್ತನೆಯೇ ಸಂಸಾರ. ಪ್ರತಿಯೊಂದು ಕರ್ಮಕ್ಕೂ ಫಲವಿರುವುದರಿಂದ ಜೀವ ಪುನಃಪುನಃ ಜನ್ಮಮರಣಗಳಿಗೆ ಈಡಾಗಿ ಅವಶ್ಯವಾದ ಕರ್ಮಫಲವನ್ನು ಅನುಭವಿಸುತ್ತಾನೆ. ಕರ್ಮಫಲರೂಪವಾದ ಸಂಸಾರಚಕ್ರವನ್ನು ನಿಲ್ಲಿಸಲು ಜ್ಞಾನವೊಂದೇ ಸಮರ್ಥವಾಗಿರುತ್ತದೆ. ಜ್ಞಾನ ಕಾಮಕರ್ಮಗಳ ಬೀಜವಾದ ಅವಿದ್ಯೆಯನ್ನೇ ಸಮರ್ಥವಾಗಿರುತ್ತದೆ. ಜ್ಞಾನ ಕಾಮಕರ್ಮಗಳ ಬೀಜವಾದ ಅವಿದ್ಯೆಯನ್ನೇ ದಹಿಸುವುದಿರಿಂದ ಜೀವನಿಗೆ ಮರಳಿ ಸಂಸಾರ ಉಂಟಾಗುವುದಿಲ್ಲ.

ಇಲ್ಲಿ ಮೋಕ್ಷವನ್ನು ಸಂಪಾದಿಸುವ ಜ್ಞಾನದ ಸ್ವರೂಪವೇನು ಎಂಬ ಪ್ರಶ್ನೆ ಬರುತ್ತದೆ. ಏಕೆಂದರೆ ಸಂಸಾರಿಗಳಿಗೆ ಶಾಖೋಪಶಾಖೆಯಾಗಿ ಒಡೆದಿರುವ ಬಹು ಬಗೆಯಾದ ಜ್ಞಾನಗಳ ಅನುಭವವಿರುತ್ತದೆ. ಈ ಸಾಂಸಾರಿಕ ಜ್ಞಾನಗಳೆಲ್ಲವೂ ಮೋಕ್ಷಕ್ಕೆ ಪ್ರಯೋಜನಕಾರಿಯಲ್ಲವೆಂದು ವೇದಾಂತ ಹೇಳುತ್ತದೆ. ಋಗ್ವೇದದಿಂದ ಹಿಡಿದು ಜ್ಯೋತಿಷ್ಯದ ವರೆಗೆ ಇರುವುದೆಲ್ಲ ಅಪರಾವಿದ್ಯೆಯೆಂದೂ ಯಾವುದರಿಂದ ಅಕ್ಷರವನ್ನು ಹೊಂದಬಹುದೊ ಅದೇ ಪರಾವಿದ್ಯೆಯೆಂದೂ ಅಂಬಿರಸ ಶೌನಕನಿಗೆ ಹೇಳುತ್ತಾನೆ (ಮುಂಡಕೋಪನಿಷತ್ತು). ವೇದಗಳನ್ನೂ ಇತಿಹಾಸ ಪುರಾಣಗಳನ್ನೂ ವ್ಯಾಕರಣಾದಿಗಳನ್ನೂ ಓದಿದವನೂ ಆತ್ಮನನ್ನು ಅರಿತುಕೊಂಡಿಲ್ಲವೆಂದೂ ಆತ್ಮವಿಂದ ಮಾತ್ರ ಶೋಕವನ್ನು ದಾಟಲು ಶಕ್ತನಾಗಿರುವುದರಿಂದ ತನಗೆ ಆತ್ಮನನ್ನು; ಉಪದೇಶಿಸಬೇಕೆಂದೂ ನಾರದನು ಸನತ್ಕುಮಾರನ್ನು ಬೇಡಿಕೊಳ್ಳುತ್ತಾನೆ. ಆಗ ಸನತ್ಕುಮಾರ ನಾರದನಿಗೆ ಭೂಮವಿದ್ಯೆಯ ಮೂಲಕ ಪರಮಾರ್ಥ ತತ್ತ್ವವನ್ನು ಉಪದೇಶಿಸುತ್ತಾನೆ. (ಛಾಂದೋಗ್ಯೋಷನಿಷತ್ತು). ಆತ್ಮ, ಪ್ರವಚನದಿಂದಾಗಲಿ ಮೇಧಾಶಕ್ತಿಯಿಂದಾಗಲಿ ಶ್ರವಣದಿಂದಾಗಲಿ ಲಭ್ಯನಲ್ಲವೆಂದು ಕಠೋಪನಿಷತ್ತು ಹೇಳುತ್ತದೆ. ಆದುದರಿಂದ ಮೋಕ್ಷವನ್ನು ಉಂಟುಮಾಡುವ ಜ್ಞಾನ ಆತ್ಮಜ್ಞಾನ ಅಥವಾ ಬ್ರಹ್ಮಜ್ಞಾನ ಆಗಿರಬೇಕು. ಬ್ರಹ್ಮವೇ ವಿಜ್ಞಾನ, ಆನಂದ (ಬೃಹದಾರಣ್ಯಕ ಉಪನಿಷತ್ತು), ಬ್ರಹ್ಮವಿದ ಬ್ರಹ್ಮವೇ ಆಗುತ್ತಾನೆ (ಮುಂಡಕೋಪನಿಷತ್ತು). ಆತ್ಮವಿದ ಶೋಕವನ್ನು ದಾಟುತ್ತಾನೆ (ಛಾಂದೋಗ್ಯೋಪನಿಷತ್ತು). ಹೀಗೆಂದು ಶ್ರುತಿಗಳು ಸಾರುತ್ತವೆ. ಸಚ್ಚಿದಾನಂದಸ್ವರೂಪವಾದ ಬ್ರಹ್ಮದ ಪ್ರಾಪ್ತಿಯೇ ಮೋಕ್ಷ ಮತ್ತು ಶೋಕದ ನಿವೃತ್ತಿ.

ನಮ್ಮ ವ್ಯವಹಾರದಲ್ಲಿಯೂ ಲೌಕಿಕಜ್ಞಾನದಿಂದ ಭ್ರಮೆಯ ಅಥವಾ ಭಯದ ನಿವೃತ್ತಿಯಾಗುವುದು ಕಂಡುಬರುತ್ತದೆ. ಕತ್ತಲಿನಲ್ಲಿ ಹಗ್ಗವನ್ನು ನೋಡಿ ಹಾವೆಂಬ ಭ್ರಮೆಯಿಂದ ಭಯಪಟ್ಟಾಗ ಯಾರೋ ಇದು ಹಾವಲ್ಲ ಹಗ್ಗ ಎಂದು ಹೇಳಿದರೆ ಭ್ರಮೆಯ ನಿವೃತ್ತಿಹಾಗುವುದು. ಇದೇ ರೀತಿ ಮೋಕ್ಷವೂ ಬೇರೊಂದು ಲೋಕವನ್ನು ಹೊಂದಿಸುವುದಿಲ್ಲ; ಅದು ಮೊದಲೇ ಪ್ರಾಪ್ತವಾದ ಚಿದಾನಂದನ ಪ್ರಾಪ್ತಿ. ಮೊದಲೇ ತೊಲಗಿಹೋಗಿರುವ ಅನರ್ಥದ ನಿವೃತ್ತಿ. ಆದುದರಿಂದ ಜ್ಞಾನವು ಮೋಕ್ಷಕ್ಕೆ ಒಂದೇ ಸಾಧನವಾಗಿರುವುದು ಸಹಜವಾಗಿರುತ್ತದೆ.

ಈ ಜ್ಞಾನ, ಜೀವಾತ್ಮ ಪರಮಾತ್ಮಕ ಐಕ್ಯರೂಪದಲ್ಲಿದೆ.

ಐಕ್ಯದ ಸ್ವರೂಪ, ಬ್ರಹ್ಮ, ಆತ್ಮ, ಜೀವಬ್ರಹ್ಮರ ಐಕ್ಯ

ಬದಲಾಯಿಸಿ

ಉಪನಿಷತ್ತುಗಳಲ್ಲಿ ಇಷ್ಟು ಪ್ರಾಮುಖ್ಯವನ್ನು ಪಡೆದಿರುವ ಐಕ್ಯದ ಸ್ವರೂಪವೇನು? ಬ್ರಹ್ಮ ಮತ್ತು ಆತ್ಮ ಎಂಬ ಭಾವನೆಗಳು ಹೇಗೆ ಬಂದವು?

ಈ ಎರಡು ಶಬ್ದಗಳನ್ನು ವೇದಾಂತದ ಹೃದಯವೆಂದು ಹೇಳಬಹುದು. ಬ್ರಹ್ಮಶಬ್ದ ಹೇಗೆ ಬಂದಿದೆಯೆಂದು ಖಚಿತವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಬೃಹ್ ಧಾತುವಿಗೆ ಬೆಳೆ ಅಥವಾ ಹೊರಹೊಮ್ಮು ಎಂಬ ಅರ್ಥವಿದೆ. ಮೊತ್ತಮೊದಲು ಬ್ರಹ್ಮ ಶಬ್ದಕ್ಕೆ ಪ್ರಾರ್ಥನೆ ಎಂಬ ಅರ್ಥವಿದ್ದಂತೆ ತೋರುತ್ತದೆ. ವಾಕ್ಕಿನಲ್ಲಿ ಬ್ರಹ್ಮವೇ ಪ್ರಾರ್ಥನಾರೂಪದಿಂದ ಹೊರಹೊಮ್ಮುತ್ತದೆ. ಇದಲ್ಲದೆ ಈ ವಸ್ತು ಜಗದ್ರೂಪದಿಂದಲೂ ವ್ಯಕ್ತವಾಗುತ್ತದೆ. ಆತ್ಮಶಬ್ದದ ವ್ಯುತ್ಪತ್ತಿಯೂ ಬ್ರಹ್ಮಶಬ್ದದಷ್ಟೇ ಅಸ್ಪಷ್ಟವಾಗಿದೆ. ಬ್ರಹ್ಮಶಬ್ದ ಜಗತ್ಕಾರಣವನ್ನು; ಸೂಚಿಸಲು ಹೊರಟಿದ್ದರೆ ಆತ್ಮಶಬ್ದ ಎಲ್ಲದರ ಒಳಗಿರುವ ತತ್ತ್ವವನ್ನು ತಿಳಿಸಲು ಹೊರಟಿದೆಯೆಂದು ಹೇಳಬಹುದು. ಈ ದೃಷ್ಟಿಯಿಂದ ಮನುಷ್ಯನ ಅಂತರತಮನಾದ ಜೀವ ಆತ್ಮನೆನಿಸಿದ್ದಾನೆ. ಜಗತ್ಕಾರಣವಾದ ಬ್ರಹ್ಮಕ್ಕೂ ಪ್ರತಿ ಶರೀರದಲ್ಲಿರುವ ಆತ್ಮನಿಗೂ ಐಕ್ಯವನ್ನು ಸಾಧಿಸುವುದು ಜ್ಞಾನಮಾರ್ಗದ ಮುಖ್ಯೋದ್ದೇಶವಾಗಿದೆ.

ಐಕ್ಯಜ್ಞಾನದ ಸಾಧನೆ ಹೇಗೆ?

ಬದಲಾಯಿಸಿ

ನಾನು ಬ್ರಹ್ಮವಾಗಿರುವೆನು ಎಂದು ಅದು ತನ್ನನ್ನೇ ಅರಿತುಕೊಂಡಿತು (ಬ್ರಹದಾರಣ್ಯಕೋಪನಿಷತ್ತು). ಅದು ನೀನಾಗಿರುವೆ (ಛಾಂದೋಗ್ಯೋಪನಿಷತ್ತು). ಈ ಮೊದಲಾದ ವಾಕ್ಯಗಳಲ್ಲಿ ಜೀವಬ್ರಹ್ಮರ ಐಕ್ಯವನ್ನು ಉಪನಿಷತ್ತುಗಳ ಉಪದೇಶಿಸುತ್ತವೆ. ಈ ಐಕ್ಯಜ್ಞಾನ ಅಪರೋಕ್ಷರೂಪದಲ್ಲಿದೆ ಏಕೆಂದರೆ ಇದು ಪರೋಕ್ಷವಾಗಿದ್ದರೆ ಅಪರೋಕ್ಷವಾದ ಭ್ರಮೆ ಹೋಗುತ್ತಿರಲಿಲ್ಲ. ಅಪರೋಕ್ಷಜ್ಞಾನ ತತ್ತ್ವಮಸಿ ಮುಂತಾದ ವಾಕ್ಯಗಳಿಂದ ಉಂಟಾಗುತ್ತದೆಂದು ಕೆಲವರ ಅಭಿಪ್ರಾಯ; ಶ್ರವಣ ಮನನ ನಿದಿ ಧ್ಯಾಸನಗಳಿಂದ ಸಂಸ್ಕೃತವಾದ ಮನಸ್ಸಿನಿಂದ, ಉಂಟಾಗುತ್ತದೆಂದು ಮತ್ತೆ ಕೆಲವರ ಅಭಿಪ್ರಾಯ. ಪರಮಾರ್ಥತತ್ತ್ವವನ್ನು ವಿಪರೀತವಾಗಿ ಗ್ರಹಿಸಿರುವುದರಿಂದಲೇ ಅನಿಷ್ಟ ಉಂಟಾಗಿರುವುದು ಅನಿಷ್ಟನಿವೃತ್ತಿ ಸಮ್ಯಗ್ ಜ್ಞಾನದಿಂದಲೇ ಆಗಬೇಕು. ವೈರಾಗ್ಯ ಸಮ್ಯಗ್ ಜ್ಞಾನದ ಪ್ರಾಪ್ತಿಗೆ ಅತ್ಯಂತ ಸಹಾಯಕವಾಗಿರುತ್ತದೆ.

ವೈರಾಗ್ಯವಿಲ್ಲದಿದ್ದರೆ ಜ್ಞಾನೋದಯವೇ ಸಂಭವಿಸುವುದಿಲ್ಲ. ಕುಸಂಸ್ಕಾರಗಳೆಲ್ಲ ನಾಶವಾದ ಉತ್ತರಾವಸ್ಥಯೇ ವೈರಾಗ್ಯ. ವ್ಯಕ್ತಿ ಶಾಂತನೂ ದಾಂತನೂ ಉಪರತನೂ ತಿತಿಕ್ಷುವೂ ಸಮಾಹಿತನೂ ಆಗಿ ತನ್ನಲ್ಲಿಯೇ ಆತ್ಮನನ್ನು ನೋಡುತ್ತಾನೆ ಎಂದು ಬೃಹದಾರಣ್ಯಕೋಪನಿಷತ್ತು ಹೇಳುತ್ತದೆ. ವೈರಾಗ್ಯ ಸಿದ್ಧಿಸಿದ ಮೇಲೆ ಶ್ರವಣ ಮನನ ನಿದಿಧ್ಯಾಸನಗಳು ಸುಲಭವಾಗುತ್ತವೆ. ಯೋಗ್ಯನಾದ ಆಚಾರ್ಯನಿಂದ ವೇದಾಂತವನ್ನು ಅರಿತುಕೊಳ್ಳುವುದೇ ಶ್ರವಣವೆನಿಸುವುದು. ಆಚಾರ್ಯನನ್ನು ಪಡೆದ ಮನುಷ್ಯನೇ ಅರಿತುಕೊಳ್ಳುತ್ತಾನೆ ಎಂದು ಛಾಂದೋಗ್ಯೋಪನಿಷತ್ತು ಹೇಳುತ್ತದೆ. ಆಚಾರ್ಯನ ಉಪದೇಶದಿಂದಲೂ ಅನುಗ್ರಹದಿಂದಲೂ ಅರಿತು ಕೊಳ್ಳುವ ಹಾಗೆ ಕೇವಲ ಪುಸ್ತಕ ಪಠನದಿಂದ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂಬುದು ಶ್ರವಣದಿಂದ ಸ್ಪಷ್ಟವಾಗುತ್ತದೆ. ಆದರೂ ಶ್ರವಣ ಸಾಲದು ಶ್ರವಣದೊಂದಿಗೆ ಮನನವೂ ಬೇಕಾಗುವುದು. ಅರಿತುಕೊಂಡಿದ್ದನ್ನು; ಪುನಃಪುನಃ ಮನನ ಮಾಡಬೇಕು ಹಾಗೆ ಮಾಡಿದರೆ ಬುದ್ಧಿಯಲ್ಲಿ ತತ್ತ್ವ ನಿರ್ಧಾರವಾಗುವುದು. ನಿದಿಧ್ಯಾಸನವೆಂದರೆ ಧ್ಯಾನ. ಇದರಿಂದ ಅರಿತುಕೊಂಡಿದ್ದು ಅನುಭವಕ್ಕೆ ಬರುತ್ತದೆ. ನಿದಿಧ್ಯಾಸನ ಧ್ಯಾನರೂಪದಲ್ಲಿದೆ. ಇಂಥ ಧ್ಯಾನದಿಂದಲೇ ದ್ವೈತದ ನಿವೃತ್ತಿಯಾಗುವುದು. ಭ್ರಮೆ ಅಥವಾ ಭೇದಜ್ಞಾನ ಅಪರೋಕ್ಷವಾಗಿರುವುದರಿಂದ ಅದನ್ನು ತೊಲಗಿಸುವ ಐಕ್ಯಜ್ಞಾನ ಕೂಡ ಅಪರೋಕ್ಷವಾಗಿಯೇ ಇರಬೇಕೆಂದು ಹಿಂದೆ ಹೇಳಿದೆ. ಇಂಥ ಅಪರೋಕ್ಷ ಜ್ಞಾನವನ್ನು ಉಪನಿಷತ್ತು ದರ್ಶನ ಎಂದು ಕರೆಯುತ್ತದೆ: ಆತ್ಮನನ್ನು ನೊಡಬೇಕು (ಬೃಹದಾರಣ್ಯಕೋಪನಿಷತ್ತು). ಆತ್ಮಾನುಭವ ದ್ವೈತಾನುಭವಕ್ಕಿಂತ ಸತ್ಯವಾಗಿರುವುದರಿಂದ ಭ್ರಮೆ ಸಂಪೂರ್ಣವಾಗಿ ಹೋಗುವುದು ಸಹಜವೇ ಆಗಿದೆ.

ದರ್ಶನಕ್ಕೆ ಸಮಾನವಾದ ನಿದಿಧ್ಯಾಸನವುಂಟಾಗಬೇಕಾದರೆ ಧ್ಯಾನದ ಅಭ್ಯಾಸವಾಗಬೇಕು. ಆದುದರಿಂದಲೇ ಜ್ಞಾನಮಾರ್ಗ ಬಹು ಉಪಾಸನೆಗಳನ್ನು ಒಳಗೊಂಡಿದೆ. ಉಪಾಸನೆಯನ್ನು ಮಾಡುವಾಗ ಸಾಧಕ ಧ್ಯಾನಿಸಲ್ಪಡತಕ್ಕ ವಸ್ತುವನ್ನು ತನ್ನ ಆತ್ಮನೊಂದಿಗೆ ಏಕೀಕರಿಸುತ್ತಾನೆ. ಧ್ಯಾನಕ್ಕೆ ವಿಷಯವಾದ ವಸ್ತು ಯಾವುದೇ ಆಗಿದ್ದರೂ (ಉದಾಹರಣೆಗೆ ಪ್ರಾಣ, ಓಂಕಾರ ಇತ್ಯಾದಿ) ಸಾಧಕ ಕೊನೆಗೆ ತನ್ನ ಆತ್ಮನೇ ಬ್ರಹ್ಮವೆಂದು ಅರಿಯಬೇಕು. ಹೀಗೆ ನಿತ್ಯಾನಿತ್ಯವಸ್ತು ವಿವೇಕ ಈ ಲೋಕದ ಮತ್ತು ಪರಲೋಕದ ವಿಷಯಭೋಗಗಳಲ್ಲಿ ವಿರಕ್ತಿ, ಶಮದಮಾದಿ ಸಾಧನಗಳ ಸಂಪತ್ತು, ಮೋಕ್ಷದಲ್ಲಿ ಇಚ್ಛೆ-ಇವು ಜ್ಞಾನಕ್ಕೆ ಅತ್ಯಂತ ಸಹಕಾರಿಯಾಗಿರುವವು.

ಜ್ಞಾನದ ಲಾಭಗಳು

ಬದಲಾಯಿಸಿ

ಜ್ಞಾನವನ್ನು ಪಡೆದುಕೊಂಡವ ಪುನಃ ಮೋಹವನ್ನು ಹೊಂದುವುದಿಲ್ಲ. ಜ್ಞಾನದಿಂದ ಪ್ರಾಣಿಗಳನ್ನೆಲ್ಲ ಆತ್ಮನಲ್ಲಿಯೇ ಭಗವಂತನಲ್ಲಿಯೂ ನೋಡಬಹುದು. ಪಾಪ ಎಷ್ಟೇ ಆಗಿರಲಿ, ಎಂಥದೇ ಆಗಿರಲಿ ಅದನ್ನು ಜ್ಞಾನವೆಂಬ ನಾವೆಯಿಂದ ದಾಟಬಹುದು. ಉರಿಯುವ ಬೆಂಕಿ ಕಟ್ಟಿಗೆಗಳನ್ನು ಸುಟ್ಟು ಬೂದಿ ಮಾಡುವ ಹಾಗೆ ಜ್ಞಾನಾಗ್ನಿ ಕರ್ಮಗಳನ್ನೆಲ್ಲ ಭಸ್ಮಮಾಡಿಬಿಡಬಹುದು. ಲೋಕದಲ್ಲಿ ಜ್ಞಾನಕ್ಕೆ ಸಮಾನಾದ ಪವಿತ್ರ ವಸ್ತುವಿಲ್ಲ. ಶ್ರದ್ಧೆಯುಳ್ಳವನೂ ಜಿತೇಂದ್ರಿಯನೂ ಆದ ಮುಮುಕ್ಷು ಜ್ಞಾನವನ್ನು ಹೊಂದುತ್ತಾನೆ. ಶೀಘ್ರದಲ್ಲಿಯೇ ಪರಮಶಾಂತಿಯನ್ನು ಪಡೆಯುತ್ತಾನೆ-ಇವೆಲ್ಲ ಭಗವದ್ಗೀತೆಯ ವಾಕ್ಯಗಳು.

ಒಟ್ಟಾರೆಯಾಗಿ

ಬದಲಾಯಿಸಿ

ಜ್ಞಾನಮಾರ್ಗ ಪರಮಾರ್ಥವಸ್ತುವನ್ನು ವಿವೇಚಿಸಿ ತಿಳಿಸಿಕೊಡುವ ರೂಪದಲ್ಲಿದ್ದರೂ ಕರ್ಮಮಾರ್ಗ ಭಕ್ತಿಮಾರ್ಗಗಳಿಂದ ಪುಷ್ಟಿಯನ್ನು ಪಡೆದಿದೆ. ಕರ್ಮವೆಲ್ಲ ಜ್ಞಾನದಲ್ಲಿ ನಿಃಶೇಷವಾಗಿ ಪರಿಸಮಾಪ್ತಿ ಹೊಂದುತ್ತದೆ. ಭಕ್ತಿ ಉಪಾಸನಗೆ ಸಹಕಾರಿಯಾಗಿದ್ದು ಏಕಾಗ್ರತೆಯನ್ನುಂಟುಮಾಡುತ್ತದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: