ಮಾಟ - ಮಂತ್ರ (ಮಂತ್ರವಿದ್ಯೆ) ಎಂದರೆ ಒಂದು ವಿಶಿಷ್ಟ ಬಗೆಯ ಮಾಂತ್ರಿಕ ಶಕ್ತಿಯನ್ನು ಉಪಯೋಗಿಸಿಕೊಂಡು ಜನರನ್ನು ಹಿಂಸಿಸುವ ಅಥವಾ ಅವರ ಆಸ್ತಿಪಾಸ್ತಿಯನ್ನು ಹಾನಿಗೊಳಿಸುವ, ಪ್ರಪಂಚದಾದ್ಯಂತ ಕಂಡುಬರುವ, ಎಲ್ಲ ಆದಿವಾಸಿಗಳಲ್ಲಿಯೂ ಇರುವ ಒಂದು ಸಂಪ್ರದಾಯ ಮತ್ತು ನಂಬಿಕೆ (ವಿಚ್‍ಕ್ರಾಫ್ಟ್). ಇದು ಧರ್ಮದಷ್ಟೇ ಪ್ರಾಚೀನವಾದುದು. ಒಂದು ಕಾಲಕ್ಕೆ ಧರ್ಮಕ್ಕೂ, ಮಾಟ-ಮಂತ್ರಗಳಿಗೂ ಸಂಬಂಧವೇ ಇಲ್ಲ ಎಂದು ಭಾವಿಸಲಾಗಿತ್ತು. ಅನಂತರ ಅವೆರಡೂ ಅವಿಭಾಜ್ಯ ಅಂಗಗಳು ಎನ್ನುವಷ್ಟರ ಮಟ್ಟಿಗೆ ಅವುಗಳ ಸಂಬಂಧವನ್ನು ಕಂಡುಕೊಳ್ಳಲಾಯಿತು. ಫ್ರೇಜರನ ಪ್ರಕಾರ ದೇವತಾರಾಧೆನೆಯ ಮುಂದಿನ ಘಟ್ಟವೇ ಮಾಟ-ಮಂತ್ರ ಮುಂತಾದವು. ಮಂತ್ರ ವಿದ್ಯೆಯನ್ನು ಆತ ಪ್ರಾಚೀನ ವಿಜ್ಞಾನ ಎಂದೇ ಕರೆದಿದ್ದಾನೆ. ಧರ್ಮಕ್ಕೂ ಮಂತ್ರವಿದ್ಯೆಗೂ ಸಂಬಂಧವಿರುವಂತೆಯೇ ಮಂತ್ರವಿದ್ಯೆಗೂ ವಿಜ್ಞಾನಕ್ಕೂ ಹಲವಂಶಗಳಲ್ಲಿ ಸಂಬಂಧವಿದೆ ಎಂಬುದನ್ನು ಗುರುತಿಸಲಾಗಿದೆ.

ಧರ್ಮ ಮತ್ತು ಮಂತ್ರವಿದ್ಯೆ ಎರಡರಲ್ಲಿಯೂ ಕೆಲವು ಸಮಾನ ಲಕ್ಷಣಗಳಿರುವಂತೆಯೇ. ಕೆಲವು ವ್ಯತ್ಯಾಸಗಳೂ ಇವೆ. ಇವೆರಡೂ ಅಗೋಚರವಾದ ಅಲೌಕಿಕ ಶಕ್ತಿಗಳನ್ನು ಮೂಲ ಬಂಡವಾಳವಾಗಿಸಿಕೊಂಡು ಕಾರ್ಯ ನಡೆಸುತ್ತವೆ. ಧರ್ಮದ ಪ್ರತಿನಿಧಿಯಾಗಿ ಪುರೋಹಿತ ನಿಂತರೆ, ಮಾಟ ಮಂತ್ರವಿದ್ಯೆಯ ಪ್ರತಿ ನಿಧಿಯಾಗಿ ಮಾಂತ್ರಿಕ ಅಥವಾ ಮಂತ್ರವಾದಿ (ಮಾಟಗಾರ ಅಥವಾ ಮಾಟಗಾತಿ) ನಿಲ್ಲುತ್ತಾನೆ. ಇಬ್ಬರ ಸಾಧನೆಯ ಗುರಿ ಒಂದೇ ಆದರೂ ಆನುಸರಿಸುವ ಮಾರ್ಗಮಾತ್ರ ಬೇರೆ ಬೇರೆ. ಧರ್ಮಾಚರಣೆಯ ಪುರೋಹಿತ ವಿಧೇಯತೆಯಿಂದ, ಶರಣಾಗತ ಭಾವನೆಯಿಂದ ಪೂಜೆಸಲ್ಲಿಸಿ ಪ್ರಾರ್ಥಿಸಿದರೆ, ಮಾಂತ್ರಿಕಾಚರಣೆಯ ಮಂತ್ರವಾದಿ ಅಂಥದೇ ಗುರಿಯನ್ನು ದಬ್ಬಾಳಿಕೆಯಿಂದ ಕ್ರೂರ ರೀತಿಯಿಂದ ಸಾಧಿಸಲು ಪ್ರಯತ್ನಿಸುತ್ತಾನೆ. ದಬ್ಬಾಳಿಕೆ. ಬಲತ್ಕಾರ ಮಂತ್ರ ವಿದ್ಯೆಯಲ್ಲಿ ಎದ್ದು ಕಾಣುವ ಅಂಶಗಳು. ಧರ್ಮಸಾಮೂಹಿಕವಾದುದಾದರೆ ಮಂತ್ರವಿದ್ಯೆ ರಹಸ್ಯ ಮಾರ್ಗ. ಮಂತ್ರವಿದ್ಯೆಗೆ ಬಲಿಯಾದ ವ್ಯಕ್ತಿ ಎಲ್ಲವನ್ನೂ ಗೋಪ್ಯವಾಗಿ ನಡೆಸಲು ಪ್ರಯತ್ನಿಸುತ್ತಾನೆ. ಮಂತ್ರ ಮಾಟಗಳು, ರಹಸ್ಯಮಾರ್ಗಗಳಾಗಿರುವಂತೆಯೇ ಹಿಂಸಾಮಾರ್ಗಗಳೂ ಕೂಡ. ಸಾಮಾನ್ಯವಾಗಿ ಬಲಿ ಇಲ್ಲಿ ಅನಿವಾರ್ಯ. ಸ್ವಂತ ಬಯಕೆಗಳನ್ನು ಈಡೇರಿಸಿಕೊಳ್ಳಬೇಕೆಂಬ ಅಭಿಲಾಷೆಯ ಜೊತೆಗೆ, ಬೇರೊಬ್ಬನ ಮೇಲೆ ಸೇಡು ತೀರಿಸಿಕೊಳ್ಳುವ ದೃಷ್ಟಿಯೇ ಮಾಟ-ಮಂತ್ರಗಳಲ್ಲಿ ಹೆಚ್ಚು. ಮಂತ್ರವಿದ್ಯೆಯನ್ನು ಒಳ್ಳೆಯ ಕಾರ್ಯಕ್ಕೂ ಬಳಸಿಕೊಳ್ಳಬಹುದಾದರೂ ಬಳಸುವವರು ಕಡಿಮೆ. ಮಾಟ-ಮಂತ್ರಗಳಿಗೆ ಜನ ಹೆಚ್ಚಾಗಿ ಹೆದರುವುದರಿಂದ, ಅದರತ್ತ ಹೋಗುವವರ ಸಂಖ್ಯೆಯೂ ಕಡಿಮೆ. ಹಾಗಾಗಿ ಶೀಘ್ರ ಗುರಿ ಸಾಧಿಸಬೇಕೆಂಬ ಮನೋವೃತ್ತಿಯವರು, ಹಿಂಸೆಯನ್ನು ಆರಾಧಿಸುವವರು ಮಾತ್ರ ಅತ್ತ ಸುಳಿಯುತ್ತಾರೆ.

ಮಂತ್ರ ಮಾಟ ಮುಂತಾದವುಗಳಿಗೆಲ್ಲ ನಂಬಿಕೆಯೇ ಮೂಲ ಆಧಾರ. ಮಂತ್ರವಾದಿಯನ್ನು ನಂಬಿ ಒಬ್ಬ ವ್ಯಕ್ತಿ ತನ್ನ ಪರಿಸ್ಥಿತಿಯನ್ನು ಅವನಿಗೆ ವಿವರಿಸಿ ಪರಿಹಾರವನ್ನು ಬೇಡುತ್ತಾನೆ. ಮಂತ್ರವಾದಿಯ ಭರವಸೆಯ ಮೇಲೆ ಆ ವ್ಯಕ್ತಿ ನಿಶ್ಚಿಂತನಾಗಿರುತ್ತಾನೆ. ಅನೇಕ ಕಡೆಗಳಲ್ಲಿ ಮಂತ್ರವಾದಿ ಎಂದರೆ ಕೆಡಕು ಮಾಡುವವನೆಂಬ ಅಭಿಪ್ರಾಯವಿದೆ. ಇದಕ್ಕೆ ಅಪವಾದವೂ ಉಂಟು. ಸೈಬೀರಿಯಾದ ಆದಿವಾಸಿಗಳಲ್ಲಿ `ಶಾಮನ್ ಎಂದು ಕರೆಯಲಾಗುವ ಮಂತ್ರವಾದಿಗೆ ಗೌರವದ ಸ್ಥಾನವಿದೆ. ಅಮೆರಿಕೆಯ ಕ್ಯಾಲಿಫೋರ್ನಿಯಾದ ಬುಡಕಟ್ಟು ಜನರಲ್ಲಿಯೂ ಮಂತ್ರವಾದಿಗಳ ಬಗ್ಗೆ ಹೆಚ್ಚಿನ ಗೌರವವಿರುವುದು ತಿಳಿದುಬರುತ್ತದೆ. ಪ್ರಪಂಚದ ಅನೇಕ ಭಾಗಗಳಲ್ಲಿಯ ಜನರಂತೆಯೇ ಕರ್ನಾಟಕದ ಅನೇಕ ಭಾಗಗಳಲ್ಲಿ ಇಂದಿಗೂ ಮಾಟ ಮಂತ್ರಗಳನ್ನು ನಂಬುವವರಿದ್ದಾರೆ. ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಅವುಗಳನ್ನು ಆಚರಿಸುತ್ತಾರೆ. ದೆವ್ವ ಪಿಶಾಚಿಗಳಿಗೆ ಹೆದರಿ ಅಥವಾ ಅವು ದೂರವಿರಲಿ ಎಂಬ ಕಾರಣಕ್ಕಾಗಿ ಮನೆಯ ಮುಂದಿನ ಬಾಗಿಲಿಗೆ ಮೂರು ನಾಮ ಬಳಿಯವುದಾಗಲೀ, ತೆಂಗಿನಕಾಯಿ ಮಂತ್ರಿಸಿ ಕಟ್ಟುವುದಾಗಲೀ, ಹಳೆಯ ಚಪ್ಪಲಿಗಳನ್ನು ಮನೆಯ ಹೊರಭಾಗದ ನಾಲ್ಕು ಭಾಗಗಳಿಗೆ ಕಟ್ಟುವುದಾಗಲೀ ಹಳ್ಳಿಯ ಅನೇಕ ಮನೆಗಳಲ್ಲಿ ಕಂಡುಬರುವ ದೃಶ್ಯ. ದೇವರ ಪೂಜಾರಿಗಳಲ್ಲಿಯೇ ಕೆಲವರು ಇಂಥ ಮಾಂತ್ರಿಕ ವಸ್ತುಗಳನ್ನು ಮಾಡಿಕೊಡುತ್ತಾರೆ; ಇಲ್ಲವೇ ಇದಕ್ಕಾಗಿಯೇ ಕೆಲವರಿರುವುದೂ ಉಂಟು. ಕೆಲವು ಮಾಂತ್ರಿಕರು ಎಂಥದೋ ಕಪ್ಪು ಬೊಟ್ಟನಿಟ್ಟು ಹೆಂಗಸರನ್ನು ವಶೀಕರಿಸಿ ತಮ್ಮ ಹಿಂದೆ ಬರುವಮತೆ ಮಾಡುತ್ತಾರೆ ಎಂಬ ನಂಬಿಕೆಯೂ ಇದೆ. ಈ ಬಗ್ಗೆ ಅನೇಕ ಕಥೆಗಳೇ ಹುಟ್ಟಿಕೊಂಡಿವೆ. ಶ್ರೀರಂಗಪಟ್ಟಣದ ಬಳಿಯ ಎಣ್ಣೆಹೊಳೆ ಕೊಪ್ಪಲಿನಲ್ಲಿ ಹೇಳುವ ಒಂದು ಕತೆ ಈ ರೀತಿಯಿದೆ; ಒಬ್ಬ ಭಿಕ್ಷುಕನಂತೆ ಭಿಕ್ಷೆ ಬೇಡಲು ಬಂದವನು ಭಿಕ್ಷೆ ನೀಡಲು ಬಂದ ಹೆಂಗಸಿಗೆ ಹಣೆಗೆ ಇಟ್ಟುಕೊಳ್ಳಲು ಬೂದಿಯನ್ನು ಕೊಟ್ಟನಂತೆ. ಆಕೆ ಬೂದಿಯನ್ನು ಹಣೆಗೆ ಇಟ್ಟುಕೊಳ್ಳುವಷ್ಟರಲ್ಲಿ ಇನ್ನೇನೋ ನೆನಪಾಗಿ ಒಳಗೆ ಓಡಿದಳೆಂದೂ ಹಾಗೆ ಓಡುವಾಗ ಬೂದಿಯನ್ನು ಹೊರಗೆ ಇದ್ದ ಎತ್ತಿನಗಾಡಿಯ ಮೇಲೆ ಇಟ್ಟು ಕೆಲಸದ ಗಲಾಟೆಯಲ್ಲಿ ಮರೆತು ಸುಮ್ಮನಾದಳೆಂದೂ ಕೊನೆಗೆ ಅರ್ಧರಾತ್ರಿಯಲ್ಲಿ ಎತ್ತಿನಗಾಡಿ ಎತ್ತುಗಳಿಲ್ಲದೆ ತಾನೇ ಉರುಳಿಕೊಂಡು ಹೋಗಲು ಪ್ರಾರಂಭವಾಯಿತೆಂದೂ ಆ ಸದ್ದಿಗೆ ಮನೆಯವರು ಬಂದು ನೋಡಿ ಆಶ್ಚರ್ಯಗೊಂಡರು. ಕೊನೆಗೆ ಆ ಹೆಂಗಸಿನಿಂದ ಮರೆತುಹೋಗಿದ್ದ ವಿಷಯವನ್ನು ತಿಳಿಯಿತಂತೆ. ಇದರ ಸತ್ಯಾಂಶ ಏನೇ ಇರಲಿ, ಇಂಥ ಕಥೆಗಳು ಕರ್ನಾಟಕದ ಬಹುತೇಕ ಭಾಗಗಳಲ್ಲಿ ಕೇಳಿಬರುತ್ತವೆ.

ಮಂತ್ರವಿದ್ಯೆಯ ಸೂತ್ರಗಳು

ಬದಲಾಯಿಸಿ

ಪ್ರಪಂಚಾದ್ಯಂತ ಕಂಡುಬರುವ ಮಂತ್ರವಿದ್ಯೆಯ ಅಧ್ಯಯನ ಆಧಾರದ ಮೇಲೆ ಪ್ರಸಿದ್ಧ ಮಾನವಶಾಸ್ತ್ರಜ್ಞ ಫ್ರೇಜರ್ ಎರಡು ಸೂತ್ರಗಳನ್ನು ರೂಪಿಸಿದ್ದಾನೆ. ವಿಶ್ವದ ಎಲ್ಲ ಭಾಗದಲ್ಲಿಯೂ ಎಲ್ಲ ಆದಿವಾಸಿ ಸಮಾಜದಲ್ಲಿಯೂ ಮಾಂತ್ರಿಕ ವಿದ್ಯೆ ಈ ಎರಡು ಸೂತ್ರಗಳ ಆಧಾರದ ಮೇಲೆ ನಡೆಯುವಂಥದು. ಕಾರಣದಂತೆ ಪರಿಣಾಮ (ಲೈಕ್ ಪ್ರಡ್ಯೂಸಸ್ ಲೈಕ್). ಒಮ್ಮೆ ತಟ್ಟಿದ ಸೋಂಕು ಬಿಟ್ಟೋಡದ ಸೋಂಕು (ಒನ್ಸ್ ಕಾಂಟ್ಯಾಕ್ಟ್ ಆಲ್‍ವೇಸ್ ಇನ್ ಕಾಂಟ್ಯಾಕ್ಟ್)-ಇವೇ ಆ ಎರಡು ಸೂತ್ರಗಳು.

ಮೊದಲನೆಯ ಸೂತ್ರವನ್ನು `ಸಾದೃಶ್ಯತೆಯ ನಿಯಮ ಎಂದೂ ಇದಕ್ಕೆ ಸಂಬಂಧಪಟ್ಟ ಮಂತ್ರವಿದ್ಯೆಯನ್ನು `ಅನುಕರಣ ಮಂತ್ರವಿದ್ಯೆ ಎಂದೂ ಕರೆಯಲಾಗಿದೆ. ಇದು `ಬಾಲನಾಗಮ್ಮನ ಕಥೆಯಲ್ಲಿ ಬರುವ ಮಾಯಾಮರಾಟಿಯ ಪ್ರಸಂಗವನ್ನು ನೆನಪಿಗೆ ತರುವಂಥದು. ಮಾಯಾ ಮರಾಟಿಯ ಜೀವ ಏಳು ಸಮುದ್ರದಾಚೆ, ಯಾವುದೋ ಒಂದು ದೊಡ್ಡ ಮರದ ಮೇಲಿರುವ ಪಕ್ಷಿಯಲ್ಲಿದೆ. ಆ ಪಕ್ಷಿಯ ಶರೀರದ ಒಂದೊಂದು ಭಾಗವನ್ನು ಊನವಾಗಿಸಿದಂತೆ. ಮಾಯಾಮರಾಟಿಯ ಶರೀರದ ಭಾಗಗಳೂ ಊನವಾಗುತ್ತವೆ. ಕೊನೆಗೆ ಆ ಪಕ್ಷಿಯಪ್ರಾಣದೊಂದಿಗೆ ಆತನ ಪ್ರಾಣವೂ ಹೋಗುತ್ತದೆ. ಇದು ಒಂದು ಕಾಲ್ಪನಿಕ ಕಥೆಯೆನಿಸಿದರೂ ಸಾದ್ಯಶ್ಯತೆಯ ಅಥವಾ ಅನುಕರಣೆಯ ಮಂತ್ರವಿದ್ಯೆಯಲ್ಲಿ ಇದರ ಕೆಲವೊಂದು ಅಂಶಗಳನ್ನು ಕಾಣುತ್ತೇವೆ. ತನಗಾಗದವನೊಬ್ಬನ ಮೇಲೆ ಸೇಡುತೀರಿಸಿಕೊಳ್ಳಲು ಮಂತ್ರವಾದಿಯ ಬಳಿ ಹೋದಾಗ, ಆ ಮಂತ್ರವಾದಿ ಸೇಡಿಗೊಳಗಾದ ವ್ಯಕ್ತಿಯನ್ನು ಹೋಲುವ ಗೊಂಬೆಯನ್ನು ಮರದಿಂದಲೋ ಅಥವಾ ಮತ್ತಾವುದೋ ವಸ್ತುವಿನಿಂದಲೋ ಮಾಡಿ ಅದಕ್ಕೆ ತನ್ನ ಮಂತ್ರಶಕ್ತಿಯಿಂದ ಜೀವಕಳೆ ಬರುವಂತೆ ಮಾಡುತ್ತಾನೆ. ಅನಂತರ ತನಗೆ ತೋರಿದ ರೀತಿಯಲ್ಲಿ ಆ ಮೂರ್ತಿಗೆ ಹಿಂಸೆ ಕೊಡಲು ಪ್ರಾರಂಭಿಸುತ್ತಾನೆ. ಅದರ ಕೈಕಾಲು ಮುರಿಯುವುದೋ, ಶರೀರದ ನಾನಾ ಭಾಗಗಳಿಗೆ ಮೊಳೆ ಚುಚ್ಚುವುದೋ, ಇಲ್ಲ ಬೆಂಕಿಯಲ್ಲಿ ಸುಡುವುದೋ-ಹೀಗೆ ನಾನಾ ರೀತಿಯಲ್ಲಿ ಹಿಂಸಿಸುತ್ತಾನೆ. ಹೀಗೆ ಮಾಡುವುದು ಆ ಹಿಂಸೆಯೆಲ್ಲವೂ ಉದ್ದೇಶಿತ ವ್ಯಕ್ತಿಗೆ ತಾಗಲಿ ಎಂಬ ಉದ್ದೇಶದಿಂದ. ಮಾಟಕ್ಕೆ ಗುರಿಯಾದ ವ್ಯಕ್ತಿ ನೋವನ್ನೋ ಸಾವನ್ನೋ ಹೊಂದುತ್ತಾನೆ. ಅಲ್ಲಿಗೆ ಮಾಟ ಮಾಡಿಸುವವನ ಉದ್ದೇಶ ಸಾರ್ಥಕವಾದಂತೆ.

ಸಾದೃಶ್ಯತೆಯ ನಿಯಮದ ಮೇಲೆ ನಡೆಯುವ ಈ ಅನುಕರಣ ಮಂತ್ರವಿದ್ಯೆ. ಅನೇಕ ಸಂದರ್ಭದಲ್ಲಿ ಯಶಸ್ವಿಯಾದ ನಿದರ್ಶನಗಳೂ ಇವೆ. ಈ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಮಾಡಿರುವ ವಾಲ್ಟರ್ ಬಿ.ಕ್ಯಾನೆನ್ ಎಂಬ ವಿದ್ವಾಂಸ ಇದರ ಯಶಸ್ಸಿಗೆ ಇರಬಹುದಾದ ಕಾರಣವನ್ನು ಗುರುತಿಸಿ ನೀಡಿರುವ ವಿವರಣೆ ಸಮರ್ಪಕವಾಗಿರುವಂತೆ ತೋರುತ್ತದೆ. ಜನರಿಗೆ ಮಾಟ-ಮಂತ್ರಗಳ ಬಗೆಗಿರುವ ದೃಢವಾದ ನಂಬಿಕೆ, ಅತಿಯಾದ ಭಯ ಈ ಮಾನಸಿಕ ಭಾವನೆಗಳು ಮಾಟ-ಮಂತ್ರದ ಯಶಸ್ಸಿಗೆ ಕಾರಣ ಎಂಬುದು ಅವನ ಅಭಿಪ್ರಾಯ. ತನ್ನ ಮೇಲೆ ಮಾಟ-ಮಂತ್ರದ ಪ್ರಯೋಗವಾಗಿರಬೇಕೆಂದು ಭ್ರಮಿಸಿ ಭಯಪಟ್ಟ ವ್ಯಕ್ತಿ ಅದೇ ಗುಂಗಿನಲ್ಲಿ ಚಿಂತೆಗೆ ಒಳಗಾಗುತ್ತಾನೆ. ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಆತ ಊಟ ನಿದ್ರೆಗಳನ್ನು ತೊರೆದು ಕ್ಷೀಣಿಸತೊಡಗುತ್ತಾನೆ. ಅದೇ ಸ್ಥಿತಿ ಮುಂದುವರಿದರೆ ಅದು ಆತನ ಸಾವಿಗೂ ಕಾರಣವಾಗಬಹುದು. ಹಾಗಾಗಿ ಮಾಟ-ಮಂತ್ರದ ಶಕ್ತಿಗಿಂತ ಅದರಿಂದ ಉಂಟಾದ ಭಯ ಆ ವ್ಯಕ್ತಿಯ ಅವಸಾನಕ್ಕೆ ಕಾರಣವಾಗಬಹುದು.

ಸಾದೃಶ್ಯತೆಯ ಮೇಲಿನ ಈ ಅನುಕರಣ ಮಂತ್ರವಿದ್ಯೆಯನ್ನು ಶತ್ರುನಾಶಕ್ಕಷ್ಟೇ ಅಲ್ಲದೆ, ಕೆಲವು ಒಳ್ಳೆಯ ಕಾರ್ಯಕ್ಕೂ ಬಳಸಿಕೊಂಡಿರುವ ನಿದರ್ಶನಗಳಿವೆ. ಆದಿವಾಸಿಗಳು ತಮ್ಮ ಪರಿಸರದ ಸುತ್ತಮುತ್ತ ನಡೆಯುತ್ತಿದ್ದ ಘಟನೆಗಳ ಬಗೆಗೆ ಭಾವಿಸಿಕೊಂಡ ರೀತಿ ಇಂಥ ಚಟುವಟಿಕೆಗಳಿಗೆ ಮುಖ್ಯ ಕಾರಣ ಎನಿಸುತ್ತದೆ. ಮಳೆ ಬರುವುದಕ್ಕೆ ಮುನ್ನ ಗುಡುಗುವ ಗುಡುಗಿನ ಶಬ್ದವೇ ಮಳೆಗೆ ಕಾರಣವೆಂದು ಭಾವಿಸಿ ಮಳೆ ಬಾರದಿದ್ದಾಗ ಅಥವಾ ತಮಗೆ ಮಳೆ ಬೇಕೆನಿಸಿದಾಗ ದೊಡ್ಡ ದೊಡ್ಡ ಬಂಡೆಗಳನ್ನು ಗುಡ್ಡದ ಮೇಲಿನಿಂದ ಕೆಳಕ್ಕೆ ಉರುಳಿಸುವುದರ ಮೂಲಕ ಅಂಥ ಶಬ್ದವನ್ನು ಉಂಟು ಮಾಡುತ್ತಿದ್ದರು. ಗುಡುಗಿನಂಥ ಆ ಬಂಡೆಗಳ ಶಬ್ದಕ್ಕೆ ಮಳೆ ಶಬ್ದವನ್ನು ಉಂಟು ಮಾಡುತ್ತಿದ್ದರು. ಗುಡುಗಿನಂಥ ಆ ಬಂಡೆಳ ಶಬ್ದಕ್ಕೆ ಮಳೆ ಬರುತ್ತದೆಯೆಂಬುದು ಅವರ ನಂಬಿಕೆಯಾಗಿತ್ತು. ಛೋಟಾ ನಾಗಪುರದ ಆದಿವಾಸಿ ಜನಗಳಲ್ಲಿ ಈ ನಂಬಿಕೆಯಿತ್ತು. ಕರ್ನಾಟಕದಲ್ಲಿ ಪ್ರಚಲಿತವಿರುವ `ಕೊಂತಿಪೂಜೆ ಯಾಗಲಿ, `ಮಳೆ ದೇವರು ಆಚರಣೆಯಾಗಲಿ ಇದೇ ಕಾರಣಕ್ಕಾಗಿ ಹುಟ್ಟಿಕೊಂಡಂಥವು.

ಇದರಂತೆಯೇ ಬೇಗ ಗರ್ಭಿಣಿಯರಾಗಲಿ ಎಂಬ ಕಾರಣದಿಂದ ಮಕ್ಕಳಾಗದ ಹೆಂಗಸರಿಗೆ ಮಗುವನ್ನೇ ಹೋಲುವ ಗೊಂಬೆಗಳನ್ನು ಮಾಡಿಕೊಡುವ ಪದ್ಧತಿ ಎಸ್ಕಿಮೋ ಜನರಲ್ಲಿ ಇತ್ತೆಂಬುದು ಗಮನಾರ್ಹ. ಅವರು ಅದನ್ನು ಮಾಟಮಂತ್ರದ ಹೆಸರಿನಲ್ಲಿ ಕರೆದರೂ ವಾಸ್ತವಿಕ ಸಂಗತಿಯೇ ಬೇರೆ. ಮನಶ್ಯಾಸ್ತ್ರದ ಹಿನ್ನಲೆಯಲ್ಲಿ ಮುಖ್ಯವಾಗಿ ಇದನ್ನು ಗಮನಿಸಲಾಗುತ್ತದೆ. ಹೀಗೆ ಗೊಂಬೆಯನ್ನು ಬಂಜೆಯರಿಗೆ ಕೊಡುವುದರಿಂದ ಅವರಲ್ಲಿ ಅದಮ್ಯವಾಗಿ ಅಡಗಿರುವ ತಾಯ್ತನದ ಹಂಬಲ ಪ್ರಚೋದನೆಗೊಂಡು ಗರ್ಭಧಾರಣೆಗೆ ಕಾರಣವಾಗಬಹುದೆಂಬುದು. ಆದಿವಾಸಿಗಳಲ್ಲಿ ಕೆಲವರು ಮೀನು ಬೇಟೆಗೆ ಹೋಗುವ ಮೊದಲು ಮೀನು ಬಲೆಯನ್ನು ತಾವೇ ಮೈಗೆ ಸುತ್ತಿಕೊಂಡು ಹೊರಳಾಡುತ್ತಿದ್ದರು. ಇದರ ಉದ್ದೇಶ ಮೀನುಗಳು ಬಲೆಗೆ ಬೇಗ ಬೀಳಲಿ, ಬೇಟೆ ಯಶಸ್ವಿಯಾಗಲಿ ಎಂಬುದೇ ಆಗಿದೆ. ಇಂಥ ಅನೇಕ ವಿಚಿತ್ರ ಆಚರಣೆಗಳು ಪ್ರಪಂಚಾದ್ಯಂತ ಇರುವುದನ್ನು ಕಾಣಬಹುದು.

ಎರಡನೆಯ ಸೂತ್ರವನ್ನು `ಸೋಂಕು ಮಂತ್ರವಿದ್ಯೆ ಎಂದು ಕರೆಯಲಾಗಿದೆ. ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಯಾವುದೋ ಒಂದು ವಸ್ತುವನ್ನು ಆಧರಿಸಿ ಆ ಮೂಲಕ ಅವನಿಗೆ ಕೆಡುಕುಂಟುಮಾಡುವುದು ಇಲ್ಲಿ ಕಂಡುಬರುವ ಮುಖ್ಯಾಂಶ. ವಿಶೇಷವಾಗಿ ಕೂದಲು, ಉಗುರು ಹಾಗೂ ತಾವು ಬಳಸುವ ಬಟ್ಟೆ ಬರೆಗಳ ಬಗೆಗೆ ಆದಿವಾಸಿಗಳು ತುಂಬ ಎಚ್ಚರಿಕೆಯಿಂದಿರುತ್ತಿದ್ದರು. ತಮ್ಮ ಕೂದಲು, ಉಗುರುಗಳನ್ನು ಕಾಣದಂತೆ ನೆಲದಲ್ಲಿ ಹೂಳುತ್ತಿದ್ದರು. ಅವು ತಮಗಾಗದವರ ಕೈಗೆ ಸಿಕ್ಕಿದರೆ ಅವರು ಅವನ್ನು ಬಳಸಿಕೊಂಡು ತಮಗೆ ಕೆಡುಕನ್ನುಂಟುಮಾಡಬಹುದೆಂಬ ಭಯವೇ ಇದಕ್ಕೆ ಮುಖ್ಯ ಕಾರಣವಾಗಿತ್ತು. ಆಸ್ಟ್ರೇಲಿಯದ ಗುಡ್ಡಗಾಡು ಜನರಲ್ಲಿ ಒಂದು ನಂಬಿಕೆಯಿದೆ: ತಮಗಾಗದ ಒಬ್ಬ ವ್ಯಕ್ತಿಯನ್ನು ಕುಂಟನನ್ನಾಗಿ ಮಾಡಬೇಕೆನಿಸಿದರೆ ಆ ವ್ಯಕ್ತಿ ಓಡಾಡುವ ಜಾಗವನ್ನು ಗಮನಿಸಿ ಅವನ ಕಾಲ ಹೆಜ್ಜೆ ಗುರುತಿನಲ್ಲಿ ಗಾಜಿನ ಚೂರನ್ನೋ ಅಥವಾ ಹರಿತವಾದ ಮೂಳೆಯ ಚೂರನ್ನೋ ಅವಿತಿಟ್ಟರೆ ಸಾಕು, ಅವನು ಕುಂಟನಾಗಿಬಿಡುತ್ತಾನೆ ಎಂದು ನಂಬುತ್ತಾರೆ. ಹಾಗಾಗಿ ಆದಿವಾಸಿಗಳು ಒಬ್ಬರ ಬಟ್ಟೆಯನ್ನು ಮತ್ತೊಬ್ಬರು ಧರಿಸುವುದಿಲ್ಲ. ಈ ಕಾರಣಕ್ಕಾಗಿಯೇ ಸತ್ತಾಗ ಸತ್ತ ವ್ಯಕ್ತಿಯನ್ನು ಆತನ ಬಟ್ಟೆಯ ಜೊತೆಯಲ್ಲಿಯೇ ಹೂಳುವುದೋ ಸುಡುವುದೋ ಮಾಡುತ್ತಾರೆ. ಕೆಲವು ನುಡಿಗಳು ಮಂತ್ರಶಕ್ತಿಯ ಮಹತ್ತ್ವವನ್ನು ಪಡೆದಿವೆ ಎಂದು ಭಾವಿಸಲಾಗಿದೆ. ಇವುಗಳನ್ನು ಮಾಂತ್ರಿಕ ನುಡಿಗಳು (ಸ್ಪೆಲ್ಸ್) ಎಂದು ಕರೆಯಲಾಗಿದೆ. ಇಂಥ ನುಡಿಗಳು ಕೆಲವು ವ್ಯಕ್ತಿಗಳ ಬಾಯಿಂದ ಹೊರಬಿದ್ದಾಗ ಅವು ಪರಿಣಾಮಕಾರಿಯಾಗಿದ್ದು ಪ್ರಭಾವ ಬೀರುತ್ತವೆ ಎಂದು ನಂಬಿಕೆ ಪ್ರಬಲವಾಗಿದೆ. ದೃಷ್ಟಿನೀವಾಳಿಸುವುದು, ಅನ್ನತೆಗೆಸುವುದು, ಕಾಲ್ದೂಳು ಹಾಕುವುದು ಮೊದಲಾದ ಪೀಡೆ ನಿರ್ಮೂಲನ ನಡುವಳಿಕೆಯನ್ನು ಇಂದಿಗೂ ಕಾಣಬಹುದಾಗಿದೆ. ಹೀಗೆ ಮಾಡುವಾಗ ಜೊತೆಯಲ್ಲಿ ನುಡಿಯುವ ನುಡಿಗಳಂತೆಯೇ, ಕಾಯಿಲೆಗಳನ್ನು ಗುಣಪಡಿಸಲು, ಉಳುಕನ್ನು ತೆಗೆಯಲು, ಹಾವು ಚೇಳು ಕಚ್ಚಿದಾಗ ಅವುಗಳನ್ನು ನಿವಾರಿಸಲು ಮಾಂತ್ರಿಕ ನುಡಿಗಳನ್ನು ಪ್ರಯೋಗಿಸುತ್ತಾರೆ. ಈಗಲೂ ಹಾವು ಕಚ್ಚಿದವರನ್ನು ಬದುಕಿಸಲು ಸಾಧ್ಯ ಎಂಬ ನಂಬಿಕೆಯಿದೆ. ಕರ್ನಾಟಕದಲ್ಲಷ್ಟೇ ಅಲ್ಲ, ಭಾರತದ ಅನೇಕ ಭಾಗಗಳಲ್ಲಿ ಇಂಥ ನಂಬಿಕೆ ಪ್ರಬಲವಾಗಿದೆ. ಚನ್ನಪಟ್ಟಣ ತಾಲ್ಲೂಕಿನ ತಿಮ್ಮಸಂದ್ರದಲ್ಲಿರುವ ಮನೆತನವೊಂದು ಹಾವು ಚೇಳು ಕಚ್ಚಿದ್ದಕ್ಕೆ, ಕೇವಲ ಮಂತ್ರದಿಂದ ಗುಣಪಡಿಸುವುದರಲ್ಲಿ ಹೆಸರಾಗಿದೆಯಂತೆ. ಸಿಡಿಲು ಬಡಿಯುವ ಸಂದರ್ಭದಲ್ಲಿ ಅರ್ಜುನನ ದಶನಾಮಗಳನ್ನು ಜಪಿಸಿದರೆ ಯಾವ ತೊಂದರೆಯೂ ಆಗುವುದಿಲ್ಲ ಎಂಬ ನಂಬಿಕೆ ರೂಢಿಯಲ್ಲಿದೆ. ಸೂತ್ರಪ್ರಾಯವಾದ ಕೆಲವು ಮಾಂತ್ರಿಕ ನುಡಿಗಳು ಉತ್ತಮ ಔಷಧಕ್ಕಿಂತಲೂ ಪರಿಣಾಮಕಾರಿಯಾದುದು ಎಂಬ ನಂಬಿಕೆ ಹಲವರಲ್ಲಿದೆ. ಉತ್ತರ ಅಮೆರಿಕೆಯ ಮೂಲ ನಿವಾಸಿಗಳಲ್ಲಿ ಮಾಂತ್ರಿಕ ನುಡಿಗಳ ಬಗೆಗೆ ಅತಿಯಾದ ನಂಬಿಕೆಯಿದ್ದುದಾಗಿ ತಿಳಿದುಬರುತ್ತದೆ. ಒಂದು ನಿರ್ದಿಷ್ಟ ಮನೆತನಕ್ಕೆ ಸೇರಿದ ಜನ ಮಾತ್ರ ಅಂಥ ಮಾಂತ್ರಿಕನುಡಿಗಳನ್ನು ವಂಶದ ಆಸ್ತಿಯಾಗಿ ಕಾಯ್ದುಕೊಂಡು ಬರುತ್ತಿದ್ದರು. ಬೇರೆಯವರು ಕಲಿತು ಉಚ್ಚರಿಸಿದರೂ ಅದು ಪ್ರಭಾವ ಬೀರುವುದಿಲ್ಲ ಎಂಬ ನಂಬಿಕೆಯಿತ್ತು.

ಮಂತ್ರ-ಮಾಟಗಳಿಗೆ ಸಂಬಂಧಿಸಿದಂತೆ ಕೆಲವು ನಿರ್ದಿಷ್ಟ ವಸ್ತುಗಳ ಬಳಕೆ ಕಂಡು ಬರುತ್ತದೆ. ಅವುಗಳಲ್ಲಿ ವಿಶೇಷವಾದ ಶಕ್ತಿಯಿಂದ ಎಂಬುದೇ ಇದಕ್ಕೆ ಮುಖ್ಯ ಕಾರಣ. ಈ ವಸ್ತುಗಳನ್ನು ಆರಾಧಿಸುವುದಷ್ಟೇ ಅಲ್ಲದೆ, ಮೈಮೇಲೂ ಧರಿಸುತ್ತಾರೆ. ಇಂಥ ಮಾಂತ್ರಿಕವಸ್ತುಗಳಿಗೆ ಮಾಂತ್ರಿಕ ಆಚರಣೆಯ ಸಂದರ್ಭದಲ್ಲಿ ವಿಶೇಷವಾದ ಪೂಜೆ ಸಲ್ಲುತ್ತದೆ. ತಲೆಬುರುಡೆ, ಮಂತ್ರದಂಡ ಮುಂತಾದವುಗಳಿಗೆ ಅತಿಶಯವಾದ ಶಕ್ತಿ ಇದೆ ಎಂದು ನಂಬಲಾಗುತ್ತದೆ. ಮಂತ್ರವಾದಿಗಳು ಕೊರಳಿಗೆ ತೋಳಿಗೆ ತಾಯಿತಗಳನ್ನು ಕಟ್ಟಿಕೊಳ್ಳುವುದುಂಟು; ಭಕ್ತರು ಕಟ್ಟಿಕೊಳ್ಳಲೂ ಇವುಗಳನ್ನು ಕೊಡುವುದುಂಟು.

ಮಾಟ-ಮಂತ್ರಗಳು ಸಮಾಜದಲ್ಲಿ ಹಿಂದಿನಿಂದಲೂ ವಿವಿಧ ಸ್ತರಗಳಲ್ಲಿ ವಿವಿಧ ಪ್ರಮಾಣದಲ್ಲಿ ಉಳಿದುಕೊಂಡೇ ಬಂದಿವೆ. ಅನೇಕ ಸಂದರ್ಭಗಳಲ್ಲಿ ಒಳ್ಳೆಯದನ್ನು ಮಾಡಿರುವಂತೆಯೇ ಕೆಟ್ಟದ್ದನ್ನೂ ಮಾಡಿವೆ. ಕೆಲವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿರುವಂತೆಯೇ ಮತ್ತೆ ಕೆಲವರಲ್ಲಿ ಭಯವನ್ನೂ ಅಂಜಿಕೆಯನ್ನೂ ಉಂಟುಮಾಡಿವೆ. ಹೀಗಾಗಿ ಸಾಧುವಾದ ಧರ್ಮಕ್ಕೆ ಅಳುಕದ ಜನ, ಅಸಾಧುವೆನಿಸಿದ ಮಂತ್ರವಿದ್ಯೆಗೆ ಅಳುಕಿ ನಡೆಯುವುದನ್ನು ಕಾಣಬಹುದು, ಆದಿವಾಸಿಗಳಲ್ಲಿದ್ದಷ್ಟು ಪ್ರಮಾಣದಲ್ಲಿ ಇಂದು ಮಂತ್ರವಿದ್ಯೆಯ ಪ್ರಾಬಲ್ಯವನ್ನು ಜನಪದ ಜೀವನದಲ್ಲಿ ಕಾಣದಿದ್ದರೂ, ಅದು ಸಂಪೂರ್ಣವಾಗಿ ಮಾಯವಾಗಿಲ್ಲ. ಈ ನಿಟ್ಟಿನಲ್ಲಿ ಕ್ರೋಬರ್ ಎಂಬ ವಿದ್ವಾಂಸ ಮಂತ್ರಮಾಟಗಳನ್ನು ಕುರಿತು ಹೇಳಿರುವ ಮಾತು ಗಮನಾರ್ಹ. ಒಂದು ಸಮಾಜ ಮಂತ್ರಮಾಟಗಳಿಗೆ ಎಷ್ಟೆಷ್ಟು ಶ್ರದ್ಧೆ ಆಸಕ್ತಿಗಳನ್ನು ತೋರುತ್ತದೊ ಅದು ಅಷ್ಟಷ್ಟು ಹಿಂದಾಗಿರುತ್ತದೆಯೆಂದೂ ಅದು ಅವುಗಳಿಂದ ದೂರವಾದಷ್ಟೂ ಆಧುನಿಕವಾಗಿ ಮುಂದುವರಿಯಲು ಸಾಧ್ಯವಾಗುತ್ತದೆಯೆಂದೂ ಆತ ಅಭಿಪ್ರಾಯಪಟ್ಟಿದ್ದಾನೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: